ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕತೆ ಕಾಪಾಡಲು ‘ಹಿಂದಿ’ಯೇ ಬೇಕಿಲ್ಲ

ಅಕ್ಷರ ಗಾತ್ರ
ಮಾರ್ಚ್ 31ರಂದು ರಾಷ್ಟ್ರಪತಿ ಪ್ರಣವ್‌ ಮುಖರ್ಜಿಯವರು ಅಧಿಕೃತ ಭಾಷೆಗೆ (ಅಂದರೆ ಹಿಂದಿ) ಸಂಬಂಧಿಸಿದ ನಿರ್ಣಯವೊಂದಕ್ಕೆ ಸಹಿ ಹಾಕಿದರು. ಈ ನಿರ್ಣಯವು ಅಧಿಕೃತ ಭಾಷೆಗೆ ಸಂಬಂಧಿಸಿದ ಸಂಸತ್ ಸಮಿತಿಯ ಒಂಬತ್ತನೆಯ ವರದಿಯ ಬಹುತೇಕ ಶಿಫಾರಸುಗಳನ್ನು ಜಾರಿಗೆ ತರಲು ದಾರಿ ಮಾಡಿಕೊಡುತ್ತದೆ.
 
ಒಂಬತ್ತನೆಯ ವರದಿಯನ್ನು ಪಿ. ಚಿದಂಬರಂ ನೇತೃತ್ವದ ಸಂಸತ್ ಸಮಿತಿಯು 2011ರ ಜೂನ್‌ 2ರಂದೇ ರಾಷ್ಟ್ರಪತಿಗಳಿಗೆ ಸಲ್ಲಿಸಿತ್ತು. ಸುಮಾರು ಆರು ವರ್ಷಗಳ ನಂತರ ಜಾರಿಗೆ ಬಂದಿರುವ ಈ ವರದಿಯ ಶಿಫಾರಸುಗಳು ವಿವಾದಾತ್ಮಕವಾಗಿವೆ.
 
ಹಿಂದಿಯೇತರ ರಾಜ್ಯಗಳಲ್ಲಿ ಹಿಂದಿಯನ್ನು ಒತ್ತಾಯದಿಂದ ಹೇರಲಾಗುತ್ತಿದೆ ಎಂದು ತೃಣಮೂಲ ಕಾಂಗ್ರೆಸ್, ಡಿ.ಎಂ.ಕೆ., ಜನತಾದಳ (ಜಾತ್ಯತೀತ) ಮತ್ತಿತರ ಪ್ರಾದೇಶಿಕ ಪಕ್ಷಗಳು ಕೇಂದ್ರ ಸರ್ಕಾರದ ಕ್ರಮವನ್ನು ಪ್ರಬಲವಾಗಿ ವಿರೋಧಿಸಿವೆ.
 
ಕೇಂದ್ರ ಸಚಿವರಾದ ವೆಂಕಯ್ಯ ನಾಯ್ಡು ಮತ್ತು ಕಿರಣ್ ರಿಜಿಜು (ಇವರು ಅಧಿಕೃತ ಭಾಷೆ ಸಚಿವಾಲಯದ ಉಸ್ತುವಾರಿಯನ್ನು ಸಹ ಹೊತ್ತಿದ್ದಾರೆ) ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ಇವರು ವಾದಿಸುವಂತೆ ಸರ್ಕಾರವು ಹಿಂದಿ ಭಾಷೆಯ ಅಭಿವೃದ್ಧಿಗೆ  ಉತ್ಸುಕವಾಗಿದೆಯೇ ಹೊರತು, ಹಿಂದಿಯನ್ನು ಯಾರ ಮೇಲೂ ಹೇರುವ ಉದ್ದೇಶವಿಲ್ಲ. 
 
‘ಅಭಿವೃದ್ಧಿ’ ಮತ್ತು ‘ಹೇರಿಕೆ’ ಇವುಗಳ ನಡುವೆ ಇರುವ ಸೂಕ್ಷ್ಮ ಗೆರೆಯನ್ನು ಗುರುತಿಸುವ ಮೊದಲು ಇಲ್ಲಿರುವ ವಿಪರ್ಯಾಸವನ್ನು ಗಮನಿಸಿ. ಈ ಪ್ರಹಸನದಲ್ಲಿ ಪಾಲ್ಗೊಂಡಿರುವ ಎಲ್ಲರೂ ಹಿಂದಿಯೇತರ ಭಾಷಾಮೂಲದವರು. ವರದಿ ತಯಾರಿಸಿದ ಸಮಿತಿಯ ನೇತಾರರಾದ ಚಿದಂಬರಂ ತಮಿಳು ಮೂಲದವರಾದರೆ, ಸರ್ಕಾರದ ಆದೇಶಕ್ಕೆ ಸಹಿ ಹಾಕಿದ ರಾಷ್ಟ್ರಪತಿ ಮುಖರ್ಜಿ ಬಂಗಾಳದವರು.
 
ಕೇಂದ್ರ ಸರ್ಕಾರದ ಕ್ರಮದ ಸಮರ್ಥಕರಾದ ಸಚಿವ ನಾಯ್ಡು ತೆಲುಗು ಹಿನ್ನೆಲೆಯವರಾದರೆ, ಕಿರಣ್ ರಿಜಿಜು ಮಣಿಪುರದವರು. ಅಷ್ಟೇ ಅಲ್ಲ, ಇವರು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಸೇರಿದ ನಾಯಕರು.
 
ಅಧಿಕೃತ ಭಾಷೆಗೆ ಸಂಬಂಧಿಸಿದ ಸಂಸತ್ ಸಮಿತಿಯ ಒಂಬತ್ತನೆಯ ವರದಿಯಲ್ಲಿ 117 ಶಿಫಾರಸುಗಳಿದ್ದವು. ಅವುಗಳಲ್ಲಿ ಕೆಲವನ್ನು ಬಿಟ್ಟು, ಬಹುತೇಕ ಎಲ್ಲ ಶಿಫಾರಸುಗಳನ್ನು ಹಾಗೆಯೇ, ಇಲ್ಲವೆ ಸಣ್ಣಪುಟ್ಟ ಬದಲಾವಣೆಗಳೊಡನೆ ಒಪ್ಪಿಕೊಳ್ಳಲಾಗಿದೆ. ಇವುಗಳಲ್ಲಿ ಮುಖ್ಯವಾದ ಹಾಗೂ ವಿವಾದಾತ್ಮಕವಾದ ಕೆಲವು ಶಿಫಾರಸುಗಳನ್ನು ಗಮನಿಸಿ:
 
1) ವರದಿಯ 105ನೆಯ ಶಿಫಾರಸಿನ ಪ್ರಕಾರ ರಾಷ್ಟ್ರಪತಿ ಮತ್ತು ಕೇಂದ್ರ ಸಚಿವರು ಸೇರಿದಂತೆ ಎಲ್ಲಾ ಗಣ್ಯರು, ಅದರಲ್ಲಿಯೂ ಹಿಂದಿಯನ್ನು ಓದಲು ಮತ್ತು ಮಾತನಾಡಲು ಬರುವವರು, ಹಿಂದಿಯಲ್ಲಿಯೇ ಭಾಷಣಗಳನ್ನು ಮಾಡುವಂತೆ ಹಾಗೂ ಹೇಳಿಕೆಗಳನ್ನು ನೀಡುವಂತೆ ಕೋರಬೇಕು. 
ಈ ಕ್ರಮದಿಂದ ಕಾರ್ಯಾಂಗದ ಕೆಲಸ–ಕಾರ್ಯಗಳಲ್ಲಿ ಹಿಂದಿಯ ಬಳಕೆಯನ್ನು ಹೆಚ್ಚಿಸುವ, ಜೊತೆಗೆ ಹಿಂದಿಯೇತರರೊಡನೆ ಸಹ ಹಿಂದಿಯ ಮೂಲಕವೇ ವ್ಯವಹರಿಸಬೇಕೆನ್ನುವ ವ್ಯವಸ್ಥೆಯೊಂದನ್ನು ನಿರ್ಮಿಸಲಾಗುತ್ತಿದೆ. 
 
2) ಕೇಂದ್ರ ಸರ್ಕಾರದ ಎಲ್ಲ ಕಚೇರಿಗಳಲ್ಲಿ, ಅವುಗಳು ಎಲ್ಲೇ ಇರಲಿ, ಹಿಂದಿ ಪತ್ರಿಕೆಗಳು ಮತ್ತು ನಿಯತಕಾಲಿಕಗಳನ್ನು ಕಡ್ಡಾಯವಾಗಿ ಕೊಳ್ಳಬೇಕು (ಶಿಫಾರಸು 111). ಸರ್ಕಾರದ ಮುದ್ರಣಾಲಯಗಳಿಂದ ಹೊರಬರುವ ಪ್ರಕಟಣೆಗಳಲ್ಲಿ ಹಿಂದಿಯ ಪಾಲು ಅರ್ಧಕ್ಕಿಂತ ಹೆಚ್ಚಿರಬೇಕು (112). ಭಾರತೀಯ ರೈಲ್ವೆ ಮತ್ತು ಏರ್ ಇಂಡಿಯಾದ ಟಿಕೆಟ್‌ಗಳು, ವಿಮಾನಗಳಲ್ಲಿ ನೀಡುವ ನಿಯತಕಾಲಿಕಗಳು, ವೃತ್ತಪತ್ರಿಕೆಗಳಲ್ಲಿ ಅರ್ಧದಷ್ಟಾದರೂ ಹಿಂದಿಯಲ್ಲಿರಬೇಕು (113, 70 ಮತ್ತು 80 ).
 
ಇಂಗ್ಲಿಷ್ ಮತ್ತು ಪ್ರಾದೇಶಿಕ ಭಾಷೆಗಳಲ್ಲಿ ನೀಡಲಾಗುವ ಕೇಂದ್ರ ಸರ್ಕಾರದ ಎಲ್ಲ ಜಾಹೀರಾತುಗಳನ್ನು ಹಿಂದಿಯಲ್ಲಿಯೂ ನೀಡಬೇಕು (48 ಮತ್ತು 88). ರೈಲ್ವೆ ಮತ್ತು ವಿಮಾನ ನಿಲ್ದಾಣಗಳ, ವಿಮಾನಗಳೊಳಗಿನ ಎಲ್ಲ ಪ್ರಕಟಣೆಗಳು ಹಿಂದಿಯಲ್ಲಿಯೂ ಇರಬೇಕು (65). ಎಲ್ಲಕ್ಕಿಂತ ಮಿಗಿಲಾಗಿ, ಕೇಂದ್ರ ಸರ್ಕಾರದ ಎಲ್ಲ ಕಚೇರಿಗಳಲ್ಲಿ ಅಧಿಕೃತ ಭಾಷಾ ನೀತಿಯ ಅನುಷ್ಠಾನಕ್ಕೆಂದು ಒಬ್ಬ ಹಿಂದಿ ಅಧಿಕಾರಿಯನ್ನಾದರೂ ನೇಮಿಸಬೇಕು (22). ಹಿಂದಿಯೇತರ ರಾಜ್ಯಗಳಲ್ಲಿ ಹಿಂದಿಯ ಬಳಕೆಯನ್ನು ಕಡ್ಡಾಯವಾಗಿ ಹೆಚ್ಚಿಸುವ ಉದ್ದೇಶ ಇಲ್ಲಿ ಸ್ಪಷ್ಟವಾಗಿ ಎದ್ದು ಕಾಣುತ್ತದೆ.
 
3) ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಹಿಂದಿಯನ್ನು ಶೈಕ್ಷಣಿಕ ಕ್ರಮದೊಳಗೆ ಕಡ್ಡಾಯ ವಿಷಯವಾಗಿ ಸೇರಿಸಲು ಕ್ರಮ ತೆಗೆದುಕೊಳ್ಳಬೇಕು. ಇದರ ಮೊದಲ ಹೆಜ್ಜೆಯಾಗಿ, ಎಲ್ಲ ಸಿಬಿಎಸ್‌ಇ ಶಾಲೆಗಳಲ್ಲಿ ಕಡ್ಡಾಯವಾಗಿ ಹತ್ತನೆಯ ತರಗತಿಯ ತನಕ ಹಿಂದಿಯನ್ನು ಕಲಿಸಬೇಕು (33). ಅಲ್ಲದೆ ಹಿಂದಿಯೇತರ ರಾಜ್ಯಗಳಲ್ಲಿರುವ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳಿಗೆ ಹಿಂದಿಯಲ್ಲಿ ಉತ್ತರ ಬರೆಯಲು ಅವಕಾಶ ನೀಡಬೇಕು (36). ಯಾವುದಾದರೂ ವಿಶ್ವವಿದ್ಯಾಲಯದಲ್ಲಿ ಹಿಂದಿ ವಿಭಾಗವಿಲ್ಲದಿದ್ದರೆ, ಅಲ್ಲಿ ಹೊಸದಾಗಿ ಹಿಂದಿ ಅಧ್ಯಯನಕ್ಕೆ ಉತ್ತೇಜನ ನೀಡಬೇಕು (35).
 
ರಾಷ್ಟ್ರದಾದ್ಯಂತ ಶಿಕ್ಷಣ ಕ್ಷೇತ್ರದಲ್ಲಿ ಹಿಂದಿಯನ್ನು ಕಡ್ಡಾಯವಾಗಿ ಕಲಿಸುವ ಕಡೆಗೆ ಈ ಮೇಲಿನ ಎಲ್ಲ ಕ್ರಮಗಳು ಚಲಿಸುತ್ತಿವೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಎರಡು ವರ್ಷಗಳ ಹಿಂದೆ ಸಿಬಿಎಸ್‌ಇ ಪಠ್ಯಕ್ರಮದಿಂದ ಜರ್ಮನ್, ಫ್ರೆಂಚ್ ಇತ್ಯಾದಿ ಯುರೋಪಿನ ಭಾಷೆಗಳನ್ನು ಕಲಿಯುವ ಅವಕಾಶಗಳನ್ನು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ತೆಗೆದುಹಾಕಿತ್ತು.
 
ಈ ನಡುವೆ ‘ಎನ್.ಸಿ.ಇ.ಅರ್.ಟಿ.ಯಿಂದ ಬರುತ್ತಿರುವ  ಸುತ್ತೋಲೆಗಳನ್ನು ಗಮನಿಸಿದರೆ, ತ್ರಿಭಾಷಾ ಸೂತ್ರವೆಂದರೆ ಹಿಂದಿ-ಸಂಸ್ಕೃತ-ಇಂಗ್ಲಿಷ್‌ಗಳೆಂದು ವ್ಯಾಖ್ಯಾನಿಸುವ ಷಡ್ಯಂತ್ರವೊಂದು ಗೋಚರಿಸುತ್ತಿದೆ’ ಎಂದು ಕರ್ನಾಟಕದ ಪ್ರತಿಷ್ಠಿತ ಶಾಲೆಗಳ ಮುಖ್ಯಸ್ಥರೊಬ್ಬರು ನನಗೆ ಇತ್ತೀಚೆಗೆ ಹೇಳಿದರು. ಸಿಬಿಎಸ್‌ಇ ಪಠ್ಯಕ್ರಮದಲ್ಲಿ ಈ ಮೂರು ಭಾಷೆಗಳಿಗೆ ಮಾತ್ರ ಅವಕಾಶ, ಪ್ರಾದೇಶಿಕ ಭಾಷೆಗಳನ್ನು ಕಲಿಯಬೇಕಿದ್ದರೆ ರಾಜ್ಯ ಪಠ್ಯಕ್ರಮದ ಶಾಲೆಗಳಲ್ಲಿ ನೋಂದಾಯಿಸಿಕೊಳ್ಳಲಿ ಎನ್ನುವ ನಿಲುವನ್ನು ಎನ್.ಸಿ.ಇ.ಆರ್.ಟಿ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯಗಳು ತಳೆಯುತ್ತಿವೆ. 
 
4) ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ (ಎನ್.ಎಫ್‌.ಡಿ.ಸಿ) ನಿರ್ಮಿಸುವ ಎಲ್ಲ ಚಿತ್ರಗಳನ್ನು ಕಡ್ಡಾಯವಾಗಿ ಹಿಂದಿಗೆ ಡಬ್ ಮಾಡಬೇಕು ಇಲ್ಲವೇ ಸಬ್‌ ಟೈಟಲ್‌ಗಳನ್ನು ನೀಡಬೇಕು. ಅಲ್ಲದೆ ಪ್ರಾರಂಭದ ಹಂತದಲ್ಲಿಯೇ ಚಿತ್ರಕಥೆಯನ್ನು ಹಿಂದಿಯಲ್ಲಿಯೇ ನೀಡುವಂತೆ ಪ್ರೋತ್ಸಾಹಿಸಬೇಕು (95).
 
5) ಹಿಂದಿಯಲ್ಲಿ ಸೃಜನಶೀಲ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಳ್ಳುವ ಕೇಂದ್ರ ಸರ್ಕಾರದ ನೌಕರರಿಗೆ ವಿಶೇಷ ಪ್ರೋತ್ಸಾಹ ನೀಡಬೇಕು (54). ಕೇಂದ್ರ ಸರ್ಕಾರದ ಸಂಸ್ಥೆಗಳ ಗ್ರಂಥಾಲಯಗಳಲ್ಲಿ ಹಿಂದಿ ಪುಸ್ತಕಗಳು ಮತ್ತು ನಿಯತಕಾಲಿಕಗಳನ್ನು ವಿಶೇಷವಾಗಿ ಕೊಳ್ಳಬೇಕು (52). ಆಕಾಶವಾಣಿ ಮತ್ತು ದೂರದರ್ಶನಗಳಲ್ಲಿ ಹಿಂದಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲು ಸಮಯ ನಿಗದಿ ಮಾಡಬೇಕು (92). 
 
ಈ ಮೇಲಿನ ಅಂಶಗಳನ್ನು ಗಮನಿಸಿದಾಗ ಒಂದು ಅಂಶ ಸ್ಪಷ್ಟವಾಗುತ್ತದೆ. ಅದೇನೆಂದರೆ ಕೇಂದ್ರ ಸಚಿವರುಗಳಾದ ನಾಯ್ಡು ಮತ್ತು ರಿಜಿಜು ಹೇಳುವಂತೆ ಈ ಎಲ್ಲ ಕ್ರಮಗಳು ಹಿಂದಿಯ ಅಭಿವೃದ್ಧಿಯ ಉದ್ದೇಶದಿಂದ ತೆಗೆದುಕೊಂಡಿರುವುದು ಎನ್ನುವುದು ನಿಜ.
 
ಆದರೆ ಹಿಂದಿಯನ್ನು ಇಲ್ಲಿ ಭಾರತದ ಪ್ರಾದೇಶಿಕ ಭಾಷೆಗಳಲ್ಲೊಂದು ಎನ್ನುವ ನೆಲೆಗಿಂತಲೂ ಇಂಗ್ಲಿಷ್‌ನೊಡನೆ ಅಧಿಕೃತ ಆಡಳಿತದ ಭಾಷೆ ಎನ್ನುವ ನಿಟ್ಟಿನಲ್ಲಿ ಹಿಂದಿಯ ಅಭಿವೃದ್ಧಿ ಪ್ರಯತ್ನ ನಡೆದಿದೆ. ಜೊತೆಗೆ ಈ ಕ್ರಮಗಳು ಹಿಂದಿ ಭಾಷಿಕರಿರುವ ರಾಜ್ಯಗಳಲ್ಲಿ ಮಾತ್ರವಲ್ಲದೆ, ದೇಶದ ಎಲ್ಲೆಡೆ ಅನುಷ್ಠಾನಗೊಳ್ಳುತ್ತಿವೆ.
 
ನಾಯ್ಡು ಸ್ಪಷ್ಟವಾಗಿ ಹೇಳುತ್ತಾರೆ; ‘ಕೇಂದ್ರ ಸರ್ಕಾರವು ತನ್ನ ಕಾರ್ಯಕ್ರಮಗಳು ಮತ್ತು ನೀತಿ ನಿರೂಪಣೆಯಲ್ಲಿ ಹಿಂದಿಯನ್ನು ಹೆಚ್ಚಾಗಿ ಬಳಸುತ್ತಿದೆ ಮತ್ತು ನಾವು ರಾಷ್ಟ್ರಭಾಷೆಯನ್ನು (ಅಂದರೆ ಹಿಂದಿ) ಪ್ರಾಂತೀಯ ಭಾಷೆಗಳೊಡನೆ ಬಳಸುವ ಅಭ್ಯಾಸ ಮಾಡಿಕೊಳ್ಳಬೇಕು.
 
ಹೀಗೆ ಹೊರಗಿನ ಇಂಗ್ಲಿಷ್‌ ಜೊತೆಗೆ ಅಥವಾ ಬದಲಿಗೆ ಭಾರತೀಯ ಭಾಷೆಯಾದ ಹಿಂದಿಗೆ ಸಮವಾದ ಸ್ಥಾನವನ್ನು ನೀಡುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ’. ಆದರೆ ಹಿಂದಿಯ ಅಗತ್ಯವಿಲ್ಲದಿರುವ ಭಾಗಗಳಲ್ಲಿಯೂ ಹಿಂದಿ ಬಳಕೆಯಾಗುತ್ತಿರುವುದನ್ನು ಹೇರಿಕೆ ಎಂದು ನಾವು ಕರೆಯಬೇಕಾಗುತ್ತದೆ. 
 
ಕೇಂದ್ರ ಸರ್ಕಾರದ ಈ ಕ್ರಮಗಳು ಶರದ್ ಯಾದವ್‌ರಂತಹ ಹಿಂದಿ ಭಾಷಿಕ ರಾಜಕಾರಣಿಗೆ ಸರಿಯೆನ್ನಿಸಬಹುದು. ಆದರೆ ಹಿಂದಿಗೆ ಈ ಪ್ರಮಾಣದ ಅಧಿಕೃತತೆಯನ್ನು ಆಡಳಿತ ಮತ್ತು ಶಿಕ್ಷಣದ ಕ್ಷೇತ್ರಗಳಲ್ಲಿ ಕೇಂದ್ರ ಸರ್ಕಾರ ನೀಡುವುದು ಪ್ರಶ್ನಾರ್ಹವೆಂದು ತೋರುತ್ತದೆ. 
 
ಬಾಲಿವುಡ್ ಅಥವಾ ಹಿಂದೂಸ್ತಾನಿ ಸಂಗೀತದ ಪ್ರಭಾವದಿಂದಾಗಿ ಹಿಂದಿ ದೇಶದಾದ್ಯಂತ ಸಾಮಾನ್ಯ ಜನರ ನಾಲಿಗೆಯಲ್ಲಿ ನರ್ತಿಸಿದರೆ ಅದೊಂದು ಭಿನ್ನವಾದ ವಿಚಾರ. ಅಲ್ಲಿ ಸಂಸ್ಕೃತಿಯ ಭಾಷೆಯಾಗಿ ಹಿಂದಿ ಸಾವಯವವಾಗಿ ಬೆಳೆಯುತ್ತದೆ. ಆದರೆ ಕೇಂದ್ರ ಸರ್ಕಾರ ಈಗ ಮಾಡುತ್ತಿರುವುದು ಬೇರೆಯ ಕೆಲಸ. ಹಿಂದಿಯೇತರರೇ ಬಹುಸಂಖ್ಯಾತರಾಗಿರುವ ಈ ದೇಶದಲ್ಲಿ ಶಾಸಕಾಂಗ ಮತ್ತು ಕಾರ್ಯಾಂಗಗಳ ಹಲವಾರು ಕಾರ್ಯ ಚಟುವಟಿಕೆಗಳು ಹಿಂದಿಯಲ್ಲಿಯೇ ನಡೆಯಲಿ ಎನ್ನುವ ನಿಲುವಿಗೆ ತಲುಪಿದೆ.
 
ಹೀಗಾದಾಗ ಕೇಂದ್ರ ಸರ್ಕಾರದಲ್ಲಿ ಕೆಲಸ ಮಾಡಬೇಕೆಂದರೆ ಶೈಕ್ಷಣಿಕವಾಗಿ ಹಿಂದಿಯ ಕಲಿಕೆ ಅನಿವಾರ್ಯವಾಗಿಬಿಡುತ್ತದೆ. ಸರ್ಕಾರಗಳು ಮತ್ತು ವಿಶ್ವವಿದ್ಯಾಲಯಗಳು ಬಳಸುವ ಈ ಭಾಷೆ ಬಾಲಿವುಡ್‌ ಚಲನಚಿತ್ರಗಳ ಭಾಷೆಯಲ್ಲ. ಹಾಗಾಗಿ ಹಿಂದಿಯೇತರರ ಮೇಲೆ ಇಂಗ್ಲಿಷ್‌ನ ಜೊತೆಗೆ ಹಿಂದಿಯನ್ನು ಕಲಿಯಬೇಕಾಗುವ ಅನಿವಾರ್ಯ ಹುಟ್ಟುತ್ತದೆ.
 
ಸ್ವಾತಂತ್ರ್ಯ ಚಳವಳಿ ಮತ್ತು ಸ್ವಾತಂತ್ರ್ಯೋತ್ತರ ಕಾಲಘಟ್ಟದಲ್ಲಿ ಭಾರತದ ರಾಷ್ಟ್ರೀಯತೆಯು ಭಾಷೆಗಳ ವಿವಿಧತೆಯ ಸಂಕೀರ್ಣ ಪ್ರಶ್ನೆಯನ್ನು ತುಂಬ ನಾಜೂಕಿನಿಂದ ನಿರ್ವಹಿಸಿತ್ತು. ಭಾಷಾವಾರು ಪ್ರಾಂತ್ಯಗಳನ್ನು ರಚಿಸುವುದು ಮತ್ತು ಒಂದು ಪ್ರಾಂತ್ಯದ ಸಾಂಸ್ಕೃತಿಕ ಅನನ್ಯತೆಯನ್ನು ಆ ಮೂಲಕ ಗುರುತಿಸುವುದು ಈ ನಾಜೂಕುತನದ ಒಂದು ವೈಶಿಷ್ಟ್ಯವಾಗಿದ್ದರೆ, ಮತ್ತೊಂದೆಡೆ ಹಿಂದಿಯೂ ಸೇರಿದಂತೆ ಯಾವುದೇ ಒಂದು ಭಾಷೆಯನ್ನು ಮಾತ್ರ ಮೇಲೆತ್ತುವ ಕೆಲಸವನ್ನು ಸರ್ಕಾರಗಳು ಮಾಡಿರಲಿಲ್ಲ. 
 
ಹೀಗೆ ಭಾಷಾವೈವಿಧ್ಯವನ್ನು ಪ್ರಜ್ಞಾಪೂರ್ವಕವಾಗಿ ಉಳಿಸಿಕೊಂಡಿರುವುದೇ ಭಾರತದ ರಾಷ್ಟ್ರೀಯತೆಯ ಶಕ್ತಿಯಾಗಿತ್ತು. ಈ ವಿವಿಧತೆಯೇ ದೇಶದ ಅಖಂಡತೆ ಮತ್ತು ಭದ್ರತೆಯನ್ನು ಕಾಪಾಡಿತ್ತು. ಅಂದರೆ ಹಿಂದಿ ಅಥವಾ ಸಂಸ್ಕೃತವೆಂಬ ಒಂದು ಸಂಕೇತದ ಸುತ್ತ ಕಳೆದ ಏಳು ದಶಕಗಳಲ್ಲಿ ನಾವು ಭಾರತದ ಏಕತೆಯನ್ನು ಕಟ್ಟಿಕೊಳ್ಳಬೇಕಾಗಿರಲಿಲ್ಲ. ಇಂದೂ ಅದರ ಅಗತ್ಯ ಕಾಣುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT