ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾನ್ಯರಿಗೂ ಕೈಗೆಟಕುವ ಫೋನ್ ಶಿಯೋಮಿ ರೆಡ್‌ಮಿ 4

Last Updated 24 ಮೇ 2017, 19:30 IST
ಅಕ್ಷರ ಗಾತ್ರ

ನೀಡುವ ಬೆಲೆಗೆ ಉತ್ತಮ ಎನ್ನಬಹುದಾದ ಉತ್ಪನ್ನಗಳನ್ನು ನಿರಂತರವಾಗಿ ನೀಡುತ್ತ ಬಂದಿರುವ ಒಂದು ಕಂಪೆನಿ ಶಿಯೋಮಿ. ಚೀನಾ ದೇಶದ ಈ ಕಂಪೆನಿ ಈಗ ಭಾರತದಲ್ಲೂ ಫೋನ್ ತಯಾರಿಸುತ್ತಿದೆ. ಶಿಯೋಮಿ ಕಂಪೆನಿಯ ಹಲವು ಉತ್ಪನ್ನಗಳನ್ನು ಈ ಅಂಕಣದಲ್ಲಿ ವಿಮರ್ಶೆ ಮಾಡಲಾಗಿದೆ. ಇತ್ತೀಚೆಗೆ ವಿಮರ್ಶೆ ಮಾಡಿದ ಫೋನ್‌ಗಳಲ್ಲಿ ಗಮನಾರ್ಹವಾದದ್ದು ರೆಡ್‌ಮಿ ನೋಟ್ 4, ರೆಡ್‌ಮಿ 3ಎಸ್ ಪ್ರೈಮ್ ಮತ್ತು ರೆಡ್‌ಮಿ 4ಎ. ಇವುಗಳ ಸಾಲಿಗೆ ಮತ್ತೊಂದು ಸೇರ್ಪಡೆ ರೆಡ್‌ಮಿ 4 (Xiaomi Redmi 4). ಇದು ಬಹುತೇಕ ರೆಡ್‌ಮಿ 3ಎಸ್ ಪ್ರೈಮ್‌ಗೆ ಉತ್ತರಾಧಿಕಾರಿಯಾಗಿ ಬಂದಿರುವುದು. ಇದು ನಮ್ಮ ಈ ವಾರದ ಗ್ಯಾಜೆಟ್.

ಗುಣವೈಶಿಷ್ಟ್ಯಗಳು
1.4 ಗಿಗಾಹರ್ಟ್ಸ್ ವೇಗದ ಎಂಟು ಹೃದಯಗಳ ಪ್ರೊಸೆಸರ್ (Snapdragon 435), ಗ್ರಾಫಿಕ್ಸ್‌ಗೆಂದೇ ಪ್ರತ್ಯೇಕ ಆಡ್ರೆನೋ 505 ಪ್ರೊಸೆಸರ್, 3+32 ಗಿಗಾಬೈಟ್ ಮೆಮೊರಿ, 2ಜಿ/3ಜಿ/4ಜಿ ಮೈಕ್ರೊ ಮತ್ತು ನ್ಯಾನೋ ಸಿಮ್, VoLTE ಸೌಲಭ್ಯ ಇದೆ, ಮೈಕ್ರೊಎಸ್‌ಡಿ ಮೆಮೊರಿ ಕಾರ್ಡ್ ಹಾಕುವ ಸೌಲಭ್ಯ ಇದೆ, ಯುಎಸ್‌ಬಿ ಆನ್-ದ-ಗೋ (USB OTG) ಇದೆ, 5 ಇಂಚು ಗಾತ್ರದ 1280x720 ಪಿಕ್ಸೆಲ್ ರೆಸೊಲೂಶನ್‌ನ ಐಪಿಎಸ್ ಪರದೆ, 13 ಮೆಗಾಪಿಕ್ಸೆಲ್‌ನ ಪ್ರಾಥಮಿಕ ಮತ್ತು 5 ಮೆಗಾಪಿಕ್ಸೆಲ್‌ನ ಇನ್ನೊಂದು ಕ್ಯಾಮೆರಾ, ಕ್ಯಾಮೆರಾಕ್ಕೆ ಎಲ್ಇಡಿ ಫ್ಲಾಶ್, ಪೂರ್ತಿ ಹೈಡೆಫಿನಿಶನ್ (1080p) ವಿಡಿಯೊ ಚಿತ್ರೀಕರಣ, ತೆಗೆಯಲಸಾಧ್ಯವಾದ 4100mAh ಶಕ್ತಿಯ ಬ್ಯಾಟರಿ, 139.2. x 69.6 x 8.9 ಮಿ.ಮೀ ಗಾತ್ರ, 150 ಗ್ರಾಂ ತೂಕ, ವೈಫೈ, ಬ್ಲೂಟೂತ್, ಜಿಪಿಎಸ್, ಅವಕೆಂಪು (infrared) ದೂರನಿಯಂತ್ರಕ, ಬೆರಳಚ್ಚು ಸ್ಕ್ಯಾನರ್, ಆಂಡ್ರಾಯ್ಡ್‌ 6.0.1+ ಶಿಯೋಮಿಯವರದೇ ಆದ ಎಂಐಯುಐ 8.2 (MIUI 8.2), ಇತ್ಯಾದಿ. ಬೆಲೆ ₹8,999. 2+16 ಗಿಗಾಬೈಟ್ ಮಾದರಿ ₹6,999, 4+16 ಗಿಗಾಬೈಟ್ ಮಾದರಿ ₹10,999. ಎರಡು ಬಣ್ಣಗಳಲ್ಲಿ ಲಭ್ಯ.

ಈಗಾಗಲೇ ಹೇಳಿದಂತೆ ಇದು ಶಿಯೋಮಿಯವರದೇ ಆದ ರೆಡ್‌ಮಿ 3ಎಸ್ ಪ್ರೈಮ್‌ಗೆ ಉತ್ತರಾಧಿಕಾರಿಯಾಗಿ ಬಂದಿರುವುದು. ರಚನೆ ಮತ್ತು ವಿನ್ಯಾಸ ಬಹುಮಟ್ಟಿಗೆ ಅದನ್ನೇ ಹೋಲುತ್ತದೆ. ದಪ್ಪ ಮಾತ್ರ ಸ್ವಲ್ಪ (0.3 ಮಿ.ಮೀ) ಜಾಸ್ತಿ ಇದೆ. ಇತ್ತೀಚೆಗೆ ಮಾರುಕಟ್ಟೆಯಲ್ಲಿ ದೊರಕುತ್ತಿರುವ ಬಹುತೇಕ ಫೋನ್‌ಗಳಂತೆ ಇದರಲ್ಲಿಯೂ ಹಿಂದುಗಡೆಯ ಕವಚ ತೆಗೆಯಲು ಸಾಧ್ಯವಿಲ್ಲ. ಈ ಕವಚ ನಯವಾಗಿಲ್ಲ, ಸ್ವಲ್ಪ ದೊರಗಾಗಿದೆ. ಬದಿಗಳು ವಕ್ರವಾಗಿವೆ. ಆದರೂ ಕೈಯಿಂದ ಜಾರಿ ಬೀಳಬಹುದೆಂಬ ಭಯವಿಲ್ಲ. ಬಲಭಾಗದಲ್ಲಿ ಆನ್/ಆಫ್ ಮತ್ತು ವಾಲ್ಯೂಮ್ ಬಟನ್‌ಗಳಿವೆ. ಮೇಲ್ಗಡೆ 3.5 ಮಿ.ಮೀ ಇಯರ್‌ಫೋನ್ ಕಿಂಡಿ ಹಾಗೂ ಅದರ ಪಕ್ಕದಲ್ಲಿ ಅವಕೆಂಪು (infrared) ದೂರನಿಯಂತ್ರಕದ ಕಿಟಕಿ ಇದೆ. ಇದನ್ನು ಬಳಸಿ ನಿಮ್ಮ ಮನೆಯ ಟಿ.ವಿ., ಆಂಪ್ಲಿಫೈಯರ್, ಇತ್ಯಾದಿ ಹಲವು ಉಪಕರಣಗಳನ್ನು ನಿಯಂತ್ರಿಸಬಹುದು. ಕೆಳಭಾಗದಲ್ಲಿ ಮೈಕ್ರೊಯುಎಸ್‌ಬಿ ಕಿಂಡಿ ಇದೆ. ಎಡಭಾಗದಲ್ಲಿ ಸಿಮ್ ಮತ್ತು ಮೆಮೊರಿ ಕಾರ್ಡ್ ಹಾಕಲು ಚಿಕ್ಕ ಟ್ರೇ ಇದೆ. ಇದರಲ್ಲಿ ಒಂದು ಮೈಕ್ರೊ ಸಿಮ್ ಮತ್ತು ಇನ್ನೊಂದು ನ್ಯಾನೋ ಸಿಮ್ ಅಥವಾ ಮೆಮೊರಿ ಕಾರ್ಡ್ ಹಾಕಬಹುದು. ಇದರ ಪ್ರಾಥಮಿಕ ಕ್ಯಾಮೆರಾ ಮೇಲ್ಗಡೆ ಮೂಲೆಯಲ್ಲಿದೆ. ಈ ರೀತಿ ಕ್ಯಾಮೆರಾ ಇರುವುದು ನನಗೆ ಇಷ್ಟವಿಲ್ಲ. ಕ್ಯಾಮೆರಾ ಬಳಸುವಾಗ ಎಚ್ಚರಿಕೆ ವಹಿಸದಿದ್ದರೆ ಎಡಗೈಯ ತೋರುಬೆರಳು ಕ್ಯಾಮೆರಾದ ಲೆನ್ಸ್ ಅಥವಾ ಫ್ಲಾಶ್ ಅನ್ನು ಮುಚ್ಚುವ ಸಾಧ್ಯತೆಗಳಿವೆ. ಹಿಂಬದಿಯಲ್ಲಿ ಮೇಲ್ಗಡೆ ಮಧ್ಯಭಾಗದಲ್ಲಿ ಬೆರಳಚ್ಚು ಸ್ಕ್ಯಾನರ್ ಇದೆ.  ಇದು 5 ಇಂಚು ಗಾತ್ರ ಫೋನ್ ಅಂದರೆ ತುಂಬ ದೊಡ್ಡದೂ ಅಲ್ಲ, ಚಿಕ್ಕದೂ ಅಲ್ಲ ಎನ್ನಬಹುದು. 5.5 ಇಂಚು ಗಾತ್ರ ದೊಡ್ಡದಾಯಿತು ಎನ್ನುವವರಿಗೆ ಈ ಫೋನ್ ಸೂಕ್ತ. ಈ ಫೋನಿನ ಒಂದು ವಿಶೇಷತೆ2.5D ಗಾಜಿನ ಪರದೆ. ಅಂದರೆ ಪರದೆಯ ಬದಿಗಳು ಸ್ವಲ್ಪ ವಕ್ರವಾಗಿದ್ದು, ಸುಂದರವಾಗಿದೆ.

ಇದರಲ್ಲಿ ಎಂಟು ಹೃದಯಗಳ ಪ್ರೊಸೆಸರ್ ಇದೆ. ಆದರೆ ಅದು ವೇಗದ ಪ್ರೊಸೆಸರ್ ಅಲ್ಲ. ಇದರ ಅಂಟುಟು ಬೆಂಚ್‌ಮಾರ್ಕ್ 43235 ಇದೆ. ಇದು ಕಡಿಮೆ ಎನ್ನಬಹುದು. ಆದರೆ ಸಾಮಾನ್ಯ ಕೆಲಸಗಳಲ್ಲಿ ಇದು ಕಡಿಮೆ ವೇಗದ ಫೋನ್ ಎಂದು ಅನ್ನಿಸುವುದಿಲ್ಲ. ಬಹುತೇಕ ಆಟಗಳನ್ನು ಆಡುವ ಅನುಭವ ಪರವಾಗಿಲ್ಲ. ಅತಿ ಶಕ್ತಿಯನ್ನು ಬೇಡುವ ಮೂರು ಆಯಾಮದ ಮೇಲ್ದರ್ಜೆಯ ಆಟಗಳನ್ನು ಮಾತ್ರ ಆಡುವ ಅನುಭವ ಅಷ್ಟೇನು ಅದ್ಭುತ ಅನ್ನಿಸುವುದಿಲ್ಲ. ಹೈಡೆಫಿನಿಶನ್ ವಿಡಿಯೊ ವೀಕ್ಷಣೆ ಮಾಡಬಹುದು. ಆದರೆ ಅಲ್ಟ್ರಾಹೈಡೆಫಿನಿಶನ್ (4k)  ವಿಡಿಯೊ ವೀಕ್ಷಣೆ ತೃಪ್ತಿದಾಯಕವಾಗಿಲ್ಲ.

13 ಮೆಗಾಪಿಕ್ಸೆಲ್ ರೆಸೊಲೂಶನ್‌ನ ಪ್ರಾಥಮಿಕ ಮತ್ತು 5 ಮೆಗಾಪಿಕ್ಸೆಲ್‌ನ ಎದುರುಗಡೆಯ ಕ್ಯಾಮೆರಾ ಎರಡೂ ಒಂದು ಮಟ್ಟಿಗೆ ಚೆನ್ನಾಗಿವೆ. ಉತ್ತಮ ಬೆಳಕಿದ್ದಾಗ ಫೋಟೊ ತೃಪ್ತಿದಾಯಕವಾಗಿ ಮೂಡಿಬರುತ್ತದೆ. ಆದರೆ ಕೆಲವೊಮ್ಮೆ ಫೋಕಸ್ ಮಾಡಲು ಒದ್ದಾಡುತ್ತದೆ. ಕಡಿಮೆ ಬೆಳಕಿನಲ್ಲಂತೂ ಉತ್ತಮ ಫೋಟೊ ತೆಗೆಯಬೇಕಿದ್ದರೆ ತುಂಬ ಕಷ್ಟಪಡಬೇಕು. ಶಿಯೋಮಿಯವರ ಎಲ್ಲ ಫೋನ್‌ಗಳಲ್ಲಿರುವ ಕ್ಯಾಮೆರಾ ಕಿರುತಂತ್ರಾಂಶವೇ (ಆ್ಯಪ್) ಇದರಲ್ಲೂ ಇದೆ, ಹಾಗೂ ಅದು ಅಷ್ಟೇನೂ ಚೆನ್ನಾಗಿಲ್ಲ. ವಿಡಿಯೊ ಚಿತ್ರೀಕರಣವೂ ಚೆನ್ನಾಗಿದೆ. ಇದರ ಆಡಿಯೊ ಇಂಜಿನ್ ಚೆನ್ನಾಗಿದೆ. ಇಯರ್‌ಫೋನ್ ನೀಡಿಲ್ಲ. ಉತ್ತಮ ಇಯರ್‌ಫೋನ್ ಜೋಡಿಸಿ ಉತ್ತಮ ಸಂಗೀತ ಆಲಿಸುವ ಅನುಭವ ಪಡೆಯಬಹುದು.

ಎರಡು ಸಿಮ್ ಕಾರ್ಡ್ (ಮೈಕ್ರೊ+ನ್ಯಾನೊ) ಅಥವಾ ಒಂದು ಸಿಮ್ ಕಾರ್ಡ್ (ಮೈಕ್ರೊ) ಮತ್ತು ಇನ್ನೊಂದು ಮೆಮೊರಿ ಕಾರ್ಡ್ ಹಾಕಬಹುದು. ಜೊತೆಗೆ ಯುಎಸ್‌ಬಿ ಆನ್‌-ದ-ಗೋ ಕೂಡ ಇದೆ. ಇದರಲ್ಲಿ 4ಜಿ ಮತ್ತು 4G VoLTE ಕೂಡ ಇದೆ. ಅಂದರೆ ರಿಲಯನ್ಸ್ ಜಿಯೋ ಸಿಮ್ ಹಾಕಿ ಕೆಲಸ ಮಾಡಬಹುದು.
ಇದರಲ್ಲಿರುವುದು 4100mAh ಶಕ್ತಿಶಾಲಿ ಬ್ಯಾಟರಿ. ಎರಡು ದಿನ ಬಾಳಿಕೆ ಬರುತ್ತದೆ. ಕನ್ನಡದ ತೋರುವಿಕೆ ಮತ್ತು ಯೂಸರ್ ಇಂಟರ್‌ಫೇಸ್ ಸರಿಯಾಗಿವೆ. ಒಟ್ಟಿನಲ್ಲಿ ₹9 ಸಾವಿರ ಬೆಲೆಗೆ ಇದು ಉತ್ತಮ ಫೋನ್ ಎಂದು ಹೇಳಬಹುದು. ಅಂದ ಹಾಗೆ ಇದು ಭಾರತದಲ್ಲೇ ತಯಾರಾದ ಫೋನ್. ಇದರ ವಿಡಿಯೊ ವಿಮರ್ಶೆ ನೋಡಬೇಕಿದ್ದರೆ bit.ly/gadgetloka279v ಜಾಲತಾಣಕ್ಕೆ ಭೇಟಿ ನೀಡಿ.

ವಾರದ ಆ್ಯಪ್: ನಿದ್ದೆಯಿಂದ ಎಬ್ಬಿಸಿಯೇ ಬಿಡುವ ಅಲಾರ್ಮ್
ನಿಮ್ಮ ಮೊಬೈಲ್‌ನಲ್ಲಿ ಒಂದೆರಡು ಅಲಾರ್ಮ್‌ಗಳಿರಬಹುದು. ಗೂಗಲ್‌ ಪ್ಲೇ ಸ್ಟೋರಿನಲ್ಲಿ ಹಲವು ನಮೂನೆಯ ಅಲಾರ್ಮ್‌ ಕಿರುತಂತ್ರಾಂಶಗಳಿವೆ (ಆ್ಯಪ್). ಮೈಕ್ರೊಸಾಫ್ಟ್‌ನವರು ತಯಾರಿಸಿರುವ ಈ ಅಲಾರ್ಮ್ ಮಾತ್ರ ಎಲ್ಲಕ್ಕಿಂತ ಹೆಚ್ಚು ಪೀಡಿಸುವಂಥದ್ದು. ಪೀಡಿಸುವಂಥದ್ದು? ಹೌದು. ನೀವು ನಿದ್ದೆಯಿಂದ ಸರಿಯಾಗಿ ಏಳುವ ತನಕ ಇದು ನಿಮ್ಮನ್ನು ಪೀಡಿಸುತ್ತದೆ. ನಿಗದಿತ ಸಮಯಕ್ಕೆ ಅಲಾರ್ಮ್ ಸದ್ದು ಮಾಡಿದಾಗ ಅದನ್ನು ನಿಲ್ಲಿಸಬೇಕಾದರೆ ನೀವು ಅದು ಹೇಳಿದ ಬಣ್ಣದ ವಸ್ತುವಿನ ಫೋಟೊ ತೆಗೆಯಬೇಕು, ಅದು ಸೂಚಿಸಿದ ಭಾವನೆಯನ್ನು ನಿಮ್ಮ ಮುಖದಲ್ಲಿ ವ್ಯಕ್ತಪಡಿಸಬೇಕು ಅಥವಾ ಅದು ತೋರಿಸಿದ ಪಠ್ಯವನ್ನು ಉಚ್ಛರಿಸಬೇಕು. ಇವು ಯಾವುದೂ ಅಷ್ಟು ಸುಲಭವಿಲ್ಲ. ಅಂತೂ ಅದು ನಿಮ್ಮನ್ನು ನಿದ್ದೆಯಿಂದ ಎಬ್ಬಿಸಿಯೇ ಬಿಡುತ್ತದೆ. ಅಲಾರ್ಮ್ ಸದ್ದು ಮಾಡಿದಾಗ ಸ್ನೂಝ್ ಬಟನ್ ಮೇಲೆ ಒತ್ತಿ ಮತ್ತೆ ನಿದ್ದೆ ಹೋಗುವವರಿಗೆ ಇದು ಉತ್ತಮ. ಈ ಕಿರುತಂತ್ರಾಂಶ ಬೇಕಿದ್ದಲ್ಲಿ ನೀವು ಗೂಗಲ್‌ ಪ್ಲೇ ಸ್ಟೋರಿನಲ್ಲಿ Mimicker Alarm ಎಂದು ಹುಡುಕಬೇಕು ಅಥವಾ bit.ly/gadgetloka279 ಜಾಲತಾಣಕ್ಕೆ ಭೇಟಿ ನೀಡಬೇಕು.

ಗ್ಯಾಜೆಟ್‌ ಸುದ್ದಿ: ಶಿಯೋಮಿಯವರ ಮಿ ಹೋಮ್ ಹಾಗೂ ಒನ್‌ಪ್ಲಸ್‌ನವರ ಎಕ್ಸ್‌ಪೀರಿಯೆನ್ಸ್ ಸ್ಟೋರ್
ಶಿಯೋಮಿಯವರು ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿರುವ ಫೀನಿಕ್ಸ್ ಮಾಲ್‌ನಲ್ಲಿ ಮಿ ಹೋಂ ಅನ್ನು ಉದ್ಘಾಟಿಸಿದ್ದಾರೆ. ಇದು ಅವರ ಶೋರೂಂ ಎಂದೂ ಹೇಳಬಹುದು. ಇಲ್ಲಿ ಅವರ ಉತ್ಪನ್ನಗಳು ದೊರಕುತ್ತವೆ. ನಿಮಗೆ ಶಿಯೋಮಿ ಫೋನ್ ಬೇಕಿದ್ದಲ್ಲಿ ಅವರು ನಡೆಸುವ ಫ್ಲಾಶ್ ಸೇಲ್ ಸಮಯದಲ್ಲಿ ಜಾಲತಾಣದಿಂದ ಕೊಳ್ಳಬೇಕು. ಕೆಲವು ಫೋನ್‌ಗಳು 3-5 ನಿಮಿಷಗಳ ಸೇಲ್‌ನಲ್ಲಿ ಮುಗಿದು ಹೋಗುತ್ತವೆ. ನಂತರ ಇನ್ನೊಂದು ಸೇಲ್‌ಗೆ ಕಾಯಬೇಕು. ಆದರೆ ಮಿ ಹೋಮ್‌ನಲ್ಲಿ ಈ ತೊಂದರೆ ಇಲ್ಲ. ಯಾವಾಗ ಹೋದರೂ ನಿಮಗೆ ಫೋನ್ ಸಿಗುತ್ತದೆ ಎಂದು ಕಂಪೆನಿಯವರು ಹೇಳಿಕೊಂಡಿದ್ದಾರೆ. ನಿಮಗೆ ಬೇಕಾದ ಫೋನ್ ದೊರಕದಿದ್ದಲ್ಲಿ ಅವರು ನಿಮಗೆ ಒಂದು F-code ನೀಡುತ್ತಾರೆ. ಅದನ್ನು ಬಳಸಿ ಅವರ ಜಾಲತಾಣದಿಂದ ಯಾವಾಗ ಬೇಕಾದರೂ ಕೊಳ್ಳಬಹುದು. ಆಗ ಫ್ಲಾಶ್ ಸೇಲ್‌ಗೆ ಕಾಯಬೇಕಾಗಿಲ್ಲ.

ಬೆಂಗಳೂರಿನ ಬ್ರಿಗೇಡ್ ರೋಡಿನಲ್ಲಿ ಒನ್‌ಪ್ಲಸ್‌ನವರು ಎಕ್ಸ್‌ಪೀರಿಯೆನ್ಸ್ ಸ್ಟೋರ್ ಹೆಸರಿನಲ್ಲಿ ಇಂತಹುದೇ ಅಂಗಡಿಯನ್ನು ಕೆಲವು ತಿಂಗಳುಗಳ ಹಿಂದೆಯೇ ತೆರೆದಿದ್ದರು. ಇಲ್ಲಿ ಎಲ್ಲ ನಮೂನೆಯ ಒನ್‌ಪ್ಲಸ್ ಫೋನ್ ಮತ್ತು ಅಕ್ಸೆಸರಿಗಳು ದೊರೆಯುತ್ತವೆ ಮಾತ್ರವಲ್ಲ ಒನ್‌ಪ್ಲಸ್ ಫೋನ್‌ಗಳ ದುರಸ್ತಿಯನ್ನೂ ಮಾಡುತ್ತಾರೆ.

ಗ್ಯಾಜೆಟ್‌ ಸಲಹೆ
ಕಿರಣ ಕುಮಾರರ ಪ್ರಶ್ನೆ: ನನ್ನಲ್ಲಿ ₹36,000 ಇದೆ. ನಾನೊಂದು ಡಿಎಸ್‌ಎಲ್‌ಆರ್ ಕ್ಯಾಮೆರಾ ಕೊಂಡುಕೊಳ್ಳಬೇಕೆಂದುಕೊಂಡಿದ್ದೇನೆ. ಈ ಬಜೆಟ್‌ನಲ್ಲಿ ಯಾವುದು ಉತ್ತಮ?

ಉ:  ಕ್ಯಾನನ್ 700ಡಿ ಕ್ಯಾಮೆರಾ, 18-55 ಮಿ.ಮೀ. ಐಎಸ್2 ಮತ್ತು 55-200 ಮಿ.ಮೀ. ಐಎಸ್2 ಲೆನ್ಸ್ ಎಲ್ಲ ಒಟ್ಟು ಸೇರಿಸಿ ಅಮೆಝಾನ್‌ನಲ್ಲಿ ₹37 ಸಾವಿರಕ್ಕೆ ದೊರೆಯುತ್ತಿದೆ. ಕೊಳ್ಳಬಹುದು.

ಗ್ಯಾಜೆಟ್‌ ತರ್ಲೆ
ಮೋದಿಯವರು ಡಿಜಿಟಲ್ ಇಂಡಿಯಾ ಎಂದು ಒತ್ತಿ ಒತ್ತಿ ಹೇಳಿದ್ದು, ನೋಟುಗಳ ಅಮಾನ್ಯ, ಎಲ್ಲ ಸೇರಿ ಜನರು ಭೀಮ್, ಪೇಟಿಎಂ ಇತ್ಯಾದಿಗಳನ್ನು ಹೆಚ್ಚು ಹೆಚ್ಚು ಬಳಸಲು ಪ್ರಾರಂಭಿಸುವಂತಾಯಿತು.

ಒಬ್ಬಾತ ತಾನು ಪ್ರತಿ ತಿಂಗಳು ಮನೆ ಸಾಮಾನು ತರುವ ಅಂಗಡಿಗೆ ಸಾಮಾನು ಪಟ್ಟಿ ವಾಟ್ಸ್‌ಆ್ಯಪ್‌ನಲ್ಲಿ ಕಳುಹಿಸಿ ಹಣವನ್ನು ಪೇಟಿಎಂನಲ್ಲಿ ಕಳುಹಿಸಿದ. ಆದರೆ ಫೋನ್ ಸಂಖ್ಯೆ ನಮೂದಿಸುವಾಗ ಸಣ್ಣ ತಪ್ಪು ಮಾಡಿದ್ದ. ಅದರಿಂದಾಗಿ ಹಣ ಇನ್ನೊಂದು ಸಂಖ್ಯೆಗೆ ಹೋಯಿತು. ಸ್ವಲ್ಪ ಹೊತ್ತಿನಲ್ಲೆ ಆತನಿಗೆ ವಾಟ್ಸ್‌ಆ್ಯಪ್‌ನಲ್ಲಿ ಅನಾಥಾಶ್ರಮವೊಂದರಿಂದ ಧನಸಹಾಯ ನೀಡಿದ್ದಕ್ಕೆ ಧನ್ಯವಾದ ಮತ್ತು ರಸೀದಿ ಬಂದವು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT