ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಸ್ರುವಿನ ಪಾಪದ ಕೊಡತುಂಬಿದಾಗ...

Last Updated 9 ಏಪ್ರಿಲ್ 2011, 19:30 IST
ಅಕ್ಷರ ಗಾತ್ರ

ತೊಂಬತ್ತರ ದಶಕದ ಕೊನೆಯ ಭಾಗದಲ್ಲಿ ಇದ್ದಕ್ಕಿದ್ದಂತೆ ಒಂದು ಹೆಸರು ಪಾತಕಲೋಕವನ್ನೇ ಅಲ್ಲಾಡಿಸತೊಡಗಿತು. ಮಡಿವಾಳ ಬಳಿಯ ಸುಭಾಷ್‌ನಗರದಲ್ಲಿ ವಾಸವಿದ್ದ ದರ್ಜಿಯೊಬ್ಬ ಆ ಮಟ್ಟಕ್ಕೆ ಬೆಳೆಯುತ್ತಾನೆಂದು ಯಾರೂ ಊಹಿಸಿರಲಿಲ್ಲ. ಗುರಪ್ಪನಪಾಳ್ಯ, ಮಡಿವಾಳ, ಕೋರಮಂಗಲ ಮೊದಲಾದ ಪ್ರದೇಶಗಳು ಅಭಿವೃದ್ಧಿ ಹೊಂದಿದಕ್ಕಿಂತ ಹೆಚ್ಚು ವೇಗವಾಗಿ ಅವನ ಹೆಸರು ಬೆಳೆಯಿತು.

ರೌಡಿ, ದರೋಡೆಕೋರ, ಕೊಲೆಗಾರ, ಸುಲಿಗೆಕೋರ, ವಿಕೃತ ಕಾಮಿ- ಎಲ್ಲವೂ ಆಗಿದ್ದ ವಿಲಕ್ಷಣ ವ್ಯಕ್ತಿ ಆತ. ಯಾರನ್ನೋ ಅಪಹರಿಸಲು ಅವನು ಸ್ಕೆಚ್ ಹಾಕಿದಾಗ, ಅಕಸ್ಮಾತ್ತಾಗಿ ಹೆಣ್ಣು ಅಲ್ಲಿ ಕಣ್ಣಿಗೆ ಬಿದ್ದರೆ ಅವಳನ್ನೂ ಅಪಹರಿಸುತ್ತಿದ್ದ. ದರೋಡೆ ಮಾಡಲು ಒಬ್ಬರನ್ನು ಗುರಿ ಮಾಡುವಾಗ, ಅವರದ್ದೇ ಮನೆಯ ಹೆಣ್ಣಿದ್ದರೆ ಅವಳೂ ಅಪಹರಣಕ್ಕೆ ಒಳಗಾಗುತ್ತಿದ್ದಳು.

ಕ್ಯಾಬರೆ, ಲೈವ್‌ಬ್ಯಾಂಡ್ ಹುಡುಗಿಯರನ್ನು ಒತ್ತೆ ಇಟ್ಟುಕೊಂಡು ಹಣಕ್ಕಾಗಿ ಪೀಡಿಸುತ್ತಿದ್ದ. ದಿನಗಟ್ಟಲೆ ಅಂಥ ಹುಡುಗಿಯರನ್ನು ಅವನು ಬಳಸಿಕೊಳ್ಳುತ್ತಿದ್ದ. ರಾತ್ರಿಯ ವಿಲಾಸಲೋಕ ನಡೆಸುತ್ತಿದ್ದ ಜನರನ್ನೆಲ್ಲಾ ಅವನು ಭಯದಲ್ಲಿಟ್ಟಿದ್ದ. ಅಂಥವರೆಲ್ಲಾ ಅವನಿಗೆ ‘ಪ್ರೊಟೆಕ್ಷನ್ ಮನಿ’ ಕೊಟ್ಟು ಬೆಳೆಸಿಬಿಟ್ಟರು. ಪಾತಕಲೋಕವೇ ಬೆಚ್ಚುವಂತೆ ಮಾಡಿದ್ದ ಆ ವ್ಯಕ್ತಿಯೇ ನಸ್ರು.

ಮೊದಲಿಗೆ ನಸ್ರು ಟಾರ್ಗೆಟ್ ಮಾಡಿದ್ದು ಬ್ಯಾಂಕ್‌ಗಳಿಂದ ಹಣ ತೆಗೆದುಕೊಂಡು ಹೋಗುವವರನ್ನು. ಅವನು ಹಣವನ್ನು ಕಿತ್ತುಕೊಂಡು ಸುಮ್ಮನೆ ಪರಾರಿಯಾಗುತ್ತಿರಲಿಲ್ಲ. ಹಲ್ಲೆ ಮಾಡಿ ರಾಜಾರೋಷವಾಗಿಯೇ ಸ್ಥಳದಿಂದ ಹೋಗುತ್ತಿದ್ದ. ಒಮ್ಮೆ ವೃದ್ಧರೊಬ್ಬರು ಬ್ಯಾಂಕ್‌ನಿಂದ ಹಣ ತೆಗೆದುಕೊಂಡು ಹೋಗುವಾಗ ಅವರನ್ನು ಅಡ್ಡಗಟ್ಟಿದ. ಅವರನ್ನು ದೂಡಿ, ಹಣದ ಚೀಲ ಕಸಿದುಕೊಂಡು ಅವನು ಸುಲಭವಾಗಿ ಹೋಗಬಹುದಿತ್ತು. ಆದರೂ ಅವರ ಮೇಲೆ ತಲವಾರ್‌ನಿಂದ ಮಾರಣಾಂತಿಕ ಹಲ್ಲೆ ಮಾಡಿದ.
 
ಅವನಿಂದ ಹಲ್ಲೆಗೆ ಒಳಗಾದ ಆ ವೃದ್ಧರ ದೇಹದ ಒಂದು ಇಡೀ ಭಾಗ ಈಗಲೂ ನಿಸ್ತೇಜವಾಗಿದೆ. 90ರ ದಶಕದಲ್ಲಿ ಶಿವಾನಂದ ಸರ್ಕಲ್‌ನಲ್ಲಿ ಈ ಘಟನೆ ನಡೆದ ನಂತರವಂತೂ ಅವನದ್ದು ಅನಾರೋಗ್ಯಕರ ಮನಸ್ಸು ಎಂಬುದು ಸ್ಪಷ್ಟವಾಗಿತ್ತು. ನಸ್ರು, ಜಬೀ, ಜಫ್ರು, ವಾಸಿಂ ಎಲ್ಲರೂ ಅಣ್ಣತಮ್ಮಂದಿರು. ಮುಸ್ತಫಾ ಮೊದಲಾದ ಗೆಳೆಯರೂ ಅವರಿಗಿದ್ದರು. ಇವರೆಲ್ಲಾ ಸೇರಿ ಗ್ಯಾಂಗ್ ಕಟ್ಟಿಕೊಂಡಿದ್ದರು.

ನಸ್ರುವಿನ ಇಡೀ ಕುಟುಂಬವೇ ಅಪರಾಧವನ್ನು ಅಪ್ಪಿಕೊಂಡಿತ್ತು. ಪೊಲೀಸರು ನಸ್ರುವನ್ನು ಕೆಲವು ಸಲ ಬಂಧಿಸಿದ್ದರು. ಆದರೂ ಅವನಿಗೆ ಪೊಲೀಸರ ಭಯ ಇರಲಿಲ್ಲ. ಹಿಡಿಯಲು ಯಾರೇ ಹೋದರೂ ಅವರ ಮೇಲೆ ಹಲ್ಲೆ ಮಾಡುವಷ್ಟು ಭಂಡತನ, ಧೈರ್ಯ ಅವನಿಗಿತ್ತು.
2000ದಲ್ಲಿ ಅವನು ಮತ್ತೊಬ್ಬ ಲೈವ್‌ಬ್ಯಾಂಡ್ ಹುಡುಗಿಯನ್ನು ಅಪಹರಿಸಿದ. ದಿನಗಳು ಕಳೆದರೂ ಅವಳನ್ನು ಬಿಡುಗಡೆ ಮಾಡಲಿಲ್ಲ.

ಪೊಲೀಸರಿಗೆ ದೂರು ಬಂತು. ಎಸಿಪಿ ಜಿ.ಎ.ಬಾವಾ, ಅಬ್ದುಲ್ ಅಜೀಂ, ಇನ್ಸ್‌ಪೆಕ್ಟರ್ ಎಸ್.ಕೆ.ಉಮೇಶ್ ಅವರನ್ನೊಳಗೊಂಡ ವಿಶೇಷ ತಂಡವನ್ನು ಆ ಪ್ರಕರಣ ಭೇದಿಸಲೆಂದು ರಚಿಸಿದರು. ಕೋಲಾರದಲ್ಲಿ ನಸ್ರು ಹುಡುಗಿಯನ್ನು ಒತ್ತೆಯಾಳಾಗಿ ಇಟ್ಟುಕೊಂಡಿದ್ದಾನೆಂಬ ಮಾಹಿತಿ ಬಂತು. ಬಾವಾ ಹಾಗೂ ಅವರ ತಂಡ ಅಲ್ಲಿಗೆ ಹೋಯಿತು.

ನಸ್ರು ಹಾಗೂ ಅವನ ಸಹಚರರು ಇದ್ದ ಜಾಗವನ್ನು ಪತ್ತೆಮಾಡಿ ಹಿಡಿಯಲು ಮುಂದಾಯಿತು. ಆಗಲೂ ಅವನು ತಲವಾರ್ ಎತ್ತಿಕೊಂಡು ಮೇಲೆರಗಲು ಬಂದ. ಆತ್ಮರಕ್ಷಣೆಗಾಗಿ ಪೊಲೀಸರು ಅವನ ಕಾಲಿಗೆ ಗುಂಡು ಹಾರಿಸಿದರು. ಆಗ ಅವನು ಸಿಕ್ಕಿಬಿದ್ದ. ಆದರೆ, ಕಾಲಿಗೆ ಹೊಕ್ಕಿದ್ದ ಗುಂಡನ್ನು ತೆಗೆಯದೇ ಇರುವುದೇ ಕ್ಷೇಮ ಎಂದು ವೈದ್ಯರು ಅಭಿಪ್ರಾಯಪಟ್ಟರು.

ಬಾವಾ ಅವರ ನೇತೃತ್ವದ ತಂಡ ಹಿಡಿದಾಗ ಕೊಲೆ, ಕೊಲೆ ಪ್ರಯತ್ನ, ಸುಲಿಗೆ, ದರೋಡೆ, ಅತ್ಯಾಚಾರ ಹೀಗೆ 60ಕ್ಕೂ ಹೆಚ್ಚು ಪ್ರಕರಣಗಳ ಆರೋಪಿ ಅವನಾಗಿದ್ದ. ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು. ಕೆಲವು ಪ್ರಕರಣಗಳಲ್ಲಿ ಸಾಕ್ಷಿದಾರರೇ ಬರಲಿಲ್ಲ. ಇನ್ನು ಕೆಲವು ಸಾಕ್ಷಿಗಳು ವ್ಯತಿರಿಕ್ತ ಹೇಳಿಕೆ ನೀಡಿದರು. ಆದಾಗ್ಯೂ ಒಂದಿಷ್ಟು ಪ್ರಕರಣಗಳಲ್ಲಿ ಅವನು ಅಪರಾಧಿ ಎಂಬುದು ದೃಢಪಟ್ಟು, 5 ವರ್ಷ ಜೈಲಿನಲ್ಲೇ ಇದ್ದ.
 
ಮಾರ್ಚ್ 2005ರಲ್ಲಿ ಬಿಡುಗಡೆಯಾಗಿ ಹೊರಬಂದ. ಅಪರಾಧಿ ಜೈಲಿನಲ್ಲಿ ಇದ್ದು ಹೊರಗೆ ಬಂದರೆ ಸುಧಾರಣೆ ಯಾಗುತ್ತಾನೆ ಎಂಬುದು ನಂಬಿಕೆ. ಆದರೆ, ಈ ಕಾಲಮಾನದ ಪರಿಸ್ಥಿತಿ ಹಾಗಿಲ್ಲ. ಜೈಲಿನಲ್ಲಿ ನಡೆಯುವುದೇ ಬೇರೆ. ಅಪರಾಧ ಸಾಬೀತಾಗಿ ಜೈಲು ಸೇರುವವರಿಗೆ ಆ ಸ್ಥಳ ಕಮ್ಮಟದಂತಾಗುತ್ತದೆ. ಸಣ್ಣ ಅಪರಾಧ ಮಾಡಿದವನನ್ನು ಮುಂದೆ ದೊಡ್ಡ ಅಪರಾಧ ಮಾಡುವಂತೆ ಅಲ್ಲಿನ ಇನ್ನೊಬ್ಬ ಪಾತಕಿ ಪುಸಲಾಯಿಸುತ್ತಾನೆ.

ಸೈಕಲ್ ಕದ್ದು ಸಿಕ್ಕಿಬಿದ್ದವನನ್ನು ದೊಡ್ಡ ದರೋಡೆ ಮಾಡು ಎಂದು ಧೈರ್ಯ ತುಂಬುತ್ತಾರೆ. ಹಾಗೆ ಮಾಡಲು ಅವರು ತಮ್ಮದೇ ಅನುಭವವನ್ನು ಉದಾಹರಣೆಯಾಗಿ ಹೇಳುತ್ತಾರೆ. ಆದರೆ, ನಾನು ಕೇಳಿರುವಂತೆ ಅತ್ಯಾಚಾರ ಮಾಡಿ ಶಿಕ್ಷೆಗೆ ಒಳಗಾದವರನ್ನು ಮಾತ್ರ ಇತರೆ ಜೈಲುವಾಸಿಗಳು ಕೂಡ ನಿರ್ದಾಕ್ಷಿಣ್ಯವಾಗಿ ತದಕುತ್ತಾರಂತೆ.

ನಸ್ರು ಜೈಲಿನಲ್ಲಿ ಇದ್ದಾಗ ಗುರಪ್ಪನಪಾಳ್ಯದಲ್ಲಿ ಇನ್ನೊಂದು ಗ್ಯಾಂಗ್ ಬೇರುಬಿಡತೊಡಗಿತ್ತು. ಶಫೀಖಾನ್, ಅಸ್ಗರ್ ಮೊದಲಾದವರು ಆ ಗ್ಯಾಂಗ್‌ನಲ್ಲಿದ್ದರು. ಅವರ ಕಾರ್ಯವೈಖರಿಯೂ ನಸ್ರುವಿನಂತೆಯೇ ಇತ್ತು. ಶಫೀಖಾನ್ ಪೊಲೀಸರಿಗೆ ಮಾಹಿತಿ ಕೊಡುತ್ತಾನೆ ಎಂದು ನಸ್ರು ಭಾವಿಸಿದ್ದ. ತನ್ನನ್ನು ಬಿಟ್ಟರೆ ತನ್ನ ಪ್ರದೇಶದಲ್ಲಿ ಇನ್ನೊಬ್ಬನ ಗ್ಯಾಂಗ್ ತಳವೂರುವುದನ್ನು ಅವನು ಹೇಗೆ ತಾನೆ ಸಹಿಸಿಯಾನು?
ಜೈಲುವಾಸ ಅನುಭವಿಸಿದ್ದರೂ ಶಸ್ತ್ರಾಸ್ತ್ರ ಹಿಡಿಯುವ ನಸ್ರುವಿನ ಮನಃಸ್ಥಿತಿಯಲ್ಲಿ ಯಾವುದೇ ಪರಿವರ್ತನೆ ಆಗಿರಲಿಲ್ಲ.
 
ಏಪ್ರಿಲ್ ತಿಂಗಳು, ಈದ್‌ಮಿಲಾದ್ ದಿನ ಮಸೀದಿಯಲ್ಲಿ ಪ್ರಾರ್ಥನೆ ಮುಗಿಸಿ ಶಫೀಖಾನ್ ಹೊರಬಂದ. ಅಲ್ಲಿಯೇ ನಸ್ರು ಹಾಗೂ ಅವನ ಸಹಚರರು ಅವನನ್ನು ಕೊಂದು ಹಾಕಿದರು. ಹಾಡಹಗಲೇ ಕೊಲೆ ನಡೆದದ್ದರಿಂದ ಪ್ರಕರಣದ ಭೀಕರತೆ ಜಾಹೀರಾಯಿತು. ಇಡೀ ಪೊಲೀಸ್ ಇಲಾಖೆಗೆ ನಸ್ರು ಅಟ್ಟಹಾಸ ಮಟ್ಟಹಾಕುವುದು ಸವಾಲಾಗಿ ಪರಿಣಮಿಸಿತು. ಬೆಂಗಳೂರು ದಕ್ಷಿಣ ವಿಭಾಗದ ಎಲ್ಲಾ ಪೊಲೀಸರು ಹಲವಾರು ತಂಡಗಳನ್ನು ಕಟ್ಟಿಕೊಂಡು ಅವನ ಹುಡುಕಾಟಕ್ಕೆ ಮುಂದಾದರು.

ನಸ್ರು ಒಂದೆಡೆ ನಿಲ್ಲುತ್ತಿರಲಿಲ್ಲ. ರಾತ್ರೋರಾತ್ರಿ ಯಾವುದೋ ಲೈವ್‌ಬ್ಯಾಂಡ್‌ನಲ್ಲಿ ಪ್ರತ್ಯಕ್ಷನಾಗುತ್ತಿದ್ದ. ಪೊಲೀಸರಿಗೆ ಮಾಹಿತಿ ಬಂದು, ಅಲ್ಲಿಗೆ ತಲುಪುವಷ್ಟರಲ್ಲಿ ಜಾಗ ಖಾಲಿ ಮಾಡಿರುತ್ತಿದ್ದ. ಲೈವ್‌ಬ್ಯಾಂಡ್ ಹುಡುಗಿಯರನ್ನು ಅಪಹರಿಸಿ, ಕೆಲವು ದಿನಗಳ ನಂತರ ತಂದುಬಿಡುವ ಚಾಳಿಯನ್ನು ಕೂಡ ಅವನು ಬಿಟ್ಟಿರಲಿಲ್ಲ. ಅವನಲ್ಲಿ ಒತ್ತೆಯಾಳಾಗಿದ್ದ ಹುಡುಗಿಯರನ್ನು ವಿಚಾರಣೆಗೆ ಒಳಪಡಿಸಿದರೆ ಅವರು ಏನೂ ಬಾಯಿಬಿಡುತ್ತಿರಲಿಲ್ಲ.
 
ಅವರಲ್ಲಿ ಅನೇಕರು ಬೇರೆ ರಾಜ್ಯದವರಾದ್ದರಿಂದ ಬಲು ಬೇಗ ಬೆಂಗಳೂರನ್ನೇ ಬಿಟ್ಟು ಹೊರಟುಹೋಗುತ್ತಿದ್ದರು. ಇನ್ನು ಕೆಲವರು ಮಾನಸಿಕ ಖಿನ್ನತೆಗೆ ಒಳಗಾಗಿರುತ್ತಿದ್ದರು. ಆ ಸ್ಥಿತಿಯಲ್ಲಿ ಅವರು ಏನನ್ನೂ ಹೇಳಲಾರರು. ನಸ್ರು ಹೊತ್ತೊಯ್ಯುತ್ತಿದ್ದ ಹುಡುಗಿಯರು ವಿಕೃತ ಲೈಂಗಿಕ ಶೋಷಣೆಗೆ ಒಳಗಾಗಿಯೇ ಬಿಡುಗಡೆಯಾಗುತ್ತಿದ್ದದ್ದು. ಒಂದೇ ಹುಡುಗಿಗೆ ಅವನ ಇಡೀ ಗ್ಯಾಂಗ್ ಲೈಂಗಿಕ ಕಿರುಕುಳ ಕೊಡುತ್ತಿತ್ತು. ಒಂದೇ ಕುಟುಂಬದ ಒಡಹುಟ್ಟಿದವರು ಒಂದು ಹುಡುಗಿಯ ವಿಷಯದಲ್ಲಿ ಹೀಗೆ ವರ್ತಿಸುತ್ತಿದ್ದ ಸಂಗತಿ ಕೇಳಿಯೇ ನಮಗೆ ಅಸಹ್ಯವಾಗುತ್ತಿತ್ತು. ನಸ್ರುವಿನ ಗ್ಯಾಂಗ್ ಎಷ್ಟು ಮೃಗೀಯವಾಗಿತ್ತೆಂಬುದಕ್ಕೆ ಇದೇ ಉದಾಹರಣೆ.

ಅವನನ್ನು ಹಿಡಿಯುವ ಜವಾಬ್ದಾರಿ ಸಿಟಿ ಕ್ರೈಮ್ ಬ್ರ್ಯಾಂಚ್‌ನಲ್ಲಿದ್ದ ನಮ್ಮ ಮೇಲೆ ಬಿತ್ತು. ನಾವು ವ್ಯವಸ್ಥಿತವಾದ ಮಾಹಿತಿ ಜಾಲವನ್ನು ರೂಪಿಸಿದೆವು. ಹೊಸೂರು ರಸ್ತೆಯಲ್ಲಿ ಕೆಂಪು ಪಲ್ಸರ್ ಬೈಕ್‌ನಲ್ಲಿ ನಸ್ರು ಹೋಗುತ್ತಿದ್ದಾನೆಂದೂ, ಅವನ ಜೊತೆಗೆ ನಾಲ್ಕೈದು ಜನ ಇದ್ದಾರೆಂದೂ ಮಾಹಿತಿ ಬಂತು. ನಾವು ಖಾಸಗಿ ಮಾರುತಿ ವ್ಯಾನ್‌ನಲ್ಲಿ ಅಲ್ಲಿಗೆ ಹೋದೆವು. ಪೆಟ್ರೋಲ್ ಬಂಕ್ ಹತ್ತಿರ ನಿಂತಿದ್ದ ಅವರು ನಮ್ಮನ್ನು ಬೇಗ ಗುರುತಿಸಿಬಿಟ್ಟರು.

ಅವರು ಅಷ್ಟು ಜಾಗರೂಕರಾಗಿರುತ್ತಾರೆ ಎಂದು ನಾವ್ಯಾರೂ ಭಾವಿಸಿರಲಿಲ್ಲ. ಏಕಾಏಕಿ ಅವರ ಮೇಲೆ ದಾಳಿ ಇಡುವ ವಾತಾವರಣ ಅದಾಗಿರಲಿಲ್ಲ. ಜನನಿಬಿಡ ಪ್ರದೇಶವಾದ್ದರಿಂದ ಅಲ್ಲಿ ಗುಂಡು ಹಾರಿಸುವುದೂ ಕಷ್ಟವಿತ್ತು. ನಮ್ಮನ್ನು ಗಮನಿಸಿದ್ದೇ, ಬೈಕುಗಳನ್ನು ಸ್ಟಾರ್ಟ್ ಮಾಡಿಕೊಂಡು ನಸ್ರು ಗ್ಯಾಂಗ್ ಜೋರಾಗಿ ಹೊರಟಿತು. ಜನರನ್ನು ಸೀಳಿಕೊಂಡು ಅವರ ಬೈಕ್‌ಗಳು ನುಗ್ಗಿದವು.
 
ಅಷ್ಟೊಂದು ಜನರಿರುವಾಗ ನಮ್ಮ ವ್ಯಾನ್ ಬೇಗನೆ ಹೋಗಲು ಸಾಧ್ಯವಿರಲಿಲ್ಲ. ಜನಜಂಗುಳಿ ದಾಟಿಕೊಂಡು ನಮ್ಮ ವ್ಯಾನ್ ಹೋಗುವಷ್ಟರಲ್ಲಿ ಅವರ ತಂಡ ಅಲ್ಲಿಂದ ಪರಾರಿಯಾಗಿತ್ತು. ಹಿಡಿಯಲು ಸಿಕ್ಕಿದ್ದ ಒಂದು ಅವಕಾಶ ಕೈತಪ್ಪಿದ್ದರಿಂದ ನಾವೆಲ್ಲಾ ಬೇಸರಪಟ್ಟೆವು.

ನಾಗನಗೌಡ ಎಂಬ ಸಬ್ ಇನ್ಸ್‌ಪೆಕ್ಟರ್ ಮಾಹಿತಿದಾರರನ್ನು ಆಯೋಜಿಸುವುದರಲ್ಲಿ ಪಳಗಿದ್ದರು. ಅವರು ನಸ್ರುವಿನ ನಡೆಗಳನ್ನು ಗಮನಿಸಲು ದೊಡ್ಡದೊಂದು ಜಾಲವನ್ನೇ ಸಿದ್ಧಪಡಿಸಿದ್ದರು. ರೇವಣ್ಣ, ನಂಜುಂಡೇಗೌಡ, ಎಸ್.ಕೆ.ಉಮೇಶ್ ಹಾಗೂ ರತ್ನಾಕರ್ ಶೆಟ್ಟಿ ಎಂಬ ಇನ್ಸ್‌ಪೆಕ್ಟರ್‌ಗಳು ಕೂಡ ನಸ್ರುವಿನ ಹೆಜ್ಜೆಗುರುತನ್ನು ಪತ್ತೆಹಚ್ಚಲು ಶ್ರದ್ಧೆಯಿಂದ ತೊಡಗಿಕೊಂಡರು. ಅವರಿಗೆ ನೆರವು ನೀಡಲು ಸಜ್ಜಾಗಿದ್ದ ಸಿಬ್ಬಂದಿಯೂ ಅಸಂಖ್ಯ.

ಮೇ ತಿಂಗಳ ರಾತ್ರಿ. ಗಂಟೆ ಸುಮಾರು ಹತ್ತು ದಾಟಿತ್ತು. ನಸ್ರುವಿನ ಗ್ಯಾಂಗ್ ಆನೇಕಲ್‌ನಲ್ಲಿ ಬೀಡುಬಿಟ್ಟಿದೆ ಎಂಬ ಮಾಹಿತಿ ನನಗೆ ಬಂತು. ತಕ್ಷಣ ನಾಗನಗೌಡ, ರುದ್ರಮೂರ್ತಿ, ಹನುಮಂತಯ್ಯ, ಕಾಳೇಗೌಡ, ಸುರೇಶ್, ರಮೇಶ್, ಖಾನ್ ಎಲ್ಲರನ್ನೂ ಅಲರ್ಟ್ ಮಾಡಿದೆ. ನಮ್ಮಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರಿಗೂ ಸಿದ್ಧರಾಗುವಂತೆ ಸೂಚಿಸಿದೆ. ಅಷ್ಟೇ ಏಕೆ, ಕಸ ಗುಡಿಸಲು ಬರುತ್ತಿದ್ದ ಹೆಣ್ಣುಮಗಳನ್ನೂ ಆನೇಕಲ್‌ಗೆ ಹೊರಡಿಸಿದೆ. ರಾತ್ರಿ ಆಗಿದೆ ಎಂದು ತಲೆಕೆಡಿಸಿಕೊಳ್ಳದೆ ಎರಡು ಖಾಸಗಿ ವಾಹನಗಳಲ್ಲಿ ನಮ್ಮ ತಂಡವು ಆನೇಕಲ್‌ನತ್ತ ಹೊರಟಿತು.

ಮುಂದಿನ ವಾರ: ಆನೇಕಲ್‌ನಲ್ಲಿ ನಸ್ರು ಎನ್‌ಕೌಂಟರ್
ಶಿವರಾಂ ಅವರ ಮೊಬೈಲ್ ನಂಬರ್ 94483 13066

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT