ಮಳೆಗಾಲದಲ್ಲಿ ಡೆಂಗಿ ದಾಂಗುಡಿ

7
ವಾತಾವರಣ ಬದಲಾವಣೆಯಿಂದ ರೋಗ ಹೆಚ್ಚಳ

ಮಳೆಗಾಲದಲ್ಲಿ ಡೆಂಗಿ ದಾಂಗುಡಿ

Published:
Updated:
ಸೊಳ್ಳೆಗಳ ನಿರ್ಮೂಲನೆಗೆ ಔಷಧಿ ಸಿಂಪಡಿಸುತ್ತಿರುವುದು

ಬೆಂಗಳೂರು: ‘ತೀವ್ರ ಕಣ್ಗಾವಲಿನ ನಡುವೆಯೂ ಡೆಂಗಿ ಪ್ರಕರಣಗಳು ಹೆಚ್ಚುತ್ತಿ ರುವುದಕ್ಕೆ ನಗರೀಕರಣ, ಜನದಟ್ಟಣೆ, ವಾತಾವರಣದಲ್ಲಿ ಆಗುತ್ತಿರುವ ಬದಲಾವಣೆಗಳೇ ಕಾರಣ’ ಎಂದು ಆರೋಗ್ಯ ಇಲಾಖೆಯ ಸಂಶೋಧನಾ ಅಧಿಕಾರಿ ಡಾ.ಮಹಮ್ಮದ್‌ ಶರೀಫ್‌ ಹೇಳಿದರು.

‘2009ರ ಮೊದಲು ಬೆರಳೆಣಿಕೆಯ ಪರೀಕ್ಷಾ ಕೇಂದ್ರಗಳು ಮಾತ್ರ ಇದ್ದವು. ಇದರಿಂದ ಡೆಂಗಿ ಪ್ರಕರಣಗಳು ಬೇಗ ಪತ್ತೆಯಾಗುತ್ತಿರಲಿಲ್ಲ. ಸಾವಿನ ಸಂಖ್ಯೆ ಕೂಡ ಹೆಚ್ಚಿತ್ತು’ ಎಂದು ಅವರು ಹೇಳಿದರು.

‘ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿಯೂ ಪರೀಕ್ಷಾ ಕೇಂದ್ರಗಳು ಇರುವುದು ಕರ್ನಾಟಕದಲ್ಲಿ ಮಾತ್ರ. ಬೆಂಗಳೂರು ನಗರದಲ್ಲಿಯೇ ಐದು ಕೇಂದ್ರಗಳು ಇವೆ. ಇತ್ತೀಚಿನ ವರ್ಷಗಳಲ್ಲಿ ನಾವು ಸೂಕ್ಷ್ಮವಾಗಿ ಡೆಂಗಿ ಪ್ರಕರಣಗಳನ್ನು ನಿರ್ವಹಿಸುತ್ತಿದ್ದೇವೆ. ರೋಗಿಗಳು ಮಾತ್ರ ಅಲ್ಲ ವೈದ್ಯರು, ದಾದಿಯರ ಆರೋಗ್ಯದ ಕಾಳಜಿಯನ್ನೂ ವಹಿಸಲಾಗಿದೆ. ಅನುಮಾನ ಬಂದ ಎಲ್ಲರಿಗೂ ರಕ್ತ ಪರೀಕ್ಷೆ ಮಾಡಿಸಲು ಸಲಹೆ ನೀಡಲಾಗುತ್ತಿದೆ’ ಎಂದು ಅವರು ಮಾಹಿತಿ ನೀಡಿದರು.

‘ನಗರಗಳಲ್ಲಿ ಡೆಂಗಿ ಪ್ರಕರಣ ಹೆಚ್ಚುತ್ತಿರುವುದಕ್ಕೆ ನಗರೀಕರಣವೇ ಪ್ರಮುಖ ಕಾರಣವಾಗಿದೆ. ಹೆಚ್ಚುತ್ತಿರುವ ಕಟ್ಟಡ ನಿರ್ಮಾಣ ಕಾಮಗಾರಿ ಕೂಡ ಡೆಂಗಿಗೆ ದಾರಿ ಮಾಡಿಕೊಡುತ್ತಿದೆ. ನಿಲ್ಲದ ಮಳೆ, ಅಲ್ಲಲ್ಲಿ ನಿಲ್ಲುವ ನೀರು, ಕೊಳಚೆ, ಕಸ ಇವುಗಳು ಸೊಳ್ಳೆಗಳ ಹೆಚ್ಚಳಕ್ಕೆ ಕಾರಣವಾಗಿವೆ’ ಎಂದರು.

‘ಆರೋಗ್ಯ ಅಧಿಕಾರಿಗಳಿಗೆ ನಗರದ ಬಗ್ಗೆ ಸಂಪೂರ್ಣ ಮಾಹಿತಿ ಇದೆ. ಅವರು ಎಲ್ಲೆಲ್ಲಿ ಸೊಳ್ಳೆಗಳು ಹೆಚ್ಚು ಇರುತ್ತವೆ, ಯಾವ ರೀತಿ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದನ್ನು
ನಿರ್ಧರಿಸುತ್ತಾರೆ. ಸೊಳ್ಳೆ ನಿರ್ಮೂಲನೆ ಮಾಡಲು ಔಷಧಿ ಸಿಂಪಡಿಸುವವರಿಗೂ ಈ ಬಗ್ಗೆ ತರಬೇತಿ ನೀಡಲಾಗಿದೆ’ ಎಂದು ಹೇಳಿದರು.

ಬಿಬಿಎಂಪಿ ಆರೋಗ್ಯ ಅಧಿಕಾರಿ ಎಚ್‌.ಎನ್‌.ಲೋಕೇಶ್‌, ‘ಡೆಂಗಿ ಲಕ್ಷಣಗಳು ಇದ್ದರೆ ಜನರು ಹೆದರಬೇಕಿಲ್ಲ. ಆದರೆ, ನಿರ್ಲಕ್ಷ್ಯ ಮಾಡುವಂತಿಲ್ಲ. ನಾವು ಸೊಳ್ಳೆಗಳ ನಿರ್ಮೂಲನೆಗೆ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದೇವೆ. ಜನರೂ ಜವಾಬ್ದಾರಿಯನ್ನು ಅರಿತುಕೊಳ್ಳಬೇಕು. ಮನೆಯ ಬಳಿ ನೀರು ನಿಲ್ಲದಂತೆ, ಕಸ ಉಳಿಯದಂತೆ ನೋಡಿಕೊಳ್ಳಬೇಕು. ಸ್ವಚ್ಛತೆಗೆ ಪ್ರಥಮ ಆದ್ಯತೆ ನೀಡಬೇಕು. ಆಗಾಗ ನೀರಿನ ಟ್ಯಾಂಕ್‌ ಸ್ವಚ್ಛ ಮಾಡುತ್ತಿರಬೇಕು. ಸೊಳ್ಳೆಗಳು ಉತ್ಪತ್ತಿಯಾಗದಂತೆ ನೋಡಿಕೊಳ್ಳಬೇಕು’ ಎಂದರು.

‘ನಗರದಲ್ಲಿ ಜನಸಂಖ್ಯೆ ಹೆಚ್ಚಿದೆ. ವಾಹನ ದಟ್ಟಣೆ ಜೊತೆಗೆ ಮಾಲಿನ್ಯ ಕೂಡ ಜಾಸ್ತಿಯಾಗಿದೆ. ಇವೆಲ್ಲವೂ ಸೊಳ್ಳೆಗಳ ಉತ್ಪತ್ತಿಗೆ ದಾರಿ ಮಾಡಿಕೊಟ್ಟಿದೆ. ಆದರೆ ಸತತ ಪ್ರಯತ್ನದಿಂದ ಡೆಂಗಿ ನಿರ್ಮೂಲನೆ ಸಾಧ್ಯವಿದೆ’ ಎಂದು ಅಭಿಪ್ರಾಯಪಟ್ಟರು.

‘ಬಿಬಿಎಂಪಿಯ ಸಾರ್ವಜನಿಕ ಆರೋಗ್ಯ ಮಾಹಿತಿ ಹಾಗೂ ಸಾಂಕ್ರಾಮಿಕ ಕೇಂದ್ರ 2016ರಲ್ಲಿಯೇ ಸ್ಥಾಪನೆಯಾಗಿದೆ. ಸಾರ್ವನಿಕರ ಆರೋಗ್ಯದ ಬಗ್ಗೆ ಪಾಲಿಕೆ ಕೂಡ ಜಾಗೃತ
ವಾಗಿ ಕೆಲಸ ಮಾಡುತ್ತಿದೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !