ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆ ಮುಚ್ಚುವುದರಿಂದ ಏರುವುದೇ ಶಿಕ್ಷಣದ ಮಟ್ಟ?

Last Updated 30 ಜನವರಿ 2012, 19:30 IST
ಅಕ್ಷರ ಗಾತ್ರ

ಕನ್ನಡ ನಾಡು-ನುಡಿಗೆ ಈಗ ಸಂಭ್ರಮದ ಸಮಯ. ಕನ್ನಡ ಭಾಷೆಗೆ ಎಂಟನೇ ಜ್ಞಾನಪೀಠ ಪ್ರಶಸ್ತಿ ಸಂದ ಹಿರಿಮೆ ಒಂದೆಡೆಯಾದರೆ ಸರಸ್ವತಿ ಸಮ್ಮಾನ್ ಪುರಸ್ಕಾರವೂ ಕನ್ನಡದ ಮುಡಿಗೇರಿದ್ದು ಅಭಿಮಾನಿ ಕನ್ನಡಿಗರಿಗೆ ಸಂತೋಷದ ಹೊಳೆ ಹರಿದ ಅನುಭವವಾಗಿತ್ತು.

ಶತಮಾನದ ಸಂಭ್ರಮದಿಂದ ಕೇವಲ ನಾಲ್ಕೇ ವರ್ಷ ದೂರವಿರುವ ಮೈಸೂರು ವಿಶ್ವವಿದ್ಯಾನಿಲಯಕ್ಕೆ `ಅತ್ಯುತ್ಕೃಷ್ಟ ಸಂಸ್ಥೆ~ಯ ಮಾನ್ಯತೆ ದೊರೆತಿದ್ದು ನಮ್ಮ ರಾಜ್ಯದ ಸಾಧನೆಗಳ ಸಾಲಿಗೆ ಮತ್ತೊಂದು ಹೆಮ್ಮೆಯ ಸೇರ್ಪಡೆ. ನಾಡಿಗೆ ಸಂದ ಈ ಎಲ್ಲ ಗೌರವಗಳು ತಂದ ಸಂತಸ ನಮ್ಮಳಗಿಳಿಯುತ್ತಿರುವಾಗಲೇ ರಾಜ್ಯದ ವಿವಿಧ ಭಾಗಗಳಲ್ಲಿರುವ ಸಾವಿರಾರು ಕನ್ನಡ ಶಾಲೆಗಳನ್ನು ಮುಚ್ಚಲು ರಾಜ್ಯ ಸರ್ಕಾರ ನಿರ್ಧಾರ ತೆಗೆದುಕೊಂಡಿರುವುದು ನಮ್ಮ ಭಾಷೆ ಹಾಗೂ ಭಾವನೆಗಳಿಗೆ ಒಂದು ದೊಡ್ಡ ಸವಾಲನ್ನೇ ಎಸೆದಿದೆ.

ರಾಜ್ಯ ಸರ್ಕಾರದ ಈ ನಿರ್ಧಾರಕ್ಕೆ ಸಾಹಿತ್ಯ ಹಾಗೂ ಸಾಮಾಜಿಕ ವಲಯಗಳಲ್ಲಿ ವ್ಯಕ್ತವಾದ ವ್ಯಾಪಕ ವಿರೋಧ ಹಾಗೂ ಕೈಕೋರ್ಟ್ ನೀಡಿದ ತಡೆಯಾಜ್ಞೆ ಕನ್ನಡ ಶಾಲೆಗಳನ್ನು ಮುಚ್ಚುವ ಪ್ರಕ್ರಿಯೆಗೆ ತಾತ್ಕಾಲಿಕವಾದ ತಡೆಯನ್ನೊಡ್ಡಿದೆ. ಆದರೆ ಇಂತಹ ಒಂದು ಪರಿಸ್ಥಿತಿ ಸೃಷ್ಟಿಯಾಗಲು ಕಾರಣವಾದ ಅಂಶಗಳು ಹಾಗೂ ಸರ್ಕಾರದ ಈ ನಿರ್ಧಾರ ಕಾರ್ಯರೂಪಕ್ಕೆ ಬಂದಲ್ಲಿ ಮುಂಬರುವ ದಿನಗಳಲ್ಲಿ ಆಗಬಹುದಾದ ಪರಿಣಾಮಗಳು-ಇವುಗಳ ಬಗ್ಗೆ ಗಂಭೀರ ಚಿಂತನೆ ಅಗತ್ಯ.

ಐದಕ್ಕಿಂತ ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳಿರುವ ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ಮುಚ್ಚಬೇಕು ಅಥವಾ ಇತರ ಶಾಲೆಗಳೊಡನೆ ವಿಲೀನಗೊಳಿಸಬೇಕು ಎಂಬ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಹಣಕಾಸು ಹೊರೆ ಮತ್ತು ಆಡಳಿತಾತ್ಮಕ ತೊಡಕುಗಳ ಕಾರಣಗಳನ್ನು ನೀಡಲಾಗುತ್ತಿದೆ. ಅಷ್ಟು ಕಡಿಮೆ ಸಂಖ್ಯೆಯ ಮಕ್ಕಳಿದ್ದರೆ ಶಾಲೆಯ ವಾತಾವರಣವೇ ಇರುವುದಿಲ್ಲ ಎಂಬ ಸಮರ್ಥನೆಯೂ ಇದೆ. ಭಾವನೆಗಳ ಪ್ರಪಂಚದಿಂದ ಹೊರ ಬಂದು ವ್ಯಾವಹಾರಿಕ ಅಥವಾ ವಾಸ್ತವಾಂಶಗಳ ಹಿನ್ನೆಲೆಯಲ್ಲಿ ಆಲೋಚಿಸಿದಾಗ ಸರ್ಕಾರದ ಈ ನಿರ್ಧಾರವನ್ನು ಸಂಪೂರ್ಣವಾಗಿ ಅಪ್ರಸ್ತುತ ಎಂದು ಅಲ್ಲಗಳೆಯುವ ಹಾಗೂ ಇಲ್ಲ. ಈಗಾಗಲೇ ಶೇ. 90ರಷ್ಟು ಶಾಲಾ ಶಿಕ್ಷಣದ ಆಯವ್ಯಯ ಅಧ್ಯಾಪಕರ ಸಂಬಳಕ್ಕೇ ಮೀಸಲಾಗಿದೆ. ಶಾಲಾ ಅಭಿವೃದ್ಧಿಗಾಗಿ ಸಂಪನ್ಮೂಲಗಳ ತೀವ್ರ ಅಭಾವವನ್ನು ಸರ್ಕಾರ ಎದುರಿಸುತ್ತಿದೆ. ಇಂಥ ಪರಿಸ್ಥಿತಿ ಇರುವಾಗ ವಿದ್ಯಾರ್ಥಿಗಳ ಕೊರತೆಯೂ ಸೇರಿಬಿಟ್ಟರೆ ಅರ್ಥಪೂರ್ಣವಾದ ಶಿಕ್ಷಣವನ್ನು ನೀಡುವುದಾದರೂ ಹೇಗೆ ಎಂಬ ಪ್ರಶ್ನೆ ಸಹಜವಾಗಿಯೇ ಏಳುತ್ತದೆ.

ಆದರೆ ಈ ಹಂತದಲ್ಲಿ `ಏಕೆ ಮುಚ್ಚಬಾರದು~ ಎನ್ನುವ ಪ್ರಶ್ನೆಗಿಂತ `ಏಕೆ ಮುಂದುವರಿಸಬೇಕು~ ಹಾಗೂ `ಹೇಗೆ ಮುಂದುವರಿಸಬಹುದು~ ಎಂಬ ಪ್ರಶ್ನೆಗಳು ಮುಖ್ಯವಾಗುತ್ತವೆ. ಕರ್ನಾಟಕ ರಾಜ್ಯದಲ್ಲಿ 55,000ಕ್ಕೂ ಹೆಚ್ಚು ಪ್ರಾಥಮಿಕ ಶಾಲೆಗಳಿದ್ದು, ಅವುಗಳಲ್ಲಿ ಶೇಕಡ ಅರ್ಧದಷ್ಟು ಕಿರಿಯ (1 ರಿಂದ 4 ನೇ ತರಗತಿಗಳನ್ನು ಹೊಂದಿರುವಂಥ) ಪ್ರಾಥಮಿಕ ಶಾಲೆಗಳಾಗಿವೆ. ಇನ್ನುಳಿದವು ಹಿರಿಯ (1 ರಿಂದ 7 ನೇ ತರಗತಿಗಳನ್ನು ಹೊಂದಿರುವ) ಪ್ರಾಥಮಿಕ ಶಾಲೆಗಳು. ಈಗ ಸರ್ಕಾರ ಮುಚ್ಚಲು ಹೊರಟಿರುವುದು 3,072 ಕಿರಿಯ ಪ್ರಾಥಮಿಕ ಶಾಲೆಗಳು ಹಾಗೂ 101 ಹಿರಿಯ ಪ್ರಾಥಮಿಕ ಶಾಲೆಗಳನ್ನು. 2009-10ರ ಸಾಲಿನಲ್ಲಿ 500 ಕಿರಿಯ ಪ್ರಾಥಮಿಕ ಶಾಲೆಗಳನ್ನು ಮುಚ್ಚಲಾಗಿದ್ದು, ಈ ಪಟ್ಟಿಗೆ ಅವುಗಳನ್ನೂ ಸೇರಿಸಿದರೆ ಸರಿಸುಮಾರು 3,700 ಶಾಲೆಗಳು ತಮ್ಮ ಬಾಗಿಲುಗಳನ್ನು ಅನೇಕ ಶಿಕ್ಷಣಾಕಾಂಕ್ಷಿಗಳ ಪಾಲಿಗೆ ಮುಚ್ಚಿದಂತೆಯೇ ಸರಿ.

ಕರ್ನಾಟಕ ರಾಜ್ಯದ ಶೇ. 62ರಷ್ಟು ಜನಸಂಖ್ಯೆ ಇಂದಿಗೂ ವಾಸಿಸುತ್ತಿರುವುದು ಗ್ರಾಮೀಣ ಭಾಗಗಳಲ್ಲಿ. ವಿಶೇಷವಾಗಿ ಇಂಥ ಪ್ರದೇಶಗಳಿಂದ ಮಕ್ಕಳು ಶಾಲೆಗೆ ಬರಬೇಕೆಂದರೆ ಎರಡು ಮುಖ್ಯವಾದ ಪ್ರೇರಕಾಂಶಗಳ ಅವಶ್ಯಕತೆಯಿದೆ. ಮೊದಲನೆಯದು, ಮನೆಯಿಂದ ಶಾಲೆ ಹತ್ತಿರದಲ್ಲಿರುವುದು ಹಾಗೂ ಎರಡನೆಯದು ಮಾತೃಭಾಷೆಯಲ್ಲಿ ಪ್ರಾರಂಭಿಕ ಶಿಕ್ಷಣವನ್ನು ಪಡೆಯುವ ಅವಕಾಶ. ಇಂದಿಗೂ ಅನೇಕ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವುದು ಶಾಲೆ ತಮ್ಮ ನೆರೆಹೊರೆಯಲ್ಲಿದೆ ಎಂಬ ಕಾರಣಕ್ಕಾಗಿ.
ಹೆಣ್ಣುಮಕ್ಕಳ ವಿಚಾರದಲ್ಲಂತೂ ಇದು ಬಹು ಮುಖ್ಯವಾದ ಅಂಶ. ಯಾವುದಾದರೂ ಒಂದು ನೆಪದಲ್ಲಿ ಅವರನ್ನು ಮನೆಯಲ್ಲಿ ಉಳಿಸಿಕೊಳ್ಳುವ ಮನೋಭಾವವಿರುವ ಕುಟುಂಬಗಳು ಊರಿನ ಶಾಲೆ ಮುಚ್ಚಿತು ಎಂಬ ಕಾರಣಕ್ಕಾಗಿ ಆ ಮಕ್ಕಳನ್ನು ಶಿಕ್ಷಣದಿಂದಲೇ ವಂಚಿಸುವ ಸಾಧ್ಯತೆಗಳನ್ನು ಸರ್ಕಾರ ಪರಿಶೀಲಿಸಿದೆಯೇ? ಹೆಣ್ಣುಮಕ್ಕಳ ಶಿಕ್ಷಣವನ್ನು ಸುತ್ತುವರೆದಿರುವ ಪೂರ್ವಗ್ರಹಗಳು ಈಗಷ್ಟೇ ನಿಧಾನವಾಗಿ ಸರಿಯುತ್ತಿದ್ದು, ಈ ಹಂತದಲ್ಲೇ ಹತ್ತಿರದ ಶಾಲೆಗಳನ್ನು ಮುಚ್ಚಿಬಿಟ್ಟರೆ ಕಾಲಚಕ್ರ ಮತ್ತೆ ಹಿಂದಕ್ಕೆ ಸರಿಯುವುದರಲ್ಲಿ ಸಂದೇಹವಿಲ್ಲ.

ಮಕ್ಕಳು ಶಾಲೆಗೆ ಆಸಕ್ತಿಯಿಂದ ಹೋಗಬೇಕಾದರೆ, ಶಾಲೆಯಲ್ಲಿ ಮುಂದುವರೆಯಬೇಕಾದರೆ ಅವರಿಗೆ ಪರಿಚಿತವಾದ ಭಾಷೆಯಲ್ಲಿ ಬೋಧನೆ-ಕಲಿಕೆಗೆ ಅವಕಾಶವಿರಬೇಕೆಂಬುದು ಒಂದು ಸಾಮಾನ್ಯ ಸತ್ಯ. ಮನೆಯಲ್ಲಿ ಮಾತನಾಡುವ ಭಾಷೆಯೇ ಶಿಕ್ಷಣ ಮಾಧ್ಯಮವಾದಾಗ ವಿಷಯಗ್ರಹಿಕೆ ಸುಲಲಿತವಾಗುತ್ತದೆ. ಆದರೆ ಬಹುಭಾಷಾ ಭಾರತೀಯ ಸಮಾಜದಲ್ಲಿ ಎಲ್ಲ ಮಕ್ಕಳಿಗೂ ಈ ಅನುಕೂಲ ದೊರೆಯುವುದಿಲ್ಲವಾದ್ದರಿಂದ ಅವರಲ್ಲಿ ಅನೇಕರು ತಮಗೆ ಚಿರಪರಿಚಿತವಲ್ಲದ ಭಾಷೆಯನ್ನು ಅರ್ಥ ಮಾಡಿಕೊಳ್ಳಲು ಕಷ್ಟಪಡಬೇಕು. ಕೆಲ ಶಿಕ್ಷಣ ಸಂಸ್ಥೆಗಳಲ್ಲೇನೋ ಈ ಭಾಷಾ ಜ್ಞಾನವನ್ನು ಒದಗಿಸಲು ವಿಶೇಷ ತರಗತಿಗಳನ್ನು ಏರ್ಪಾಡು ಮಾಡಬಹುದು. ಆದರೆ ಎಷ್ಟು ಸರ್ಕಾರಿ ಶಾಲೆಗಳಲ್ಲಿ ಇಂಥ ವ್ಯವಸ್ಥೆಯನ್ನು ನಾವು ನಿರೀಕ್ಷಿಸಬಹುದು?

ಕನ್ನಡ ಶಾಲೆಗಳನ್ನು ಮುಚ್ಚಿ ಮತ್ಯಾವುದೋ ಭಾಷೆಯ ಪರಿಸರದಲ್ಲಿ ಜ್ಞಾನವನ್ನು ಪಡೆಯಬೇಕಾದ ಪರಿಸ್ಥಿತಿ ಸೃಷ್ಟಿಯಾದರೆ, ಹೊಸ ಸಂದರ್ಭಗಳಿಗೆ ಹೊಂದಿಕೊಳ್ಳುವವರಿಗಿಂತ ಶಾಲೆಯಿಂದ ಹೊರಗುಳಿಯುವವರೇ ಹೆಚ್ಚಾಗಬಹುದು.
ಕನ್ನಡ  ನಮ್ಮ ರಾಜ್ಯದಲ್ಲಿ ವಾಸಿಸುವ ಅತ್ಯಧಿಕ ಸಂಖ್ಯೆಯ ಜನರ ಮಾತೃಭಾಷೆ. ಆದು ನಮ್ಮ ಆಡಳಿತಾತ್ಮಕ ಭಾಷೆಯೂ ಹೌದು, ಆಡು ಭಾಷೆಯೂ ಹೌದು. ಈ ಭಾಷೆಯಲ್ಲಿ ಮಾತನಾಡುವ, ಓದುವ ಹಾಗೂ ಬರೆಯುವ ಕನಿಷ್ಠಮಟ್ಟದ ಜ್ಞಾನವಾದರೂ ಎಲ್ಲರಿಗೂ ಇರಲೇಬೇಕು. ಆದರೆ ಈ ಹೊತ್ತು ಹೊರಗಿನ ರಾಜ್ಯಗಳವರ ಮಾತಿರಲಿ, ಕನ್ನಡವನ್ನು ಮಾತೃಭಾಷೆಯನ್ನಾಗಿ ಹೊಂದಿರುವ ಅನೇಕ ಕುಟುಂಬಗಳಲ್ಲಿಯೂ ಕನ್ನಡದ ಬಳಕೆ ಕಡಿಮೆಯಾಗುತ್ತಿದೆ.

ರಾಜ್ಯದ ಅನೇಕ ಗಡಿ ಭಾಗಗಳಲ್ಲಿ ಈಗಾಗಲೇ ಇರುವ ಅನೇಕ ಶಾಲೆಗಳಲ್ಲೂ ಕನ್ನಡ ಮಾಧ್ಯಮದಲ್ಲಿ ಶಿಕ್ಷಣವನ್ನು ಪಡೆಯಲು ಅಥವಾ ನೀಡಲು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಕಷ್ಟ ಪಡಬೇಕಾದ ಸಂದರ್ಭವಿದೆ. ಇಂತಹ ಪರಿಸ್ಥಿತಿಗಳ ನಡುವೆ ಸಾವಿರಾರು ಕನ್ನಡ ಶಾಲೆಗಳನ್ನು ಮುಚ್ಚಿ ಬಿಟ್ಟರೆ, ಅದು ಆ ಭಾಷೆಯ ಕಲಿಕೆಯನ್ನಷ್ಟೇ ಅಲ್ಲ, ಆ ಮೂಲಕ ವಿದ್ಯಾರ್ಥಿಗಳಿಗೆ ಪರಿಚಯವಾಗುತ್ತಿದ್ದ ಇಡೀ ಸಾಂಸ್ಕೃತಿಕ ಬದುಕಿನ ಕೊಂಡಿಯನ್ನೇ ಕಳಚಿದಂತಾಗುತ್ತದೆ. ಮತ್ತೊಂದೆಡೆ, ಕನ್ನಡ ಭಾಷೆಯ ಮೂಲಕ ಮಕ್ಕಳಿಗೆ ನೀಡಬಹುದಾಗಿದ್ದ ಜಾಗತಿಕ ಆಗು-ಹೋಗುಗಳ ಬಗೆಗಿನ ಜ್ಞಾನವನ್ನೂ ಕಸಿದುಕೊಂಡಂತಾಗುತ್ತದೆ.

ಜಾಗತೀಕರಣದ ಯುಗ ಪ್ರಾರಂಭವಾದ ಮೇಲೆ ಮಾತೃಭಾಷಾ ಶಿಕ್ಷಣ ಮಾಧ್ಯಮದಿಂದ ಜನರ ಒಲವು ಆಂಗ್ಲಭಾಷೆಯಲ್ಲಿ ಶಿಕ್ಷಣವನ್ನು ನೀಡುವ ವ್ಯವಸ್ಥೆಯತ್ತ ಜಾರುತ್ತಿರುವುದು ತಿಳಿದ ವಿಷಯವೇ. ಹಾಗೆ ಆಗುವುದು ಕೂಡ ಸಹಜವೇ. ಭೌತಿಕ, ಆರ್ಥಿಕ ಹಾಗೂ ಸಾಮಾಜಿಕ ದೂರಗಳು ಕಡಿಮೆಯಾಗುತ್ತಿರುವ ಈ ಹೊತ್ತಿನಲ್ಲಿ ಆಂಗ್ಲಭಾಷೆಯ ಜ್ಞಾನ ಅವಶ್ಯ ಎನ್ನುವುದರಲ್ಲಿ ಸಂದೇಹವೇ ಇಲ್ಲ. ಆದರೆ ಮಾತೃಭಾಷೆ ಅಥವಾ ಜನ ಸಮುದಾಯಗಳ ಆಡುಭಾಷೆಗಳಲ್ಲಿ ಲಭ್ಯವಿರುವ ಜ್ಞಾನ ಮಕ್ಕಳಿಗೆ ತಲುಪುವುದು ಹೇಗೆ?

ಕನ್ನಡ ನಾಡಿನ ಸಮೃದ್ಧ ಸಾಂಸ್ಕೃತಿಕ ಪರಂಪರೆ, ಇತಿಹಾಸ, ಸಾಹಿತ್ಯ, ಸಾಮಾಜಿಕ, ಆರ್ಥಿಕ ಚಿಂತನೆಗಳು, ಪ್ರಾಕೃತಿಕ ಸಂಪನ್ಮೂಲಗಳು, ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಿನ ಸಾಧನೆಗಳು-ಇವೇ ಮುಂತಾದ ವಿಷಯಗಳ ಬಗ್ಗೆ ಕನ್ನಡ ಭಾಷೆಯಲ್ಲಿ ಲಭ್ಯವಿರುವ ಜ್ಞಾನವನ್ನು ಅವರಿಗೆ ತಲುಪಿಸಬಹುದಾದ ಒಂದು ಪ್ರಮುಖ ನಿಯೋಗಿಯೆಂದರೆ ಕನ್ನಡ ಶಾಲೆ. ಇಂಥ ಸಹಸ್ರಾರು ಶಾಲೆಗಳು ನಮ್ಮ ಮಧ್ಯದಿಂದ ಮಾಯವಾದಾಗ ಭವಿಷ್ಯದಲ್ಲಿ ಆಗಬಹುದಾದ ಪರಿಣಾಮಗಳನ್ನು ಊಹಿಸಲು ಅಸಾಧ್ಯ.

ಈ ಹೊತ್ತು ಭಯ ಹುಟ್ಟಿಸುವ ಪ್ರಮಾಣದಲ್ಲಿ ಏರುತ್ತಿರುವ ಬಹುತೇಕ ಆಂಗ್ಲಮಾಧ್ಯಮ ಖಾಸಗಿ ಶಾಲೆಗಳಲ್ಲಿ ಕನ್ನಡ ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಗಳ ಬಗೆಗಿನ ಆಸಕ್ತಿಯನ್ನು ಜೀವಂತವಾಗಿಡಲು ಎಷ್ಟರಮಟ್ಟಿನ ಪ್ರಯತ್ನ ನಡೆಯುತ್ತಿದೆ ಎಂಬುದರ ಬಗ್ಗೆ ವಿಶ್ಲೇಷಣೆ ಅಗತ್ಯ.

ರಾಜ್ಯದಲ್ಲಿನ ಸರ್ಕಾರಿ ಹಾಗೂ ಸರ್ಕಾರಿ ಅನುದಾನಿತ ಶಾಲೆಗಳ ಸಂಖ್ಯೆಗೆ ಹೋಲಿಸಿದಾಗ ಖಾಸಗಿ ಸಂಸ್ಥೆಗಳ ಸಂಖ್ಯೆ ಕಡಿಮೆಯೇ. 1994ರಲ್ಲಿ ರಾಜ್ಯ ಸರ್ಕಾರ ಕಿರಿಯ ಪ್ರಾಥಮಿಕ ಹಂತದಲ್ಲಿ ಕನ್ನಡ ಅಥವಾ ಮಾತೃಭಾಷೆಯಲ್ಲೇ ಶಿಕ್ಷಣವನ್ನು ನೀಡಬೇಕೆಂದು ಸುತ್ತೋಲೆಯನ್ನು ಹೊರಡಿಸಿ, ಹಾಗೆ ಮಾಡದ ಎರಡು ಸಾವಿರಕ್ಕೂ ಹೆಚ್ಚು ಶಾಲೆಗಳಿಗೆ ಮಾನ್ಯತೆಯನ್ನು ರದ್ದು ಮಾಡಿತ್ತು. ಸರ್ಕಾರದ ಈ ನಿರ್ಧಾರವನ್ನು ಪ್ರತಿಭಟಿಸಿ ಕಾನೂನಾತ್ಮಕ ಹೋರಾಟಕ್ಕಿಳಿದ ಖಾಸಗಿ ಶಿಕ್ಷಣ ಸಂಸ್ಥೆಗಳ ಮನವಿಯನ್ನು ನ್ಯಾಯಾಲಯ ಮನ್ನಿಸಿದ ಕಾರಣ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕಾಯ್ತು. ಈ ಪ್ರಕರಣದಿಂದ ಮೊದಲೇ ದೂರವಾಗುತ್ತಿದ್ದ ಖಾಸಗಿ ಹಾಗೂ ಸರ್ಕಾರಿ ವಲಯಗಳು ಮತ್ತಷ್ಟು ದೂರವಾಗಿ ಶಿಕ್ಷಣದ ಮೇಲೆ ಖಾಸಗಿ ಸಂಸ್ಥೆಗಳ ಪ್ರಾಬಲ್ಯ ಹೆಚ್ಚಾಯಿತು. ಆಧುನಿಕ ಬದುಕಿಗೆ ಆಂಗ್ಲಭಾಷಾ ಮಾಧ್ಯಮದ ಶಿಕ್ಷಣವೇ ಏಕೈಕ ಮಾರ್ಗ ಎಂದು ನಂಬಿರುವ ಪೋಷಕರು ಎಷ್ಟಾದರೂ ಹಣ ತೆತ್ತು ತಮ್ಮ ಮಕ್ಕಳನ್ನು ಈ ಖಾಸಗಿ ಸಂಸ್ಥೆಗಳಿಗೆ ಸೇರಿಸಲು ಸಾಲುಸಾಲಾಗಿ ನಿಂತದ್ದು ಸರ್ಕಾರಿ ಸಂಸ್ಥೆಗಳನ್ನು ಮತ್ತಷ್ಟು ಅಂಚಿಗೆ ತಳ್ಳಿತು.

ದೇಶದ ಎಲ್ಲ ಪ್ರಜೆಗಳಿಗೆ ಸಮಾನ ಶೈಕ್ಷಣಿಕ ಅವಕಾಶ ಒಂದು ಸಂವಿಧಾನಾತ್ಮಕ ಹಕ್ಕು. ಆದರೆ ಇಂದಿಗೂ ಕಡ್ಡಾಯ ಪ್ರಾಥಮಿಕ ಶಿಕ್ಷಣದ ಕನಸು ಸಂಪೂರ್ಣವಾಗಿ ಸಾಕಾರವಾಗಿಲ್ಲ. ಇತ್ತೀಚೆಗಷ್ಟೇ ಜಾರಿಗೆ ಬಂದ ಶೈಕ್ಷಣಿಕ ಹಕ್ಕು ಕಾಯಿದೆ ನೆರೆಹೊರೆಯ ಶಾಲೆಯಲ್ಲಿ ಎಲ್ಲ ಮಕ್ಕಳಿಗೂ ಪ್ರವೇಶ ಕಡ್ಡಾಯ ಎಂಬ ಸೂಚನೆಯನ್ನು ನೀಡಿದ್ದರೂ ಶ್ರೀಮಂತರಿಗೆಂದೇ ಮೀಸಲಾಗಿರುವ ದುಬಾರಿ ಖಾಸಗಿ ಶಾಲೆಗಳು ಕಟ್ಟಿಕೊಂಡಿರುವ ಕೋಟೆಯನ್ನು ಭೇದಿಸಲು ಸಾಮಾಜಿಕ-ಆರ್ಥಿಕವಾಗಿ ಅನಾನುಕೂಲಗಳನ್ನೆದುರಿಸುತ್ತಿರುವ ಗುಂಪುಗಳಿಗೆ ಸಾಧ್ಯವೇ?

 ಬಹುಮಟ್ಟಿಗೆ ಮಧ್ಯಮ ಹಾಗೂ ಶ್ರೀಮಂತ ವರ್ಗಗಳ ಸೊತ್ತಾಗಿರುವ ಆಂಗ್ಲ ಭಾಷೆಯ ಜ್ಞಾನ-ಬಳಕೆಯನ್ನು ಸಾರ್ವತ್ರೀಕರಣಗೊಳಿಸಿ ಆಂಗ್ಲ ಹಾಗೂ ಮಾತೃಭಾಷಾ ಮಾಧ್ಯಮ ಶಿಕ್ಷಣಗಳು ಸೃಷ್ಟಿಸಿರುವ ಅಂತರವನ್ನು ಕಡಿಮೆ ಮಾಡಲು ಸರ್ಕಾರ ಎಷ್ಟು ಗಂಭೀರವಾಗಿ ಪ್ರಯತ್ನ ಮಾಡುತ್ತಿದೆ? ಕನ್ನಡ ಶಾಲೆಗಳನ್ನು ಮುಚ್ಚುವ ಅಥವಾ ವಿಲೀನಗೊಳಿಸುವ ನಿರ್ಧಾರಕ್ಕೆ ಬರುವ ಮುನ್ನ ಇಂಥ ಒಂದು ಕ್ರಮದಿಂದ ಆಗಬಹುದಾದ ಪರಿಣಾಮಗಳ ಬಗ್ಗೆ ಸರ್ಕಾರ ಅಥವಾ ಸರ್ಕಾರಿ ಅನುದಾನವನ್ನು ಪಡೆಯುವ ಎಷ್ಟು ಸಂಶೋಧನಾ ಸಂಸ್ಥೆಗಳು ಅಧ್ಯಯನವನ್ನು ಕೈಗೊಂಡಿವೆ?

ಶಾಲಾ ಹಾಜರಾತಿ-ದಾಖಲಾತಿಯ ಪರಿಸ್ಥಿತಿ ಕೇವಲ ಹೊಸ ಶಾಲೆಗಳ ತೆರೆಯುವಿಕೆ ಅಥವಾ ಹಳೇ ಶಾಲೆಗಳ ಮುಚ್ಚುವಿಕೆ ಹಾಗೂ ವಿಲೀನದಿಂದ ಬದಲಾಗುತ್ತದೆ ಎಂಬ ಭ್ರಮೆಯಲ್ಲಿ ತೇಲುವ ಬದಲು ಪ್ರಾದೇಶಿಕ ಅಸಮತೋಲನ ನಿವಾರಣೆ ಹಾಗೂ ಗುಣಮಟ್ಟದ ಶಿಕ್ಷಣಗಳ ನಡುವಣ ಸಂಬಂಧವನ್ನು ಅರಿತು ಮೂಲ ಸೌಕರ್ಯಗಳ ಪರಿಸ್ಥಿತಿಯನ್ನು ಬದಲಾಯಿಸಲು ನಡೆದಿರುವ ಪ್ರಯತ್ನಗಳಾದರೂ ಏನು? ಈ ಎಲ್ಲ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡಿ, ಪರಿಸ್ಥಿತಿಯನ್ನು ಬದಲಿಸಬೇಕೇ ಹೊರತು, ಸರ್ಕಾರಿ ಕನ್ನಡ ಶಾಲೆಗಳನ್ನು ಮುಚ್ಚಿದರೆ ಅಥವಾ ಸಾಧಿಸಲಾಗದ ಸವಲತ್ತುಗಳ ಆಸೆಗಳನ್ನು ಜನಗಳಿಗೆ ತೋರಿಸಿದರೆ ಖಂಡಿತಾ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಸಾಧ್ಯವಿಲ್ಲ.
(editpagefeedback@prajavani.co.in))

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT