ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಮಾಣಿಕತೆಯ ಫಲ

Last Updated 2 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಶಾಂಘಾಯ್ ಪಟ್ಟಣದ ಹತ್ತಿರದ ಹಳ್ಳಿಯಲ್ಲಿ ಇಬ್ಬರು ತರುಣರಿದ್ದರು. ಒಬ್ಬನ ಹೆಸರು ಜಿಯಾ, ಮತ್ತೊಬ್ಬ ಲೀ. ಇಬ್ಬರೂ ಸೋಮಾರಿಗಳು. ಸರಿಯಾಗಿ ಓದದೇ ಶಾಲೆಯ ಶಿಕ್ಷಣ ಪೂರೈಸದೇ ಅಲ್ಲಲ್ಲಿ ಓಡಾಡಿಕೊಂಡಿದ್ದವರು. ಯಾವ ಜ್ಞಾನ, ಕೌಶಲಗಳನ್ನು ಪಡೆಯದೇ ಉಳಿದಿದ್ದ ಇವರಿಗೆ ಯಾರು ಕೆಲಸ ಕೊಟ್ಟಾರು. ಹಾಗೆಯೇ ನಿರುದ್ಯೋಗಿಗಳಾಗಿ ಮನೆಯಲ್ಲಿ ಊಟಕ್ಕೆ ದಂಡವಾಗಿ ಬೆಳೆದಿದ್ದರು.  ಒಂದು ದಿನ ಇಬ್ಬರ ಮನೆಯ ಪಾಲಕರೂ ಇವರನ್ನು ಮನೆಯಿಂದ ಹೊರಗೆ ಹಾಕಿ, ನೀವೇ ಏನಾದರೂ ಕಲಿತು, ಕೆಲಸ ಹುಡುಕಿಕೊಂಡು ಬನ್ನಿ ಎಂದು ಕಳುಹಿಸಿಬಿಟ್ಟರು.

ಇಬ್ಬರೂ ಊರೆಲ್ಲ ತಿರುಗಿದರೂ ಕೆಲಸ ದೊರಕಲಿಲ್ಲ. ಇವರ ಮಹಿಮೆ ಗೊತ್ತಿದ್ದರಿಂದ ಯಾರೂ ಇವರನ್ನು ಹತ್ತಿರಕ್ಕೇ ಸುಳಿಯಲು ಬಿಡಲಿಲ್ಲ. ಪಕ್ಕದ ಊರುಗಳಿಗೆ ಹೋದರೂ ಕೆಲಸ ದೊರೆಯಲಿಲ್ಲ. ಮೂರು ದಿನ ಊಟ ದೊರೆಯದೇ ಕಂಗಾಲಾಗಿ ಹೋದರು.  ಈ ದಿನ ಊಟ ಸಿಗದಿದ್ದರೆ ಪ್ರಾಣವೇ ಹೋಗಿಬಿಡುತ್ತದೆ ಎನ್ನಿಸಿತು. ಇಬ್ಬರೂ ಹಸಿವಿನಿಂದ ತೂರಾಡುತ್ತ ಮತ್ತೊಂದು ಗ್ರಾಮಕ್ಕೆ ಹೋಗುತ್ತಿರುವಾಗ ದಾರಿಯಲ್ಲಿ ಒಂದು ಬೌದ್ಧ ದೇವಸ್ಥಾನ ಕಂಡಿತು. ಅಲ್ಲಿ ತುಂಬ ಜನ ಓಡಾಡುತ್ತಿದ್ದರು.

ಅದಕ್ಕಿಂತ ಮುಖ್ಯವಾಗಿ ಆ ದಿಕ್ಕಿನಿಂದ ಘಮಘಮಿಸುವ ಆಹಾರದ ಪರಿಮಳ ಸೂಸಿ ಬರುತ್ತಿತ್ತು. ಜಿಯಾ ಮತ್ತು ಲೀ ರ ಬಾಯಿಯಲ್ಲಿ ನೀರೂರಿತು, ಹಸಿವು ಹತ್ತು ಪಟ್ಟು ಹೆಚ್ಚಾಯಿತು. ಲೀ ಹೇಳಿದ, `ಜಿಯಾ ಆ ದೇವಸ್ಥಾನಕ್ಕೆ ಹೋಗಿ ನಮಗೆ ತುಂಬ ಹಸಿವಾಗಿದೆ, ಊಟ ನೀಡಿ ಎಂದು ಕೇಳೋಣ. ಅವರು ಸಾಮಾನ್ಯವಾಗಿ ಕರುಣೆಯುಳ್ಳವರಾಗಿರುತ್ತಾರೆ. ಊಟ ಸಿಕ್ಕೀತು' ಎಂದ. ಆಗ ಜಿಯಾ,  `ಹಾಗೆ ಕೊಟ್ಟೇ ಕೊಡುತ್ತಾರೆ ಎಂದು ಹೇಳಲಾಗುವುದಿಲ್ಲ. ಅವರು ಕೊಡದಿದ್ದರೆ ನಾವು ಬಲಪ್ರಯೋಗ ಮಾಡಿಯಾದರೂ ಊಟ ಮಾಡಲೇಬೇಕಾಗುತ್ತದೆ'  ಎಂದ.

ಅದಕ್ಕೆ ಲೀ ಅಸಮ್ಮತಿ ಸೂಚಿಸಿ,  `ಮೂರ್ಖ, ನಿನಗೆ ಗೊತ್ತಿಲ್ಲವೇ ಈ ಸನ್ಯಾಸಿಗಳೆಲ್ಲ ಶಾವೊಲಿನ್ ಪಂಥಕ್ಕೆ ಸೇರಿದವರು, ಯುದ್ಧವಿದ್ಯೆಲ್ಲಿ ಪರಿಣತರು. ನಾವೇನಾದರೂ ಅವರ ಮೇಲೆ ಏರಿ ಹೋದರೆ ನಾವು ಬದುಕಿದ್ದರ ಗುರುತು ಕೂಡ ಉಳಿಯುವುದಿಲ್ಲ'  ಎಂದ. ಒಂದು ಕ್ಷಣ ಯೋಚಿಸಿ ಜಿಯಾ ಹೇಳಿದ, `ನನಗೊಂದು ಹೊಸ ಆಲೋಚನೆ ಬಂದಿದೆ.

ನಾವಿಬ್ಬರೂ ಬುದ್ಧದೇವನ ಅತ್ಯಂತ ಶ್ರದ್ಧಾಳುಗಳು ಎಂದು ಹೇಳಿಕೊಳ್ಳೋಣ. ಆಗ ಅವರು ಊಟ ನೀಡಿಯೇ ತೀರುತ್ತಾರೆ'. ಆದರೆ ಲೀ ಹೇಳಿದ, `ಸುಳ್ಳು ಹೇಳುವುದು ಬೇಡ, ಅದೂ ಆ ಧಾರ್ಮಿಕ ಜನರ ಮುಂದೆ ಯಾಕೆಂದರೆ ನಾವು ಧಾರ್ಮಿಕರೂ ಅಲ್ಲ, ಬುದ್ಧನ ಶಿಷ್ಯರೂ ಅಲ್ಲ'. `ಅದು ನಿನ್ನ ಹಣೆಯಬರಹ. ಏನಾದರೂ ಹೇಳಿಕೋ. ನಾನು ಮಾತ್ರ ಬುದ್ಧನ ಶಿಷ್ಯನೆಂದು ಹೇಳಿ ಒಳ್ಳೆಯ ಊಟ ಗಿಟ್ಟಿಸಿಕೊಳ್ಳುತ್ತೇನೆ'  ಎಂದ ಜಿಯಾ.

ಇಬ್ಬರೂ ಹೋಗಿ ದೇವಸ್ಥಾನದ ಬಾಗಿಲು ತಟ್ಟಿದರು. ಅಲ್ಲಿಯ ಗುರು ಬಂದು ಬಾಗಿಲು ತೆರೆದು  `ಏನು ಬೇಕಿತ್ತು'  ಎಂದು ಕೇಳಿದ. ತಕ್ಷಣ ಜಿಯಾ, `ಬುದ್ಧ ನಿಮ್ಮನ್ನು ಸದಾ ಕಾಪಾಡಲಿ. ನಾನು ನಮ್ಮ ಬೌದ್ಧ ದೇವಾಲಯದ ಶಾವೊಲಿನ್ ಪರಂಪರೆಯ ಎಲ್ಲ ಬಿಕ್ಕುಗಳ ಪ್ರಣಾಮಗಳನ್ನು ಹೊತ್ತು ತಂದಿದ್ದೇನೆ. ನಾನೂ ಕೂಡ ತಮ್ಮ ಹಾಗೆಯೇ ಬುದ್ಧನ ಕೃಪಾಛತ್ರದಲ್ಲಿ ಶಾಂತಿ ಕಂಡುಕೊಳ್ಳುವ ಸೇವಕ'  ಎಂದು ವಿನೀತನಾಗಿ ನುಡಿದ.

ಆಗ ಆ ಗುರುಗಳು ಲೀ ಯತ್ತ ತಿರುಗಿ, `ಮತ್ತೆ ನೀನೂ ನಮ್ಮ ಪರಂಪರೆಯವನೇ'  ಎಂದು ಕೇಳಿದರು. ಲೀ ಹೇಳಿದ, `ಇಲ್ಲ, ನಾನೇನೂ ಧಾರ್ಮಿಕನಲ್ಲ. ನನಗೆ ತುಂಬ ಹಸಿವೆಯಾಗಿತ್ತು, ಊಟ ದೊರಕೀತೇನೋ ಎಂದು ಬಂದೆ' ಎಂದ. ಗುರು ಗಂಭೀರವಾಗಿ ಹೇಳಿದ,  `ಆಯ್ತು, ಇಬ್ಬರೂ ಒಳಗೆ ಬನ್ನಿ'. ನಂತರ ಲೀ ಯತ್ತ ತಿರುಗಿ  `ನೋಡಪ್ಪ, ನೀನು ಹೀಗೆ ಸೀದಾ ಹೋದರೆ ಅಡುಗೆ ಮನೆ ಸಿಗುತ್ತದೆ. ಅಲ್ಲಿ ನಮ್ಮ ಹುಡುಗರು ನಿನಗೆ ಬೇಕಾದ್ದನ್ನು, ಬೇಕಾದಷ್ಟು ನೀಡುತ್ತಾರೆ. ಹೊಟ್ಟೆ ತುಂಬ ಊಟ ಮಾಡು'  ಎಂದರು.

ಆಮೇಲೆ ಜಿಯಾನನ್ನು ನೋಡಿ, `ಸಹೋದರ, ನೀವು ನಮ್ಮ ಹಾಗೆ ಬುದ್ಧನ ಶಿಷ್ಯರಲ್ಲವೇ. ನಿನಗೆ ಗೊತ್ತಿರಬೇಕಲ್ಲ, ಇಂದು ಉಪವಾಸದ ದಿನ. ನಾವೆಲ್ಲ ಸೇರಿ ಪ್ರಾರ್ಥನೆ ಮಾಡುತ್ತಿದ್ದೇವೆ. ತಾವೂ ದಯವಿಟ್ಟು ಬನ್ನಿ'  ಎಂದು ಅವನನ್ನು ಕರೆದುಕೊಂಡು ಹೊರಟರು. ಜಿಯಾನ ಕಣ್ಣು ಬೆಳ್ಳಗಾದವು! ಇದು ತಾವೊ  ಪರಂಪರೆಯ ಸುಂದರ ಕಥೆ. ಪ್ರಾಮಾಣಿಕತೆಯ ಫಲ ಯಾವಾಗಲೂ ದೊಡ್ಡದು. ಕೆಲವೊಮ್ಮೆ ಅಪ್ರಮಾಣಿಕತೆ ಜಯ ಪಡೆದ ಹಾಗೆ ತೋರುತ್ತದೆ. ಅದು ಶಾಶ್ವತವಾದದ್ದಲ್ಲ.

ಅಪ್ರಾಮಾಣಿಕತೆಯ ಪ್ರತಿಫಲ ಯಾವಾಗ, ಯಾವ ರೀತಿ ಬಡಿದೀತು ಎಂಬುದನ್ನು ಹೇಳುವುದು ಅಸಾಧ್ಯ. ಅಧಿಕಾರದ ಅಮಲು ನೆತ್ತಿಗೇರಿ ಕುಳಿತಾಗ ಅವರ ನಡೆಯನ್ನು ನೋಡಿ ಪ್ರಾಮಾಣಿಕತೆಗೆ ಬೆಲೆ ಇಲ್ಲ ಎಂದು ಕೆಲಕಾಲ ಅನ್ನಿಸುವುದುಂಟು. ಆದರೆ, ಅವರು ಮುಂದೆ ಕುಸಿದು ಕಂಗೆಟ್ಟು ಕುಳಿತಾಗ ಇದು ಅಂದಿನ ಅಪ್ರಾಮಾಣಿಕತೆಗೆ ದೊರೆತ ಫಲ ಎಂಬುದು ನೆನಪಾಗಬೇಕು. ಇದು ಎಲ್ಲ ಧರ್ಮಗಳಲ್ಲಿ, ನಂಬಿಕೆಗಳಲ್ಲಿ ಕಂಡುಬರುವ ಮೂಲತತ್ವ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT