ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಮ್ ಆದ್ಮಿ... ಮುಂದಿನ ಹಾದಿ?

Last Updated 15 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ದೆಹಲಿ ವಿಧಾನಸಭೆ ಚುನಾವಣಾ ಫಲಿತಾಂಶ ಹೊರಬಂದು ಒಂದು ವಾರ­ವಾದರೂ ಸರ್ಕಾರ ರಚನೆಯಾಗಿಲ್ಲ. ಮತದಾ­ರರು ನೀಡಿರುವ ಅತಂತ್ರವಾದ ತೀರ್ಪಿನಿಂದಾಗಿ ಯಾವ ಪಕ್ಷವೂ ಸರ್ಕಾರ ಮಾಡುವ ಸ್ಥಿತಿಯಲ್ಲಿ ಇಲ್ಲ. ವಿಧಾನಸಭೆಯಲ್ಲಿ ದೊಡ್ಡ ಪಕ್ಷವಾಗಿರುವ ಬಿಜೆಪಿ, ಎರಡನೇ ಸ್ಥಾನದಲ್ಲಿರುವ ‘ಆಮ್‌ ಆದ್ಮಿ ಪಕ್ಷ’ (ಎಎಪಿ) ಅಧಿಕಾರದಿಂದ ದೂರವೇ ನಿಂತಿವೆ.

ಹದಿನೈದು ವರ್ಷದಿಂದ ಕಾಂಗ್ರೆಸ್‌ ಆಡಳಿತ ಕಂಡಿದ್ದ ರಾಜಧಾನಿ, ಈ ಸಲ ಬಿಜೆಪಿಗೆ ಒಲಿಯಬಹುದು ಎಂದು ಅನೇಕರು ನಿರೀಕ್ಷಿ­ಸಿದ್ದರು. ಬಿಜೆಪಿ ಅಧಿಕಾರಕ್ಕೆ ಬರಬಹುದು ಎಂದು ಭಾವಿಸಲು  ಕಾರಣಗಳಿದ್ದವು. ಯುಪಿಎ ಸರ್ಕಾ­ರದ ಹಗರಣಗಳನ್ನು ದೆಹಲಿ ಮತದಾ­ರರು ಹತ್ತಿರದಿಂದ ನೋಡಿದ್ದರು. ಬೆಲೆ ಏರಿಕೆ ಬಿಸಿಯಿಂದ ತತ್ತರಿಸಿದ್ದರು. ಗುಂಪುಗಾರಿಕೆಯಿಂದ ರೋಸಿದ್ದರು.

ದೆಹಲಿ ಉಸ್ತುವಾರಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್‌ ಅಷ್ಟೇನೂ ಕೆಟ್ಟ ರಾಜಕಾರಣಿ ಅಲ್ಲ. ಅನೇಕ ಒಳ್ಳೆ ಕೆಲಸಗಳನ್ನು ಮಾಡಿದ್ದಾರೆ. ಆದರೆ, ಕೇಂದ್ರ ಸರ್ಕಾರದ ಕೆಟ್ಟ ಕೆಲಸಗಳ ಮುಂದೆ ಶೀಲಾ ಮಾಡಿರುವ ಒಳ್ಳೆ ಕೆಲಸ ಮರೆಯಾಗಿದೆ. ‘ಅತ್ತೆ ಮೇಲಿನ ಸಿಟ್ಟು ಕೊತ್ತಿ ಮೇಲೆ’ ಎನ್ನುವ ಗಾದೆಯಂತೆ ಮತದಾರರ ಸಿಟ್ಟಿಗೆ ಶೀಲಾ ‘ಭಾರೀ ಬೆಲೆ’ ತೆತ್ತಿದ್ದಾರೆ.

ನರೇಂದ್ರ ಮೋದಿ ಜನಪ್ರಿಯತೆ ಅಲೆ ಮೇಲೆ ಸವಾರಿ ಮಾಡಲು ಬಿಜೆಪಿ ಪ್ರಯತ್ನ ಮಾಡಿತ್ತು. ದೆಹಲಿಯಲ್ಲಿ ಮೋದಿ ಮೋಡಿ ನಡೆಯಲಿಲ್ಲ. 15 ವರ್ಷದ ಶಾಪ ವಿಮೋಚನೆ ಆಗಬಹುದು. ಈ ಸಲ ಪಕ್ಷ ಅಧಿಕಾರಕ್ಕೆ ಬರಬಹುದು ಎನ್ನುವ ನಂಬಿಕೆ  ಬಿಜೆಪಿ ಹಿರಿಯ ನಾಯಕರಿಗಿತ್ತು.  ವಿಜಯ್‌ ಗೋಯಲ್‌ ಅವರನ್ನು ಕಡೇ ಗಳಿಗೆ­ಯಲ್ಲಿ ಪಕ್ಕಕ್ಕೆ ಸರಿಸಿ, ಹರ್ಷವರ್ಧನ್‌ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಲಾ­ಯಿತು. ಅದು ಕೇವಲ ನೆಪ ಅಷ್ಟೇ. ಚುನಾವಣೆ ಸಮಯದಲ್ಲಿ ನಿಜವಾಗಿ ಮಿಂಚಿದವರು ಮೋದಿ. ಎಲ್ಲ ಕಡೆ ಅವರ ಭಾವಚಿತ್ರವೇ ರಾರಾ­ಜಿಸಿತ್ತು.  ಪ್ರಚಾರದ ಅಬ್ಬರ ಜೋರಾಗಿತ್ತು. ಬಿಜೆಪಿ ಅಧಿಕಾರಕ್ಕೆ ಬರಬಹುದು ಎನ್ನುವ ವಾತಾ­ವರಣ ನಿರ್ಮಾಣವಾಗಿತ್ತು. ದೆಹಲಿ ಮತ­ದಾ­ರರು ಮಾತ್ರ ಅನಿರೀಕ್ಷಿತವಾದ ಫಲಿತಾಂಶ ಕೊಟ್ಟರು.

ಬಿಜೆಪಿ ಅತೀ ಹೆಚ್ಚು ಸ್ಥಾನ  ಪಡೆದ ದೊಡ್ಡ ಪಕ್ಷವಾದರೂ, ಐದು ಸ್ಥಾನಗಳ ಅಂತರದಲ್ಲಿ ಸರ್ಕಾರ ರಚಿಸುವ ಅವಕಾಶ ಕಳೆದುಕೊಂಡಿತು. ಮೋದಿ ಹಿಂದೆ ಜನ ಹೋಗಿದ್ದರೆ ಬಿಜೆಪಿ ಬಹುಮತ ಗಳಿಸಬೇಕಿತ್ತು. ಛತ್ತೀಸಗಡ, ಮಧ್ಯಪ್ರದೇಶ, ರಾಜಸ್ತಾನದಲ್ಲಿ ಸಿಕ್ಕ ಗೆಲುವು ಬಿಜೆಪಿಗೆ ದೆಹಲಿಯಲ್ಲಿ ಸಿಗಲಿಲ್ಲ. ಈ ಮೂರು ರಾಜ್ಯಗಳ ಗೆಲುವು ಮೋದಿ ಕಾರಣದಿಂದಲ್ಲ. ಶಿವರಾಜ್‌ಸಿಂಗ್‌ ಚೌಹಾಣ್‌ ಮತ್ತು ರಮಣ್‌ ಸಿಂಗ್‌ ಉತ್ತಮ ಆಡಳಿತ ಕೊಟ್ಟಿದ್ದರು. ಅನೇಕ ಜನಪರ ಕಾರ್ಯಕ್ರಮಗಳನ್ನು ಜಾರಿ ಮಾಡಿ­ದ್ದರು.   ಈ ರಾಜ್ಯಗಳಲ್ಲಿ ಪಕ್ಷ ಗೆದ್ದಿರುವುದು ಮೋದಿ ಜನಪ್ರಿಯತೆ ಕಾರಣದಿಂದಲ್ಲ ಎಂದು ಬಿಜೆಪಿ ಹಿರಿಯ ನಾಯಕ ಎಲ್‌.ಕೆ. ಅಡ್ವಾಣಿ ಅವರೇ ‘ಐತೀರ್ಪು’ ನೀಡಿದ್ದಾರೆ. ರಾಜಸ್ತಾನದ ಗೆಲುವು,  ಕಾಂಗ್ರೆಸ್‌ ಅಲ್ಲಿ ಜನಪ್ರಿಯತೆ ಕಳೆದು­ಕೊಂಡಿರುವುದರ ದ್ಯೋತಕ ಮತ್ತು ಪಕ್ಷ­ದೊಳಗಿನ ಗುಂಪುಗಾರಿಕೆ ಪರಿಣಾಮ.

ವರ್ಷದ ಹಿಂದೆ ಕಣ್ಣುಬಿಟ್ಟ, ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ಎಎಪಿ,  ದೆಹಲಿ ರಾಜ­ಕಾರಣ­ದಲ್ಲಿ ಹೊಸ ಇತಿಹಾಸ ಬರೆದಿದೆ.  ಎಎಪಿ ಸಾಧನೆ ರಾಜಕೀಯ ವಲಯವನ್ನೇ ದಿಗಿಲು­ಗೊಳಿಸಿದೆ. ವಿಧಾನಸಭೆ ಫಲಿತಾಂಶ ಹೊರಬರು­ವವರೆಗೂ ಯಾರೂ ಈ ಪಕ್ಷವನ್ನು ಗಂಭೀರ­ವಾಗಿ ಪರಿಗಣಿಸಿರಲಿಲ್ಲ. ಮತಗಟ್ಟೆ ಸಮೀಕ್ಷೆಗಳು ಎಎಪಿ ಪ್ರಭಾವ ಗ್ರಹಿಸಲು ವಿಫಲವಾಗಿದ್ದವು.

ಆಟೊ, ಟ್ಯಾಕ್ಸಿ ಚಾಲಕರು, ಮಹಿಳೆಯರು, ದೆಹಲಿ ಸಾರಿಗೆ ನಿಗಮದ ಸಿಬ್ಬಂದಿ, ತರಕಾರಿ ವ್ಯಾಪಾರಿಗಳು, ಕೂಲಿ ಕಾರ್ಮಿಕರು, ವಿದ್ಯಾರ್ಥಿ­ಗಳು ಮತ್ತು ಯುವಕರು ಎಎಪಿ ಬೆಂಬಲಿಸಿದರು. ಹೊಸ ಮತದಾರರು ಎಎಪಿ ಕಾರ್ಯಕರ್ತರಂತೆ ಮನೆ, ಮನೆಗೆ ತೆರಳಿ ಹಗಲಿರುಳು ಪ್ರಚಾರ ಮಾಡಿದರು. ಚುನಾವಣೆ ಮುಗಿದರೂ ಎಎಪಿ ಜನಪ್ರಿಯತೆ ಕುಗ್ಗಿಲ್ಲ. ಹೊಸ ಪಕ್ಷದ ಸದಸ್ಯತ್ವಕ್ಕಾಗಿ ಜನರು ಮುಗಿ ಬೀಳುತ್ತಿದ್ದಾರೆ.

ದೆಹಲಿ ವಿಧಾನಸಭೆ ಚುನಾವಣೆ ನೈತಿಕ ರಾಜಕಾರಣಕ್ಕೆ ಮುನ್ನುಡಿ ಬರೆದಿದೆ. ಅಕಸ್ಮಾತ್‌ ಅಧಿಕಾರಕ್ಕೆ ಬಂದರೆ ಎಎಪಿ ಬಗೆಗಿನ ನಿರೀಕ್ಷೆಗಳು ಏನಾಗಲಿವೆ ಎಂಬುದರ ಬಗ್ಗೆ ಭವಿಷ್ಯ ಹೇಳು­ವುದು ಕಷ್ಟ. ಸದ್ಯಕ್ಕಂತೂ ಜನ ಆ ಪಕ್ಷದ ಮೇಲೆ ಭರವಸೆ ಹೊಂದಿದ್ದಾರೆ. ಕಲುಷಿತವಾಗಿರುವ ರಾಜಕಾರಣವನ್ನು ಶುದ್ಧೀಕರಿಸಬಹುದು ಎಂಬ ನಂಬಿಕೆ ಇಟ್ಟುಕೊಂಡಿದ್ದಾರೆ. ಉತ್ತಮ ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ಕಡಿಮೆ ದರದಲ್ಲಿ ವಿದ್ಯುತ್‌ ಸಿಗಬಹುದು ಎಂದು ಭಾವಿಸಿ­ದ್ದಾರೆ. ಎಎಪಿ ಇವೆಲ್ಲವನ್ನೂ ಮಾಡುವುದಾಗಿ ಮತದಾರರಿಗೆ ಮಾತು ಕೊಟ್ಟಿದೆ.

ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ನೇತೃತ್ವದ ತಂಡ ಎರಡು ವರ್ಷದ ಹಿಂದೆ ರೂಪಿಸಿರುವ ಜನಲೋಕಪಾಲ್‌ ಮಸೂ­ದೆ­ಯನ್ನು ಯಥವತ್ತಾಗಿ ಜಾರಿ ಮಾಡುವುದಾಗಿ ಕೇಜ್ರಿವಾಲ್‌ ಆಶ್ವಾಸನೆ ನೀಡಿದ್ದಾರೆ.

ಸಣ್ಣ ರಾಜ್ಯದ ಸರ್ಕಾರವೊಂದು ಇವೆಲ್ಲ­ವನ್ನೂ ಹೇಗೆ ಮಾಡಲು ಸಾಧ್ಯ. ಇದಕ್ಕೆಲ್ಲ ಸಂಪನ್ಮೂ­ಲವನ್ನು ಹೇಗೆ ಹೊಂದಿಸುತ್ತದೆ. ಕೇಂದ್ರ ಸರ್ಕಾರ ಅವರಿಗೆ ಸಹಕಾರ ಹೇಗೆ ಕೊಡುತ್ತದೆ. ಅಕಸ್ಮಾತ್‌ ಎಎಪಿ ಅಧಿಕಾರಕ್ಕೆ ಬಂದರೆ ಈ ಭರವಸೆಗಳನ್ನು ಈಡೇರಿಸುವುದು ಕಷ್ಟ ಎನ್ನುವುದು ಅನೇಕರ ವಾದ.

ಈ ಕಾರಣಕ್ಕೇ ಕಾಂಗ್ರೆಸ್‌ ಮತ್ತು ಬಿಜೆಪಿಗೆ ಎಎಪಿ ಬಿಸಿ ತುಪ್ಪ. ನುಂಗಲೂ ಆಗುತ್ತಿಲ್ಲ. ಉಗಿ­ಯಲೂ ಸಾಧ್ಯವಿಲ್ಲ. ಈ ಎರಡೂ ಪಕ್ಷಗಳು ಬೆಂಬಲ ಕೊಡಲು ಸಿದ್ಧವಿದ್ದರೂ ಎಎಪಿ ನಾಯ­ಕರು ಬೇಡವೆನ್ನುತ್ತಿದ್ದಾರೆ. ಕಿರಣ್‌ ಬೇಡಿ ಮತ್ತಿತ­ರರು ಬಿಜೆಪಿ ಜತೆಗೂಡಿ ಸರ್ಕಾರ ರಚನೆ ಮಾಡು­ವಂತೆ ಸಲಹೆ ಮಾಡಿದ್ದಾರೆ. ಚುನಾವಣೆಗೆ ಮೊದಲು ಈ ಎರಡೂ ಪಕ್ಷಗಳನ್ನು ಪ್ರಬಲವಾಗಿ ವಿರೋಧಿ­ಸಿಕೊಂಡು ಬಂದಿರುವ ಆಮ್‌ ಆದ್ಮಿ ಪಕ್ಷ, ಈ ಪಕ್ಷಗಳಿಂದ ಸಮಾನ ಅಂತರ ಕಾಯ್ದು­ಕೊ­ಳ್ಳಲೇಬೇಕು. ಹೇಳುವುದು ಒಂದು; ಮಾಡುವುದು ಇನ್ನೊಂದು ಎಂಬಂತಾದರೆ ಜನ ನಂಬುವುದಿಲ್ಲ.

ದೆಹಲಿಯಲ್ಲಿ ಎಎಪಿ ಬಿರುಗಾಳಿ ಎಬ್ಬಿಸದಿದ್ದರೆ ಬೇರೆ ಕೆಲ ರಾಜ್ಯಗಳಲ್ಲಿ ನಡೆದಂತೆ ಇಲ್ಲೂ ಕುದುರೆ ವ್ಯಾಪಾರ (ಶಾಸಕರ ಖರೀದಿ) ನಡೆಯುತ್ತಿತ್ತೇನೋ? ಬಿಜೆಪಿ ಮತ್ತು ಕಾಂಗ್ರೆಸ್‌ ಮಾತ್ರ ಪ್ರಬಲವಾಗಿದ್ದು, ಬಹುಮತಕ್ಕೆ ಕೆಲವೇ ಸ್ಥಾನಗಳು ಕಡಿಮೆಯಾಗಿದ್ದರೆ ಪಕ್ಷ ಒಡೆಯುವ ತಂತ್ರಗಳು ಮುಂದುವರಿಯುತ್ತಿದ್ದವು. ಎಎಪಿಗೆ ಇಷ್ಟೊಂದು ಸೀಟು ಬರದೆ ಐದಾರಕ್ಕೆ ಸೀಮಿತ ವಾಗಿದ್ದರೂ, ಪರಿಸ್ಥಿತಿ ಬೇರೆಯಾಗಿರುತ್ತಿತ್ತು. ಈಗ ಎಲ್ಲರ ಲೆಕ್ಕಾಚಾರಗಳು ತಲೆಕೆಳಗಾಗಿರುವು ದರಿಂದ ಕುದುರೆ ವ್ಯಾಪಾರಕ್ಕೆ ಅವಕಾಶ ಇಲ್ಲ. ಹಾಗೇನಾದರೂ ಆದರೆ ಮತದಾರರು ತಿರುಗಿ ಬೀಳಬಹುದು ಎನ್ನುವ ಆತಂಕವಿದೆ.

ಬಿಜೆಪಿ ಮುಖಂಡ ಹರ್ಷವರ್ಧನ್‌, ‘ಬಿಜೆಪಿ ಪ್ರಾಮಾಣಿಕ ಮತ್ತು ಪಾರದರ್ಶಕ ಪಕ್ಷವಾಗಿರು­ವುದರಿಂದ ಕುದುರೆ ವ್ಯಾಪಾರಕ್ಕೆ ಮುಂದಾಗು­ವು­ದಿಲ್ಲ’ ಎಂದಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿಗೆ ಬಹು­ಮತದ ಕೊರತೆಯಾದಾಗ ಏನು ನಡೆ­ಯಿತು ಎನ್ನುವುದು ಅವರಿಗೆ ಗೊತ್ತಿದ್ದಂತಿಲ್ಲ. ‘ಆಪ­ರೇಷನ್‌ ಕಮಲ’ದ ಹೆಸರಲ್ಲಿ ಏನೆಲ್ಲ ನಡೆ­ಯಿತು ಎಂಬುದು ಅವರಿಗೆ ಹೇಗೆ ತಿಳಿಯಬೇಕು.

ಕೇಂದ್ರ ಮತ್ತು ರಾಜ್ಯಗಳಲ್ಲಿ ಸರ್ಕಾರ ಉಳಿಸಿ­ಕೊಳ್ಳಲು ಅಡ್ಡದಾರಿ ಹಿಡಿದ ಅನೇಕ ಸಂದರ್ಭ­ಗಳು ಇತಿಹಾಸದಲ್ಲಿ ದಾಖಲಾಗಿವೆ. ಕಾಂಗ್ರೆಸ್‌ ಪಕ್ಷ ಈ ರೀತಿ ಆರೋಪಕ್ಕೆ ಒಳಗಾಗಿದೆ. ಪಿ.ವಿ. ನರಸಿಂಹ ರಾವ್‌ ತಮ್ಮ ಸರ್ಕಾರ ಉಳಿಸಿಕೊಳ್ಳಲು ಯಾವ ತಂತ್ರ ಹೂಡಿದ್ದರು ಎಂಬುದನ್ನು ಜನರು ಇನ್ನೂ ಮರೆತಿಲ್ಲ.

ರಾಜ್ಯದಲ್ಲಿ ಸರ್ಕಾರ ರಚನೆಗೆ ಸಹಕರಿಸುತ್ತಿಲ್ಲ ಎನ್ನುವ ಅಪವಾದದಿಂದ ಹೊರಬರಲು ಕೇಜ್ರಿ­ವಾಲ್‌ 18 ಷರತ್ತುಗಳನ್ನು ಹಾಕಿದ್ದಾರೆ. ಈ ಷರತ್ತುಗಳನ್ನು ಒಪ್ಪಿದರೆ ಬೆಂಬಲ ಪಡೆಯುವ ಕುರಿತು ಚಿಂತಿಸಬಹುದು ಎಂದಿದ್ದಾರೆ. ಇದು ಅತೀ ಜಾಣ್ಮೆಯ ಹೆಜ್ಜೆ. ಹಾವೂ ಸಾಯ­ಬಾ­ರದು, ಕೋಲೂ ಮುರಿಯಬಾರದು ಎನ್ನುವ ನೀತಿ.

ಎಎಪಿ ಪ್ರಣಾಳಿಕೆಯನ್ನೇ  ಕೇಜ್ರಿವಾಲ್‌ ಎರಡು ಪ್ರಮುಖ ಪಕ್ಷಗಳ ಮುಂದೆ ಇಟ್ಟಿದ್ದಾರೆ. ಅದನ್ನು ಆ ಪಕ್ಷಗಳು ಒಪ್ಪಿಕೊಳ್ಳಲಾರವು. ಹೋದ ವಾರ ಹಿರಿಯ ವಕೀಲ ಪ್ರಶಾಂತ್‌ ಭೂಷಣ್‌ ಅವರೂ ಇದೇ ಷರತ್ತುಗಳನ್ನು ಬಿಜೆಪಿ ಮುಂದಿಟ್ಟರು. ಇದು ತಮ್ಮ ವೈಯಕ್ತಿಕ ಅಭಿಪ್ರಾಯ ಎಂದಿದ್ದರು. ಈಗ ಕೇಜ್ರಿವಾಲ್‌, ಕಾಂಗ್ರೆಸ್‌್, ಬಿಜೆಪಿ ಅಧ್ಯಕ್ಷರಿಗೆ ಅಧಿಕೃತ  ಪತ್ರ ಬರೆದಿದ್ದಾರೆ. ಈ ಷರತ್ತುಗಳಿಗೆ ಯಾವುದೇ ಪಕ್ಷ ಒಪ್ಪಿಕೊಳ್ಳದಿದ್ದರೆ ದೆಹಲಿ ವಿಧಾನಸಭೆಗೆ ಮತ್ತೆ ಚುನಾವಣೆ ಅನಿವಾರ್ಯ ಆಗಬಹುದು. ಇದಕ್ಕೆ ಎಎಪಿ ಮತ್ತು ಬಿಜೆಪಿ ಸಿದ್ಧವಾಗುತ್ತಿವೆ.

ಕೇಜ್ರಿವಾಲ್‌ ಅವರಿಗೆ ಈಗ ಹೊಸ ಸಮಸ್ಯೆ ಎದುರಾಗಿದೆ. ಬಿಜೆಪಿ, ಕಾಂಗ್ರೆಸ್‌ ಜತೆಗೆ ಅಣ್ಣಾ ಹಜಾರೆ ಅವರೊಂದಿಗೂ ಸಂಘರ್ಷಕ್ಕೆ ಇಳಿ­ಯಬೇಕಾದ ವಾತಾವಾರಣ ಸೃಷ್ಟಿಯಾಗಿದೆ. ಅಣ್ಣಾ  ಮತ್ತು ಕೇಜ್ರಿವಾಲ್‌ ನಡುವಿನ ಸಂಬಂಧ ಹಳಿಸಿದೆ. ಅದು ಈಗ ಬೀದಿಗೆ ಬಂದಿದೆ.
ಅಣ್ಣಾ ಹಜಾರೆ, ರಾಜ್ಯಸಭೆಯಲ್ಲಿ ಮಂಡನೆ ಆಗಿರುವ ಲೋಕಪಾಲ್‌ ಮಸೂದೆ ತೃಪ್ತಿಕರವಾಗಿದೆ ಎಂದಿದ್ದಾರೆ. ಕೇಜ್ರಿವಾಲ್‌ ಮಸೂದೆಯನ್ನು ‘ಜೋಕ್‌ಪಾಲ್‌’ ಎಂದು ಲೇವಡಿ ಮಾಡಿದ್ದಾರೆ. ‘ಲೋಕಪಾಲ್‌ ಮಸೂದೆ ಬಗ್ಗೆ ಅಸಮಾಧಾನ ಇದ್ದವರು ಹೊಸದಾಗಿ ಚಳವಳಿ ರೂಪಿಸಲಿ. ಅದಕ್ಕೆ ನನ್ನ ಬೆಂಬಲ ಇರುವುದಿಲ್ಲ’ ಎಂದು ಅಣ್ಣಾ ಖಚಿತಪಡಿಸಿದ್ದಾರೆ.

ಸರ್ಕಾರದ ಹೊಸ ಮಸೂದೆ  ಒಪ್ಪಿಕೊಂಡರೆ ಅಲ್ಲಿಗೆ ಎಎಪಿ ಹೋರಾಟದ ಅಧ್ಯಾಯ ಕೊನೆಗೊಂಡಂತೆ. ಅದೇ ಕಾರಣಕ್ಕೆ ಕೇಜ್ರಿವಾಲ್‌ ಹಳೇ ಮಸೂದೆ ಜಾರಿಗೆ ಪಟ್ಟು ಹಿಡಿದಿರುವುದು. ಜನ ಲೋಕಪಾಲ್‌ ಹೋರಾಟವೇ ಕೇಜ್ರಿವಾಲ್‌ ಅವರಿಗೆ ರಾಷ್ಟ್ರ ಮಟ್ಟದಲ್ಲಿ ಖ್ಯಾತಿ ತಂದುಕೊಟ್ಟಿರುವುದು.

ಜನಲೋಕಪಾಲ್‌ ಮಸೂದೆಗೆ ಒಗ್ಗೂಡಿದ್ದ ಅಣ್ಣಾ ಹಜಾರೆ ಮತ್ತು  ಕೇಜ್ರಿವಾಲ್‌ ಅವರ ದಾರಿಗಳು ಈಗ ಬೇರೆ ಬೇರೆಯಾಗಿವೆ. ಎಎಪಿ ಸ್ಥಾಪನೆಗೆ ಅಣ್ಣಾ ಅಸಮ್ಮತಿ ಸೂಚಿಸಿದ್ದರು. ಹಟ ಬಿಡದ ಕೇಜ್ರಿವಾಲ್‌ ಕಡಿಮೆ ಅವಧಿಯಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ.
ಯಾರು ಒಪ್ಪಲಿ ಅಥವಾ ಬಿಡಲಿ ಈಗ ದೆಹಲಿ ಜನರ ಬಾಯಲ್ಲಿ ಕೇಜ್ರಿವಾಲ್‌ ಅವರದ್ದೇ ಮಾತು. ಎಷ್ಟರ ಮಟ್ಟಿಗೆಂದರೆ ಅವರ ಪಕ್ಷದ ಅಭ್ಯರ್ಥಿ ಯಾರೆಂದು ಗೊತ್ತಿರದಿದ್ದರೂ ಜನ ಮತ ಹಾಕಿದ್ದಾರೆ. ಅದೇ ಧೈರ್ಯದಿಂದ ಎಎಪಿ ಮತ್ತೊಂದು ಚುನಾವಣೆಗೂ ರೆಡಿ ಎಂದು ಹೇಳುತ್ತಿರುವುದು.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT