ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರುಷದ ಧೈರ್ಯವುಳ್ಳ ಹೆಣ್ಣು

Last Updated 23 ಮಾರ್ಚ್ 2016, 8:57 IST
ಅಕ್ಷರ ಗಾತ್ರ

Woman as subject expands in to woman as subject-object, that is, object to her own subjectivity as she internally relates to and identifies with or against another internally experienced women.
–Freud

ವಚನಕಾರ್ತಿಯರನ್ನು ಓದುವಾಗಲೆಲ್ಲ ಫ್ರಾಯ್ಡ್‌ನ ಈ ಮಾತುಗಳು ನೆನಪಾಗಿ, ಅವರನ್ನು ಕಂಡೇ ಫ್ರಾಯ್ಡ್ ಈ ಮಾತುಗಳನ್ನು ಬರೆದಿರಬೇಕು ಎಂದೂ ಅನಿಸಿಬಿಡುತ್ತದೆ! ಹೆಣ್ಣು ಅವಳ ಅಭಿವ್ಯಕ್ತಿಯ ಎಲ್ಲ ಪ್ರಕಾರಗಳಲ್ಲಿಯೂ ಈ  subject-objectನ ನೆಲೆಗಳನ್ನು ಮುಖಾಮುಖಿಯಾಗುವುದು ಅನಿವಾರ್ಯ. ಈ ನೆಲೆಗಳ ಮುಖಾಮುಖಿಯಲ್ಲಿ ಎದುರಾಗುವ ಗೊಂದಲಗಳನ್ನು ನಿವಾರಿಸಿಕೊಳ್ಳಲು ಭಾವ ಸ್ಪಷ್ಟತೆ ಮತ್ತು ಬೌದ್ಧಿಕ ಸ್ಪಷ್ಟತೆ ಎರಡೂ ಬೇಕಾಗುತ್ತದೆ. ವಚನಕಾರ್ತಿಯರಲ್ಲಿ ಈ ಎರಡೂ ಇದೆ ಎಂದೇ ಅವರು ಕನ್ನಡ – ಭಾರತದ ಸಂದರ್ಭದಲ್ಲಿ ಮಾತ್ರವಲ್ಲ, ಜಾಗತಿಕ ಸ್ತ್ರೀವಾದಿ ಸಂದರ್ಭದಲ್ಲಿಯೂ ಮಹತ್ವದ ಸ್ಥಾನ ಪಡೆಯುತ್ತಾರೆ.

ವಚನಕಾರ್ತಿಯರು ಎಂದಾಗಲೆಲ್ಲ ಅಕ್ಕನನ್ನು, ಅವಳ ಲೋಕೋತ್ತರವೆನಿಸುವ ಕಾವ್ಯವೂ ಕಾವ್ಯದಷ್ಟೇ ಉತ್ಕಟವಾದ ಅವಳ ಬದುಕೂ ಕಣ್ಣೆದುರಿಗೆ ಬರುತ್ತದೆ. ವಚನಕಾರ್ತಿಯರನ್ನು ಕುರಿತ ಗಂಭೀರವಾದ ಅಧ್ಯಯನಗಳು ಕಳೆದ ೩-೪ ದಶಕಗಳಿಂದಲೂ ನಡೆಯುತ್ತಲೇ ಬಂದಿವೆ. ಆ ಎಲ್ಲ ಅಧ್ಯಯನಗಳೂ ವಚನಕಾರ್ತಿಯರ ನಿತ್ಯನೂತನವೆನಿಸುವ ಕಾವ್ಯವನ್ನೂ ಅವರ ಸಾರ್ವತ್ರಿಕವೆನಿಸುವ ಸಾರ್ವಕಾಲಿಕವೆನಿಸುವ ತಾತ್ವಿಕತೆಗಳನ್ನೂ ಹೆಚ್ಚುತ್ತಲೇ ಹೋಗುವ ಹೆಮ್ಮೆಯಲ್ಲಿ ಮತ್ತು ಪ್ರೀತಿಯಲ್ಲಿ ಮತ್ತೆ ಮತ್ತೆ ಪಡೆದುಕೊಳ್ಳುವ ಪ್ರಯತ್ನಗಳೇ ಆಗಿವೆ. ಆರಾಧಾನಭಾವವೊಂದು ಸಕಾರಣವಾಗಿ ಇವರ ಬಗ್ಗೆ ಹುಟ್ಟುತ್ತದೆ.

ವಚನಕಾರ್ತಿಯರಲ್ಲಿ ಅಕ್ಕಮಹಾದೇವಿಯಷ್ಟೇ ಮುಖ್ಯಳಾದವಳು ನೀಲಮ್ಮ. ಬೌದ್ಧಿಕ ನೆಲೆಯಿಂದ ನೋಡಿದರೆ ಅಕ್ಕನಿಗಿಂತ ಹೆಚ್ಚಿನ ಸ್ಪಷ್ಟತೆಯಲ್ಲಿ ನೀಲಮ್ಮ ಹೆಣ್ಣಿನ ಪ್ರಶ್ನೆಗಳನ್ನು ಎದುರಾಗುತ್ತಾಳೆ. ಹೆಣ್ಣು ತನ್ನನ್ನು ತಾನು ನಿರ್ಮಿಸಿಕೊಳ್ಳುವ ಪ್ರಕ್ರಿಯೆಯನ್ನು ಈ ಅಂಕಣದಲ್ಲಿ ಆವರ್ತನ ವಿನ್ಯಾಸದಲ್ಲಿ ನೋಡುತ್ತಲೇ ಇದ್ದೇವೆ. ಅದರ ಆತ್ಯಂತಿಕ ಮಾದರಿಯ ಹಾಗೆ ನೀಲಮ್ಮ ಇದ್ದಾಳೆ.

ನನ್ನನಾರೂವರಿಯರು,
ನಾನು ಸ್ವರ್ಗಿಯಲ್ಲ ನಾನು ಅಪವರ್ಗಿಯಲ್ಲ:
ನನ್ನನಾರೂವರಿಯರು,
ನಾನು ಮುಕ್ತಳಲ್ಲ, ಅಮುಕ್ತಳಲ್ಲ.
ನನ್ನನಾರೂ ಅರಿಯರು.
ಸಂಗಯಯ್ಯನಲ್ಲಿ ರೂಪಿಲ್ಲದ ಹೆಣ್ಣಾದ ಕಾರಣ ನನ್ನನಾರೂ ಅರಿಯರು.
ಹಂದೆಯಲ್ಲ ನಾನು,
ಹರುಷದ ಧೈರ್ಯವುಳ್ಳ ಹೆಣ್ಣು ನಾನು,
ಕಾಮವನಳಿದವಳಾನಾದ ಕಾರಣ
ಬಸವನ ಹಂಗೆನಗಿಲ್ಲವಯ್ಯಾ


ನೀಲಮ್ಮನ ಈ ಎರಡು ವಚನಗಳ ಮೂಲಕವೇ ಹೆಣ್ಣಿನ ಹುಡುಕಾಟ ಮತ್ತು ಹೋರಾಟಗಳೆರಡನ್ನೂ ಚರ್ಚಿಸಲು ಸಾಧ್ಯ ಎನ್ನುವಷ್ಟು ಈ ವಚನಗಳು ಅಪೂರ್ವವಾಗಿವೆ. ತೀರ ಇತ್ತೀಚಿನದ್ದು ಎನ್ನಬಹುದಾದ ಸ್ತ್ರೀವಾದಿ ಚಿಂತನೆಗಳೂ ನೀಲಮ್ಮನ ವಚನಗಳಲ್ಲಿ ಇವೆ.
ಮೊದಲ ಓದಿಗೆ ಈ ವಚನ ಹೆಣ್ಣಿನ ಅಸಹಾಯಕತೆಯ ಸ್ವಮರುಕದ ಚಿತ್ರದಂತೆ ಕಾಣುತ್ತದೆ. ನನ್ನನ್ನು ಯಾರೂ ಅರ್ಥ ಮಾಡಿಕೊಂಡಿಲ್ಲ, ಅರ್ಥ ಮಾಡಿಕೊಳ್ಳುವವರು ಯಾರೂ ಇಲ್ಲ, ಎನ್ನುವ ಮಾತು ವಚನದುದ್ದಕ್ಕೂ ಪುನರುಕ್ತವಾಗುತ್ತಾ ಹೋಗುತ್ತದೆ.

ಈ ವಚನದ ಶಿಲ್ಪ ವೈದೃಶೀ ನೆಲೆಯದ್ದು. ಒಂದನ್ನು ಹೇಳುತ್ತಲೇ ಇನ್ನೊಂದನ್ನು, ಅದಕ್ಕೆ ವಿರುದ್ಧವಾದುದನ್ನು ಧ್ವನಿಸುವ ವಿನ್ಯಾಸದ್ದು. ಇದು ಕಾವ್ಯಮೀಮಾಂಸೆಯ ವಿವರಣೆಯಾದರೆ, ನೀಲಮ್ಮನ ಈ ವಚನ ಟಿಪಿಕಲ್ ಮಹಿಳಾಕಾವ್ಯದ ಮಾದರಿಯೂ ಆಗಿದೆ. ಪಿತೃಸಂಸ್ಕೃತಿಯ ಭಾಷೆಯನ್ನು ಬಳಸುತ್ತಲೇ ಮುರಿಯುವ ಹಾಗೆ ಮುರಿಯುತ್ತಲೇ ಹೆಣ್ಣಿನ ಭಾಷೆಯನ್ನು ಕಟ್ಟುವ ಪ್ರಯತ್ನದ್ದು. ಅವೇ ಶಬ್ದಗಳನ್ನು ಬಳಸುತ್ತಲೇ ಅರ್ಥಾಂತರವನ್ನು ಸಾಧಿಸುವ ಮಹತ್ವಾಕಾಂಕ್ಷೆ ಮತ್ತು ಉತ್ಕಟ ಪ್ರಯತ್ನಗಳು ಅತ್ಯುತ್ತಮ ಮಹಿಳಾ ಕಾವ್ಯದ ದಾರಿ ಮತ್ತು ಮಾದರಿ.

ಮಹಿಳಾ ಕಾವ್ಯದ ಈ ಒಳವಿನ್ಯಾಸವನ್ನು ಗುರುತಿಸುವುದು ಈ ಹೊತ್ತಿನ ಸ್ತ್ರೀವಾದಿ ಅಧ್ಯಯನದ ಮುಖ್ಯ ಕಾಳಜಿಯಾಗಿದೆ. ರಾಜಕೀಯ ಪರಿಭಾಷೆಯಲ್ಲಿ ಹೇಳುವುದಾದರೆ ಹೆಣ್ಣಿನ ಕಾವ್ಯ ಮತ್ತು ಭಾಷೆ ಎರಡನ್ನೂ ಡಿಕೋಡ್ ಮಾಡುವ ಮಹತ್ವದ, ಗಂಭೀರ ಮಾತ್ರವಲ್ಲ ಐತಿಹಾಸಿಕ ಅಗತ್ಯದಲ್ಲಿ ಮಾಡುತ್ತಿರುವ ಪ್ರಯತ್ನಗಳು ಇವು. ನನ್ನನ್ನು ಯಾರೂ ಅರ್ಥ ಮಾಡಿಕೊಳ್ಳುತ್ತಿಲ್ಲ ಎನ್ನುವುದನ್ನು ಪದೇ ಪದೇ ಹೇಳುತ್ತಲೇ ನೀಲಮ್ಮ ತಾನು ಯಾರಲ್ಲ ಎನ್ನುವುದನ್ನೂ ಹೇಳುತ್ತಾ ಹೋಗುತ್ತಿದ್ದಾಳೆ. ತಾನು ‘ಸ್ವರ್ಗಿಯಲ್ಲ’, ‘ಅಪವರ್ಗಿಯಲ್ಲ’ ಎನ್ನುವ ಮಾತುಗಳನ್ನು ಗಮನಿಸಿ. ಹೆಣ್ಣನ್ನು ನೋಡುವ ಎರಡು ಮೂಲ ಮಾದರಿಗಳನ್ನು ನೀಲಮ್ಮ ಇಲ್ಲಿ ಸ್ಪಷ್ಟವಾಗಿ ನಿರಾಕರಿಸುತ್ತಿದ್ದಾಳೆ.

ಹೆಣ್ಣನ್ನು ‘ದೇವಿ’ಯೆಂದು, ‘ದೆವ್ವ’ವೆಂದು ನೋಡುವ ಎರಡು ಬಗೆಗಳೂ ಅವಳಿಗೆ ಸಮ್ಮತವಲ್ಲ. ಹೆಣ್ಣನ್ನು ಅವಾಸ್ತವಿಕವಾದ ನೆಲೆಯಲ್ಲಿ ದೇವಿಯೆಂದು ಕರೆಯುತ್ತಲೇ ಅವಳನ್ನು ಬದುಕಿನ ಎಲ್ಲ ಬಗೆಯ ಅವಕಾಶಗಳಿಂದ ವಂಚಿತಳಾಗಿಸುವುದನ್ನು, ನಿಜದಲ್ಲಿ ಹೆಣ್ಣನ್ನು ಆಳಲು ಬಯಸುವ, ಅವಳ ಬದುಕು–ವ್ಯಕ್ತಿತ್ವ ಎರಡನ್ನೂ ತಮ್ಮ ಅಧೀನದಲ್ಲಿರಿಸಿಕೊಳ್ಳಲು ಬೇಕಾದ ಮೌಲ್ಯವ್ಯವಸ್ಥೆಯನ್ನು ಅಪಾರ ಶ್ರದ್ಧೆಯಲ್ಲಿ ರೂಪಿಸಿಕೊಂಡಿರುವ ವ್ಯವಸ್ಥೆಯು ಅವಳನ್ನು ‘ಸ್ವರ್ಗಿ’ ಎಂದು ಕರೆಯುವುದರ ಡೋಂಗಿತನವನ್ನು ನೀಲಮ್ಮ ಬೇಡ ಎಂದು ಹೇಳುತ್ತಿದ್ದಾಳೆ. ಅಷ್ಟೇ ಸ್ಪಷ್ಟವಾಗಿ ಅವಳು ಹೆಣ್ಣನ್ನು ‘ಅಪವರ್ಗಿ’ ಎಂದು ಕರೆಯುವುದನ್ನೂ ವಿರೋಧಿಸುತ್ತಿದ್ದಾಳೆ.

ಹೆಣ್ಣನ್ನು ಗಂಡಿನ ಸಾಧನೆಯ ದಾರಿಗೆ ಎದುರಾಗುವ ಅಡ್ಡಿಯೆಂದು, ಮಾಯೆಯೆಂದು, ಪಾಶವೆಂದು, ಆಮಿಷವೆಂದು ನೋಡುವುದನ್ನೂ ಅವಳು ಖಚಿತವಾಗಿ ನಿರಾಕರಿಸುತ್ತಿದ್ದಾಳೆ. ಪಿತೃಸಂಸ್ಕೃತಿಯು ಎರಡು ಅತಿಗಳಲ್ಲಿ, ಎರಡು ಅವಾಸ್ತವಗಳಲ್ಲಿ ಹೆಣ್ಣನ್ನು ವ್ಯಾಖ್ಯಾನಿಸುವುದನ್ನೂ ಆ ವ್ಯಾಖ್ಯಾನಗಳನ್ನೇ ಹೆಣ್ಣನ್ನು ನಿಭಾಯಿಸಲು ಬೇಕಾದ ದಾರಿಗಳಾಗಿ ಬಳಸುವುದನ್ನೂ ನೀಲಮ್ಮ ವಿರೋಧಿಸುತ್ತಿದ್ದಾಳೆ. ನಾವಿಲ್ಲಿ ಮುಖ್ಯವಾಗಿ ಗಮನಿಸಬೇಕಾಗಿರುವುದು ಇಡೀ ಪಿತೃಸಂಸ್ಕೃತಿಯ ಭಿತ್ತಿಯನ್ನೇ ಅದರ ಮೂಲ ಮಾದರಿಗಳನ್ನು ನೀಲಮ್ಮ ಗ್ರಹಿಸಿರುವ ಬಗೆಯನ್ನು.

ಸಮುದಾಯವನ್ನು ಕುರಿತ ರಾಜಕೀಯ ಪ್ರಜ್ಞೆಯಲ್ಲಿ ಮಾತ್ರ ಹೀಗೆ ಸತ್ಯಗಳನ್ನು ಅದರ ಸಮಗ್ರತೆಯಲ್ಲಿ ಹಿಡಿಯಲು ಸಾಧ್ಯವಾಗುತ್ತದೆ. ಪಿತೃಸಂಸ್ಕೃತಿಯು ಮೌಲ್ಯದ ಹೆಸರಿನಲ್ಲಿ, ಹೆಣ್ಣಿನ ಆರಾಧನೆಯ ಹೆಸರಿನಲ್ಲಿ ಸ್ಥಾಪಿಸಿರುವ ಕಾರ್ಯ ಮಾದರಿಗಳನ್ನು ಕಾರ್ಯಮಾದರಿಗಳೆಂದು ಗುರುತಿಸಲು ಸಾಧ್ಯವಾಗಿರುವುದೇ ನೀಲಮ್ಮನ ಹೆಗ್ಗಳಿಕೆ. ಮುಂದಿನ ಸಾಲುಗಳನ್ನು ನೋಡೋಣ. ನಾನು ಮುಕ್ತಳಲ್ಲ, ನಾನು ಅಮುಕ್ತಳಲ್ಲ ಎನ್ನುವ ಮಾತುಗಳು, ಹೆಣ್ಣು ತನ್ನ ಬದುಕನ್ನು ತನ್ನಿಚ್ಛೆಯಂತೆ ಬದುಕುವ ಹಕ್ಕಿನ ಪ್ರತಿಪಾದನೆಯಾಗಿ ಕಾಣಿಸುತ್ತದೆ.

ತನ್ನ ಅಗತ್ಯ ಮತ್ತು ನಿರೀಕ್ಷೆಗೆ ತಕ್ಕಂತೆ ಹೆಣ್ಣಿನ ಬದುಕನ್ನು ವಿನ್ಯಾಸಗೊಳಿಸಿರುವ ವಿಧಾನವನ್ನೇ ಇಲ್ಲಿ ನೀಲಮ್ಮ ಪ್ರಶ್ನಿಸುತ್ತಿದ್ದಾಳೆ. ಹೆಣ್ಣಿಗೆ ಏನು ಬೇಕು, ಎಷ್ಟು ಬೇಕು, ಯಾವುದು ಏಕೆ ಬೇಡ... ಎಲ್ಲವನ್ನೂ ತನ್ನ ಪರವಾಗಿ ಇತರರು ನಿರ್ಧರಿಸುವ ಪರಿಸ್ಥಿತಿಯ ಅಸಂಗತತೆಯನ್ನು ಇಲ್ಲಿ ನೀಲಮ್ಮ ವಿಷಾದದಲ್ಲೂ ವ್ಯಗ್ರತೆಯಲ್ಲೂ ಗಮನಿಸುತ್ತಾ, ದಟ್ಟವಾದ ಪ್ರತಿರೋಧದ ನೆಲೆಯಲ್ಲಿ ತಾನು ಮುಕ್ತಳಲ್ಲ ಅಮುಕ್ತಳಲ್ಲ ಎಂದು ತನಗೂ ಲೋಕಕ್ಕೂ ಏಕಕಾಲಕ್ಕೆ ಹೇಳಿಕೊಳ್ಳುತ್ತಿದ್ದಾಳೆ ಮತ್ತು ಹೇಳುತ್ತಿದ್ದಾಳೆ. ಹೆಣ್ಣಿನ ನಿಜದ ನೆಲೆ ಯಾವುದು ಎನ್ನುವುದರ ಹುಡುಕಾಟ ಮತ್ತು ರಚನೆ ಎರಡೂ ಈ ವಚನದಲ್ಲಿದೆ. ಲೋಕ ತನಗೆ ಕೊಡಮಾಡಿದ ವ್ಯಕ್ತಿತ್ವವನ್ನು ಸಕಾರಣವಾಗಿ ನಿರಾಕರಿಸುತ್ತಲೇ ಅದಲ್ಲದ ತನ್ನ ನಿಜ ವ್ಯಕ್ತಿವವನ್ನೂ ಅವಳು ಕಟ್ಟಿಕೊಳ್ಳುತ್ತಿದ್ದಾಳೆ.

ಆ ಕಟ್ಟಿಕೊಳ್ಳುವ ಪರಿ ಎಷ್ಟೂ ಅಪೂರ್ವವಾಗಿದೆ ನೋಡಿ. ತಾನು ಏನು ಎನ್ನುವುದನ್ನು ತಾನು ಏನಲ್ಲ ಎಂದು ಹೇಳುವುದರ ಮೂಲಕವೇ ನೀಲಮ್ಮ ಅರಿಯುತ್ತಿದ್ದಾಳೆ. ತಾನು ಸ್ವರ್ಗಿಯಲ್ಲ, ಅಪವರ್ಗಿಯಲ್ಲ , ಮುಕ್ತಳಲ್ಲ, ಅಮುಕ್ತಳಲ್ಲ... ಎಂದರೆ ಈ ಯಾವುದೂ ಅಲ್ಲದವಳು ತಾನು. ದತ್ತ ವ್ಯಕ್ತಿತ್ವದ ಎಲ್ಲ ಚಹರೆಗಳನ್ನೂ ನಿಷೇಧಾತ್ಮಕವಾಗಿ ನೋಡ ನೋಡುತ್ತಲೇ ತನ್ನನ್ನು ಯಾರೂ ಅರಿಯರು ಎನ್ನುತ್ತಾಳೆ. ಕುತೂಹಲಕರವಾದ ಸಂಗತಿಯೆಂದರೆ ಹೆಣ್ಣನ್ನು ಈ ಲೋಕ ತನಗೆ ಬೇಕಾದಂತೆ ಅರಿತಿದೆ, ಆದರೆ ಅದು ಹೆಣ್ಣನ್ನು ಕುರಿತ ನಿಜವಾದ ಅರಿವಲ್ಲ ಎನ್ನುವುದನ್ನು ನೀಲಮ್ಮ ಸೂಚಿಸುತ್ತಿದ್ದಾಳೆ.  

ಆದ್ದರಿಂದ ಇದು ಅಸಹಾಯಕತೆಯ ಸ್ವಮರುಕದ ಚಿತ್ರಣವಲ್ಲ; ಅಪಾರ ವ್ಯಂಗ್ಯ ಮತ್ತು ವಿಷಾದದ ಆದರೆ ಅದೇ ಹೊತ್ತಿಗೆ ತಾನು ಯಾರು, ತನ್ನ ನಿಜದ ನೆಲೆ ಏನು ಎನ್ನುವುದು ತನಗೆ ಗೊತ್ತಿದೆ ಎನ್ನುವ ‘ಅರಿವು’ ವಚನದ ಅರ್ಥ ಸಾಧ್ಯತೆಗಳನ್ನು ಕಾವ್ಯದ ನಿಗೂಢತೆ ಮತ್ತು ಧ್ವನಿ ಪರಂಪರೆಯಲ್ಲಿ ಮಿಳಿತಗೊಂಡು ಇಲ್ಲಿ ಅಪ್ಪಟ ಕಾವ್ಯವೂ ಹೆಣ್ಣಿನ ಅಪ್ಪಟ ವ್ಯಕ್ತಿತ್ವವೂ ಏಕಕಾಲಕ್ಕೆ ಮೈದಳೆಯುತ್ತದೆ.  ಹೀಗಾಗಿ ‘ನನ್ನನಾರೂವರಿಯರು’ ಎನ್ನುವ ಉದ್ಗಾರವು, ಯಾರೂ ಅರಿಯದ್ದರ ಬಗೆಗಿನ ಆರೋಪವೋ ದುರಂತವೋ ಆಗುವ ಸಾಧ್ಯತೆಯನ್ನು ಮೀರಿ ಬೆಳೆಯುತ್ತಾ ತನ್ನನ್ನು ತಾನು ಅರಿತಿರುವುದರ ಬಗೆಗಿನ ಖಾಚಿತ್ಯ ಮತ್ತು ವಿಶ್ವಾಸದಲ್ಲಿ ಸಾಕ್ಷಾತ್ಕಾರದ ನೆಮ್ಮದಿಯ ಮತ್ತು ಸಂತೋಷದ ‘ಅಮೃತ ಮುಹೂರ್ತ’ವೂ ಆಗಿಬಿಟ್ಟಿದೆ.

ಲೌಕಿಕತೆಯ ನೆಲೆಯಲ್ಲಿ ತನ್ನನ್ನು ತಾನೇ ಹೊಚ್ಚ ಹೊಸದಾಗಿ ಎಂಬಂತೆ ಅನಾವರಣ ಮಾಡಿಕೊಂಡ ಹೆಣ್ಣು ಅದನ್ನು ಮೀರಿದ ಅಲೌಕಿಕ ಆನುಭಾವಿಕ ನೆಲೆಯಲ್ಲೂ ತನ್ನನ್ನು ಯಾರೂ ಅರಿಯರು ಎಂದು ವ್ಯಕ್ತಿತ್ವದ ಅಮೂರ್ತ ಆಯಾಮವನ್ನು ಕುರಿತು ಮಾತನಾಡುತ್ತಿರುವಂತೆಯೂ ಭಾಸವಾಗುತ್ತದೆ. ನನ್ನನ್ನು ಯಾರೂ ಅರಿತಿಲ್ಲ ಎನ್ನುವುದರ ಬಗೆಗೆ ದುಃಖವಿಲ್ಲದ ನಿಲುವೊಂದು ಸಾಧ್ಯವಾಗುವುದು, ಯಾವುದೇ ವ್ಯಕ್ತಿಗೆ ತನ್ನ ಆತ್ಮಘನತೆಯ ಬಗ್ಗೆ ಶಂಕೆಯಿಲ್ಲದ ವಿಶ್ವಾಸವಿದ್ದಾಗ ಮಾತ್ರ. ನೀಲಮ್ಮನ ಈ ವಚನದಲ್ಲಿ ಇಂಥ ಆತ್ಮಘನತೆಯ ಸ್ಪಷ್ಟ ಕುರುಹುಗಳಿವೆ.

ತನ್ನ ಇನ್ನೊಂದು ವಚನದಲ್ಲಿ ನೀಲಮ್ಮ ‘ಅರುಹನರಿಯಲು ಕುರುಹ ಮರೆಯಬೇಕು’ ಎನ್ನುತ್ತಾಳೆ. ಹೆಣ್ಣು ಮರೆಯಬೇಕಾದ ಕುರುಹುಗಳಾಗಿ, ಸ್ವರ್ಗಿ, ಅಪವರ್ಗ,. ಮುಕ್ತ, ಅಮುಕ್ತ ಪರಿಕಲ್ಪನೆಗಳನ್ನು ನೋಡಿದಾಗ ನೀಲಮ್ಮನ ಹುಡುಕಾಟ ಮತ್ತು ಶೋಧದ ಸ್ಪಷ್ಟ ಕಲ್ಪನೆ ಬರುತ್ತದೆ. ವಚನದ ಕೊನೆಯ ಸಾಲು, ಸಂಗಯ್ಯನಲ್ಲಿ ರೂಪಿಲ್ಲದ ಹೆಣ್ಣಾದ ಕಾರಣ ಎನ್ನುವುದೂ ಅಷ್ಟೇ ಮಹತ್ವದ್ದು. ದೈವದ ಎದುರಿಗೆ ಭಕ್ತೆ ಎಲ್ಲ ಕುರುಹುಗಳನ್ನೂ ಕಳೆದುಕೊಂಡು ಲಯವಾಗುವ ಅದ್ವೈತವನ್ನು ಇದು ಸೂಚಿಸುವುದರ ಜೊತೆಗೇ ಸಂಗಯ್ಯಗಳು, ಗಂಡಸರು, ಪಿತೃಸಮಾಜ ಕಾಣುತ್ತಿರುವ, ಕಾಣಲು ಬಯಸುವ, ಅದಕ್ಕಾಗಿ ಇಡೀ ವ್ಯವಸ್ಥೆಯನ್ನೇ ತನ್ನ ಅನುಕೂಲಕ್ಕಾಗಿ ರೂಪಿಸಿಕೊಂಡಿರುವ ವಾಸ್ತವವನ್ನು ನೀಲಮ್ಮ ಇಲ್ಲಿ ವಿರೋಧಿಸುತ್ತಿದ್ದಾಳೆ.

ಸಂಗಯ್ಯಗಳು ಬಯಸುವ ರೂಪ ತನಗಿಲ್ಲ ಎನ್ನುವುದರ ಅರ್ಥ ಈ ಸಮುದಾಯದ ಕರಾರುಗಳನ್ನು ಒಪ್ಪಿಕೊಳ್ಳುವ ಹೆಣ್ಣಿನ ರೂಪು ಎಂದೂ ಅರ್ಥೈಸಲು ಖಂಡಿತ ಈ ವಚನದಲ್ಲಿ ಅವಕಾಶವಿದೆ. ಹಾಗಿದ್ದರೆ, ಈ ‘ಅಲ್ಲ ಅಲ್ಲ’ ಎನ್ನುವ ಹೆಣ್ಣು ಆಗಿರುವುದು ಏನು? ಏನವಳ ರೂಪು? ಎರಡನೆಯ ವಚನದಲ್ಲಿ ಅದರ ಚಹರೆಗಳಿವೆ. ‘ಹಂದೆಯಲ್ಲ ನಾನು’ ಎನ್ನುತ್ತಾಳೆ ನೀಲಮ್ಮ. ಎಂದರೆ ‘ಹೇಡಿ’ಯಲ್ಲ. ಯಾಕಾಗಿ ಈ ‘ಹಂದೆ’ ಎನ್ನುವ ಪದವನ್ನು ನೀಲಮ್ಮ ಬಳಸುತ್ತಿದ್ದಾಳೆ? ಹೆಣ್ಣನ್ನು ಸಮುದಾಯ ಎಲ್ಲಿಯೂ ಹೇಡಿ ಎನ್ನುವ ಹಣೆಪಟ್ಟಿ ಕಟ್ಟಿ ನೋಡುವುದಿಲ್ಲ ನಿಜ. ಆದರೆ ಉದ್ದಕ್ಕೂ ಅವಳನ್ನು ಅದು ನಿಭಾಯಿಸುವುದು, ಅವಳು ‘ಗಂಡಿನ’ ಹಾಗೆ ಇರಬಾರದು ಎನ್ನುವ ಪರಮ  ಎಚ್ಚರದಲ್ಲಿ.

(ಭಾರತೀಯ ರಾಜಕಾರಣದಲ್ಲಿ ಇಂದಿರಾಗಾಂಧಿಯನ್ನು ಕುರಿತಂತೆ, ಆಕೆಯ ಸಂಪುಟದ ಏಕೈಕ ಗಂಡಸು ಎಂದರೆ ಇಂದಿರಾ ಗಾಂಧಿ ಎನ್ನುವ ಮಾತನ್ನು ನೆನಪಿಸಿಕೊಳ್ಳಿ. ಇದನ್ನು ಮೆಚ್ಚುಗೆ ಎಂದೂ ಸ್ತ್ರೀಶಕ್ತಿಯ ಕುರಿತಾದ ಪುರುಷ ವರ್ಗದ ಮೆಚ್ಚುಗೆಯೆಂದೂ ಇದರಲ್ಲಿ ವ್ಯಂಗ್ಯ, ಅಪಹಾಸ್ಯ ಇಲ್ಲವೆಂದೂ ಹೇಳುವವರು ಆತ್ಮವಂಚನೆಯ ಹಂದೆಗಳು ಮಾತ್ರ!). ವ್ಯವಸ್ಥೆಯ ಕರಾರುಗಳನ್ನು ಮೌಲ್ಯವಾಗಿ ಒಪ್ಪಿಕೊಂಡಾಗ ಹೆಣ್ಣಿಗೆ ಆಯ್ಕೆಯ ಅವಕಾಶಗಳೇ ಇರುವುದಿಲ್ಲವಲ್ಲ. ಇದನ್ನು ಇನ್ನೂ ಗಟ್ಟಿಗೊಳಿಸುವುದಕ್ಕೇ ಮತ್ತೆ ಮತ್ತೆ, ‘ಪಾಪ, ಹೆಣ್ಣು ಹೆಂಗಸು’ ಎಂದು ಉದ್ಗರಿಸುವುದು.

As far as the female is concerned psychiyatry is an extraordinary cinfidence trick; unsuspecting creature seeks aid because she feels unhappy, anxious and confused and psychology persuades her to seek the cause in herself.
–Germaine Greer

ಹೆಣ್ಣಿನ ಆತ್ಮ ಬಲವನ್ನು ನಿಧಾನ ವಿಷದ ಹಾಗೆ ಈ ಮೌಲ್ಯ ವ್ಯವಸ್ಥೆ ಕೊಲ್ಲುತ್ತಲೇ ಹೋಗುತ್ತದೆ. ಇನ್ನೇನಲ್ಲದಿದ್ದರೂ ಅವಳಲ್ಲಿ ದ್ವಂದ್ವ ಮತ್ತು ಅಧೀರತೆಯನ್ನು ಹುಟ್ಟಿಸುವುದೇ ಜೆಂಡರ್‌ನ ಯಶಸ್ವಿ ಕಾರ್ಯಮಾದರಿಗಳಲ್ಲೊಂದು. ‘ಹಂದೆಯಲ್ಲ ನಾನು’ ಎನ್ನುವುದು ಒಂದು ಘೋಷ ವಾಕ್ಯದಂತೆ, ಮೊಳಗಿನಂತೆ ನಮಗೆ ಕೇಳಿಸುತ್ತದೆ. ಲೋಕ ಸಾಮಾನ್ಯವಾಗಿ ಹೆಣ್ಣಿಗೆ ನಿರ್ಬಂಧಿಸುವ ಎರಡು ಮುಖ್ಯ ಗುಣಗಳನ್ನು  ನೀಲಮ್ಮ ಹೆಣ್ಣಿನ ವ್ಯಕ್ತಿತ್ವದ ಮೂಲ ‘ಧಾತುಗಳು’ ಎಂದು ಪ್ರತಿಪಾದಿಸುತ್ತಾಳೆ– ‘ಹರುಷ’ ಮತ್ತು ’ಧೈರ್ಯ’.

ಹೆಣ್ಣನ್ನು ಅನುಕೂಲ ಸತಿಯಾಗಿ ನಿಯಂತ್ರಿಸ ಬಯಸುವ ವ್ಯವಸ್ಥೆಗೆ, ಚರ್ಚೆಗೆ, ಸಂಧಾನಕ್ಕೆ ಅವಕಾಶವೇ ಇಲ್ಲದಂತೆ ಪಲ್ಲಟವೊಂದನ್ನು ಅವಳು ಘೋಷಿಸುತ್ತಿದ್ದಾಳೆ. ಹಾಗೆ ಹೇಳುತ್ತಿರುವ ಕ್ರಮವಾದರೂ ಸ್ವಗತದ ಧಾಟಿಯಲ್ಲಿಲ್ಲ. ಹೊಸದಾರಿಯೊಂದರ ಎದುರಿಗೆ ನಿಂತಿರುವ ಹೊತ್ತಿನಲ್ಲಿ, ‘ದಾರಿಯೆರಡರ ನಡುವೆ ದಟ್ಟ ಮಂಜು’ ಎನ್ನುವ ಅಸ್ಪಷ್ಟತೆಯಾಗಲೀ, ‘ಕವಲು ದಾರಿಯ ಮುಂದೆ ನೀ ಬಂದು ನಿಂತಾಗ ನಿನಗೆ ನೀನೇ ಗೆಳೆಯ ನಿನಗೆ ನೀನೇ’ ಎನ್ನುವ ಏಕಾಂಗಿತನದ ಭಾರವಾಗಲಿ ಇಲ್ಲಿ ಇಲ್ಲ. ಮೊಳೆಯದಲೆಗಳ ಮೂಕ ಮರ್ಮರವೂ ಇದಲ್ಲ. ‘ಬಾ ಇಲ್ಲಿ ಸಂಭವಿಸು’ ಎನ್ನುವ ಹೆಣ್ಣಿನ ಕಾಲಾತೀತ ಬಯಕೆಯೊಂದು ಆಸ್ಫೋಟದ ಮೂಲಕ ಘಟಿಸಿಬಿಟ್ಟಿರುವುದನ್ನು ಅರುಣೋದಯದ ಬೆಳಕು ಮತ್ತು ಸೌಂದರ್ಯದಲ್ಲಿ ಪ್ರಕಟಿಸುತ್ತಿದ್ದಾಳೆ.

ಈ ಪ್ರಕಟಣೆಯು, ಹೆಣ್ಣು ತನಗೆ ತಾನೇ ಮಾಡಿಕೊಳ್ಳುತಿರುವುದೂ ಹೌದು, ಲೋಕಕ್ಕೆ ನೀಡುತ್ತಿರುವುದೂ ಹೌದು. personel is political ಎನ್ನುವುದು ಹೆಣ್ಣಿನ ಎಲ್ಲ ಅಭಿವ್ಯಕ್ತಿಗಳ ಮಟ್ಟಿಗೂ ನಿಜ, ಕಾವ್ಯಕ್ಕೆ ಸಾಧ್ಯವಾಗಬೇಕೆಂದು ನಾವು ಬಯಸುವ ಸಾಧಾರಣೀಕರಣವು, ಮಹಿಳಾ ಸಂಕಥನದ ಮಟ್ಟಿಗೆ ಪ್ರಾತಿನಿಧಿಕ ಎನ್ನುವ  ಆಯಾಮವನ್ನೂ ಪಡೆಯುವುದು ಈ ಕಾರಣಕ್ಕಾಗಿ.
ಹರುಷ ಮತ್ತು ಧೈರ್ಯ ಎರಡೂ, ಹೆಣ್ಣು ತನ್ನಷ್ಟಕ್ಕೆ ತಾನು, ತನಗೆ ಬೇಕಾಗಿ ತಾನು ಪಡೆಯಬಹುದಾದ ಆ ಮೂಲಕ ತನ್ನ ಬದುಕನ್ನು ತಾನು ಬದುಕಬಹುದೆಂದು ನೀಲಮ್ಮ ಹೆಣ್ಣಿನ ಬದುಕಿನ ಹೊಸಭಿತ್ತಿಯೊಂದನ್ನು ನಿರ್ಮಿಸುತ್ತಿದ್ದಾಳೆ.

ಹೆಣ್ಣು ಮುಕ್ತವಾಗಿ ನಗುವುದೂ, ಧೀರತೆಯಲ್ಲಿ ಬದುಕುವುದೂ ಬೇಡದ ಸಂಗತಿಗಳೆಂದು ಸಾರಿ ಸಾರಿ ಹೇಳುವಾಗ (ನಗುವ ಹೆಣ್ಣನ್ನು ನಂಬಬಾರದು, ನಂಬಬೇಕಾದ್ದು ಬರೇ ಅಳುಮುಂಜಿಯಾದ ಹೆಣ್ಣನ್ನು!) ಅದಕ್ಕೆ ವ್ಯತಿರಿಕ್ತವಾಗಿ ನೀಲಮ್ಮ ತನ್ನನ್ನು ಬದುಕಿಸಿರುವುದೇ ಈ ಗುಣಗಳು ಎನ್ನುವ ತೀವ್ರತೆಯಲ್ಲಿ ಮಾತನಾಡುತ್ತಿದ್ದಾಳೆ. ಹರುಷ ಮತ್ತು ಧೈರ್ಯಗಳು ತನ್ನ ವ್ಯಕ್ತಿತ್ವದ ಚಹರೆಗಳೆಂದು ಹೇಳುತ್ತಿರುವಾಗ ನೀಲಮ್ಮ ಅವುಗಳನ್ನು ಒಪ್ಪಲೇಬೇಕಾದ ಹಕ್ಕೊತ್ತಾಯದ ದನಿ ಇಲ್ಲಿರುವುದನ್ನು ನಾವು ಗಮನಿಸಬೇಕು.

‘ಹಂದೆಯಲ್ಲ ನಾನು’ ಎನ್ನುವ ಖಾಚಿತ್ಯ ಹೆಣ್ಣಿಗೆ ಬರಬೇಕಾದರೆ ಪಿತೃಸಂಸ್ಕೃತಿಯ ಬಲೆಯಿಂದ ಹೊರಬರುವುದು ಮಾತ್ರವಲ್ಲ, ತನ್ನನ್ನು ಕುರಿತ ಅಪನಂಬಿಕೆಯಿಂದ ಹೊರಬರುವ ಪ್ರಕ್ರಿಯೆಗೆ ತನ್ನನ್ನು ಒಡ್ಡಿಕೊಳ್ಳುವುದೂ ಅಷ್ಟೇ ಮುಖ್ಯ ಎನ್ನುವುದನ್ನು ನೀಲಮ್ಮನ ವಚನಗಳು ಹೇಳುತ್ತಿವೆ. ಗೆಳತಿ ಸುರೇಖಾ, ನೀಲಮ್ಮನೆನ್ನುವ ಈ ಹರುಷದ ಧೈರ್ಯವುಳ್ಳ ಹೆಣ್ಣನ್ನು ಅವರ ಚಿತ್ರಕಲೆಯ ಮೂಲಕ ನಮಗೆ ಮೂರ್ತವಾಗಿ ಕಾಣಿಸಬೇಕು ಎನ್ನುವುದು ನನ್ನ ಕನಸು!

ಅಪ್ಪಟ ಕಾವ್ಯದ ಮಾದರಿಗಳಾಗಿರುವ ಈ ವಚನಗಳಲ್ಲಿ ಸಹಜವಾಗಿಯೇ ಹಲವು ಮಜಲುಗಳಿವೆ. ಈಗ ನಾವು ಗಮನಿಸಿದ ಅರ್ಥ ಛಾಯೆಗಳು ಸಹಜ ಕಾವ್ಯದ ಓದಿನಲ್ಲಿ ಸಿಗಬಹುದು, ಸಿಗದಿರಬಹುದು. ಸ್ತ್ರೀವಾದಿ ಓದಿಗೆ ಒಳಗು ಮಾಡಿದಾಗ ಸಿಕ್ಕೇ ಸಿಗುತ್ತವೆ ಎನ್ನುವುದು ಸ್ತ್ರೀವಾದಿ ಕಾವ್ಯ ಮೀಮಾಂಸೆಯ ಅಗತ್ಯವನ್ನೂ ಮಹಿಳಾ ಕಾವ್ಯದ ಅನನ್ಯತೆಯನ್ನೂ ಹೇಳುತ್ತದೆ ಅಲ್ಲವೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT