ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಬೈಲ್‌ ಕರೆ ಕಡಿತದ ಕಿರಿಕಿರಿಯ ಹಿಂದೆ

Last Updated 5 ಜನವರಿ 2016, 19:46 IST
ಅಕ್ಷರ ಗಾತ್ರ

ಮೊಬೈಲ್‌ನಲ್ಲಿ ಮಾತನಾಡುತ್ತಿರುವಾಗ ಇದ್ದಕ್ಕಿದ್ದಂತೆಯೇ ಆಚೆ ಬದಿಯಿಂದ ಮಾತನಾಡುತ್ತಿರುವವರ ಧ್ವನಿ ಕೇಳಿಸಿದಂತಾಗುತ್ತದೆ. ನಾವು ‘ಹಲೋ ಹಲೋ’ ಎಂದು ಆಚೆಯವರು ಇದ್ದಾರೆಯೇ ಎಂದು ಖಾತರಿ ಪಡಿಸಿಕೊಳ್ಳುವ ಪ್ರಯತ್ನದಲ್ಲಿರುವಾಗಲೇ ಸಂಪರ್ಕ ಕಡಿತಗೊಂಡದ್ದು ನಮಗೆ ಅರಿವಾಗುತ್ತದೆ. ಭಾರತದ ಹೆಚ್ಚಿನ ಎಲ್ಲಾ ಮೊಬೈಲ್ ಗ್ರಾಹಕರು ಪ್ರತಿನಿತ್ಯ ಎದುರಿಸುವ ಸಮಸ್ಯೆ ಇದು.

ಮೊದ ಮೊದಲಿಗೆ ಇದು ಧ್ವನಿ ಸಂಕೇತಗಳನ್ನು ಮೊಬೈಲ್‌ಗೆ ತಲುಪಿಸುವ ಟವರ್‌ಗಳ ವೈಫಲ್ಯ ಎಂದು ಭಾವಿಸಿ ಮತ್ತೊಮ್ಮೆ ಕರೆ ಮಾಡಲು ಮುಂದಾಗುತ್ತಿದ್ದೆವು. ಆದರೆ ಬರಬರುತ್ತಾ ಹೀಗೆ ಕರೆ ಮಾಡುವ ಪ್ರಯತ್ನವೂ ವಿಫಲವಾಗ ತೊಡಗಿತು. ಇದೇನಪ್ಪಾ ಹೊಸ ಸಮಸ್ಯೆ ಎಂದು ಮೊಬೈಲ್ ಗ್ರಾಹಕರು ತಲೆಕೆಡಿಸಿಕೊಳ್ಳುವ ಹೊತ್ತಿಗಾಗಲೇ ಸ್ವತಃ ದೂರಸಂಪರ್ಕ ಖಾತೆಯ ಸಚಿವರೇ ಇದರ ಬಗ್ಗೆ ಮಾತನಾಡಲು ತೊಡಗಿದರು.

ಪ್ರಧಾನ ಮಂತ್ರಿಯವರು ತಮ್ಮ ಮಹತ್ವಾಕಾಂಕ್ಷೆಯ ಡಿಜಿಟಲ್ ಇಂಡಿಯಾ ಯೋಜನೆಯನ್ನು ಅನಾವರಣಗೊಳಿಸುವುದಕ್ಕೂ ಈ ಕರೆ ಕಡಿತದ ಸಮಸ್ಯೆ ತಾರಕಕ್ಕೇರುವುದೂ ಹೆಚ್ಚು ಕಡಿಮೆ ಒಟ್ಟೊಟ್ಟಿಗೇ ಸಂಭವಿಸಿತು. ಮೊಬೈಲ್ ಫೋನ್‌ನಲ್ಲಿ ಧ್ವನಿ ಕರೆಗಳೇ ಹೀಗೇ ಎರ್ರಾಬಿರ್ರಿ ಕಡಿತಗೊಳ್ಳುತ್ತಿರುವ ಹೊತ್ತಿ
ನಲ್ಲಿ ಇಂಟರ್ನೆಟ್ ಸಂಪರ್ಕ ಕಲ್ಪಿಸುವ ದತ್ತಾಂಶ ಸಂಕೇತಗಳ ಸಂವಹನವಂತೂ ಅಸಾಧ್ಯವೇ ಸರಿ. ಪ್ರಖ್ಯಾತ ಮೊಬೈಲ್ ಸೇವಾ ಕಂಪೆನಿಯೊಂದರ ‘2ಜಿ ದರದಲ್ಲಿ 4ಜಿ ಸಂಪರ್ಕ’ ಎಂಬ ಜಾಹೀರಾತಿನ ಬಗ್ಗೆಯೇ ಒಂದು ಜೋಕ್ ಹುಟ್ಟಿಕೊಂಡಿತು ‘2ಜಿ ದರದಲ್ಲಿ 4ಜಿ ಸಂಪರ್ಕ. 1ಜಿ ವೇಗ ಮತ್ತು ಸಂಪರ್ಕ ಜಾಲದಲ್ಲಿ....’ . ಹಾಗೆಯೇ ‘ಹಿಂಬಾಲಿಸುವುದು ನೆಟ್ ವರ್ಕ್ ಅಲ್ಲ ನಾಯಿ’ ಎಂಬ ಮತ್ತೊಂದು ಜೋಕ್ ಕೂಡಾ ಪ್ರಖ್ಯಾತವೇ!

‘ಡಿಜಿಟಲ್ ಇಂಡಿಯಾ’ ಯೋಜನೆಯ ಯಶಸ್ಸು ಉತ್ತಮ ಇಂಟರ್‌ನೆಟ್‌ ಸಂಪರ್ಕವನ್ನು ಅವಲಂಬಿಸಿದೆ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿರುವಂತೆ ನಮ್ಮಲ್ಲಿ ಬಹು ವಿಸ್ತಾರವಾದ ಬ್ರಾಡ್‌ಬ್ಯಾಂಡ್ ಸಂಪರ್ಕ ಜಾಲವಿಲ್ಲ. ಭಾರತದ ಬಹುತೇಕರು ಇಂಟರ್‌ನೆಟ್‌ ಎಂಬುದನ್ನು ಮೊಟ್ಟ ಮೊದಲ ಬಾರಿಗೆ ಕಂಡದ್ದೇ ಮೊಬೈಲ್ ಫೋನ್ ಮೂಲಕ.

ಅದಕ್ಕೂ ಮಿಗಿಲಾಗಿ ಒಂದು ಶತಕೋಟಿ ಮೊಬೈಲ್ ಸಂಪರ್ಕಗಳಿರುವ ದೇಶ ಎಂಬ ಹೆಗ್ಗಳಿಕೆಯೂ ನಮಗಿದೆ. ಈ ಎಲ್ಲಾ ಕಾರಣಗಳಿಂದ ಅತ್ಯುತ್ತಮ ಮೊಬೈಲ್ ಸಂಪರ್ಕ ಜಾಲವಿದ್ದರಷ್ಟೇ ಡಿಜಿಟಲ್ ಇಂಡಿಯಾದಂಥ ಮಹತ್ವಾಕಾಂಕ್ಷೆಯ ಯೋಜನೆ ಉದ್ದೇಶಿತ ಗುರಿಯನ್ನು ತಲುಪುವುದಕ್ಕೆ ಸಾಧ್ಯ.
ಈ ಕಾರಣದಿಂದಾಗಿ ಸರ್ಕಾರ ಸ್ವಲ್ಪ ಕಟುವಾಗಿಯೇ ಮಾತನಾಡತೊಡಗಿತು. ಬಗಲಲ್ಲಿ ದೊಣ್ಣೆಯಿಟ್ಟುಕೊಂಡೇ ಶಾಂತಿ ಮಂತ್ರವನ್ನು ಜಪಿಸುವ ತಂತ್ರವಿದು.

ಟ್ರಾಯ್ ಕೂಡಾ ಕರೆಕಡಿತಗಳಿಗೆ ದಂಡ ವಿಧಿಸುವ ಪ್ರಸ್ತಾಪವನ್ನು ಮುಂದಿಟ್ಟು ಅದರ ಜಾರಿಗೂ ಸಿದ್ಧವಾಯಿತು. ಟೆಲಿಕಾಂ ಕಂಪೆನಿಗಳು ಸದ್ಯಕ್ಕೆ ಇದರ ವಿರುದ್ಧ ನ್ಯಾಯಾಲಯದ ಮೆಟ್ಟಿಲು ಏರಿ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಿವೆ. ಜನವರಿ 6ರ ಬುಧವಾರದಂದು ದೆಹಲಿ ಹೈಕೋರ್ಟ್‌ನಲ್ಲಿ ನಡೆಯಲಿರುವ ವಿಚಾರಣೆ ಟ್ರಾಯ್‌ನ ದಂಡ ವಿಧಿಸುವ ಪ್ರಸ್ತಾಪದ ಭವಿಷ್ಯವವನ್ನು ನಿರ್ಧರಿಸುವ ಸಾಧ್ಯತೆ ಇದೆ.

ಡಿಜಿಟಲ್ ಜಗತ್ತಿಗೆ ಸಂಬಂಧಿಸಿದಂತೆ ‘ಕಾಲ್ ಡ್ರಾಪ್’ ಅಥವಾ ಕರೆ ಕಡಿತ ಕಳೆದ ವರ್ಷದ ದೊಡ್ಡ ಸಮಸ್ಯೆ. ಆದರೆ ಫೇಸ್‌ಬುಕ್ ‘ಡಿಜಿಟಲ್ ಸಮಾನತೆ’ಗಾಗಿ ನಡೆಸಿದ ‘ಪ್ರಚಾರಾಂದೋಲನ’ ಮತ್ತು ಅದಕ್ಕೆ ವಿರುದ್ಧವಾಗಿ ಅಲಿಪ್ತ ಜಾಲದ ಬೆಂಬಲಿಗರು ನಡೆಸಿದ ಪ್ರತಿ ಆಂದೋಲನ, ಸ್ಯಾಟಲೈಟ್ ಟಿ.ವಿ.ಯ ಡಿಜಿಟಲೀಕರಣ ಮತ್ತೊಂದು ಹಂತಕ್ಕೆ ವಿಸ್ತರಿಸಿಕೊಂಡದ್ದರ ಮಧ್ಯೆ ಮೊಬೈಲ್ ಬಳಕೆದಾರರು ಪ್ರತಿನಿತ್ಯ ಎದುರಿಸುತ್ತಿದ್ದ ಸಮಸ್ಯೆಯ ಕುರಿತಂತೆ ದೊಡ್ಡ ಚರ್ಚೆಯೇ ನಡೆಯಲಿಲ್ಲ. ಜೊತೆಗೆ ಪ್ರಕರಣ ನ್ಯಾಯಾಲಯದಲ್ಲಿ ಇದ್ದದ್ದೂ ಇದಕ್ಕೆ ಪೂರಕವಾಯಿತು.

ಈ ಸಮಸ್ಯೆಯ ಮೂಲವನ್ನು ಕೆದಕಲು ಹೊರಟರೆ ಮೊದಲಿಗೆ ಕಾಣಸಿಗುವುದು ಮೂಲ ಸೌಕರ್ಯದ ಕೊರತೆ. ಉದ್ಯಮ ಹೇಳುತ್ತಿರುವಂತೆ ಭಾರತದಲ್ಲಿ ಉಳಿದ ಯಾವುದೇ ದೇಶದಲ್ಲಿ ಇರುವುದಕ್ಕಿಂತ ಹೆಚ್ಚು ಮೊಬೈಲ್ ತರಂಗಗಳ ಕೊರತೆ ಇದೆ. ಲಭ್ಯವಿರುವ ತರಂಗಗಳು ಭಾರೀ ಪ್ರಮಾಣದಲ್ಲಿ ಛಿದ್ರವಾಗಿವೆ. ಮೊಬೈಲ್ ಫೋನ್ ಸಂಕೇತಗಳು ನಿರ್ದಿಷ್ಟ ತರಂಗಾಂತರದಲ್ಲಿ ಪ್ರಯಾಣಿಸಬೇಕಾಗುತ್ತದೆ. ಈ ತರಂಗಗಳನ್ನು ಹರಾಜಿನ ಮೂಲಕ ಮೊಬೈಲ್ ಕಂಪೆನಿಗಳು ಖರೀದಿಸಬೇಕು. ಹೀಗೆ ಖರೀದಿಗೆ ಲಭ್ಯವಿರುವ ತರಂಗಗಳ ಪ್ರಮಾಣ ಕಡಿಮೆ ಇದೆ. ಈಗಾಗಲೇ ಖರೀದಿಸಿರುವುದನ್ನು ಅವಲಂಬಿಸುವುದು ಅನಿವಾರ್ಯ ಎಂಬುದು ಉದ್ಯಮದ ವಾದ.

ಆದರೆ ಇದನ್ನು ಟ್ರಾಯ್ ಸಂಪೂರ್ಣವಾಗಿ ಅಲ್ಲಗಳೆಯುತ್ತದೆ. ಕಳೆದ ಮಾರ್ಚ್‌ನಲ್ಲಿ ನಡೆದ ಹರಾಜಿನಲ್ಲಿ 52.7 ಮೆಗಾಹರ್ಟ್ಸ್ ತರಂಗಗಳನ್ನು ಖರೀದಿಸಲು ಯಾರೂ ಮುಂದಾಗಲಿಲ್ಲವೇಕೆ ಎಂಬುದು ಟ್ರಾಯ್‌ನ ಪ್ರಶ್ನೆ. ಉದ್ಯಮದ ವಾದ ಮತ್ತು ಟ್ರಾಯ್‌ನ ಹೇಳಿಕೆಗಳೆರಡರಲ್ಲೂ ಸತ್ಯಾಂಶವಿದೆ. ಭಾರತದ ಮೊಬೈಲ್ ಮಾರುಕಟ್ಟೆ ಜಿಎಸ್ಎಂ ಅಥವಾ ಗ್ಲೋಬಲ್ ಸಿಸ್ಟಂ ಮೊಬೈಲ್ ಕಮ್ಯುನಿಕೇಷನ್ ಎಂದು ಕರೆಯಲಾಗುವ ತಂತ್ರಜ್ಞಾನವನ್ನು ಬಳಸುತ್ತದೆ. ಏರ್‌ಟೆಲ್‌ನಂಥ ಸಂಸ್ಥೆಗಳು ಇದೊಂದೇ ತಂತ್ರಜ್ಞಾನವನ್ನು ತಮ್ಮ ಸೇವೆಗಾಗಿ ಬಳಸಿಕೊಳ್ಳುತ್ತಿವೆ. ಟ್ರಾಯ್ ಯಾರೂ ಖರೀದಿಸಿಲ್ಲ ಎಂದು ಹೇಳುತ್ತಿರುವ ತರಂಗಗಳು ಸಿಡಿಎಂಎ ಅಥವಾ ಕೋಡ್ ಡಿವಿಶನ್ ಮಲ್ಟಿಪಲ್ ಆಕ್ಸೆಸ್ ಎಂಬ ತಂತ್ರಜ್ಞಾನವನ್ನು ಬಳಸುವವರಿಗೆ ಸಂಬಂಧಿಸಿದ್ದು.

ಟಾಟಾ ಮತ್ತು ರಿಲಯನ್ಸ್‌ಗಳು ಮೊದಲ ಹಂತದಲ್ಲಿ ಈ ತಂತ್ರಜ್ಞಾನವನ್ನು ಪ್ರಧಾನವಾಗಿ ಬಳಸಿಕೊಳ್ಳುತ್ತಿದ್ದವು. ಇತ್ತೀಚೆಗೆ ಈ ಕಂಪೆನಿ
ಗಳೂ ಜಿಎಸ್ಎಂ ತಂತ್ರಜ್ಞಾನವನ್ನೇ ಹೆಚ್ಚಾಗಿ ಆತುಗೊಂಡಿವೆ. ಉದ್ಯಮ ಮುಂದಿಡುತ್ತಿರುವ ಮತ್ತೊಂದು ಸಮಸ್ಯೆ ಎಂದರೆ ಮೊಬೈಲ್ ಸಂದೇಶಗಳನ್ನು ಪ್ರಸಾರ ಮಾಡುವ ಟವರ್‌ಗಳ ಕೊರತೆ. ನಗರಗಳಲ್ಲಿ ಈ ಸಮಸ್ಯೆ ತೀವ್ರ. ಮೊಬೈಲ್ ಟವರ್‌ಗಳ ವಿಕಿರಣ ಪರಿಣಾಮದ ಕುರಿತ ಸಂಶೋಧನೆಯ ವಿವರಗಳು ಹೊರಬೀಳುತ್ತಿದ್ದಂತೆಯೇ ಕಟ್ಟಡಗಳ ಮೇಲೆ ಇವುಗಳ ಸ್ಥಾಪನೆಗೆ ಅನುಮತಿ ಸಿಗದಂತಾಯಿತು. ಸಾಲದ್ದಕ್ಕೆ ನಗರಾಡಳಿತ ಸಂಸ್ಥೆಗಳು ಈ ಕುರಿತ ನಿಯಮಗಳನ್ನು ಹೆಚ್ಚು ಕಠಿಣಗೊಳಿಸಿದವು.

ಸುಮಾರು 10,000 ಹೆಚ್ಚು ಟವರ್‌ಗಳನ್ನು ಸರ್ಕಾರವೇ ತೆಗೆಸಿ ಹಾಕಿದೆ. ಪರಿಣಾಮವಾಗಿ ಮೊಬೈಲ್ ಫೋನುಗಳಿಗೆ ತಲುಪಬೇಕಾದ ಧ್ವನಿ ಮತ್ತು ದತ್ತಾಂಶ ಸಂಕೇತಗಳ ಶಕ್ತಿ ಕುಂದಿತು. ಕರೆ ಕಡಿತದ ಸಮಸ್ಯೆ ಹೆಚ್ಚಿತು. ಈ ವಾದವನ್ನು ಸರ್ಕಾರವೂ ಸ್ವಲ್ಪ ಮಟ್ಟಿಗೆ ಒಪ್ಪುತ್ತದೆ. ಸೇನೆಗೆ ಸೇರಿರುವ ಭೂಮಿಯಲ್ಲಿ ಟವರ್‌ಗಳ ಸ್ಥಾಪನೆಗೆ ಅನುವು ಮಾಡಿಕೊಡಲಾಗುವುದು ಎಂಬ ಭರವಸೆಯನ್ನೂ ನೀಡುತ್ತಿದೆ.
ಈ ಎಲ್ಲಾ ತಾಂತ್ರಿಕ ಸಮಸ್ಯೆಗಳ ಆಚೆಗೂ ಕೆಲವು ವಿಚಾರಗಳಿವೆ.

ಈ ವಿಷಯವನ್ನು ಮಾತ್ರ ಎಲ್ಲಾ ಟೆಲಿಕಾಂ ಕಂಪೆನಿಗಳೂ ಮುಚ್ಚಿಡುತ್ತಿವೆ. ತರಂಗಗಳ ಖರೀದಿಗೆ ಮೇಲಾಟ ನಡೆಸಿದವರು, ಕರೆ ಮತ್ತು ದತ್ತಾಂಶ ಸೇವೆಯ ಬೆಲೆ ಇಳಿಸಿ ತಮ್ಮ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸಿದವರು ತಮ್ಮ ಜಾಹೀರಾತುಗಳು ನೀಡಿದ ಭರವಸೆಯ ಸಾಕಾರಕ್ಕೆ ಅಗತ್ಯವಿರುವ ಮೂಲ ಸೌಕರ್ಯವನ್ನು ಮಾತ್ರ ಸೃಷ್ಟಿಸಲೇ ಇಲ್ಲ.

2014ರ ಸಾಲಿನಲ್ಲಿ 4ಜಿ ತಂತ್ರಜ್ಞಾನಕ್ಕಾಗಿ ನಮ್ಮ ಟೆಲಿಕಾಂ ಕಂಪೆನಿಗಳು ಮಾಡಿದ ವೆಚ್ಚವೆಷ್ಟು ಎಂಬುದನ್ನು ನೋಡಿದರೆ ಇದು ಚೆನ್ನಾಗಿ ಅರ್ಥವಾಗುತ್ತದೆ. ಈ ಅವಧಿಯಲ್ಲಿ 4ಜಿ ಹೆಸರಿನಲ್ಲಿ ಖರ್ಚಾದ ಹಣ 32 ಶತಕೋಟಿ ಡಾಲರುಗಳು. ಇದರಲ್ಲಿ 29 ಶತಕೋಟಿ ಡಾಲರುಗಳನ್ನು ಕೇವಲ ತರಂಗಗಳ ಖರೀದಿಗಾಗಿಯೇ ಖರ್ಚು ಮಾಡಲಾಗಿದೆ. ಉಳಿದ ಮೂರು ಶತಕೋಟಿ ಡಾಲರುಗಳಷ್ಟೇ ಮೂಲಸೌಕರ್ಯಕ್ಕಾಗಿ ಮಾಡಿದ ವೆಚ್ಚ. ಇದೇ ಅವಧಿಯಲ್ಲಿ ಚೀನಾದಲ್ಲಿ 4ಜಿ ಮೂಲ ಸೌಕರ್ಯಕ್ಕಾಗಿ 35 ಶತ ಕೋಟಿ ಡಾಲರುಗಳನ್ನು ವ್ಯಯಿಸಲಾಗಿತ್ತು.

ಸರಳವಾಗಿ ಹೇಳುವುದಾದರೆ ಈ ಸಮಸ್ಯೆ ಪರಿಹಾರಕ್ಕೆ ಸರ್ಕಾರದ ಕಡೆಯಿಂದ ಮಾಡಬಹುದಾದ ಏಕೈಕ ಕೆಲಸವೆಂದರೆ ತರಂಗಗಳ ಬೆಲೆಯನ್ನು ಕಡಿಮೆ ಮಾಡುವುದು. ಆದರೆ ಇಷ್ಟೊಂದು ಬೆಲೆ ಕೊಟ್ಟು ತರಂಗಗಳನ್ನು ಖರೀದಿಸಬೇಕೆಂದು ಸರ್ಕಾರವೇನೂ ಒತ್ತಾಯಿಸಿರಲಿಲ್ಲ. ಇದೆಲ್ಲವೂ ನಡೆದದ್ದು ಹರಾಜಿನಲ್ಲಿ ಎಂಬುದು ಸಮಸ್ಯೆಯ ಮತ್ತೊಂದು ಮುಖ. ಇಷ್ಟಾಗಿಯೂ ಉದ್ಯಮವೇನೂ ನಷ್ಟದಲ್ಲಿಲ್ಲ. ಪ್ರತೀ ಸೆಕೆಂಡುಗಳ ಬಳಕೆಯ ಆಧಾರದಲ್ಲಿ ಶುಲ್ಕ ವಿಧಿಸುವ ಕೆಲವು ಯೋಜನೆಗಳನ್ನು ಹೊರತು ಪಡಿಸಿದರೆ ಹೆಚ್ಚಿನ ಸಂದರ್ಭದಲ್ಲಿ ಕರೆ ಕಡಿತದಿಂದ ಲಾಭವಾಗುವುದು ಟೆಲಿಕಾಂ ಕಂಪೆನಿಗಳಿಗೇ.
ನಿಮಿಷದ ಲೆಕ್ಕಾಚಾರದಲ್ಲಿ ಶುಲ್ಕ ವಿಧಿಸುವ ಯೋಜನೆಯನ್ನು ಬಳಸುತ್ತಿರುವ ಗ್ರಾಹಕರು ಒಂದು ಸೆಕೆಂಡುಗಳಷ್ಟು ಅವಧಿಯ ಸಂಪರ್ಕಕ್ಕೂ ಒಂದು ನಿಮಿಷದ ಶುಲ್ಕವನ್ನೇ ತೆರಬೇಕಾಗುತ್ತದೆ.

ಇನ್ನು ಕರೆ ಕಡಿತ ಎಂದರೆ ಏನು ಎಂಬುದನ್ನು ತಾಂತ್ರಿಕವಾಗಿ ನೋಡಿದರೆ ಈ ಲಾಭದ ಪ್ರಮಾಣ ಇನ್ನಷ್ಟು ಹೆಚ್ಚು ಎಂಬುದು ತಿಳಿಯುತ್ತದೆ. ಉದಾಹರಣೆಗೆ ನಾವು ಮಾತನಾಡುತ್ತಾ ಇರುವಾಗ ಆಚೆ ಬದಿಯಲ್ಲಿ ಇರುವವರ ಧ್ವನಿ ಕೇಳದಾಗುವ ಸಂದರ್ಭವನ್ನು ನೋಡೋಣ. ಇಲ್ಲಿ ತಾಂತ್ರಿಕವಾಗಿ ಕರೆ ಕಡಿತವಾಗಿಲ್ಲ. ನಿಮಗೆ ಧ್ವನಿಯಷ್ಟೇ ಕೇಳಿಸುತ್ತಿಲ್ಲ. ಕರೆಯನ್ನು ನೀವಾಗಿಯೇ ಕರೆಯನ್ನು ಕಡಿತಗೊಳಿಸುವ ತನಕದ ಅವಧಿಗೆ ಶುಲ್ಕ ಪಾವತಿಸಲೇಬೇಕು.
ಮೂಲ ಸೌಕರ್ಯದ ಕೊರತೆಯಿಂದ ಉಂಟಾಗಿರುವ ಸಮಸ್ಯೆಯ ಹೊರೆಯನ್ನೂ ಅನುಭವಿಸುವುದು ಮಾತ್ರ ಗ್ರಾಹಕನೇ. ಇದೇ ಕಾರಣಕ್ಕೆ ಟ್ರಾಯ್ ಕರೆ ಕಡಿತಗಳಿಗೆ ದಂಡ ವಿಧಿಸುವ ಪ್ರಸ್ತಾಪವನ್ನು ಮುಂದಿಟ್ಟಿದೆ. ಇದರ ವಿರುದ್ಧ ಟೆಲಿಕಾಂ ಕಂಪೆನಿಗಳು ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿವೆ.

ಒಂದು ದಿನಕ್ಕೆ ಹೆಚ್ಚೆಂದರೆ ಒಬ್ಬ ಗ್ರಾಹಕ ಕರೆ ಕಡಿತದ ಕಾರಣಕ್ಕೆ ಟೆಲಿಕಾಂ ಸೇವಾದಾತರಿಂದ ಪಡೆಯಬಹುದಾದ ಗರಿಷ್ಠ ಮೊತ್ತವೆಂದರೆ ಮೂರು ರೂಪಾಯಿಗಳು ಮಾತ್ರ. ಹೀಗೆ ಪರಿಹಾರ ನೀಡಿದರೆ ನಮಗೆ 54,000 ಕೋಟಿ ರೂಪಾಯಿಗಳ ನಷ್ಟವಾಗುತ್ತದೆ ಎಂಬುದು ಟೆಲಿಕಾಂ ಕಂಪೆನಿಗಳ ವಾದ.
ಈಗ ಇರುವ ಗರಿಷ್ಠ ಕರೆ ಕಡಿತದ ಪ್ರಮಾಣವನ್ನು ಲೆಕ್ಕ ಹಾಕಿದರೂ ದಂಡದ ಪ್ರಮಾಣ 800 ಕೋಟಿ ರೂಪಾಯಿಗಳನ್ನು ಮೀರುವುದಿಲ್ಲ ಎಂಬುದು ಟ್ರಾಯ್ ಲೆಕ್ಕಾಚಾರ. ಇಷ್ಟಕ್ಕೂ ಸೇವೆ ಸಮರ್ಪಕವಾಗಿದ್ದರೆ ದಂಡ ಪಾವತಿಸುವ ಪ್ರಮೇಯವೆಲ್ಲಿದೆ...? ವ್ಯಾಪಾರದಲ್ಲಿ ತರ್ಕಕ್ಕಿಂತ ಹೆಚ್ಚಾಗಿ ಲಾಭದ್ದೇ ಆರ್ಭಟ ಎಂಬುದು ಈ ಪ್ರಕರಣದಲ್ಲಿ ಮತ್ತೊಮ್ಮೆ ಸಾಬೀತಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT