10 ತಿಂಗಳಿಂದ ಜನ, ವ್ಯಾಪಾರಿಗಳ ಪಡಿಪಾಟಲು

7
ದೊಡ್ಡ ಅಂಗಡಿ ಬೀದಿ: ಮುಗಿಯದ ರಸ್ತೆ ಅಭಿವೃದ್ಧಿ ಕಾಮಗಾರಿ

10 ತಿಂಗಳಿಂದ ಜನ, ವ್ಯಾಪಾರಿಗಳ ಪಡಿಪಾಟಲು

Published:
Updated:
ರಸ್ತೆಗೆ ಜಲ್ಲಿ ಹಾಕಿ ಹಾಗೆಯೇ ಬಿಡಲಾಗಿದೆ –ಪ್ರಜಾವಾಣಿ ಚಿತ್ರ

ಚಾಮರಾಜನಗರ: ಪಟ್ಟಣದ ಪ್ರಮುಖ ವಹಿವಾಟಿನ ತಾಣವಾದ ದೊಡ್ಡ ಅಂಗಡಿ ಬೀದಿಯಲ್ಲಿ 10 ತಿಂಗಳ ಹಿಂದೆ ಆರಂಭಗೊಂಡಿದ್ದ ರಸ್ತೆ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳ್ಳದೇ ಇರುವುದರಿಂದ ಸಾರ್ವಜನಿಕರು ಮತ್ತು ವ್ಯಾಪಾರಿಗಳು ತೊಂದರೆ ಅನುಭವಿಸುತ್ತಿದ್ದಾರೆ.

ದೊಡ್ಡ ಅಂಗಡಿ ಮತ್ತು ಚಿಕ್ಕ ಅಂಗಡಿ ಬೀದಿಗಳ ಅಭಿವೃದ್ಧಿ ಕಾಮಗಾರಿಗಾಗಿ ಕಳೆದ ವರ್ಷದ ಅಕ್ಟೋಬರ್‌ ತಿಂಗಳಲ್ಲಿ ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರು ಗುದ್ದಲಿಪೂಜೆ ನೆರವೇರಿಸಿದ್ದರು.  ಚಿಕ್ಕ ಅಂಗಡಿ ಬೀದಿಗೆ ಕಾಂಕ್ರೀಟ್‌ ಹಾಕಲಾಗಿದೆ. ದೊಡ್ಡಂಗಡಿ ಬೀದಿಯಲ್ಲಿ ಸ್ತ್ರೀಶಕ್ತಿ ಗುಂಪಿನ ವಾಣಿಜ್ಯ ಸಂಕೀರ್ಣದವರೆಗೆ ಕಾಂಕ್ರೀಟ್‌ ಕಾಮಗಾರಿ ಪೂರ್ಣಗೊಂಡಿದೆ. ಅಲ್ಲಿಂದ ಗುಂಡ್ಲುಪೇಟೆ ವೃತ್ತದವರೆಗೆ ರಸ್ತೆಯ ಅಭಿವೃದ್ಧಿ ಕೆಲಸ ಇನ್ನು ಆಗಬೇಕಿದೆ. 

ರಸ್ತೆಯ ವಿಸ್ತರಣೆಗಾಗಿ ಕಟ್ಟಡಗಳನ್ನು ಒಡೆದು ಚರಂಡಿ ನಿರ್ಮಿಸಲಾಗಿದೆ. ರಸ್ತೆಗೆ ಜಲ್ಲಿ ಹಾಕಿ ಬಿಡಲಾಗಿದೆ. ಅದರ ನಂತರ ಯಾವುದೇ ಕೆಲಸ ನಡೆದಿಲ್ಲ. ರಸ್ತೆ ಸರಿ ಇಲ್ಲದಿರುವುದರಿಂದ ವಾಹನಗಳ ಸಂಚಾರ, ಜನರ ಓಡಾಟಕ್ಕೆ ತೊಡಕಾಗಿದೆ. ದ್ವಿಚಕ್ರ ವಾಹನಗಳ ಸವಾರರು ಕಷ್ಟಪಟ್ಟು ತಮ್ಮ ವಾಹನವನ್ನು ಚಲಾಯಿಸುತ್ತಾರೆ. ರಿಕ್ಷಾ ಹಾಗೂ ನಾಲ್ಕು ಚಕ್ರಗಳ ವಾಹನಗಳು ಸಂಚರಿಸಲು ಪ್ರಯಾಸ ಪಡಬೇಕು.

ಕಾಂಕ್ರೀಟ್‌ ಹಾಕಲು ರಸ್ತೆಯನ್ನು ಅಗೆದಿರುವುದರಿಂದ ಪಾದಚಾರಿ ಮಾರ್ಗವು ರಸ್ತೆಯಿಂದ ಸುಮಾರು 2 ಅಡಿ ಎತ್ತರದಲ್ಲಿದೆ. ಗ್ರಾಹಕರು ಅಂಗಡಿಗಳಿಗೆ ಹೋಗಬೇಕೆಂದರೆ ಇಷ್ಟು ಎತ್ತರವನ್ನು ಏರಬೇಕಾಗುತ್ತದೆ. ಹಿರಿಯ ನಾಗರಿಕರಿಗೆ ಇದನ್ನು ಏರುವುದು ಕಷ್ಟವಾಗುತ್ತಿದೆ. ಯಾವಾಗಲೂ ಜನ, ವಾಹನಗಳ ದಟ್ಟಣೆಯಿಂದ ಕೂಡಿರುತ್ತಿದ್ದ ಈ ರಸ್ತೆಯಲ್ಲಿ ಈಗ ಅಷ್ಟೇನು ಜನ ಕಾಣಿಸುತ್ತಿಲ್ಲ. ‌ಇದು ಇಲ್ಲಿ ನಡೆಯುತ್ತಿದ್ದ ವಹಿವಾಟಿನ ಮೇಲೆ ಪರಿಣಾಮ ಬೀರಿದೆ. 

ವ್ಯಾಪಾರ ಇಲ್ಲ: ‘10 ತಿಂಗಳುಗಳಿಂದ ನಾವು ನಡುಗುಡ್ಡೆಯಲ್ಲಿ ಇರುವಂತೆ ಇದ್ದೇವೆ. ಕೆಲಸ ಪೂರ್ಣಗೊಳ್ಳದಿರುವುದರಿಂದ ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಜನರು ಇಲ್ಲಿಗೆ ಬರುತ್ತಿಲ್ಲ. ಈ ಬೀದಿಯಲ್ಲಿ ಇರುವ ಅಂಗಡಿಯವರಿಗೆ ದೊಡ್ಡ ಮಟ್ಟಿನ ವ್ಯಾಪಾರ ಆಗುತ್ತಿಲ್ಲ’ ಎಂದು ಜವಳಿ ಅಂಗಡಿ ಇಟ್ಟುಕೊಂಡಿರುವ ಮನೋಜ್‌ಕುಮಾರ್‌ ಜೈನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಾಮಗಾರಿಯನ್ನು ಬೇಗ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿಯರಿಗೆ ಮನವಿ ಮಾಡಿದ್ದೇವೆ. ಎರಡು ವಾರಗಳ ಹಿಂದೆ ಅವರು ಬಂದು ಇಲ್ಲಿ ಪರಿಶೀಲನೆ ನಡೆಸಿ, ಬೇಗ ಕೆಲಸ ಮುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ, ಏನೂ ಪ್ರಗತಿ ಆಗಿಲ್ಲ’ ಎಂದು ಅವರು ಹೇಳಿದರು.  ‘ಕೇಳಿದರೆ ಇನ್ನೂ ಟೆಂಡರ್‌ ಆಗಿಲ್ಲ ಎಂದು ನಗರಸಭೆಯ ಅಧಿಕಾರಿಗಳು ಹೇಳುತ್ತಿದ್ದಾರೆ’ ಎಂದು ಮನೋಜ್‌ಕುಮಾರ್‌ ಜೈನ್‌ ಅಸಮಾಧಾನ ವ್ಯಕ್ತಪಡಿಸಿದರು.

‘ರಸ್ತೆ ವಿಸ್ತರಣೆಗಾಗಿ ಕಟ್ಟಡಗಳನ್ನು ಒಡೆಯಬೇಕು ಎಂದಾಗ ನಾವು ವಿರೋಧಿಸಿದ್ದೆವು. ಆಗ ಅಂದಿನ ಜಿಲ್ಲಾಧಿಕಾರಿ ರಾಮು ಅವರು ರಸ್ತೆ ವಿಸ್ತರಣೆಗಾಗಿ ಕಟ್ಟಡ ತೆರವುಗೊಳಿಸಲು ಸಹಕರಿಸಿ, ಒಂದು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ ವರ್ಷವಾಗುತ್ತಾ ಬಂದರೂ ರಸ್ತೆ ನಿರ್ಮಾಣ ಆಗಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅದೇ ರಸ್ತೆಯಲ್ಲಿ ಚಿನ್ನದ ಅಂಗಡಿ ಇಟ್ಟುಕೊಂಡಿರುವ ವೆಂಕಟೇಶ್‌ ಬಾಬು ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದರು. ‘ಇಲ್ಲಿನ ಅವ್ಯವಸ್ಥೆ ನೋಡಿ ಜನರೇ ಬರುತ್ತಿಲ್ಲ. ವ್ಯಾಪಾರ ‌ಆಗುತ್ತಿಲ್ಲ. ರಸ್ತೆ ಪೂರ್ಣಗೊಳ್ಳುವವರೆಗೂ ಹೀಗೆ ಇರುತ್ತದೆ’ ಎಂದು ಅವರು ಹೇಳಿದರು.

‘ಇಲ್ಲಿ ನಡೆದಾಡಲು ಆಗುತ್ತಿಲ್ಲ, ಪಾದಚಾರಿ ಮಾರ್ಗಕ್ಕೆ ಹತ್ತಲೂ ಕಷ್ಟ ಪಡಬೇಕು. ಹಾಗಾಗಿ ಇತ್ತ ಬರುವುದನ್ನೇ ಬಿಟ್ಟಿದ್ದೆ‌’ ಎಂದು ಚಿನ್ನದ ಕೆಲಸ ಮಾಡಿಸಲು ಬಂದ ಹಿರಿಯ ಮಹಿಳೆಯೊಬ್ಬರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !