ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿದಂಬರಂ ಹಾದಿಯಲ್ಲಿ ಹತ್ತಾರು ಅಡಚಣೆ

Last Updated 26 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಈಗ ಎಲ್ಲೆಡೆ ಕೇಂದ್ರ ಸರ್ಕಾರದ   2013-14ನೇ ಸಾಲಿನ ಬಜೆಟ್ ಬಗ್ಗೆಯೇ ಚರ್ಚೆ ನಡೆಯುತ್ತಿದೆ. ಹಣಕಾಸು ಸಚಿವ ಪಿ. ಚಿದಂಬರಂ ಅವರು, ನಾಳೆ (ಗುರುವಾರ) ಮುಂದಿನ  ಹಣಕಾಸು ವರ್ಷದ ಮುಂಗಡಪತ್ರ ಮಂಡಿಸಲಿದ್ದು, ಜನರ, ಉದ್ದಿಮೆಗಳ ನಿರೀಕ್ಷೆಗಳನ್ನೆಲ್ಲ ಈಡೇರಿಸುವರೆ ಎನ್ನುವ ಪ್ರಶ್ನೆ ನನಗೂ ಸೇರಿದಂತೆ ಅನೇಕರನ್ನು ಕಾಡುತ್ತಿದೆ.

ಬಜೆಟ್ ಎನ್ನುವುದು ಸರ್ಕಾರಕ್ಕೆ ಸೇರಿದ ಹಣದ ಹರಿವಿನ ಒಂದು ಹೇಳಿಕೆಯಷ್ಟೆ. ಹಣ (ಸಂಪನ್ಮೂಲ) ಸಂಗ್ರಹಣೆ ಮತ್ತು ಅದನ್ನು ವೆಚ್ಚ ಮಾಡುವುದಕ್ಕೆ ಸಂಬಂಧಿಸಿದ ಸರ್ಕಾರದ ಆದ್ಯತೆ  ಮತ್ತು ಯೋಜನೆಗಳು ಯಾವ ದಿಕ್ಕಿನಲ್ಲಿ ಸಾಗಲಿವೆ  ಎನ್ನುವ ವಿವರಗಳನ್ನೆಲ್ಲ ಈ ಹೇಳಿಕೆ ಬಹಿರಂಗಪಡಿಸುವುದರಿಂದ ಅರ್ಥ ವ್ಯವಸ್ಥೆಯಲ್ಲಿ ಅದಕ್ಕೆ ಹೆಚ್ಚು ಮಹತ್ವ ಇದೆ.

ದೇಶದ ಪ್ರತಿಯೊಬ್ಬ ಪ್ರಜೆಯ ಮೇಲೂ ಬಜೆಟ್ ಒಂದಲ್ಲ ಒಂದು ಬಗೆಯಲ್ಲಿ ಪ್ರಭಾವ ಬೀರಲಿರುವುದರಿಂದ  ಪ್ರತಿಯೊಬ್ಬರೂ ಅದನ್ನು ಕುತೂಹಲದಿಂದ ಎದುರು ನೋಡುತ್ತಿರುತ್ತಾರೆ. ನಮ್ಮಂತಹ ಸಂಕೀರ್ಣಮಯ ದೊಡ್ಡ ದೇಶದ ವಿಭಿನ್ನ ಜನಸಮುದಾಯಗಳ ಆಕಾಂಕ್ಷೆಗಳನ್ನೆಲ್ಲ ಏಕಕಾಲಕ್ಕೆ ಈಡೇರಿಸುವುದು ಅಸಾಧ್ಯವಾದ ಮಾತು. ಇದೇ ಕಾರಣಕ್ಕೆ ಬಜೆಟ್ ಪ್ರಸ್ತಾವಗಳಿಗೆ ಯಾವಾಗಲೂ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಲೇ ಇರುತ್ತದೆ.

ಪ್ರತಿ ಬಾರಿ ಬಜೆಟ್ ಮಂಡಿಸುವಾಗಲೂ ಆಯಾ ಸಂದರ್ಭದಲ್ಲಿನ ಆರ್ಥಿಕ ಮತ್ತು ರಾಜಕೀಯ ವಿದ್ಯಮಾನಗಳು ಪ್ರಮುಖವಾಗಿ ಪರಿಗಣನೆಗೆ ಬರುತ್ತವೆ. ಈ ಸಾಲಿನ ಬಜೆಟ್ ಕೂಡ ಇದೇ ಕಾರಣಕ್ಕೆ  ಸಾಕಷ್ಟು ಮಹತ್ವ ಪಡೆದುಕೊಂಡಿದೆ.

ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ  ಸಂಯುಕ್ತ ಪ್ರಗತಿಪರ ಮೈತ್ರಿಕೂಟ (ಯುಪಿಎ-2) ಸರ್ಕಾರದ ಅಧಿಕಾರಾವಧಿಯು 2014ರ ಆರಂಭದಲ್ಲಿ ಪೂರ್ಣಗೊಳ್ಳಲಿದೆ. ಮತದಾರರನ್ನು ಓಲೈಸಲು ಸರ್ಕಾರದ ಪಾಲಿಗೆ ಈ ಅಧಿಕಾರಾವಧಿಯಲ್ಲಿ ಇದು ಕೊನೆಯ ಅವಕಾಶವಾಗಿದೆ.

ಸದ್ಯಕ್ಕೆ ಸರ್ಕಾರದ ಎದುರು ಸಾಕಷ್ಟು ಸವಾಲುಗಳು ಇವೆ. ಹಲವಾರು ಹಗರಣಗಳು ಸರ್ಕಾರದ ವರ್ಚಸ್ಸಿಗೆ ತೀವ್ರ ಧಕ್ಕೆ ಒದಗಿಸಿವೆ. ಆಡಳಿತಾರೂಢ ಪಕ್ಷ ವಿರುದ್ಧದ ಜನಾಭಿಪ್ರಾಯ ಎದುರಿಸುತ್ತಿರುವುದರಿಂದ ಸರ್ಕಾರದ ಬುಡ ಅಲುಗಾಡುತ್ತಿದೆ. ಇಂತಹ ಪ್ರತಿಕೂಲತೆಗಳನ್ನೆಲ್ಲ ಮೆಟ್ಟಿ ನಿಲ್ಲಲು ಸರ್ಕಾರ ಬಜೆಟ್ ಮೂಲಕ ಪ್ರಯತ್ನಿಸುವುದೇ ಎನ್ನುವ ಅನುಮಾನಗಳು ನನ್ನನ್ನು ಕಾಡುತ್ತಿವೆ.
ಸರ್ಕಾರವು ತನ್ನೆದುರಿಗಿನ ಪ್ರತಿಕೂಲತೆಗಳನ್ನೆಲ್ಲ ಸಮರ್ಥವಾಗಿ ಎದುರಿಸಲಿದೆ ಎಂದೇ ನನಗೆ ಈ ಹಂತದಲ್ಲಿ ಭಾಸವಾಗುತ್ತಿದೆ. 

`ಅನುಕೂಲಸಿಂಧು ರಾಜಕೀಯ'ವೇ ನಾನು ಈ ನಿರ್ಧಾರಕ್ಕೆ ಬರಲು ಪ್ರಮುಖ ಕಾರಣವಾಗಿದೆ. ರಾಹುಲ್ ಗಾಂಧಿ ಅವರು ದೇಶದ ಅತ್ಯುನ್ನತ ಹುದ್ದೆಗೆ ಏರಲು ಈಗಾಗಲೇ ರಣರಂಗಕ್ಕೆ ಇಳಿದಿರುವುದರಿಂದ ಸರ್ಕಾರವು ಎಲ್ಲರೂ ಮೆಚ್ಚುವಂತಹ ಬಜೆಟ್ ಮಂಡಿಸುವ ಉತ್ಸಾಹದಲ್ಲಿ ಇದೆ ಎಂದೇ ನನಗೆ ಅನಿಸುತ್ತದೆ.

ದೇಶದ ಕೈಗಾರಿಕಾ ರಂಗದ ಚಿತ್ರಣ ಅಷ್ಟೇನೂ ತೃಪ್ತಿದಾಯಕವಾಗಿಲ್ಲ. ವಿತ್ತೀಯ ಕೊರತೆ ಮತ್ತು ಚಾಲ್ತಿ ಖಾತೆ ಕೊರತೆ ತಗ್ಗಿಸುವ ಪ್ರಯತ್ನಗಳೂ ನಿರೀಕ್ಷಿತ ಫಲ ನೀಡಿಲ್ಲ. ತೀವ್ರ ಸ್ವರೂಪದ ಮತ್ತು ದೂರಗಾಮಿ ಪರಿಣಾಮ ಬೀರುವ ಈ ಎರಡೂ ಕೊರತೆಗಳಿಗೆ ಹೋಲಿಸಿದರೆ, ಈ ಹಂತದಲ್ಲಿ ಆರ್ಥಿಕ ವೃದ್ಧಿ ದರ (ಜಿಡಿಪಿ) ಕಡಿಮೆ ಪ್ರಮಾಣದಲ್ಲಿ ಇರುವ ಅಂದಾಜು ಅಷ್ಟೇನೂ ಗಂಭೀರವಾಗಿ ಕಾಣುವುದಿಲ್ಲ.

ವಿತ್ತೀಯ ಕೊರತೆ ನಿಯಂತ್ರಿಸಲು ಕ್ರಮಗಳನ್ನು ಕೈಗೊಳ್ಳದಿದ್ದರೆ ದೇಶದ ಸಾಲ ಮರುಪಾವತಿ ಸಾಮರ್ಥ್ಯ ಇನ್ನಷ್ಟು ಕುಸಿತಗೊಳ್ಳಲಿದೆ ಎಂದು ಅಂತರರಾಷ್ಟ್ರೀಯ ಮಾನದಂಡ ಸಂಸ್ಥೆಗಳು ಆತಂಕ ವ್ಯಕ್ತಪಡಿಸಿವೆ.

ಚಾಲ್ತಿ ಖಾತೆ ಕೊರತೆ ತಗ್ಗಿಸಲು ನೆರವಾಗುವ ವಿದೇಶಿ ಸಾಂಸ್ಥಿಕ ಸಂಸ್ಥೆಗಳು (ಎಫ್‌ಐಐ), ದೇಶವೊಂದರ ಸಾಲ ಮರು ಪಾವತಿ ಸಾಮರ್ಥ್ಯ ನಿರ್ಧರಿಸುವ ವಿಷಯದಲ್ಲಿ ಹೆಚ್ಚು ಪ್ರಭಾವ ಹೊಂದಿರುತ್ತವೆ. ಈ ಹಿನ್ನೆಲೆಯಲ್ಲಿ, ವಿತ್ತೀಯ ಕೊರತೆ ತಗ್ಗಿಸಲು ಹಣಕಾಸು ಸಚಿವರು ಇನ್ನಷ್ಟು ಕಠಿಣ ನಿಲುವು ತಳೆದಿದ್ದಾರೆ. ಈ ಉದ್ದೇಶಕ್ಕೆ ಅವರು ಸರ್ಕಾರದ ವರಮಾನ ಹೆಚ್ಚಿಸುವ ಅಥವಾ ವೆಚ್ಚಗಳನ್ನು ಇನ್ನಷ್ಟು ಕಡಿತಗೊಳಿಸುವ ಕಠಿಣ ಕ್ರಮಗಳನ್ನು ಪ್ರಕಟಿಸಬಹುದು ಎಂದು ನನಗೆ ಅನಿಸುತ್ತದೆ.

ಆರ್ಥಿಕ ವೃದ್ಧಿ ದರ ಕುಂಠಿತಗೊಂಡಿರುವುದರಿಂದ ಬೊಕ್ಕಸಕ್ಕೆ ಹೆಚ್ಚು ವರಮಾನ ಹರಿದು ಬರುವ ಸಾಧ್ಯತೆ  ಕಡಿಮೆ ಇದೆ. ಈ ಪರಿಸ್ಥಿತಿಯಲ್ಲಿ ತೆರಿಗೆ ದರ  ಹೆಚ್ಚಿಸುವುದೊಂದೇ ಸರ್ಕಾರದ ಮುಂದಿರುವ ಏಕೈಕ ಆಯ್ಕೆಯಾಗಿದೆ. ನೇರ ಮತ್ತು ಪರೋಕ್ಷ ತೆರಿಗೆ ದರಗಳನ್ನು ಹೆಚ್ಚಿಸುವುದೂ ಸದ್ಯದ ಸಂದರ್ಭದಲ್ಲಿ ಅಪಾಯಕಾರಿಯೂ ಹೌದು. ಇನ್ನಷ್ಟು ಗಂಡಾಂತರ ಆಹ್ವಾನಿಸಿಕೊಳ್ಳುವ  ನಿರ್ಧಾರಗಳನ್ನು ಚಿದಂಬರಂ ತೆಗೆದುಕೊಳ್ಳಲಿಕ್ಕ್ಲ್ಲಿಲ. ಅಂತಿಮವಾಗಿ ಚಿದಂಬರಂ ಅವರು ತೆರಿಗೆ ಹೆಚ್ಚಿಸುವ ನಿರ್ಧಾರಕ್ಕೆ  ಬಂದರೆ, ಅದರಿಂದ ಅವರು ದೇಶವನ್ನು ಮತ್ತೆ ಒಂದು ದಶಕದ ಹಿಂದೆ ಕರೆದುಕೊಂಡು ಹೋದಂತಾಗುತ್ತದೆ. ತೆರಿಗೆ ಪಾವತಿಸುವ ವರ್ಗಕ್ಕೆ ಇನ್ನಷ್ಟು  ದುಬಾರಿ ತೆರಿಗೆಗಳನ್ನು ವಿಧಿಸುವ ಬದಲಿಗೆ ಹಣಕಾಸು ಸಚಿವರು ಇತರ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕಾಗಿದೆ.   

ಇನ್ನೊಂದೆಡೆ ವೆಚ್ಚದ ಪರಿಸ್ಥಿತಿಯೂ ಕಠಿಣವಾಗಿದೆ. ಕಲ್ಯಾಣ ಕಾರ್ಯಕ್ರಮಗಳಿಗೆ   ಮಾಡುವ  ವೆಚ್ಚಗಳು ಸರ್ಕಾರದ ಪಾಲಿಗಂತೂ ತುಂಬ ಅಚ್ಚುಮೆಚ್ಚಿನ ಬಾಬತ್ತುಗಳಾಗಿವೆ.  ಯೋಜನಾ ವೆಚ್ಚವೂ ದುಬಾರಿಯಾಗಿದೆ. ಸಬ್ಸಿಡಿಗಳಿಗೆ ಕಡಿವಾಣ ಹಾಕುವ ಆಲೋಚನೆಗೆ  ಸರ್ಕಾರ ಚಾಲನೆ ನೀಡಿರುವುದು ಮಾತ್ರ ಆಶಾದಾಯಕವಾಗಿದೆ. ಆದರೆ, ಚಾಲ್ತಿ ಖಾತೆ ಕೊರತೆಯನ್ನು ಅಲ್ಪಾವಧಿಯಲ್ಲಿ  ಸರಿದೂಗಿಸುವುದು ಸಾಧ್ಯವಾಗಲಾರದು. ರಫ್ತು ವಹಿವಾಟು  ಕಡಿಮೆಯಾಗಿದ್ದು, ಆಮದು ಪ್ರಮಾಣ ಜೋರಾಗಿಯೇ ಇದೆ. ರಫ್ತು ವಿಭಾಗದಲ್ಲಿ ಕೆಲವೇ ಕೆಲ ಆಯ್ದ ವಲಯಗಳಿಗೆ ನೆರವಾಗುವ ಯೋಜನೆಗಳು ಬಜೆಟ್‌ನಲ್ಲಿ ಪ್ರಕಟಗೊಳ್ಳುವ ಸಾಧ್ಯತೆಗಳಿವೆ. ದೇಶಿ ಸರಕು ತಯಾರಿಕಾ ರಂಗಕ್ಕೆ ದೀರ್ಘಾವಧಿ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗದಿದ್ದರೆ ರಫ್ತು ವಹಿವಾಟು ಇನ್ನಷ್ಟು ವರ್ಷಗಳ ಕಾಲ ಕುಂಟುತ್ತಲೇ ಸಾಗಲಿದೆ. ಆಮದು - ರಫ್ತು ವಹಿವಾಟಿನ ವಿಷಯವನ್ನು ಇನ್ನೊಮ್ಮೆ ಈ ಅಂಕಣದಲ್ಲಿ ವಿವರವಾಗಿ ಚರ್ಚಿಸುತ್ತೇನೆ.

ಅಲ್ಪಾವಧಿಯಲ್ಲಿ ಆಮದು ಪ್ರಮಾಣ ತಗ್ಗಿಸಲು ಸಾಧ್ಯವಾಗಲಾರದು. ಚಿನ್ನದ ಆಮದು  ಪ್ರಮಾಣ ತಗ್ಗಿಸಲು ಸರ್ಕಾರ ಕೈಗೊಂಡ ಕ್ರಮಗಳು ನಿರೀಕ್ಷಿತ ಫಲ ನೀಡದಿರುವುದೇ ಇದಕ್ಕೆ ಉತ್ತಮ ನಿದರ್ಶನವಾಗಿದೆ.

ಜನಸಾಮಾನ್ಯರ ದೃಷ್ಟಿಯಿಂದ ನೋಡಿದಾಗ, ಸಮಾಜದಲ್ಲಿನ ಪ್ರತಿಯೊಬ್ಬರೂ ಬಜೆಟ್‌ನಿಂದ ತಮಗೆ  ಏನಾದರೂ ಪ್ರಯೋಜನ ದೊರೆತೀತೆ ಎಂದೇ ನಿರೀಕ್ಷಿಸಿರುತ್ತಾರೆ. ಪತ್ರಿಕೆಗಳ ಆರ್ಥಿಕ ವಿದ್ಯಮಾನಗಳ ಅಂಕಣ ಅಥವಾ ನಿಯತಕಾಲಿಕೆಗಳಲ್ಲಿ ವಿವಿಧ ಆಸಕ್ತ ಗುಂಪುಗಳ `ಬಜೆಟ್ ನಿರೀಕ್ಷೆ'ಗಳ ಬಗ್ಗೆ ವಿಶ್ಲೇಷಣಾತ್ಮಕ ಲೇಖನಗಳು ಇರುತ್ತವೆ. ಸಮಾಜದ ವಿವಿಧ ವರ್ಗದ ವಿಭಿನ್ನ ಕೋರಿಕೆಗಳು ಸರ್ಕಾರದ ವರಮಾನದ ಮೇಲೆ ಯಾವುದೇ ಪರಿಣಾಮ ಬೀರುವಂತಿರದಿದ್ದರೆ ಆ ಬಗ್ಗೆ ನಾನು ಹೆಚ್ಚು ಚರ್ಚಿಸಲು ಇಷ್ಟಪಡುವುದಿಲ್ಲ.

ಹಣಕಾಸು ಸಚಿವರ ಎದುರು ಕಠಿಣ ಸವಾಲುಗಳು ಇರುವ ಸದ್ಯದ ಸಂದರ್ಭದಲ್ಲಿ, ಅವರು ಎರಡು ಮಹತ್ವದ ವಿಷಯಗಳನ್ನು ತಮ್ಮ ಬಜೆಟ್‌ನಲ್ಲಿ ಪ್ರಸ್ತಾಪಿಸಬೇಕು ಎಂದು ನಾನು ಇಲ್ಲಿ ಹೇಳಲು ಇಷ್ಟಪಡುತ್ತೇನೆ.

ಮೊಟ್ಟ ಮೊದಲನೆಯದಾಗಿ, ಸರ್ಕಾರಿ ವೆಚ್ಚದ ಸಮರ್ಪಕ ನಿರ್ವಹಣೆ ಮತ್ತು ಯೋಜನೆಗಳ ಪರಿಣಾಮಕಾರಿ ಅನುಷ್ಠಾನದ ಬಗ್ಗೆ ಸಚಿವರು ಹೆಚ್ಚು ಕಾಳಜಿ ವಹಿಸಬೇಕು. ನಿಯಮಿತ ಅಂತರದಲ್ಲಿ ಒಂದೊಂದೇ ಹಗರಣಗಳು ಬಯಲಿಗೆ ಬರುತ್ತಿರುವಾಗ, ಜನರು ಸರ್ಕಾರ ಮಾಡುವ ವೆಚ್ಚದ ವಿವರಗಳು ಮತ್ತು ಅದರ ಕಾರ್ಯನಿರ್ವಹಣೆಯ ದಕ್ಷತೆ  ಪ್ರಶ್ನಿಸುತ್ತಿದ್ದಾರೆ.

ಸಬ್ಸಿಡಿ ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸುವುದು `ಹಣದ ನಿರ್ವಹಣೆ'ಯಲ್ಲಿನ ಸರಿಯಾದ ಹೆಜ್ಜೆಯಾಗಿದೆ. ಈ ಕಾರ್ಯಕ್ರಮವನ್ನು ಇನ್ನಷ್ಟು ತ್ವರಿತ ಮತ್ತು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಬಗ್ಗೆ ಬಜೆಟ್, ಮುನ್ನೋಟ ನಿಗದಿಪಡಿಸಬೇಕು. ಈ ಯೋಜನೆ ಜಾರಿಯ ಆರಂಭದಲ್ಲಿ ಕಂಡು ಬಂದಿರುವ ದೋಷಗಳನ್ನೆಲ್ಲ ಸರಿಪಡಿಸಬೇಕಾಗಿದೆ.

ಸರ್ಕಾರಿ ಯೋಜನೆಗಳ ನಿರ್ವಹಣೆಯಲ್ಲಿ ತಂತ್ರಜ್ಞಾನ ಬಳಕೆಗೆ ಗರಿಷ್ಠ ಅನುದಾನ ನಿಗದಿಪಡಿಸಬೇಕು. ಜತೆಗೆ ಯೋಜನೆಗಳನ್ನು ನಿಗದಿತ ಸಮಯಕ್ಕೆ ಪೂರ್ಣಗೊಳಿಸುವ ಆಕ್ರಮಣಕಾರಿ ಧೋರಣೆ  ಅಳವಡಿಸಿಕೊಳ್ಳಬೇಕು.

ದೇಶದ ಅರ್ಥ ವ್ಯವಸ್ಥೆಯಲ್ಲಿ ಯುವ ಜನತೆಯ ಪಾತ್ರ ಹೆಚ್ಚುತ್ತಿರುವುದನ್ನು ಬಜೆಟ್ ಸರಿಯಾಗಿ ಗುರುತಿಸಬೇಕು. ಯುವ ಜನತೆ ಆರ್ಥಿಕ ಬೆಳವಣಿಗೆಯ ಎಂಜಿನ್‌ನಂತೆ ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ಅಗತ್ಯವಾದ ಉತ್ತೇಜನಾ ಕ್ರಮಗಳನ್ನು ಸರ್ಕಾರ ಪ್ರಕಟಿಸಬೇಕು.  ಇಂತಹ ಕ್ರಮಗಳು ಯುವ ಜನತೆಯ ಉದ್ಯಮಶೀಲತೆ ಪ್ರವೃತ್ತಿ ಉತ್ತೇಜಿಸಿ, ಆರ್ಥಿಕ ವೃದ್ಧಿ ದರ ಸುಧಾರಿಸಿ, ಅರ್ಥ ವ್ಯವಸ್ಥೆಯಲ್ಲಿ ಈ ಮೊದಲಿನ ಉತ್ಸಾಹ ಮರಳಿ ಬರುವಂತೆ ಮಾಡಬೇಕಾಗಿದೆ.

ಹಣಕಾಸು ಸಚಿವರ ಪಾಲಿಗೆ ಇದು ಅನುಕೂಲಕರ ಸಮಯವೇನೂ ಅಲ್ಲ.  ಹಲವು ಪ್ರತಿಕೂಲತೆಗಳ ಮಧ್ಯೆಯೂ ಚಿದಂಬರಂ  ಈ ಬಾರಿಯೂ ಗೆಲುವಿನ ನಗೆ ಬೀರಲಿ ಎಂದೇ ನಾನು ಶುಭ ಹಾರೈಸುವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT