ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣಸಾರ: ದೇವತೆಗಳ ಹೊಟ್ಟೆಕಿಚ್ಚು

ಭಾಗ 244
ಅಕ್ಷರ ಗಾತ್ರ

ಮೇನಾದೇವಿ–ಹಿಮವಂತ ದಂಪತಿಗೆ ಶಿವನ ಮೇಲಿರುವ ಅನನ್ಯವಾದ ಭಕ್ತಿಯನ್ನು ನೋಡಿ ಇಂದ್ರ ಮೊದಲಾದ ದೇವತೆಗಳು ಆನಂದಪಡುವ ಬದಲು, ಆತಂಕಪಡುತ್ತಾರೆ. ಹಿಮವಂತ ತನ್ನ ಪುತ್ರಿ ಪಾರ್ವತಿಯನ್ನು ಶಂಕರನಿಗೆ ಮದುವೆಮಾಡಿಕೊಟ್ಟರೆ, ಖಂಡಿತವಾಗಿ ಆತ ಮುಕ್ತಿ ಪಡೆಯುತ್ತಾನೆ. ಇದರಿಂದ ಹಿಮವಂತ ಈಗಿರುವ ಪರ್ವತರೂಪವನ್ನು ಬಿಟ್ಟು ದಿವ್ಯರೂಪವನ್ನು ಧರಿಸಿ, ನೇರ ಶಿವಲೋಕಕ್ಕೆ ತೆರಳುತ್ತಾನೆ. ಅವನು ಶಿವಲೋಕದಲ್ಲಿ ಶಿವನಂತೆಯೇ ರೂಪ ಪಡೆದು ಸುಖವಾಗಿರುತ್ತಾನೆ ಎಂದು ದೇವತೆಗಳೆಲ್ಲಾ ಹೊಟ್ಟೆಕಿಚ್ಚುಪಡುತ್ತಾರೆ. ಅಲ್ಲದೆ, ಹಿಮವಂತನಲ್ಲಿ ಈಗಾಗಲೇ ಮಿತಿಯಿಲ್ಲದಷ್ಟು ರತ್ನಗಳಿವೆ. ಇಂತಹವನಿಗೆ ಶಿವ ಅಳಿಯನಾದರೆ, ಆಗರ್ಭ ಶ್ರೀಮಂತನಾಗುತ್ತಾನೆ. ಇದರಿಂದ ಭೂಮಿಯನ್ನು ‘ರತ್ನಗರ್ಭ’ ಅಂತ ಕರೆಯುವುದನ್ನೇ ಬದಲಾಯಿಸಿ, ಹಿಮವಂತನನ್ನೇ ‘ರತ್ನಗರ್ಭ’ ಅಂತ ಕರೆಯಬೇಕಾಗುತ್ತದೆ’ ಎಂದು ದೇವತೆಗಳೆಲ್ಲಾ ಪೇಚಾಡಿಕೊಳ್ಳುತ್ತಾರೆ.

ಹಿಮವಂತನಿಗೆ ಮುಕ್ತಿ ಸಿಗದಂತೆ ಮಾಡಲು ಇರುವ ಏಕೈಕ ಉಪಾಯ ಎಂದರೆ, ಆತ ಫಲೇಚ್ಛೆ ಇಲ್ಲದೆ ಪಾರ್ವತಿಯನ್ನು ಶಿವನಿಗೆ ಮದುವೆ ಮಾಡಿಕೊಡದಂತೆ ತಡೆಯಬೇಕು. ವಿಧಿನಿಯಮದ ಪ್ರಕಾರ ಯಾರೂ ಏನೇ ಮಾಡಿದರೂ ಶಿವ-ಪಾರ್ವತಿ ಕಲ್ಯಾಣ ತಡೆಯುವುದು ಸಾಧ್ಯವಿಲ್ಲ. ಆದರೆ, ಹಿಮವಂತ ಮಗಳು ಪಾರ್ವತಿಯನ್ನು ಶಿವನಿಗೆ ಕೊಡುವ ಮನಸ್ಸಿಲ್ಲದಂತೆ ಮಾಡಿದರೆ ಆತನಿಗೆ ಮುಕ್ತಿ ಸಿಗುವುದಿಲ್ಲ. ಹಿಮವಂತನಿಗೆ ಮುಕ್ತಿ ಸಿಗದಿದ್ದರೆ, ಅವನು ಭೂಮಿಯಲ್ಲೇ ಉಳಿಯುತ್ತಾನೆ ಅಂತ ದೇವತೆಗಳೆಲ್ಲರೂ ಭಾವಿಸುತ್ತಾರೆ.

ದೇವತೆಗಳೆಲ್ಲರೂ ಬೃಹಸ್ಪತಿಯ ಬಳಿಗೆ ಬಂದು, ‘ಓ ಗುರುವೇ, ನೀನು ಹಿಮವಂತನ ಮನೆಗೆ ಹೋಗಿ, ಅವನ ಮನದಲ್ಲಿ ಶಿವದ್ವೇಷ ತುಂಬಬೇಕು. ಇದರಿಂದ ರತ್ನನಿಧಿಯಾದ ಹಿಮವಂತ ಮೋಕ್ಷವಂಚಿತನಾಗಿ, ಇನ್ನೂ ಕೆಲವು ಕಾಲ ಭೂಮಿಯಲ್ಲಿರಬೇಕಾಗುತ್ತದೆ. ದಯವಿಟ್ಟು ನಮ್ಮ ಕೋರಿಕೆ ಈಡೇರಿಸು’ ಎಂದು ಮನವಿ ಮಾಡಿದರು.

ದೇವತೆಗಳ ಮಾತು ಕೇಳಿ ಬೃಹಸ್ಪತಿ ಬೆಚ್ಚಿಬಿದ್ದ. ‘ಶಿವಶಿವಾ’ ಎನ್ನುತ್ತಾ ತನ್ನ ಎರಡು ಕಿವಿಗಳನ್ನು ಮುಚ್ಚಿಕೊಂಡ. ‘ದೇವತೆಗಳೇ, ನೀವು ಸ್ವಾರ್ಥಪರರು, ಪರಾರ್ಥವನ್ನು ಹಾಳುಮಾಡಲು ಯೋಚಿಸುವಿರಿ. ನೀವು ಹೇಳಿದಂತೆ ಶಿವನಿಂದನೆ ಮಾಡಿದರೆ ನಾನು ನರಕಕ್ಕೆ ಹೋಗಬೇಕಾಗುತ್ತದೆ. ನಿಮಗೆ ಧೈರ್ಯವಿದ್ದರೆ ನೀವೇ ಹಿಮವಂತನಿಗೆ ಶಿವದ್ವೇಷ ಬೋಧಿಸಿ. ಶಿವನ ಹೊರತು ಪಾರ್ವತಿಯು ಇನ್ನಾರನ್ನೂ ವರಿಸುವುದಿಲ್ಲ. ನಿಮ್ಮ ಕುಯುಕ್ತಿ ಸಾಧ್ಯವಾಗಬೇಕಾದರೆ ನೀವೆಲ್ಲ ಬ್ರಹ್ಮನ ಬಳಿ ಹೋಗಿ, ಸಹಾಯ ಬೇಡಿ’ ಎಂದ.

ಬೃಹಸ್ಪತಿ ಸಲಹೆಯಂತೆ ದೇವತೆಗಳು ಬ್ರಹ್ಮನ ಬಳಿಗೆ ಬಂದರು. ಶಿವನಿಂದೆ ಮಾಡುವಂತೆ ಹಿಮವಂತನ ಮನವೊಲಿಸಲು ಬ್ರಹ್ಮನನ್ನು ಕೋರಿದರು. ದೇವತೆಗಳ ಮಾತನ್ನು ಕೇಳಿ ಬ್ರಹ್ಮ ಬೆಚ್ಚಿಬಿದ್ದ, ‘ಮಹಾ ಪಾಪಕರವಾದ ಶಿವನಿಂದನೆಗೆ ಪ್ರೇರೇಪಿಸುವ ಕೆಲಸ ನಾನು ಮಾಡುವುದಿಲ್ಲ. ಆದರೆ ನಿಮಗೊಂದು ಉಪಾಯ ಹೇಳುವೆ. ನೀವೆಲ್ಲಾ ನೇರವಾಗಿ ಕೈಲಾಸಕ್ಕೆ ಹೋಗಿ ಶಿವನನ್ನೇ ಹಿಮವಂತನ ಬಳಿಗೆ ಕಳುಹಿಸಿ ತನ್ನ ನಿಂದನೆಯನ್ನು ತಾನೇ ಮಾಡಲಿ. ಇದರಿಂದ ಪರಮೇಶ್ವರನಿಗೆ ಲಾಭವಾಗುವುದು. ಹಿಮವಂತನಿಗೆ ನಷ್ಟ ಉಂಟಾಗುವುದು. ಏಕೆಂದರೆ, ಪರನಿಂದೆಯಿಂದ ನಾಶವುಂಟಾದರೆ, ಸ್ವನಿಂದೆಯಿಂದ ಯಶಸ್ಸಾಗುವುದು’ ಎಂದ ಬ್ರಹ್ಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT