ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹತ್ತೂರ ಮಲ್ಲ ನೀನಾಗು ಮಗಾ

Last Updated 3 ಜುಲೈ 2011, 19:30 IST
ಅಕ್ಷರ ಗಾತ್ರ

ಮುಂಬೈನಲ್ಲಿ ವಿಶ್ವ ಕಪ್ ಕ್ರಿಕೆಟ್ ಫೈನಲ್ ನಡೆಯುವ ಸಮಯದಲ್ಲೇ ಅಂದರೆ ಏಪ್ರಿಲ್ ಮೊದಲ ವಾರದಲ್ಲಿ ಕೆ.ಡಿ. ಜಾಧವ್ ಅವರ ಸ್ಮರಣಾರ್ಥ ರಾಷ್ಟ್ರೀಯ ಮಟ್ಟದ ಕುಸ್ತಿ ಚಾಂಪಿಯನ್‌ಷಿಪ್ ಏರ್ಪಡಿಸಲಾಗಿತ್ತು. ಕುಸ್ತಿ ನೋಡಲು ಜನ ಬರುವುದಿರಲಿ, ಯಾವ ಪತ್ರಿಕೆಯೂ ಒಂದು ಚಿತ್ರ ಅಥವಾ ಒಂದು ಸಣ್ಣ ವರದಿಯನ್ನೂ ಪ್ರಕಟಿಸಿರಲಿಲ್ಲ.

(ಪ್ರಜಾವಾಣಿಯಲ್ಲಿ ಈ ಬಗ್ಗೆ ಒಂದು ವಿಶೇಷ ವರದಿ ಬರೆದಿದ್ದೆ.) ಒಲಿಂಪಿಕ್ ಕ್ರೀಡೆಗಳಲ್ಲಿ ಭಾರತಕ್ಕೆ ಮೊಟ್ಟಮೊದಲ ವೈಯಕ್ತಿಕ ಪದಕವೊಂದನ್ನು ತಂದುಕೊಟ್ಟವರು ಖಾಶಾಬಾ ಜಾಧವ್. 1952ರ ಹೆಲ್ಸಿಂಕಿ ಒಲಿಂಪಿಕ್ಸ್‌ನಲ್ಲಿ ಆ ಪೈಲ್ವಾನ ಕಂಚಿನ ಪದಕ ಗೆದ್ದಿದ್ದರು. ಕ್ರಿಕೆಟ್ ಗುಂಗಿನಲ್ಲಿ ಮುಳುಗಿದ್ದ ಕ್ರೀಡಾಪ್ರೇಮಿಗಳಿಗೆ ಜಾಧವ್ ಸಹಜವಾಗಿಯೇ ಮರೆತುಹೋಗಿದ್ದರು. ಅವರ ನೆನಪು ಮಾಡಿಕೊಡುವ ಯತ್ನವೂ ವಿಫಲವಾಗಿತ್ತು.

ಜಾಧವ್ ನಂತರ ಭಾರತಕ್ಕೆ ಕುಸ್ತಿಯಲ್ಲಿ ಪದಕವೊಂದು ಬಂದಿದ್ದು 56 ವರ್ಷಗಳ ನಂತರ. ಅಂದರೆ 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಸುಶೀಲಕುಮಾರ್ ಕಂಚಿನ ಪದಕ ಗಳಿಸಿದರು. ಇನ್ನು ಕೆಲವು ವರ್ಷಗಳಲ್ಲಿ ಇವರೂ ಕೂಡ ಜನರ ನೆನಪಿನಿಂದ ದೂರವಾಗುವುದು ಖಂಡಿತ. ದೇಶದಲ್ಲಿ, ರಾಜ್ಯಗಳಲ್ಲಿ ನಡೆಯುತ್ತಿರುವ `ಖಾದಿ ಕುಸ್ತಿ~ಯಲ್ಲಿ ಜನರಿಗೆ, ಮಾಧ್ಯಮದವರಿಗೆ ಆಸಕ್ತಿ ಹೆಚ್ಚಿದೆ.

ಮೈಯೆಲ್ಲ ಮಣ್ಣು ಮೆತ್ತಿಕೊಂಡು, ಜಾಗ ನೋಡಿ ಸೆಡ್ಡು ಹೊಡೆದು, ಎದುರಾಳಿಗೆ ಆಕಾಶದರ್ಶನ ಮಾಡಿಸುವ ಪೈಲ್ವಾನರ ಸೆಣಸಾಟ ನೋಡಲು ಯಾರಿಗೂ ಸಮಯವಿಲ್ಲ. ಹಳ್ಳಿಗಳಲ್ಲಿ ಜನ ಇನ್ನೂ ಕುಸ್ತಿ ನೋಡಲು ಹೋಗುತ್ತಾರಾದರೂ, ಅಲ್ಲಿಯೂ ಬತ್ತದ ಗದ್ದೆಗಳಲ್ಲಿ ಅಥವಾ ಜೋಳದ ಹೊಲಗಳಲ್ಲಿ ಕ್ರಿಕೆಟ್ ಸ್ಟಂಪುಗಳನ್ನು ನೆಟ್ಟಿರುವುದನ್ನು ನೋಡಬಹುದು. ಗರಡಿಮನೆಗಿಂತ ಗಡಂಗುಗಳೇ ಹೆಚ್ಚಾಗಿವೆ. ಇದಕ್ಕೆ ಯಾರು ಕಾರಣ ಎಂದು ಯಾರನ್ನೋ ದೂರುವುದರಲ್ಲಿ ಅರ್ಥವಿಲ್ಲ. ಪುರಾತನ ಕಾಲದಿಂದಲೂ ಗಂಡುಕಲೆ ಎಂದು ಹೆಸರಾಗಿದ್ದ ಕುಸ್ತಿ ಮೊದಲಿನಷ್ಟು ಜಬರದಸ್ತ ಇಲ್ಲ ಅಷ್ಟೇ.

ಹುಬ್ಬಳ್ಳಿಯಲ್ಲಿದ್ದಾಗ, ಜಮಖಂಡಿಯ ಮಠಪತಿ ಪೈಲ್ವಾನ್ ಫೋನ್ ಮಾಡುತ್ತಿರುತ್ತಿದ್ದರು. ಹುಬ್ಬಳ್ಳಿಗೆ ಬಂದಾಗ ತಪ್ಪದೇ `ಪ್ರಜಾವಾಣಿ~ ಕಚೇರಿಗೆ ಬಂದು ಭೇಟಿಯಾಗುತ್ತಿದ್ದರು. ಹೃದಯವಂತ ಪೈಲ್ವಾನ ಅವರು. ಕೆಲವು ವರ್ಷಗಳ ಹಿಂದೆ, ಜಮಖಂಡಿಯಲ್ಲಿ ನೋಡಿದ ಒಂದು ಕುಸ್ತಿಯಲ್ಲಿ ಅವರು ಮಹಾರಾಷ್ಟ್ರದ ಎದುರಾಳಿಯನ್ನು ಕ್ಷಣ ಮಾತ್ರದಲ್ಲಿ ಚಿತ್ ಮಾಡಿದ್ದರು. ಧಾರವಾಡದಲ್ಲಿ ಆಗೊಮ್ಮೆ ಈಗೊಮ್ಮೆ ಜಂಗಿ ನಿಕಾಲಿ ಕುಸ್ತಿಗಳು ನಡೆಯುತ್ತಿದ್ದವು.
 
ಭಾರತ ಕ್ರೀಡಾ ಪ್ರಾಧಿಕಾರದ ತರಬೇತುದಾರರು ಅಲ್ಲಿ ಕುಸ್ತಿಯನ್ನು ಜೀವಂತವಾಗಿಟ್ಟಿದ್ದಾರೆ. ಒಬ್ಬ ಕ್ರೀಡಾ ವರದಿಗಾರನಾಗಿ ನಾನು ಕ್ರಿಕೆಟ್ ಪಂದ್ಯಗಳನ್ನು ನೋಡಿದಷ್ಟು ಕುಸ್ತಿ ಪಂದ್ಯಗಳನ್ನಂತೂ ಖಂಡಿತವಾಗಿಯೂ ನೋಡಿಲ್ಲ. ಆದರೆ `ಪ್ರಜಾವಾಣಿ~ ಕುಸ್ತಿ ವರದಿಗಾರಿಕೆಯಲ್ಲಿ ಉಳಿದವರಿಗಿಂತ ಮುಂದೆ ಇರುವುದಂತೂ ನಿಜ.

ಕೆಲವು ದಿನಗಳ ಹಿಂದೆ ಬೆಂಗಳೂರಿನ ಬಾದಾಮಿ ಹೌಸ್‌ನಲ್ಲಿ ಕುಸ್ತಿ ಬಗ್ಗೆ ಒಂದು ಸಾಕ್ಷ್ಯ ಚಿತ್ರ ಪ್ರದರ್ಶಿಸಲಾಯಿತು. ಕುಸ್ತಿ ಬಗ್ಗೆ ಬಹಳ ಒಲವಿರುವವರೂ, ರಾಜ್ಯದ ಬಹಳಷ್ಟು ಪೈಲ್ವಾನರನ್ನು ಭೇಟಿಯಾಗಿರುವ ಎಂ. ನರಸಿಂಹಮೂರ್ತಿ ಈ ಸಾಕ್ಷ್ಯಚಿತ್ರ ತಯಾರಿಸಿದ್ದಾರೆ. ರಾಜ್ಯ ವಾರ್ತಾ ಇಲಾಖೆ ಮತ್ತು ಕರ್ನಾಟಕ ಚಲನಚಿತ್ರ ಅಕಾಡೆಮಿಯವರು ಇದಕ್ಕೆ ನೆರವಾಗಿದ್ದಾರೆ. ಕರ್ನಾಟಕದ ಕುಸ್ತಿಯಲ್ಲಿ ದೊಡ್ಡ ಹೆಸರಾದ ಟಿ.ಆರ್. ಸ್ವಾಮಿಯವರು ಅಂದಿನ ಕಾರ್ಯಕ್ರಮಕ್ಕೆ ಬರಲಿದ್ದರಿಂದ, ಅವರನ್ನು ನೋಡಲು ಹಾಗೂ ಕುಸ್ತಿ ಸಾಕ್ಷ್ಯಚಿತ್ರದ ಬಗ್ಗೆ ಕುತೂಹಲ ಮೂಡಿದ್ದರಿಂದ ಅಲ್ಲಿಗೆ ಹೋಗಿದ್ದೆ.

ಸ್ವಾಮಿಯವರಿಗೆ ವಯಸ್ಸಾಗಿದೆ. ಆದರೂ ಅವರು ಅಲ್ಲಿಗೆ ಬಂದಿದ್ದರು. ಹೆಸರು ಹೇಳಿ ಮಾತನಾಡಿಸಿದಾಗ, `ಪ್ರಜಾವಾಣಿ~ ಎಂದು ಖುಷಿಯಿಂದ ಬೆನ್ನುತಟ್ಟಿದರು. `ಕುಸ್ತಿಯನ್ನ ಕ್ರಿಕೆಟ್ ನುಂಗಿತ್ತ~ ಎಂದೇನೂ ಅವರು ಹೇಳದಿದ್ದರೂ, ಪೈಲ್ವಾನರು ಕಡಿಮೆಯಾಗಿರುವ ಬಗ್ಗೆ ಅವರಲ್ಲಿ ಬೇಸರವಿತ್ತು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕುಸ್ತಿ ತರಬೇತುದಾರರಾಗಿ, ರಾಜ್ಯ ಮತ್ತು ರಾಷ್ಟ್ರದ ಕುಸ್ತಿ ಸಂಸ್ಥೆಗಳ ಪದಾಧಿಕಾರಿಯಾಗಿ ಅವರು ಉತ್ತಮ ಕೆಲಸ ಮಾಡಿದ್ದಾರೆ.

ಅಂದಿನ ಕಾರ್ಯಕ್ರಮಕ್ಕೆ ಬೆಂಗಳೂರು ಹಾಗೂ ಮೈಸೂರಿನ ಪೈಲ್ವಾನರು ಬಂದಿದ್ದರು. ಕೇವಲ ಹೂಗುಚ್ಛ ನೀಡಿ ಮಾಡಿದ ಸನ್ಮಾನವನ್ನು ಅವರೆಲ್ಲ ಸಂತೋಷದಿಂದಲೇ ಸ್ವೀಕರಿಸಿದ್ದರು! ಹಣ ಕೊಟ್ಟರಷ್ಟೇ ಬರಲು ಅವರೇನೂ ಕ್ರಿಕೆಟ್‌ಪಟುಗಳಲ್ಲವಲ್ಲ! ಅವರೆಲ್ಲ ಸ್ವಾಮಿಯವರ ಕಾಲು ಮುಟ್ಟಿ ನಮಸ್ಕಾರ ಮಾಡುವಾಗ ಅವರ ಮುಖದಲ್ಲಿ ಅದೇನೋ ಧನ್ಯತಾಭಾವ ಕಂಡುಬಂದಿತ್ತು. ಅದು ಕುಸ್ತಿಯ ಪರಂಪರೆ.

ಹಿಂದೆ ಕುಸ್ತಿ ಪೈಲ್ವಾನ ತಾನು ಕುಸ್ತಿಗೆ ಹೋಗಬೇಕಾದರೆ ಹನುಮನಿಗೆ ಮತ್ತು ತಾಯಿಗೆ ವಂದಿಸಿ, `ಅವ್ವಾ ಕುಸ್ತಿಗೆ ಹೋಗ್ತಾ ಇದೀನಿ, ಆಶೀರ್ವಾದ ಮಾಡು~ ಎಂದು ಹೇಳುತ್ತಿದ್ದ. ಆಗ ತಾಯಿ, `ಮಗಾ, ಒರಟು ಕುಸ್ತಿ ಮಾಡಬೇಡ, ಎದುರಾಳಿ ಜೊತೆ ಹಗೆತನ ಸರಿಯಲ್ಲ, ಹತ್ತೂರ ಮಲ್ಲ ನೀನಾಗು~ ಎಂದು ಹರಸುತ್ತಿದ್ದಳು. (ನರಸಿಂಹ ಮೂರ್ತಿಯವರು ಬರೆದಿರುವ `ಮಲ್ಲ ಪ್ರಪಂಚ~ ಪುಸ್ತಕದಲ್ಲಿ ಹಲವು ಸುಂದರ ಮಲ್ಲಗೀತೆಗಳಿವೆ.)

ಎಂ. ನರಸಿಂಹಮೂರ್ತಿ `ಮಲ್ಲ ಪ್ರಪಂಚ~ಕ್ಕೆ ಮೊದಲು `ಪೈಲ್ವಾನರ ಜಗತ್ತಿನಲ್ಲಿ~ ಮತ್ತು `ಕುಸ್ತಿರಂಗದ ದಿಗ್ಗಜರು~ ಎಂಬ ಪುಸ್ತಕಗಳನ್ನು ಬರೆದಿದ್ದಾರೆ. ಮೂರೂ ಪುಸ್ತಕಗಳಲ್ಲಿ ಕುಸ್ತಿಯ ಬಗ್ಗೆ ಸಾಕಷ್ಟು ಉತ್ತಮ ಮಾಹಿತಿಗಳು ಸಿಗುತ್ತವೆ. ಕುಸ್ತಿ ಇತಿಹಾಸ ರೋಮಾಂಚಕವಾಗಿದೆ.
 
ಮೈಸೂರು ಮಹಾರಾಜರು ಹಾಕಿದ್ದ ಕುಸ್ತಿ ಪರಂಪರೆ ಇಂದಿಗೂ ದಸರಾ ಕ್ರೀಡೆಗಳ ರೂಪದಲ್ಲಿ ಮುಂದುವರಿದಿದೆ. ಉತ್ತರ ಕರ್ನಾಟಕದ ಹಲವು ಖ್ಯಾತ ಪೈಲ್ವಾನರ ಪರಿಚಯವೂ ಪುಸ್ತಕಗಳಲ್ಲಿದೆ. ಪುಸ್ತಕ ಬರೆದ ಉತ್ಸಾಹದಲ್ಲೇ ನರಸಿಂಹಮೂರ್ತಿಯವರು ಸಾಕ್ಷ್ಯಚಿತ್ರ ತಯಾರಿಸಿದ್ದಾರೆ. ಕುಸ್ತಿಯ ಬಗ್ಗೆ ಮೂಡಿಬಂದಿರುವ ಮೊದಲ ಸಾಕ್ಷ್ಯಚಿತ್ರ ಇದು. ಇದಕ್ಕೆ ಇನ್ನೂ ಹೆಚ್ಚಿನ ಮಾಹಿತಿ ಹಾಗೂ ದೃಶ್ಯಗಳನ್ನು ಸೇರಿಸುವ ಯೋಚನೆ ಅವರಿಗಿದೆ. 

ಅಂದಿನ ಕಾರ್ಯಕ್ರಮದಲ್ಲಿ ಮಾಜಿ ಪೈಲ್ವಾನರ ಚಿತ್ರಗಳನ್ನೂ ಪ್ರದರ್ಶಿಸಲಾಗಿತ್ತು. 95 ವರ್ಷಗಳ ಹಿಂದೆ, ಮೈಸೂರಿನಲ್ಲಿ ಜಗಜಟ್ಟಿಯೆನಿಸಿದ್ದ ಅಮಿರುದ್ದೀನ್ ಖುರೇಶಿ ಹಾಕಿದ್ದ ಸವಾಲನ್ನು ಮೆಟ್ಟಿ ನಿಂತ ಪೈಲ್ವಾನ ಕೊಪ್ಪಲು ಬಸವಯ್ಯ, ನಲವತ್ತರ ದಶಕದ ಅರಳೇಪೇಟೆ ಕೆಂಪಣ್ಣ, ರಾಣೆಬೆನ್ನೂರು ನಂಜಪ್ಪ, ಚಂಬಾ ಮುತ್ನಾಳ, ಲೋಕಯ್ಯ ಶೆಟ್ಟಿ, ಗೋಪಾಲರಾಜೇ ಅರಸ್, ನಾರಾಯಣ ಶಾಸ್ತ್ರಿ, ಅಣ್ಣಯ್ಯಪ್ಪ ಮುಂತಾದ ಪೈಲ್ವಾನರ ಚಿತ್ರಗಳನ್ನು ನೋಡಿದಾಗ ಖುಷಿಯಾಗಿತ್ತು. ಮುನ್ನೂರು ವರ್ಷಗಳ ಹಿಂದೆ ಆರಂಭವಾದ ದೊಡ್ಡ ಗರಡಿಮನೆಯ ಚಿತ್ರ, ಬೆಂಗಳೂರಿನಲ್ಲಿ ಕುಸ್ತಿಗಿದ್ದ ಆಸಕ್ತಿಗೆ ಸಾಕ್ಷಿ.

ಅಖಾಡಾದಲ್ಲಿ ಕುಸ್ತಿ ಮಾಡುತ್ತಿದ್ದ ಪೈಲ್ವಾನರೆಲ್ಲ ಮ್ಯಾಟ್ ಕುಸ್ತಿಗೆ ಬದಲಾಗಿ ಬಹಳ ವರ್ಷಗಳಾಗಿವೆ. ಅಂತರರಾಷ್ಟ್ರೀಯ ಕುಸ್ತಿ ರಂಗದಲ್ಲಿ ಸೆಣಸಬೇಕಾದರೆ ಮ್ಯಾಟ್ ಮೇಲೆ, ಅದಕ್ಕಾಗಿಯೇ ಇರುವ ವಸ್ತ್ರಗಳನ್ನು ಹಾಗೂ ಕಾಲಿಗೆ ಕುಸ್ತಿ ಷೂ ಹಾಕಿಕೊಳ್ಳಬೇಕಾಗುತ್ತದೆ. ಇಲ್ಲಿ ಹೆಸರು, ಹಣ ಎರಡೂ ಬರುತ್ತದೆ. ಅಖಾಡಾ ಕುಸ್ತಿಯಲ್ಲಿ ಮೊದಲಿನ ಹಾಗೆ ಸವಾಲೆಸೆಯುವ ಪೈಲ್ವಾನರಿಲ್ಲ. ಹಾಗೆಂದು ಕುಸ್ತಿ ಸಂಪೂರ್ಣ ನಶಿಸಿಹೋಗುತ್ತದೆಂದಲ್ಲ.

ಪೈಲ್ವಾನರು ಕಡಿಮೆಯಾದರೂ ಎಲ್ಲೋ ಒಂದು ಕಡೆ ಕುಸ್ತಿ ಬೇರೊಂದು ರೂಪದಲ್ಲಿ ಮುಂದುವರಿಯುತ್ತಿರುತ್ತದೆ. ಯುವಕರು ಗರಡಿಮನೆ ಬದಲು ಜಿಮ್‌ಗಳಲ್ಲಿ ದೇಹ ವೃದ್ಧಿಸಿಕೊಳ್ಳುತ್ತಾರೆ. ಜಾಧವ್ ಮತ್ತು ಸುಶೀಲಕುಮಾರ್ ಅವರಂತೆ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಪೈಲ್ವಾನರು ಬರಲಿ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT