‘ಕೇಂದ್ರ ಸರ್ಕಾರದ್ದು ತೋರಿಕೆಯ ಅಭಿವೃದ್ಧಿ’

7
ದೇಶದ ಆರ್ಥಿಕತೆ ಅಧೋಗತಿಗೆ lಚಿಂತಕ ಡಾ.ಜಿ.ರಾಮಕೃಷ್ಣ ಅಭಿಪ್ರಾಯ

‘ಕೇಂದ್ರ ಸರ್ಕಾರದ್ದು ತೋರಿಕೆಯ ಅಭಿವೃದ್ಧಿ’

Published:
Updated:
Deccan Herald

ಬೆಂಗಳೂರು: ‘ನೈಜ ಅಭಿವೃದ್ಧಿಯ ಕಾರ್ಯಗಳನ್ನು ಮಾಡುವ ಬದಲಾಗಿ, ಕೇಂದ್ರ ಸರ್ಕಾರ ತೋರಿಕೆ ಅಭಿವೃದ್ಧಿಯ ಪ್ರದರ್ಶನ ಮಾಡುತ್ತಿದೆ’ ಎಂದು ಚಿಂತಕ ಡಾ.ಜಿ.ರಾಮಕೃಷ್ಣ ಅಭಿಪ್ರಾಯಪಟ್ಟರು.

ಭಾರತ ಕಮ್ಯುನಿಸ್ಟ್‌ ಪಕ್ಷದ(ಸಿಪಿಐ) ಬೆಂಗಳೂರು ಜಿಲ್ಲಾ ಮಂಡಳಿಯು ಪ್ರಕಟಿಸಿರುವ ‘ಮೋದಿ ಆಡಳಿತ–ಒಂದು ವಿಮರ್ಶೆ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ದೇಶದ ಆರ್ಥಿಕತೆ ಅಧೋಗತಿಗೆ ತಲುಪುತ್ತಿದೆ. ಸರ್ಕಾರ ಅಂಬಾನಿ, ಅದಾನಿಗಳ ಹಿತ ಕಾಯುತ್ತಿದೆ. ಗುಜರಾತಿನ ಮುಂದ್ರಾ ಬಂದರಿನ ಪ್ರದೇಶವನ್ನು ಅದಾನಿ ಕಂಪನಿಗೆ ನಿರ್ದಿಷ್ಟ ಮೊತ್ತಕ್ಕೆ ಗುತ್ತಿಗೆ ನೀಡಲಾಗಿದೆ. ಆ ಮೊತ್ತಕ್ಕಿಂತ ದುಪ್ಪಟ್ಟು ಹಣವನ್ನು ಸರ್ಕಾರ ಅದೇ ಬಂದರಿನಲ್ಲಿ ಬಳಸುವ ಜಾಗಕ್ಕೆ ಬಾಡಿಗೆ ರೂಪದಲ್ಲಿ ಕಂಪನಿಗೆ ಪಾವತಿಸುತ್ತಿದೆ’ ಎಂದು ಉದಾಹರಣೆ ನೀಡಿದರು.

‘ಬಿಜೆಪಿ ಅಧ್ಯಕ್ಷರು ಅಯೋಧ್ಯ, ಶಬರಿಮಲೆ ವಿದ್ಯಮಾನಗಳ ಕುರಿತು ಅನುಷ್ಠಾನಕ್ಕೆ ತರಲು ಯೋಗ್ಯವಾಗಿಯೇ ಎಂದು ಪರಿಶೀಲಿಸಿ ತೀರ್ಪು ನೀಡಬೇಕು ಎಂದು ಹೇಳಿಕೆ ನೀಡುತ್ತಾರೆ. ಆರ್‌ಬಿಐ ಮುಖ್ಯಸ್ಥರೇ ಸರ್ಕಾರದೊಂದಿಗೆ ಹೊಂದಿಕೊಂಡು ಹೋಗಬೇಕು ಅನ್ನುತ್ತಾರೆ. ರಕ್ಷಣಾ ಸಚಿವೆ ಎಚ್‌ಎಎಲ್‌ ಕೆಲಸಕ್ಕೆ ಬಾರದ ಕಾರ್ಖಾನೆ ಎನ್ನುತ್ತಾರೆ. ಈ ರೀತಿಯ ಹೇಳಿಕೆಗಳು ಅವರಲ್ಲಿನ ಅಧಿಕಾರದ ಮದವನ್ನು ತೋರಿಸುತ್ತವೆ’ ಎಂದರು. 

‘ಇರಾನ್‌ನಿಂದ ತೈಲ ಆಮದು ಮಾಡಿಕೊಳ್ಳಲು, ರಷ್ಯಾದಿಂದ ಯುದ್ಧೋಪಕರಣಗಳನ್ನು ಖರೀದಿಸುವ ಮೊದಲು ಅಮೆರಿಕದ ಒಪ್ಪಿಗೆ ಪಡೆಯುವ ದುಸ್ಥಿತಿ ದೇಶಕ್ಕೆ ಬಂದಿದೆ’ ವಿಷಾದಿಸಿದರು.

ಪತ್ರಕರ್ತ ಸಿದ್ದನಗೌಡ ಪಾಟೀಲ ಮಾತನಾಡಿ, ‘ಸರ್ಕಾರದಲ್ಲಿ ಭೂಸ್ವಾಧೀನದಂತಹ ಕಾನೂನಾತ್ಮಕ ಭ್ರಷ್ಟಾಚಾರ ಹೆಚ್ಚುತ್ತಿದೆ. . ಕಾರ್ಪೊರೇಟ್‌ ಕಂಪನಿಗಳು ಆಲೂಗಡ್ಡೆಯ ಚಿಪ್ಸ್‌ ತಯಾರಿಸುತ್ತವೆ, ಧಾನ್ಯಗಳ ಹಿಟ್ಟು ತಯಾರಿಸುತ್ತವೆ ಎಂದು ಕೃಷಿ ಸಾಲದ ಪಾಲನ್ನು ನೀಡಲಾಗುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಭಾರತೀಯ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಮುರಳೀಧರ, ‘ದೇಶದ ಕೃಷಿ, ಶಿಕ್ಷಣ, ಹಣಕಾಸು, ಔದ್ಯೋಗಿಕ ವಲಯಗಳು ಬಿಕ್ಕಟ್ಟಿನಲ್ಲಿವೆ. ಇಂದಿನ ಸ್ಥಿತಿ ಕುರಿತು ಯಾವುದೇ ಪೂರ್ವಾಗ್ರಹ ಇಲ್ಲದೆ ಈ ಪುಸ್ತಕ ರಚಿಸಲಾಗಿದೆ. ಚರ್ಚೆಯನ್ನು ಹುಟ್ಟುಹಾಕಲೆಂದೇ ನಿದರ್ಶನ, ಅಂಕಿ–ಅಂಶಗಳ ಆಧಾರ ಸಮೇತ ವಿಶ್ಲೇಷಣೆ ಮಾಡಲಾಗಿದೆ’ ಎಂದು ಅವರು ತಿಳಿಸಿದರು.

ಪುಸ್ತಕದ ಬಗ್ಗೆ
ಲೇಖಕರು: ಎಂ.ಸತ್ಯಾನಂದ್, ಸಿದ್ದನಗೌಡ ಪಾಟೀಲ, ಮುರಳೀಧರ
ಪುಟಗಳು : 104
ಬೆಲೆ : ₹25

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !