ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃತ್ತಿ ಮತ್ಸರದ ನಡುವೆಯೂ ಸಂದ ಸುಖ

Last Updated 28 ಜನವರಿ 2012, 19:30 IST
ಅಕ್ಷರ ಗಾತ್ರ

ನಾನು ಪೊಲೀಸ್ ಇಲಾಖೆಗೆ 1977ರಲ್ಲಿ ಆಯ್ಕೆಯಾಗಿ ಮೈಸೂರಿನಲ್ಲಿ ತರಬೇತಿ ಪಡೆದದ್ದು. 1979ರಲ್ಲಿ ತರಬೇತಿ ಸಬ್ ಇನ್ಸ್‌ಪೆಕ್ಟರ್ ಆಗಿ ಮಾಗಡಿ ರಸ್ತೆಯ ಠಾಣೆಗೆ ನಿಯೋಜಿಸಿದರು. ನನಗೆ ಮೂಣಯ್ಯ, ವೀರಪ್ಪ, ಶಿವಸ್ವಾಮಿ, ನಿತ್ಯಾನಂದ ಎಂಬ ಅಧಿಕಾರಿಗಳು ಉತ್ತಮ ರೀತಿಯಲ್ಲಿ ತರಬೇತಿ ಕೊಟ್ಟರು.

ಕೆಲಸಕ್ಕೆ ಸೇರಿದ ಹೊಸತರಲ್ಲಿ ನಾನು ರಾತ್ರಿ 11 ಗಂಟೆಯವರೆಗೆ ಠಾಣೆಯಲ್ಲೇ ಇರುತ್ತಿದ್ದೆ. ಪೊಲೀಸ್ ಕಾರ್ಯವೈಖರಿಯನ್ನು ಸ್ಪಷ್ಟವಾಗಿ ಅರಿಯುವುದು, ತನಿಖೆಯನ್ನು ನಿರ್ವಹಿಸುವ ಕ್ರಮ ಗ್ರಹಿಸುವುದು ನನ್ನ ಉದ್ದೇಶವಾಗಿತ್ತು. ನನ್ನ ವಾರಗೆಯವರು ಅಷ್ಟು ಹೊತ್ತು ಯಾಕೆ ಕೆಲಸ ಮಾಡುತ್ತೀಯ ಎಂದು ಕಿಚಾಯಿಸುತ್ತಿದ್ದರು.

ಆಗ ಮಾಗಡಿ ರಸ್ತೆ ಪೊಲೀಸ್ ಠಾಣೆ ಮತ್ತು ಅದರ ಸುತ್ತಮುತ್ತಲ ಪ್ರದೇಶದಲ್ಲಿ ರೌಡಿಗಳ ಹಾವಳಿ. ಅವರಿಗೆ ರಾಜಕಾರಣಿಗಳ ಬೆಂಬಲವೂ ಇತ್ತು. ಜಯರಾಜನ ಶಿಷ್ಯರ ಅಟ್ಟಹಾಸದ ಕಾಲವದು. ಒಮ್ಮೆ ನಾನು ಗಸ್ತಿನಲ್ಲಿರುವಾಗ ಒಬ್ಬ ರೌಡಿಯ ವಿರುದ್ಧ ವಾರೆಂಟ್ ಇತ್ತು.

ಅವನನ್ನು ಹಿಡಿಯಲು ಸಹೋದ್ಯೋಗಿ ಪೊಲೀಸರೊಬ್ಬರು ಮುಂದಾದಾಗ ಹಲ್ಲೆ ನಡೆಸಿದ್ದ. ಅವನನ್ನು ನಾವು ಹಿಡಿದಿದ್ದೆವು. ನನಗದು ಭೂಗತಲೋಕದ ನಂಟು ಇರುವವರನ್ನು ಯಾವ ರೀತಿ ಬಗ್ಗಿಸಬೇಕು ಎಂಬ ಮೊದಲ ಪಾಠ.

ನನಗೆ 1979 ನವೆಂಬರ್‌ನಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿ ಪೋಸ್ಟಿಂಗ್ ಸಿಗಬೇಕಿತ್ತು. ನಾನು ಆಯ್ಕೆಯಾಗಿದ್ದಾಗ 200 ಜನರಿದ್ದ ದೊಡ್ಡ ತಂಡವೇ ಪೋಸ್ಟಿಂಗ್‌ಗಾಗಿ ಕಾಯುತ್ತಿತ್ತು. ಕರ್ನಾಟಕ ಪೊಲೀಸ್ ಇತಿಹಾಸದಲ್ಲೇ ಅತಿ ದೊಡ್ಡ ತಂಡವದು. ಇಂದು ಸಿಗಬಹುದು ನಾಳೆ ಸಿಗಬಹುದು ಎಂದು ಕಾದದ್ದೆ ಬಂತು; ನನಗೆ ಕೊನೆಗೂ ಪೋಸ್ಟಿಂಗ್ ಕೊಡಲೇ ಇಲ್ಲ.

ಆದರೆ, ದೊಡ್ಡ ದೊಡ್ಡ ರಾಜಕಾರಣಿಗಳ ಶಿಫಾರಸು ಇದ್ದವರಿಗೆ, ಇಲಾಖೆಯಲ್ಲೇ ಸಂಬಂಧಿಕರು ಮುತುವರ್ಜಿ ವಹಿಸಿದ್ದವರಿಗೆ ಪೋಸ್ಟಿಂಗ್ ಆಗುತ್ತಿದ್ದನ್ನು ಕಂಡು ನನಗೆ ಬೇಸರವಾಗಿತ್ತು. ಬೆಂಗಳೂರು ನಗರದಲ್ಲಿ ಆಗ ನಾವು 30-40 `ಪ್ರೊಬೆಷನಲ್ಸ್~ ಇದ್ದೆವು. ನಮ್ಮಲ್ಲಿ ಬಹುಪಾಲು ಜನರನ್ನು `ಅಡಿಷನಲ್ ಸಬ್ ಇನ್ಸ್‌ಪೆಕ್ಟರ್ಸ್‌~ ಎಂದು ನೇಮಕ ಮಾಡಿದರು.

ಯಾವ್ಯಾವ ಠಾಣೆಯಲ್ಲಿ ತರಬೇತಿ ಪಡೆದಿದ್ದೆವೋ ಅಲ್ಲಿಯೇ ಈ ಹುದ್ದೆ. ಅತ್ತ ಸಬ್ ಇನ್ಸ್‌ಪೆಕ್ಟರ್ ಆಗಲಿಲ್ಲವಲ್ಲ ಎಂಬ ಕೊರಗು. ಇನ್ನೊಂದು ಕಡೆ ಮುಂದೇನೋ ಎಂಬ ಅನಿಶ್ಚಿತತೆ. ಹೀಗೆ ಆಗಿದ್ದು ನಮ್ಮ ಉತ್ಸಾಹವನ್ನೇ ಕುಗ್ಗಿಸಿತು. ಕೆಲಸಕ್ಕೆ ಬಾರದಂತೆ ಇದ್ದವರಿಗೆ ಪೋಸ್ಟಿಂಗ್ಸ್ ಸಿಕ್ಕಿದ್ದನ್ನು ಕಂಡು ರೋಸಿಹೋದೆವು.

ಡಿಸೆಂಬರ್, ಜನವರಿ ಆದರೂ ಪೋಸ್ಟಿಂಗ್ಸ್ ಸಿಗಲೇ ಇಲ್ಲ. ಫೆಬ್ರುವರಿಯಲ್ಲಿ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಹಾಗೂ ಸ್ಥಳೀಯ ರಾಜಕೀಯ ಮುಖಂಡರಿಗೆ ವೈಮನಸ್ಸಾಗಿ ಪರ- ವಿರುದ್ಧ ಚಳವಳಿ ನಡೆಯಿತು.
 
ಆಗ ನನಗೆ ಆ ಠಾಣೆಗೆ `ಲಾ ಅಂಡ್ ಆರ್ಡರ್~ ಸಬ್ ಇನ್ಸ್‌ಪೆಕ್ಟರ್ ಆಗಿಯೇ ಪೋಸ್ಟಿಂಗ್ ಸಿಕ್ಕಿತು. ಮೂರು ತಿಂಗಳು ನಾನು ಅನುಭವಿಸಿದ್ದ ಯಾತನೆಯನ್ನು ಲೆಕ್ಕಿಸದೆ ಕೆಲವರು `ಲಾ ಅಂಡ್ ಆರ್ಡರ್‌ಗೆ ಪೋಸ್ಟಿಂಗ್ ಮಾಡಿಸಿಕೊಂಡುಬಿಟ್ಟ~ ಎಂದು ಏನೇನೋ ಮಾತನಾಡಿದರು.

ನನ್ನನ್ನು ಪೋಸ್ಟಿಂಗ್ ಮಾಡಿದ ಅಧಿಕಾರಿ ಅಜಯ್ ಕುಮಾರ್ ಸಿಂಗ್. ಅವರು ಆಮೇಲೆ ಡಿ.ಜಿ.ಯಾಗಿ ನಿವೃತ್ತಿಯಾದರು. ಇಲಾಖೆಯಲ್ಲಿ ಅನೇಕರು ನನ್ನ ವಿರುದ್ಧ ಗುಸಗುಸು ಮಾತನಾಡಿದರೂ, ಅಧಿಕಾರಿಗಳು ನಾನು ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡಿದ್ದ ರೀತಿಯನ್ನು ಮೆಚ್ಚಿಕೊಂಡಿದ್ದರು.

ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಕೂಡ ರೌಡಿಗಳದ್ದೇ ಹಾವಳಿ. ಅಲ್ಲಿ ಶಿವಾಜಿನಗರ ಕಡೆಯ ರೌಡಿಗಳು ಹೆಚ್ಚು ಕಾರ್ಯತತ್ಪರರಾಗಿದ್ದರು. ರಾಜಕೀಯ ಬೆಂಬಲವಿರುವ ಅಂಥವರನ್ನು ನಾನು ಲೆಕ್ಕಿಸಲಿಲ್ಲ. ಯಾರು ಕಾನೂನನ್ನು ಉಲ್ಲಂಘಿಸಿ, ವಾರೆಂಟನ್ನು ಧಿಕ್ಕರಿಸಿ ಓಡಾಡಿಕೊಂಡಿದ್ದರೋ ಅಂಥವರನ್ನೆಲ್ಲಾ ಹೆಡೆಮುರಿ ಕಟ್ಟಿ ದಸ್ತಗಿರಿ ಮಾಡಿದೆ.

ಅದನ್ನು ಕಂಡು ಜನರಿಗೆ ನನ್ನ ಮೇಲೆ ವಿಶ್ವಾಸ ಬಂತು. ಅಲ್ಲಿ ನಾನು ಯಾರನ್ನೂ ಲೆಕ್ಕಿಸದೆ ಕೆಲಸ ಮಾಡಿದ್ದರಿಂದ ಮುಂದೆ ಸಿಟಿ ಕ್ರೈಮ್ ಬ್ರ್ಯಾಂಚ್‌ಗೆ  (ಸಿಸಿಬಿ) ವರ್ಗಾವಣೆಯಾಯಿತು. ಕಡಿಮೆ ಸೇವಾವಧಿಯಲ್ಲೇ ನನ್ನ ಕೆಲಸಕ್ಕೆ ಸಂದ ಗೌರವ ಅದು.

ನಾನು ಯಾವ್ಯಾವ ಅಧಿಕಾರಿಗಳ ಜೊತೆ ಕೆಲಸ ಮಾಡಿದ್ದೆನೋ ಅವರೆಲ್ಲಾ ನನ್ನನ್ನು ಮೆಚ್ಚಿಕೊಂಡಿದ್ದರು. ಆದರೆ, ರೌಡಿಜಗತ್ತು ನನ್ನ ವಿರುದ್ಧ ಆಗಲೇ ಮಸಲತ್ತು ಮಾಡುತ್ತಿತ್ತು. ಒಬ್ಬ ರೌಡಿಯಂತೂ ನನ್ನ ವಿರುದ್ಧ ಕೆಟ್ಟ ಕೆಟ್ಟ ಆರೋಪಗಳನ್ನು ಮಾಡಿ ಪತ್ರವೊಂದನ್ನು ಬರೆದಿದ್ದ.


ಆ ಸಂಗತಿ ನನಗೆ ಗೊತ್ತಾದದ್ದು ಇನ್ನೊಬ್ಬ ಪೊಲೀಸರಿಂದ; ತುಸು ತಡವಾಗಿ.
ಮಾಗಡಿ ಪೊಲೀಸ್ ಠಾಣೆಯಲ್ಲಿ ತರಬೇತಿ ಸಬ್ ಇನ್ಸ್‌ಪೆಕ್ಟರ್ ಆಗಿದ್ದಾಗಲೇ ಇಡೀ ನಗರ ನನ್ನದೆಂಬಂತೆ ವರ್ತಿಸುತ್ತಿದ್ದೆ ಎಂದು ಇಲ್ಲಸಲ್ಲದ್ದನ್ನೆಲ್ಲಾ ಆ ರೌಡಿ ತನ್ನ ಮೂರು ಪುಟಗಳ ಪತ್ರದಲ್ಲಿ ಉಲ್ಲೇಖಿಸಿದ್ದನಂತೆ.
 
ಇನ್ಸ್‌ಪೆಕ್ಟರ್ ಶಿವಸ್ವಾಮಿಯವರ ವಿಚಾರಣೆಗೆ ಆ ಪತ್ರ ಬಂದಿತ್ತಂತೆ. ಅವರು ಕೇವಲ ಕಾಲು ಪುಟದಷ್ಟು ಉತ್ತರವನ್ನಷ್ಟೇ ಆ ದೂರಿಗೆ ಕೊಟ್ಟದ್ದು. ತಮ್ಮಲ್ಲಿ ಕೆಲಸ ಮಾಡಿದ ತರಬೇತಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ಗಳಲ್ಲೇ ನಾನು ಉತ್ತಮ ರೀತಿಯಲ್ಲಿ ಕೆಲಸ ಮಾಡಿದ್ದೆ. ಆ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಎಂದು ಶಿವಸ್ವಾಮಿಯವರು ಬರೆದಿದ್ದರಂತೆ.
 
ಇಷ್ಟೂ ವಿವರಗಳನ್ನು ಇನ್ನೊಬ್ಬ ಪೊಲೀಸ್ ನನಗೆ ಹೇಳಿದಾಗ ಮೊದಲು ಅಚ್ಚರಿಯಾಯಿತು. ಖಡಕ್ ಪೊಲೀಸ್ ಆಗಿದ್ದ ಶಿವಸ್ವಾಮಿಯವರು ನನ್ನನ್ನು ಮೆಚ್ಚಿಕೊಂಡರಲ್ಲ ಎಂದು ಹೆಮ್ಮೆಯೂ ಆಯಿತು.

ಅವರು ಆ ಅರ್ಜಿ ಬಂದ ಸಂಗತಿಯನ್ನೇ ನನಗೆ ಹೇಳಿರಲಿಲ್ಲ. ಅದರ ಕುರಿತು ವಿಶೇಷವಾಗಿ ಯಾವ ವಿಚಾರಣೆಯನ್ನೂ ನಡೆಸಿರಲಿಲ್ಲ. ಬೇರೆ ಬೇರೆ ಕೇಸುಗಳ ಬಗ್ಗೆ ಮಾತ್ರ ಮಾರ್ಗದರ್ಶನ ನೀಡಿದ್ದರು.
 
ಬಹುಶಃ ನನ್ನ ಜೊತೆಗಿನ ಒಡನಾಟದಿಂದಲೇ ಅವರಿಗೆ ವಿಶ್ವಾಸ ಬಂದಿತ್ತೆಂದು ಕಾಣುತ್ತದೆ. ಈ ವಿಚಾರವನ್ನು ಇನ್ನೊಬ್ಬ ಪೊಲೀಸ್ ನನಗೆ ತಿಳಿಸಿದಾಗ ಈ ಇಲಾಖೆಗೆ ಸೇರಿದ್ದು ಸಾರ್ಥಕವಾಯಿತು ಎನ್ನಿಸಿ ಕೆಲಸ ಮಾಡುವ ಹುಮ್ಮಸ್ಸು ಇಮ್ಮಡಿಯಾಗಿತ್ತು.

`ಸಕ್ಸಸ್ ಆಲ್ಸೋ ಹರ್ಟ್ಸ್ ವೆನ್ ಯು ಡೋಂಟ್ ಹ್ಯಾವ್ ಎ ಲೌಡ್ ಒನ್ ಟು ವಿಶ್ ಯು. ಫೇಲ್ಯೂರ್ ಆಲ್ಸೋ ಲುಕ್ಸ್ ಬ್ಯೂಟಿಫುಟ್ ವೆನ್ ಯು ಹ್ಯಾವ್ ಎ ಲೌಡ್ ಒನ್ ಟು ಸಪೋರ್ಟ್ ಯು~ (ಶುಭಚಿಂತಕರಿಲ್ಲದಿದ್ದರೆ ಯಶಸ್ಸು ಕೂಡ ಘಾಸಿಗೊಳಿಸುತ್ತದೆ. ನಮ್ಮನ್ನು ಮನದುಂಬಿ ಬೆಂಬಲಿಸುವವರಿದ್ದರೆ ವೈಫಲ್ಯವೂ ಸುಂದರವೆನ್ನಿಸುತ್ತದೆ) ಎಂಬ ಇಂಗ್ಲಿಷ್ ನುಡಿಗಟ್ಟಿದೆ.

`ನೋ ಪಾಯ್ಸನ್ ಕೆನ್ ಕಿಲ್ ಎ ಪಾಸಿಟಿವ್ ಥಿಂಕರ್. ನೋ ಮೆಡಿಸನ್ ಕೆನ್ ಕ್ಯೂರ್ ಎ ನೆಗೆಟಿವ್ ಪರ್ಸನ್~ (ಸದಾಲೋಚನೆ ಇರುವವರನ್ನು ಯಾವ ವಿಷವೂ ಕೊಲ್ಲಲಾರದು. ಹಾಗೆಯೇ ದುರಾಲೋಚನೆ ಮಾಡುವವನನ್ನು ಯಾವ ಔಷಧವೂ ಸರಿಪಡಿಸಲಾಗದು) ಎಂಬ ಇನ್ನೊಂದು ಮಾತಿದೆ. ಈ ಎರಡೂ ಮಾತುಗಳನ್ನು ನಾನು ಪದೇಪದೇ ಹೇಳಿಕೊಳ್ಳುತ್ತಿದ್ದೆ. ಇವೆಲ್ಲಾ ಅನುಭವ ನನಗೆ ಕಲಿಸಿದ ಪಾಠಗಳು.

*
ನಾನು ಬಾಣಸವಾಡಿ ಪೊಲೀಸ್ ಠಾಣೆಗೆ ಬಂದಾಗ ಒಂದು ಘಟನೆ ನಡೆಯಿತು. ನನ್ನ ಜೊತೆ ಹೈಸ್ಕೂಲ್‌ನಲ್ಲಿ ಓದುತ್ತ್ದ್ದಿದಾಗ ಒಬ್ಬ ಸಹಪಾಠಿಯಾಗಿದ್ದ. ಬಡತನದಲ್ಲಿ ಬೆಳೆದ ಹುಡುಗ. ಅವನು ತನ್ನ ಸಾಮರ್ಥ್ಯದ ಮೇಲೆ ಸ್ವಯಂ ಉದ್ಯೋಗ ಕಂಡುಕೊಂಡಿದ್ದ. ಮದುವೆಯಾಗಿ, ಮಕ್ಕಳ ಪಡೆದು ಸುಖವಾಗಿದ್ದ.

ನನಗೆ ಅವನ ಬಗ್ಗೆ ಅಷ್ಟೇ ಗೊತ್ತಿದ್ದದ್ದು. ಒಮ್ಮೆ ಅವನ ಅಣ್ಣ ಇದ್ದಕ್ಕಿದ್ದಂತೆ ಠಾಣೆಗೆ ಬಂದ. ಅವನು ಸಂಪೂರ್ಣ ಮಾನಸಿಕ ಸ್ವಾಸ್ಥ್ಯ ಇಲ್ಲದ ವ್ಯಕ್ತಿ. ತನ್ನ ತಮ್ಮ ಮನೆಯಿಂದ ಆಚೆಗೆ ಹಾಕಿದ್ದು, ಊಟಕ್ಕೂ ತೊಂದರೆಯಾಗಿದೆ ಎಂದು ಅಲವತ್ತುಕೊಂಡ.

ಅವನ ವಿನಂತಿಯ ಮೇಲೆ ಅವನ ತಮ್ಮನಿಗೆ ಒಂದು ಪತ್ರ ಬರೆದುಕೊಟ್ಟೆ. ಹೊರಗೆ ಹಾಕಿದರೆ ಅವನ ಗತಿ ಏನು ಎಂಬ ಕಳಕಳಿಯಿಂದಷ್ಟೆ ಪತ್ರ ಬರೆದದ್ದು. ಮೈಸೂರು ಜಿಲ್ಲೆಯಲ್ಲಿದ್ದ ತನ್ನ ತಮ್ಮನಿಗೆ ಅವನು ಆ ಪತ್ರ ತೋರಿಸಿದ ಎಂದು ಕಾಣುತ್ತದೆ. ಒಂದಷ್ಟು ದಿನ ಅವನು ಮತ್ತೆ ನನ್ನಲ್ಲಿಗೆ ಬರಲಿಲ್ಲ.

ಕೆಲವು ದಿನಗಳ ನಂತರ ನನ್ನ ಸಹಪಾಠಿಯಿಂದ ಒಂದು ಪತ್ರ ಬಂತು. ಬದುಕಿನ ತತ್ವಗಳು, ಕಷ್ಟಗಳು ಯಾವುದೂ ನನಗೆ ಗೊತ್ತಿಲ್ಲವೆಂಬಂತೆ ಸುದೀರ್ಘ ಪತ್ರವನ್ನು ಬರೆದಿದ್ದ. ತನಗೆ ಇಬ್ಬರು ಹೆಣ್ಣುಮಕ್ಕಳಿದ್ದು ಅವರನ್ನು ಸಾಕುವ ಹೊಣೆಯಿದೆಯೆಂದೂ ತನ್ನ ಅಣ್ಣನನ್ನು ನೋಡಿಕೊಳ್ಳುವುದು ಸಾಧ್ಯವಿಲ್ಲವೆಂದೂ ತಿಳಿಸಿದ್ದ. ನನಗೆ ಬೇಸರವಾಯಿತು.

ಸ್ವಲ್ಪ ದಿನಗಳ ನಂತರ ಮತ್ತೆ ಅವನ ಅಣ್ಣ ಬಂದ. ನಾನು ಪತ್ರ ಬರೆದುಕೊಟ್ಟದ್ದರಿಂದಲೇ ಅವನಿಗೆ ಸಮಾಧಾನವಾಗಿತ್ತು. ನಾನು ಅವನ ತಮ್ಮ ಕೊಟ್ಟಿದ್ದ ಪ್ರತಿಕ್ರಿಯೆಯ ಕುರಿತು ಪ್ರಸ್ತಾಪಿಸಿದೆ. ಅವನು ನೊಂದುಕೊಂಡ. ತಿಂಗಳಿಗೆ ಹತ್ತು ರೂಪಾಯಿ ಕೊಟ್ಟರೆ ಸಾಕು, ತಾನು ಬದುಕಬಲ್ಲೆ ಎಂದ. ನಾನು ಅವನ ಬಯಕೆ ಈಡೇರಿಸಿದೆ.

ಈಗಲೂ ಅವನು ಆಗಾಗ ನನ್ನ ಬಳಿಗೆ ಬರುತ್ತಾನೆ. ಅವನ ಬದುಕಿಗೆ ಒಂದು ವ್ಯವಸ್ಥೆ ಮಾಡಿದ್ದೇನೆ. ಆದರೆ, ಅವನ ತಮ್ಮ ಮಾತ್ರ ಇದುವರೆಗೆ ನನ್ನ ಜೊತೆ ಮಾತನಾಡಿಲ್ಲ. ಪೊಲೀಸರು ಯಾರಿಗಾದರೂ ನೆರವು ನೀಡುವುದು ಕೂಡ ಎಷ್ಟು ಕಷ್ಟ ಎಂದು ನನ್ನ ಸಹಪಾಠಿಯ ಅಣ್ಣನನ್ನು ನೋಡಿದಾಗಲೆಲ್ಲಾ ಅನ್ನಿಸುತ್ತದೆ.

ಮುಂದಿನ ವಾರ: ಪಿಸ್ತೂಲ್‌ಗೆ ಪರವಾನಗಿ ಪಡೆದ ಕಷ್ಟ. ಶಿವರಾಂ ಅವರ ಮೊಬೈಲ್ ಸಂಖ್ಯೆ: 9448313066

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT