ತಂಬೂರಿ, ಕಂಸಾಳೆ ನೃತ್ಯ ಪ್ರವೀಣ ಕೈಲಾಸ್‌ ಮೂರ್ತಿ

7
ಕೈಲಾಸ್‌ ಮೂರ್ತಿಗೆ ಬಾಲ್ಯದಿಂದಲೇ ಆಕರ್ಷಿಸಿದ ಕಲೆ, 10 ವರ್ಷಗಳಿಂದ ಕಲಾ ಸೇವೆ

ತಂಬೂರಿ, ಕಂಸಾಳೆ ನೃತ್ಯ ಪ್ರವೀಣ ಕೈಲಾಸ್‌ ಮೂರ್ತಿ

Published:
Updated:
Prajavani

ಹಲವು ಜನಪದ ಕಲೆಗಳ ತವರೂರಾದ ಚಾಮರಾಜನಗರ ಜಿಲ್ಲೆಯಲ್ಲಿ ಕಲೆಯ ಸಾಧಕರಿಗೇನೂ ಬರವಿಲ್ಲ. ತಾಲ್ಲೂಕಿನ ಸಿದ್ದಯ್ಯನಪುರ ಗ್ರಾಮದ ತಂಬೂರಿ ಕೈಲಾಸ್ ಮೂರ್ತಿ ಜಿಲ್ಲೆಯಲ್ಲಿರುವ ಯುವ ದೇಸಿ ಸಾಧಕರಲ್ಲಿ ಒಬ್ಬರು.

ಹೆಸರಿನಲ್ಲೇ ಇರುವಂತೆ ಕೈಲಾಸ್‌ ಮೂರ್ತಿ ತಂಬೂರಿ ಮೀಟುವುದರಲ್ಲಿ ಪ್ರವೀಣ. ಕಂಸಾಳೆ ನೃತ್ಯದಲ್ಲೂ ಪರಿಣತಿ ಸಾಧಿಸಿದ್ದಾರೆ. ಇವರ ಪ್ರದರ್ಶನವನ್ನು ಸಣ್ಣ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಮೆಚ್ಚಿಕೊಳ್ಳುತ್ತಾರೆ. 

ಇನ್ನೂ 29ರ ಹರೆಯದ ಕೈಲಾಸ್ ಮೂರ್ತಿ ಅವರು 10 ವರ್ಷಗಳಿಂದ ಕಲಾ ಸೇವೆಯಲ್ಲಿ ತೊಡಗಿದ್ದಾರೆ. ಯುವ ರೈತರಾಗಿರುವ ಇವರು ಏಳನೇ ತರಗತಿ ವರೆಗೆ ಶಿಕ್ಷಣ ಪಡೆದಿದ್ದಾರೆ. 

ತಂಬೂರಿ ನುಡಿಸುವುದು ಇವರಿಗೆ ಕುಟುಂಬದಿಂದ ಬಂದ ಬಳುವಳಿ. ಅವರ ತಾತ, ಮುತ್ತಾತಂದಿರು ಕೂಡ ತಂಬೂರಿ ಮೀಟಿದವರೇ. ಗ್ರಾಮದ ಯಾವುದೇ ಶುಭ ಸಮಾರಂಭಗಳಿಗೆ ಅಥವಾ ಸಾವು ಸಂಭವಿಸಿದರೆ ಭಜನೆಗಳನ್ನು ಹಾಡಲು ಕೈಲಾಸ್‌ ಮೂರ್ತಿ ಅವರನ್ನು ಕರೆಯುತ್ತಾರೆ. ರಾಜ್ಯದ ವಿವಿದ ಕಡೆಗಳಲ್ಲೂ ಪ್ರದರ್ಶನ ನೀಡಿದ್ದಾರೆ.

ಕೈಲಾಸ್‌ ಮೂರ್ತಿ ಅವರು ಮಳವಳ್ಳಿ ತಾಲ್ಲೂಕಿನ ಬೊಪ್ಪನಪುರ ಗ್ರಾಮದ ತಂಬೂರಿ ಕಲಿಕಾ ಕೇಂದ್ರದಲ್ಲಿ ಪಳಗಿದವರು. ಪುರಿಗಲ್ಲಿ ಗ್ರಾಮದ ಮಹದೇವ ಎಂಬುವವರು ಇವರ ಗುರುಗಳು.

ಜಾತ್ರೆ ಹಾಗೂ ಶುಭಸಮಾರಂಭಗಳಿಗೆ ತಂಬೂರಿ ಹಾಡುಗಳು: ಇವರು ಸುಪ್ರಸಿದ್ದ ಚಿಕ್ಕಲ್ಲೂರು ಜಾತ್ರೆ, ಕಪ್ಪಡಿ ಜಾತ್ರೆ , ಮಲೆ ಮಹದೇಶ್ವರ ಬೆಟ್ಟದ ಜಾತ್ರೆ, ಸುತ್ತೂರು ಜಾತ್ರೆ, ಮತ್ತಿತರ ಜಾತ್ರೆಗಳಿಗೆ ಹೋಗಿ ಸಿದ್ದಪ್ಪಾಜಿ ಹಾಗೂ ಮಂಟೇಸ್ವಾಮಿ, ಮಲೆ ಮಹದೇಶ್ವರ ಗೀತೆಗಳನ್ನು ಹೆಚ್ಚಾಗಿ ಹಾಡಿ ತಂಬೂರಿ ಮತ್ತು ಕಂಸಾಳೆ ನೃತ್ಯವನ್ನೂ ಪ್ರದರ್ಶಿಸುತ್ತಾರೆ. ತಮ್ಮದೇ ಆದ 3 ತಂಡಗಳನ್ನು ಕಟ್ಟಿಕೊಂಡಿದ್ದಾರೆ. ತಾಲ್ಲೂಕಿನ ಯಾವುದೇ ಶುಭ ಸಮಾರಂಭಗಳು, ಗಣೇಶ ಉತ್ಸವ, ಮದುವೆ ಸಂಭ್ರಮ,  ವ್ಯಕ್ತಿಯೊಬ್ಬ ಮೃತಪಟ್ಟ ನಂತರ 11ನೇ ದಿನ ನಡೆಯುವ ಕಾರ್ಯಕ್ರಮಕ್ಕೆ ತಂಬೂರಿ ಹಾಡುಗಳನ್ನು ಹಾಡುತ್ತಾರೆ.

ನಾನಾ ರಾಜ್ಯಗಳಿಗೆ ಹೋಗಿ ಸ್ಪರ್ಧಿಸಿದ್ದಾರೆ. 7 ರಾಜ್ಯಗಳಿಗೆ ಹೋಗಿ ಹಾಡಿ ಗಮನಸೆಳೆದಿದ್ದಾರೆ. ಮುಂಬೈ, ಚೆನ್ನೈ, ಪುದುಚೇರಿ, ಕೇರಳ, ಆಂದ್ರಪ್ರದೇಶ, ತೆಲಂಗಾಣ, ದೆಹಲಿಗಳಲ್ಲಿ ನಡೆದ ತಂಬೂರಿ ಸ್ಪರ್ಥೆಗಳಲ್ಲೂ ಭಾಗವಹಿಸಿದ್ದಾರೆ.

ಬಾಲ್ಯದಲ್ಲೇ ಮೊಳಕೆಯೊಡೆದ ಆಸಕ್ತಿ 
ತಂಬೂರಿ ಮತ್ತು ಕಂಸಾಳೆಗಳು ಕೈಲಾಸ್‌ ಮೂರ್ತಿ ಅವರನ್ನು ಬಾಲ್ಯದಲ್ಲೇ ಸೆಳೆದಿದ್ದವು. 8 ವರ್ಷದ ಬಾಲಕನಾಗಿದಾಗ ಒಂದು ದಿನ ಶಾಲೆಯ ಮುಂದೆ ಕೈಲಾಸ್‌ ಮೂರ್ತಿ ಅವರ ತಂದೆ ಕಂಸಾಳೆ ನೃತ್ಯ ಮಾಡುತ್ತಿದ್ದರು. ಇದನ್ನು ನೋಡಿ ಅವರು ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಕಂಸಾಳೆ ಮತ್ತು ತಂಬೂರಿಯನ್ನು ಬಾರಿಸುತ್ತಿದ್ದರು. ಇದರ ಬಗ್ಗೆ ಆಸಕ್ತಿ ಹೆಚ್ಚಾಗಿ ಶಾಲೆಯನ್ನು ಅರ್ಧದಲ್ಲೇ ಬಿಟ್ಟರು. ಆನಂತರ ಅವರ ತಂದೆಯೊಡನೆ ತಂಬೂರಿ ಮತ್ತು ಕಂಸಾಳೆ ನೃತ್ಯಗಳಿಗೆ ಹೋಗಿ ಭಾಗವಹಿಸುತ್ತಿದ್ದರು. ನಂತರ ಇವರಿಗೆ ಈ ಕಲೆಯೇ ಜೀವನದ ದಾರಿಯಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !