ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು : ನಮ್ಮಿಂದಲೇ ಪರಿಹಾರ

Last Updated 26 ಏಪ್ರಿಲ್ 2011, 19:30 IST
ಅಕ್ಷರ ಗಾತ್ರ

ಆರು ರೀತಿಯ  ‘ಜೆಡ್ ಮಂತ್ರ’ಗಳನ್ನು ನಾವೆಲ್ಲ ಸೇರಿ ಪಠಿಸುವುದು ಸಾಧ್ಯವಿದ್ದರೆ ನೀರು, ಇಂಧನ, ತ್ಯಾಜ್ಯ ನಿರ್ವಹಣೆ ಸಮಸ್ಯೆಗಳನ್ನು ಸರ್ಕಾರದ ನೆರವಿಲ್ಲದೆ ನಮಗೇ ಪರಿಹರಿಸಿಕೊಳ್ಳುವುದು ಸಾಧ್ಯವಿದೆ ಎಂಬ ಬಲವಾದ ಪ್ರತಿಪಾದನೆ ನನ್ನದು.

ನಗರಗಳಲ್ಲಿ ಕಾಣಿಸಿಕೊಳ್ಳುವ ನೀರು, ವಿದ್ಯುತ್ ಅಭಾವ ಮಾತ್ರವಲ್ಲ, ತ್ಯಾಜ್ಯ ವಿಲೇವಾರಿಯ ಸಮಸ್ಯೆಯನ್ನೂ ನಿವಾರಿಸಲು ನಾವೇನು ಮಾಡಬೇಕು ಎಂದು ಜನ ನನ್ನನ್ನು ಆಗಾಗ ಕೇಳುತ್ತಿರುತ್ತಾರೆ. ಬೇಸಿಗೆಯೂ ಬಂದುಬಿಟ್ಟಿದೆ. ವಿದ್ಯುತ್ ಕಡಿತ ಮಾಡಿದರೆ ಹಾಹಾಕಾರ, ನೀರು ಪೂರೈಕೆಯಾಗದೆ ಇದ್ದರೆ ಮತ್ತಷ್ಟು ದೊಡ್ಡ ಹಾಹಾಕಾರ. ಇದೆಲ್ಲವನ್ನು ಇಲ್ಲವಾಗಿಸಬೇಕೆಂದರೆ ನಾನು ಹೇಳಿದ ‘ಜೆಡ್ ಮಂತ್ರ’ ಪಠಿಸಿ ಅದನ್ನು ಜಾರಿಗೆ ತರುವುದೊಂದೇ ದಾರಿ.

ಜಾನ್ ಎಫ್. ಕೆನಡಿ ಅವರ ಹೆಸರಾಂತ ಮಾತೊಂದು ನಮಗೆಲ್ಲ ಗೊತ್ತಿದೆ. ‘ಸರ್ಕಾರ ನಿನಗೆ ಏನು ಮಾಡಬಹುದು ಎಂದು ಕೇಳಬೇಡ, ನೀನು ಸರ್ಕಾರಕ್ಕೆ ಏನು ಮಾಡಬಲ್ಲೆ ಎಂದು ಹೇಳು’ ಎಂಬ ಮಾತನ್ನು ನಾವು ಪ್ರತಿದಿನ ಮನನ ಮಾಡಿಕೊಂಡು ಅದರಂತೆ ನಡೆಯುವ ಅಗತ್ಯ ಇದೆ.

ನನ್ನ ‘ಜೆಡ್ ಮಂತ್ರ’ದ ಬಗ್ಗೆ ನಿಮಗೆ ಕುತೂಹಲ ಇರಬಹುದು. ಅದು ತೀರಾ ಸರಳ. ಅದರ ಪೂರ್ಣ ವಿವರ ಏನೆಂದರೆ ‘ಝೀರೊ  ಎನರ್ಜಿ ಡೆವಲಪ್‌ಮೆಂಟ್’ (ಜೆಡ್‌ಇಡಿ), ಅಂದರೆ ಇಂಧನವನ್ನು ಬಳಸದೆಯೇ ಅಭಿವೃದ್ಧಿ ಸಾಧಿಸುವುದು ಎಂದಾಗುತ್ತದೆ.

ಒಂದು ಬಾರಿಗೇ ಇದನ್ನು ಸಾಧಿಸುವುದು ಸಾಧ್ಯವಿಲ್ಲ. ಆದರೆ ನೀರು, ವಿದ್ಯುತ್ ವಿಚಾರದಲ್ಲಿ ಈ ‘ಮಂತ್ರ’ ವನ್ನು ನಾವೆಲ್ಲ ಪರಿಸರ ಸ್ನೇಹಿ ಅಥವಾ ಹಸಿರು ಮನೆಗಳ ಪರಿಕಲ್ಪನೆಯ ಮೂಲಕ ಅನುಷ್ಠಾನಕ್ಕೆ ತಂದರೆ ನಮ್ಮ ಭವಿಷ್ಯ ನಮ್ಮ ಕೈಯಲ್ಲೇ ಉಳಿಯಲು ಸಾಧ್ಯ.

ಮೊದಲಾಗಿ ನೀರಿನ ವಿಚಾರಕ್ಕೆ ಬರೋಣ. ಕೇವಲ ಮೂರು ಸಾವಿರ ರೂಪಾಯಿಗಳ ಸಣ್ಣ ಹೂಡಿಕೆ ಯೊಂದಿಗೆ ಈಗಿರುವ ನಳವನ್ನು ಬದಲಿಸಿ ಕಡಿಮೆ ಪ್ರಮಾಣದಲ್ಲಿ ನೀರು ಬೀಳುವ ನಳವನ್ನು ಅಳವಡಿಸೋಣ. ಇದರಿಂದ ಒಂದು ನಿಮಿಷಕ್ಕೆ 15-18 ಲೀಟರ್ ಬದಲಿಗೆ 7 ಲೀಟರ್‌ನಷ್ಟು ನೀರು ಮಾತ್ರ ಸುರಿಯುತ್ತದೆ. ಪ್ರತಿ ಮನೆಯಲ್ಲಿ ಹೀಗೆ ಮಾಡುವುದರಿಂದ ಒಂದೊಂದು ಮನೆಯಲ್ಲಿ ವರ್ಷಕ್ಕೆ 35 ಸಾವಿರ ಲೀಟರ್ ಉಳಿಸಬಹುದು.

ಬೆಂಗಳೂರಿನಂತಹ ನಗರದಲ್ಲಿ ಹೀಗೆ ಮಾಡುವುದರಿಂದ 7 ಶತಕೋಟಿ ಲೀಟರ್ ನೀರು ಉಳಿಸಬಹುದು. ನಮ್ಮ ಸದ್ಯದ ಬೇಡಿಕೆ ದಿನಕ್ಕೆ ಒಂದು ಶತಕೋಟಿ ಲೀಟರ್. ನಾವು ಕೇವಲ ನಳ ಬದಲಿಸುವ ಮೂಲಕ ವರ್ಷಕ್ಕೆ ಏಳು ದಿನಗಳ ಮಟ್ಟಿಗೆ ನೀರು ಜಲಮಂಡಳಿಯ ತಲೆನೋವನ್ನು ತಪ್ಪಿಸಬಹುದು. ಬೆಂಗಳೂರಿನಲ್ಲಿರುವ 2 ಲಕ್ಷ ಮನೆಗಳು ಇಷ್ಟು ಸಣ್ಣ ಕೆಲಸವನ್ನು ಮಾಡುವುದು ಸಾಧ್ಯವಿಲ್ಲವೆಂದಾದರೆ ನೀರಿನ ಬಿಕ್ಕಟ್ಟಿಗೆ ಬಿಡಬ್ಲ್ಯುಎಸ್‌ಸ್‌ಬಿ ಏನೂ ಮಾಡಿಲ್ಲ ಎಂದು ಆರೋಪಿಸುವ ಹಕ್ಕನ್ನೂ ನಾವು ಕಳೆದುಕೊಳ್ಳಬೇಕಾಗುತ್ತದೆ.

ವಸತಿ ಸಮುಚ್ಛಯ ಅಥವಾ ಕಾಲೋನಿಗಳು ಇರುವ ಕಡೆಯಲ್ಲೆಲ್ಲ ಒಂದೊಂದು ಮನೆಯವರು ಕೇವಲ 15 ಸಾವಿರ ರೂಪಾಯಿಗಳಷ್ಟು ವ್ಯಯಿಸಿದರೆ ಅಲ್ಲಿ ಉತ್ಪಾದನೆಯಾಗುವ ತ್ಯಾಜ್ಯ ನೀರನ್ನು ಸಂಗ್ರಹಿಸಿ, ಸಂಸ್ಕರಿಸಿ ಉದ್ಯಾನಗಳಿಗೆ ಬೇಕಾದ ನೀರನ್ನು ಪೂರೈಸಬಹುದು. ನಾವೇನೋ ಮಾಡಬಹುದು,     ಅಪಾರ್ಟ್‌ಮೆಂಟ್/ ಕಾಲೋನಿಯ ಇತರರ ಮನವೊಲಿಸುವುದು ಹೇಗೆ ಎಂಬುದು ಹಲವರ ಪ್ರಶ್ನೆ.

ನಾವು ಇದನ್ನು ನಿಜವಾಗಿಯೂ ಮಾಡಿದ್ದೇ ಆದರೆ ಉದ್ಯಾನಗಳಿಗೆ ಹರಿಸುವ 20 ಶತಕೋಟಿ ಲೀಟರ್ ಶುದ್ಧ ನೀರನ್ನು ಉಳಿಸಬಹುದು. ಅಂದರೆ ಇದರಿಂದ ಬೆಂಗಳೂರು ನಗರದಲ್ಲಿ 20 ದಿನಗಳ ನೀರಿನ ಅಗತ್ಯವನ್ನು ಪೂರೈಸಿದಂತಾಗುತ್ತದೆ.

ಕೇವಲ ಉದ್ಯಾನಗಳಿಗೆ ಮಾತ್ರವಲ್ಲ, ನಮ್ಮ ಕಾರು ತೊಳೆಯಲು, ಬಟ್ಟೆ ತೊಳೆಯಲು ಸಹ ಇದನ್ನು ಬಳಸಬಹುದು.

ತ್ಯಾಜ್ಯ ನೀರು ಸಂಸ್ಕರಣೆ ಒಂದೊಂದು ಮನೆಗಳಲ್ಲಿ ಸಾಧ್ಯವಿಲ್ಲ ನಿಜ. ಅಂತಹ ತಂತ್ರಜ್ಞಾನ ಇನ್ನೂ ಬಂದಿಲ್ಲ. ಆದರೆ ಗುಂಪಾಗಿ ಮನೆಗಳು ಇರುವ ಕಡೆ ಇದನ್ನು ಮಾಡಿದ್ದೇ ಆದರೆ ಕುಡಿಯುವ ನೀರನ್ನು    ಉದ್ಯಾನಗಳಿಗೆ ಹರಿಸುವ ಪ್ರಮೇಯ ತಪ್ಪಿಸುವುದು ಸಾಧ್ಯವಿದೆ. ಬೆಂಗಳೂರಿನ ಕನಿಷ್ಠ 1 ಲಕ್ಷ ಮನೆಗಳು ಇಂತಹ ಕೆಲಸ ಮಾಡಿದ್ದೇ ಆದರೆ ಅದೆಷ್ಟು ಪ್ರಯೋಜನ ಆದೀತು ನೋಡಿ.

ನಮ್ಮ ಮನೆಗಳಲ್ಲಿರುವ ಶೌಚಾಲಯಗಳಲ್ಲಿರುವ ಫ್ಲಶ್‌ಗಳು ಅತಿ ದೊಡ್ಡ ಪ್ರಮಾಣದಲ್ಲಿ ನೀರನ್ನು ವ್ಯರ್ಥ ಮಾಡುತ್ತವೆ. ಈ ಒಂದು ಅಗತ್ಯಕ್ಕೇ ಇಡೀ ಮನೆಗೆ ಬೇಕಾದ ಒಟ್ಟು ನೀರಿನಲ್ಲಿ ಶೇ 40ರಷ್ಟು ನೀರು ಬೇಕಾಗುತ್ತದೆ. ಈಗಿರುವ ಫ್ಲಶ್ ಟ್ಯಾಂಕ್ ಬದಲಿಸಿ ಹೊಸ ಡ್ಯುಯಲ್ ಫ್ಲಶ್ ಟ್ಯಾಂಕ್‌ಗಳನ್ನು ಅಳವಡಿಸಲು 2500ರಿಂದ 3000 ರೂಪಾಯಿ ಮಾತ್ರ ಸಾಕು.

ಹೀಗೆ ಮಾಡಿದರೆ ಟಾಯ್ಲೆಟ್ ಫ್ಲಶ್ ಟ್ಯಾಂಕ್‌ಗೆ 3 ಲೀಟರ್/6, 2ಲೀಟರ್/4 ನೀರಷ್ಟೇ ಸಾಕಾಗುತ್ತದೆ. ಈಗಿನ ಹಳೆ ಕಾಲದ ಫ್ಲಶ್‌ಗಳು 10ರಿಂದ 14 ಲೀಟರ್ ನೀರು ಬಳಸುತ್ತವೆ. ಈ ಹೊಸ ವಿಧಾನ ಅಳವಡಿಕೆಯಿಂದ ಫ್ಲಶ್ ಟ್ಯಾಂಕ್ ನೀರಿನ ಬಳಕೆಯಲ್ಲಿ   ಶೇ 70ರಷ್ಟು ನೀರು ಉಳಿಸಬಹುದು. ಟಾಯ್ಲೆಟ್‌ಗೆ ಸುರಿಯುವ ನೀರು ಕಡಿತವಾದರೆ ಪ್ರತಿ ಮನೆ ಪ್ರತಿ ದಿನ 100 ಲೀಟರ್‌ನಷ್ಟು ನೀರನ್ನು ಉಳಿಸುವುದು ಸಾಧ್ಯವಿದೆ. ಬೆಂಗಳೂರಿನಂತಹ ನಗರದಲ್ಲಿ ಈ ಮೂಲಕ ದಿನಕ್ಕೆ 40 ದಶಲಕ್ಷ ಲೀಟರ್ ನೀರು ಉಳಿಸಿದಂತಾಯಿತು. ಇದು ವಾರ್ಷಿಕ 15 ದಿನಗಳ ನೀರಿನ ಬೇಡಿಕೆಯನ್ನು ತಣಿಸಿದಂತಾಗುತ್ತದೆ.

ಬೆಂಗಳೂರು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯೂ ಈ ನಿಟ್ಟಿನಲ್ಲಿ ಹಲವು ಸುಧಾರಣೆಗಳನ್ನು ಕೈಗೊಳ್ಳುತ್ತಿದೆ. ತನ್ನ ಹಲವು ನಿರ್ವಹಣಾ ಕಾರ್ಯಗಳಿಗೆ ಅದು ಶುದ್ಧ ನೀರನ್ನು ಬಳಸುತ್ತಿಲ್ಲ. ನೀರಿನ ಪೂರೈಕೆ ನಿರ್ವಹಣೆಯಲ್ಲೂ ಇಂತಹ ದಕ್ಷತೆಯನ್ನು ತರಲಾಗುತ್ತಿದೆ ಎಂದು ಮಂಡಳಿಯ ಅಧ್ಯಕ್ಷ ರಾಮಮೂರ್ತಿ ಈಚೆಗೆ ಹೇಳಿದ್ದಾರೆ. ಅವರು ಅವರ ಕೆಲಸವನ್ನು ಉತ್ತಮವಾಗಿ ಮಾಡುತ್ತಿದ್ದಾರೆ. ಮಂಡಳಿಯ ಈ ಪ್ರಯತ್ನದಿಂದ ವಾರ್ಷಿಕವಾಗಿ 15 ದಿನಗಳಷ್ಟು ನೀರಿನ ಬೇಡಿಕೆಯನ್ನು ಪೂರೈಸುವುದು ಸಾಧ್ಯವಾದೀತು.

ನಾವೆಲ್ಲ ದೀರ್ಘ ಸಮಯದಿಂದ ಹೇಳುತ್ತ ಬರುತ್ತಿರುವ ಮಳೆ ನೀರಿನ ಸಂಗ್ರಹ (ಆರ್‌ಡಬ್ಲ್ಯುಎಚ್) ನೀರಿನ ಉಳಿತಾಯದಲ್ಲಿ ಪ್ರತಿಯೊಂದು ಮನೆಯೂ ಮಾಡಬಹುದಾದ ಬಹು ಮುಖ್ಯ ಕೆಲಸ.

 ಅಪಾರ್ಟ್‌ಮೆಂಟ್‌ಗಳಲ್ಲಿ ಇದು ಸಾಧ್ಯವಿಲ್ಲ ಬಿಡಿ. ಆದರೆ ಪ್ರತಿಯೊಂದು ಮನೆಯಲ್ಲೂ ಇದನ್ನು      ಮಾಡುವುದು ಸಾಧ್ಯವಿದೆ. 10-15 ಮೀಟರ್ ಆಳದ, ಒಂದು ಮೀಟರ್ ಸುತ್ತಳತೆಯ ಬಾವಿ ತೋಡಿ ಮಳೆ ನೀರು ಅದರಲ್ಲಿ ಸಂಗ್ರಹವಾಗುವಂತೆ ಮಾಡಿದರೆ ನಿಮಗೆ ಅದರ ಪ್ರಯೋಜನ ಕೇವಲ ಎರಡೇ ವರ್ಷಗಳಲ್ಲಿ ಗೊತ್ತಾದೀತು.

ಕುಡಿಯುವುದರಿಂದ ಹಿಡಿದು ತೊಳೆಯುವುದರ ತನಕ ಎಲ್ಲವನ್ನೂ ಈ ನೀರಿನಲ್ಲಿ ಮಾಡಬಹುದು. ಈ ಕೆಲಸವನ್ನು ಸಮರ್ಪಕವಾಗಿ ಮಾಡಿದರೆ ವರ್ಷಕ್ಕೆ 40 ದಿನಗಳ ಕಾಲ ಜಲ ಮಂಡಳಿಯನ್ನು ಅವಲಂಬಿಸದೆ ಬದುಕಬಹುದು.

ನಿಮ್ಮ ಮನೆಯ ತಾರಸಿಗೆ ಬಿದ್ದ ಮಳೆ ನೀರನ್ನು ನೀವು ತೋಡಿಸಿದ ಈ ಬಾವಿಗೆ ಬಿಡುತ್ತಿದ್ದರೆ ಎರಡು ವರ್ಷಗಳಲ್ಲಿ ಅದು ನಿಜವಾದ ಬಾವಿಯಂತೆಯೇ ನಿಮ್ಮ ಎಲ್ಲಾ ಕೆಲಸಗಳಿಗೂ ನೆರವಿಗೆ ಬರುತ್ತದೆ. ಇದಕ್ಕೆ 20 ಸಾವಿರ ರೂಪಾಯಿಗಿಂತ ಹೆಚ್ಚು ಖರ್ಚು ಬರುವುದಿಲ್ಲ. ಸರಳ ಫಿಲ್ಟರ್ ಬಳಕೆಯಿಂದ ಬಾವಿಯ ನೀರು ಮಲಿನವಾಗುವ ಪ್ರಮೇಯವೂ ಇಲ್ಲ.

ನಾವು ಈ ಮೇಲೆ ವಿವರಿಸಿದ ಮೂರು ವಿಧಾನದಲ್ಲಿ ನೀರನ್ನು ಮಿತವಾಗಿ ಬಳಸಲು ಮುಂದಾದರೆ  ಜಲಮಂಡಳಿಯ ನೀರಿಗೆ ಅವಲಂಬಿಸುವ ಪ್ರಮಾಣ ಶೇ 70ರಷ್ಟು ಕಡಿಮೆಯಾಗುತ್ತದೆ.

ಜಲಮಂಡಳಿಯೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯೊಂದಿಗೆ ಸೇರಿಕೊಂಡು ಸಾರ್ವಜನಿಕ ಉದ್ಯಾನಗಳಿಗೆ ಶುದ್ಧ ಕುಡಿಯುವ ನೀರು ಬಳಕೆಯನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದೆ. ಬೆಂಗಳೂರಿನಲ್ಲಿರುವ 500ಕ್ಕೂ ಅಧಿಕ ಉದ್ಯಾನಗಳಲ್ಲಿ   ಬಾವಿಗಳನ್ನು ತೋಡಿ ಅಲ್ಲಿನ ನೀರು ಅಲ್ಲಿಗೇ ಸಿಗುವಂತೆ ಮಾಡಿದರೆ ನೀರನ್ನು ದೊಡ್ಡ ಪ್ರಮಾಣದಲ್ಲಿ ಉಳಿಸುವುದು ಸಾಧ್ಯವಿದೆ. ಇದಕ್ಕೆ ದೊಡ್ಡ ಖರ್ಚು ಸಹ ಇಲ್ಲ. ನಗರದಲ್ಲಿ ಇಂತಹ ಕಾರ್ಯಗಳನ್ನು ಕೈಗೊಳ್ಳುವುದಕ್ಕೆ ಹಲವು ಪರಿಣಿತರ ತಂಡಗಳೂ ಇವೆ.

ಮುಂದಿನ ನಮ್ಮ ಚರ್ಚೆಯಲ್ಲಿ ಇತರ ಮೂರು ‘ಜೆಡ್ ಮಂತ್ರ’ಗಳ ಬಗ್ಗೆ ಚರ್ಚಿಸೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT