ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಧ್ವನಿ ಅರ್ಕೈವ್ ಮತ್ತು ಸಂಗ್ರಹ ಸಂಸ್ಕೃತಿ

Last Updated 12 ಮೇ 2013, 19:59 IST
ಅಕ್ಷರ ಗಾತ್ರ

ಆರ್ಕೈವ್ ಆಫ್ ಇಂಡಿಯನ್ ಮ್ಯೂಸಿಕ್‌ನ ವಿಷಯ ನಿಮ್ಮ ಕಿವಿಗೆ ಬಿದ್ದಿರಬಹುದು. ವಿಕ್ರಮ್ ಸಂಪತ್ ಎಂಬ ಯುವ ಬರಹಗಾರ ಇದರ ರೂವಾರಿ. ವಸಂತ ನಗರದ ಅಲಯನ್ಸ್ ಫ್ರಾನ್ಸೆ ಸಭಾಂಗಣದಲ್ಲಿ ಉದ್ಘಾಟನೆ ಸೊಗಸಾಗಿ ನೆರವೇರಿತು. ಹಲವು ಸಂಗೀತಗಾರರು, ಸಂಗೀತಜ್ಞರು ಬಂದಿದ್ದರು. ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಮುಖ್ಯ ಅತಿಥಿಯಾಗಿ ಬರಬೇಕಾಗಿತ್ತು. ಸರ್ಕಾರ ಬದಲಾಗುವ ಕೆಲಸದ ಒತ್ತಡದಿಂದಲೋ ಏನೋ ಬರಲಿಲ್ಲ. 
  
ಈ ಆರ್ಕೈವ್ ಬಗ್ಗೆ ತಿಳಿಯುವ ಮುನ್ನವೇ ಸೌಂಡ್ ಕ್ಲೌಡ್ ಎಂಬ ಸೈಟ್‌ನಲ್ಲಿ ಅಪ್‌ಲೋಡ್ ಆಗಿದ್ದ ಹಲವು ಧ್ವನಿಮುದ್ರಿಕೆಗಳನ್ನು ನಾನು ಕೇಳಿ ಖುಷಿ ಪಟ್ಟಿದ್ದೆ. ಭಾರತದ ಹಳೆಯ ಸಂಗೀತವನ್ನು ಹೊಸ ತಂತ್ರಜ್ಞಾನ ಬಳಸಿ ಜನರಿಗೆ ಕೇಳಿಸುವ ಧ್ಯೇಯ ಇವರದು. ಉದ್ಘಾಟನೆಯ ಸಮಯ ಹಲವು ರೆಕಾರ್ಡಿಂಗ್ ತುಣುಕುಗಳನ್ನು ಕೇಳಿಸಿದರು.

ಆರ್ಕೈವಿಂಗ್ ಕೆಲಸ ತುಂಬ ಅಮೂಲ್ಯವಾದದ್ದು. ಆದರೆ ಅದರಲ್ಲಿ ಅಡಗಿರುವ ಅಪಾಯಗಳನ್ನೂ ಮನದಟ್ಟು ಮಾಡಿಕೊಳ್ಳುವುದು ಒಳ್ಳೆಯದು. ಶಾಸ್ತ್ರೀಯ ಸಂಗೀತವನ್ನು, ಉನ್ನತ ಕಲೆಯನ್ನು ಸಂಗ್ರಹಾಲಯಗಳಲ್ಲಿ ಕೂಡಿಟ್ಟು ನಮ್ಮ ಕೆಲಸ ಮುಗಿಯಿತು ಎಂದುಕೊಳ್ಳುವ ಕಾಲ ಇದು. ಉತ್ಕೃಷ್ಟ ಎನಿಸಿಕೊಳ್ಳುವ ಎಲ್ಲವನ್ನೂ ತಜ್ಞರಿಗೆ ಬಿಟ್ಟು, ನಾವು ಎಂದಿನಂತೆ ಮಾಧ್ಯಮಗಳು ಬೆನ್ನುಹತ್ತುವ ಜನಪ್ರಿಯ ಕಲೆಯನ್ನು ಮಾತ್ರ ಚರ್ಚೆ ಮಾಡುತ್ತಾ ಕೂರುವ ಸಂದರ್ಭ ತಲುಪಿಬಿಟ್ಟಿದ್ದೇವೆ.

ಯಾವುದೇ ಖಾಸಗಿ ರೇಡಿಯೊ ಚಾನೆಲ್‌ನಲ್ಲೂ ಇಂದು ಶಾಸ್ತ್ರೀಯ ಸಂಗೀತ, ಭಾವಗೀತೆ, ಜನಪದ ಹಾಡು ಕೇಳಿಬರುವುದಿಲ್ಲ. ಯಾವುದೇ ಖಾಸಗಿ ಟಿ.ವಿ. ವಾಹಿನಿಯಲ್ಲೂ ಶಾಸ್ತ್ರೀಯ ಸಂಗೀತ, ನೃತ್ಯಕ್ಕೆ ಕಾಲಾವಕಾಶವಿಲ್ಲ. ಹೆಚ್ಚು ಸಂಖ್ಯೆಯಲ್ಲಿ ಮಾರಾಟವಾಗುವ ಇಂಗ್ಲಿಷ್ ದೈನಿಕಗಳಿಗೆ ಪುರಾತನ, ಸಾಂಪ್ರದಾಯಿಕ, ಶಾಸ್ತ್ರೀಯವೆನಿಸಿಕೊಳ್ಳುವ ಯಾವುದರ ಬಗ್ಗೆಯೂ ಆಸಕ್ತಿಯಿಲ್ಲ. ಒಳ್ಳೆಯ ವಿಮರ್ಶೆಗಳು ವಿರಳವಾಗಿಬಿಟ್ಟಿವೆ. ಹಾಗಾಗಿ ಇಂದು ಭಾರತದ ಅತ್ಯುತ್ತಮ ಬರಹಗಾರ ಚೇತನ್ ಭಗತ್ ಎಂದೋ, ಅತ್ಯುತ್ತಮ ಸಂಗೀತಗಾರ ಎ.ಆರ್ . ರೆಹಮಾನ್ ಎಂದೋ ಮಂದಿ ತಿಳಿದಿದ್ದರೆ ಅದಕ್ಕೆ ಮಾಧ್ಯಮಗಳೂ ಕಾರಣ.

ಆದರೆ ಇದು ಬರೀ ಖಾಸಗಿ ವಲಯದ ಪ್ರಶ್ನೆಯಲ್ಲ. ಸರ್ಕಾರದ ನೀತಿಯೂ ಇಂತಹ ಪ್ರವೃತ್ತಿಯನ್ನೇ ಪ್ರೊತ್ಸಾಹಿಸುತ್ತಿದೆ. ಆಕಾಶವಾಣಿ ಕೇಳುತ್ತಿದ್ದ ಕಾಲದಲ್ಲಿ ಎಲ್ಲ ರೀತಿಯ ಸಂಗೀತವೂ ಕಿವಿಗೆ ಬೀಳುತ್ತಿತ್ತು. ಆದರೆ ಇಂದಿನ ಖಾಸಗಿ ವಾಹಿನಿಗಳನ್ನು ಕೇಳುವವರಿಗೆ ಅಭಿರುಚಿಯ ವೈವಿಧ್ಯ ಇರುವುದಿಲ್ಲ. ಇನ್ನು ಪ್ರಸಾರ ಭಾರತಿಯ ವಿಷಯ ಹೇಗಾಗಿದೆ ನೋಡಿ. ಆಲ್ ಇಂಡಿಯ ರೇಡಿಯೊ ಮತ್ತು ದೂರದರ್ಶನದಲ್ಲಿ ಕೆಲಸ ಮಾಡುವವರಿಗೆ ಖಾಸಗಿಯವರಿಗಿರುವ ಸ್ವಾತಂತ್ರ್ಯ, ಸಂಬಳ, ಭಡ್ತಿ ಯಾವುದೂ ಇಲ್ಲ. ಆದರೂ ಸರ್ಕಾರವೇ ಸ್ಥಾಪಿಸಿರುವ ಪ್ರಸಾರ ಭಾರತಿಯ ಪ್ರಕಾರ, ಇವೆಲ್ಲ ಸ್ವಾಯತ್ತ! ಹಣ ಹೂಡದೆ, ಸ್ವಾತಂತ್ರ್ಯ ನೀಡದೆ, ಈ ಸಂಸ್ಥೆಗಳು ಖಾಸಗಿಯವರ ಜೊತೆ ಪೈಪೋಟಿಗೆ ಇಳಿಯಬೇಕು ಎಂದು ಸರ್ಕಾರ ನಿರೀಕ್ಷಿಸುತ್ತದೆ. ಲಾಭ ಮಾಡಬೇಕು ಎಂದು ಒತ್ತಡ ಹೇರುತ್ತದೆ. 

ವಿಕ್ರಮ್ ಸಂಪತ್ ಅವರ ಆರ್ಕೈವ್ ಸ್ಥಾಪನೆಗೆ ಹಲವರು ಸಹಾಯ ಹಸ್ತ ನೀಡಿದ್ದಾರೆ. ಅದರಲ್ಲಿ ಒಬ್ಬರಾದ ಮೋಹನದಾಸ ಪೈ ಭಾವುಕರಾಗಿ ನಮ್ಮ ಸಂಸ್ಕತಿಯ ಬಗ್ಗೆ ಮಾತಾಡಿದರು. ಎಲ್ಲರೂ ಇಂಗ್ಲಿಷ್ ಮಾತನಾಡುತ್ತ ದೇಸಿ ಭಾಷೆಗಳನ್ನು ಮರೆಯುತ್ತಿರುವುದರ ಬಗ್ಗೆ (ಇಂಗ್ಲಿಷ್‌ನಲ್ಲೇ!) ಬೇಸರ ವ್ಯಕ್ತಪಡಿಸಿದರು. (ಕನ್ನಡದಲ್ಲಿ ಒಂದೆರಡು ಸಾಲು ಮಾತಾಡಿದವರು ಪಂಜಾಬಿ ಮೂಲದ ಚಿರಂಜೀವಿ ಸಿಂಗ್). ಪೈ ಅವರಂತೆ ಹಲವು ಶ್ರೀಮಂತರಿಗೆ ನಮ್ಮ ಭಾಷೆ, ಸಂಸ್ಕೃತಿ ಉಳಿಯಬೇಕು ಎಂಬ ಆಸೆ ಇದೆ. ಆದರೆ ಇಂಥ ಉದಾತ್ತ ಅಭೀಪ್ಸೆಗಳು ಕಾರ್ಯರೂಪಕ್ಕೆ ಬರುವುದು ಹೇಗೆ?

ಒಂದು ಉದಾಹರಣೆ. ಅಜೀಂ ಪ್ರೇಂಜಿ ತಮ್ಮ ಐಶ್ವರ್ಯವನ್ನು ಧಾರಾಳವಾಗಿ ಹಂಚಿದ್ದಾರೆ. ವಿಶ್ವವಿದ್ಯಾಲಯ ಸ್ಥಾಪಿಸಿದ್ದಾರೆ. ನಮ್ಮ ಭಾಷೆಗಳಲ್ಲಿ ಒಳ್ಳೆಯ ಪಠ್ಯ ಪುಸ್ತಕ ಒದಗಿಸಬೇಕು ಎಂಬ ಆಸೆ ಅವರು ಹುಟ್ಟು ಹಾಕಿರುವ ಪ್ರತಿಷ್ಠಾಪನೆಗೆ ಇದೆ. ಕೆಲವು ವರ್ಷಗಳ ಹಿಂದೆ ಅವರು ಮಾಡಿಸಿರುವ ಅನುವಾದಗಳು ನನ್ನ ಕಣ್ಣಿಗೆ ಬಿದ್ದವು. ಕೆಟ್ಟದಾಗಿದ್ದವು. ಇದಕ್ಕೆ ಕಾರಣ ಏನಿರಬಹುದು? ಇಂಥ ದೊಡ್ಡ ಸಂಸ್ಥೆಗಳಲ್ಲಿನ `ಪ್ರೊಫೆಷನಲ್' ಎನಿಸಿಕೊಳ್ಳುವ ಹಣಕಾಸಿನ ವ್ಯವಸ್ಥೆ ಎಂದು ನನ್ನ ಊಹೆ. ಅನುವಾದ ಎಷ್ಟು ಕಡಿಮೆ ಖರ್ಚಿನಲ್ಲಿ ಮಾಡಬಹುದು ಎಂದು ಮೊದಲು ಮಾರ್ಕೆಟ್ ಸರ್ವೇ ಮಾಡಿರುತ್ತಾರೆ. ಅದರ ಆಧಾರದ ಮೇಲೆ ಅನುವಾದದ ಶುಲ್ಕವನ್ನು ನಿಗದಿ ಮಾಡಿರುತ್ತಾರೆ. ಇದು ಎಷ್ಟು ಕಡಿಮೆಯಿರುತ್ತದೆ ಎಂದರೆ ಎಂಥವರಿಗೂ ಆ ದುಡ್ಡಿನಲ್ಲಿ ಜೀವನ ಸಾಗಿಸಲು ಸಾಧ್ಯವಿರುವುದಿಲ್ಲ.

ಅನುವಾದ ಚೆನ್ನಾಗಿ ಮಾಡಬಲ್ಲವರು ಆ ಕೆಲಸಕ್ಕೆ ಸಮಯ ವ್ಯಯಿಸುವುದಿಲ್ಲ. ಇತರ ಕೆಲಸ ಮಾಡಲು ತೆರಳಿಬಿಡುತ್ತಾರೆ. ಇನ್ನು ಹೀಗೆ ಟೆಂಡರ್ ಧೋರಣೆಯಿಂದ ಅನುವಾದವಾದ ಪುಸ್ತಕಗಳ ಗುಣಮಟ್ಟವನ್ನು ಅರಿಯಲು ಸಂಸ್ಥೆಗಳ ಜವಾಬ್ದಾಸ್ಥರಿಗೆ ಭಾಷೆ ಗೊತ್ತಿರುವುದಿಲ್ಲ. ಗೊತ್ತಿದ್ದರೂ ಮೌಲ್ಯಮಾಪನ ಮಾಡುವ ಸಾಮರ್ಥ್ಯವಿರುವುದಿಲ್ಲ.

ಹಾಗಾದರೆ ಇದಕ್ಕೆ ಏನಾದರೂ ಪರಿಹಾರ ಇದೆಯೇ? ಸಾಫ್ಟ್‌ವೇರ್ ಥರದ ಉದ್ಯಮಗಳಲ್ಲಿ ಹೆಸರು ಮಾಡಿರುವ ದಾನಿಗಳು ಸಂಗೀತ-ಸಾಹಿತ್ಯಗಳಲ್ಲಿ ತೊಡಗಿರುವವರ ಬಗ್ಗೆ ಗೌರವದ ಜೊತೆ ಸಂಭಾವನೆಯ ವಿಷಯದಲ್ಲಿ ಸಮಾನತೆಯನ್ನು ಬೆಳೆಸಿಕೊಳ್ಳಬೇಕೇನೋ! ಒಬ್ಬ ಒಳ್ಳೆಯ ಅನುವಾದಕನಿಗೆ ತಂತ್ರಾಂಶ ಎಂಜಿನಿಯರ್‌ಗೆ ಕೊಡುವ ಸಂಬಳಕ್ಕಿಂತ ತೀರ ಕಡಿಮೆ ಬಟವಾಡೆ ಕೊಡುವುದು ಅನ್ಯಾಯ ಎಂಬ ಯೋಚನೆಯಾದರೂ ಅವರ ತಲೆಯಲ್ಲಿ ಹೊಕ್ಕರೆ ಬದಲಾವಣೆ ಆದೀತು. (ಕಾರ್ಪೊರೇಟ್ ಸಂದರ್ಭಗಳಲ್ಲಿ ಎಷ್ಟೋ ಬಾರಿ ಅನುವಾದಕರಿಗೆ ಕೊಡುವ ಶುಲ್ಕ ಅಲ್ಲಿನ ಅನ್‌ಸ್ಕಿಲ್ಡ್ ಎನಿಸಿಕೊಳ್ಳುವ ಕ್ಲೀನಿಂಗ್ ರೀತಿಯ ಕೆಲಸಕ್ಕೆ ಕೊಡುವ ಹಣಕ್ಕಿಂತ ಕಡಿಮೆಯಿರುತ್ತದೆ).  

ಒಂದು ಭಾಷೆಯ ಅತ್ಯುತ್ತಮ ಲೇಖಕರ ಸಹಾಯದಿಂದ ಪುಸ್ತಕಗಳನ್ನು ತಯಾರಿಸಿಕೊಂಡರೆ ಇಂಥ ಸಂಸ್ಥೆಗಳಿಗೆ ಇರುವ ಒಳ್ಳೆಯ ಉದ್ದೇಶ ಸಾಕಾರಗೊಳ್ಳಬಹುದೇ? ಪೂರ್ಣಚಂದ್ರ ತೇಜಸ್ವಿಯಂಥವರ ಕೈಯಲ್ಲಿ ವಿಜ್ಞಾನದ ಪುಸ್ತಕ, ಕೆ.ವಿ . ಸುಬ್ಬಣ್ಣ, ಸಿದ್ದಲಿಂಗಯ್ಯನಂಥವರ ಕೈಯಲ್ಲಿ ಸಾಹಿತ್ಯದ ಪುಸ್ತಕ, ಅನಂತಮೂರ್ತಿಯಂಥವರ ಕೈಯಲ್ಲಿ ಸಮಾಜ ಶಾಸ್ತ್ರದ ಪುಸ್ತಕ ತಯಾರಾದರೆ ನಮ್ಮ ಭಾಷೆಗಳಲ್ಲಿ ಓದುವುದು ಎಂಥ ಖುಷಿಯ ಸಂಗತಿ ಆಗಬಹುದಲ್ಲವೇ? ಆದರೆ ಅವರಾರೂ `ವೆಂಡರ್'ಗಳಾಗಿ ಇನ್ಫೋಸಿಸ್, ಪ್ರೇಂ ಜಿ ಫೌಂಡೇಶನ್‌ಗಳಿಗೆ ದಕ್ಕುವುದಿಲ್ಲ. ದೊಡ್ಡ ಸಂಸ್ಥೆಗಳೇ ಅವರ ಬಾಗಿಲಿಗೆ ಹೋಗಬೇಕಾಗುತ್ತದೆ. ಅವರನ್ನು ಗುರುತಿಸಿ, ಗೌರವದಿಂದ ನಿವೇದಿಸಿಕೊಳ್ಳಬೇಕಾಗುತ್ತದೆ.

ಶುಕ್ರವಾರ ಉದ್ಘಾಟನೆಯಾದ ಧ್ವನಿ ಸಂಗ್ರಹಕ್ಕೆ ತುಂಬ ವಿವೇಕದ, ಉತ್ಸಾಹದ ಬೆಂಬಲ ಸಿಕ್ಕಿದಂತಿದೆ. ಒಡವೆ, ಫೋನ್ ವ್ಯಾಪಾರದಲ್ಲಿ ಖ್ಯಾತರಾದವರು ನೆರವಿಗೆ ನಿಲ್ಲುವುದಲ್ಲದೆ ಯೋಜನೆಯ ಬಗ್ಗೆ ಪ್ರೀತಿ ಹೊಂದಿದ್ದಾರೆ. ಭಾರತದ ಮೊದಲನೆಯ ಗ್ರಾಮೊಫೋನ್ ರೆಕಾರ್ಡ್ 1902ರಲ್ಲಿ ತಯಾರಾಯಿತು. ಆ ಧ್ವನಿ ಮುದ್ರಣದಲ್ಲಿನ  ಕಲಾವಿದೆಯ ಹೆಸರು ಗೌಹರ್ ಜಾನ್. ಆಕೆಯ ಬಗ್ಗೆ ವಿಕ್ರಮ್ ಸಂಪತ್ `ಮೈ ನೇಮ್ ಇಸ್ ಗೌಹರ್ ಜಾನ್' ಎಂಬ ಶೀರ್ಷಿಕೆಯ ಪುಸ್ತಕ ಬರೆದಿದ್ದಾರೆ. ಈಕೆ ಅರ್ಮೆನಿಯಾದಿಂದ ಭಾರತಕ್ಕೆ ಬಂದು, ಉತ್ತರ ಪ್ರದೇಶದಲ್ಲಿ ಮುಸಲ್ಮಾನರೊಬ್ಬರನ್ನು ಮದುವೆಯಾಗಿ, ಈ ದೇಶದ ಸಂಗೀತ ಕಲಿತವರು. ಹಲವರಿಗೆ ಗೊತ್ತಿಲ್ಲದ ವಿಷಯ: ಆಕೆ ಕೊನೆಯ ದಿನಗಳನ್ನು ಮೈಸೂರಿನಲ್ಲಿ ಕಳೆದರು. ಮೈಸೂರಿನ ಆಸ್ಪತ್ರೆಯೊಂದರಲ್ಲಿ ತೀರಿಕೊಂಡರು. ವಿಕ್ರಮ್ ಸಂಪತ್ ವೀಣಾ ವಿದ್ವಾಂಸ ಬಾಲಚಂದರ್ ಅವರ ಬಗ್ಗೆ, ಮತ್ತು ಕಲಾ ಪೋಷಕರಾದ ಮೈಸೂರು ದೊರೆಗಳ ಬಗ್ಗೆಯೂ ಪುಸ್ತಕಗಳನ್ನು ಬರೆದಿದ್ದಾರೆ.

ಚರಿತ್ರೆ, ಸಂಸ್ಕೃತಿ ಎರಡರ ಬಗ್ಗೆಯೂ ಆಸಕ್ತಿ ಹೊಂದಿರುವ ಇವರು ಆರ್ಕೈವ್ ಆಫ್ ಇಂಡಿಯನ್ ಮ್ಯೂಸಿಕ್ ಸ್ಥಾಪಿಸಿರುವುದರಿಂದ ಅದು ಚೆನ್ನಾಗಿ ಬೆಳೆದು ಜನಪ್ರಿಯವಾಗುತ್ತದೆ ಎಂಬ ವಿಶ್ವಾಸ ಎಲ್ಲರಿಗೂ ಇದೆ. ಅವರ ಜೊತೆ ಹಲವು ತಜ್ಞರು, ಉದ್ಯಮಿಗಳು ನಿಂತಿರುವುದು, ಜ್ಞಾನ ಮತ್ತು ಹಣದ ಸಹಾಯ ಒದಗಿಸುತ್ತಿರುವುದು ನಿಜಕ್ಕೂ ಸಂತಸದ ವಿಷಯ. ಉತ್ಕೃಷ್ಟವಾದ ಸಂಸ್ಕೃತಿ ನಮ್ಮ ಜೀವನದ ಭಾಗವಾದಾಗ ಮಾತ್ರ ಇಂಥ ಸಂಗ್ರಹಗಳಿಗೆ ಅರ್ಥ ಬರುವುದು ಎಂಬುದನ್ನೂ ಮರೆಯದಿರೋಣ.

ಮೇ 17ರವರೆಗೆ ಅಲಯನ್ಸ್ ಫ್ರಾನ್ಸೆನಲ್ಲಿ ಆಡಿಯೊ ಪ್ರದರ್ಶನ ಇದೆ. ಬಿಡುವಾದರೆ ಹೋಗಿ ಬನ್ನಿ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT