ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ದಲೆಯ ಮುಚ್ಚುಗೆಯಲ್ಲಿ ತೆರೆಯುತ್ತದೆ ನಾದದ ಬಾಗಿಲು

ಅಕ್ಷರ ಗಾತ್ರ

`ನಮ್ಮ ದೇಶದಲ್ಲಿ ನಗುವುದೆಂದರೆ ಹೀಗೆ, ನಿಮ್ಮ ದೇಶದಲ್ಲಿ ಹೇಗೆ?' ಎಂದು ಅಮೆರಿಕದಲ್ಲಿ ಸಿಕ್ಕಿದ ವಿದೇಶಿ ಕಲಾವಿದರೊಬ್ಬರು ಮಾರ್ಮಿಕವಾಗಿ ಕೇಳಿದಾಗ ನಾನು ಸುಮ್ಮನೆ ನಕ್ಕೆ. ಎಲ್ಲ ದೇಶಗಳ ಜನರ ನಗು, ಅಳುಗಳು ವ್ಯಕ್ತವಾಗುವುದು ಮುಖದಲ್ಲಿಯೇ. ವ್ಯಕ್ತಿಗತವಾಗಿ ಅಭಿವ್ಯಕ್ತಿ ಭಿನ್ನವಾಗಬಹುದೇ ವಿನಾ ಉಳಿದಂತೆ ಎಲ್ಲರೂ ನಗುವುದೆಂದರೆ ನಗುವುದೇ, ಅಳುವುದೆಂದರೆ ಅಳುವುದೇ.

ಅಳುವುದನ್ನು ನಗುವುದೆಂದು, ನಗುವುದನ್ನು ಅಳುವುದೆಂದು ಕರೆಯುವ ಯಾವುದೇ ಸಂಸ್ಕೃತಿ ಈ ಜಗತ್ತಿನಲ್ಲಿಲ್ಲ. ಜನಜೀವನದಲ್ಲಿ ಸರಳವಾಗಿ ಹಾಸುಹೊಕ್ಕಾಗಿರುವ ಭಾವಗಳನ್ನೇ, ಸಂಜ್ಞೆಗಳನ್ನೇ ಸಂಕೀರ್ಣಗೊಳಿಸುತ್ತ ಆಯಾ ದೇಶದ, ಪ್ರದೇಶದ ಕಲೆಗಳು ವಿಕಸನಗೊಂಡಿರಬೇಕು. ಯಕ್ಷಗಾನ ತಂಡದೊಂದಿಗೆ ಊರಿನಿಂದ ಊರಿಗೆ, ದೇಶದಿಂದ ದೇಶಕ್ಕೆ ಸಂಚರಿಸುತ್ತಿರುವಾಗ ಅಲ್ಲಿ ನಡೆಯುತ್ತಿದ್ದ ಸಂವಾದಗಳು, ಎದುರಾಗುತ್ತಿದ್ದ ಸವಾಲುಗಳು ನನ್ನಲ್ಲಿ ಇಂಥ ಹೊಸ ಯೋಚನೆಗಳನ್ನು ಉದ್ದೀಪಿಸುತ್ತಿದ್ದವು.

ನಾಟ್ಯಶಾಸ್ತ್ರವನ್ನು, ರಸನಿಷ್ಪತ್ತಿಯ ತತ್ವಗಳನ್ನು ಓದಿ ಅರಿಯಲು ನನ್ನ ಅವಿದ್ಯೆ ಅಡ್ಡಿಯಾಗಿ, ಈ ಯೋಚನೆಗಳು ಕಚ್ಚಾಸ್ಥಿತಿಯಲ್ಲಿಯೇ ಉಳಿದು ಯಾರಲ್ಲಿ ಹೇಳಿಕೊಳ್ಳುವುದು ಎಂಬ ಪ್ರಶ್ನೆ ಎದುರಾದಾಗ ಫಕ್ಕನೆ ಹೊಳೆಯುತ್ತಿದ್ದವರು ಗುರುಗಳಾದ ಶಿವರಾಮ ಕಾರಂತರು. ಅವರು ಯಾವಾಗ ಯಾವ ಲಹರಿಯಲ್ಲಿರುತ್ತಾರೋ ಎಂಬ ಗಾಬರಿಯಾಗಿ ಸುಮ್ಮನಿರುವಾಗ ಫಕ್ಕನೆ ಮನಸ್ಸಿಗೆ ಬರುತ್ತಿದ್ದವರು ಎ.ವಿ. ಕೃಷ್ಣಮಾಚಾರ್ ಅವರು. ಕೃಷ್ಣಮಾಚಾರ್ ಶಾಸ್ತ್ರೀಯ ಸಂಗೀತದ ವಿದ್ವತ್ತಿನ ಜೊತೆಗೆ ಹಲವು ಕಲೆಗಳನ್ನು ಬಲ್ಲ ಸಹೃದಯರಾದುದರಿಂದ ಮತ್ತು ಯಕ್ಷಗಾನವನ್ನು `ನಿರ್ಮೋಹ'ದ ಕಣ್ಣುಗಳಿಂದ ನೋಡಬಲ್ಲವರಾದುದರಿಂದ ಅವರಲ್ಲಿ ಆತ್ಮೀಯವಾಗಿ ಮಾತನಾಡಿದ್ದಿದೆ. ಅವರು ಬಿಟ್ಟರೆ, ನೀಲಾವರ ರಾಮಕೃಷ್ಣಯ್ಯನವರು.

ಲಖನೌದಿಂದ ಬರುವಾಗಲೆಲ್ಲ ಕೂಡಿಯಾಟ್ಟಮ್ ಕಲಾವಿದರ ಚಲಿಸುತ್ತಿದ್ದ ದೃಷ್ಟಿಬಿಂಬಗಳೇ ನನ್ನ ಕಣ್ಣುಗಳನ್ನೂ ಆವರಿಸಿದಂತಾಗಿ ಅವರ ರಸಾಭಿವ್ಯಕ್ತಿಯ ಬೆಡಗು ಬೆರಗಾಗಿ ನನ್ನೊಳಗೆ ಕೂತಿತ್ತು. ಕೂಡಿಯಾಟ್ಟಮ್ ಮಾತ್ರವಲ್ಲ, ದೇಶದ ವಿವಿಧ ಕಲೆಗಳ ರಸಾಭಿವ್ಯಕ್ತಿಗೆ ಅವುಗಳದೇ ಆದ ಅನನ್ಯ ಮಾರ್ಗಗಳಿವೆಯಲ್ಲ ಎಂಬ ಆಲೋಚನೆಯೊಂದು ಅಸ್ಪಷ್ಟವಾಗಿ ನನ್ನನ್ನು ಕಾಡತೊಡಗಿತ್ತು. ಒಮ್ಮೆ ನೀಲಾವರ ರಾಮಕೃಷ್ಣಯ್ಯನವರಲ್ಲಿ ಹೇಳಿದೆ, `ಗುರುಗಳೇ, ಎಲ್ಲರೂ ರಸಾಭಿವ್ಯಕ್ತಿಗೆ ಅವರವರದೇ ಕ್ರಮಗಳನ್ನು ಅನುಸರಿಸುತ್ತಾರೆ.

ಯಕ್ಷಗಾನದವರಾದ ನಾವು ಮಾತ್ರ ಒಂದು ಹಾಡು ಮತ್ತು ಅದಕ್ಕೆ ಸರಿಯಾದ ಕುಣಿತವನ್ನು ಕಾಣಿಸುವುದರಲ್ಲಿ ಏಕೆ ಸೀಮಿತವಾಗಬೇಕು? ಆಯಾ ರಸಕ್ಕೆ ಸಂಬಂಧವಿದೆಯೆಂದು ಭಾವಿಸಲಾಗುವ ಸನ್ನಿವೇಶವನ್ನಷ್ಟೇ ಯಾಕೆ ಪ್ರದರ್ಶಿಸಬೇಕು? ಯಕ್ಷಗಾನದಲ್ಲಿ ರಸಪ್ರತಿಪಾದನೆಗೆ ಕೇವಲ ಪದ್ಯಾಭಿನಯದಾಚೆಗೆ ಯೋಚಿಸಲು ಸಾಧ್ಯವಿಲ್ಲವೆ?' ಹೀಗೆ. ನೀಲಾವರದ ಗುರುಗಳು ನನ್ನ ಮಾತಿನಲ್ಲಿ ಏನು ಅರ್ಥವಂತಿಕೆಯನ್ನು ಕಂಡರೋ, ಅಂತೂ ಅವರು ಶಿವರಾಮ ಕಾರಂತರಲ್ಲಿ ಈ ವಿಚಾರವನ್ನು ಹಂಚಿಕೊಳ್ಳಲು ಹಿಂಜರಿದರು. ಈ ಮಾತುಕತೆ ಎ.ವಿ. ಕೃಷ್ಣಮಾಚಾರ್ ಅವರತ್ತ ಚಾಚಿಕೊಂಡಿತು. ಕೃಷ್ಣಮಾಚಾರ್ ನಸುನಕ್ಕು ಹೇಳಿದರು...

ಅವರು ಹೇಳಿದುದರಲ್ಲಿ ನನ್ನ ಬುದ್ಧಿಗೆ ದಕ್ಕಿದಷ್ಟನ್ನು, ನನ್ನ ಸ್ಮೃತಿಯಲ್ಲಿ ಉಳಿದಿರುವಷ್ಟನ್ನು ಪುನರುಚ್ಚರಿಸುವುದಾದರೆ, `ಅಲ್ಲ ಸಂಜೀವಾ, ನಿಮ್ಮಲ್ಲಿ ಪದ್ಯಸಾಹಿತ್ಯವನ್ನು ಹಾಡುವುದು ಬಿಟ್ಟರೆ ಸ್ಪಷ್ಟವಾದ ರಾಗಬಳಕೆ ಇಲ್ಲ ನೋಡು, ಆರೋಹಣ, ಅವರೋಹಣಗಳಿಲ್ಲ. ಕುಣಿತದಲ್ಲಿ ಇದಮಿತ್ಥಂ ಇಲ್ಲ. ತಾಳವೊಂದು ಮಾತ್ರ ಗಟ್ಟಿಯಾಗಿದೆ. ಅದೊಂದನ್ನೇ ಇಟ್ಟುಕೊಂಡರೆ ಸಮಗ್ರ ಕಲೆಯೆನಿಸಲು ಸಾಧ್ಯವಿಲ್ಲವಲ್ಲ...'
`ನಾನೊಮ್ಮೆ ಯಕ್ಷಗಾನದ್ದೇ ಆದ ಹೆಜ್ಜೆಗಳನ್ನು, ಪೂರ್ವರಂಗದ ವೈವಿಧ್ಯಮಯ ಭಾಗಗಳನ್ನು ನಿಮ್ಮ ಮುಂದೆ ಪ್ರಸ್ತುತಪಡಿಸಬಹುದೆ?' ಎಂದು ವಿನಯದಿಂದ ಕೇಳಿದೆ. ಅವರು, `ಸರಿ' ಎಂದರು.

ಹೆಚ್ಚುಕಡಿಮೆ ಒಂದು ವಾರ ಅವರ ಮುಂದೆ ಕುಣಿದು, ವಿವಿಧ ಗುರುಗಳಿಂದ ಕಲಿತ ಅಪ್ಪಟ ಯಕ್ಷಗಾನದ್ದೇ ಆದ ಅಭಿನಯ, ಕರಚಲನ, ಪದಘಾತಗಳನ್ನು ತೋರಿಸಿದೆ. ನೀಲಾವರ ರಾಮಕೃಷ್ಣಯ್ಯರವರು ಭಾಗವತಿಕೆ ಮಾಡಿದರೆ, ಮಣೂರು ಮಹಾಬಲ ಕಾರಂತರು ಮದ್ದಲೆಯ ಸಾಥಿ ನೀಡಿದರು. `ಎಷ್ಟೆಲ್ಲ ಇದೆ' ಅಂತ ಕೃಷ್ಣಮಾಚಾರ್‌ರಿಗೆ ಅನ್ನಿಸಿರಬೇಕು.

ಅದಾಗಿ, ಶಿವರಾಮ ಕಾರಂತರಲ್ಲಿಯೂ ಹಂಚಿಕೊಳ್ಳಬೇಕು ಎಂಬ ತೀವ್ರ ತುಡಿತವಿದ್ದರೂ `ಏನನ್ನು?' ಎಂಬ ಪ್ರಶ್ನಾರ್ಥಕ ಚಿಹ್ನೆ ನನ್ನ ಮುಂದೆ ನಿಂತಂತಾಗಿ ಸುಮ್ಮನಾದೆ. ಯಕ್ಷಗಾನದ ರಸ ಸಂಗತಿ ಹಾಗೆಯೇ ಉಳಿಯಿತು...

ಹೀಗಿರುವಾಗಲೇ ನಮ್ಮ ತಂಡದ ರಥ ಮತ್ತೊಮ್ಮೆ ರಷ್ಯಾದತ್ತ ಮುಖಮಾಡಿ ನಿಂತಿತ್ತು. 1987. ಈ ಸಲ ರಷ್ಯಾದಲ್ಲಿ ಐತಿಹಾಸಿಕ ಮಹತ್ವದ `ಭಾರತ ಉತ್ಸವ'. ನಮ್ಮ ಸಂಸ್ಕೃತಿಯ ಶ್ರುತಿಯೂ ಅನೇಕ ದನಿಗಳೊಂದಿಗೆ ಐಕ್ಯಗೊಳ್ಳಬೇಕಲ್ಲ... ಚೆಂಡೆಯನ್ನು ಹೊರದೆಗೆದು ಶ್ರುತಿ ಹಿಡಿಯಬೇಕಲ್ಲ... ಮದ್ದಲೆಯ ಎಡಬಲಗಳನ್ನು ಪರೀಕ್ಷಿಸಬೇಕಲ್ಲ...
                                                                              *****
ಮದ್ದಲೆಯ ಎಡವೂ ಸರಿಯಾಗಿಲ್ಲ, ಬಲವೂ ಸರಿಯಾಗಿಲ್ಲ ಎಂದುಬಿಟ್ಟರು ಕೆಮ್ಮಣ್ಣು ಆನಂದರವರು. ಅವರಾದರೋ ಬಡಗುತಿಟ್ಟಿನ ಮೇರು ಪ್ರತಿಭೆಯ ಚೆಂಡೆವಾದಕ. ಚೆಂಡೆಕೋಲುಗಳನ್ನು ನನ್ನ ಕೈಯಲ್ಲಿ ಹಿಡಿಸಿದ ಗುರುಗಳೂ ಹೌದು, ಚೆಂಡೆ-ಮದ್ದಲೆಗಳ ಮುಚ್ಚುಗೆ ಹಾಕುವ ಕೌಶಲವನ್ನು ಕಲಿಸಿದ ಗುರುಗಳೂ ಹೌದು. ನಾನು ಹಾಕಿದ ಮುಚ್ಚುಗೆಗೆ ಅವರಿಂದ ಹೌದೆನ್ನಿಸಿಕೊಳ್ಳಬೇಕಾದರೆ ಸುಮಾರು ಮೂರು ತಿಂಗಳು ಹಿಡಿಯಿತು. ಅದೂ ಒಂದು ಕಥೆಯೇ.

ಎಂದಿಗೆ ನಾನು ಗೃಹಸ್ಥನಾಗಿ ಯಕ್ಷಗಾನ ಕೇಂದ್ರದ ಆಸರೆಯಲ್ಲಿ ಬಿಡಾರ ಹೂಡಿದೆನೋ ಆ ದಿನದಿಂದ ಸಂಸಾರ ನಿರ್ವಹಿಸುವ ಹೊಣೆಗಾರಿಕೆ ನನ್ನ ತಲೆಯ ಮೇಲೆ ಭಾರದ ಕಿರೀಟವಾಗಿ ನೆಲೆಯಾಯಿತು. ಬಂಧುಮಿತ್ರರ, ಕಲಾಭಿಮಾನಿಗಳ, ಗುರುಶಿಷ್ಯರ ಸಂಖ್ಯೆ ವೃದ್ಧಿಸುತ್ತಿದ್ದಂತೆ ಊಟದ ಹೊತ್ತಿಗೆ ಬಂದವರಿಗೆ ಇಲ್ಲವೆಂದು ಹೇಳಲಾಗದೆ ನಮಗೆ ಉಣ್ಣುವುದಕ್ಕೆ ಇಲ್ಲವಾಗಿದ್ದ ದಿನಗಳವು. ಸಂಭಾವನೆ ಸಿಗುವ ಅನ್ಯ ಆಟಗಳಿಗೆ ಹೋಗುವುದು ನಿಂತುಹೋಗಿ, ಗುರುವೃತ್ತಿಗೇ ಬದ್ಧನಾಗಿ ಇರಬೇಕಾದ ಸಂದರ್ಭದಲ್ಲೊಮ್ಮೆ ಯಕ್ಷಗಾನ ಕೇಂದ್ರಕ್ಕೆ ಬಂದಿದ್ದ ಕೆಮ್ಮಣ್ಣು ಆನಂದರವರು, `ಮುಚ್ಚುಗೆ ಹಾಕಿಕೊಡುವ ಚೆಂಡೆ-ಮದ್ದಲೆಗಳನ್ನು ಅವರಿವರಿಂದ ಸಂಗ್ರಹಿಸುವ ಸಾಮರ್ಥ್ಯ ನಿನಗುಂಟಾ? ಹಾಗಿದ್ದರೆ, ನಾನೇ ನಿನಗೆ ಚೆಂಡೆ-ಮದ್ದಲೆಯ ಮುಚ್ಚುಗೆ ಹಾಕುವುದನ್ನು ಕಲಿಸಿಕೊಡುತ್ತೇನೆ' ಎಂದರು. ಈ ವ್ಯವಹಾರ ನನಗೆ ಆರ್ಥಿಕ ಸಂಕಷ್ಟವನ್ನು ಕೊಂಚ ಹಗುರವಾಗಿಸಬಲ್ಲುದು ಎಂಬ ವಿಶ್ವಾಸದಲ್ಲಿ ಹಿಂದೆಮುಂದೆ ನೋಡದೆ, `ಸರಿ' ಎಂದೆ.

ಆಸುಪಾಸಿನ ಹವ್ಯಾಸಿ ಸಂಘ ಸಂಸ್ಥೆಗಳ ಮಂದಿಗೆ, `ನಿಮ್ಮ ಚೆಂಡೆಮದ್ದಲೆಗಳನ್ನು ಮುಚ್ಚುಗೆ ಹಾಕಬೇಕಿದ್ದರೆ ನನ್ನಲ್ಲಿಗೆ ತನ್ನಿ' ಎಂಬ ಸಂದೇಶವನ್ನು ರವಾನಿಸಿದೆ. ಕೆಮ್ಮಣ್ಣು ಆನಂದರವರು ತಮ್ಮ ಊರ ಸಮೀಪದ ಮೂಲವಾಸಿ ಸಮುದಾಯದವರ ಮನೆಗಳಿಗೆ ಕರೆದೊಯ್ದರು. ನಾವು ಹೋದಾಗ ಅಲ್ಲಿ ಅಗಲವಾದ ತೊಗಲನ್ನು ಒಣಹಾಕಿದ್ದರು. ಅದರ ಗುಣಮಟ್ಟ ಚೆನ್ನಾಗಿದೆ ಅನ್ನಿಸಿ ಅದನ್ನು ಕೊಂಡುತರುವ ಉದ್ದೇಶದಿಂದ ಬೆಲೆ ಕೇಳಿದರೆ, `65 ರೂಪಾಯಿ' ಎಂದರು. ಅಷ್ಟು ದುಡ್ಡು ಇಬ್ಬರಲ್ಲಿಯೂ ಇರಲಿಲ್ಲ. ಹೋದ ಹಾಗೆಯೇ ವಾಪಸು. ಮತ್ತೆರಡು ದಿನಗಳು ಕಳೆದ ಬಳಿಕ ಅಷ್ಟು ಮೊತ್ತವನ್ನು ಸಂಪಾದಿಸಿ ನಾನೊಬ್ಬನೇ ಮೂಲವಾಸಿಗಳ ಕೇರಿಗೆ ತೆರಳಿ, ಬೆಲೆ ತೆತ್ತು ತೊಗಲಿನ ದೊಡ್ಡ ಹಾಳೆಯನ್ನು ತಂದೆ.

ಆಮೇಲೊಮ್ಮೆ ಬಂದಿದ್ದ ಕೆಮ್ಮಣ್ಣು ಆನಂದರವರು, `ಇದಾಗದು, ಇದರಲ್ಲಿ ರೋಮಗಳು ಹಾಗೆಯೇ ಉಳಿದುಕೊಂಡಿವೆ. ಅದನ್ನು ತೆಗೆಸಿದ ಮೇಲೆ ನೋಡುವಾ' ಎಂದು ಹೋಗಿಬಿಟ್ಟರು. ಅದನ್ನು ಮತ್ತೆ ಗುರುವ ಎಂಬ ಮಿತ್ರರೊಬ್ಬರ ಮನೆಗೆ ಒಯ್ದು, ಒಲೆಯ ಬೂದಿಯನ್ನು ಹಾಳೆಯ ಮೇಲೆಲ್ಲ ಸವರಿ, ಬಿದಿರಿನ ಶಲಾಕೆಯ ಒಂದು ತುದಿಯನ್ನು ಹರಿತಗೊಳಿಸಿ, ತೊಗಲಿನಿಂದ ಕೂದಲುಗಳನ್ನು ಕೆರೆದು ತೆಗೆದು ಸಪಾಟುಗೊಳಿಸುವ ಕೆಲಸವನ್ನೂ ಕಲಿತದ್ದಾಯಿತು. ಮತ್ತೆ ಬಂದ ಕೆಮ್ಮಣ್ಣು ಆನಂದರವರು, `ಈ ಚರ್ಮದ ಗುಣಮಟ್ಟ ಚೆನ್ನಾಗಿಲ್ಲ, ಮುಚ್ಚುಗೆಗೆ ಆಗದು' ಎಂದವರೇ ಅದನ್ನು ಹಲವಾಗಿ ಸೀಳಿ, ವಾದನ ಸಾಮಗ್ರಿಯ ಎರಡು ಬದಿಯ ಮುಚ್ಚುಗೆಗಳನ್ನು ಎಳೆದುಕಟ್ಟುವ `ಬಾರ'ಗಳಾಗಿ ಮಾಡಿಬಿಟ್ಟರು. ಅದನ್ನು ತೆಂಗಿನಮರಕ್ಕೋ ಅಡಿಕೆಮರಕ್ಕೋ ಕಟ್ಟಿ ನೇರ್ಪುಗೊಳಿಸುವುದನ್ನೂ ಹೇಳಿಕೊಟ್ಟರು. ಆ ಬಳಿಕ, ಹಲವು ದಿನ ನಾನೊಬ್ಬನೇ ಕೊರಗ ಮಿತ್ರರ ಕೇರಿಯಿಡೀ ಹುಡುಕಾಡಿ ಚರ್ಮದ ತುಂಡನ್ನು ಸಂಗ್ರಹಿಸಿ ತಂದೆ.

ಇನ್ನು ಶುರುವಾಯಿತು ನೋಡಿ, ಮದ್ದಲೆ ಮುಚ್ಚುಗೆಯ ಪಾಠ. ಮದ್ದಲೆಯ ಬಲಭಾಗದಲ್ಲಿ ಎಷ್ಟು ಕವಚಗಳಿವೆ, `ಕಟ್ಟು ಕವಳೆ' ಎಂದರೇನು, ಅದರ ಮೇಲಿನ `ಜೀವ ಕವಳೆ' ಎಂದರೇನು, ಅದರ ಮೇಲಿನ `ಒತ್ತು ಕವಳೆ' ಎಂದರೇನು... ಹೀಗೆ. ಜೀವಕೌಳದ ಗುಣಮಟ್ಟ ಮದ್ದಲೆಗೆ ಹೇಗೆ ಸಹಜ ನಾದಮಾಧುರ್ಯವನ್ನೊದಗಿಸುತ್ತದೆ ಎಂಬುದನ್ನು ವಿವರಿಸುತ್ತ, ಚರ್ಮವನ್ನು ಹೇಗೆ ಆರಿಸಬೇಕು, ದನದ, ಆಡಿನ, ಎಮ್ಮೆಯ ಚರ್ಮಪ್ರಕೃತಿಯ ವ್ಯತ್ಯಾಸಗಳೇನು? ಯಾವ ವಾದನ ಸಾಮಗ್ರಿಗೆ ಯಾವುದರ ಚರ್ಮವನ್ನು ಬಳಸಬೇಕು- ಈ ಎಲ್ಲವನ್ನೂ ಒಂದೊಂದಾಗಿ ಹೇಳಿಕೊಡುತ್ತ ಹೋದರು.

ಮರದ ಕಳಸಿಗೆಯ ಬಲಬದಿಯಲ್ಲಿ ಮೂರು ಹಂತದಲ್ಲಿ ಚರ್ಮವನ್ನು ಹಾಸುವುದು ಹೇಗೆ? ಮೊದಲ ಹಂತದಲ್ಲಿಯೇ ಧೋಕಾರದಂಥ ನಾದಗಳನ್ನು ನಿಯಂತ್ರಿಸುವುದು ಹೇಗೆ? ಅಡ್ಡಿಗೆಯೆಂಬ ವೃತ್ತದ ಸುತ್ತ ಮೂವತ್ತೆರಡು ಕಟ್ಟುಗಳನ್ನು ಬಿಗಿದು ಮೂರು ಕವಚಗಳನ್ನು ಒಂದಕ್ಕೊಂದು ಕಟ್ಟಿಬಿಡುವುದು ಹೇಗೆ? ಎಡಭಾಗ ಬಲಭಾಗಕ್ಕಿಂತ ಹೇಗೆ ಭಿನ್ನವಾಗಿರಬೇಕು- ಈ ಮುಂತಾದ ವಿಷಯಗಳಿಂದ ತೊಡಗಿ ಕರ್ಣ, ಬೋನಗಳನ್ನು ಬಳಸುವ, ಸರಸ್ವತೀಗಂಟನ್ನು ಬಿಗಿಯುವವರೆಗಿನ ಸೂಕ್ಷ್ಮಗಳನ್ನು ತೆರೆದಿಟ್ಟರು. ಚೆಂಡೆ-ಮದ್ದಲೆಗಳಿಗೆ ಮುಚ್ಚುಗೆ ಹಾಕುವ ಕೌಶಲ ಎಂದಿಗೆ ನನಗೆ ಸಿದ್ಧಿಸಿತೊ ಅಂದಿನಿಂದ ನನ್ನ ಮನೆಯಲ್ಲಿ ರಿಪೇರಿಗಾಗಿ ಚೆಂಡೆ-ಮದ್ದಲೆಗಳು ರಾಶಿ ಬೀಳತೊಡಗಿದವು. 1989ರ ದಿನಗಳವು. ಒಂದೊಂದು ದಿನ ಒಂದು ಸಾವಿರ ರೂಪಾಯಿ ನನ್ನ ಕೈಗೆ ಬಂದದ್ದಿದೆ. ಅಂತೂ ನನ್ನ ತತ್ಕಾಲೀನ ಆರ್ಥಿಕ ಸಮಸ್ಯೆ ದೂರವಾಯಿತು.

ಮದ್ದಲೆಯ ಮಧುರ ನಾದವನ್ನು ಕೇಳಿದಾಗಲೆಲ್ಲ ಅದನ್ನು ನುಡಿಸುವ ವ್ಯಕ್ತಿಯನ್ನು ಪ್ರಶಂಸಿಸುತ್ತೇವೆ. ಆದರೆ, ಅಂಥ ನಾದವನ್ನು ಹೊರಹೊಮ್ಮಿಸುವಂತೆ ಸಿದ್ಧಗೊಳಿಸಲು ಶ್ರಮಿಸಿದ ಕೈಗಳು ಮರೆಯಲ್ಲಿಯೇ ಉಳಿದುಬಿಡುತ್ತವೆ. ಚೆಂಡೆ- ಮದ್ದಲೆಗೆ ಚರ್ಮದ ಮುಚ್ಚುಗೆ ಹಾಸುವುದೂ ಒಂದು ರೀತಿಯ `ಕಲೆ'ಯೇ ಎಂಬುದನ್ನು ಸೂಚಿಸುವುದಕ್ಕಷ್ಟೇ ಮೇಲಿನ ವಿವರಗಳನ್ನು ನಿಮ್ಮಲ್ಲಿ ಹಂಚಿಕೊಂಡಿದ್ದೇನೆ.
ಮನೆಯ ಪಕ್ಕಾಸುಗಳಿಗೆ ನೇತು ಹಾಕಿದ ಚರ್ಮದ ತುಂಡುಗಳ ದುರ್ಗಂಧದಿಂದ ನನ್ನ ಹೆಂಡತಿ ಮೊದಮೊದಲು ರೇಜಿಗೆ ಪಟ್ಟದ್ದಿದೆ

 ಜಾನುವಾರುಗಳ ಚರ್ಮದ ಸಂಗ್ರಹದಿಂದ ತೊಡಗಿ, ಕರ್ಣ ಹಾಕುವವರೆಗಿನ ದೀರ್ಘಾವಧಿಯ ಕೆಲಸ ತುಂಬ ಶ್ರಮವನ್ನು ಬಯಸುತ್ತಿತ್ತು. ಆದರೆ, ಸಿದ್ಧಗೊಂಡ ಮದ್ದಲೆ ನಿರೀಕ್ಷಿಸಿದ ತಾಂಕಾರವನ್ನು ಹೊರಹೊಮ್ಮಿಸಿದರೆ ಪಟ್ಟಕಷ್ಟವೆಲ್ಲ ಮರೆತು ಹೋಗಿ ಉಲ್ಲಾಸವೆನಿಸುತ್ತಿತ್ತು. ನಿರ್ಜೀವ ತೊಗಲನ್ನು ಮರದ ಕಳಸಿಗೆಗೆ ಮುಚ್ಚಿ, ಬೆರಳಿನಲ್ಲಿ ನಾದದ ಬಾಗಿಲನ್ನು ತೆರೆಯುವ ನನ್ನ ಕರಚಳಕಕ್ಕೆ ನಾನೇ ವಿಸ್ಮಯಪಡುತ್ತ ಆನಂದವನ್ನು ಅನುಭವಿಸುತ್ತಿದ್ದೆ.
                                                                              *****

ಆನಂದವೆಂದೆನೆ? ಅಲ್ಲ, ಅದೊಂದು ವಿಸ್ಮಯ! ಯಕ್ಷಗಾನವನ್ನು ಮಾಧ್ಯಮವಾಗಿಸಿ ತಮ್ಮಳಗಿನ ಅಭಿನಯ ಪ್ರತಿಭೆಯನ್ನು ಅಭಿವ್ಯಕ್ತಿಸುವ ಶಿವರಾಮ ಕಾರಂತರ ವ್ಯಕ್ತಿತ್ವ ಒಂದು ವಿಸ್ಮಯವಲ್ಲದೆ ಇನ್ನೇನು! ರಂಗತಾಲೀಮಿಗಾಗಿ ನಾವೆಲ್ಲ ಸಿದ್ಧರಾಗಿರುವಾಗ ಅವರು ಕಾರಿನಿಂದಿಳಿದು ಬರುತ್ತಿದ್ದಾರೆಂದರೆ, ಅಂದಿನ ಕಥಾಭಾಗದ ಪಾತ್ರಗಳನ್ನು ತಮ್ಮಳಗೆ ಆವಾಹಿಸಿಕೊಂಡಿದ್ದಾರೆಂದೇ ಅರ್ಥ. ಒಮ್ಮೆ ಹೀಗಾಯಿತು. ನೇರವಾಗಿ ಬಂದವರೇ, `ಹಾಂ ಶುರು ಮಾಡಿ' ಎಂದರು. ಅಲ್ಲಿಯೇ ನಿಂತಿದ್ದ ಕಲಾವಿದರೊಬ್ಬರ ಬೆನ್ನಿಗೆ ತಟ್ಟಿ `ಹಾಂ ಹೀಗೆ ಮಾಡು' ಎಂದು ಬಾಹುಕನ ಅಭಿನಯವನ್ನು ಹೇಳಿಕೊಡತೊಡಗಿದರು

 ಆ ಕಲಾವಿದರು ತಡಕಾಡಿದಾಗ ಮತ್ತೆ ಬೆನ್ನಿಗೆ ತಟ್ಟಿ, `ಯಾಕೆ ಸರಿಯಾಗಿ ಅಭಿನಯಿಸುವುದಕ್ಕಾಗುವುದಿಲ್ಲವಾ?' ಎಂದು ಗದರಿಸಿದರು. ಅಲ್ಲಿ ಕುಳಿತಿದ್ದ ಯಾರಿಗೂ `ನಿಜ' ವನ್ನು ಹೇಳುವ ಧೈರ್ಯವಿಲ್ಲ; ನನಗೂ! ಸುಮಾರು ಒಂದು ಗಂಟೆಯ ಬಳಿಕ, ವಿರಮಿಸಲು ಅವರು ಕುರ್ಚಿಯಲ್ಲಿ ಕುಳಿತಾಗ ನಾನು ಮೆಲ್ಲನೆ, `ಗುರುಗಳೇ, ಅವರು ಬಾಹುಕ ಪಾತ್ರ ಮಾಡುವವರಲ್ಲ, ಆ ಪಾತ್ರ ಮಾಡುವ ಕಲಾವಿದರು ಬೇರೆ ಇದ್ದಾರೆ' ಎಂದಾಗ, ಕಾರಂತರು ಮತ್ತಷ್ಟು ಸಿಟ್ಟಿನಿಂದ, `ಮತ್ತೆ ಆಗಲೇ ನೀವ್ಯಾಕೆ ಹೇಳಲಿಲ್ಲ?' ಎಂದಾಗ ನಾನು ಸುಮ್ಮನಾದೆ. ಮೇಲ್ನೋಟಕ್ಕೆ ಸಿಟ್ಟುಸಿಡುಕುಗಳ ಮೂರ್ತಿಯಂತೆ ಕಾಣುತ್ತಿದ್ದ ಅವರು ಆಂತರ್ಯದಲ್ಲಿ ಎಂಥ ಭಾವಜೀವಿಯಾಗಿದ್ದರು ಎಂಬುದು ಅನೇಕ ಬಾರಿ ನನ್ನ ಅನುಭವಕ್ಕೆ ಬಂದಿತ್ತು.

ಲಂಡನ್‌ನಲ್ಲೊಮ್ಮೆ ಮತ್ತೂರು ಕೃಷ್ಣಮೂರ್ತಿಯವರು, ಡಾ. ನಂದಕುಮಾರರು, ಶಿವರಾಮ ಕಾರಂತರಲ್ಲಿ , `ನೀವು ಏಕವ್ಯಕ್ತಿ ಅಭಿನಯ ಪ್ರದರ್ಶಿಸುವಂತಾದರೆ, ನಾವು ನೋಡಿ ಆನಂದಿಸುತ್ತಿದ್ದೆವು, ಅಲ್ಲದೆ, ದೃಶ್ಯದಾಖಲೆ ಕೂಡ ಮಾಡಬಹುದಿತ್ತು' ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಶಿವರಾಮ ಕಾರಂತರು `ಸರಿ' ಎಂದರು. `ಸತ್ಯವಾನ್- ಸಾವಿತ್ರಿ' ಆಖ್ಯಾನ. ಸಾವಿತ್ರಿಯ ಪಾತ್ರವೂ ಅವರದೇ, ಸತ್ಯವಾನನಾಗಿ ಕಾಣಿಸಿಕೊಳ್ಳುವವರು ಅವರೇ. ಅಭಿನಯಿಸುತ್ತ ಹಾಡುವವರು ಕಾರಂತರೇ. ಹಾಡಿಗೆ ಪೂರಕವಾಗಿ ಹಿನ್ನೆಲೆಯಲ್ಲಿ ಎ.ವಿ. ಕೃಷ್ಣಮಾಚಾರ್ ಅವರ ವಯಲಿನ್ ನಿನಾದ ಮಾತ್ರ. ಆದರೆ, ಕಾರಂತರು ಸತ್ಯವಾನನಾದಾಗ ಸಾವಿತ್ರಿಯಾಗಲು, ಸಾವಿತ್ರಿಯಾಗುವಾಗ ಸತ್ಯವಾನನಾಗಿ ಪ್ರತಿಕ್ರಿಯೆ ನೀಡಲು ಒಬ್ಬ ಕಲಾವಿದ ಬೇಕಾಗಿತ್ತು. `ಸಂಜೀವಾ, ನೀನೇ ಮಾಡು' ಎಂದರು.

ಅವರು ಹೇಳಿಕೊಟ್ಟಂತೆಯೇ ನಾನು ಆ ಎರಡೂ ಪಾತ್ರಗಳನ್ನು ನಿರ್ವಹಿಸಿದೆ. ಅದೊಂದು ಕ್ಷಣ ನಾನು ಸತ್ಯವಾನನಾಗಿ ಯಮನ ಪಾಶಕ್ಕೆ ಸಿಲುಕಿ ನೆಲದಲ್ಲಿ ಒರಗಿದ್ದಾಗ, ಸಾವಿತ್ರಿಯ ಪರಕಾಯ ಪ್ರವೇಶ ಮಾಡಿದಂತಿದ್ದ ಶಿವರಾಮ ಕಾರಂತರು ಎಷ್ಟೊಂದು ತೀವ್ರವಾಗಿ ಅಭಿನಯಿಸಿದರೆಂದರೆ ನಿಶ್ಚೇಷ್ಟಿತನಾಗಿ ಮಲಗಬೇಕಾಗಿದ್ದ ನನ್ನ ಕಣ್ಣುಗಳಿಂದ ಹನಿಗಳು ಉರುಳಿದ್ದವು. ಕೃಷ್ಣಮಾಚಾರ್ ಅವರ ವಯಲಿನ್‌ನಿಂದ ಹೊರಹೊಮ್ಮುತ್ತಿದ್ದ ಆರ್ದ್ರ ಸ್ವರ ಆ ಸನ್ನಿವೇಶವನ್ನು ಇನ್ನಷ್ಟು ಆರ್ದ್ರಗೊಳಿಸುತ್ತಿತ್ತು.

ನನಗೆ ದೇಶವಿದೇಶದ ಕಲೆಗಳೊಂದಿಗೆ, ಕಲಾವಿದರೊಂದಿಗೆ ಒಡನಾಡಿದ ಕಿಂಚಿತ್ ಅನುಭವವಿದ್ದುದರಿಂದ ಕಾರಂತರು ಭಾವಿಸಿದ್ದನ್ನು ಗ್ರಹಿಸಿ ಅವರ ಮನೋಧರ್ಮಕ್ಕೆ ಸರಿಯಾಗಿ ಅಭಿನಯಿಸಲು ಪ್ರಯತ್ನಿಸುತ್ತಿದ್ದೆ. ಹಾಗಾಗಿ, ಅವರೊಂದಿಗೆ ಪೋಷಕಪಾತ್ರವಾಗುವ ಹಲವು ಅವಕಾಶಗಳು ನನಗೆ ದಕ್ಕಿದ್ದವು. ಎಲ್ಲಕ್ಕಿಂತ ಹೆಚ್ಚಾಗಿ ಈಗಲೂ ನನ್ನ ಮನಸ್ಸಿಗೆ ಬರುವುದು ಅಂದಿನ ಸತ್ಯವಾನ- ಸಾವಿತ್ರಿ ಆಖ್ಯಾನದ ಅಭಿನಯವೇ. ಸಾವು- ಬದುಕಿನ ಸಂಘರ್ಷವನ್ನು ಅವರು ಬಿಂಬಿಸಿದ ರೀತಿ ಇವತ್ತಿಗೂ ನನಗೊಂದು ಪಾಠದಂತಿದೆ.
                                                                           *****
ಹಾಗೆ, ನೋಡಿದರೆ ಬದುಕಿಗೂ ಸಾವಿಗೂ ಕೂದಲೆಳೆಯ ಅಂತರ! 1984 ಡಿಸೆಂಬರ್ ತಿಂಗಳ ಮೊದಲ ದಿನ ಪ್ರದರ್ಶನವನ್ನು ಮುಗಿಸಿ ಇನ್ನೇನು ಊರಿಗೆ ಹೊರಡಲನುವಾಗಿದ್ದೆವು. ಆದರೆ, ರೈಲಿನ ಟಿಕೆಟ್ ಪಕ್ಕಾ ಆಗಿರಲಿಲ್ಲ.

ಎಲ್ಲಿಂದ ಎಂದು ಕೇಳುತ್ತೀರಾ?
ಭೋಪಾಲ್‌ನ ಯೂನಿಯನ್ ಕಾರ್ಬೈಡ್ ಇಂಡಿಯಾ ಲಿಮಿಟೆಡ್ ಕಾರ್ಖಾನೆಯ ಅನತಿ ದೂರದಲ್ಲಿದ್ದ ಗೆಸ್ಟ್‌ಹೌಸ್‌ನಿಂದ! ಆ ಮಹಾದುರಂತದ ಮುನ್ನಾ ದಿನ... 
(ಸಶೇಷ)
ನಿರೂಪಣೆ: ಹರಿಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT