ದಾರಿ ಯಾವುದಯ್ಯಾ?

ಮಂಗಳವಾರ, ಏಪ್ರಿಲ್ 23, 2019
31 °C
ನೀತಿ ಕಥೆ

ದಾರಿ ಯಾವುದಯ್ಯಾ?

Published:
Updated:
Prajavani

ನರಿ ಮತ್ತು ಬೆಕ್ಕು ಮಾತುಕತೆಗೆ ತೊಡಗಿದ್ದವು. ‘ನಾನು ಅಪಾಯದಲ್ಲಿ ಸಿಲುಕಿದಾಗ ತಪ್ಪಿಸಿಕೊಳ್ಳಲು ನನ್ನಲ್ಲಿ ನೂರು ದಾರಿಗಳುಂಟು’  – ಹೀಗೆಂದು ನರಿ ಜಂಬದಿಂದ ಹೇಳುತ್ತಿತ್ತು. ‘ಅಯ್ಯೋ! ನನಗೆ ಅಷ್ಟೆಲ್ಲ ಬುದ್ಧಿ ಇಲ್ಲಪ್ಪ. ನನಗೆ ಗೊತ್ತಿರುವುದೆಲ್ಲ ಒಂದೇ ದಾರಿ’ ಎಂದು ಹೇಳಿತು ಬೆಕ್ಕು.

ಅಷ್ಟರಲ್ಲಿ ಬೇಟೆನಾಯಿಗಳ ಗುಂಪೊಂದು ಅತ್ತ ಕಡೆಗೇ ಬರುತ್ತಿರುವಂತೆ ಗದ್ದಲ ಉಂಟಾಯಿತು. ಅಪಾಯವನ್ನು ಗ್ರಹಿಸಿದ ಬೆಕ್ಕು ಹತ್ತಿರದಲ್ಲಿಯೇ ಇದ್ದ ಮರಕ್ಕೆ ಕೂಡಲೇ ಹಾರಿತು. ‘ನೊಡಪ್ಪ, ನನಗೆ ಗೊತ್ತಿರುವುದೆಲ್ಲ ಇದೊಂದೇ, ಅಪಾಯ ಎದುರಾದಾಗ ಮರ ಹತ್ತಿ ಅವಿತುಕೊಂಡು ಪ್ರಾಣ ಉಳಿಸಿಕೊಳ್ಳುವುದು’ ಎನ್ನುತ್ತ ಅದು ಮರದಲ್ಲಿ ಅಡಗಿಕೊಂಡಿತು.

ಆದರೆ ನರಿಗೆ ಅಷ್ಟು ಸುಲಭದ ಆಯ್ಕೆ ಸಾಧ್ಯವಾಗಲಿಲ್ಲ. ಅಲ್ಲಿಂದ ತಪ್ಪಿಸಿಕೊಳ್ಳಲು ‘ಆ ದಾರಿ ಸರಿಯೋ, ಈ ದಾರಿ ಸರಿಯೋ’, ‘ಹೀಗೆ ಮಾಡಲೋ, ಹಾಗೆ ಮಾಡಲೋ’ – ಹತ್ತಾರು ದಾರಿಗಳ ಬಗ್ಗೆ ಯೋಚಿಸತೊಡಗಿತೇ ವಿನಾ ಯಾವುದೋ ಒಂದು ದಾರಿಯನ್ನು ಆರಿಸಿಕೊಳ್ಳಲು ಅದಕ್ಕೆ ಸಾಧ್ಯವೇ ಆಗಲಿಲ್ಲ.

ಕೊನೆಗೂ ನರಿ ಅಪಾಯದಿಂದ ಪಾರಾಗಲು ಆಗಲಿಲ್ಲ.

* * *

ತತ್‌ಕ್ಷಣಕ್ಕೆ ಸಿಗಲಿ ಎಂದು ಮನೆಯ ನಾಲ್ಕು ದಿಕ್ಕುಗಳಲ್ಲಿ ಹತ್ತು ಬಾಚಣಿಗೆಗಳನ್ನು ಇಟ್ಟಿರುತ್ತೇವೆ. ಆದರೆ ಸಮಯಕ್ಕೆ ಮಾತ್ರ ಒಂದೂ ಸಿಗದೆ ಕೊನೆಗೆ ತಲೆಗೂದಲನ್ನು ಕೈಯಿಂದಲೇ ಸರಿ ಮಾಡಿಕೊಳ್ಳುತ್ತೇವೆ!

ನಿತ್ಯವೂ ಇಂಥ ಹಲವು ಪ್ರಸಂಗಗಳು ಎದುರಾಗುತ್ತಲೇ ಇರುತ್ತೇವೆ.

ನಮ್ಮಲ್ಲಿ ವಸ್ತುಗಳು ಹೆಚ್ಚಿದ್ದಷ್ಟು ಸುಖ ಹೆಚ್ಚು ಎಂದುಕೊಳ್ಳುತ್ತೇವೆ. ಆದರೆ ಹೆಚ್ಚು ಎಂಬ ಕಾರಣಕ್ಕಾಗಿಯೇ ಅವು ತಲೆನೋವು ಕೊಡಲು ಶುರುಮಾಡುತ್ತವೆ. ನೂರು ಚಾನಲ್‌ಗಳು ಇದ್ದರೆ ಎಷ್ಟೆಲ್ಲ ವೈವಿಧ್ಯದ ಕಾರ್ಯಕ್ರಮಗಳನ್ನು ನೋಡಬಹುದು ಎಂದು ಒಂದೇ ಚಾನಲ್‌ ಇದ್ದ ದಿನಗಳಲ್ಲಿ ಅಂದುಕೊಳ್ಳುತ್ತಿದ್ದೆವು. ಈಗ ನೂರಾರು ಚಾನಲ್‌ಗಳು ಸಿಗುತ್ತಿವೆ; ಆದರೆ ಯಾವೊಂದು ಚಾನಲನ್ನೂ ತದೇಕವಾಗಿ ಒಂದೈದು ನಿಮಿಷದಷ್ಟು ನೋಡುವ ತಾಳ್ಮೆಯನ್ನೇ ನಾವಿಂದು ಕಳೆದುಕೊಂಡಿದ್ದೇವೆ, ಅಲ್ಲವೆ? ಬರೆಯದ ಹತ್ತು ಪೆನ್‌ಗಳನ್ನು ಜೋಪಾನವಾಗಿ ಇಟ್ಟುಕೊಳ್ಳುವುದಕ್ಕಿಂತಲೂ ಬರೆಯಬಲ್ಲ ಒಂದೇ ಒಂದು ಪೆನ್ಸಿಲನ್ನು ಇಟ್ಟುಕೊಂಡರೂ ಅದರಿಂದ ಪ್ರಯೋಜನ ಉಂಟು.

ನರಿಗೆ ತುಂಬ ಆಲೋಚನೆಮಾಡಿ ಹತ್ತು ದಾರಿಗಳನ್ನು ಕಲ್ಪಿಸಿಕೊಳ್ಳುವ ಶಕ್ತಿಯೇನೋ ಇತ್ತು, ನಿಜ. ಆದರೆ ಅವು ದಿಕ್ಕು ತಪ್ಪಿಸುವಂಥ ಆಲೋಚನೆಗಳೇ ಹೊರತು ದಾರಿ ತೋರಿಸವಂಥವು ಅಲ್ಲ. ನಮ್ಮ ಮುಂದೆ ಆಯ್ಕೆಗಳು ಹೆಚ್ಚಿದಷ್ಟು ಗೊಂದಲಗಳು ಹೆಚ್ಚಾಗುವ ಅಪಾಯವೂ ಉಂಟು. ನಿರ್ಧಾರಕ್ಕೆ ಒಗ್ಗದ ಯೋಜನೆಗಳಿಂದ ಪ್ರಯೋಜನವೇನು? ಮೊಂಡು ಹಿಡಿದ ಹತ್ತು ಬಾಣಗಳಿಗಿಂತಲೂ ಚೂಪಾದ ಒಂದು ಸಣ್ಣ ಸೂಜಿಯೇ ಹೆಚ್ಚು ಪ್ರಯೋಜನಕಾರಿ. ಆಚರಣೆಗೆ ಬರದ ನೂರು ದೊಡ್ಡ ಸಿದ್ಧಾಂತಗಳಿಗಿಂತಲೂ ನಮ್ಮ ಜೀವನಕ್ಕೆ ದಕ್ಕುವ ಒಂದು ಸಣ್ಣ ಆಚರಣೆಯೇ ಶ್ರೇಷ್ಠ ಎನಿಸಿಕೊಳ್ಳುತ್ತದೆ. 

ಬೆಕ್ಕುಗಿದ್ದ ಜ್ಞಾನ ಜೀವನಕ್ಕೆ ಬೇಕಾದಂಥ ವಿವೇಕವಾಗಿತ್ತೆ ಹೊರತು, ಕೇವಲ ಅಹಂಕಾರ ಪ್ರದರ್ಶನಕ್ಕೆ ಸೀಮಿತವಾದ ಬುದ್ಧಿಯ ಅಹಂಕಾರವಾಗಿರಲಿಲ್ಲ. ನಮ್ಮ ಮುಂದೆ ಎರಡು ದಾರಿಗಳಿದ್ದಾಗ, ಧೈರ್ಯವಾಗಿ ಒಂದನ್ನು ಮಾತ್ರವೇ ಆರಿಸಿಕೊಳ್ಳುವಂಥ ಪ್ರಬುದ್ಧತೆ ನಮಗೆ ಒದಗಬೇಕು. 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !