ಗುರುವಾರ , ನವೆಂಬರ್ 21, 2019
20 °C
ಬಿಬಿಎಂಪಿ: ಈ ವರ್ಷ 6.5 ಸಾವಿರ ಪ್ರಕರಣ

ಡೆಂಗಿ: 10 ಸಾವಿರಕ್ಕೂ ಅಧಿಕ ಮಂದಿಗೆ ಸೋಂಕು

Published:
Updated:

ಬೆಂಗಳೂರು: ರಾಜ್ಯದಲ್ಲಿ ಡೆಂಗಿ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಂಕಿ– ಅಂಶಗಳ ಪ್ರಕಾರ, ಜನವರಿ 1ರಿಂದ ಈವರೆಗೆ 10,524 ಮಂದಿ ಡೆಂಗಿ ಸೋಂಕು ಹೊಂದಿರುವುದು ದೃಢಪಟ್ಟಿದೆ. 6 ಮಂದಿ ಚಿಕಿತ್ಸೆ‌ಗೆ ಸ್ಪಂದಿಸದೇ ಮೃತಟ್ಟಿದ್ದಾರೆ.

ಕಳೆದ ವರ್ಷ ಈ ಅವಧಿಯಲ್ಲಿ 2,199 ಡೆಂಗಿ ಪ್ರಕರಣಗಳು ಪತ್ತೆಯಾಗಿದ್ದವು. ಬಿಬಿಎಂಪಿ ವ್ಯಾಪ್ತಿಯಲ್ಲಿ ಅತೀ ಹೆಚ್ಚು ಮಂದಿಯಲ್ಲಿ (6,515) ಡೆಂಗಿ ಸೋಂಕು ಪತ್ತೆಯಾಗಿದೆ. ದಕ್ಷಿಣ ಕನ್ನಡ (948), ಶಿವಮೊಗ್ಗ (384), ಹಾವೇರಿ (272), ಚಾಮರಾಜನಗರ (199), ಕಲಬುರ್ಗಿ (183), ಹಾಸನ (157), ಉಡುಪಿ (167), ಚಿಕ್ಕಮಗಳೂರು (165), ದಾವಣಗೆರೆ (161) ಜಿಲ್ಲೆಗಳಲ್ಲೂ ಈ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದಿವೆ. 

ಈ ಅವಧಿಯಲ್ಲಿ ಬೆಂಗಳೂರು ನಗರ ಹಾಗೂ ದಕ್ಷಿಣ ಕನ್ನಡದಲ್ಲಿ ತಲಾ ಇಬ್ಬರು, ರಾಮನಗರ ಹಾಗೂ ಚಿತ್ರದುರ್ಗದಲ್ಲಿ ತಲಾ ಒಬ್ಬರು ಡೆಂಗಿಗೆ ಸಾವನ್ನಪ್ಪಿದ್ದಾರೆ. ಕಳೆದ ಒಂದು ವಾರದಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ 322 ಡೆಂಗಿ ಪ್ರಕರಣಗಳು ವರದಿಯಾಗಿವೆ. 

ನೆರೆ ಹಾವಳಿ ಪ್ರದೇಶಕ್ಕಿಲ್ಲ ಭೀತಿ: ಬೆಳಗಾವಿ, ಬಾಗಲಕೋಟೆ, ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ 10ಕ್ಕೂ ಅಧಿಕ ಪ್ರದೇಶದಲ್ಲಿ ನೆರೆ ಹಾವಳಿ ಉಂಟಾಗಿರುವ ಹಿನ್ನೆಲೆಯಲ್ಲಿ ಡೆಂಗಿ ಕಾಣಿಸಿಕೊಳ್ಳಬಹುದೆಂಬ ಆತಂಕ ಉಂಟಾಗಿತ್ತು.

‘ನೆರೆಪೀಡಿತ ಪ್ರದೇಶದಲ್ಲಿ ಸಾಮಾನ್ಯವಾಗಿ ಈಡೀಸ್ ಸೊಳ್ಳೆಯ ಲಾರ್ವಾ ಉತ್ಪತ್ತಿಯಾಗುವುದಿಲ್ಲ. ಹಾಗಾಗಿ ಜನತೆ ಭಯಪಡಬೇಕಿಲ್ಲ’ ಎಂದು ಇಲಾಖೆ ಸ್ಪಷ್ಟಪಡಿಸಿದೆ. ‘ನೀರು ನಿಂತ ಕಡೆ ಲಾರ್ವಾ ನಾಶಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಡೆಂಗಿ ತಪಾಸಣೆಯನ್ನು ಉಚಿತವಾಗಿ ಮಾಡಲಾಗುವುದು. ಖಾಸಗಿ ಆಸ್ಪತ್ರೆಗಳಲ್ಲಿ ಪರೀಕ್ಷೆಗೆ ಮೂರು ವರ್ಷದ ಹಿಂದೆ ಸರ್ಕಾರದಿಂದ ದರ ನಿಗದಿ ಮಾಡಲಾಗಿದೆ’ ಎಂದು ಅಧಿಕಾರಿ ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)