ಭಾನುವಾರ, ಸೆಪ್ಟೆಂಬರ್ 19, 2021
29 °C

ತಳವೊಡೆದ ಕೊಡದಲ್ಲಿ ನೀರು!

ಪ್ರಜ್ಞಾ ಮತ್ತಿಹಳ್ಳಿ Updated:

ಅಕ್ಷರ ಗಾತ್ರ : | |

ಗರ್ವದಿಂದ ಮಾಡುವ ಭಕ್ತಿ ದ್ರವ್ಯದ ಕೇಡು
ನಡೆಯಿಲ್ಲದ ನುಡಿ ಅರಿವಿಂಗೆ ಕೇಡು
ಕೊಡದೆ ತ್ಯಾಗಿಯೆನಿಸಿಕೊಂಬುದು
ಮುಡಿಯಿಲ್ಲದ ಶೃಂಗಾರ, ದೃಢವಿಲ್ಲದ ಭಕ್ತಿ
ಅಡಿಯೊಡೆದ ಕುಂಭದಲ್ಲಿ ಸುಜಲವ ತುಂಬಿದಂತೆ
ಮಾರಯ್ಯಪ್ರಿಯ ಅಮರೇಶ್ವರಲಿಂಗವ ಮುಟ್ಟದ ಭಕ್ತಿ

ಆಯ್ದಕ್ಕಿ ಲಕ್ಕಮ್ಮ ಶರಣೆಯರಲ್ಲಿ ಅತ್ಯಂತ ದಿಟ್ಟ ನಡೆನುಡಿಗೆ ಹೆಸರಾದವಳು. ತನ್ನ ಪತಿಯ ನಡವಳಿಕೆಯನ್ನೇ ಆಕ್ಷೇಪಿಸಿ ತಿದ್ದುವ ಮಟ್ಟಿಗಿನ ನ್ಯಾಯನಿಷ್ಠುರಿ. ಆಕೆ ಭಕ್ತಿಯ ಕುರಿತು ಅತ್ಯಂತ ಸ್ಪಷ್ಟವಾಗಿ ತಿಳಿಸುತ್ತಾಳೆ. ಭಗವಂತನ ಸಾಕ್ಷಾತ್ಕಾರವೇ ಅಂತಿಮವಾದ ಗುರಿ. ಅದಕ್ಕೆ ಭಕ್ತಿ ಕೇವಲ ಒಂದು ಮಾರ್ಗವಷ್ಟೆ. ನಾವು ಭಗವಂತನನ್ನೇ ತಲುಪುತ್ತಿಲ್ಲವೆಂದಾದರೆ ನಮ್ಮೆಲ್ಲ ಪ್ರಯತ್ನಗಳೂ ಕೂಡ ತಳವೊಡೆದ ಕೊಡದಲ್ಲಿ ನೀರು ತುಂಬುತ್ತ ಹೋದಂತೆ. ನೀರೇನೋ ತುಂಬ ಚೆನ್ನಾಗಿದೆ, ಪವಿತ್ರವಾಗಿದೆ.

ಆದರೆ ತುಂಬುತ್ತಿರುವ ಕೊಡಕ್ಕೆ ತಳವೇ ಇಲ್ಲ ಅಂತಾದರೆ ಏನು ಪ್ರಯೋಜನ?

ಇತರರಿಗೆ ಬೇಕಾದ ವಸ್ತುಗಳನ್ನು ನೀಡುವುದು ದಾನವೇ ಹೊರತು ನಮಗೆ ಬೇಡವೆನಿಸಿದ್ದನ್ನು ಕೊಡುವುದಲ್ಲ. ಬೇಕಾದುದನ್ನು ಬಿಟ್ಟುಕೊಟ್ಟರೆ ತ್ಯಾಗವೆಂದು ಕರೆಸಿಕೊಳ್ಳುತ್ತದೆ. ಏನನ್ನೂ ಕೊಡದೇ ಹಾಗೇ ತ್ಯಾಗಿಯೆಂದು ಕರೆಸಿಕೊಳ್ಳಲು ಸಾಧ್ಯವೆ? ಸಜ್ಜನರ ಹಾದಿಯಲ್ಲಿ ಸಾಗುವ ಮನುಷ್ಯನಿಗೆ ತಾನು ಒಳ್ಳೆಯವನಾಗುತ್ತಿದ್ದೇನೆ ಎಂಬ ಭಾವ ಬಂದೊಡನೆ ಅವನನ್ನು ಅಹಂಕಾರ ಮುತ್ತಿಕೊಳ್ಳುತ್ತದೆ. ತಾನು ಇತರರಿಗಿಂತ ಭಿನ್ನ ಮತ್ತು ಶ್ರೇಷ್ಠನೆಂಬ ಪ್ರಜ್ಞೆಯಿಂದ ಗರ್ವಿಯಾದ ಆತನ ಭಕ್ತಿಗೆ ಯಾವುದೇ ಅರ್ಥವಿಲ್ಲ. ಅದು ಪೂಜಾದ್ರವ್ಯಗಳ ವ್ಯರ್ಥ ಬಳಕೆ ಮಾತ್ರವಾಗುತ್ತದೆ. ಒಳ್ಳೊಳ್ಳೆಯ ತತ್ವಾದರ್ಶಗಳನ್ನು ಕೇವಲ ಮಾತಿನಲ್ಲಿ, ಉಪದೇಶದಲ್ಲಿ, ಭಾಷಣದಲ್ಲಿ ಧಾರಾಳವಾಗಿ ಬಳಸಿ ಆಚರಣೆಯಲ್ಲಿ ತರದಿದ್ದರೆ ಅದು ತಿಳಿವಳಿಕೆ ಅಥವಾ ಜ್ಞಾನದ ದುರ್ಬಳಕೆಯೇ ಆಗುತ್ತದೆ.

ಆ ಕಾಲದಲ್ಲಿ ಮುಡಿಯಿರದಿದ್ದರೆ ಅದೊಂದು ಕುರೂಪವೆನಿಸಿಕೊಳ್ಳುತ್ತಿತ್ತಾದ ಕಾರಣ ಬೇರೆ ಶೃಂಗಾರ ಮಾಡಿಕೊಂಡರೂ ಅಸಹ್ಯವಾಗಿಯೇ ಕಾಣುತ್ತಿತ್ತು. ಅಹಂಕಾರರಹಿತನಾಗಿರಬೇಕಾದ ಅವಶ್ಯಕತೆಯನ್ನೂ ಹಾಗೂ ನುಡಿದಂತೆ ನಡೆಯಲೇಬೇಕಾದ ಸನ್ನಡತೆಯನ್ನು ಅರ್ಥ ಮಾಡಿಸುವ ಲಕ್ಕಮ್ಮ ದೇವರನ್ನು ತಲುಪುವ ನಮ್ಮ ಗುರಿಯನ್ನು ಕೇಂದ್ರೀಕರಿಸಿಕೊಂಡು ಅದಕ್ಕೆ ಪೂರಕವಾಗಿ ನಮ್ಮ ಜೀವನಕ್ರಮವನ್ನು ರೂಪಿಸಿಕೊಳ್ಳಬೇಕೆಂಬ ಬೀಜಮಾತನ್ನು ಬಹಳ ಮಾರ್ಮಿಕವಾದ ಉಪಮೆಗಳನ್ನು ನೀಡಿ ವಿವರಿಸುತ್ತಾಳೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು