ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್‌ಕುಮಾರ್ ಕೊನೆಯ ಕಾಲ್‌ಷೀಟ್

Last Updated 18 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

`ಕೌಬಾಯ್ ಕುಳ್ಳ~ ಆದಮೇಲೆ ನಾನು ಮತ್ತೆ ಅಭಿನಯದಲ್ಲಿ ಬಿಜಿಯಾಗಿದ್ದೆ. ಆಗ ಅಶ್ವತ್ಥ ನಾರಾಯಣ ಎಂಬ ಸ್ನೇಹಿತರೊಬ್ಬರು ಬಂದು ಒಂದು ಸಿನಿಮಾ ಮಾಡಿಕೊಡಿ ಎಂದು ಕೇಳಿದರು. ಅವರು ಕೇಳಿದ್ದು ಸಿ.ವಿ.ಎಲ್.ಶಾಸ್ತ್ರಿಯವರಿಗಾಗಿ ಚಿತ್ರ ಮಾಡಿಕೊಡಿ ಎಂದು.

ಉದಯ ಕುಮಾರ್ ಅವರನ್ನು ಹಾಕಿಕೊಂಡು ಅದಾಗಲೇ ಶಾಸ್ತ್ರಿಯವರು ಒಂದು ಸಿನಿಮಾ ಮಾಡುವ ವಿಫಲ ಯತ್ನಕ್ಕೆ ಕೈಹಾಕಿದ್ದರು. ಆ ಚಿತ್ರ ಅದೇಕೋ ಬಿಡುಗಡೆಯೇ ಆಗಲಿಲ್ಲ. ನನ್ನ ಮೇಲೆ ನಂಬಿಕೆ ಇಟ್ಟುಕೊಂಡು ಅವರು ಒಂದು ಸಿನಿಮಾ ಮಾಡಿಸಿಕೊಡಿ ಎಂದು ಅಶ್ವತ್ಥ ನಾರಾಯಣ ಅವರ ಮೂಲಕ ನನಗೆ ಹೇಳಿ ಕಳುಹಿಸಿದ್ದರು.

ನನ್ನ ತಲೆಯಲ್ಲಿ ಆ ಹೊತ್ತಿಗೆ ಇದ್ದ ನಟ ವಿಷ್ಣುವರ್ಧನ್. ನನ್ನ, ವಿಷ್ಣುವರ್ಧನ್ ಕಾಂಬಿನೇಷನ್‌ನಲ್ಲಿ ಯಾವ ಸಿನಿಮಾ ಮಾಡಬಹುದು ಎಂದು ಯೋಚಿಸುತ್ತಿದ್ದೆ. ಮದ್ರಾಸ್‌ನಲ್ಲಿ `ಯಾದೋಂ ಕಿ ಬಾರಾತ್~ ಎಂಬ ಹಿಂದಿ ಚಿತ್ರ ನೋಡಿದೆ. `ಕಳ್ಳ ಕುಳ್ಳ~ ಎಂಬ ಶೀರ್ಷಿಕೆ ನನಗೆ ಅದಾಗಲೇ ಹೊಳೆದಿತ್ತು.

ಅಷ್ಟರಲ್ಲಾಗಲೇ ವಿಷ್ಣುವರ್ಧನ್ `ಸೀತೆಯಲ್ಲ ಸಾವಿತ್ರಿ~ ಚಿತ್ರದಲ್ಲಿ ನಟಿಸಿದ್ದರು. ವಾದಿರಾಜ್ ನಿರ್ಮಿಸಿದ್ದ ಆ ಚಿತ್ರ ಅಷ್ಟಾಗಿ ಓಡಿರಲಿಲ್ಲ. ವೀರಾಸ್ವಾಮಿಯವರು ಆಮೇಲೆ `ಗಂಧದಗುಡಿ~ಯಲ್ಲಿ ವಿಷ್ಣುವರ್ಧನ್‌ಗೆ ಖಳನಾಯಕನ ಪಾತ್ರ ಕೊಟ್ಟಿದ್ದರು. ನನಗೆ ಆ್ಯಕ್ಷನ್ ಹೀರೊ ಆಗಿ ಆ ನಟನನ್ನು ತೋರಿಸಬೇಕು ಎಂಬ ಆಸೆ.
 
`ಕಳ್ಳ ಕುಳ್ಳ~ ಶುರುಮಾಡಿದೆ. `ಯಾದೋಂ ಕಿ ಬಾರಾತ್~ ಮೂವರು ಅಣ್ಣ-ತಮ್ಮಂದಿರ ಕತೆ. ಅದನ್ನು ನಾನು ಇಬ್ಬರು ಸಹೋದರರು ಹಾಗೂ ಒಬ್ಬ ತಂಗಿಯ ಕತೆಯಾಗಿ ಮಾರ್ಪಡಿಸಿಕೊಂಡೆ. ವಿಜಯಲಲಿತಾ ಅವರನ್ನು ಕರೆಸಿ ಪಾರ್ಟ್ ಕೊಟ್ಟೆ.

ಹಿಂದಿಯಲ್ಲಿದ್ದ ಒಂದು ಸೆಂಟಿಮೆಂಟ್ ಹಾಡನ್ನು ಕಿತ್ತುಹಾಕಿ, ಆ ಸೆಂಟಿಮೆಂಟ್ ಮಾತ್ರ ಉಳಿಸಿಕೊಂಡೆ. ಡಾನ್ಸ್ ಮಾಸ್ಟರ್ ಗೋಪಿ ಕೃಷ್ಣ, ಫೈಟ್ ಮಾಸ್ಟರ್ ಶೆಟ್ಟಿಯವರನ್ನು ಕರೆಸಿ ಚಿತ್ರ ಕಮರ್ಷಿಯಲ್ ಆಗಿ ಚೆನ್ನಾಗಿ ಮೂಡಿಬರುವಂತೆ ನೋಡಿಕೊಂಡೆ.

ಹಿಂದಿ ಚಿತ್ರಗಳಲ್ಲಿ ಶೆಟ್ಟಿಯವರ ಆ್ಯಕ್ಷನ್ ನೋಡಿ ಥ್ರಿಲ್ ಆಗಿದ್ದ ನಾನು ಅವರಿಂದಲೇ ಸಾಹಸ ದೃಶ್ಯಗಳ ಸಂಯೋಜನೆ ಮಾಡಿಸಿದ್ದು ಹೆಮ್ಮೆಯ ವಿಷಯ. ಮನ್ಮಥಲೀಲೆಗಳನ್ನೆಲ್ಲಾ ಇಟ್ಟು ಒಂದು ಹಾಡು ಮಾಡಿದೆವು.
 
ಗೋಪಿಕೃಷ್ಣ-ವಿಜಯಲಲಿತಾ ನೃತ್ಯ ಮಾಡಿದ ಆ ಹಾಡು ಚಿತ್ರದ ಹೈಲೈಟ್‌ಗಳಲ್ಲೊಂದು. ಬೆಂಗಳೂರಿನ ಸಾಗರ್ ಚಿತ್ರಮಂದಿರದಲ್ಲಿ `ಕಿಟ್ಟು ಪುಟ್ಟು~ ಪ್ರೀಮಿಯರ್ ಪ್ರದರ್ಶನ ಆಯೋಜಿಸಿದೆವು. ಆಗ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ಬಂದು ಸಿನಿಮಾ ನೋಡಿ ಮೆಚ್ಚಿಕೊಂಡರು.

ತಮಿಳುನಾಡಿನ ಸೇಲಂನಲ್ಲಿ ಕೂಡ `ಕಿಟ್ಟು ಪುಟ್ಟು~ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತು. ಆ ಕಾಲಘಟ್ಟದಲ್ಲಿ ತಣ್ಣಗಾಗಿದ್ದ ಆ್ಯಕ್ಷನ್ ಚಿತ್ರಗಳಿಗೆ ಮತ್ತೆ ಚಾಲನೆ ನೀಡಿದ್ದೇ `ಕಿಟ್ಟು ಪುಟ್ಟು~. `ಬಂಗಾರದ ಗುಡಿ~, `ಸ್ನೇಹಿತರ ಸವಾಲ್~, `ಸಹೋದರರ ಸವಾಲ್~ ಮೊದಲಾದ ಚಿತ್ರಗಳು ಬರಲು ಅದೇ ಸ್ಫೂರ್ತಿ.

`ಮೋಸಗಾಳಕ್ಕು ಮೋಸಗಾಡು~ ಎಂಬ ತೆಲುಗು ಚಿತ್ರವೊಂದನ್ನು ನೋಡಿದ್ದ ನನಗೆ ಅದರಲ್ಲಿನ ಶಾಟ್ ಗಮನ ಸೆಳೆಯಿತು. ಟೈರ್‌ಗೆ ಕ್ಯಾಮೆರಾ ಕಟ್ಟಿ, `ಗಡಕ್ ಗಡಕ್~ ಎಂದು ಅದು ಸುತ್ತುವುದನ್ನು ಇಡೀ ತೆರೆಯ ಮೇಲೆ ವಿಭಿನ್ನವಾಗಿ ತೋರಿಸಿದ ಶಾಟ್ ಅದು. ಆಗ ನನಗದು ತುಂಬಾ ಇಷ್ಟವಾಯಿತು.

ಅಂಥ ವಿಚಿತ್ರವಾದ ಚಿಂತನೆ ಬಂದಿದ್ದ ನಿರ್ದೇಶಕ ಕೆ.ಎಸ್.ಆರ್.ದಾಸ್. ಆ ಒಂದು ಶಾಟ್‌ನಿಂದ ಅವರ ಮೇಲೆ ನನಗೆ ಪ್ರೀತಿ ಹುಟ್ಟಿತು. ಇನ್ನೊಮ್ಮೆ ಸಫೈರ್ ಚಿತ್ರಮಂದಿರದಲ್ಲಿ ಇಂಗ್ಲಿಷ್ ಚಿತ್ರ ನೋಡಲು ಹೋದಾಗ ಪಕ್ಕದಲ್ಲೇ ಕೆ.ಎಸ್.ಆರ್.ದಾಸ್ ಕೂತಿದ್ದ. `ಎಲ್ಲರಿಗೂ ಸಿನಿಮಾ ಕೊಡುತ್ತೀರಿ. ನನಗೂ ಒಂದು ಸಿನಿಮಾ ಕೊಡಬಾರದೆ~ ಎಂದು ಕೇಳಿಕೊಂಡ.
 
ನನ್ನ ಮನಸ್ಸಲ್ಲಿ ಅದಾಗಲೇ ಇದ್ದ ಅವನನ್ನೇ `ಕಳ್ಳ ಕುಳ್ಳ~ ಚಿತ್ರದ ನಿರ್ದೇಶಕನನ್ನಾಗಿ ಮಾಡಿದೆ. ಆ ಚಿತ್ರ ಬಂದಮೇಲೆ ದಾಸ್ ಕನ್ನಡದಲ್ಲೂ ಬಿಜಿಯಾದ. ಮದ್ರಾಸ್‌ನಲ್ಲಿದ್ದ ತನ್ನ ಹೆಡ್‌ಕ್ವಾಟರ್ಸನ್ನು ಬೆಂಗಳೂರಿಗೆ ಸ್ಥಳಾಂತರ ಮಾಡಿಕೊಂಡ. ಬೆಂಗಳೂರಿನಲ್ಲೇ ಮನೆ ಮಾಡಿ ಅತ್ಯಂತ ಬೇಡಿಕೆಯ ನಿರ್ದೇಶಕನಾದ. `ಸಹೋದರರ ಸವಾಲ್~ ನಿರ್ದೇಶಿಸಿದ್ದೂ ಅವನೇ.

`ಕಳ್ಳ ಕುಳ್ಳ~ ಬಂದಮೇಲೆ ವಿಷ್ಣುವರ್ಧನ್ ಆ್ಯಕ್ಷನ್ ಹೀರೊ ಆದ. ಅದಕ್ಕೂ ಮಿಗಿಲಾಗಿ ನನ್ನ ಹೃದಯದ ನಾಯಕನಾದ. ಅವನ, ನನ್ನ ನಡುವಿನ ಬಾಂಧವ್ಯ ಗಟ್ಟಿಯಾಯಿತು. ನಮ್ಮಿಬ್ಬರ ಕಾಂಬಿನೇಷನ್ ಕುರಿತು ಜನ ಮಾತನಾಡಲಾರಂಭಿಸಿದರು.

ಆ ಚಿತ್ರ ಮುಗಿದ ಮೇಲೆ ನನಗೆ ಮತ್ತೆ ರಾಜ್‌ಕುಮಾರ್ ಕಾಲ್‌ಷೀಟ್ ಸಿಕ್ಕಿತು. ವರದಣ್ಣ, ಪಾರ್ವತಕ್ಕ (ಪಾರ್ವತಮ್ಮ ರಾಜ್‌ಕುಮಾರ್) ಸಿಕ್ಕಾಗಲೆಲ್ಲಾ ನನ್ನ ಡೇಟ್, ನನ್ನ ಡೇಟ್ ಎಂದು ಕೇಳುವುದನ್ನು ನಾನು ಬಿಟ್ಟಿರಲಿಲ್ಲ.

ಐದು ವರ್ಷದ ನಂತರ ನಾನು ಬಯಸಿದ್ದ ಆ ಡೇಟ್ ಸಿಕ್ಕಿತು. ಒಂದು ರೀತಿಯಲ್ಲಿ ಅದು ನನಗೆ ಸಿಕ್ಕ `ಲಕ್ಕಿ ಚಾನ್ಸ್~. ಬೆಂಗಳೂರಿನಲ್ಲಿ ಮಾಂಡ್ರೆ ಪಿಕ್ಚರ್ಸ್‌ ಎಂಬ ದೊಡ್ಡ ಕಂಪೆನಿಯಿತ್ತು. ಸುಮಾರು 60 ಚಿತ್ರಮಂದಿರಗಳನ್ನು ಅವರು ಕಂಟ್ರೋಲ್ ಮಾಡುತ್ತಿದ್ದರು.
 
ವೀರಾಸ್ವಾಮಿಯವರ ಅನುಮತಿ ಪಡೆದು ಮಾಂಡ್ರೆಯವರಿಗೆ ರಾಜ್‌ಕುಮಾರ್ ಸಿನಿಮಾ ಮಾಡಿಕೊಡುವ ತೀರ್ಮಾನಕ್ಕೆ ಬಂದೆ. ವೀರಾಸ್ವಾಮಿಯವರು ಪ್ರೀತಿಯಿಂದಲೇ ನನ್ನನ್ನು ಮಾಂಡ್ರೆಯವರಿಗಾಗಿ ಬಿಟ್ಟುಕೊಟ್ಟರು. ನನಗೆ ಆ ಕಾಲದಲ್ಲಿ ಅಷ್ಟು ಡಿಮ್ಯಾಂಡ್ ಇತ್ತು.

`ಭಾಗ್ಯವಂತರು~ ಚಿತ್ರ ಸೆಟ್ಟೇರಿತು. ನನ್ನ ತಂಗಿಯ ಗಂಡ ಭಾರ್ಗವ ಸಹ ನಿರ್ದೇಶಕನಾಗಿ ಅನುಭವ ಪಡೆದಿದ್ದರಿಂದ ಅವನಿಗೆ ನಿರ್ದೇಶಕನ ಟೋಪಿ ತೊಡಿಸಿದೆ. ರಾಜ್‌ಕುಮಾರ್-ಸರೋಜಾದೇವಿ ಕಾಂಬಿನೇಷನ್. ಅದು ಆ ಕಾಲದಲ್ಲಿ ದೊಡ್ಡ ಕಾಂಬಿನೇಷನ್.

ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ದೊಡ್ಡ ಸೆಟ್ ಹಾಕಿ ಸುಮಾರು ಒಂದು ತಿಂಗಳು ಚಿತ್ರೀಕರಣ ನಡೆಸಿದೆವು. ಒಂದು ದಿನವೂ ತಡವಾಗದೆ ಚಿತ್ರೀಕರಣ ಯಶಸ್ವಿಯಾಗಿ ಮುಗಿಯಿತು. ಎಲ್ಲರೂ ಆಗ ಭಾವುಕರಾದರು. ಒಬ್ಬರನ್ನೊಬ್ಬರು ಬಿಟ್ಟು ಹೋಗಬೇಕಲ್ಲ ಎಂದು ಕಣ್ಣೀರಿಟ್ಟರು.

ಚಿತ್ರೀಕರಣ ಮುಗಿದಾಗ ದೀಪಾವಳಿ ಬಂತು. ಚಾಮುಂಡೇಶ್ವರಿ ಸ್ಟುಡಿಯೋದಲ್ಲೇ ಎಲ್ಲರೂ ಪಟಾಕಿ ಹೊಡೆದು ಖುಷಿಪಟ್ಟೆವು. ಚಿತ್ರಕ್ಕೆ ಕೆಲಸ ಮಾಡಿದ್ದ ಎಲ್ಲರಿಗೂ ಪಂಚೆ-ಶರ್ಟು, ಸೀರೆ ಕೊಟ್ಟೆ. ಎಲ್ಲರ ಮುಖದಲ್ಲಿ ಸಂತಸ.

`ಭಾಗ್ಯವಂತರು~ ಚಿತ್ರಕ್ಕೆ ಕಾಸ್ಟ್ಯೂಮ್ ಖರೀದಿಸಿದ್ದು ಇನ್ನೊಂದು ಕತೆ. ಅಂದು ಭಾನುವಾರ. ಶಾಂತಲಾ ಸಿಲ್ಕ್ಸ್ ಅಂಗಡಿಯ ಬಾಗಿಲು ತೆರೆಸಿ, ಸರೋಜಾದೇವಿ ಅವರನ್ನೂ ಕರೆದುಕೊಂಡು ಹೋಗಿ ನಾವು ಕಾಸ್ಟ್ಯೂಮ್‌ಗಳನ್ನು ಕೊಂಡುಕೊಂಡು ಬಂದೆವು.
 
ಮದುವೆಗಿಂತ ಹೆಚ್ಚು ಸೀರೆಗಳನ್ನು ಆ ಚಿತ್ರಕ್ಕಾಗಿ ನಾವು ಕೊಂಡೆವು. ಮಾಂಡ್ರೆಯವರೇ ಮಾಡಿದ ಸಿನಿಮಾ ಅದು. ಚಿತ್ರ ಬಿಡುಗಡೆಯಾಯಿತು. ಆದರೆ ತುಂಬಾ ಹಿಟ್ ಆಗಲಿಲ್ಲ. ಆದರೆ, ಒಳ್ಳೆಯ ಚಿತ್ರ ಮಾಡಿದ ತೃಪ್ತಿ ನನಗೆ ಸಿಕ್ಕಿತು.

1974ರಲ್ಲಿ ಮಧುರ ನೆನಪನ್ನು ಕಟ್ಟಿಕೊಟ್ಟ ಚಿತ್ರ ಅದು. ಆಮೇಲೆ ಮತ್ತೆ ನನಗೆ ರಾಜ್‌ಕುಮಾರ್ ಕಾಲ್‌ಷೀಟ್ ಸಿಗಲೇ ಇಲ್ಲ. ಆ ನಂತರ ಅವರ ಜೊತೆ ಅಭಿನಯಿಸುವ ಅವಕಾಶವೂ ಸಿಗಲಿಲ್ಲ. ರಾಜ್‌ಕುಮಾರ್ ಮಕ್ಕಳ ಚಿತ್ರಗಳಲ್ಲಿ ಕೂಡ ನಾನು ಅಭಿನಯಿಸಲು ಆಗಲಿಲ್ಲ. ಅದು ಬೇರೆ ಮಾತು.
 
ಆದರೆ, ಅವರ ಕುಟುಂಬದವರೆಲ್ಲರೂ ನನ್ನನ್ನು ಈಗಲೂ ಪ್ರೀತಿಯಿಂದಲೇ ಮಾತನಾಡಿಸುತ್ತಾರೆ. ಎಲ್ಲಿ ಸಿಕ್ಕರೂ ಪಾರ್ವತಮ್ಮನವರು ಯೋಗಕ್ಷೇಮ ಕೇಳುತ್ತಾರೆ. ರಾಜ್‌ಕುಮಾರ್ ಅವರ ಮಕ್ಕಳು `ಮಾಮಾ~ ಎಂದೇ ಪ್ರೀತಿಯಿಂದ ಸಂಬೋಧಿಸುತ್ತಾರೆ.

ನಾನು ಮದ್ರಾಸ್‌ನಲ್ಲಿ ಕಷ್ಟದಲ್ಲಿದ್ದಾಗ ಮನೆಗಳನ್ನೆಲ್ಲಾ ಮಾರಿಕೊಂಡೆ. ಆಗ ಒಂದು ದಿನ ಪಾರ್ವತಕ್ಕ ಸಿಕ್ಕರು. `ನೀನು ಬೆಂಗಳೂರಿಗೆ ಬಂದುಬಿಡು~ ಎಂದು ಕರೆದರು. ಬಂದು ಇರುವುದಾದರೂ ಎಲ್ಲಿ, ಮನೆಗಳನ್ನೆಲ್ಲಾ ಮಾರಿಕೊಂಡಿದ್ದೇನೆ ಎಂದೆ.
 
`ಹಾಗೆಲ್ಲಾ ಮಾತಾಡಬೇಡ. ಬಂದು ನೀನು ಮನೆ ತೋರಿಸು. ಅದನ್ನು ನಾನು ಕೊಡಿಸುತ್ತೇನೆ~ ಎಂದಿದ್ದರು. ಅವರ ಮನಸ್ಸಿನಿಂದ ಬಂದಿದ್ದ ಆ ಮಾತುಗಳನ್ನು ಈಗಲೂ ನಾನು ನೆನೆಯುತ್ತೇನೆ.
......

ಮುಂದಿನ ವಾರ: `ಕಿಟ್ಟು ಪುಟ್ಟು~ ಕೂಡ ಕ್ಲಿಕ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT