ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷೇರುಪೇಟೆ: ಹೆಚ್ಚುತ್ತಿರುವ ಅಸ್ಥಿರತೆ

Last Updated 16 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ
ಅಸ್ಥಿರತೆಯು ಇಂದಿನ ದಿನಗಳಲ್ಲಿ ಎಲ್ಲ ವಲಯಗಳಲ್ಲೂ ತಾಂಡವಾಡುತ್ತಿದ್ದು, ವಿಶೇಷವಾಗಿ ಷೇರುಪೇಟೆಗಳಲ್ಲಿ ಇದು ತುಸು ಹೆಚ್ಚಿಗೆ ಇದೆ. ಕಳೆದ ವಾರ ಪ್ರಕಟವಾದ ಕೈಗಾರಿಕಾ ಉತ್ಪಾದನಾ ಸೂಚ್ಯಂಕವು ಅಕ್ಟೋಬರ್ ತಿಂಗಳಲ್ಲಿ ಶೇ 8.2ರ ಪ್ರಗತಿ ಕಂಡಿದೆ ಎಂಬ ಅಂಶವು ಉತ್ತೇಜನಕಾರಿಯಾಗಲಿಲ್ಲ. ಲೋಕಸಭೆಯಲ್ಲಿ ಬ್ಯಾಂಕಿಂಗ್ ಮಸೂದೆಗೆ ಅಂಗೀಕಾರ ದೊರೆಯುವ ಸುದ್ದಿಯ ಕಾರಣ, ಬ್ಯಾಂಕಿಂಗ್ ವಲಯವು ವಾರದ ಆರಂಭದಿಂದ ಗುರುವಾರದವರೆಗೂ ಏರಿಕೆ ಕಂಡಿತು.

ಆದರೆ ಗುರುವಾರ ಅಂತಿಮ ಒಂದು ಗಂಟೆಯ ಅವಧಿಯು ಬ್ಯಾಂಕಿಂಗ್ ಷೇರುಗಳನ್ನು ತತ್ತರಿಸುವಂತೆ ಮಾಡಿತು. ಕರ್ನಾಟಕ ಬ್ಯಾಂಕ್ ವಿಶೇಷವಾಗಿ ಸುಮಾರು 15% ರಷ್ಟು ಕುಸಿತಕ್ಕೊಳಗಾಯಿತು. ಹಣದುಬ್ಬರದ ಪ್ರಮಾಣವು ಶೇ 7.24 ಹಂತದಲ್ಲಿದ್ದುದು ಪೇಟೆಯಲ್ಲಿ ವಿಶೇಷವಾಗಿ ಬ್ಯಾಂಕಿಂಗ್ ವಲಯದ ಷೇರುಗಳನ್ನು ಸ್ವಲ್ಪಮಟ್ಟಿಗೆ ಚೇತರಿಸಿಕೊಳ್ಳುವಂತೆ ಮಾಡಿತು. ಕಾರಣ ಮುಂದಿನ ದಿನಗಳಲ್ಲಿ ಕೈಗೊಳ್ಳಬಹುದಾದ ಕ್ರಮಗಳು ಪೇಟೆಯಲ್ಲಿ ಚೇತರಿಕೆ ಮೂಡಿಸಬಹುದೆಂಬ ನಿರೀಕ್ಷೆ. ಕಳೆದ ವಾರದಲ್ಲಿ ಸರ್ಕಾರವು ಎನ್‌ಎಂಡಿಸಿ ಷೇರುಗಳನ್ನು ಷೇರು ವಿನಿಮಯ ಕೇಂದ್ರಗಳ ಮೂಲಕ ಮಾರಾಟ ಮಾಡಿ ಸುಮಾರುರೂ6,000 ಕೋಟಿ ಹಣ ಸಂಗ್ರಹಿಸುವಲ್ಲಿ ಯಶಸ್ಸು ಕಂಡಿತು.
 
ಒಟ್ಟಾರೆ 106 ಅಂಶಗಳಷ್ಟು ಹಾನಿಯಿಂದ ಈ ಸಂವೇದಿ ಸೂಚ್ಯಂಕವು 19,317 ಅಂಶಗಳಲ್ಲಿ  ವಾರಾಂತ್ಯ ಕಂಡಿತು. ಇದಕ್ಕೆ ಬೆಂಬಲವಾಗಿ ಮಧ್ಯಮ ಶ್ರೇಣಿ ಸೂಚ್ಯಂಕವು 71 ಅಂಶಗಳಷ್ಟು ಹಾಗೂ ಕೆಳಮಧ್ಯಮ ಶ್ರೇಣಿ ಸೂಚ್ಯಂಕವು 92 ಅಂಶಗಳಷ್ಟು ಹಾನಿ ಕಂಡಿತು. ವಿದೇಶಿ ವಿತ್ತೀಯ ಸಂಸ್ಥೆಗಳು ಸತತವಾದ ಕೊಳ್ಳುವಿಕೆಯಿಂದ ರೂ 4,791 ಕೋಟಿ ಹಣದ ಒಳಹರಿವು ತಂದರೆ ಸ್ವದೇಶಿ ವಿತ್ತೀಯ ಸಂಸ್ಥೆಗಳುರೂ3,158 ಕೋಟಿ ಮೌಲ್ಯದ ಷೇರು ಮಾರಾಟ ಮಾಡಿವೆ. ಷೇರುಪೇಟೆಯ ಬಂಡವಾಳ ಮೌಲ್ಯರೂ 67.80 ಲಕ್ಷ ಕೋಟಿಗೆ ಇಳಿದಿದೆ. ಇಂತಹ ವಾತಾವರಣದಲ್ಲೂ ಆಟೋ ವಲಯದ ಸೂಚ್ಯಂಕವು 226 ಅಂಶಗಳಷ್ಟು ಹಾಗೂ ಬ್ಯಾಂಕಿಂಗ್ ವಲಯದ ಸೂಚ್ಯಂಕ 81 ಅಂಶಗಳಷ್ಟು ಏರಿಕೆ ಪಡೆದಿದೆ. 
 
ಆರಂಭಿಕ ಷೇರಿನ ವಿಚಾರ
ಈ ವಾರ ಸಾರ್ವಜನಿಕ ವಿತರಣೆ ಮಾಡಿದ ಕ್ರೆಡಿಟ್ ಅನಾಲಿಸಿಸ್ ಅಂಡ್ ರಿಸರ್ಚ್ ಲಿ ಕಂಪೆನಿಗೆ ಉತ್ತಮ ಸ್ಪಂದನ ದೊರೆಯಿತು. ಸಣ್ಣ ಹೂಡಿಕೆದಾರರ ಬೆಂಬಲವೂ ಗಮನಾರ್ಹವಾಗಿತ್ತು. ಇದಕ್ಕೆ ಪೂರಕ ಬೆಂಬಲವು ಲೀಸ್ಟಿಂಗ್ ಆಗಿರುವ ತ್ರಿಸಿಲ್ ಮತ್ತು ಇಕ್ರಾಗಳ ಬೆಲೆಗಳು ಏರಿಕೆ ಕಂಡುಕೊಳ್ಳುವುದರಿಂದ ದೊರೆಯಿತು.
 
ಅದೇ ರೀತಿ ಸ್ವಲ್ಪಮಟ್ಟಿಗೆ ಯಶಸ್ಸು ಕಂಡ ಮತ್ತೊಂದು ಕಂಪೆನಿ ಎಂದರೆ ಪಿ.ಸಿ. ಜುವೆಲ್ಲರ್ಸ್‌ ಲಿ. ಈ ಕಂಪೆನಿಯ ವಿತರಣೆಗೆ ಬೆಂಬಲಿಸಲೇನೋ ಎಂಬಂತೆ ಈಗಾಗಲೇ ವಹಿವಾಟಾಗುತ್ತಿರುವ ಗೀತಾಂಜಲಿ ಜೆಮ್ಸನ ಷೇರಿನ ದರವು ಈ ವಾರ ವಾರ್ಷಿಕ ಗರಿಷ್ಠ ಬೆಲೆರೂ534 ತಲುಪಿತ್ತು. ನಂತರರೂ462 ರವರೆಗೂ ಕುಸಿಯಿತು. ಇದು ಐಪಿಒ ಯಶಸ್ಸಿಗೆ ಸಂಘಟಿತ ಪ್ರಯತ್ನವಾಗಿ ಕಂಡರೂ ಇಂತಹ ಅಪರೂಪದ ಜಿಗಿತ ಲಾಭದ ನಗದೀಕರಣಕ್ಕೆ ಅಪೂರ್ವ ಅವಕಾಶವಲ್ಲವೇ.
 
ಆದರೆ ಮತ್ತೊಂದು ಕಂಪೆನಿ ಭಾರತೀ ಇನ್ ಫ್ರಾಟಿಲ್ ಲಿ. ಕಂಪೆನಿಯು ವಿತರಣೆ ಮುಗಿಸಿತಾದರೂ ಸಣ್ಣ ಹೂಡಿಕೆದಾರರ ಬೆಂಬಲವಂತೂ ಸಂಪೂರ್ಣವಾಗಿ ಇಲ್ಲದಂತಾಗಿತ್ತು. ಮೀಸಲಿಟ್ಟ ಭಾಗದಲ್ಲಿ ಕೇವಲ ಶೇ 12.24 ರಷ್ಟು ಮಾತ್ರ ಸಣ್ಣ ಹೂಡಿಕೆದಾರರ ಆಸಕ್ತಿ ಕೆರಳಿಸಲು ಸಾಧ್ಯವಾಗಿರುವುದು ಹೂಡಿಕೆದಾರರ ಪ್ರಬುದ್ಧತೆಗೆ ಸಾಕ್ಷಿ ಎನ್ನಬಹುದು.
 
ಹೊಸ ಷೇರಿನ ವಿಚಾರ
ದೆಹಲಿ ಮತ್ತು ಕಲ್ಕತ್ತಾ ಸ್ಟಾಕ್    ಎಕ್ಸ್‌ಚೇಂಜ್‌ಗಳಲ್ಲಿ ವಹಿವಾಟಾಗುತ್ತಿರುವ ಫೋಕಸ್ ಇಂಡಸ್ಟ್ರಿಯಲ್ ರಿಸೋರ್ಸಸ್ ಲಿ. ಕಂಪೆನಿಯು 12 ರಿಂದ ಬಾಂಬೆ ಷೇರು ವಿನಿಮಯ ಕೇಂದ್ರದಲ್ಲಿ ಟಿ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಿದೆ.
 
ಬೋನಸ್ ಷೇರಿನ ವಿಚಾರ
- ಎಂ.ಎಸ್.ಆರ್. ಇಂಡಿಯಾ ಲಿ. ಕಂಪೆನಿಯು ವಿತರಿಸಲಿರುವ 5:1ರ ಅನುಪಾತದ ಬೋನಸ್ ವಿತರಣೆಗೆ ಡಿಸೆಂಬರ್ 21 ನಿಗದಿತ ದಿನವಾಗಿದೆ. ಈ ಹಿಂದೆ ಈ ಕಂಪೆನಿ ಹೆಸರು ಸ್ಟಾರ್ ಲೀಸಿಂಗ್ ಲಿ. ಎಂದಿತ್ತು.
 
-ಟಿ ಗುಂಪಿನ ಶ್ರೀ ಗಣೇಶ್ ಸ್ಪಿನ್ನರ್ಸ್ ಲಿ. ಕಂಪೆನಿ 18 ರಂದು ಬೋನಸ್ ಷೇರು ವಿತರಣೆ ಪರಿಶೀಲಿಸಲಿದೆ.
 
ಮುಖ ಬೆಲೆ ಸೀಳಿಕೆ ವಿಚಾರ
- ಎಂ ಅಂಡ್ ಬಿ ಸ್ವಿಚ್‌ಗೇರ್ ಕಂಪೆನಿಯ ಷೇರಿನ ಮುಖ ಬೆಲೆಯನ್ನುರೂ10 ರಿಂದರೂ1ಕ್ಕೆ ಸೀಳಲು 24ನೇ ಡಿಸೆಂಬರ್ ನಿಗದಿತ ದಿನವಾಗಿದೆ.
 
-ಅನುಕರಣ ಕಮರ್ಷಿಯಲ್ ಎಂಟರ್ ಪ್ರೈಸಸ್ ಲಿ. ಷೇರಿನ ಮುಖ ಬೆಲೆರೂ10 ರಿಂದರೂ1ಕ್ಕೆ ಸೀಳಲು ಡಿಸೆಂಬರ್ 28 ನಿಗದಿತ ದಿನವಾಗಿದೆ.
 
ಎಸ್.ಎಂ.ಇ. ಸೂಚ್ಯಂಕ
ಬಾಂಬೆ ಷೇರು ವಿನಿಮಯ ಕೇಂದ್ರದ ಮಧ್ಯಮ ಮತ್ತು ಕೆಳಮಧ್ಯಮ ಶ್ರೇಣಿಯ ಕಂಪೆನಿಗಳಿಗಾಗಿ ಕಳೆದ ಮಾರ್ಚ್‌ನಲ್ಲಿ ಆರಂಭವಾದ ಎಸ್.ಎಂ.ಇ. ವೇದಿಕೆಯಡಿ ಇದುವರೆಗೂ 11 ಕಂಪೆನಿಗಳು ವಹಿವಾಟಿಗೆ, ಆರಂಭಿಕ ಷೇರು ವಿತರಣೆ ಮೂಲಕ ನೊಂದಾಯಿಸಿಕೊಂಡಿದೆ. ಈ ವಲಯದ ಕಂಪೆನಿಗಳ ಸಾಧನೆಯ ಬಗ್ಗೆ ಮಾಪನ ಮಾಡಲು ಎಸ್.ಎಂ.ಇ. ಐ.ಪಿ.ಒ. ಸೂಚ್ಯಂಕವನ್ನು ಶುಕ್ರವಾರ ಆರಂಭಿಸಲಾಗಿದೆ. ಈ ಎಸ್.ಎಂ.ಇ. ಐ.ಪಿ,ಒ. ಸೂಚ್ಯಂಕಕ್ಕೆ ಮೂಲ ಮೌಲ್ಯವನ್ನು 100 ಎಂದು ನಿಗದಿ ಪಡಿಸಿ ಆಗಸ್ಟ್ 16 ರಿಂದ ಅಳವಡಿಸಲಾಗಿದೆ. ಅಲ್ಲಿಂದ ಇಂದಿನವರೆಗೂ ಶೇ 30.77 ರಷ್ಟು ಅಭಿವೃದ್ಧಿ ಕಂಡಿದೆ. 
 
ಈ ವಲಯ ಕಂಪೆನಿಗಳು ಷೇರು ವಿನಿಮಯ ಕೇಂದ್ರದಲ್ಲಿ ಲೀಸ್ಟಿಂಗ್‌ಗೆ, ಕಂಪೆನಿಯ ಬಂಡವಾಳರೂ25 ಕೋಟಿವರೆಗೂ ಇರಬಹುದಾಗಿದ್ದು ಮುಂದಿನ ದಿನಗಳಲ್ಲಿ ಈ ವಲಯದ ಕಂಪೆನಿಗಳು ಹೆಚ್ಚಾಗಿ ಐ.ಪಿ.ಒ. ಮೂಲಕ ಪೇಟೆ ಪ್ರವೇಶಿಸುವ ನಿರೀಕ್ಷೆಯಿದೆ. ನಮ್ಮ ದೇಶದ ಶೇ 40 ರಷ್ಟು ರಫ್ತು ಈ ವಲಯದಿಂದಾಗುತ್ತಿದ್ದು ಸುಮಾರು 8 ಕೋಟಿ ನೌಕರರು ಈ ವಲಯದ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.
 
ವಾರದ ವಿಶೇಷ
ವಹಿವಾಟಿನಿಂದ ಹಿಂದಕ್ಕೆ
ಸದ್ಯ ಪುಣೆ, ಬೆಂಗಳೂರು ಷೇರು ವಿನಿಮಯ ಕೇಂದ್ರ ಹಾಗೂ ಬಾಂಬೆ ಷೇರು ವಿನಿಮಯ ಕೇಂದ್ರದ ಇಂಡೋನೆಕ್ಸ್ಟ್ ವಿಭಾಗದಲ್ಲಿ ವಹಿವಾಟಾಗುತ್ತಿರುವ ಎ.ಪಿ.ಡಬ್ಲ್ಯು. ಸಿಸ್ಟಮ್ಸ ಲಿ. ಕಂಪೆನಿಯು ಶೇ 25 ರಷ್ಟು ಷೇರುಗಳನ್ನು ಸಾರ್ವಜನಿಕರಿಂದ ತೆರೆದ ಕರೆ ಮೂಲಕ ಕೊಂಡು ಷೇರು ವಿನಿಮಯ ಕೇಂದ್ರದ ವಹಿವಾಟಿನಿಂದ ಹಿಂದೆ ಸರಿಯಲಿದೆ. ಈಗಾಗಲೇ ಕಂಪೆನಿಯ ಪ್ರವರ್ತಕರು ಶೇ 75 ರಷ್ಟು ಭಾಗಿತ್ವ ಹೊಂದಿದ್ದಾರೆ. ಡಿಸೆಂಬರ್ 20 ರಿಂದ ನಿಗದಿತ ದಿನ 14 ರಂದು ನೋಂದಾಯಿಸಿಕೊಂಡಿರುವ ಷೇರುದಾರರಿಗೆ `ಬಿಡ್' ಫಾರಂಗಳನ್ನು ಕಳುಹಿಸಲಾಗುವುದು. ಜನವರಿ 18 ರಂದು ಅಂತಿಮ ಅಂಗೀಕೃತ ದರವನ್ನು ಪ್ರಕಟಿಸಲಾಗುವುದು. ಜನವರಿ 23ರ ರೊಳಗೆ `ಬಿಡ್' ಅಂಗೀಕೃತವಾದವರಿಗೆ ಹಣ ಪಾವತಿಸಲಾಗುವುದು. ನಂತರ ವಿನಿಮಯ ಕೇಂದ್ರಗಳಿಂದ ಡಿಲೀಸ್ಟ್ ಆಗುವುದು ಅಂದರೆ ವಹಿವಾಟು ಸ್ಥಗಿತಗೊಳ್ಳಲಿದೆ.
 
ಆಫರ್ ಫಾರ್ ಸೇಲ್
ಪ್ರತಿಯೊಂದು ಕಂಪೆನಿಯಲ್ಲಿ ಕನಿಷ್ಠ ಶೇ 25 ರಷ್ಟು ಷೇರುಗಳು ಸಾರ್ವಜನಿಕರಲ್ಲಿರಬೇಕೆಂಬ ಸೆಬಿ ನಿಯಮಾವಳಿಗೆ ಅಂತಿಮ ಗಡವು ಸಮೀಪಿಸುತ್ತಿರುವುದರಿಂದ ಕಂಪೆನಿಗಳು ಷೇರು ವಿನಿಮಯ ಕೇಂದ್ರದ ವಿಶೇಷ ಗವಾಕ್ಷಿಯ ಮೂಲಕ ಈ ಗುರಿ ತಲುಪಲು ಪ್ರಯತ್ನಿಸುತ್ತಿವೆ. ಈಗಾಗಲೇ ಕಂಪೆನಿಗಳಾದ ಪ್ರೆಸಿನಿಯಸ್ ಕಬಿ ಆಂಕಾಲಜಿ, ದಿಸಾ ಇಂಡಿಯಾ, ಬ್ಲೂಡಾರ್ಟ್ ಎಕ್ಸ್‌ಪ್ರೆಸ್‌ಗಳು ಈ ಗವಾಕ್ಷಿಯ ಉಪಯೋಗ ಪಡೆದಿವೆ. ಶುಕ್ರವಾರದಂದು ಹನಿವೆಲ್ ಆಟೊಮೇಷನ್ ಲಿ. ಕಂಪೆನಿಯು ಈ ಗವಾಕ್ಷಿಯ ಮೂಲಕ 5,51,333 ಷೇರು ಅಂದರೆ ಶೇ 6.24ರ ಭಾಗಿತ್ವವನ್ನುರೂ2,150ರ ಕನಿಷ್ಟ ಬೆಲೆಯಲ್ಲಿ ವಿತರಿಸಿತು. ಅಂದು ಈ ಕಂಪೆನಿಯ ಷೇರಿನ ಬೆಲೆ ರೂ2230 ರಿಂದ ರೂ 2490ರ ವರೆಗೂ ಏರಿಳಿತ ಕಂಡುರೂ2396 ರಲ್ಲಿ ಅಂತ್ಯಕಂಡಿತು.
 
- 98863-13380 
(ಮಧ್ಯಾಹ್ನ 4.30ರ ನಂತರ) 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT