ಮೊಸಳೆ ಕ್ಯಾಚರ್‌...

7

ಮೊಸಳೆ ಕ್ಯಾಚರ್‌...

Published:
Updated:
Deccan Herald

ಗಣೇಶ ಚೌತಿ ಹಿಂದಿನ ದಿನ ಮಧ್ಯಾಹ್ನ. ಶಿರಸಿಯ ಪ್ರಾಣಿ–ಪಕ್ಷಿತಜ್ಞ ಡಾ. ರಾಜೇಂದ್ರ ಸಿರ್ಸಿಕರ್‌ ಮೊಬೈಲ್‌ಗೆ ಬನವಾಸಿ ಆರ್‌ಎಫ್‌ಒ ಕಡೆಯಿಂದ ಒಂದು ಕರೆ ಬಂತು. ‘ಒಂದು ಭಾರೀ ಗಾತ್ರದ ಮೊಸಳೆ ಬಂದಿದೆ ಸರ್‌, ಹಿಡಿಬೇಕಿತ್ತಲ್ಲಾ..’

‘ಸರಿ, ಆ ಮೊಸಳೆಯ ಚಿತ್ರವನ್ನು ವಾಟ್ಸ್‌ಆ್ಯಪ್‌ ಕಳಿಸಿ’ ಎಂದರು ರಾಜೇಂದ್ರ. ವಾಟ್ಸ್‌ಆ್ಯಪ್‌ಗೆ ಚಿತ್ರ ಬಂತು. ಚಿತ್ರದಲ್ಲೇ ಅದರ ಉದ್ದ–ಗಾತ್ರ ಅಂದಾಜಿಸಿದರು. ಅದು ಭಾರಿ ಗಾತ್ರದ್ದು ಎಂದು ಖಚಿತವಾಯಿತು. ‘ಕೆರೆಯಲ್ಲಿರುವುದರಿಂದ ಬಲೆ ಹಾಕಿ ಮೇಲೆ ತಂದರೆ ಮುಂದಿನದನ್ನು ನಾನು ನೋಡಿಕೊಳ್ಳುತ್ತೇನೆ’ ಎಂದು ಅವರು ಭರವಸೆ ನೀಡಿದರು. ಒಪ್ಪಿಗೆ ಸಿಕ್ಕ ಮೇಲೆ ರಂಗಾಪುರ ಕೆರೆ ಕಡೆಗೆ ಹೊರಟರು.

ಆ ವೇಳೆಗಾಗಲೇ ಮೊಸಳೆ ಬಂದು ಮೂರ್ನಾಲ್ಕು ದಿನಗಳಾಗಿತ್ತು. ಅಷ್ಟರಲ್ಲಾಗಲೇ ಆ ಊರಿನ ಜನರು ಕೋಳಿ, ಮೀನುಗಳನ್ನು ಹಾಕಿ ಅದು ಎಲ್ಲಿಯೂ ಹೋಗದಂತೆ ನಿಗಾ ಇಟ್ಟಿದ್ದರು. ರಾಜೇಂದ್ರ ನಿರ್ದೇಶನದಂತೆ ಅರಣ್ಯ ಇಲಾಖೆ ಹಾಗೂ ಊರ ಜನ ಸೇರಿ ಬಲೆ ಬೀಸಿದರು. ಮೊಸಳೆ ಸರಳವಾಗಿ ಬಲೆಗೆ ಬಿತ್ತು. ರಾಜೇಂದ್ರ ಲಘುಬಗೆಯಿಂದ ವಾಹನ ಇಳಿದು ಮೊಸಳೆ ಇದ್ದ ಸ್ಥಳ ತಲುಪುವ ವೇಳೆಗೆ ಅದು ಅಷ್ಟೇ ಚಾಣಾಕ್ಷತನದಿಂದ ಪಾರಾಗಿತ್ತು. ಬಂದ ದಾರಿಗೆ ಸುಂಕವಿಲ್ಲ. ‘ಹೇಗಾದರೂ ಆಗಲಿ, ಅಲ್ಲೊಂದು ಎಚ್ಚರಿಕೆ ಫಲಕ ನೆಡಿ’ ಹೇಳಿ ಅವರು ಮನೆಗೆ ವಾಪಸಾದರು.

ಹಬ್ಬದ ನಂತರದ ದಿನ– ಮತ್ತೆ ಕರೆ ಬಂತು. ‘ಸರ್‌, ರಂಗಾಪುರ ಕೆರೆಯಿಂದ ಒಂದು ಕಿ.ಮೀ ದೂರದ ಭತ್ತದ ಗದ್ದೆಯಲ್ಲಿ ಮೊಸಳೆ ಕಾಣಿಸಿಕೊಂಡಿದೆ. ಬನ್ನಿ’ ಎಂದು. ಮತ್ತೆ ದಡಬಡಾಯಿಸಿ ಹೊರಟರು ರಾಜೇಂದ್ರ. ಈ ಬಾರಿ ಅವರಿಗೆ ನಿರಾಸೆಯಾಗಲಿಲ್ಲ. ಮೊಸಳೆ ಆಗಲೇ ವರದಾ ನದಿಯತ್ತ ಹೊರಟಿತ್ತು. ಗದ್ದೆಯ ನಡುವಿದ್ದ ಅದು ತನ್ನತ್ತ ನುಗ್ಗಿ ಬರುತ್ತಿದ್ದ ಜನರನ್ನು ಬಾಯ್ದೆರೆದು ನೋಡುತ್ತಿತ್ತು. ಅದರ ಗಾತ್ರ ಹೇಗಿತ್ತೆಂದರೆ, ಇಲಾಖೆಯ ಗಾರ್ಡ್‌ ಒಬ್ಬರು ಗಾತ್ರ ನೋಡಿ ‘ಅಯ್ಯಯ್ಯಪ್ಪ...’ ಎಂದು ಕೂಗಿ ಬಿಟ್ಟರು.

ಈ ಕೂಗಿನಿಂದ ಅಲರ್ಟ್ ಆದಂತೆ ಕಂಡ ಮೊಸಳೆ, ರಾಜೇಂದ್ರ ಅವರ ಮೇಲೆ ಎರಗಲು ಮುಂದಾಯಿತು. ಬಾಯ್ದೆರೆದ ಸ್ಥಿತಿಯಲ್ಲಿದ್ದ ಮೊಸಳೆಗೆ ಎದುರಿದ್ದವರು ಕಾಣಿಸುವುದಿಲ್ಲವಂತೆ. ಅಕ್ಕ ಪಕ್ಕದವರು ಮಾತ್ರ ಕಾಣುತ್ತಾರಂತೆ. ಈ ಜ್ಞಾನವಿದ್ದಿದ್ದರಿಂದ ಕೇವಲ ಮೂರು ಅಡಿ ಅಂತರದಲ್ಲಿ ನಿಂತಿದ್ದ ರಾಜೇಂದ್ರ, ಮೊಸಳೆ ಕುತ್ತಿಗೆಗೆ ನೈಲಾನ್‌ ಹಗ್ಗ ಹಾಕಿ ಜಗ್ಗಲು ಅರಣ್ಯ ಇಲಾಖೆ ಸಿಬ್ಬಂದಿಗೆ ಸೂಚಿಸಿದರು. ಕುತ್ತಿಗೆಗೆ ಹಗ್ಗ ಬೀಳುತ್ತಲೇ ಬಾಲ ಹಿಡಿದು ಅದರ ಮೈಮೇಲೇ ಏರಿ ಕುಳಿತುಕೊಂಡರು. ಕೈಯಲ್ಲಿದ್ದ ಗೋಣಿ ಚೀಲವನ್ನು ಮುಖಕ್ಕೆ ಮುಚ್ಚಿ, ಬಾಯಿಗೆ ಗಮ್‌ ಟೇಪ್‌ ಸುತ್ತಿದರು. ಮೊಸಳೆ ಆಟಾಟೋಪ ಸ್ತಬ್ಧವಾಯಿತು. ಆ ವೇಳೆಗಾಗಲೇ ರಾಜೇಂದ್ರ ಅವರ ಮೊಗ ಕೆಂಪೇರಿತ್ತು. ಕೇವಲ ಅರ್ಧ ತಾಸಿನ ಕಾರ್ಯಾಚರಣೆಯಲ್ಲಿ ಒಂಚೂರು ಗಾಯವಾಗದ ರೀತಿಯಲ್ಲಿ ಮೊಸಳೆ ಹಿಡಿದು ಹಾಕಿದ್ದರು. ನಂತರ ಅದರ ಅಳತೆ ತೆಗೆದು ನೋಡಿದರೆ, ಅದು ಬರೋಬ್ಬರಿ ಎಂಟೂವರೆ ಅಡಿ ಉದ್ದ, 200 ಕೆ.ಜಿ. ಭಾರದ ಹೆಣ್ಣು ಮೊಸಳೆ.

ಮೊಸಳೆ ನೋಡಲು ಜನಜಾತ್ರೆಯೇ ಅಲ್ಲಿ ಸೇರಿತು. ಜನರ ನಿಗ್ರಹಕ್ಕೆ ಪೊಲೀಸರೂ ಬಂದಿದ್ದರು. ಒಂದು ಹಂತದಲ್ಲಿ ಪೊಲೀಸ್‌ ಲಾಠಿ ಬೀಸಲು ಮುಂದಾದರು. ಅಲ್ಲಿಂದ ಆ ಮೊಸಳೆಯನ್ನು ಕಾಳಿನದಿ ಪಾತ್ರಕ್ಕೆ ಬಿಡಲು ಜೀಪಿನಲ್ಲಿ ಹೇರಿಕೊಂಡು ದಾಂಡೇಲಿಯತ್ತ ಪಯಣ ಸಾಗಿತು. ಅಲ್ಲಿ ಕಾಳಿನದಿಯಲ್ಲಿ ಬಿಡುವ ಮುನ್ನ ರಾಜೇಂದ್ರ ಅವರ ಎದುರು ಮತ್ತೊಂದು ಸವಾಲಿತ್ತು. ಅದೆಂದರೆ ಮೊಸಳೆಗೆ ಕಟ್ಟಿದ  ಎಲ್ಲ ಹಗ್ಗಗಳನ್ನು ಬಿಚ್ಚಬೇಕಿತ್ತು. ಕೈ, ಕಾಲು ಬಿಚ್ಚಿದ್ದಾಯಿತು. ಬಾಯಿಗೆ ಸುತ್ತಿದ್ದ ಗಮ್‌ಟೇಪ್‌ ಬಿಚ್ಚಿದ್ದ ನಂತರ, ಉಳಿದ ಒಂದೇ ಒಂದು ಬಂಧ ಅದು ಬಾಯಿಗೆ ಕಟ್ಟಿದ್ದ ನೈಲಾನ್‌ ಹಗ್ಗ. ಜೊತೆಯಲ್ಲಿದ್ದವರನ್ನೆಲ್ಲ ದೂರವಿರುವಂತೆ ಸೂಚನೆ ನೀಡಿದ ರಾಜೇಂದ್ರ ಕಣ್ಣು ಮಿಟುಕಿಸುವುದರಲ್ಲಿ ಟಕ್ ಎಂದು ಹಗ್ಗ ಬಿಚ್ಚಿದರು. ಹಗ್ಗದ ಕಟ್ಟು ಬಿಚ್ಚುತ್ತಲೇ, ದೊಡ್ಡದಾಗಿ ಬಾಯ್ದೆರೆದು ಮೊಸಳೆ ನದಿಯಲ್ಲಿ ಇಳಿದು ಮಾಯವಾಗಿ ಹೋಯಿತು.

*****
 


ಮೊಸಳೆ ಬಾಯಿಗೆ ಹಗ್ಗ ಬಿಗಿಯುತ್ತಿರುವ ಡಾ.ರಾಜೇಂದ್ರ

ಮೊಸಳೆ ರಕ್ಷಣೆ ಕಾರ್ಯಾಚರಣೆಯಲ್ಲಿ ರಾಜೇಂದ್ರ ತುಂಬಾ ಎಕ್ಸ್‌ಪರ್ಟ್‌. ಈವರೆಗೆ ಅವರು 11 ಮೊಸಳೆಗಳನ್ನು ಹಿಡಿದಿದ್ದಾರೆ. ಮೊದಲ ಮೊಸಳೆ ಹಿಡಿದಿದ್ದು ಹೊಸಪೇಟೆಯಲ್ಲಿ. ಇವರು ಮೊಸಳೆ ಹಿಡಿಯುವ ಸಾಹಸಕ್ಕೆ ಮೆಚ್ಚಿರುವ ಜನ ಇವರನ್ನು ‘ಶಿರಸಿಯ ಸ್ಟೀವ್‌ ಇರ್ವಿನ್‌’ ಎಂಬ ಅಡ್ಡ ಹೆಸರಿನಿಂದ ಕರೆಯುತ್ತಾರೆ.

ರಾಜೇಂದ್ರ ಅವರಿಗೆ ಪ್ರಾಣಿ–ಪಕ್ಷಿಗಳೆಂದರೆ ಮೊದಲಿನಿಂದಲೂ ಜೀವ. ಅವುಗಳನ್ನು ಉಪಚರಿಸುವುದು, ತಳಿ ಸಂವರ್ಧನೆ ಮಾಡುವುದು ಅವರಿಗೆ ಹವ್ಯಾಸವಾಗಿತ್ತು. ತೀರಾ ದಯನೀಯ ಪರಿಸ್ಥಿತಿಯಲ್ಲಿ ಅಂದರೆ ಸಾಯುವ ಹಂತದಲ್ಲಿರುವ ಅದೆಷ್ಟೋ ಪ್ರಾಣಿಗಳನ್ನು ತಂದು ಮನೆಯಲ್ಲೇ ಉಪಚರಿಸಿ ಕಾಡಿಗೆ ಬಿಟ್ಟಿದ್ದಾರೆ. ತನ್ನ ದುಡಿಮೆಯ ಎಲ್ಲ ಹಣವನ್ನು ಪ್ರಾಣಿ–ಪಕ್ಷಿಗಳಿಗಾಗಿಯೇ ಮೀಸಲಿಟ್ಟ ಇವರು ಶ್ರೀ ಪದ್ಮಾ ಸೇವಾ ಟ್ರಸ್ಟ್‌ನ ಪ್ರಾಣಿ ದಯಾ ಸಂಘವನ್ನು ಹುಟ್ಟು ಹಾಕಿದ್ದಾರೆ. ಶಿರಸಿಯ ಬನವಾಸಿ ರಸ್ತೆಯಲ್ಲಿ ಅರಣ್ಯ ಕಾಲೇಜಿನ ಸಮೀಪ ಪ್ರಾಣಿ ದಯಾ ಸಂಘದಡಿ ಪ್ರಾಣಿ–ಪಕ್ಷಿಗಳ ಪುನರ್ವಸತಿ ಕೇಂದ್ರವಿದೆ. ಈವರೆಗೆ 1000ಕ್ಕೂ ಹೆಚ್ಚು ಬಿಡಾಡಿ ದನಗಳಿಗೆ ಉಚಿತ ಚಿಕಿತ್ಸೆ ನೀಡಿದ್ದಾರೆ. ಅಪಘಾತಕ್ಕೊಳಗಾಗಿ ಗಾಯಗೊಂಡ ಅದೆಷ್ಟೊ ಕೋಗಿಲೆ, ಕಾಗೆ, ಮಂಗಟ್ಟೆ, ಗೂಬೆ, ಹದ್ದಿನಂತಹ 150ಕ್ಕೂ ಹೆಚ್ಚು ಕಾಡು ಪಕ್ಷಿ, ಪ್ರಾಣಿಗಳನ್ನು ಉಪಚಾರ ಮಾಡಿ ರಕ್ಷಿಸಿದ್ದಾರೆ. ಅವು ಸಂಪೂರ್ಣ ಚೇತರಿಸಿಕೊಳ್ಳುವವರೆಗೂ ತಮ್ಮ ಪ್ರಾಣಿ–ಪಕ್ಷಿಗಳ ಪುನರ್ವಸತಿ ಕೇಂದ್ರದಲ್ಲಿ ಇಟ್ಟು, ಅಗತ್ಯ ಔಷಧೋಪಚಾರ, ಆಹಾರವನ್ನು ಸ್ವಂತ ಖರ್ಚಿನಲ್ಲಿ ನಿಭಾಯಿಸುತ್ತಿದ್ದಾರೆ.

ಇಂದು ಒಂದು ಹವ್ಯಾಸವಾದರೆ, ಮತ್ತೊಂದು ವಿದೇಶಿ ಪ್ರಾಣಿ, ಪಕ್ಷಿಗಳನ್ನು ಸಾಕುವ ಖಯಾಲಿ. ಚೀನಾ ಕುರಿಗಳು (ಚೈನೀಸ್‌ ಜಿಂಗೋಟ್‌), ಅಮೆಜಾನ್‌ನ ಇಗುವಾನಾ, ಆಫ್ರಿಕನ್‌ ಬಾಲ್‌ ಪ್ಯಾಂಥರ್ಸ್‌ (ಆಫ್ರಿಕಾದ ಹೆಬ್ಬಾವು), ಬಗೆ
ಬಗೆಯ ವಿದೇಶಿ ಪಕ್ಷಿಗಳು ಇವರ ಪ್ರಾಣಿ ದಯಾ ಸಂಘದ ಕೇಂದ್ರದಲ್ಲಿವೆ.

ಚೀನಾ ಕುರಿಗಳ ಹಿಂದಿನ ಕಥೆ ಕುತೂಹಲಕರವಾಗಿದೆ. ಹೈದರಾಬಾದ್ ಒಂದು ರಾಯಲ್‌ ಕುಟುಂಬ ಈ ಚೀನಾದ ಮೂರು ಕುರಿಗಳನ್ನು ಸಾಕಿಕೊಂಡಿದ್ದರು. ಆದರೆ ಅವುಗಳಿಗೆ ಸೂಕ್ತ ಆರೈಕೆ ಸಿಗದೆ ಆರೋಗ್ಯದಲ್ಲಿ ಏರುಪೇರಾಗಿ ಅವು ನಿತ್ರಾಣಗೊಂಡಿದ್ದವು. ಸಾಕಿದವರು ಕಸಾಯಿಖಾನೆಗೆ ನೀಡಲು ಮುಂದಾದರು. ಅದನ್ನು ತಿಳಿದ ರಾಜೇಂದ್ರ, ಸೀದಾ ಹೈದರಾಬಾದ್‌ಗೆ ಹೋಗಿ ಆ ಮೂರು ಕುರಿಗಳನ್ನು ಲಕ್ಷ ರೂಪಾಯಿಗೆ ಖರೀದಿಸಿ ರೈಲಿನ ಮೂಲಕ ಹುಬ್ಬಳ್ಳಿಗೆ ತಂದು ಅಲ್ಲಿಂದ ಶಿರಸಿಗೆ ಒಯ್ದಿದ್ದಾರೆ. ಉಪಚಾರದಿಂದ ಚೇತರಿಸಿ
ಕೊಂಡ ಈ ಕುರಿಗಳೀಗ ದಷ್ಟಪುಷ್ಟವಾಗಿ ಬೆಳೆದಿದ್ದು, ಕೇಂದ್ರದಲ್ಲಿ ಆಕರ್ಷಣೆಯ ಕೇಂದ್ರಬಿಂದುಗಳು. ಸಂತಾನವೂ ವೃದ್ಧಿಗೊಂಡಿದೆ. ಮೂರಿದ್ದ ಅವು ನಾಲ್ಕಾಗಿವೆ.

ಅವುಗಳಿಗೆಲ್ಲ ಆಹಾರ, ಲಸಿಕೆಗಳು ದುಬಾರಿ. ಆದರೂ ಆ ಎಲ್ಲವನ್ನೂ ನಿಭಾಯಿಸಲು ತಮ್ಮ ದುಡಿಮೆಯ ಹಣ ಖರ್ಚು ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ‘ಅಮೇಜಿಂಗ್‌ ಪೆಟ್‌ ಪ್ಲಾನೆಟ್‌’ ಎಂಬ ಪ್ರಾಣಿಗಳ ಪಾರ್ಕ್‌ ಮಾಡುವ ಯೋಜನೆಯಿದೆ. ಶುಲ್ಕ ನಿಗದಿಪಡಿಸಿ, ‍ಪಾರ್ಕ್ ಅನ್ನು ಸಾರ್ವಜನಿಕರ ವೀಕ್ಷಣೆಗೆ ಅವಕಾಶ ನೀಡುವ ಯೋಚನೆ ಇದೆ. ಪ್ರವೇಶ ಶುಲ್ಕ ನಿಗದಿಪಡಿಸಿ ಅದರಿಂದ ಸಂಗ್ರಹವಾಗುವ ಹಣವನ್ನು ಪ್ರಾಣಿ–ಪಕ್ಷಿಗಳಿಗಾಗಿಯೇ ಬಳಸುವ ವಿಚಾರ ಅವರದು. 

ಮೊದಲಿನಿಂದಲೂ ಪ್ರಾಣಿ–ಪಕ್ಷಿಗಳೆಂದರೆ ಅಚ್ಚುಮೆಚ್ಚು ‘ಅವುಗಳಿಗಾಗಲೇ ನನ್ನ ಜೀವನ, ನನ್ನ ದುಡಿಮೆ’ ಎನ್ನುತ್ತಾರೆ ರಾಜೇಂದ್ರ. ಈ ವಿಶೇಷ ವೃತ್ತಿಪರತೆಗೆ ಅವರ ಕುಟುಂಬದವರು ಪ್ರೋತ್ಸಾಹ ನೀಡುತ್ತಿದ್ದಾರೆ. ಆದ್ದರಿಂದಲೇ ಪ್ರಾಣಿ ಪಕ್ಷಿಗಳ ಮೇಲೆ ರಾಜೇಂದ್ರ ಇಟ್ಟಿದ್ದ ಕಾಳಜಿ, ಪ್ರೀತಿ ವೃತ್ತಿಪರತೆಯಾಗಿ ಬದಲಾಗಲು ನೆರವಾಗಿದೆ. 

‘ಧೈರ್ಯಕ್ಕಿಂತ ಟೆಕ್ನಿಕ್ ಮುಖ್ಯ’
‘ಮೊಸಳೆ ಹಿಡಿಯಲು ಧೈರ್ಯಕ್ಕಿಂತ ಟೆಕ್ನಿಕ್‌ ಮುಖ್ಯ. ಪ್ರತಿ ಪ್ರಾಣಿಗೂ ಅದರದ್ದೇ ಆದ ಸೈಕಾಲಜಿ ಇದೆ. ಅದನ್ನು ಅರಿತರೆ ಕಾರ್ಯಾಚರಣೆ ಸುಲಭ. ನಾನು ಕೂಡ ಅದನ್ನೆಲ್ಲ ಅಧ್ಯಯನ ಮಾಡಿಟ್ಟುಕೊಂಡಿದ್ದರಿಂದ ಆರಾಮವಾಗಿ ಮೊಸಳೆ ಹಿಡಿಯಲು ಸಾಧ್ಯವಾಯಿತು. ಆ ಮೊಸಳೆಗಾಗಿ ಕಾದು ಕುಳಿತಿದ್ದೇ ಹೆಚ್ಚು’ ಎನ್ನುತ್ತಾ ಮೊಸಳೆ ಕಾರ್ಯಾಚರಣೆಯಲ್ಲಿನ ಮೊದಲ ಅನುಭವವನ್ನು ರಾಜೇಂದ್ರ ಹಂಚಿಕೊಂಡರು.

‘ಇಲ್ಲಿಯವರೆಗೆ ಹಿಡಿದ ಮೊಸಳೆಗಳಲ್ಲಿ ಬನವಾಸಿ ವಲಯಕ್ಕೆ (ರಂಗಾಪುರ) ಬಂದಿದ್ದ ಎಂಟೂವರೆ ಅಡಿ ಉದ್ದದ ಮೊಸಳೆ ಸ್ವಲ್ಪ ರಿಸ್ಕ್‌ ಎನಿಸಿತು. ಹಿಡಿಯುವಾಗ ಬೆವರಿಳಿಸಿದ್ದು ಸುಳ್ಳಲ್ಲ. ನಂತರ ಕಾಳಿ ನದಿ ಪಾತ್ರಕ್ಕೆ ಬಿಡುವಾಗ ಜೀವಕ್ಕೇ ಅಪಾಯವಿತ್ತು’ – ಕಾರ್ಯಾಚರಣೆಯ ರಿಸ್ಕ್‌ ಅನ್ನೂ ರಾಜೇಂದ್ರ ಉಲ್ಲೇಖಿಸುತ್ತಾರೆ.

‘ನದಿ ಪ್ರದೇಶ ನನಗೆ ಹೊಸತು. ಅಲ್ಲಿನ ಆಳ, ಅಪಾಯ ಏನೂ ತಿಳಿದಿರಲಿಲ್ಲ. ಅದರಲ್ಲೂ ದಡ ಇಳಿಜಾರಾಗಿದ್ದಿದ್ದರಿಂದ ಕೊನೆ ಕ್ಷಣದಲ್ಲಿ ಅಪಾಯ ಅರಿವಿಗೆ ಬಂದಿತ್ತು. ಆದರೆ ಅದರ ಬಾಯಿಗೆ ಬಿಗಿದಿದ್ದ ಕೊನೆಯ ಹಗ್ಗ ಬಿಚ್ಚದೆ ಹಾಗೆ ಬಿಡುವ ಹಾಗಿರಲಿಲ್ಲ. ಯೋಚಿಸಲು ಸಮಯವೂ ಇರಲಿಲ್ಲ. ಪರಿಸ್ಥಿತಿ ಹೀಗಿರುವಾಗ ಇರುವ ಧೈರ್ಯವನ್ನು ಒಂದು ಮಾಡಿ ಹಗ್ಗ ಎಳೆದು ಬಿಟ್ಟೆ. ಅದು ನೀರಿಗಿಳಿಯುವ ಧಾವಂತದಲ್ಲಿ ನನ್ನನ್ನೂ ಎಳೆದೊಯ್ದಿದ್ದರೆ ನಾನು ನೀರುಪಾಲಾಗುತ್ತಿದ್ದೆ. ಅದೃಷ್ಟವಶಾತ್‌ ಹಾಗಾಗಲಿಲ್ಲ’ ಎನ್ನುತ್ತಾ ಮತ್ತಷ್ಟು ಅಪಾಯದ ಸನ್ನಿವೇಶಗಳನ್ನು ರಾಜೇಂದ್ರ ಹಂಚಿಕೊಂಡರು.

‘ನಾಗ’ ಡಾಕ್ಯುಮಂಟರಿ
ನಾಗರ ಹಾವುಗಳ ಬಗ್ಗೆ ಸುದೀರ್ಘ ಐದು ವರ್ಷಗಳ ಅಧ್ಯಯನ ನಡೆಸಿರುವ ಡಾ. ರಾಜೇಂದ್ರ ಸಿರ್ಸಿಕರ್‌, ಒಂದೂವರೆ ತಾಸಿನ ‘Sirsi real hero ‘‘NAGA’’ ಡಾಕ್ಯುಮೆಂಟರಿ (ಸಾಕ್ಷ್ಯಚಿತ್ರ)ವೊಂದನ್ನು ಕನ್ನಡದಲ್ಲಿ ಸಿದ್ಧಪಡಿಸಿದ್ದಾರೆ. ಇದಕ್ಕಾಗಿ ಅವರು ಮೂರು ಲಕ್ಷ ರೂಪಾಯಿಯನ್ನು ವಿನಿಯೋಗಿಸಿದ್ದಾರೆ. ನಾಗರ ಹಾವುಗಳ ಬಗೆಗಿರುವ ಮೌಢ್ಯತೆ, ಧಾರ್ಮಿಕ ಭಾವ, ವಾಸ್ತವಗಳ ನೆಲೆಗಳಲ್ಲಿ ಸಿದ್ಧಪಡಿಸಲಾದ ಸಾಕ್ಷ್ಯಚಿತ್ರದಲ್ಲಿ ಹಾವುಗಳ ಬಗೆಗೆ ಫಾರೆಸ್ಟ್‌ ಆ್ಯಕ್ಟ್‌ ಏನಿದೆ ಎಂಬ ಮಾಹಿತಿಯೂ ಇದೆ. ಯೂಟ್ಯೂಬ್‌ನಲ್ಲಿ ಈ ಡಾಕ್ಯುಮೆಂಟರಿಯನ್ನು ವೀಕ್ಷಿಸಬಹುದು.

*
ಮೊಸಳೆಯಷ್ಟೇ ಅಲ್ಲ ಎಲ್ಲಾ ಪ್ರಾಣಿಗಳ ಬಗ್ಗೆ ರಾಜೇಂದ್ರ ಅಳವಾಗಿ ಅಧ್ಯಯನ ಮಾಡಿದ್ದಾರೆ. ಪ್ರಾಣಿಗಳನ್ನು ಹಿಡಿಯುವ ವಿಷಯದಲ್ಲಿ ಬಹಳ ಎಚ್ಚರಿಕೆ ತೆಗೆದುಕೊಳ್ಳುತ್ತಾರೆ. ಮೊಸಳೆಯನ್ನು ಹಿಡಿದು, ಸುರಕ್ಷಿತ ಜಾಗಕ್ಕೆ ಬಿಡುವವರೆಗೂ ಅವರೇ ನೋಡಿಕೊಳ್ಳುವುದು ಗ್ರೇಟ್‌ ಎನ್ನಿಸುತ್ತದೆ.
–ವಿನಯ್‌ ಭಟ್‌, ಬನವಾಸಿ ವಲಯ ಅರಣ್ಯಾಧಿಕಾರಿ  

ಕೊಂಡಿ: https://www.youtube.com/watch?v=OnDqJZ0hIew

ಪ್ರಾಣಿ ಪ್ರೀತಿಯ ರಾಜೇಂದ್ರ ಸಿರ್ಸಿಕರ್‌ ಅವರೊಂದಿಗೆ ಮಾತನಾಡಲು ಸಂಪರ್ಕ ಸಂಖ್ಯೆ : 9945797334 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !