ಮೋದಿ ಸಂಪುಟದಲ್ಲಿ ‘ದಲಿತ ಕೋಟಾ’..?

ಗುರುವಾರ , ಜೂನ್ 20, 2019
24 °C
ರಾಜ್ಯದಲ್ಲಿನ ಐದು ಪರಿಶಿಷ್ಟ ಜಾತಿಯ ಮೀಸಲು ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು

ಮೋದಿ ಸಂಪುಟದಲ್ಲಿ ‘ದಲಿತ ಕೋಟಾ’..?

Published:
Updated:
Prajavani

ವಿಜಯಪುರ: ರಾಜ್ಯದ ಐದು ಪರಿಶಿಷ್ಟ ಜಾತಿಯ ಮೀಸಲು ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ದಾಖಲಿಸಿದ್ದು, ‘ದಲಿತ ಕೋಟಾ’ದಡಿ ಮೋದಿ ಸಂಪುಟಕ್ಕೆ ಸೇರ್ಪಡೆಯಾಗುವವರು ಯಾರು ಎಂಬುದು ಇದೀಗ ಚರ್ಚೆಗೆ ಗ್ರಾಸವಾಗಿದೆ.

ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ದಲಿತ ಬಲಗೈ ಸಮುದಾಯದ ಹಿರಿಯ ನಾಯಕ, ಕೇಂದ್ರದ ಮಾಜಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್‌ ಪ್ರಯಾಸದ ಗೆಲುವು ದಾಖಲಿಸಿದ್ದು, ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ.

ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯಗೆ ಸೆಡ್ಡು ಹೊಡೆದು, ಕಾಂಗ್ರೆಸ್‌ಗೆ ಗುಡ್‌ ಬೈ ಹೇಳಿ ಬಿಜೆಪಿಗೆ ಸೇರ್ಪಡೆಯಾಗಿದ್ದ ಶ್ರೀನಿವಾಸ್‌ ಪ್ರಸಾದ್‌ಗೆ, ರಾಜ್ಯ ಬಿಜೆಪಿ ವರಿಷ್ಠ ಬಿ.ಎಸ್.ಯಡಿಯೂರಪ್ಪ ಸಂಪೂರ್ಣ ಬೆಂಬಲ ನೀಡಿದ್ದರು. ವಿಧಾನಸಭಾ ಉಪ ಚುನಾವಣೆಯನ್ನು ಪ್ರತಿಷ್ಠೆಯನ್ನಾಗಿ ಸ್ವೀಕರಿಸಿದ್ದರು. ವಯಸ್ಸು–ಅನಾರೋಗ್ಯ ಅಡ್ಡಿಯಾದರೆ ಶ್ರೀನಿವಾಸ್‌ ಪ್ರಸಾದ್‌ಗೆ ಮೋದಿ ಸಂಪುಟದಲ್ಲಿ ಕೆಲಸ ಮಾಡುವ ಅವಕಾಶ ದೊರಕುವುದು ಕಷ್ಟ ಎಂದು ಕಮಲ ಪಾಳೆಯದ ಮೂಲಗಳು ತಿಳಿಸಿವೆ.

ಕಲಬುರ್ಗಿ ಲೋಕಸಭಾ ಕ್ಷೇತ್ರದಲ್ಲಿ ಸೋಲಿಲ್ಲದ ಸರದಾರ ಎಂದೇ ಹೆಸರಾಗಿದ್ದ ಕಾಂಗ್ರೆಸ್‌ ಮುಖಂಡ ಮಲ್ಲಿಕಾರ್ಜುನ ಖರ್ಗೆ ಸೋಲಿಸಿದ ಉಮೇಶ ಜಾಧವಗೆ ಬಿಜೆಪಿ ಮಣೆ ಹಾಕುವುದೇ ಎಂಬುದು ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದೆ.

ದಲಿತ ಕೋಟಾದಡಿ ಮೂಲ ಅಸ್ಪೃಶ್ಯರನ್ನು ಕಡೆಗಣಿಸಿ, ಸ್ಪೃಶ್ಯ ವರ್ಗದ ಲಂಬಾಣಿ ಸಮಾಜಕ್ಕೆ ಅವಕಾಶ ನೀಡಿದರೆ, ಮೂಲ ದಲಿತರು ಬಿಜೆಪಿ ವಿರುದ್ಧ ಮುನಿಸಿಕೊಳ್ಳಬಹುದು ಎಂಬ ಲೆಕ್ಕಾಚಾರವೂ ಬಿರುಸಿನಿಂದ ನಡೆದಿದೆ. ಬಂಜಾರರಿಗೆ ಬೇರೆ ರಾಜ್ಯಗಳಲ್ಲಿ ಅವಕಾಶ ಕೊಡುವ ಚರ್ಚೆಯೂ ಮುನ್ನೆಲೆಗೆ ಬಂದಿದೆ.

ಸಂಘ ಪರಿವಾರದ ಹಿನ್ನೆಲೆ:

ಚಿತ್ರದುರ್ಗ, ಕೋಲಾರ ಪರಿಶಿಷ್ಟ ಜಾತಿಯ ಮೀಸಲು ಲೋಕಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದು, ಚಿತ್ರದುರ್ಗದಲ್ಲಿ ಎಡಗೈ ಸಮುದಾಯದ ಎ.ನಾರಾಯಣ ಸ್ವಾಮಿ ಗೆಲುವು ದಾಖಲಿಸಿದ್ದಾರೆ.

ಎ.ನಾರಾಯಣ ಸ್ವಾಮಿ ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿದ್ದವರು. ಪಕ್ಷದಲ್ಲಿ ತಮ್ಮದೇ ಬಲ ಹೊಂದಿದ್ದಾರೆ. ಆರ್‌ಎಸ್‌ಎಸ್‌ನ ಸ್ವಯಂ ಸೇವಕ. ಸಂಘ ಪರಿವಾರದ ಮುಖಂಡರ ಲಾಬಿಗೆ ಅಮಿತ್‌ ಶಾ, ಮೋದಿ ಮಣಿದರೆ, ನಾರಾಯಣಸ್ವಾಮಿ ಬಿಜೆಪಿಯ ಬೆನ್ನೆಲುಬಾಗಿರುವ ಎಡಗೈ ಸಮುದಾಯವನ್ನು ಕೇಂದ್ರ ಸಂಪುಟದಲ್ಲಿ ಪ್ರತಿನಿಧಿಸಬಹುದು.

ಸತತ ಗೆಲುವು ದಾಖಲಿಸಿದ್ದ ಕೆ.ಎಚ್‌.ಮುನಿಯಪ್ಪ ಅವರಿಗೆ ಮೊದಲ ಬಾರಿಗೆ ಸೋಲಿನ ರುಚಿ ತೋರಿಸಿದ ಕೋಲಾರ ಸಂಸದ ಎಸ್‌.ಮುನಿಸ್ವಾಮಿ ಬೋವಿ ಸಮಾಜದವರು. ಅರವಿಂದ ಲಿಂಬಾವಳಿಯ ಪ್ರಬಲ ಬೆಂಬಲಿಗರಲ್ಲೊಬ್ಬರು.

ತಳ ಹಂತದಿಂದ ರಾಜಕಾರಣದ ಮೆಟ್ಟಿಲುಗಳನ್ನು ಏರಿದವರು. ಗ್ರಾಮ ಪಂಚಾಯ್ತಿ ಸದಸ್ಯ, ಅಧ್ಯಕ್ಷ, ಹಾಲು ಹಾಕಿಕೊಂಡೇ ಬಿಬಿಎಂಪಿ ಕಾರ್ಪೊರೇಟರ್ ಆಗಿದ್ದ ಮುನಿಸ್ವಾಮಿ ಇದೀಗ ಕೋಲಾರ ಸಂಸದ. ಆರ್‌ಎಸ್‌ಎಸ್‌ನ ಸ್ವಯಂ ಸೇವಕ. ಹೊಸ ಮುಖಕ್ಕೆ ಆದ್ಯತೆ ಸಿಕ್ಕರೆ, ಮುನಿಸ್ವಾಮಿಗೆ ಅದೃಷ್ಟ ಖುಲಾಯಿಸಬಹುದು.

‘ಕರ್ನಾಟಕದಿಂದ ಯಾರ‍್ಯಾರು ಮೋದಿ ಸಂಪುಟದಲ್ಲಿರಲಿದ್ದಾರೆ ಎಂಬುದು ಈಗಾಗಲೇ ಅಂತಿಮಗೊಂಡಿದೆ. ಬದಲಾವಣೆ ಕಷ್ಟ. ಆದರೆ ಯಾರು ಕೇಂದ್ರ ಸಚಿವರಾಗಲಿದ್ದಾರೆ ಎಂಬುದು ಚಿದಂಬರ ರಹಸ್ಯವಾಗಿದೆ. ಪ್ರಮಾಣ ವಚನದವರೆಗೂ ಕಾತರದಿಂದ ಕಾಯಲೇಬೇಕಿದೆ’ ಎಂದು ಬಿಜೆಪಿ ಮುಖಂಡರೊಬ್ಬರು ತಿಳಿಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !