ಸಿಸಿಬಿ ಇನ್‌ಸ್ಪೆಕ್ಟರ್‌, ಹೆಡ್‌ಕಾನ್‌ಸ್ಟೆಬಲ್ ಅಮಾನತು

7
ವಂಚಕರ ಬಳಿ ₹ 1 ಕೋಟಿ ಕೇಳಿದ ಆರೋಪ

ಸಿಸಿಬಿ ಇನ್‌ಸ್ಪೆಕ್ಟರ್‌, ಹೆಡ್‌ಕಾನ್‌ಸ್ಟೆಬಲ್ ಅಮಾನತು

Published:
Updated:
Prajavani

ಬೆಂಗಳೂರು: ವಂಚನೆ ಪ್ರಕರಣ ಮುಚ್ಚಿ ಹಾಕಲು ‘ಎಐಎಂಎಂಎಸ್ ವೆಂಚರ್ಸ್’ ಕಂಪನಿ ಮಾಲೀಕರಿಗೆ ₹ 1 ಕೋಟಿ ಕೇಳಿದ್ದ ಹಾಗೂ ‘ಅಜ್ಮೇರಾ ಗ್ರೂಪ್‌’ನ (ಇನ್ನೊಂದು ವಂಚಕ ಕಂಪನಿ) ಆರೋಪಿಯೊಬ್ಬ ತಲೆಮರೆಸಿಕೊಳ್ಳಲು ಸಹಕರಿಸಿದ್ದ ಆರೋಪದಡಿ ಸಿಸಿಬಿ ಇನ್‌ಸ್ಪೆಕ್ಟರ್ ಆರ್.ಪ್ರಕಾಶ್ ಹಾಗೂ ಹೆಡ್‌ಕಾನ್‌ಸ್ಟೆಬಲ್ ಸತೀಶ್ ಅವರನ್ನು ಅಮಾನತು ಮಾಡಲಾಗಿದೆ.

ಜಯನಗರ 9ನೇ ಬ್ಲಾಕ್‌ನಲ್ಲಿರುವ ‘ಎಐಎಂಎಂಎಸ್ ವೆಂಚರ್ಸ್’ ಕಂಪನಿಯು ಅಧಿಕ ಬಡ್ಡಿಯ ಆಮಿಷವೊಡ್ಡಿ ಸಾರ್ವಜನಿಕರಿಂದ ಹಣ ಠೇವಣಿ ಇರಿಸಿಕೊಳ್ಳುತ್ತಿತ್ತು. ಈ ಬಗ್ಗೆ ಮಾಹಿತಿ ಪಡೆದು ಕಂಪನಿ ಬಳಿ ತೆರಳಿದ್ದ ಪ್ರಕಾಶ್ ಹಾಗೂ ಸತೀಶ್, ‘ನೀವು ಗ್ರಾಹಕರಿಗೆ ವಂಚನೆ ಮಾಡುತ್ತಿರುವ ಬಗ್ಗೆ ಸಿಸಿಬಿಗೆ ಸಾಕಷ್ಟು ದೂರುಗಳು ಬಂದಿವೆ. ₹ 1 ಕೋಟಿ ಕೊಟ್ಟರೆ ಪ್ರಕರಣ ಹೊರಬರದಂತೆ ನೋಡಿಕೊಳ್ಳುತ್ತೇವೆ’ ಎಂಬ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

‘ನಾವೇ ಕಷ್ಟದಲ್ಲಿದ್ದೇವೆ. ಅಷ್ಟೊಂದು ಹಣ ಕೊಡಲು ಕಷ್ಟವಾಗುತ್ತದೆ’ ಎಂದು ಮಾಲೀಕರು ಹೇಳಿದಾಗ, ಅಂತಿಮವಾಗಿ ₹ 38 ಲಕ್ಷಕ್ಕೆ ಒಪ್ಪಂದವಾಗಿತ್ತು. ಇದರ ನಡುವೆಯೇ ಕೆಲ ಗ್ರಾಹಕರು ‘ಎಐಎಂಎಂಎಸ್ ವೆಂಚರ್ಸ್’ ವಿರುದ್ಧ ಸಿಸಿಬಿ ಡಿಸಿಪಿ ಗಿರೀಶ್ ಅವರಿಗೂ ದೂರುಗಳನ್ನು ನೀಡಿದ್ದರು.

ಈ ಮಾಹಿತಿ ಆಧರಿಸಿ ಜ.9ರಂದು ಕಂಪನಿ ಮೇಲೆ ದಾಳಿ ನಡೆಸಿದ್ದ ಡಿಸಿಪಿ ನೇತೃತ್ವದ ತಂಡ ಅಯೂಬ್ ಅಲಿ, ಇಲಿಯಾಸ್ ಪಾಷಾ, ಮೊಹಮದ್ ಮುಜಾಹಿದ್ದುಲ್ಲಾ, ಮುದಾಸಿರ್ ಪಾಷಾ ಹಾಗೂ ಮೊಹಮದ್ ಸಾದಿಕ್ ಎಂಬುವರನ್ನು ಬಂಧಿಸಿತ್ತು. ಈ ಕಂಪನಿ 500ಕ್ಕೂ ಹೆಚ್ಚು ಮಂದಿಯಿಂದ ₹ 65 ಕೋಟಿ ಸಂಗ್ರಹಿಸಿರುವುದು ತನಿಖೆಯಿಂದ ಬಹಿರಂಗವಾಗಿತ್ತು.

‘ಬಂಧಿತರನ್ನು ವಿಚಾರಣೆ ನಡೆಸಿದಾಗ, ‘ಏನ್ ಸಾರ್, ಕೇಸ್ ಮುಚ್ಚಿ ಹಾಕುವುದಾಗಿ ನಿಮ್ಮವರೇ ಬಂದು ₹ 38 ಲಕ್ಷ ತೆಗೆದುಕೊಂಡು ಹೋಗಿದ್ದಾರೆ. ಆದರೂ, ನಮ್ಮನ್ನು ಬಂಧಿಸಿದ್ದೀರಲ್ಲ’ ಎಂದರು. ಯಾರಿಗೆ ಹಣ ಕೊಟ್ಟಿದ್ದೀರಿ ತೋರಿಸಿ ಎಂದು ಎಲ್ಲ ಸಿಬ್ಬಂದಿಯ ಫೋಟೊಗಳನ್ನು ತೋರಿಸಿದಾಗ, ಪ್ರಕಾಶ್ ಹಾಗೂ ಸತೀಶ್ ಅವರನ್ನು ಗುರುತಿಸಿದರು. ಈ ವಿಚಾರವಾಗಿ ಆಂತರಿಕ ತನಿಖೆ ನಡೆಸಿ, ಕಮಿಷನರ್ ಟಿ.ಸುನೀಲ್ ಕುಮಾರ್ ಅವರಿಗೆ ಶುಕ್ರವಾರ ವರದಿ ಕೊಟ್ಟಿದ್ದೆ’ ಎಂದು ಸಿಸಿಬಿ ಡಿಸಿಪಿ ಎಸ್.ಗಿರೀಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಪ್ಪಿಸಿಕೊಳ್ಳಲು ಸಹಕಾರ: ತಬ್ರೇಜ್ ಪಾಷಾ ಹಾಗೂ ಅಬ್ದುಲ್ ದಸ್ತಗಿರ್ ಎಂಬುವರು ಜಯನಗರದಲ್ಲೇ ‘ಅಜ್ಮೇರಾ ಗ್ರೂಪ್’ ಕಂಪನಿ ತೆರೆದು ಸಾರ್ವಜನಿಕರಿಗೆ ₹ 500 ಕೋಟಿವರೆಗೆ ವಂಚಿಸಿದ್ದರು. ಆರೋಪಿಗಳನ್ನು ಬಂಧಿಸುವಂತೆ ಗ್ರಾಹಕರು ಸಿಸಿಬಿ ಕಚೇರಿ ಎದುರು ಪ್ರತಿಭಟನೆಯನ್ನೂ ಮಾಡಿದ್ದರು. ಆದರೆ, ಎಷ್ಟೇ ಶೋಧ ನಡೆಸಿದ್ದರೂ ಅವರು ಪತ್ತೆಯಾಗಿರಲಿಲ್ಲ.

‘ತಬ್ರೇಜ್‌ನ ಮೊಬೈಲ್ ಕರೆ ವಿವರ (ಸಿಡಿಆರ್) ಪರಿಶೀಲಿಸಿದಾಗ, ಇನ್‌ಸ್ಪೆಕ್ಟರ್ ಪ್ರಕಾಶ್ ಅವರು ನಾಲ್ಕು ತಿಂಗಳಿನಿಂದ ಆತನೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು. ಹೀಗಾಗಿ, ಸಿಸಿಬಿಯ ಪ್ರತಿಯೊಂದು ಹೆಜ್ಜೆಗಳೂ ಆತನಿಗೆ ಗೊತ್ತಾಗುತ್ತಿದ್ದವು. ಪ್ರಕಾಶ್ ಸಹಕಾರ ನೀಡಿರುವುದು ಮೇಲ್ನೋಟಕ್ಕೆ ಸಾಬೀತಾಗಿದ್ದರಿಂದ ಕಮಿಷನರ್‌ಗೆ ಸಲ್ಲಿಸಿರುವ ವರದಿಯಲ್ಲಿ ಆ ಅಂಶವನ್ನೂ ಉಲ್ಲೇಖಿಸಲಾಗಿದೆ’ ಎಂದು ಗಿರೀಶ್ ಮಾಹಿತಿ ನೀಡಿದರು.

ಲಕ್ಕಸಂದ್ರ ವಿಜಿ ಪ್ರಕರಣ

‘ರೌಡಿ ವಿಜಯ್ ಅಲಿಯಾಸ್ ಲಕ್ಕಸಂದ್ರ ವಿಜಿ ಕೊಲೆ ಪ್ರಕರಣದ ತನಿಖೆಯನ್ನು ಕೋರಮಂಗಲ ಪೊಲೀಸರು ನಡೆಸುತ್ತಿದ್ದರು. ಅದರಲ್ಲೂ ಮಧ್ಯ ಪ್ರವೇಶಿಸಿದ್ದ ಪ್ರಕಾಶ್, ತಾವೇ ಆರೋಪಿಗಳನ್ನು ಕೋರಮಂಗಲ ಠಾಣೆಗೆ ಶರಣಾಗತಿ ಮಾಡಿಸಿದ್ದರು. ಇದರ ಅಗತ್ಯವೇನಿತ್ತು? ಈ ಬಗ್ಗೆಯೂ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ’ ಎಂದು ಸಿಸಿಬಿ ಅಧಿಕಾರಿಯೊಬ್ಬರು ಹೇಳಿದರು.

 

***

ಕರ್ತವ್ಯಲೋಪ ಆರೋಪದಡಿ ಅಮಾನತು ಮಾಡಿದ್ದೇನೆ. ಇನ್‌ಸ್ಪೆಕ್ಟರ್ ಹಣ ಪಡೆದಿದ್ದರೋ, ಇಲ್ಲವೋ ಗೊತ್ತಿಲ್ಲ. ಈ ಬಗ್ಗೆ ಡಿಸಿಪಿ ನೇತೃತ್ವದಲ್ಲಿ ಇಲಾಖಾ ವಿಚಾರಣೆ ಮುಂದುವರಿದಿದೆ- ಟಿ.ಸುನೀಲ್ ಕುಮಾರ್, ಪೊಲೀಸ್ ಕಮಿಷನರ್

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !