ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರ ಮೇಲಣ ಹರಿಗೋಲು ಸುಳ್ಳಲ್ಲ ಹರಿಯೇ!

Last Updated 19 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಎಲ್ಲೆಂದರಲ್ಲಿ ನೆಲೆಯೂರಿ ಚಿಗಿತು ಬೇರು ಭದ್ರ ಮಾಡಿಕೊಂಡರೂ ಸದಾ ಒಂದು ಬಗೆಯ ನೋವಿನಲ್ಲೇ ಬದುಕುವ ಕಾಶ್ಮೀರಿ ಹುಡುಗರು ಬಹಳ ನಿಗೂಢ. ನೋಡಲು ಯಾವುದೋ ಅಜ್ಞಾತ ಸಿನಿಮಾ ನಟರಂತೆ ಕಾಣುವ ಈ ಹುಡುಗರಿಗೆ ತಮ್ಮ ಸುಂದರ ಕಣಿವೆಯಲ್ಲಿ ನಡೆಯುತ್ತಿರುವ ಹಿಂಸೆಯ ನಡುವೆಯೇ ವ್ಯಾಪಾರ ಮಾಡಬಲ್ಲ ಮನಸ್ಸನ್ನೂ ಉಳಿಸಿಕೊಂಡು, ಕೊರಗುತ್ತಲೇ ತಮ್ಮ ಬಾಗಿಲು-ಬೇಲಿ ಭದ್ರ ಮಾಡಿಕೊಂಡು ಬದುಕಬಲ್ಲವರು.

‘ಬೆಳ್ ಬೆಳ್ಳಗೆ ಚನಾಗಿದಾನಲ್ವಾ?’ ಅಂತ ವಿಜಿ ಹುಸೇನನ ಬಗ್ಗೆ ಕೇಳಿದ್ದಕ್ಕೆ ಕವಿತಾ ನಕ್ಕುಬಿಟ್ಟಳು. ‘ಲವ್ವು ಗಿವ್ವು ಅಂತೇನೂ ಆಗಲಿಲ್ಲ ತಾನೆ? ಕಾಶ್ಮೀರಿ ಹುಡುಗರು ಅದರಲ್ಲೆಲ್ಲಾ ಆಸಕ್ತಿ ತೋರಿಸಲ್ಲ. ಲೋಕಲ್ಸ್ ಜೊತೆ ಯಾವುದೇ ಕಾಂಪ್ಲಿಕೇಷನ್ಸ್ ಬೇಡ ಅಂತ ತಮ್ಮ ಪಾಡಿಗೆ ಬದುಕ್ತಾರೆ. ನೀನೂ ದೂರದಿಂದ ನೋಡಿ ಕೈ ಮುಗುದ್ ಬಿಡು, ತಲೆ ಕೆಡಿಸ್ಕೋ ಬೇಡ’ ಅಂತ ಕವಿತಾ ಹೇಳುತ್ತಿದ್ದರೆ, ಈ ಹುಡುಗಿ ನಿಜಕ್ಕೂ ಪಶ್ಚಿಮದಿಂದ ಬಂದವಳಾ? ನಮ್ಮೆಲ್ಲರಿಗಿಂತ ಅತ್ತತ್ತ ಮಾತಾಡ್ತಾಳಲ್ಲಾ ಅಂತ ವಿಜಿಗೆ ಅನ್ನಿಸಿತ್ತು.

‘ಇವಳ ಒಳಗೆ ಒಂದು ದಾವಣಗೆರೆ ಇರೋ ಹಂಗಿದೆಯಲ್ಲಾ?’ ಅಂತ ಬಾರಿಬಾರಿಗೂ ನೆನಪಾಗುವಂತಿದ್ದವು ಕವಿತಾ ಮಾತುಗಳು. ‘ಅಯ್ಯ ನನಗ್ಯಾಕೆ ಅವನ್ ಜೊತೆ ಲವ್ವು? ಚಂದ ಇದಾನಲ್ವಾ ಅಂತ ಕೇಳಿದ್ರೆ ಏನೇನೋ ಮಾತಾಡ್ತೀಯಾ’ ಅಂತ ವಿಜಿ ಕೊಡವಿಕೊಂಡಳಾದರೂ ಕವಿತಾಳ ಅನುಭವದ ಕಣ್ಣಿಗೆ ಅವೆಲ್ಲಾ ಸುಳ್ಳು ಮಾತು ಎನ್ನುವುದು ಗೊತ್ತಾಗುತ್ತಿತ್ತು. ವಿಜಿಗೆ ನಿಜಕ್ಕೂ ಹುಸೇನನ ಬಗ್ಗೆ ತೀವ್ರ ಆಕರ್ಷಣೆ ಉಂಟಾಗಿತ್ತು. ‘ಮದುವೆ ಆಗ್ತೀಯಾ ಅವನನ್ನ? ಒಬ್ನೇ ಇರೋ ಹಂಗಿದಾನೆ’ ಅಂತ ಕವಿತಾ ನಕ್ಕು ಕೇಳಿದಳು.

‘ನೀನ್ ಕೇಳ್ತಿದೀಯಾ ಅಂತ ಹೇಳ್ತೀನಿ. ಸೀರೆ ಅಂಗಡೀಗೋ, ಬಟ್ಟೆ ಅಂಗಡೀಗೋ ಹೋದರೆ ಕಣ್ಣಿಗೆ ಚಂದ ಕಂಡ ಬಟ್ಟೆನೆಲ್ಲಾ ಕೊಂಡ್ಕೋತೀವ? ಕೆಲವೊಂದ್ಸಾರಿ ಮೆಚ್ಚಿಗೆ ಆಗಿದ್ದು ದುಬಾರಿ ಇರುತ್ತೆ. ಬಹಳ ಇಷ್ಟ ಆಗಿದ್ದು ನಮ್ಮ ಅವಶ್ಯಕತೆ ಮೀರಿದ್ದಾಗಿರುತ್ತೆ’ ವಿಜಿ ಜ್ಞಾನಿಯಂತೆ ಮಾತಾಡಿದಳು.

‘ಅಂದ್ರೆ?’ ‘ಸಖತ್ ಗ್ರಾಂಡ್ ಇರೋ ಸೀರೆ ಬಹಳ ಇಷ್ಟ ಆಯ್ತು ಅಂತಿಟ್ಟುಕೋ. ಅದನ್ನ ಉಡುವ ಸಂದರ್ಭವೇ ಇಲ್ಲದೆ ಹೋದ್ರೆ ತಗೊಂಡು ಏನು ಉಪಯೋಗ?’
‘ಮುಂದ್ಯಾವತ್ತೋ ಬೇಕಾಗುತ್ತೆ ಅನ್ನಿಸಿದ್ರೆ?’ ಕವಿತಾ ಕೇಳಿದಳು. ‘ಆಗ ಹೊಸದು ಹುಡುಕಿದರಾಯ್ತು. ಹುಡುಕೋದರಲ್ಲಿರೋ ಮಜಾ ಏನನ್ನೋ ಮನೆಯಲ್ಲಿ ತಂದು ಇಟ್ಟುಕೊಳ್ಳೋದರಲ್ಲಿ ಇರಲ್ಲ ಕಣೆ!’

‘ಯಾವುದನ್ನೇ ಆಗಲಿ. ನೋಡಿ ಸಂತೋಷ ಪಡುವುದು ಬೇರೆ. ಆದರೆ ಕೊಂಡ್ಕೊಳೋದು ಅಥವಾ ಅದನ್ನ ಹೊಂದೋದು ನಮ್ಮ ಯೋಗ್ಯತೆಗೆ, ಅವಶ್ಯಕತೆಗೆ ಸರಿ ಬರುವಂಥದ್ದನ್ನು ಮಾತ್ರ ಅನ್ನೋದು ಸತ್ಯ ಅಲ್ವಾ?’ ‘ಹೌದು. ಎಲ್ಲ ವಿಷಯಕ್ಕೂ ಹೀಗೇ ಪರ್ಸನಲ್ ಆಧ್ಯಾತ್ಮ ಅಂತ ಒಂದು ಇರುತ್ತೆ ಅಲ್ವಾ?’ ‘ಅದು ಹೇಗೆ? ನಿನ್ನ ಮಾತು ನನಗೆ ಅರ್ಥವಾಗುತ್ತೆ... ಆದರೆ ಅದನ್ನ ಎಕ್ಸ್‌ಪ್ಲೇನ್ ಮಾಡು..’

‘ಈಗ ನೋಡು...ಅವಶ್ಯಕತೆಗೆ ಅಂತ ಒಂದು ಸೀರೆ ಬೇಕಿತ್ತು ಅಂತ ಇಟ್ಕೋ. ಯಾವುದೋ ಸಂದರ್ಭ ಅಂದ್ರೆ ಹಬ್ಬವೋ, ಪೂಜೆಯೋ  ಯಾವುದಕ್ಕೋ ಕೊಂಡುಕೊಳ್ತೀವಿ.ಕೊಳ್ಳುವಾಗ ಇರೋ ಎಲ್ಲ ಸೀರೆಗಳಲ್ಲೂ ಇದೇ ಬೆಸ್ಟ್ ಅಂತ ತರ್ತೀವಲ್ಲ? ಆಗ ಇರುವ ಸುಖ ಮನೆಗೆ ತಂದ ಮೇಲೆ ಇರೋದಿಲ್ಲ. ಮನೆಗೆ ತಂದು ಒಂದೆರಡು ಸಾರಿ ಉಟ್ಟ ಮೇಲೆ ಅಂಗಡೀಲಿದ್ದ ಬೇರೆ ಸೀರೆ ತಗೋಬೇಕಿತ್ತು  ಅನ್ನಿಸುತ್ತೆ.

ಮನೆಯಲ್ಲಿರೋ ಸೀರೆ ಹಳತಾಗಿ ಕಾಣಿಸುತ್ತೆ. ನಾನು ಬಿಟ್ಟು ಬಂದ ಸೀರೆಯನ್ನು ಬೇರೆಯವರು ಉಟ್ಟದ್ದು ಕಂಡರೆ ಇನ್ನೂ ಕರುಬುವ ಹಾಗೆ ಆಗುತ್ತೆ. ಬೀರುವಿನಲ್ಲಿರೋ ಸೀರೆ ಇನ್ನೂ ಹೊಲಸಾಗಿ ಕಾಣುತ್ತೆ. ಹುಡುಗರ ವಿಷಯವೂ ಹಾಗೇ. ಗಂಡನ ವಿಷಯಕ್ಕೂ ಹೀಗೇ ಆಗುತ್ತೆ’‌ ‘ನಿಂಗೆ ಮದುವೇನೇ ಆಗಿಲ್ಲ. ಇಷ್ಟೆಲ್ಲಾ ಹೆಂಗೆ ಗೊತ್ತು?’ ‘ಗಂಡಸು-ಹೆಂಗಸರ ಬಗ್ಗೆ ಗೊತ್ತಾಗಕ್ಕೆ ಮದುವೆ ಆಗಲೇಬೇಕಂತ ಇಲ್ಲ. ವಯಸ್ಸು ಕಳೀತಾ ಬಹಳಷ್ಟು ವಿಷಯಗಳು ಅರ್ಥ ಆಗುತ್ತೆ... ಹಿ ಹಿ ಹಿ!’ ಎನ್ನುತ್ತಾ ಕವಿತಾ ನಕ್ಕಳು.

ಬೆಳಿಗ್ಗೆ ಮಧ್ಯಾಹ್ನವಾಗಿ ಸಂಜೆಯಾಗಲು ಇನ್ನೇನು ಸ್ವಲ್ಪ ಹೊತ್ತು ಮಾತ್ರವೇ ಉಳಿದಿತ್ತು. ಉರಿವ ಬಿಸಿಲು ಬಂಡೆಗಳನ್ನೆಲ್ಲಾ ರೊಟ್ಟಿ ಸುಡುವ ಹಂಚಿನಂತೆ ನಿಗಿನಿಗಿ ಕಾಯಿಸುತ್ತಿತ್ತು. ಕವಿತಾ ಮತ್ತು ವಿಜಿ ಪುರಂದರ ಮಂಟಪದಲ್ಲಿ ಕಾಲು ಚಾಚಿಕುಳಿತಿದ್ದರು.

ಕಣ್ಣಳತೆಯಲ್ಲಿ ತುಂಗಭದ್ರಾ ನದಿ ಸಳಸಳ ಹರಿಯುತ್ತಿತ್ತು. ಸುತ್ತಲೂ ಪೇರಿಸಿಕೊಂಡ ಬಂಡೆಕಲ್ಲುಗಳನ್ನು ಗಮನಿಸಿದರೆ ಇದ್ದಕ್ಕಿದ್ದ ಹಾಗೆ ಮನಸ್ಸಿನ ಹೊಳಹೊಂದು ಆಲೋಚನೆಯ ರೂಪ ಪಡೆದುಕೊಂಡಂತೆ ಒರಟೊರಟು ಕಲ್ಲುಗಳ ನಡುವೆ ಶಿವಲಿಂಗ ಕಾಣಿಸಿಬಿಡುತ್ತಿತ್ತು.

ಅರೆರೆರೆ! ಇದೇನು? ಇದು ಕಣ್ಣು ಸೃಷ್ಟಿ ಮಾಡುತ್ತಿರುವ ಭ್ರಮೆಯೇನು ಎಂದುಕೊಂಡು ಮತ್ತೆ ಮತ್ತೆ ನೋಡಿದರೆ ಈ ಸಾರಿ ಕಾಣಿಸುವುದು ಸಂಪೂರ್ಣವಾಗಿ ಕಟೆದ ನಂದಿ!! ಕೆಲವೊಮ್ಮೆ ಭ್ರಮೆ ಎನ್ನುವುದು ವಾಸ್ತವಕ್ಕೆ ತಿರುಗಿದಾಗ ನಮ್ಮ ಮೇಲೆ ನಮಗೇ ಎಂಥ ಅಪನಂಬಿಕೆ ಹುಟ್ಟುತ್ತೆ ಅಂತೀರಿ! ಕವಿತಾ ವಿಜಿಯನ್ನು ನೋಡಿ ನಕ್ಕಳು.

ನದಿಯಲ್ಲಿ ಬುಟ್ಟಿಯಾಕಾರದ ಹರಿಗೋಲು ತೇಲುತ್ತಿದ್ದವು. ಬೇರೆ ಊರುಗಳಲ್ಲಿ ಅವನ್ನು ತೆಪ್ಪ ಅಂತಾರೇನೋ. ಕೊರೆಕಲ್ ಅಂತ ಕರೆಯುವ ಇಂಗ್ಲಿಷ್ ಭಾಷಿಗರು ಅವನ್ನು ನೋಡಿ ಬಲೇ ಸಂಭ್ರಮ ಪಡುತ್ತಾರೆ. ನದಿ ದಾಟಿ ಆನೆಗೊಂದಿ ಎನ್ನುವ ದ್ವೀಪಕ್ಕೆ ಹೋಗುವವರು ಹರಿಗೋಲಿನಲ್ಲಿ ಕೂತು ಮನೆ ಸೇರುವ ತಯಾರಿಯಲ್ಲಿದ್ದರು. ಆ ದೊಡ್ಡ ಬುಟ್ಟಿ ದೋಣಿಗಳಲ್ಲಿ ಜೀವನದ ಸೂತ್ರ ಇತ್ತು.

ಹಾಗಾಗಿ ಹಾಲು, ಹಣ್ಣು, ತರಕಾರಿ, ಅಷ್ಟೇ ಏಕೆ, ಸೈಕಲ್ಲು, ಬೈಕುಗಳೂ ಹರಿಗೋಲಿನ ಸವಾರಿ ಮಾಡುತ್ತಾ ತಮ್ಮತಮ್ಮ ಗಮ್ಯದತ್ತ ಸಾಗಿದ್ದವು. ಬಲಕ್ಕೆ ಮಾತಂಗ ಬೆಟ್ಟ ತನ್ನ ಬಲವನ್ನರಿಯದ ವಿಧೇಯ ದೈತ್ಯನಂತೆ ನಿಂತಿತ್ತು. ಅಲ್ಲಿ ದೂರದಲ್ಲಿ... ಭೂಮಿ ಅಂತ್ಯವಾಗುವಂತೆ ಕಾಣುವಲ್ಲಿ ಸೂರ್ಯ ಅತ್ಯಂತ ಉತ್ಕೃಷ್ಟವಾದ ಸಿಂಗಲ್ ಮಾಲ್ಟ್ ನೀಟ್ ಸ್ಕಾಚ್ ವಿಸ್ಕಿಯ ಬಣ್ಣವನ್ನು ಆಕಾಶಕ್ಕೆ ಎರಚಲು ತಯಾರಿ ನಡೆಸಿದ್ದ.

‘ಆನ್ ದ ರಾಕ್ಸ್’ ಎನ್ನುವ ಮಾತಿಗೆ ಇಲ್ಲಿ ಬೇರೆಯೇ ಆಯಾಮ ದೊರೆತಿತ್ತು. ಕಲ್ಲ ಮಂಟಪದಲ್ಲಿ ಜೀವನ ಸಾಕ್ಷಾತ್ಕಾರಗೊಳಿಸಿಕೊಳ್ಳುತ್ತಾ ಕುಳಿತ ಬಾಲಕಿಯರಿಬ್ಬರನ್ನು ಭೂಮಿ ನೋಡಿ ನಕ್ಕಿತು. ಕಾಗೆ ನರಿ ಮದುವೆ ಆಗುವ ಹಾಗೆ ಹೊಳೆಹೊಳೆಯುವ ಹನಿಗಳ ಮಳೆ ಬರುವ ಸೂಚನೆ ಬಂದಂತಾಯ್ತು.

ಕವಿತಾಗೆ ಏನೋ ಹೊಳೆಯಿತು. ಧಿಗ್ಗನೆದ್ದು ಜೊತೆಗಿದ್ದ ವಿಜಿಯನ್ನು ಲೆಕ್ಕಿಸದೆ ಧಡಧಡ ಹರಿಗೋಲಿನ ಹತ್ತಿರ ನಡೆದಳು. ವಿಜಿ ‘ಕವಾ ಕವಾ... ಕವೀ...’ ಎಂದು ಕೂಗಿದ್ದು ಗಾಳಿಯಲ್ಲೇ ಉಳಿಯಿತು. ಇವಳು ನಿಲ್ಲುವ ಪೈಕಿ ಅಲ್ಲ ಅಂತ ವಿಜಿ ಓಡುತ್ತೋಡುತ್ತ ಗೆಳತಿಯ ಹೆಜ್ಜೆಗೆ ಸಮನಾಗಿ ಹೆಜ್ಜೆ ಹಾಕಿದಳು.

ಕವಿತಾ ಅಷ್ಟು ಹೊತ್ತಿಗಾಗಲೇ ಹರಿಗೋಲಿನ ಹತ್ತಿರ ನಿಂತು ನಡೆಸುವವನ ಹತ್ತಿರ ಚೌಕಾಸಿಗೆ ತೊಡಗಿದ್ದಳು. ಹರಿಯುವ ನದಿಯಗುಂಟ ಹೋಗಿ ಮತ್ತೆ ವಾಪಸು ಬರಬೇಕು ಅಂತ ಮಾತಾಯಿತು. ಅಷ್ಟಕ್ಕೆ ಉಳಿದವರ ಹತ್ತಿರ 20 ರೂಪಾಯಿ ತೆಗೆದುಕೊಳ್ಳುತ್ತಿದ್ದ ಹರಿಗೋಲ ಹೀರೊ ಇಬ್ಬರು ಹುಡುಗಿಯರನ್ನು ನೋಡಿ ‘ಐವತ್ ರೂಪಾಯಮ್ಮಾ’ ಅಂದ.

ಕವಿತಾಗೆ ಸಿಟ್ಟು ನೆತ್ತಿಗೇರಿತು. ಅವಳ ಮುಖ ನೋಡಿದ ವಿಜಿ ಮಧ್ಯೆ ಮಾತನಾಡಿ ವಾತಾವರಣ ತಿಳಿಯಾಗಿಸಿದಳು. ಕಂಡು ಕಾಣುವವರಿಲ್ಲದ ಊರಿನಲ್ಲಿ ಯಾರೋ ತಮ್ಮನ್ನು ರೇಪ್ ಮಾಡಿ ಬಿಸಾಕುವುದು ಗ್ಯಾರಂಟಿ ಎಂಬ ದೂರದೃಷ್ಟಿಯಲ್ಲಿ  ‘ಹೋಗ್ಲಿ ಬಿಡೇ...’ ಎಂದು ಮೆಲ್ಲಗೆ ರಾಗವೆಳೆದಳು.

‘ಏನ್ ಹೋಗ್ಲಿ ಅಂದ್ರೆ? ಇಪ್ಪತ್ ರೂಪಾಯಿ ಆಗುತ್ತೆ ಹೋಗಿ ಬರಕ್ಕೆ. ಬೇರೆಯೋರ ಹತ್ತಿರ ಅಷ್ಟೇ ಇಸ್ಕೊಳ್ಳೋದು ಇವರು. ನಮ್ಮನ್ನ ನೋಡಿದ ತಕ್ಷಣ 50 ರೂಪಾಯಿ ಆಯಿತು!’ ಎಂದು ಜೋರಾಗಿ ಮಾತನಾಡುತ್ತಾ ಅವರಿವರ ಗಮನ ಸೆಳೆಯತೊಡಗಿದಳು. ಹರಿಗೋಲಿನವನಿಗೆ ತಬ್ಬಿಬ್ಬಾಯಿತು. ವಿಜಿಗೆ ಅವನನ್ನು ನೋಡಿ ಪಾಪ ಅನ್ನಿಸಿ ಗೆಳತಿಯನ್ನು ಸೈಡಿಗೆ ಕರೆದು ಹೇಳಿದಳು ‘ನೀನ್ ಸುಮ್ಮನೆ ಇರು. ನಾನು ಅವನ ಹತ್ತಿರ ಮಾತಾಡ್ತೀನಿ’ ಅಂದಳು.

ಕವಿತಾ ಹರಿಯುತ್ತಿದ್ದ ಸಿಟ್ಟಿಗೆ ಅಣೆಕಟ್ಟು ಕಟ್ಟಿಕೊಂಡವಳಂತೆ ಸುಮ್ಮನಾದಳು. ವಿಜಿ ಹರಿಗೋಲು ಓನರ್ ಸಿದ್ದನ ಹತ್ತಿರ ಕೇಳಿದಳು. ‘ಅಣ್ಣಾ ಸ್ವಲ್ಪ ಕಡಿಮಿ ರೇಟ್ ಮಾಡಿ ಕರ್ಕಂಡೋಗಪ್ಪ. ಸುಮ್ನ ಹುಡಿಗ್ಯಾರನ್ ನೋಡಿದರ ಭರ್ಜರಿ ರೊಕ್ಕಾ ಕೇಳ್ತಿ ಮಾರಾಯ...’ ಎಂದಳು.

ತನ್ನೂರ ಭಾಷೆಗೆ ಹತ್ತಿರವಾದ ಮಾತುಗಳನ್ನು ಆಡಿದ ಹುಡುಗಿ ನೋಡಿ ಸಿದ್ದನಿಗೆ ಇವರ ಗುರುತಿನ ಬಗ್ಗೆ ತಬ್ಬಿಬ್ಬಾಯಿತು. ಹಿಂದೆ ನಿಂತಿದ್ದ ವಿಜಿಯತ್ತ ನೋಡಿ ಸಿದ್ದ ಕೇಳಿದ. ‘ನಮ್ಮೂರು ಅಂದ್ಯೇನವ?’ ‘ಹೌದಣ’ ‘ಕರೇವಾಗಿ?’ (ನಿಜವಾಗಿ) ‘ಸುಳ್ಯಾಕ್ ಹೇಳನಣ. ನೀನೇನು ನನಗ ಕಳ್ಳುಬಳ್ಳೀಯೇನ ಸುಳ್ಳು ಪಳ್ಳು ಹೇಳಕ...’ ‘ಹಂಗಾರ ಅಲ್ಲಿ ನೋಡು ನಿಮ್ಮಕ್ಕ ಏನ್ ಮಾಡಕತ್ತೇತಿ’ ಎಂದು ಹುಬ್ಬೇರಿಸಿ ಯಕ್ಷಗಾನ ಕಲಾವಿದನಂತೆ ಸಕಲ ಭಾವನೆಗಳನ್ನೂ ಕಣ್ಣಿನಲ್ಲಿ ತುಂಬಿ ಹೇಳಿದ.

ವಿಜಿ ತಿರುಗಿ ನೋಡಿದರೆ, ಕವಿತಾ ಸಿಗರೇಟು ಹಚ್ಚುವುದರಲ್ಲಿ ನಿರತಳಾಗಿದ್ದಳು. ಇದ್ಯಾಕೆ ಹೀಗೆ ಹೊಸ ಜಾಗದಲ್ಲಿ ಸಿಗರೇಟು ಹಚ್ಚಿದಳಪ್ಪಾ ಅನ್ನಿಸಿದರೂ ಗೆಳತಿಯನ್ನು ಬಿಟ್ಟುಕೊಡದೆ ‘ಅದಕ್ಕೇನಪ ಈಗ?’ ಎಂದು ವಿಜಿ ನಿರ್ಲಿಪ್ತಳಾಗಿ ಕೇಳಿದಳು. ‘ನೋಡವಾ ನಂಗೂ ಬ್ಯಾಡ ನಿಂಗೂ ಬ್ಯಾಡ. ನಮದು ಈಗ ಟ್ರಿಪ್ ಕ್ಲೋಸ್ ಮಾಡಾ ಟೈಮು. ಬರ್ತಿದ್ರೆ ಬರ್ರಿ. ಅಲ್ಲಿ ತಂಕಾ ಕರ್ಕಂಡು ಹೋಗಿ ಬರ್ತನಿ. ಆದ್ರ ಮೂವತ್ ರೂಪೈ ಕೊಡಬಕು...’

‘ಆತ ನಡಿಯಪಾ’ ಎಂದು ವಿಜಿ ಕವಿತಾಳತ್ತ ಕರೆಯಲು ತಿರುಗುತ್ತಿರುವಾಗಲೇ ‘ಆದ್ರ ಒಂದ್ ಮಾತು. ಆಯವ್ವ ಪಾರಿನ್ ಸಿಗರೇಟ ಹಚ್ಚೇತಿ. ಅರ್ಧ ಪ್ಯಾಕ್ ಸಿಗರೇಟು ಕೊಡಂಗಿದ್ರೆ ಮಾತು...’ ಸಿದ್ದನ ಕಣ್ಣುಗಳು ಹದ್ದಿನ ಕಣ್ಣುಗಳಾಗಿದ್ದವು. ದೂರದಿಂದಲೇ ಸಿಗರೇಟಿನ ಬ್ರಾಂಡನ್ನೂ ಗುರುತಿಸಬಲ್ಲವನಾಗಿದ್ದ.

ವ್ಯವಹಾರ ಅಂದ ಮೇಲೆ ವ್ಯವಹಾರವೇ. ‘ಹಂಗಾರ ಇಪ್ಪತ್ತೈದು ರೂಪಾಯಿ ಬಾಡಿಗಿ...ಅರ್ಧ ಪ್ಯಾಕ್ ಸಿಗ್ರೇಟು...ಆತೇನಪಾ?’ ಎಂದಳು ವಿಜಿ. ಸಿದ್ದ ಬಲೇ ಖುಷಿಯಾಗಿ ತಯಾರಾದ. ವಿಜಿ ಬಾ ಅಂತ ಸನ್ನೆ ಮಾಡಿದ ಕೂಡಲೇ ಕವಿತಾ ಆಗ ತಾನೇ ಹಚ್ಚಿದ ಸಿಗರೇಟನ್ನು ಆರಿಸಿ ಕಾಲಲ್ಲಿ ಹೊಸಕಿದಳು. ಅದನ್ನು ನೋಡಿದ ಸಿದ್ದನಿಗೆ ಸಾಮಾಜಿಕ ಅನ್ಯಾಯದ ಘೋರ ಮುಖವೊಂದು ಕಂಡಷ್ಟು ನೋವಾಯಿತು.

‘ಅಲ್ಲವಾ...ಆ ಸಿಗರೋಟ್ನ ಸಾಯ್ಸಾ ಬದಲಿಗೆ ನನಗಾರಾ ಕೊಟ್ಟಿದ್ರ ಮಸ್ತಾಗಿರ್ತಿತ್ತು. ಸುಮ್ಕ ವೇಷ್ಟು...’ ಎಂದು ಹಳಹಳಿಸಿದ. ವಿಜಿಗೆ ಅವನ ನೋವು ಸಂಪೂರ್ಣವಾಗಿ ಅರ್ಥವಾಯಿತು. ‘ಇರ್ಲಿ ಬಿಡಪಾ.

ಇನ್ನೊಂದ್ ಸಿಗರೇಟು ಹೆಚಿಗಿ ಕೊಡು ಅಂತ ಹೇಳನ’ ಅಂದು ಅವನ ಗಾಯಕ್ಕೆ ಮುಲಾಮು ಹಚ್ಚಿದಳು. ಹರಿಗೋಲು ಹೊರಮೈಗೆ ಡಾಂಬರು ಹಚ್ಚಿಕೊಂಡು ತಳದಲ್ಲಿ ದಪ್ಪನಾಗಿ ಒಂದು ನಮೂನಿ ಮಕ್ಕಳ ಹಡೆದು ಮಧ್ಯವಯಸ್ಸಿಗೆ ಪಕ್ವವಾದ ಹೆಣ್ಣಿನ ಹಾಗೆ ಒಂದು ಬಗೆಯ ದಿವ್ಯ ನಿರ್ಲಕ್ಷ್ಯದಲ್ಲಿ ನೀರ ಮೇಲೆ ತೇಲುತ್ತಿತ್ತು.

ಕಾಲಿಡುವಲ್ಲಿ ತಳಕ್ಕೆ ಬಿಳಿ ಪ್ಲಾಸ್ಟಿಕ್ಕಿನ ಹಳೇ ಗೊಬ್ಬರ ಚೀಲಗಳನ್ನು ಒಂದಕ್ಕೊಂದು ಸೇರಿಸಿ ಹೊಲೆದು ಭದ್ರ ಮಾಡಿದ್ದರು. ಅವುಗಳ ಮೇಲೆ ಬಿದಿರು ಚೀಬಿಗಳ ಅಸ್ಥಿಪಂಜರ. ಸೀಳಿದ ಬಿದಿರಿನ ದೆಬ್ಬೆಗಳು ಒಂದನ್ನೊಂದು ಕತ್ತರಿಸುವಂತೆ ಹಾದು ಹೋಗುತ್ತಾ ಒಳಗೆ ನೀರು ನುಸುಳದಿರುವಂತೆ ಅತ್ಯಂತ ಬಂದೋಬಸ್ತಾದ ಕೋಟೆಯನ್ನು ಕಟ್ಟಿಕೊಂಡಿದ್ದವು.

‘ಬರ್ರೆವಾ ಕುಂತಗಳ್ರೀ’ ಎಂದು ನೀರಲ್ಲಿ ತೇಲುತ್ತಾ ತೊಯ್ದಾಡುತ್ತಿದ್ದ ಹರಿಗೋಲನ್ನು ತೋರಿಸಿ ಸಿದ್ದ ಕರೆದ. ಅನನುಭವಿ ಹುಡುಗಿಯರ ಕಾಲುಗಳಿಗೆ ಅಷ್ಟು ಸುಲಭವಾಗಿ ಹರಿಗೋಲಿನೊಳಕ್ಕೆ ಎಂಟ್ರಿ ತೆಗೆದುಕೊಳ್ಳಲು ಆಗಲಿಲ್ಲ. ಊರವರಾದರೆ ಸುಲಭವಾಗಿ ಕೈ ಹಿಡಿದು ಬುಟ್ಟಿಯೊಳಕ್ಕೆ ಕರೆದುಕೊಂಡುಬಿಡಬಹುದಿತ್ತು.

ಪೇಟೆ ಹುಡುಗಿಯರ ಸಹವಾಸ ಹೆಂಗೋ ಏನೋ. ಅಲ್ಲದೆ ಸಿಗರೇಟು ಬೇರೆ ಸೇದುತ್ತಾ ಇದೆ ಗಂಡುಬೀರಿ. ಕರಾಟೆ ಪರಾಟೆ ಕಲಿತಿದ್ದರೆ ಸುಮ್ಮನೆ ನಮ್ಮ ಮೈ ಕೈ ನುಗ್ಗಾಕ್ಕಾವು ಅಂತ ಸಿದ್ದ ಸುಮ್ಮನೆ ನೋಡಿದ. ಹಾಗೂ ಹೀಗೂ ಮಾಡಿ ಹುಡುಗಿಯರು ಹರಿಗೋಲನ್ನೇರಿದರು. ಸಿದ್ದ ಅದನ್ನು ನಡೆಸಲು ಶುರು ಮಾಡಿದ ಐದು ನಿಮಿಷಕ್ಕೆ ಬೀಸುತ್ತಿದ್ದ ತಂಗಾಳಿಯ ತಂಪು ಹೆಚ್ಚಾಯ್ತು. ಮೋಡಗಳು ದಟ್ಟೈಸಿದವು. ಇವೆಲ್ಲಕ್ಕೂ ಅನ್ಯಮನಸ್ಕನಾಗಿ ಕೋಲಿನಿಂದ ನೀರನ್ನು ಮೀಟುತ್ತಾ ಹರಿಗೋಲನ್ನು ಸಾಗಿಸುತ್ತಲೇ ಇದ್ದ ಸಿದ್ದ.

ಹಾಗಿದ್ದಾಗಲೇ ಗಾಳಿ ಭೋರೆಂದು ಬೀಸಲು ಶುರುವಾಯಿತು. ಇದ್ದಕ್ಕಿದ್ದ ಹಾಗೆ ಗಾಳಿಗೆ ಎಲ್ಲಿಲ್ಲದ ಸ್ಪೀಡೂ ಶಕ್ತಿಯೂ ಬಂದುಬಿಟ್ಟು ಸಿದ್ದನ ತೆಪ್ಪ ಓಲಾಡತೊಡಗಿತು. ಇದು ಜೀವನದ ಮಹೋನ್ನತ ಗಳಿಗೆ ಅಂತ ಕವಿತಾಗೆ ಅನ್ನಿಸಿತೋ ಏನೋ ಅಂಥ ಭೋರೆಂದು ಬೀಸುವ ಗಾಳಿಯಲ್ಲೂ ಅವಳಿಗೆ ಸಿಗರೇಟು ಸೇದಬೇಕೆನ್ನುವ ಹುಕಿ ಬಂದುಬಿಟ್ಟಿತು.

ನೀವೇ ಸಿಗರೇಟು ಪ್ರಿಯರಾಗಿದ್ದರೆ ಅಥವಾ ನಿಮ್ಮ ಸ್ನೇಹಿತರಲ್ಲಿ ಸಿಗರೇಟು ಸೇದುವವರಿದ್ದರೆ ನಿಮಗೆ ಈ ಮಾತು ಅರ್ಥವಾದೀತು. ಸಿಗರೇಟು ಸೇದುವುದು ತಪ್ಪೋ ಅಲ್ಲವೋ ಎನ್ನುವ ಪ್ರಶ್ನೆ ಬೇರೆ. ಆದರೆ ಸಿಗರೇಟಿಗರ ಜೀವನ ಪ್ರೀತಿಯನ್ನು ನೀವು ಮೆಚ್ಚಲೇಬೇಕು. ಕುಡಿದು ಗಲಾಟೆ ಮಾಡುವವರಷ್ಟು ಅಸಂಬದ್ಧರಲ್ಲ ಎನ್ನುವ ಒಂದೇ ಕಾರಣಕ್ಕೆ ಸಿಗರೇಟಿಗರು ತಮ್ಮನ್ನು ತಾವೇ ಕ್ಷಮಿಸಿಕೊಂಡುಬಿಟ್ಟಿರುತ್ತಾರೆ. ಯಾವ ಸಂದರ್ಭವೇ ಆಗಲಿ, ಸಿಗರೇಟು ಸೇದದೆ ಅಪೂರ್ಣ ಅಂತಲೇ ಲೆಕ್ಕ.

ಊರಿಗೆ ಹೊರಡುವ ಮುನ್ನ ಒಂದು ಸಿಗರೇಟು, ದಾರಿಯಲ್ಲಿ ಗಾಡಿ ನಿಲ್ಲಿಸಿದರೆ ಇನ್ನೊಂದು, ಟೀ ಕುಡಿಯುತ್ತಾ ಮತ್ತೊಂದು, ಯಾವುದೋ ಅದ್ಭುತ ರಮ್ಯಲೋಕ ಕಂಡರೆ ಮತ್ತೆ ಬಾಯಿಗೆ ತಂಬಾಕು ಕಡ್ಡಿ ಸಿಗಿಸಿ ಬೆಂಕಿ ಹೊತ್ತಿಸಿಯೇ ಸೈ. ದುಃಖವಾದರೆ ಎರಡು, ಸುಖವಾಗಿದ್ದರೆ ಒಂದು. ಹೀಗೆ ಎಲ್ಲ ಸಂದರ್ಭಗಳಲ್ಲೂ ಸಿಗರೇಟು ಒಂಥರಾ ಅಸ್ಮಿತೆಯನ್ನು ರೂಪಿಸುತ್ತಲೇ ಇರುತ್ತದೆ.

ಕವಿತಾ ಕೂಡ ಇದಕ್ಕೆ ಹೊರತಾದವಳೇನಲ್ಲ. ಹಂಪಿಯಲ್ಲಿ ಹರಿಯುವ ತುಂಗಭದ್ರೆಯ ಉಡಿಯಲ್ಲಿ ಸಾವಿರ ಸುಳಿ ಇವೆ. ಕಲ್ಲು ಭೂಮಿ ತಾನೇ? ನೀರು ತಂತಾನೇ ತಳದ ಕಲ್ಲ ಸುತ್ತಾ ಸುತ್ತಿಕೊಂಡು ಪ್ರಾಣ ಸೆಳೆಯುವ ಚಕ್ರವ್ಯೂಹವಾಗುತ್ತದೆ.

‘ಅಕ್ಕಾ ಬ್ಯಾಡ ಗಾಳಿ ಮಳೆ ಜೋರೈತಿ’ ಅಂತ ಸಿದ್ಧ ಹೇಳಿದ. ಆದರೆ ಕವಿತಾ ಇನ್ನೂ ಮುಂದೆ ಹೋಗು ಅಂತ ತಾಕೀತು ಮಾಡಿದಳು. ಮುಂದೆ ಸುಳಿಯಲ್ಲಿ ಹರಿಗೋಲು ಸಿಕ್ಕಿಕೊಂಡು ಗರಗರ ತಿರುಗಲು ಪ್ರಾರಂಭಿಸಿತು. ವರ್ಷಗಳಿಂದ ಹರಿಗೋಲು ನಡೆಸುವ ಕಾಯಕವನ್ನೇ ಮಾಡಿಕೊಂಡಿರುವ ಅನುಭವೀ ಸಿದ್ಧ ಕೂಡ ಒಂದು ಕ್ಷಣ ಅಧೀರನಾದ. ಸುತ್ತಲಿನ ಬಂಡೆಕಲ್ಲುಗಳು ತಿರುಗುತ್ತಿದ್ದವು. ತಲೆ ಧಿಮ್ಮೆನ್ನುತ್ತಿತ್ತು. ಸಿದ್ದನಿಗೆ ಬೆವರು ಕಿತ್ತು ಬಂತು. ವಿಜಿ ಇನ್ನೇನು ತನ್ನ ಅಂತ್ಯ ಇಲ್ಲೇ ಅಂತ ನಿರ್ಧರಿಸಿಕೊಂಡು ಮನೆಯವರನ್ನೆಲ್ಲ ಒಂದು ಕ್ಷಣ ನೆನೆದಳು. ಅವರಿಗೆ ಸುದ್ದಿ ಹೇಗೆ ಮುಟ್ಟುತ್ತದೋ ಅಂತ ಆತಂಕಗೊಂಡಳು. ಎದೆ ತಣ್ಣಗಾದಂತಾಯಿತು.

ಅಷ್ಟರಲ್ಲಿ ‘ಹೀ ಮ್ಯಾನ್’ ಸಿದ್ದ ಹರಿಗೋಲನ್ನು ಸುಳಿಯಿಂದ ಹೊರಗೆ ತಂದು ನೀರಿನ ಸಮ ಹರಿವಿಗೆ ಸೇರಿಸಿದ. ಭುಜ ರಟ್ಟೆ ಎಲ್ಲ ಸೋತಂತಾಗಿ ಒಂದು ಕ್ಷಣ ಧಸಕ್ ಅಂತ ಕೂತ. ಕವಿತಾ ಅವನನ್ನು ನೋಡಿ ನಕ್ಕಳು. ಅಷ್ಟು ಹೊತ್ತಿಗಾಗಲೇ ಅದ್ಯಾವ ಮಾಯದಲ್ಲೋ ಸಿಗರೇಟು ಹಚ್ಚಿಕೊಂಡು ಧಂ ಎಳೆಯುತ್ತಿದ್ದಳು.

ಸಿದ್ದ ಮಾತನಾಡಲಿಲ್ಲ. ಸುಮ್ಮನೆ ದಡ ಸೇರಿಸಿ ‘ಇಳೀರಿ’ ಅಂತ. ಕವಿತಾ ಬಾಡಿಗೆ ದುಡ್ಡು ಮತ್ತು ಸಿಗರೇಟು ಕೊಡಲು ಹೋದಳು. ಬರೀ ದುಡ್ಡು ತೆಗೆದುಕೊಂಡು ಸಿದ್ದ ಕೈ ಮುಗಿದ. ‘ತಾಯಾರಾ ಇಲ್ಲಿ ಇರಾ ಮಟ ನಮ್ ತೆಪ್ಪದ ಹಂತ್ಯಾಕ ಬರಬ್ಯಾಡ್ರಿ... ಎನ?’ ಎಂದು ಬೀಳ್ಕೊಟ್ಟ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT