ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋರ್ಟು ಕಲಿಸಿದ ಪಾಠಗಳು

Last Updated 30 ಏಪ್ರಿಲ್ 2011, 19:30 IST
ಅಕ್ಷರ ಗಾತ್ರ

ಜಸ್ಟಿಸ್ ಪಿ.ಎ.ಕುಲಕರ್ಣಿಯವರನ್ನು ನೋಡಿ ದರೆ ಅವರಿಗೆ ಅಷ್ಟೊಂದು ಹಾಸ್ಯಪ್ರಜ್ಞೆ ಇದೆಯೇ ಎಂಬ ಅನುಮಾನ ಮೂಡುವಂತಿತ್ತು. ಜೋಕು ಹೊಡೆದಾಗ, ಇಡೀ ಕೋರ್ಟ್ ನಗೆಗಡಲಲ್ಲಿ ತೇಲುತ್ತಿದ್ದರೆ, ತಾವು ಮಾತ್ರ ಗಂಭೀರ ವದನರಾಗಿಯೇ ಇರುತ್ತಿದ್ದರು.

ಪ್ರಕರಣವೊಂದಕ್ಕೆ ಸಾಕ್ಷಿ ಹೇಳಲು ಕೆಲವರು ಕೋರ್ಟಿಗೆ ಬಂದಿದ್ದರು. ಬಾಕ್ಸ್‌ಗೆ ಬಂದ ಒಬ್ಬನನ್ನು ಉದ್ದೇಶಿಸಿ ಕುಲಕರ್ಣಿಯವರು, ‘ನಿನ್ನ ಹೆಸರೇನಪ್ಪ?’ ಎಂದು ಕೇಳಿದರು.ಅವನು ‘ಸೆಲ್ವ ನಾರಾಯಣ’ ಎಂದ. ‘ಅಪ್ಪನ ಹೆಸರೇನು?’ ಪ್ರಶ್ನೆ ಮುಂದುವರಿಯಿತು.

‘ಆರ್ಮುಗಂ’ ಎಂದು ಸಾಕ್ಷಿದಾರ ಹೇಳಿದ. ‘ಬೆಂಗಳೂರಲ್ಲಿ ಎಷ್ಟು ವರ್ಷದಿಂದ ಇದೀಯಾ’ ಎಂದರು. ‘ಪದಿನೆಂಜಿ ವರ್ಷತಿನಿಂದೆ ಇರುಕುರೆ... ಸಾರ್’ ಎಂದ ಸೆಲ್ವ. ‘ಆಯಿತು, ನೀನು ಏನೇನ್ ಕಂಡಿ ಹೇಳು’ ಎಂದು ಕೇಳಿದರು. ‘ಕನ್ನಡ ವರದಿಲ್ಲೆ ಸಾರ್’ ಎಂದ.

ಕುಲಕರ್ಣಿಯವರು ಯಾರಾದರೂ ಅನುವಾದಕರು ಇದ್ದಾರೆಯೇ ಎಂದು ಅವರ ವಕೀಲರನ್ನು ಕೇಳಿದರು. ‘ಹದಿನೈದು ವರ್ಷದಿಂದ ಇಲ್ಲಿ ಇದೀಯಲ್ಲೋ... ಕನ್ನಡದಾಗ ಮಾತಾಡೋ. ಇಷ್ಟು ವರ್ಷ ಆದ್ರೂ ಕನ್ನಡ ಕಲೀಲಿಕ್ಕಾ ಏನಪಾ  ತ್ರಾಸು. ಕನ್ನಡದಾಗ ಮಾತಾಡಲೊಲ್ಲೆ ಅಂದ್ರ ನಿನ್ನ ಸಾಕ್ಷಿ ತಗಳಾಂಗಿಲ್ಲ... ಬಿಡು’ ಎಂದು ಖಡಾಖಂಡಿತವಾಗಿ ಹೇಳಿಬಿಟ್ಟರು. ನಂತರ ಬಾಕ್ಸ್‌ಗೆ ಬಂದ ಇನ್ನೊಬ್ಬ ಉರ್ದುವಿನಲ್ಲಿ ಸಾಕ್ಷಿ ಹೇಳಲು ಮುಂದಾದ. ‘ಕನ್ನಡ, ಇಂಗ್ಲಿಷ್, ಹಿಂದಿ ಮೂರೂ ಭಾಷೆ ನಿಂಗ ಗೊತ್ತಿಲ್ಲ; ಹೌದಲಾ?

ಅಂದಮ್ಯಾಲೆ ನಿನ್ನ ಭಾಷಾದಾಗ ನಾನ್ಯಾಕೆ ಸಾಕ್ಷಿ ಕೇಳಲಿ... ಹೋಗು’ ಎಂದು ಅವನನ್ನೂ ಕಳಿಸಲು ಮುಂದಾದರು. ಕೊನೆಗೆ ತಮಿಳಿನವ ಹರುಕು ಮುರುಕು ಕನ್ನಡದಲ್ಲೇ ಸಾಕ್ಷಿ ಹೇಳಿದ. ಇನ್ನೊಬ್ಬ ಹಿಂದಿಯಲ್ಲಿ ಮಾತಾಡಿದ. ಕುಲಕರ್ಣಿಯವರ ಭಾಷಾಪ್ರೇಮ ಹೇಗಿತ್ತು ಎಂಬುದಕ್ಕೆ ಇದು ಉದಾಹರಣೆ.

ಕೋಮುಗಲಭೆ ನಡೆದ ಸ್ಥಳವನ್ನು ಕುಲಕರ್ಣಿ ಯವರು ಖುದ್ದು ಪರಿಶೀಲಿಸಿದರು.ಪೊಲೀಸರು ಎಂಥ ಇಕ್ಕಟ್ಟಿನ ಸ್ಥಳಗಳಲ್ಲಿ ಸಿಲುಕಿ ಕೆಲಸ ಮಾಡಬೇಕು ಎಂಬುದು ಅವರಿಗೆ ಸ್ಪಷ್ಟವಾಯಿತು. ವಿಚಾರಣೆಯೆಲ್ಲಾ ಮುಗಿದ ನಂತರ ಅವರು ಪೊಲೀಸರ ಕ್ರಮ ಸರಿಯಾಗಿಯೇ ಇದೆ ಎಂದು ತೀರ್ಪು ಕೊಟ್ಟರು.

***
ಇನ್ನೊಮ್ಮೆ ಬೆಂಗಳೂರಿನ ವಿವೇಕನಗರ ಸರಹದ್ದಿನಲ್ಲಿ ಮಟಮಟ ಮಧ್ಯಾಹ್ನವೇ ಒಂದು ಅತ್ಯಾಚಾರ ನಡೆಯಿತು. ಪಕ್ಕದ ಮನೆಯ ಕೆಲಸದಾಕೆ ಒಬ್ಬಳೇ ಇರುವುದನ್ನು ಗಮನಿಸಿದ ಯುವಕನೊಬ್ಬ ನಡುಮನೆಗೆ ನುಗ್ಗಿ ಮೃಗೀಯವಾಗಿ ಈ ಕೃತ್ಯ ಎಸಗಿದ.
 
ಪೊಲೀಸರಿಗೆ ದೂರು ಬಂದು, ಅವನನ್ನು ದಸ್ತಗಿರಿ ಮಾಡಿದರು. ಸೂಕ್ತ ರೀತಿಯಲ್ಲಿ ಆರೋಪ ಪಟ್ಟಿಯನ್ನು ಪೊಲೀಸರು ಸಲ್ಲಿಸಿದರು. ಭಾರತೀಯ ದಂಡ ಸಂಹಿತೆ 376ರ ಪ್ರಕಾರ ಅತ್ಯಾಚಾರ ಪ್ರಕರಣವನ್ನು ಆರೋಪಿಯ ವಿರುದ್ಧ ದಾಖಲಿಸಿದರು. ಈ ಪ್ರಕರಣದ ವಿಚಾರಣೆ ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯಿತು.
 
ಸಂಕೊಳ್ಳಿ ಎಂಬ ಹಿರಿಯ ಪಬ್ಲಿಕ್ ಪ್ರಾಸಿಕ್ಯೂಟರ್ ಆರೋಪಿಯ ತಪ್ಪನ್ನು ಸಾಬೀತುಪಡಿಸಲು ನಿಂತಿದ್ದರು. ‘ಜಾಯಿಂಟ್ ಡೈರೆಕ್ಟರ್ ಆಫ್ ಪ್ರಾಸಿಕ್ಯೂಟರ್’ ಆಗಿ ನಿವೃತ್ತರಾಗುವ ಮೊದಲು ಸಂಕೊಳ್ಳಿ ಒಳ್ಳೆಯ ಮನಸ್ಸಿನ ಪ್ರಾಸಿಕ್ಯೂಟರ್ ಎಂದೇ ಹೆಸರು ಮಾಡಿದ್ದರು. ಮಾನವೀಯ ಮೂರ್ತಿಯಂತೆ ಇದ್ದ ಅಪರೂಪದ ವ್ಯಕ್ತಿ ಅವರು. ಈ ಪ್ರಕರಣದ ವಿಚಾರಣೆ ನಡೆದಾಗಲೂ ಕುಲಕರ್ಣಿಯವರೇ ಜಡ್ಜ್ ಆಗಿದ್ದರು.

ಅತ್ಯಾಚಾರದ ಕೇಸಿನ ವಿಚಾರಣೆ ಸತತವಾಗಿ ಮೂರ್ನಾಲ್ಕು ದಿನ ನಡೆಯುತ್ತದೆ. ಕುತೂಹಲದ ಪ್ರಕರಣಗಳಿದ್ದಾಗಲೆಲ್ಲಾ ನಾನೂ ಕೋರ್ಟಿಗೆ ಹೋಗುತ್ತಿದ್ದೆನಾದ್ದರಿಂದ ಅಂದೂ ಅಲ್ಲಿದ್ದೆ. ಪ್ರಕರಣದ ವಿಚಾರಣೆ ಶುರುವಾಯಿತು. ‘ಇದೇನು ಕೇಸಪಾ?’ ಎಂದು ಜಡ್ಜ್ ಕೇಳಿದರು. ‘ಹಾಡಹಗಲೇ ಬಂದು ಈ ಹೆಣ್ಣುಮಗಳ ಮೇಲೆ ಆರೋಪಿಯು ಮೃಗೀಯವಾಗಿ ಅತ್ಯಾಚಾರ ಎಸಗಿದ್ದಾನೆ. ಅವಳ ಬಾಯಿಯನ್ನು ಮುಚ್ಚಿ, ಎಳೆದಾಡಿ, ಹಿಂಸಿಸಿ ಮಾನಭಂಗ ಮಾಡಿದ್ದಾನೆ’ ಎಂದು ಸಂಕೊಳ್ಳಿಯವರು ಘಟನೆಯ ವಿವರ ಹೇಳಿದರು. ಆಮೇಲೆ ಬಾಕ್ಸ್‌ಗೆ ಮಾನಭಂಗಕ್ಕೆ ಈಡಾಗಿದ್ದ ಹೆಣ್ಣುಮಗಳು ಬಂದಳು.

ಮುಖದಲ್ಲಿ ತುಸುವೂ ದುಃಖವಿಲ್ಲದ ಅವಳನ್ನು ಕಂಡ ಜಡ್ಜ್ ಕುಲಕರ್ಣಿಯವರು, ‘ಈಕಿ ಮಾರಿ ನೋಡಿದ್ರ ಅಂಥಾದೇನೂ ನಡೆದಾಂಗಿಲ್ಲಲ್ಲೋ...’ ಎಂದರು. ವಿಚಾರಣೆ ಶುರುವಾಯಿತು. ಆ ಹುಡುಗಿ ತನ್ನ ಹೆಸರು, ವಯಸ್ಸು ಹೇಳಿದಳು. ಆಮೇಲೆ ಆವತ್ತು ಏನು ನಡೆಯಿತು ಎಂಬ ಪ್ರಶ್ನೆ ಎದುರಾಯಿತು. ‘ಅಂಥಾದ್ದೇನೂ ನಡೆಯಲಿಲ್ಲ... ಆವತ್ತು ನಾನು ಮನೆಯಲ್ಲಿ ಸುಮ್ಮನೆ ರೇಡಿಯೋ ಕೇಳುತ್ತಾ ಇದ್ದೆ ಅಷ್ಟೆ’ ಎಂದು ಆ ಹೆಣ್ಣುಮಗಳು ತುಸುವೂ ಅಳುಕಿಲ್ಲದೆ ಹೇಳಿಬಿಟ್ಟಳು. ಅದನ್ನು ಕೇಳಿ ಸಂಕೊಳ್ಳಿಯವರ ಹಣೆ ಮೇಲೆ ಬೆವರು ಜಿನುಗಿತು.
ಇನ್ನು ಕೇಸಿನಲ್ಲಿ ಉಳಿದಿರುವುದು ಔಪಚಾರಿಕತೆ ಯಷ್ಟೇ ಎಂಬುದು ಅವರಿಗೆ ಅರಿವಾಯಿತು. ಒಳಗೊಳಗೇ ಆರೋಪಿಯ ಜೊತೆಗೆ ಆ ಹುಡುಗಿ ರಾಜಿಯಾಗಿರುವುದು ಗೊತ್ತಾಗಿ, ಸಂಕೊಳ್ಳಿಯವರು ಬೇಸರಪಟ್ಟರು. ಆದರೆ, ಅದನ್ನು ಹೇಳಿಕೊಳ್ಳು ವಂತೆಯೂ ಇರಲಿಲ್ಲ.

ಇದನ್ನು ಕಂಡ ಕುಲಕರ್ಣಿಯವರು, ‘ಏನೋ ಸಂಕೊಳ್ಳಿ... ಏನಾತಪಾ ನಿನ್ನ ಕೇಸು... ಯಾರು ಯಾರಿಗೋ ರೇಪ್ ಮಾಡ್ಯಾರಾ?’ ಅಂದರು. ‘ಆ ಅಮಾಯಕ ಹೆಣ್ಣುಮಗಳ ಮೇಲೆ ಆರೋಪಿ ಮಾಡಿದ ಯುವರ್ ಆನರ್’ ಎಂದು ಸಂಕೊಳ್ಳಿ ಮತ್ತೆ ತಮ್ಮ ಅದೇ ಕಳಕಳಿಯಿಂದ ವಾದಿಸಿದರು. ‘ನೀ ಹೇಳಾದು ಬರೋಬ್ಬರಿ ಇಲ್ಲ ಬಿಡು. ಖರೇ ಏನು ಗೊತ್ತಾ... ಆಕಿ ರೇಪ್ ಮಾಡಾಳ.
 
ಮೊದಲ ತನಿಖೆ ಮಾಡಿದ ಪೊಲೀಸಪ್ಪನ ಮ್ಯಾಲ ಮಾಡಾಳೆ. ಆಮ್ಯಾಗ ನಿನ್ನ ಮ್ಯಾಗೆ. ಈಗ ಇಲ್ಲಿ ನನ್ನ ಮ್ಯಾಲೂ ರೇಪಾತು ನೋಡು’ ಎಂದು ಕುಲಕರ್ಣಿಯವರು ಹೇಳಿದ್ದೇ ಇಡೀ ಕೋರ್ಟು ಗೊಳ್ಳೆಂದು ನಕ್ಕಿತು. ಅವರು ಮಾತ್ರ ನಗದೆ ಗೋಡೆಯ ಕಡೆಗೆ ನೋಡುತ್ತಾ ಸುಮ್ಮನಾದರು. ಜನರ ಊಸರವಳ್ಳಿತನದ ಬಗ್ಗೆ ಕುಲಕರ್ಣಿಯವರು ಬೇಸರ ವ್ಯಕ್ತಪಡಿಸುತ್ತಿದ್ದ ರೀತಿಯಲ್ಲೂ ಹಾಸ್ಯ ಬೆರೆತಿರುತ್ತಿತ್ತು.

***
ನಾನು ಬಾಣಸವಾಡಿ ಠಾಣೆಯಲ್ಲಿ ಸಬ್ ಇನ್ಸ್ ಪೆಕ್ಟರ್ ಆಗಿದ್ದಾಗ ಕೇಸೊಂದು ಬಂತು.ಮಹಿಳೆ ಯರೊಬ್ಬರನ್ನು ಸೀಮೆಎಣ್ಣೆ ಹಾಕಿ ಸುಟ್ಟಿದ್ದು, ಅವರು ಬೌರಿಂಗ್ ಆಸ್ಪತ್ರೆಯಲ್ಲಿ ಸಾವಿನ ಅಂಚಿನಲ್ಲಿದ್ದಾರೆ ಎಂಬ ಮಾಹಿತಿ ಬಂತು. ಮಧ್ಯರಾತ್ರಿಯಲ್ಲಿ ನಾನು ಆಸ್ಪತ್ರೆಗೆ ಹೋದೆ. ದೇಹದ ಎಂಬತ್ತು ಭಾಗ ಸುಟ್ಟುಹೋಗಿತ್ತು.

ಆದರೂ ಉಸಿರಾಡುತ್ತಿದ್ದಳು. ಅವಳ ತಾಯಿ ಒಂದು ಹೇಳಿಕೆ ಕೊಟ್ಟರು: ‘ಅವಳು ನನ್ನ ಮಗಳು. ನನ್ನ ಮೊಮ್ಮಗ ನಾಲ್ಕನೇ ಕ್ಲಾಸಿನ ಹುಡುಗ. ಇವಳು ನಾಯ್ಡು ಎಂಬ ಒಬ್ಬನ ಜೊತೆ ಸಂಬಂಧ ಇಟ್ಟುಕೊಂಡಿದ್ದಾಳೆ. ಅವನು ಬಂದಿದ್ದ. ಅವನಿಗೆ ಊಟ ಬಡಿಸುತ್ತಿರುವಾಗ ನಾನು, ಮೊಮ್ಮಗ ರೂಮಿಗೆ ಹೋಗಿ ಮಲಗಿದೆವು.
 
ಸ್ವಲ್ಪ ಹೊತ್ತಿನ ನಂತರ ಅವನು ಸೀಮೆಎಣ್ಣೆ ಸುರಿದು ಬೆಂಕಿಕಡ್ಡಿ ಗೀರಿದ್ದೇ ಇವಳು ಸುಟ್ಟುಹೋದಳು’. ಮರಣ ಕಾಲದ ಹೇಳಿಕೆಗೆ ನ್ಯಾಯಾಲಯದಲ್ಲಿ ಬಹಳ ಬೆಲೆ. ಹಾಗಾಗಿ ಒಬ್ಬ ಸಾಕ್ಷಿದಾರರ ಮುಂದೆ ಆ ಹೇಳಿಕೆ ದಾಖಲಿಸಿಕೊಳ್ಳಲು ನಾವು ಆದ್ಯತೆ ನೀಡುತ್ತೇವೆ.

ಗಾಯಾಳು ಮಾತನಾಡುವ ಸ್ಥಿತಿಯಲ್ಲಿ ಇದ್ದಾಳಾ ಎಂದು ನಾನು ವೈದ್ಯರನ್ನು ಕೇಳಿದೆ.ಅವರು ನನ್ನನ್ನು ವಾರ್ಡ್‌ನೊಳಕ್ಕೆ ಕರೆದುಕೊಂಡು ಹೋದರು. ಎಷ್ಟೇ ಕೇಳಿದರೂ ಅವಳು ಏನನ್ನೂ ಹೇಳಲಿಲ್ಲ. ಸ್ವಲ್ಪ ಹೊತ್ತಿನಲ್ಲೇ ಅವಳು ಪ್ರಜ್ಞೆತಪ್ಪಿದಳು. ಮತ್ತೆ ಅವಳು ಎಚ್ಚರಗೊಳ್ಳಲೇ ಇಲ್ಲ. ಕೆಲವು ಗಂಟೆಗಳ ನಂತರ ಅವಳು ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದರು.
 
ಮುಖ್ಯವಾದ ಹೇಳಿಕೆ ಸಿಗಲಿಲ್ಲವೆಂದು ಪೇಚಾಡಿಕೊಂಡೆ. ಅಷ್ಟು ಹೊತ್ತಿಗಾಗಲೇ ಕೊಲೆಯತ್ನದ ಪ್ರಕರಣವನ್ನು ನಮ್ಮ ಠಾಣೆಯಲ್ಲಿ ದಾಖಲು ಮಾಡಿಕೊಂಡಿದ್ದೆವು. ಅದನ್ನು ಕೊಲೆ ಕೇಸಾಗಿ ಪರಿವರ್ತಿಸಿ ಆರೋಪಪಟ್ಟಿ ದಾಖಲಿಸಿದೆವು. ಕೊಲೆಗೆ ಈಡಾಗಿದ್ದ ಮಹಿಳೆಗೆ ಮಗ ಇದ್ದನಲ್ಲ; ಅವನೇ ನಮಗೆ ಪ್ರತ್ಯಕ್ಷ ಸಾಕ್ಷಿ. ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದ ಅವನು ಬಹಳ ಚುರುಕಾಗಿದ್ದ. ಕಂಡಿದ್ದನ್ನು ಸ್ಪಷ್ಟವಾಗಿ ಹೇಳುತ್ತಿದ್ದ. ಈ ಎಲ್ಲಾ ವಿವರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆವು.

ಚಿಕ್ಕ ಹುಡುಗನೇ ನಮ್ಮ ಟ್ರಂಪ್‌ಕಾರ್ಡ್ ಸಾಕ್ಷಿಯಾದ್ದರಿಂದ ಪಬ್ಲಿಕ್ ಪ್ರಾಸಿಕ್ಯೂಟರ್‌ಗೂ ಅವನ ಬಗ್ಗೆ ಕುತೂಹಲವಿತ್ತು. ಅನುಮಾನ ಬಗೆಹರಿಸಿಕೊಳ್ಳಲು ಆ ಹುಡುಗನನ್ನು ಅವರೇ ಮಾತನಾಡಿಸಿ, ಘಟನೆಯ ಬಗ್ಗೆ ಕೇಳಿದರು. ಹುಡುಗ ನಡೆದ ಸಂಗತಿಯನ್ನು ಅಳುಕಿಲ್ಲದೆ ಸ್ಪಷ್ಟವಾಗಿ ಹೇಳಿದ್ದನ್ನು ಕೇಳಿ ಅವರಿಗೆ ತೃಪ್ತಿಯಾಯಿತು. ಸಾಕ್ಷಿಯನ್ನು ಚೆನ್ನಾಗಿ ಕಾಪಾಡಿಕೊಂಡಿದ್ದೀರಿ ಎಂದು ನನಗೆ ಶಹಬ್ಬಾಸ್‌ಗಿರಿ ಕೊಟ್ಟರು.
 
ಸಾಮಾನ್ಯವಾಗಿ ಕೇಸು ಬಲವಾಗಿದ್ದರೆ, ಆರೋಪಿಗಳ ಪರವಾದ ವಕೀಲರು ಆಮಿಷಗಳನ್ನು ತೋರಿಸಿ ಸಾಕ್ಷಿಗಳನ್ನು ತಮ್ಮ ಕಡೆಗೆ ಮಾಡಿಕೊಳ್ಳುತ್ತಾರೆ. ಹಾಗಾಗಿ ಅಜ್ಜಿ ಮತ್ತು ಮೊಮ್ಮಗನನ್ನು ನಾವು ಆರೋಪಿಯ ವಕೀಲರ ಕೈಗೆ ಸಿಗದಂತೆ ಮುತುವರ್ಜಿಯಿಂದ ನೋಡಿಕೊಂಡಿದ್ದೆವು.

ಪ್ರಕರಣದ ವಿಚಾರಣೆ ಕೋರ್ಟ್‌ನಲ್ಲಿ ಶುರುವಾಯಿತು. ಒಬ್ಬರು ಖಡಕ್ ಜಡ್ಜ್ ಅಲ್ಲಿದ್ದರು.ಕಾವೇರಿಯಪ್ಪ ಎಂಬ ಮಲ್ಲೇಶ್ವರ ವಿಭಾಗದ ಎಸಿಪಿ ಆಗ ಇನ್ನೊಂದು ಕೇಸಿಗಾಗಿ ಕೋರ್ಟ್‌ಗೆ ಬಂದಿದ್ದರು. ‘ಮಕ್ಕಳು ಸಾಕ್ಷಿ ಹೇಳಿದರೆ ಅದಕ್ಕಿಂತ ಉತ್ತಮವಾದ ಸಾಕ್ಷಿ ಇನ್ನೊಂದಿಲ್ಲ. ಆ ಸಾಕ್ಷಿಯನ್ನು ಚೆನ್ನಾಗಿ ಕಾಪಾಡಿಕೋ’ ಎಂದು ಅವರು ನನಗೆ ಹೇಳಿದ್ದರು. ಎಲ್ಲರೂ ಬೆನ್ನುತಟ್ಟಿದ್ದರಿಂದ ನಮಗೂ ವಿಶ್ವಾಸವಿತ್ತು.

ಮೊದಲಿಗೆ ಸಾಕ್ಷಿ ಹೇಳಿದ್ದು ಮೃತಳ ತಾಯಿ. ಆರೋಪಿ ಯಾರೆಂದು ತನಗೆ ಗೊತ್ತೇ ಇಲ್ಲ ಎಂದು ಅವರು ಹೇಳಿದರು. ನಮಗೆ ಎದೆ ಧಸಕ್ಕೆಂದಿತು. ‘ನೀನಾದರೂ ನಿಜ ಹೇಳಪ್ಪಾ’ ಎಂದು ಹುಡುಗನನ್ನು ನಾನು ಕೇಳಿಕೊಂಡೆ. ‘ನನ್ನ ತಾಯೀನಾ ಸಾಯಿಸಿದಾರೆ, ಅಂಕಲ್. ನಾನು ಹೇಳ್ತೀನಿ’ ಎಂದು ಅವನು ಅಳು ಬೆರೆತ ದನಿಯಲ್ಲಿ ಹೇಳಿದಾಗ ಈ ಕೇಸು ನಿಲ್ಲುತ್ತದೆ ಎನ್ನಿಸಿತು.
 
ಸಾಕ್ಷಿ ಬಾಕ್ಸ್‌ನಲ್ಲಿ ಹುಡುಗನನ್ನು ನಿಲ್ಲಿಸಿದಾಗ, ‘ಇದೇನಪ್ಪಾ... ಇಷ್ಟು ಚಿಕ್ಕ ಹುಡುಗನನ್ನು ಬಾಕ್ಸ್‌ಗೆ ಹಾಕಿದ್ದೀರಿ’ ಎಂದು ಜಡ್ಜ್ ಕೇಳಿದರು. ಅವನೇ ಟ್ರಂಪ್ ವಿಟ್ನೆಸ್ ಎಂದಾಗ ಅವರೂ ಸಾಕ್ಷಿ ಕೇಳಲು ಉತ್ಸುಕರಾದರು. ಹುಡುಗ ಹೇಳತೊಡಗಿದ... ‘ಅಂಕಲ್, ಅಮ್ಮ ಅವತ್ತು ನಂಗೆ ಊಟ ಕೊಟ್ಟಳು. ಆಮೇಲೆ ನಾನು ರೂಮಿಗೆ ಹೋಗಿ ಮಲಗಿದೆ. ಈ ಅಂಕಲ್ ಯಾರೂ ಅಂತಲೇ ನನಗೆ ಗೊತ್ತಿಲ್ಲ. ಅವರನ್ನು ನಾನು ನೋಡೇ ಇಲ್ಲ’. ಆರೋಪಿಯ ವಕೀಲರು, ಆರೋಪಿಯ ಮುಖದಲ್ಲಿ ಸಂತೋಷ ಅರಳತೊಡಗಿತು. ಕಷ್ಟಪಟ್ಟು ನ್ಯಾಯ ದೊರಕಿಸಲು ಯತ್ನಿಸಿದ ನನಗೆ, ಪಬ್ಲಿಕ್ ಪ್ರಾಸಿಕ್ಯೂಟರ್‌ಗೆ ಆದ ಬೇಸರ ಅಷ್ಟಿಷ್ಟಲ್ಲ.

ಪೊಲೀಸರು ಕೇಸುಗಳನ್ನು ಪತ್ತೆಮಾಡಿ, ಸಾಕ್ಷಿಗಳನ್ನು ಒದಗಿಸಿದ ನಂತರವೂ ಹೀಗೆ ಆಗುವುದು ಅಪರೂಪವಲ್ಲ ಎಂಬುದೇ ನಮ್ಮ ವ್ಯವಸ್ಥೆಯ ವ್ಯಂಗ್ಯ.

ನ್ಯಾಯಾಲಯದ ಅನುಭವ ನನಗೆ ಅನೇಕ ಪಾಠಗಳನ್ನು ಕಲಿಸಿದೆ. ಸಾಕ್ಷಿ ಕಲೆಹಾಕುವಾಗ ಹೇಗೆಲ್ಲಾ ಯೋಚಿಸಬೇಕು ಎಂಬುದನ್ನು ಹೇಳಿಕೊಟ್ಟಿದೆ. ಅದಕ್ಕೂ ಮಿಗಿಲಾಗಿ ಆರೋಪಿಗಳ ಪರ ವಕೀಲರ ಪಾಟೀ ಸವಾಲುಗಳಿಗೆ ಪದೇಪದೇ ಎದುರಾಗಿರುವುದರಿಂದ ತನಿಖೆಯಲ್ಲಿ ಏನು ತಪ್ಪು ಮಾಡಿದ್ದೆ ಎಂಬುದೂ ಅರಿವಾಗಿದೆ.
 
ಯಾವುದೇ ಪೊಲೀಸ್ ವೃತ್ತಿಯಲ್ಲಿ ಪರಿಣತಿ ಸಾಧಿಸಬೇಕಾದರೆ ಆರೋಪಿ ಪರ ವಾದಿಸುವ ವಕೀಲರ ಪಾಟೀ ಸವಾಲಿನ ಹೊಡೆತಕ್ಕೆ ಸಿಲುಕಲೇಬೇಕು. ನಾನು ಈಗಲೂ ನ್ಯಾಯಾಲಯಕ್ಕೆ ಹೋಗಿ ಸಾಕ್ಷಿ ಹೇಳುತ್ತಲೇ ಇರುವುದರಿಂದ ಅನೇಕ ರೋಚಕ ಅನುಭವಗಳು ನನ್ನದಾಗುತ್ತಲೇ ಇವೆ.

ಮುಂದಿನ ವಾರ: ಇನ್ನಷ್ಟು ಮಾನವೀಯ ಘಟನೆಗಳು

ಶಿವರಾಂ ಅವರ ಮೊಬೈಲ್ ನಂಬರ್94483 13066

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT