ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವತೆಯೆನ್ನುತ್ತಲೇ ವೇಶ್ಯೆಯೆಂದು ಜರಿಯುವವರು

Last Updated 25 ಜುಲೈ 2016, 19:30 IST
ಅಕ್ಷರ ಗಾತ್ರ

ಎಲ್ಲಿ ನಾರಿಯರನ್ನು ಪೂಜಿಸಲಾಗುತ್ತದೊ ಅಲ್ಲಿ ದೇವತೆಗಳು ಪ್ರಸನ್ನರಾಗುತ್ತಾರೆ ಎಂದು ಹೇಳುವ ಸಂಸ್ಕೃತಿ ನಮ್ಮದು. ಆದರೆ ಇದೇ ಸಂಸ್ಕೃತಿಯಲ್ಲಿ ಅನೇಕ ಬೈಗುಳ ಪದಗಳ ಮೂಲ ಹೆಣ್ಣು ಎಂಬುದು ವಿಪರ್ಯಾಸ. ಇಂತಹ ಬೈಗುಳ ಪದಗಳ ಪಟ್ಟಿಯಲ್ಲಿ  ವೇಶ್ಯೆಯೂ ಸೇರಿದ್ದಾಳೆ, ವೇಶ್ಯಾವೃತ್ತಿ ನಿರತರು  ಶ್ರೇಣೀಕೃತ ಸಾಮಾಜಿಕ ವ್ಯವಸ್ಥೆಯಲ್ಲಿ ಅತ್ಯಂತ ಕೆಳಗೆ, ಅಂಚಿನಲ್ಲಿರುವವರು.

ಅತಿಹೆಚ್ಚಿನ ದೌರ್ಜನ್ಯಕ್ಕೆ ಒಳಗಾದವರು ಎಂಬುದನ್ನು ನಾವು ಮರೆಯುವುದು ಸಾಧ್ಯವೆ? ಹೀಗಾಗಿ, ಈ ಕುರಿತಾದ ರಾಜಕೀಯ ಚಿಂತನೆ ಕನಿಷ್ಠ ನಮ್ಮನ್ನು ಆಳುವ ರಾಜಕೀಯ ಪಕ್ಷಗಳಿಗೆ ಇರಬೇಕು ತಾನೆ? ಆದರೆ ವೇಶ್ಯೆ ಎಂಬ ಪದವನ್ನೇ ನಿಂದನಾ ಪದವಾಗಿ ಬಳಸುವಂತಹ ರಾಜಕೀಯ ನಾಯಕರ ಮನೋಧರ್ಮ ಎಂತಹದಿರಬೇಕು?

ವೇಶ್ಯೆ ಎಂದು ಜರಿಯುವ ಮೂಲಕ ಹೆಣ್ಣಿನ ಚಾರಿತ್ರ್ಯವನ್ನು ತುಚ್ಛೀಕರಿಸುವಂತಹದ್ದು ಅಸೂಕ್ಷ್ಮತೆಯ ಪರಮಾವಧಿ. ಈ ಬಗೆಯಲ್ಲಿ ಹೆಣ್ಣನ್ನು ಜರಿಯುವಂತಹದ್ದೇ ಈಗ ರಾಜಕೀಯ ವಾಗ್ವಾದದ ಕೇಂದ್ರಬಿಂದುವಾಗಿರುವುದು ವಾಗ್ವಾದದ ಮಟ್ಟ ತಲುಪಿರುವ ಅಧೋಗತಿಗೆ ಸೂಚಕ.

ಬಿಜೆಪಿಯ ಉತ್ತರ ಪ್ರದೇಶ ಘಟಕದ ಉಪಾಧ್ಯಕ್ಷರಾಗಿದ್ದ ದಯಾಶಂಕರ ಸಿಂಗ್ ಅವರು ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಮುಖ್ಯಸ್ಥೆ ಮಾಯಾವತಿ ಅವರನ್ನು ವೇಶ್ಯೆಗೆ ಹೋಲಿಸಿದ ವಿದ್ಯಮಾನ ರಾಜ್ಯಸಭೆಯಲ್ಲಿ ಕಳೆದ ವಾರ ಕೋಲಾಹಲಕ್ಕೆ ಕಾರಣವಾಯಿತು.

‘ಹೆಚ್ಚು ಹಣ ನೀಡುವವರಿಗೆ ಮಾಯಾವತಿ ಪಕ್ಷದ ಟಿಕೆಟ್ ನೀಡುತ್ತಾರೆ. ಅವರ ಈ ವರ್ತನೆ ವೇಶ್ಯೆಗಿಂತ ಕೀಳು’ ಎಂದು ದಯಾಶಂಕರ ಸಿಂಗ್ ಹೇಳಿರುವುದು ವಿಡಿಯೊದಲ್ಲಿ ದಾಖಲಾಗಿದೆ.

ಈ ಮಾತಿನ ರಾಜಕೀಯ ಪರಿಣಾಮವನ್ನು ಅರಿತುಕೊಂಡು  ದಯಾಶಂಕರ ಸಿಂಗ್‌ನನ್ನು ಆರು ವರ್ಷಗಳವರೆಗೆ ಪಕ್ಷದ ಎಲ್ಲ ಹುದ್ದೆಗಳಿಂದಲೂ ಬಿಜೆಪಿ ವಜಾ ಗೊಳಿಸಿದೆ. ಈ ಹೇಳಿಕೆ ವಿರುದ್ಧ ಉತ್ತರಪ್ರದೇಶದಲ್ಲಿ ವ್ಯಾಪಕ ಪ್ರತಿಭಟನೆಗಳು ನಡೆದಿವೆ. ಆಗಿನಿಂದ ದಯಾಶಂಕರ ಸಿಂಗ್ ನಾಪತ್ತೆಯಾಗಿದ್ದಾರೆ.

ಈ ಮಧ್ಯೆ, ಈ ಘಟನೆ ಪಡೆದು ಕೊಂಡ ತಿರುವುಗಳು, ಈ ವಾಗ್ವಾದದ ಘನತೆಗೇ ಕುಂದು ತರುವಂತಹವು.  ಮಾಯಾವತಿಯವರನ್ನು ವೇಶ್ಯೆಗೆ ಹೋಲಿಸಿದ ದಯಾಶಂಕರ  ಸಿಂಗ್ ಅವರ ನಾಲಿಗೆ ಕತ್ತರಿಸಿದವರಿಗೆ 50 ಲಕ್ಷ ರೂಪಾಯಿ ಕೊಡುವುದಾಗಿ ಬಿಎಸ್‌ಪಿ ನಾಯಕಿಯೊಬ್ಬರು ಘೋಷಿಸಿದರು.

ಹಾಗೆಯೇ ತಮ್ಮ ಹದಿಹರೆಯದ ಪುತ್ರಿ ಹಾಗೂ ತಮ್ಮ ವಿರುದ್ಧ ಕೀಳು ಭಾಷೆ ಬಳಸಿ ಬಿಎಸ್‌ಪಿ ಕಾರ್ಯಕರ್ತರು ಕಿರುಕುಳ ನೀಡಿದ್ದಾರೆ ಎಂದು ಬಿಎಸ್‌ಪಿ ನಾಯಕರ ವಿರುದ್ಧ ದಯಾಶಂಕರ ಸಿಂಗ್ ಪತ್ನಿ   ಎಫ್‌ಐಆರ್ ದಾಖಲಿಸಿದ್ದಾರೆ. ರಾಜಕೀಯ ಕೆಸರೆರಚಾಟದಲ್ಲಿ ದಾಳಗಳಾಗಿ ಮಹಿಳೆಯರು ಬಳಕೆಯಾಗುತ್ತಿರುವ ಈ ಪರಿ ಮಹಿಳಾ ಪರವಾದ ವಾಗ್ವಾದಗಳನ್ನು ದುರ್ಬಲಗೊಳಿಸುವುದು ಶೋಚನೀಯ. 

ಆದರೆ, ಉತ್ತರಪ್ರದೇಶದಲ್ಲಿ ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದ ಉನ್ನತ ರಾಜಕೀಯ ನಾಯಕಿಯೇ ಆಕ್ಷೇಪಾರ್ಹವಾದ ನಿಂದನಾ ನುಡಿಗಳನ್ನು ಕೇಳಬೇಕಾಯಿತು ಎಂದರೆ ಸಾರ್ವಜನಿಕ ಬದುಕಿನಲ್ಲಿರುವ ಸಾಧಾರಣ ಮಹಿಳೆಯರ ಸ್ಥಿತಿ ಹೇಗಿರಬಹುದು ಎಂಬುದನ್ನು ಊಹಿಸಿಕೊಳ್ಳಬಹುದು.

ಪಂಚಾಯಿತಿ ಮಟ್ಟಗಳಲ್ಲಿ ಶೇ 50ರಷ್ಟು ಮಹಿಳೆಯರು ಅಧಿಕಾರ ಸ್ಥಾನಗಳಲ್ಲಿದ್ದಾರೆ. ಅವರು ಎದುರಿಸುವ ನಿಂದನಾ ನುಡಿಗಳು, ಅವಮಾನಗಳು ಹೆಚ್ಚಿನದು. ಅದರಲ್ಲೂ ಪಂಚಾಯಿತಿಗೆ ಚುನಾಯಿತರಾದ ದಲಿತ, ಆದಿವಾಸಿ ಮಹಿಳೆಯರು ಎದುರಿಸುವ ಅವಮಾನ ಇನ್ನೂ ಹೆಚ್ಚಿನದು.

ಸ್ತ್ರೀದ್ವೇಷಿ (ಮಿಸೊಜಿನಿ) ಮಾತುಗಳು ಹಾಗೂ ಲಿಂಗ ತಾರತಮ್ಯ ಧ್ವನಿಸುವ (ಸೆಕ್ಸಿಸ್ಟ್)  ಭಾಷೆ, ನಮ್ಮ ರಾಜಕೀಯ ಹಾಗೂ ಆಡಳಿತ ಸಂಸ್ಕೃತಿಯ ಭಾಗವಾಗಿಯೇ ಇದೆ. ಇಂತಹ ಮಾತುಗಳನ್ನು ಆಡುವವರು ಬರೀ ಪುರುಷರೇ ಅಲ್ಲ. 

ಮಾಯಾವತಿ ಅವರು  ‘ಆತನೋ   ಆಕೆಯೋ’ ಎಂಬುದರ  ಬಗ್ಗೆ ಗೊಂದಲವಾಗಿದೆ ಎಂದು 2014ರಲ್ಲಿ ಬಿಜೆಪಿಯ ಮುಂಬೈ ವಕ್ತಾರೆ ಶೈನಾ ಎನ್.ಸಿ. ಹೇಳಿದ್ದರು. ಸೋನಿಯಾ ಗಾಂಧಿ ಪ್ರಧಾನಿಯಾದರೆ ತಲೆ ಬೋಳಿಸಿಕೊಳ್ಳುವುದಾಗಿ ಸುಷ್ಮಾ ಸ್ವರಾಜ್ ಹೇಳಿದ್ದರು ಎಂಬುದನ್ನೂ ನೆನಪಿಸಿಕೊಳ್ಳಿ.

ಇತ್ತೀಚೆಗೆ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸಚಿವ ಸಂಪುಟದ ಪುನರ್ ರಚನೆ ಸಂದರ್ಭದಲ್ಲಿ ಸ್ಮೃತಿ ಇರಾನಿಯವರನ್ನು ಮಹತ್ವದ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯಿಂದ ಕೈಬಿಟ್ಟು ಜವಳಿ ಖಾತೆಗೆ ವರ್ಗಾಯಿಸಲಾಯಿತು. ಈ ಸಂದರ್ಭದಲ್ಲಿ ಸ್ಮೃತಿ ಇರಾನಿಯವರ ಕುರಿತಂತೆ ಅವಹೇಳನಕಾರಿಯಾದ ಜೋಕುಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದವು.

ಸ್ಮೃತಿಯವರ ಆಡಳಿತಾತ್ಮಕ ಸಾಮರ್ಥ್ಯದ ವಿಮರ್ಶೆಗಿಂತ ಅವರನ್ನು ಹೆಣ್ಣಾಗಿ ಪರಿಭಾವಿಸಿ ನಡೆಸಿದ ವಾಗ್ದಾಳಿಗಳೇ ಹೆಚ್ಚಾಗಿದ್ದವು.  ಯಾವ ಪೂರ್ವಗ್ರಹಗಳಿಗೆ ಈ ಸಂದರ್ಭದಲ್ಲಿ ಅವರು ಬಲಿಪಶುವಾದರೋ ಅಂತಹ ಪೂರ್ವಗ್ರಹಗಳ ವಿರುದ್ಧ  ಸ್ಮೃತಿ ಇರಾನಿ  ಎಂದೂ ದನಿ ಎತ್ತಿಲ್ಲ ಎಂದು ಎನ್‌ಡಿಟೀವಿಯ ಬರ್ಖಾ ದತ್ ಬಹಿರಂಗ ಪತ್ರದಲ್ಲಿ ಟೀಕಿಸಿದ್ದಾರೆ. ಸಾರ್ವಜನಿಕ ಬದುಕಿನಲ್ಲಿ ಟೀಕೆಗಳಿಗೆ ಅತೀತರಾಗಿರುವುದು ಸಾಧ್ಯವಿಲ್ಲ.

ಪುರುಷ ರಾಜಕಾರಣಿಗಳು ರಾಜಕೀಯ ಪ್ರತಿಸ್ಪರ್ಧಿಗಳನ್ನು ಹಲವು ರೀತಿಗಳಲ್ಲಿ ಟೀಕೆ ಮಾಡುತ್ತಾರೆ.  ಆದರೆ ಅವರ ಲಿಂಗತ್ವ ವಿಷಯವನ್ನು ಅಲ್ಲಿ ಎಂದಿಗೂ ಅಸ್ತ್ರವಾಗಿ ಬಳಸುವುದಿಲ್ಲ. ಆದರೆ,  ವ್ಯಕ್ತಿಯನ್ನು ಅವಮಾನಿಸುವ, ಅವಹೇಳನಕರ ಹಾಗೂ ಲಘು ಧಾಟಿಯ ಟೀಕೆಗಳು ಹೆಣ್ಣುಮಕ್ಕಳಿಗೇ ಹೆಚ್ಚು.
ಇಂದಿರಾ ಗಾಂಧಿಯಿಂದ ಆರಂಭಿಸಿ ತಮ್ಮನ್ನು ತಾವು ಪ್ರತಿಪಾದಿಸಿಕೊಳ್ಳುವ ಮಹಿಳೆಯರು ಅಪನಿಂದೆಗಳಿಗೆ ಗುರಿಯಾಗಿದ್ದಾರೆ.

ಮಹಿಳೆ ವಿರುದ್ಧ ಹಿಂಸಾತ್ಮಕ ಹಾಗೂ ನಿಂದನಾತ್ಮಕ ಭಾಷೆ ಬಳಕೆಯ ಕಲುಷಿತ ಇತಿಹಾಸವನ್ನು ಎಲ್ಲಾ ರಾಜಕೀಯ ಪಕ್ಷಗಳೂ ಹೊಂದಿವೆ.   2011ರಲ್ಲಿ  34 ವರ್ಷಗಳ ಎಡರಂಗದ ಆಳ್ವಿಕೆಯನ್ನು ಅಂತ್ಯಗೊಳಿಸಿದಂತಹ ಪಶ್ಚಿಮ ಬಂಗಾಳ ವಿಧಾನಸಭೆ  ಚುನಾವಣೆ ಸಂದರ್ಭದಲ್ಲಿ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ವಿರುದ್ಧ ಸಿಪಿಎಂ ಎಂಪಿ ಅನಿಲ್ ಬಸು ಅವರು ಒರಟಾದ ಮಾತುಗಳನ್ನಾಡಿದ್ದರು. 

‘ಚುನಾವಣಾ ಖರ್ಚುಗಳಿಗೆ ಯಾವ  ಭತಾರ್ (ಮಹಿಳೆಯ ಅಕ್ರಮ ಪುರುಷ ಸಂಗಾತಿಯ ಬಗ್ಗೆ ಬಳಸುವ ನಿಂದನಾ ಪದ) 24 ಕೋಟಿ ರೂಪಾಯಿ ಮಮತಾಗೆ  ನೀಡಿದ’ ಎಂದು ಅವರು ಪ್ರಶ್ನಿಸಿದ್ದರು. ಹಾಗೆಯೇ,  ಎಡ ಪಕ್ಷಗಳ ಮಹಿಳಾ ಸದಸ್ಯರ ಮೇಲೆ  ಅತ್ಯಾಚಾರ ಮಾಡುವುದಾಗಿ 2014ರಲ್ಲಿ ತೃಣಮೂಲ ಕಾಂಗ್ರೆಸ್ ಎಂಪಿ ತಪಸ್ ಪಾಲ್  ಬೆದರಿಕೆ ಒಡ್ಡಿದ್ದರು.

‘ಹಿಂದುಳಿದ ವರ್ಗಗಳಿಗೆ ನಾನು ದೇವಿ. ಅವರು ಆಕ್ರೋಶಿತಗೊಂಡಿದ್ದಾರೆ’ ಎಂದು ಹೇಳಿಕೊಳ್ಳುತ್ತಾರೆ ಮಾಯಾವತಿ. ಆದರೆ  ಅವರು ‘ವಿಪತ್ತಿನ ದೇವತೆ’  ಎಂದು ಬಣ್ಣಿಸಿದ್ದಾರೆ ಉತ್ತರಪ್ರದೇಶದಲ್ಲಿ ಬಿಜೆಪಿಯ ದಲಿತ ಮುಖವಾಗಿರುವ ರಾಮ್ ಶಂಕರ್ ಕಥೇರಿಯಾ.

ಉಚ್ಚಾಟಿತ ಬಿಜೆಪಿ ನಾಯಕ ದಯಾಶಂಕರ್ ಪತ್ನಿ ಹಾಗೂ  ಪುತ್ರಿಯ ವಿರುದ್ಧ ಅವಹೇಳನಕಾರಿ ಭಾಷೆ ಬಳಸಿದ ನಸೀಮುದ್ದೀನ್ ಸಿದ್ದಿಕಿಯನ್ನು ಬಿಎಸ್‌ಪಿಯಿಂದ ಉಚ್ಚಾಟಿಸಬೇಕೆಂದು ಒತ್ತಾಯಿಸಿ ‘ಪುತ್ರಿಯ ಗೌರವ’ಕ್ಕಾಗಿ ಬಿಜೆಪಿ ಹೋರಾಡುತ್ತದೆ ಎಂಬ ಘೋಷಣೆಯೊಂದಿಗೆ ನೂರಾರು ಬಿಜೆಪಿ ಕಾರ್ಯಕರ್ತರು ಲಖನೌದಲ್ಲಿ ಧರಣಿ ನಡೆಸಿದ್ದಾರೆ. ಇಂತಹ ಅತಿರೇಕಗಳ ಭಾಷಾಪ್ರಯೋಗಗಳಲ್ಲಿ ಮಹಿಳೆಯ ಅಸ್ಮಿತೆ ತೂಗುಯ್ಯಾಲೆಯಲ್ಲಿ ಸಿಲುಕಿದೆ ಎಂಬುದು ವಿಪರ್ಯಾಸ.

ಮಾಯಾವತಿ ಬೇರುಮಟ್ಟದಲ್ಲಿ ಬೆಳೆದ ರಾಜಕಾರಣಿ.  ಆಕೆಯ ಸೌಂದರ್ಯದ ಬಗ್ಗೆ ಅನೇಕ ಟೀಕೆಗಳನ್ನು  ಮಾಡಲಾಗಿದೆ. ಮಾಯಾವತಿಯವರ ವೇಷಭೂಷಣ, ಸೀರೆಯುಟ್ಟು ಕುಂಕುಮವಿಟ್ಟ ಭಾರತೀಯ ನಾರಿಯ ಪ್ರತೀಕವಾಗಿಯೂ ಇಲ್ಲ.

ಇವೆಲ್ಲವೂ ಅವರ ವಿರುದ್ಧದ ವೈಯಕ್ತಿಕ ಟೀಕೆಗಳಿಗೆ ಪರೋಕ್ಷವಾಗಿ ಕಾರಣವಾಗಿರುತ್ತದೆ.  2013ರಲ್ಲಿ ಎಸ್‌ಪಿ ನಾಯಕ ಓಂ ಪ್ರಕಾಶ್ ಸಿಂಗ್ ಅವರು,  ಮಾಯಾವತಿಯನ್ನು ಕುರೂಪ ಮುಖದ ಸುಲಿಗೆಕಾರ್ತಿ ಎಂದಿದ್ದರು. ಆಕೆ ಅವಿವಾಹಿತೆಯಾಗಿರುವುದು, ಆಕೆಯ ಚಮ್ಮಾರ ಜಾತಿ, ಬಿಎಸ್‌ಪಿ ಸಂಸ್ಥಾಪಕ ಕಾನ್ಶಿರಾಮ್ ಜೊತೆಗಿನ ಸಂಬಂಧ, ಹೀಗೆ ಈ ಎಲ್ಲಾ ವಿಚಾರಗಳನ್ನೂ ರಾಜಕೀಯ ಪ್ರತಿಸ್ಪರ್ಧಿಗಳು ಟೀಕಾಸ್ತ್ರಗಳಾಗಿ ಬಳಸಿಕೊಂಡಿವೆ.

‘ಮಾಯಾವತಿಯವರನ್ನು  ಏನಂತ ಕರೆಯಬೇಕು ಎಂದೇ ಅರ್ಥವಾಗುವುದಿಲ್ಲ. ಶ್ರೀಮತಿ, ಕುಮಾರಿ, ಬೇಟಿ ಅಥವಾ ಬೆಹನ್‌ಜಿ ಎಂದು ಕರೆಯಬೇಕೆ ಎಂದೇ ತಿಳಿಯುವುದಿಲ್ಲ’ ಎಂದು ಸಮಾಜವಾದಿ ನಾಯಕ ಮುಲಾಯಂ ಸಿಂಗ್ ಕುಹಕವಾಡಿದ್ದರು.

ಇಂತಹ ಅವಮಾನಗಳು ತಮಗೂ ಆಗಿವೆ ಎಂದಿರುವ ಜಯಲಲಿತಾ ಮಾಯಾವತಿಯವರನ್ನು ಬೆಂಬಲಿಸಿದ್ದಾರೆ. ಚಿತ್ರತಾರೆಯಾಗಿ ವೃತ್ತಿಬದುಕು ಆರಂಭಿಸಿದವರು ಜಯಲಲಿತಾ. ತಾರಾಬದುಕಿನ ಗ್ಲ್ಯಾಮರ್ ಕಳೆದುಕೊಂಡು ‘ಅಮ್ಮ’ನಾಗಿ ಹಲಬಗೆಯ ಅಡೆತಡೆಗಳನ್ನು ಮೀರಿ ರಾಜಕೀಯ ಬದುಕು ರೂಪಿಸಿಕೊಂಡವರು ಅವರು. ಆಗಿನಿಂದ ಅಪಾರ ಅನುಯಾಯಿಗಳನ್ನು ಗಳಿಸಿಕೊಂಡಿದ್ದಾರೆ.  

2014ರಲ್ಲಿ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಪ್ರಕರಣದಲ್ಲಿ  ಜಯಲಲಿತಾ ಅವರಿಗೆ ಶಿಕ್ಷೆಯಾದಾಗ ಹಲವರು  ಆತ್ಮಹತ್ಯೆ ಮಾಡಿಕೊಂಡಿದ್ದರು. ಹಲವು ಅವಮಾನಗಳನ್ನು ಎದುರಿಸಿ ಮೇಲೇರಿದ ಜಯಲಲಿತಾ ಕಾಲಿಗೆ ಬೀಳುವ ಅತಿರೇಕದ ಆಚರಣೆಗಳನ್ನು ಅವರ ಅನುಯಾಯಿಗಳು  ಪಾಲಿಸಿಕೊಂಡು ಬರುತ್ತಿರುವುದು ಮತ್ತೊಂದು ವಿಪರ್ಯಾಸ.

ಮಮತಾ ಬ್ಯಾನರ್ಜಿ ತಮ್ಮ ಅನುಯಾಯಿಗಳಿಗೆ ದೀದಿಯಾಗಿದ್ದಾರೆ. ಸಾಮಾನ್ಯವಾಗಿ ಹೀಗೆ ಅಕ್ಕ, ಅಮ್ಮ ಮುಂತಾದ ಸಂಬಂಧವಾಚಕಗಳಲ್ಲಿಯೇ ಮಹಿಳೆಯ ರಾಜಕೀಯ ನಾಯಕತ್ವವನ್ನು ಗ್ರಹಿಸಲು ಯತ್ನಿಸಲಾಗುತ್ತದೆ.

ಸಾರ್ವಜನಿಕ ವ್ಯಕ್ತಿತ್ವದ  ಹಿಂದೆ ವಾಸ್ತವ ಸ್ತ್ರೀಯನ್ನು ಕಾಣುವುದು ರಾಜಕಾರಣದಲ್ಲಿ ಪುರುಷ ಸಹೋದ್ಯೋಗಿಗಳಿಗೆ ಕ್ಲಿಷ್ಟಕರವಾದುದು. ಸ್ತ್ರೀತ್ವಕ್ಕೆ ಭವ್ಯತೆಯನ್ನು  ಆರೋಪಿಸದಿದ್ದರೆ ಅವರನ್ನು ವೇಶ್ಯೆ ಎಂಬಷ್ಟರ ಮಟ್ಟಿಗೆ  ಅವಹೇಳನ ಮಾಡಲು ಅವಕಾಶ ನೀಡಿದಂತೆ ಎಂಬಂತಹ ವಾತಾವರಣ ಇದು.

  ಮುಲಾಯಂ ಸಿಂಗ್ ಪದೇ ಪದೇ ಇಂತಹ ಮಾತುಗಳನ್ನಾಡಿದ್ದಾರೆ. 2010ರಲ್ಲಿ ರಾಜ್ಯಸಭೆಯಲ್ಲಿ ಮಹಿಳಾ ಮೀಸಲು ಮಸೂದೆ ಮಂಡನೆಯಾದಾಗ ಅದಕ್ಕೆ ವಿರೋಧ ವ್ಯಕ್ತಪಡಿಸುತ್ತಾ ಮುಲಾಯಂ ಹೀಗೆ ಹೇಳಿದ್ದರು: ‘ಈ ಮಸೂದೆ ಅಂಗೀಕಾರವಾದಲ್ಲಿ  ಸಂಸತ್‌ನಲ್ಲಿ ಯುವಪುರುಷರು ಶಿಳ್ಳೆ ಹಾಕಲು ಪ್ರಚೋದನೆ ನೀಡಿದಂತಾಗುತ್ತದೆ’.

ಮಹಿಳೆ ಕುರಿತಾದ ನಿಂದನಾತ್ಮಕ ನುಡಿಗಳಿಗಾಗಿ ರಾಜ್ಯವೂ ಸುದ್ದಿಯಲ್ಲಿದೆ. ಮೈಸೂರು ಜಿಲ್ಲಾಧಿಕಾರಿ ಸಿ. ಶಿಖಾ ವಿರುದ್ಧ ನಿಂದನಾತ್ಮಕ ನುಡಿಗಳನ್ನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಮರಿಗೌಡ ಅವರ ವಿರುದ್ಧ ಮೊಕದ್ದಮೆ ದಾಖಲಾಗಿದ್ದು ಅವರು ತಲೆ ಮರೆಸಿಕೊಂಡಿದ್ದಾರೆ.

‘ಸಂಸಾರದಲ್ಲಿ ನೆಮ್ಮದಿ ಇಲ್ಲದೆ ಖಿನ್ನತೆಗೆ ಒಳಗಾಗಿದ್ದ ಡಿವೈಎಸ್ಪಿ ಗಣಪತಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಮಡಿಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ’ ಎಂಬಂಥ ಅಸೂಕ್ಷ್ಮ ಹೇಳಿಕೆಯನ್ನು ಗೃಹ ಸಚಿವ ಜಿ. ಪರಮೇಶ್ವರ ಅವರು ವಿಧಾನ ಮಂಡಲದಲ್ಲಿ ಹೇಳಿಕೆ ನೀಡಿದ್ದೂ ವಿವಾದಕ್ಕೆ ಕಾರಣವಾಯಿತು.

ಇಂತಹ ಸೆಕ್ಸಿಸ್ಟ್ ಮಾತುಗಾರಿಕೆಗೆ ಮಾಧ್ಯಮ ಮಂದಿಯೂ ಹೊರತಲ್ಲ. ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರ ಇತ್ತೀಚಿನ ಪುಸ್ತಕ ‘ಏಸ್ ಎಗೇನ್ಸ್ಟ್ ಆಡ್ಸ್ ’ ಪುಸ್ತಕ ಕುರಿತಂತೆ ಮಾತನಾಡುತ್ತಾ ಹಿರಿಯ ಪತ್ರಕರ್ತ ರಾಜದೀಪ್ ಸರ್ದೇಸಾಯಿ ಕೇಳಿದ ಪ್ರಶ್ನೆ ಇದು: ‘ಇಷ್ಟೆಲ್ಲಾ ಖ್ಯಾತಿಯ ಝಗಮಗದ ಮಧ್ಯೆ ಸಾನಿಯಾ ಸೆಟ್ಲ್ ಆಗುವುದು ಯಾವಾಗ? ದುಬೈನಲ್ಲಾ?

ಅಥವಾ ಬೇರೆ ಇನ್ಯಾವುದಾದರೂ ದೇಶದಲ್ಲಾ? ತಾಯ್ತನ ಎಂದು?  ಕುಟುಂಬ ಬೆಳೆಸುವುದು ಯಾವಾಗ?  ಈ ವಿಚಾರಗಳೆಲ್ಲಾ ಪುಸ್ತಕದಲ್ಲಿ ಇಲ್ಲವಲ್ಲಾ? ಸೆಟ್ಲ್ ಆಗುವುದಕ್ಕಾಗಿ ಬಹುಶಃ ಕ್ರೀಡೆಯಿಂದ ನಿವೃತ್ತರಾಗಲು ನಿಮಗೆ ಇಷ್ಟವಿಲ್ಲ ಎನಿಸುತ್ತದೆ...’

ಇದಕ್ಕೆ ಸಾನಿಯಾ ಮಿರ್ಜಾ ನೀಡಿದ ಉತ್ತರ: ‘ವಿಶ್ವದಲ್ಲಿ ನಂಬರ್ ಒನ್ ಆಗಿರಲು ನಾನು ತಾಯ್ತನ ಆಯ್ಕೆ ಮಾಡಿಕೊಳ್ಳುತ್ತಿಲ್ಲ ಎಂಬ ಬಗ್ಗೆ ನೀವು ನಿರಾಸೆ ವ್ಯಕ್ತಪಡಿಸುತ್ತಿರುವಂತಿದೆ. ಆದರೆ ನಾನು ಈ ಪ್ರಶ್ನೆಗೆ ಉತ್ತರ ನೀಡುತ್ತೇನೆ. ಈ ಪ್ರಶ್ನೆಯನ್ನು ಯಾವಾಗಲೂ ಮಹಿಳೆಯಾಗಿ ನಾನು ಎದುರಿಸುತ್ತಿರುತ್ತೇನೆ.

ಮೊದಲು ಮದುವೆ, ನಂತರ ತಾಯ್ತನ ಈ ಪ್ರಶ್ನೆಯನ್ನು ಎಲ್ಲಾ ಮಹಿಳೆಯರೂ ಎದುರಿಸುತ್ತಿರಬೇಕಾಗುತ್ತದೆ.  ದುರದೃಷ್ಟದ ಸಂಗತಿಯೆಂದರೆ ಆಗಲೇ ನಾವು ಸೆಟ್ಲ್ ಆಗುವುದು.

ಎಷ್ಟಾದರೂ ವಿಂಬಲ್ಡನ್‌ಗಳನ್ನು ಗೆಲ್ಲಲಿ, ವಿಶ್ವದಲ್ಲಿ ನಂಬರ್ ಒನ್‌ಗಳಾದರೂ ನಾವು ಸೆಟ್ಲ್ ಆಗುವುದಿಲ್ಲ.’ 
ಆ ನಂತರ ರಾಜದೀಪ್ ಕ್ಷಮೆ ಕೋರಿದರು. ಪುರುಷ ಕ್ರೀಡಾಳುವಿಗೆ ಇಂತಹ ಪ್ರಶ್ನೆ ಕೇಳುತ್ತಿರಲಿಲ್ಲ ಎಂಬುದನ್ನೂ ಅವರು ಒಪ್ಪಿಕೊಂಡಿದ್ದು ದೊಡ್ಡತನ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT