ಮೆಡಿಕಲ್ ಸೀಟಿಗಾಗಿ ಕೋಟಿ ಕಳೆದುಕೊಂಡರು!

7
ಮಧ್ಯವರ್ತಿಗಳಿಂದ ಮುಂದುವರಿದ ವಂಚನೆ l ಮತ್ತೆ ಮೂರು ಪ್ರಕರಣ ದಾಖಲು

ಮೆಡಿಕಲ್ ಸೀಟಿಗಾಗಿ ಕೋಟಿ ಕಳೆದುಕೊಂಡರು!

Published:
Updated:

ಬೆಂಗಳೂರು: ಪ್ರತಿಷ್ಠಿತ ಕಾಲೇಜುಗಳಲ್ಲಿ ವೈದ್ಯಕೀಯ ಸೀಟು ಗಿಟ್ಟಿಸಿಕೊಳ್ಳಲು ಮಧ್ಯವರ್ತಿಗಳ ಮೊರೆ ಹೋಗಿ ಕೇರಳದ ಉದ್ಯಮಿಯೊಬ್ಬರು ₹ 1.05 ಕೋಟಿ ಕಳೆದುಕೊಂಡಿದ್ದರೆ, ಪುಣೆಯ ವ್ಯಾಪಾರಿ ₹ 30 ಲಕ್ಷ ಹಾಗೂ ರಾಮನಗರದ ರೈತ ₹ 34 ಲಕ್ಷ ಕೊಟ್ಟು ಕೈಸುಟ್ಟುಕೊಂಡಿದ್ದಾರೆ.

‌ಮೂರು ವರ್ಷಗಳ ಹಿಂದೆ ಮಣಿಪುರದ ವಿದ್ಯಾರ್ಥಿಗಳಿಗೆ ಇದೇ ರೀತಿ ವಂಚಿಸಿ ಸಿಸಿಬಿ ಬಲೆಗೆ ಬಿದ್ದಿದ್ದ ವಿಜಯ್‌ಶಂಕರ್, ಬಿಡುಗಡೆ ಬಳಿಕ ಮತ್ತೆ ದಂಧೆ ಪ್ರಾರಂಭಿಸಿರುವುದು ತನಿಖೆಯಿಂದ ಗೊತ್ತಾಗಿದೆ. ಈಗ ಕಚೇರಿ ಬಂದ್ ಮಾಡಿ ತಲೆಮರೆಸಿಕೊಂಡಿರುವ ಆತನ ಬಂಧನಕ್ಕೆ ಹಲಸೂರು ಪೊಲೀಸರು ಬಲೆ ಬೀಸಿದ್ದಾರೆ.

ಕೇರಳದ ಉದ್ಯಮಿ: ಎಂ.ಜಿ.ರಸ್ತೆಯ ಮಣಿಪಾಲ್ ಸೆಂಟರ್‌ನಲ್ಲಿ ಕಚೇರಿ ಹೊಂದಿರುವ ವಿಜಯ್‌ಶಂಕರ್ ಹಾಗೂ ಹೃಷಲ್ ಎಂಬುವರು, ತಮ್ಮ ಮಗನಿಗೆ ದಾವಣಗೆರೆಯ ‘ಜೆ.ಜೆ.ಮೆಡಿಕಲ್ ಕಾಲೇಜ್‌’ನಲ್ಲಿ ರೆಡಿಯಾಲಜಿ ಕೋರ್ಸ್‌ಗೆ ಪ್ರವೇಶ ಕೊಡಿಸುವುದಾಗಿ ನಂಬಿಸಿ ₹ 1.05 ಕೋಟಿ ವಂಚಿಸಿರುವುದಾಗಿ ಕೇರಳದ ಕುಂಜೀ ಕೋಯ ಎಂಬುವರು ಹಲಸೂರು ಠಾಣೆಗೆ ದೂರು ಕೊಟ್ಟಿದ್ದಾರೆ.

‘ಮಗನಿಗೆ ಕರ್ನಾಟಕದಲ್ಲೇ ಉನ್ನತ ವ್ಯಾಸಂಗ ಮಾಡಿಸಬೇಕೆಂಬ ಆಸೆ ಇತ್ತು. ಆ ಕೆಲಸದ ಮೇಲೆ ಓಡಾಡುತ್ತಿರುವಾಗ ಸ್ನೇಹಿತರೊಬ್ಬರ ಮೂಲಕ ವಿಜಯ್‌ ಶಂಕರ್‌ ಹಾಗೂ ಹೃಷಾಲ್ ಅವರ ಪರಿಚಯವಾಯಿತು. ರಾಜ್ಯದ ಎಲ್ಲ ಕಾಲೇಜುಗಳ ಮುಖ್ಯಸ್ಥರ ಜತೆಗೆ ತಾವು ಉತ್ತಮ ಸ್ನೇಹ ಹೊಂದಿರುವುದಾಗಿ ಹೇಳಿಕೊಂಡ ಅವರು, ₹ 2 ಕೋಟಿ ಕೊಟ್ಟರೆ ಜೆ.ಜೆ ಕಾಲೇಜಿನಲ್ಲಿ ಸೀಟು ಕೊಡಿಸುವುದಾಗಿ ಹೇಳಿದ್ದರು. ಅವರ ಕಚೇರಿಯಲ್ಲೇ ಈ ಮಾತುಕತೆ ನಡೆದಿತ್ತು’ ಎಂದು ಹೇಳಿದ್ದಾರೆ.

‘ಕೆಲ ದಿನಗಳ ಬಳಿಕ ಕರೆ ಮಾಡಿದ ವಿಜಯ್‌ಶಂಕರ್, ‘ನಿಮ್ಮ ಸೀಟು ಖಚಿತವಾಗಿದೆ. ಹಣ ತಲುಪಿಸುವ ವ್ಯವಸ್ಥೆ ಮಾಡಿ’ ಎಂದರು. ಆಗ ಅವರ ಕಚೇರಿಗೆ ತೆರಳಿ ₹1.05 ಕೋಟಿ ಕೊಟ್ಟು, ಕಾಲೇಜು ಪ್ರಾರಂಭವಾದ ಬಳಿಕ ಉಳಿದ ಹಣ ನೀಡು
ವುದಾಗಿ ಹೇಳಿದ್ದೆ.’

‘ಸೀಟು ಕೊಟ್ಟಿದ್ದಕ್ಕೆ ಧನ್ಯವಾದ ಹೇಳಲೆಂದು ಜೆ.ಜೆ.ಕಾಲೇಜಿನ ಮುಖ್ಯಸ್ಥರನ್ನು ಭೇಟಿಯಾದಾಗ, ‘ವಿಜಯ್‌ ಶಂಕರ್ ಯಾರೆಂದು ನಮಗೆ ಗೊತ್ತೇ ಇಲ್ಲ. ಆತನ ಹೆಸರಿನಲ್ಲಿ ನಾವು ಯಾರಿಗೂ ಸೀಟನ್ನು ಹಂಚಿಕೆ ಮಾಡಿಲ್ಲ’ ಎಂದು ಹೇಳಿದರು. ಇದ
ರಿಂದ ಗಾಬರಿಯಾಗಿ ಕೂಡಲೇ ಆತನಿಗೆ ಕರೆ ಮಾಡಿದೆ. ಆದರೆ, ಮೊಬೈಲ್ ಸ್ವಿಚ್ಡ್ ಆಫ್ ಆಗಿತ್ತು.’

‘ಕಚೇರಿಗೆ ತೆರಳಿದಾಗ ಸಿಕ್ಕ ಆತ, ‘ಆ ಕಾಲೇಜಿನ ಆಡಳಿತ ಮಂಡಳಿಗೆ ನನ್ನ ಅಸಲಿ ಹೆಸರು ಗೊತ್ತಿಲ್ಲ. ನೀವ್ಯಾಕೆ ಅಲ್ಲಿಗೆ ಹೋಗಿದ್ದಿರಿ. ಹೋಗಲಿ ಬಿಡಿ, ಬೇರೆ ಕಾಲೇಜಿನಲ್ಲಿ ಸೀಟು ಕೊಡಿಸುತ್ತೇನೆ’ ಎಂದು ನಂಬಿಸಿದ್ದ. ಆ ನಂತರ ಆತ ಸಂಪರ್ಕಕ್ಕೇ ಸಿಗಲೇ ಇಲ್ಲ. ಈಗ ಕಚೇರಿ ಕೂಡ ಬಂದ್ ಆಗಿದೆ’ ಎಂದು ಕುಂಜೀ ಕೋಯ ದೂರಿನಲ್ಲಿ ವಿವರಿಸಿದ್ದಾರೆ.

ಪುಣೆ ವ್ಯಾಪಾರಿ: ಮೈಸೂರು ರಸ್ತೆಯ ಕಾಲೇಜುವೊಂದರಲ್ಲಿ ಸೀಟು ಕೊಡಿಸುವುದಾಗಿ ₹30 ಲಕ್ಷ ಪಡೆದ ಟಿ.ಸಿ.ಪುರುಷೋತ್ತಮ್, ಈಗ ಹಣ ಮರಳಿಸದೆ ಸತಾಯಿಸುತ್ತಿದ್ದಾರೆ ಎಂದು ಪುಣೆಯ ವಿನೋದ್ ಜಿ. ಮೆಹರ್ ಅ.6ರಂದು ಬಸವೇಶ್ವರನಗರ ಠಾಣೆಗೆ ದೂರು ಕೊಟ್ಟಿದ್ದಾರೆ. ‘ನಾನು ಸೀಟಿಗಾಗಿ ವಿವಿಧ ಕಾಲೇಜುಗಳನ್ನು ಸುತ್ತುತ್ತಿರುವ ವಿಷಯ ತಿಳಿದು ಕರೆ ಮಾಡಿದ್ದ ಪುರುಷೋತ್ತಮ್, ‘₹ 30 ಲಕ್ಷ ಕೊಟ್ಟರೆ ನೀವು ಕೇಳಿದ ಕಾಲೇಜಿನಲ್ಲಿ ಸೀಟು ಕೊಡಿಸುತ್ತೇನೆ. ತಕ್ಷಣ ಬಸವೇಶ್ವರನಗರದ ಪವಿತ್ರಾ ಪ್ಯಾರಡೈಸ್ ಹೋಟೆಲ್‌ಗೆ ಬನ್ನಿ’ ಎಂದರು. ಅಂತೆಯೇ ಅಲ್ಲಿಗೆ ಹೋಗಿ ಹಣ ತಲುಪಿಸಿದ್ದೆ. ಆ ನಂತರ ಸಂಪರ್ಕಕ್ಕೇ ಸಿಗುತ್ತಿಲ್ಲ’ ಎಂದು ದೂರಿದ್ದಾರೆ.

ರಾಮನಗರದ ರೈತ: ‘ನನ್ನ ಸ್ನೇಹಿತನ ಮಗನಿಗೆ ಕೆಂಪೇಗೌಡ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಕಿಮ್ಸ್‌) ಸೀಟು ಬೇಕಿತ್ತು. ಹೀಗಾಗಿ, ಪರಿಚಿತರ ಮೂಲಕ ಮಹಾಲಿಂಗೇಗೌಡ ಎಂಬ ಏಜೆಂಟ್‌ನನ್ನು ಎಂ.ಜಿ.ರಸ್ತೆಯ ಕಾಫಿ ಡೇ ಹತ್ತಿರ ಭೇಟಿಯಾದೆವು. ₹ 40 ಲಕ್ಷ ಕೇಳಿದ್ದ ಆತ, ಕೊನೆಗೆ ₹ 34 ಲಕ್ಷಕ್ಕೆ ಒಪ್ಪಿಕೊಂಡಿದ್ದ’ ಎಂದು ರಾಮನಗರದ ರೈತರೊಬ್ಬರು ಬುಧವಾರ (ಅ.10) ಕಬ್ಬನ್‌ಪಾರ್ಕ್‌ ಠಾಣೆಗೆ ಕೊಟ್ಟಿರುವ ದೂರಿನಲ್ಲಿ ವಿವರಿಸಿದ್ದಾರೆ.

‘ನಾನು ಸಾಲ ಕೊಟ್ಟಿದ್ದ ಹಣವನ್ನೇ ಸ್ನೇಹಿತ ಆತನಿಗೆ ಕೊಟ್ಟಿದ್ದ. ಪ್ರವೇಶ ಪ್ರಕ್ರಿಯೆ ಮುಗಿದು ತರಗತಿಗಳು ಪ್ರಾರಂಭ
ವಾದರೂ, ನಮ್ಮ ಸೀಟಿನ ವಿಷಯದಲ್ಲಿ ಯಾವುದೇ ಪ್ರಗತಿ ಕಾಣಲಿಲ್ಲ. ಹಣ ವಾಪಸ್ ಕೇಳಿದಾಗ ಆತ ಚೆಕ್‌ ಕೊಟ್ಟ. ಅದೂ ಬೌನ್ಸ್ ಆಗಿದೆ. ಈಗ ಮಹಾಲಿಂಗೇಗೌಡ ಎಲ್ಲಿದ್ದಾನೋ ಗೊತ್ತಿಲ್ಲ. ದಯವಿಟ್ಟು ನಮ್ಮ ಹಣ ವಾಪಸ್ ಕೊಡಿಸಿ’ ಎಂದು ಅವರು ಮನವಿ ಮಾಡಿದ್ದಾರೆ.

‘ಮಧ್ಯವರ್ತಿಗಳ ಗೀಳು ಬಿಡಿ’

‘ವಿವಿಧ ಕೋರ್ಸ್‌ಗಳ ಸೀಟು ಕೊಡಿಸುವುದಾಗಿ ವಂಚನೆ ಮಾಡುವ ದೊಡ್ಡಜಾಲವೇ ನಗರದಲ್ಲಿದೆ. ಈ ಬಗ್ಗೆ ವಿದ್ಯಾರ್ಥಿಗಳು ಹಾಗೂ ಪೋಷಕರು ಎಚ್ಚರ ವಹಿಸಬೇಕು. ಮಧ್ಯವರ್ತಿಗಳ ಮೂಲಕ ಸೀಟು ಪಡೆಯುವ ಪ್ರಯತ್ನ ಬಿಟ್ಟು, ನೇರವಾಗಿ ಕಾಲೇಜು ಆಡಳಿತ ಮಂಡಳಿಯನ್ನೇ ಸಂಪರ್ಕಿಸಬೇಕು’ ಎಂದು ಪೊಲೀಸರು ಸಲಹೆ ನೀಡಿದ್ದಾರೆ.

ವರ್ಷದಲ್ಲಿ 49 ಪ್ರಕರಣ!

ವೈದ್ಯಕೀಯ ಸೀಟು ವಂಚನೆ ಸಂಬಂಧ ರಾಜಧಾನಿಯ ವಿವಿಧ ಠಾಣೆಗಳಲ್ಲಿ ಈ ವರ್ಷ 49 ಪ‍್ರಕರಣಗಳು ದಾಖಲಾಗಿವೆ. ಆ ಪೈಕಿ 29 ಪ್ರಕರಣಗಳನ್ನು ಪೊಲೀಸರು ಭೇದಿಸಿ, ಆರೋಪಿಗಳನ್ನು ಜೈಲಿಗೂ ಕಳುಹಿಸಿದ್ದಾರೆ. ಆದರೆ, ವಂಚನೆಗೆ ಒಳಗಾದ ಬಹುತೇಕರಿಗೆ ತಮ್ಮ ಹಣ ಇನ್ನೂ ಕೈಸೇರಿಲ್ಲ.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 1

  Sad
 • 0

  Frustrated
 • 2

  Angry

Comments:

0 comments

Write the first review for this !