ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮುಕನೂ... ದೇವರೂ... ಮತ್ತು ನಾನು

Last Updated 17 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಪ್ರೀತಿ– ಪ್ರೇಮದ ಬಗ್ಗೆ ನಾವೆಲ್ಲರೂ ಮುಕ್ತವಾಗಿ ಮಾತನಾಡಿಕೊಳ್ಳುತ್ತೇವೆ. ಸಂಭ್ರಮಿಸುತ್ತೇವೆ. ಹಂಚಿಕೊಳ್ಳುತ್ತೇವೆ. ಆದರೆ ಕಾಮ?

ಪ್ರತಿಯೊಬ್ಬ ಮನುಷ್ಯನೂ ಕಾಮದೊಂದಿಗೆ ನಡೆಸುವ ಸೆಣಸಾಟವಿದೆಯಲ್ಲ, ಅದು ತುಂಬ ರಹಸ್ಯವಾದದ್ದು. ಯಾರಿಗೂ ಗೊತ್ತಾಗದಂತೆ ಪ್ರತಿಯೊಬ್ಬರೂ ಅದನ್ನು ತಮ್ಮೊಳಗೆ ಬಚ್ಚಿಟ್ಟುಕೊಳ್ಳುತ್ತಾರೆ. ಈ ಭೂಮಿಯ ಮೇಲಿರುವ ಎಲ್ಲ ಜೀವಗಳಲ್ಲಿಯೂ ಕಾಮವಿದೆ. ಆದರೆ ಮನುಷ್ಯನನ್ನು ಹೊರತುಪಡಿಸಿ ಯಾವ ಜೀವಿಯೂ ಕಾಮವನ್ನು ಕಂಡು ಅವಿತುಕೊಳ್ಳುವುದೂ ಇಲ್ಲ, ಅದನ್ನು ಬಚ್ಚಿಡುವುದೂ ಇಲ್ಲ. ಅದೇಕೋ ‘ಸೆಕ್ಸ್‌’ ಎನ್ನುವ ಪದವನ್ನೇ ನಮ್ಮಲ್ಲಿ ಕೆಟ್ಟ ಪದ ಎನ್ನುವಂತೆ ಮಾಡಿಕೊಂಡಿರುವುದನ್ನು ನೋಡಿದಾಗ ನಗು ಬರುತ್ತದೆ. ಏಕೆಂದರೆ ನಾವೆಲ್ಲರೂ ಆ ‘ಕೆಟ್ಟ ಕ್ರಿಯೆ’ಯಿಂದಲೇ ಹುಟ್ಟಿದವರಲ್ಲವೇ?

ತೆಲುಗು ಸಾಹಿತ್ಯದಲ್ಲಿ ಬಹಳ ಮುಖ್ಯ ಲೇಖಕ ಚಲಂ. ತನ್ನ ಬದುಕನ್ನು ತೆರೆದ ಪುಸ್ತಕದಂತೆ ಬಿಚ್ಚಿಟ್ಟಿದ್ದ ಸಾಹಿತಿ. ಅವರು ‘ಮೈದಾನಂ’ ಎನ್ನುವ ಕಾದಂಬರಿಯನ್ನು ಬರೆದಿದ್ದಾರೆ. ಗಂಡ– ಹೆಂಡತಿ ಸುಂದರವಾದ ಬದುಕು. ಗಂಡನನ್ನು ಭೇಟಿ ಮಾಡಲು ಅವನ ಗೆಳೆಯನೊಬ್ಬ ಬರುತ್ತಾನೆ. ಅವರಿಬ್ಬರೂ ಮಾತನಾಡುತ್ತಿದ್ದಾಗ ತನ್ನ ಕೋಣೆಯಿಂದ ಹೊರಬಂದ ಹೆಂಡತಿ, ಅಪರಿಚಿತನನ್ನು ಕಂಡು ಮತ್ತೆ ಕೋಣೆಗೆ ಹಿಂದಿರುಗುತ್ತಾಳೆ. ಆ ಕ್ಷಣದಲ್ಲಿ ಅವಳ ಬೆನ್ನಿಗೆ ಅಪರಿಚಿತನ ನೋಟ ಚುಚ್ಚಿದ ಅನುಭವವಾಗುತ್ತದೆ. ತನ್ನ ಪತಿಯ ಗೆಳೆಯನಾಗಿ ಮನೆಗೆ ಬಂದ ಒಬ್ಬನ ನೋಟದಲ್ಲಿ ಹುದುಗಿದ್ದ ಕಾಮ, ಇವಳ ನಡುವನ್ನು ಚುಚ್ಚಿದೆ. ತನ್ನ ಸೊಂಟವನ್ನು ಅವನು ನೋಡಿದ್ದಾನೆಂದು ಇವಳು ನೋಡದೆಯೇ ಅರ್ಥ ಮಾಡಿಕೊಳ್ಳುತ್ತಾಳೆ. ಆನಂತರ ಆ ಅಪರಿಚಿತನ ಪ್ರತಿಯೊಂದು ಭೇಟಿಯಲ್ಲಿಯೂ ಅವನ ನೋಟ ತನ್ನನ್ನು ಮುಟ್ಟಿ ನೋಡುತ್ತಿರುವ ಅನುಭವವಾಗುತ್ತದೆ ಅವಳಿಗೆ. ‘ಅಸ್ತವ್ಯಸ್ತವಾದ ಸೀರೆಯನ್ನು ಸರಿಪಡಿಸಿ ಕುಳಿತುಕೊಳ್ಳುವಂತೆ ತನ್ನ ದೇಹವನ್ನು ಸರಿಪಡಿಸಿಕೊಂಡು ಕುಳಿತಳು’ ಎಂದು ಬರೆಯುತ್ತಾನೆ ಚಲಂ.

ದಿಢೀರ್‌ ಎಂದು ಒಂದು ದಿನ ಗಂಡನಿಲ್ಲದಾಗ ಮನೆಗೆ ಬಂದ ಅವನು, ‘ನಾವಿಬ್ಬರೂ ಎಲ್ಲಿಗಾದರೂ ಓಡಿಹೋಗೋಣವೇ?’ ಎಂದು ಕೇಳುತ್ತಾನೆ. ಮಾರನೆಯ ದಿನ ಮನೆಯಿಂದ ಹೆಂಡತಿ ಕಾಣೆಯಾಗುತ್ತಾಳೆ. ಕಾಮ ಅವನ ನೋಟದಲ್ಲಿತ್ತೇ? ಅವಳ ದಾಹದಲ್ಲಿತ್ತೇ? ಗಂಡನ ಅಮಾಯಕತೆಯಲ್ಲಿತ್ತೇ? ಎಂಬ ಯಾವ ಪ್ರಶ್ನೆಗಳಿಗೂ ಉತ್ತರ ನೀಡದೆ, ಮೂವರನ್ನೂ ಸುಳಿಯಲ್ಲಿ ಸಿಲುಕಿಸಿ, ಕಾಮವೇ ಗೆದ್ದು, ಅವರಿಬ್ಬರನ್ನು ಗೋದಾವರಿ ನದಿತೀರಕ್ಕೆ ಕೊಂಡುಹೋಗಿ ಬಿಡುತ್ತದೆ.

ಓಡಿಹೋದ ಇಬ್ಬರೂ ಕಾಮಕ್ಕೆ ಶರಣಾಗಿ ನದಿತೀರದಲ್ಲಿ ಒಂದು ಗುಡಿಸಲು ಕಟ್ಟಿಕೊಂಡು ಬದುಕಲು ತೊಡಗುತ್ತಾರೆ. ಅವನಿಗೆ ಪ್ರತಿನಿತ್ಯ ಅವಳೊಡನೆ ದಾಂಪತ್ಯ ಸುಖ ಅನುಭವಿಸಬೇಕೆನ್ನುವ ತೀವ್ರತೆ. ಯಾವ ಕಾರಣಕ್ಕೂ ಅದನ್ನು ಬಿಟ್ಟುಕೊಡಲೊಲ್ಲ. ಕೆಲವು ದಿನಗಳಲ್ಲಿ ಅವಳು ತಾಯಿಯಾಗಲಿದ್ದಾಳೆ ಎಂದು ತಿಳಿದೊಡನೆ ಜಗಳವಾಡತೊಡಗುತ್ತಾನೆ. ಇವನನ್ನು ಹೇಗೆ ಸಮಾಧಾನಪಡಿಸುವುದು ಎಂದು ತಿಳಿಯದೆ ಆಕೆ ನದಿಯನ್ನು ದಾಟಿ ಹೋಗಿ ದಾಸಿಯೊಬ್ಬಳನ್ನು ಕರೆತರುತ್ತಾಳೆ. ಅವನನ್ನು ನೆಚ್ಚಿ ಬಂದವಳೇ, ‘ಇವನ ದಾಹ ತೀರಿಸುವ ಸ್ಥಿತಿಯಲ್ಲಿ ನಾನಿಲ್ಲ. ಸ್ವಲ್ಪ ದಿನ ನೀನು ಇವನೊಂದಿಗಿರು’ ಎಂದು ದಾಸಿಯಲ್ಲಿ ಹೇಳಿಕೊಳ್ಳುವ ಸ್ಥಿತಿಯಲ್ಲಿ ಕಥೆ ಮುಂದುವರಿಯುತ್ತದೆ.

ಚಲಂ ಹೀಗೆ ಬರೆದಿದ್ದನ್ನು ಬಹಳ ಜನ ವಿರೋಧಿಸಿದರು. ‘ನಳಾಯಿನಿ ತನ್ನ ಪುರುಷನನ್ನು ತಲೆಯ ಮೇಲೆ ಹೊತ್ತು ದಾಸಿಯೊಬ್ಬಳ ಮನೆಗೆ ಕೊಂಡು ಹೋದದ್ದಕ್ಕಾಗಿ ಅವಳನ್ನು ‘ಧರ್ಮಪತ್ನಿ’, ‘ಪತಿವ್ರತೆ’ ಎಂದು ಕೊಂಡಾಡಿದವರಿಗೆ ಈ ಕಥೆಯನ್ನು ವಿರೋಧಿಸುವ ಅರ್ಹತೆ ಇಲ್ಲ’ ಎಂದರು ಚಲಂ.

ಕಾಮ ಅನುಭವಿಸಬೇಕಾದ ವಿಷಯ. ಅದು ಶ್ವಾಸದಂತೆ, ಬೆವರಿನಂತೆ. ಸಹಜ ವಿರಾಮದಲ್ಲಿ ಆಟವಾಡಬೇಕಾದ ಸಂಗತಿ. ಅದನ್ನು ಹತ್ತಿಕ್ಕುವ ವಿಷಯವಾಗಿ ಮಾರ್ಪಡಿಸಿದರೆ ಕಾಮದಿಂದ ಹಲವು ತಪ್ಪುಗಳು ನಡೆಯತೊಡಗುತ್ತವೆ. ಅದನ್ನು ಕತ್ತಲಿಗೆ ಮಾತ್ರ ಸಂಬಂಧಪಟ್ಟ ವಿಷಯ ಎಂದುಕೊಂಡು ಬಚ್ಚಿಡುವ ಅಭ್ಯಾಸವಾಗಿಬಿಟ್ಟಿದೆ ನಮಗೆ. ಅಸಹ್ಯವಾಗುವ ಬಗ್ಗೆ ಯಾರಿಗೂ ಸಮಸ್ಯೆ ಇಲ್ಲ ಇಲ್ಲಿ. ಆದರೆ ಆ ಅಸಹ್ಯ ಹೊರಗೆ ಯಾರಿಗೂ ಗೊತ್ತಾಗಬಾರದು ಅಷ್ಟೆ.

ಬಹಳ ವರುಷಗಳ ಹಿಂದೆ ನನ್ನ ವೃತ್ತಿಬದುಕಿನ ಆರಂಭದ ದಿನಗಳಲ್ಲಿ ನಾನು ಒಬ್ಬ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದೆ. ನಟಿಸಲು ಹೊಸ ಹುಡುಗಿಯೊಬ್ಬಳನ್ನು ಕರೆತಂದರು. ಹದಿನೆಂಟು ವಯಸ್ಸೂ ದಾಟದ ಹೆಣ್ಣುಮಗಳು. ಏನೂ ಅರಿಯದ ಮುಗ್ಧೆಯಂತಿದ್ದಳು. ಆಕೆ ಯಾವ ಡೈಲಾಗ್‌ ಹೇಳಬೇಕು, ಯಾವ ಪೊಸಿಷನ್‌ನಲ್ಲಿ ನಿಲ್ಲಬೇಕು ಎಂದೆಲ್ಲ ನಾನೇ ಹೇಳಿಕೊಡಬೇಕಾಗಿತ್ತು. ಕೆಲವೊಮ್ಮೆ ಏನೂ ಅರ್ಥವಾಗದೇ ಪಿಳಿಪಿಳಿ ಕಣ್ಣುಬಿಟ್ಟುಕೊಂಡು ನೋಡುತ್ತ ನಿಂತುಬಿಡುತ್ತಿದ್ದಳು. ‘ಇಷ್ಟು ಮುಗ್ಧಳಾ’ ಎಂದು ಅವಳನ್ನು ಕಂಡಾಗಲೆಲ್ಲ ಪರಿತಾಪವೆನಿಸುತ್ತಿತ್ತು. ನೋಡನೋಡುತ್ತಿದ್ದಂತೆ ಅವಳು ಬದಲಾಗತೊಡಗಿದಳು. ಹತ್ತು ಹದಿನೈದು ದಿನಗಳಲ್ಲಿ ಇಡೀ ಯೂನಿಟ್‌ನವರನ್ನೆಲ್ಲ ತನ್ನ ಇಷ್ಟಕ್ಕೆ ತಕ್ಕಂತೆ ಕುಣಿಸುವ ವಿದ್ಯೆಯನ್ನು ಕರಗತ ಮಾಡಿಕೊಂಡಳು. ಅವಳ ಮಾತು,
ನೋಟ ಎಲ್ಲದರಲ್ಲಿಯೂ ಮೊದಲಿನ ಮುಗ್ಧತೆ ಮಾಯವಾಗತೊಡಗಿತ್ತು.

ಒಂದು ರಾತ್ರಿ ಹೋಟೆಲ್‌ ರೂಮೊಂದರಲ್ಲಿ ಡಿಸ್ಕಶನ್‌. ನಿರ್ದೇಶಕರು, ಕ್ಯಾಮೆರಾಮೆನ್‌, ನಿರ್ಮಾಪಕರು, ಪ್ರೊಡಕ್ಷನ್‌ ಮ್ಯಾನೇಜರ್‌ ಹೀಗೆ ಎಲ್ಲರೊಂದಿಗೆ ನಾನೂ ಇದ್ದೆ. ಮಾತಿನ ನಡುವೆ ಒಬ್ಬೊಬ್ಬರಾಗಿ ಎದ್ದು ಹೊರಹೋಗಿ ಅರ್ಧಗಂಟೆ ನಂತರ ಮತ್ತೆ ಬಂದು ಸೇರುತ್ತಿದ್ದರು. ಇವರೆಲ್ಲ ಎಲ್ಲಿಗೆ ಹೋಗಿಬರುತ್ತಿದ್ದಾರೆಂದು ನನಗಾಗ ಅರ್ಥವಾಗಲಿಲ್ಲ. ಮಾತಿನ ಮಧ್ಯೆ ಸಿಗರೇಟ್‌ ಹೊತ್ತಿಸಲು ಹೊರಬಂದರೆ ಎದುರು ರೂಮಿನಲ್ಲಿ ಆ ಹೆಣ್ಣುಮಗಳು ಇದ್ದಾಳೆ!

ಕೊನೆಗೆ ಡಿಸ್ಕಶನ್‌ ಮುಗಿಸಿ ಎಲ್ಲರೂ ಅವರವರ ರೂಮಿಗೆ ಹೋಗಿಬಿಟ್ಟರು. ಆ ಹೆಣ್ಣುಮಗಳನ್ನು ಕರೆತಂದಿದ್ದ ಹೆಂಗಸು ನಿರ್ಮಾಪಕರ ರೂಮಿಗೆ ಹೋಗಬೇಕಿತ್ತು. ಈ ಹೆಣ್ಣುಮಗಳನ್ನು ಏನು ಮಾಡಬೇಕು ಎಂದು ಯೋಚಿಸಿ, ‘ಪ್ರಕಾಶ್‌, ಈಕೆ ನಿನ್ನ ರೂಮಿನಲ್ಲಿರಲಿ. ಸ್ವಲ್ಪ ಹೊತ್ತಿನಲ್ಲಿ ಬಂದು ಕರೆದುಕೊಂಡು ಹೋಗ್ತೇನೆ’ ಎಂದು ಹೇಳಿ ಹೋದಳು.

ಈಗ ನನ್ನ ಕೋಣೆಯಲ್ಲಿ ನಾನು, ಆ ಹುಡುಗಿ– ಇಬ್ಬರೇ. ‘ಅಕ್ಕ ಬರೋದು ಲೇಟಾಗತ್ತೆ. ಏನ್ಮಾಡೋಣ?’ ಎಂದು ಯಾವ ಭಿಡೆಯೂ ಇಲ್ಲದೆ ನನ್ನನ್ನು ಕೇಳುತ್ತಿದ್ದಾಳೆ. ಕೆಲವೇ ದಿನಗಳ ಹಿಂದೆ ನೋಡಿದ ಮುಗ್ಧ ಹುಡುಗಿಯೇ ಇವಳು? ‘ಹೀಟರ್‌ನಲ್ಲಿ ಬಿಸಿನೀರಿದೆ. ಸ್ನಾನ ಮಾಡಿ ನೆಮ್ಮದಿಯಿಂದ ಮಲಗು’ ಎಂದ ನನ್ನನ್ನು ಆಶ್ಚರ್ಯದಿಂದ ನೋಡಿದಳು. ಯೋಗ್ಯನೆಂದುಕೊಂಡಳೋ ಏನೋ?

ಇನ್ನೊಂದು ಸಿಗರೇಟ್‌ ಹೊತ್ತಿಸಿ ವರಾಂಡದಲ್ಲಿ ನಡೆಯುತ್ತಿದ್ದಾಗ, ‘ಅನುಭವಿಸಬೇಕಾದ ವಿಷಯವನ್ನು ಇವರೆಲ್ಲ ಯಾವುದೋ ಬಾಡಿಗೆ ಸೈಕಲ್‌ ತೆಗೆದುಕೊಳ್ಳುವಂತೆ ಅರ್ಧಗಂಟೆಯ ವಿಷಯವಾಗಿಸಿಬಿಟ್ಟರಲ್ಲ’ ಎಂದು ಅನಿಸಿತು. ಒಬ್ಬರಿನ್ನೊಬ್ಬರಿಗೆ ಗೊತ್ತಾಗದಂತೆ ಪ್ರತಿಯೊಬ್ಬರೂ ಬೇರೆ ಬೇರೆ ಸುಳ್ಳುಗಳನ್ನು ಹೇಳುತ್ತ ಒಬ್ಬಳ ಬಳಿಯೇ ಹೋಗಿಬಂದಿದ್ದಾರೆ. ಒಬ್ಬನು ‘ದಮ್‌ ಹೊಡೆದು ಬರ್ತೇನೆ’ ಅಂತ, ಇನ್ನೊಬ್ಬ ‘ಯಾರಿಗೋ ಫೋನ್‌ ಮಾಡಬೇಕು’ ಅಂತ... ಸಿಗರೇಟ್‌, ಟಾಯ್ಲೆಟ್‌ಗಳ ಹಾಗೆ ಕಾಮವನ್ನು ಬಳಸಿದರೆ ಅದು ಉಳಿಯುವುದು ಹೇಸಿಗೆಯಾಗಿಯೇ ಅಲ್ಲವೇ?

ಹೀಗೆ ಒಮ್ಮೆ ವಿದೇಶದ ನಗರವೊಂದಕ್ಕೆ ಹೋಗಿದ್ದೆ. ಅಲ್ಲಿ ಸ್ಟಂಪ್‌ ಬಾರ್‌ ಎಂದು ಒಂದು ಬಾರ್‌ ಇತ್ತು. ವಿಸ್ಕಿ ಆರ್ಡರ್‌ ಮಾಡಿ ಕುಳಿತ ನನ್ನೆದುರು ಹೆಣ್ಣೊಬ್ಬಳು ಒಂದು ತುಂಡು ಬಟ್ಟೆಯೂ ಇಲ್ಲದೆ ನರ್ತಿಸುತ್ತಿದ್ದಾಳೆ. ಅಲ್ಲಿದ್ದ ಗಂಡಸರೆಲ್ಲರೂ ಅವಳನ್ನೇ ನೋಡುತ್ತಿದ್ದಾರೆ. ಅಲ್ಲಿ ಒಂದು ಷರತ್ತಿದೆ. ಯಾವ ಕಾರಣಕ್ಕೂ ಯಾರೇ ಆದರೂ ಅವಳನ್ನು ಮುಟ್ಟುವಂತಿಲ್ಲ. ಆದರೆ ಪ್ರತಿಯೊಂದು ಟೇಬಲ್‌ ಮೇಲೆ ಹೋಟೆಲ್‌ ಮೆನು ಕಾರ್ಡ್‌ ಎಂಬಂತೆ ರಾತ್ರಿಹೆಣ್ಣುಗಳ ಭಾವಚಿತ್ರಗಳೂ ಅವರ ಫೋನ್‌ ನಂಬರ್‌ಗಳೂ ಇವೆ. ಡೋರ್‌ ಡೆಲಿವರಿ ಎನ್ನುವ ಹಾಗೆ ‘ನೀವು ಇಷ್ಟಪಡುವ ಹೆಣ್ಣು ಮೂವತ್ತು ನಿಮಿಷಗಳ ಒಳಗೆ ನಿಮ್ಮ ಮನೆಬಾಗಿಲು ತಟ್ಟುತ್ತಾಳೆ’ ಎನ್ನುವ ಜಾಹೀರಾತಿನ ಫಲಕ ಇದೆ.

ಕಾಮ ಆ ಊರಿನಲ್ಲಿ ಮುಕ್ತವಾಗಿದೆ, ಬದುಕಿನ ದೊಡ್ಡ ಸಮಸ್ಯೆ ಅಲ್ಲ ಎನ್ನುವುದಕ್ಕಿಂತ ಅವರಿಗೆಲ್ಲ ಕಾಮವನ್ನು ಅನುಭವಿಸುವುದು ಗೊತ್ತಿಲ್ಲವೇ ಎನ್ನುವ ಅನುತಾಪವೇ ನನ್ನ ಮನಸಲ್ಲಿ ಮೂಡಿತು. ಇಲ್ಲವಾದಲ್ಲಿ ಹೆಣ್ಣುಗಳನ್ನು ಕಾಮದ ಮೆನು ಕಾರ್ಡ್‌ ಆಗಿಸಿ ಟೇಬಲ್‌ ಮೇಲೆ ಇಟ್ಟಿರುತ್ತಿದ್ದರೇ?

ಕಾಮವನ್ನು ಹೇಗಾದರೂ ಪಡೆಯಬೇಕು ಎಂದು ಯೋಚಿಸುವವನು ಕಾಮುಕನಾಗುತ್ತಾನೆ. ಕಾಮವನ್ನು ಮೀರಿ ಹೋಗಬೇಕು ಎನ್ನುವವನು ದೇವರಾಗಿಬಿಡುತ್ತಾನೆ. ಕಾಮವನ್ನು ಅನುಭವವೆಂದು ನೋಡುವವನು ಮನುಷ್ಯನಾಗುತ್ತಾನೆ. ನಾನು ಕಾಮವನ್ನು ಕಂಡು ಓಡುವುದೂ ಇಲ್ಲ, ಅದನ್ನು ಅವಿತಿಡುವುದೂ ಇಲ್ಲ. ಯಾಕೆಂದರೆ ಕಾಮುಕನಾಗಿರುವುದು ತಪ್ಪು. ದೇವರಾಗುವ ಆಸೆ ನನಗಿಲ್ಲ. ಮನುಷ್ಯನಾಗಿರುವುದರಲ್ಲಿ ಸಂತೋಷವಿದೆ ನನಗೆ. ನಿಮಗೆ...?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT