ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊರೆತ ಸಂಭಾವನೆ

Last Updated 11 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಕೆಲವೊಮ್ಮೆ ಎಂತಹ ಅನುಭವಿಕರು ಕೂಡ ತಪ್ಪು ಗ್ರಹಿಕೆಗೆ ಒಳಗಾಗುತ್ತಾರೆ. ಯಾವುದೋ ಒಂದು ರೀತಿಯ ಯೋಚನೆ­ಯಲ್ಲಿ ವಜ್ರ ಕೂಡ ಕಸವೆಂದು ಭಾಸವಾಗುತ್ತದೆ. ಅದನ್ನು ನಿಜವಾದ ವಜ್ರದ ವ್ಯಾಪಾರಿ ಮಾತ್ರ ಕಂಡುಹಿಡಿ­ಯ­ಬಲ್ಲ. ಅಂಥ ಒಂದು ಸುಂದರ ಪ್ರಸಂಗ ಸಿನಿಮಾ ಕ್ಷೇತ್ರದಲ್ಲಿ ನಡೆದಿತ್ತು.

ಅರವತ್ತರ ದಶಕದ ಪ್ರಾರಂಭದಲ್ಲಿ ಖ್ಯಾತ ಸಿನಿಮಾ ನಿರ್ಮಾಪಕ ಡಾ. ಸಿನ್ಹಾ ಅವರು, ‘ಕೊಹಿನೂರ್’ ಎಂಬ ಒಂದು ಅದ್ಧೂರಿ ಚಿತ್ರವನ್ನು ನಿರ್ಮಾಣ ಮಾಡಲು ಹೊರಟಿದ್ದರು. ಅವತ್ತಿನ ದಿನಗಳಲ್ಲಿ ಅತ್ಯಂತ ಪ್ರಸಿದ್ಧರಾದ ನೌಷಾದ್‌ ಅವರನ್ನೇ ನಿರ್ದೇಶಕರನ್ನಾಗಿ ನೇಮಿಸಿಕೊಂಡಿದ್ದರು. ನೌಷಾದ್ ತುಂಬ ಮಧುರವಾದ ರಾಗಗಳನ್ನು ಹಾಕಿ­ಕೊಂಡು ಹಾಡುಗಳ ಸಂಯೋಜನೆ ಮಾಡಿದ್ದರು. ಒಂದು ದಿನ ಡಾ. ಸಿನ್ಹಾರ ಮುಂದೆ ನೌಷಾದ್ ತಮ್ಮ ಹಾಡುಗಳ ಸಂಯೋಜನೆಯನ್ನು ಕೇಳಿಸುತ್ತಿದ್ದರು. ಆಗ ಗಾಯಕ ಮಹಮ್ಮದ ರಫಿ ಅವರೂ ಅಲ್ಲಿದ್ದು ತದೇಕ ಚಿತ್ತ­ದಿಂದ ಕೇಳು­ತ್ತಿದ್ದರು. ಎಲ್ಲ ಹಾಡುಗಳ ಮಟ್ಟುಗಳು ಒಂದಕ್ಕಿಂತ ಒಂದು ಸುಂದರ­ವಾಗಿ ಬಂದಿದ್ದವು.

ಆದರೆ, ಒಂದು ಹಾಡಿನ ಮಟ್ಟು ಮಾತ್ರ ಡಾ. ಸಿನ್ಹಾರಿಗೆ ಇಷ್ಟವಾಗಲಿಲ್ಲ. ಅದೇಕೋ ಆ ಹಾಡು ಜನರನ್ನು ತಟ್ಟುವುದಿಲ್ಲ ಎನ್ನಿಸಿತು. ಆದರೆ ನೌಷಾದರಿಗೆ ಅದು ಸರಿ ಎನ್ನಿಸಿತ್ತು. ಅದು ತಮಗೆ ಯಾಕೆ ಇಷ್ಟವಾಗಲಿಲ್ಲ ಎಂದು ನಿರ್ಮಾಪಕ ಡಾ. ಸಿನ್ಹಾ ಅವರನ್ನು ಕೇಳಿದರು. ಅದಕ್ಕೆ ಡಾ. ಸಿನ್ಹಾ, ‘ಈ ಹಾಡಿನ ರಾಗ ತುಂಬ ನಿಧಾನ ಮತ್ತು ಹಳೆಯದಾಗಿದೆ. ಅಲ್ಲದೇ ಅದು ತುಂಬ ಶಾಸ್ತ್ರೀಯ­ವಾದದ್ದು. ಸಿನಿಮಾ ನೋಡುವ ಜನ ಶಾಸ್ತ್ರೀಯ ಸಂಗೀತ ಕೇಳಲು ಬರುವುದಿಲ್ಲ. ಅವರಿಗೆ ಅದು ಮನೋರಂಜಕವೂ ಆಗಬೇಕಲ್ಲವೇ?’ ಎಂದು ಕೇಳಿದರು. ಅದಕ್ಕೆ, ‘ಅದು ತುಂಬ ಶಾಸ್ತ್ರೀಯ ಎನ್ನಿಸಿದರೂ ಅದರ ಮಾಧು­ರ್ಯವನ್ನು ಎಲ್ಲರೂ ಮೆಚ್ಚುತ್ತಾರೆ’ ಎಂದರು ನೌಷಾದ್, ಆದರೆ ಡಾ. ಸಿನ್ಹಾ ಅದನ್ನು ಬದಲಿಸ­ಲೇ­ಬೇಕೆಂದು ಪಟ್ಟು ಹಿಡಿದರು.

ಸಾಮಾನ್ಯವಾಗಿ ನಿರ್ಮಾಪಕರು ಖಚಿತ­­ವಾಗಿ ಹೇಳಿದ ಮೇಲೆ ಸಂಗೀತ­ಗಾರರು ಅವರ ಒತ್ತಡಕ್ಕೆ ಮಣಿದು ರಾಗ ಬದಲಿಸುತ್ತಾರೆ. ಯಾಕೆಂದರೆ ಸಿನಿಮಾ ಅವರದ್ದು ತಾನೇ? ಆದರೆ ನೌಷಾದ್‌ ಅವರು ಉಳಿದವರಂತಲ್ಲ. ಅವರೂ ಹಟ ಬಿಡುವವರಲ್ಲ. ಈ ರಾಗವನ್ನು ಬಿಟ್ಟು ಬೇರೆ ರಾಗದಲ್ಲಿ ಇದರ ಸಂಯೋಜನೆ ಮಾಡಲಾರೆ ಎಂದು ಕಡ್ಡಿ ಮುರಿದಂತೆ ಹೇಳಿಬಿಟ್ಟರು. ಇದೇಕೋ ವೃಥಾ ವಿವಾದ­ವಾಗಿ ಬೆಳೆಯುತ್ತಿರುವ ಹಾಗೆ ಕಂಡಿತು ಮಹಮ್ಮದ್ ರಫಿ ಅವರಿಗೆ. ಅವರು ಡಾ. ಸಿನ್ಹಾರಿಗೆ ಹೇಳಿದರು, ‘ಸರ್, ಈ ಹಾಡನ್ನು ಮತ್ತು ರಾಗವನ್ನು ಬದಲಿಸುವುದು ಬೇಡ. ನನಗೂ ಈ ಹಾಡು ಜನಪ್ರಿಯವಾಗುತ್ತದೆಂದು ಅನ್ನಿಸುತ್ತದೆ. ನಾನು ಹಾಡನ್ನು ಹಾಡುತ್ತೇನೆ. ಒಂದು ವೇಳೆ ಹಾಡು ಜನಪ್ರಿಯವಾಗದಿದ್ದರೆ ನನಗೆ ಒಂದು ರೂಪಾಯಿ ಸಂಭಾವನೆಯನ್ನೂ ಕೊಡ­ಬೇಡಿ. ಅದು ಯಶಸ್ವಿಯಾದರೆ ಮಾತ್ರ ನನಗೆ ಹಣ ಕೊಡಿ’ ಎಂದರು.

ಕೊನೆಗೂ ಇಬ್ಬರ ಒತ್ತಾಯಕ್ಕೆ ನಿರ್ಮಾಪಕ ಡಾ. ಸಿನ್ಹಾ ಮಣಿದರು.ಮನಸ್ಸಿಲ್ಲದೇ ಒಪ್ಪಿಗೆ ನೀಡಿದರು. ಸಿನಿಮಾ ನಿರ್ಮಾಣ­ವಾ­ಯಿತು. ರಫಿ ಹಾಡಿದ ಈ ಹಾಡಿಗೆ ಕಲಾವಿದ ದೀಲಿಪ್‌ಕುಮಾರ್ ಅದ್ಭುತ­ವಾಗಿ ನಟಿಸಿದರು. ಆ ಹಾಡು ಎಷ್ಟು ಜನಪ್ರಿಯವಾಯಿತೆಂದರೆ ಸಿನಿಮಾದ ಯಶಸ್ಸಿಗೆ ಆ ಹಾಡೇ ಕಾರಣ ಎಂದು ಜನ ಹೇಳತೊಡಗಿದರು, ಇಂದಿಗೂ ಎಲ್ಲ ತಲೆ­ಮಾರಿನ ಜನ ಆ ಹಾಡಿಗೆ ತಲೆದೂಗುತ್ತಾರೆ. ಆ ಹಾಡು, ‘ಮಧುಬನಮೆ ರಾಧಿಕಾ ನಾಚೇರೆ’. ರಾಗ ಹಮೀರದಲ್ಲಿ ನೌಷಾದ್ ರಚನೆಮಾಡಿ, ಮಹಮ್ಮದ ರಫಿ ಹಾಡಿದ ಈ ಹಾಡು ಇಂದಿಗೂ ಹಿಂದಿ ಸಿನಿಮಾ ಹಾಡುಗಳಲ್ಲಿ ಅತ್ಯದ್ಭುತ­ವಾದದ್ದು ಎಂದು ವಿಮರ್ಶ­ಕರು ಒಪ್ಪುತ್ತಾರೆ. ಡಾ. ಸಿನ್ಹಾರಿಗೆ ತಮ್ಮ ಅಂದಾಜು ತಪ್ಪಾಗಿತ್ತು ಎಂಬ ಅರಿ­ವಾಯಿತು. ಅವರು ನೌಷಾದ್ ಅವರನ್ನು ಕರೆದುಕೊಂಡು ರಫಿ ಅವರ ಮನೆಗೆ ಹೋದರು.

‘ರಫೀ ಸಾಹೇಬ್, ನಿಮ್ಮಿಬ್ಬರ ಚಿಂತನೆ ಸರಿ­ಯಾಗಿತ್ತು, ನನ್ನ ಲೆಕ್ಕ ತಪ್ಪಾಯಿತು. ಈಗ ನಾನು ನಿಮಗೆ ಸಂಭಾವನೆ ನೀಡ­ಬೇಕಲ್ಲವೇ? ಎಷ್ಟು ಕೊಡಲಿ ಹೇಳಿ’ ಎಂದರು. ಅದಕ್ಕೆ ಮಹಮ್ಮದ ರಫಿಯವರು, ‘ಸಿನ್ಹಾಜೀ, ನನಗೆ ನನ್ನ ಸಂಭಾವನೆ ನಿರೀಕ್ಷಿಸಿದ್ದಕ್ಕಿಂತ ಹೆಚ್ಚಾಗಿ ದೊರೆತಿದೆ. ನೀವು ಕೊಡುವ ಕಾರಣ­ವಿಲ್ಲ. ಈ ಹಾಡಿಗೆ ಜನ ತೋರಿದ ಅಭೂ­ತ­ಪೂರ್ವ ಮನ್ನ­ಣೆಯೇ ನನಗೆ ಸಂಭಾ­ವನೆ’ ಎಂದು ಡಾ. ಸಿನ್ಹಾ ಎಷ್ಟು ಹೇಳಿದರೂ ಒಪ್ಪದೇ ಹೋದರು.

ಒಂದು ಪೈಸೆ ಸಂಭಾವನೆ­ಯಿಲ್ಲದೆ ಹಾಡಿದ ಮಹಾನ್ ಗಾಯಕನ ಶ್ರೇಷ್ಠ ಹಾಡು “ಮಧುಬನಮೆ ರಾಧೀಕಾ ನಾಚೇರೆ”, ಎಂದು ಖ್ಯಾತವಾಯಿತು. ನಿಜವಾದ ಕಲಾವಿದನಿಗೆ ಹಣಕ್ಕಿಂತ ಜನ­ಮನ್ನಣೆ ಮುಖ್ಯ. ಬದುಕಿಗೆ ಹಣ ಬೇಕು, ನಿಜ. ಆದರೆ, ಕಲಾವಿದನ ಬೆಳವಣಿಗೆಗೆ, ಅವನ ಸೃಜನಶೀಲತೆಗೆ, ನವೀನ ಪ್ರಯೋ­ಗಗಳಿಗೆ, ಎಂದಿಗೂ ರಾಜಿಮಾಡಿ­ಕೊಳ್ಳದ ಮನೋಭಾವವನ್ನು ಬೆಳೆಸಿ­ಕೊಳ್ಳಲು ಹಣ ಹೆಚ್ಚು ಸಹಾಯ ಮಾಡಲಾರದು. ಆಂತರ್ಯದ ತೃಪ್ತಿ, ಎಂದೆಂದಿಗೂ ಗುಣಮಟ್ಟವನ್ನು ಕಡಿಮೆ ಮಾಡಿ­ಕೊಳ್ಳದ ಛಲ ಇವು ಕಲಾವಿದ­ನನ್ನು ಶ್ರೇಷ್ಠ ಕಲಾವಿದನನ್ನಾಗಿ ಮಾಡುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT