ಹಾಡುಗಾರ್ತಿಯಾಗಿ ಬೆಳೆಯುತ್ತಿರುವ ಸುಮಿತ್ರಾ

ಮಂಗಳವಾರ, ಏಪ್ರಿಲ್ 23, 2019
31 °C
ಗುರು, ತರಬೇತಿ ಇಲ್ಲದೆ ಗಾಯನ ಕಲಿಕೆ, ಟೇಲರಿಂಗ್ ಜೊತೆಗೆ ತಂಡ ಕಟ್ಟಿಕೊಂಡು ಹಾಡುಗಾರಿಕೆ

ಹಾಡುಗಾರ್ತಿಯಾಗಿ ಬೆಳೆಯುತ್ತಿರುವ ಸುಮಿತ್ರಾ

Published:
Updated:
Prajavani

ಚಾಮರಾಜನಗರ: ನಗರದ ರಾಮಸಮುದ್ರ ನಿವಾಸಿ ಸುಮಿತ್ರಾ ಅವರಿಗೆ ಹಾಡುವುದು ಎಂದರೆ ಬಲು ಪ್ರೀತಿ. ಗುರುವಿನ ನೆರವಿಲ್ಲದೆ ಹಾಡುಗಾರಿಕೆಯನ್ನು ಕಲಿತಿರುವುದು ಇವರ ಹೆಗ್ಗಳಿಕೆ.  ಜಾನಪದ ಗೀತೆ, ಚಲನಚಿತ್ರ ಗೀತೆ ಸೇರಿದಂತೆ ವಿವಿಧ ರೀತಿಯ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡುತ್ತಾರೆ.   

ಆರ್ಕೆಸ್ಟ್ರಾ, ಗಣಪತಿ ಉತ್ಸವ, ಸಾಂಸ್ಕೃತಿಕ ಸೌರಭಗಳಂತಹ ಕಾರ್ಯಕ್ರಮಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಡೆಸುವ ‘ಮಹಿಳಾ ಸಾಂಸ್ಕೃತಿಕ ಉತ್ಸವ’ ಹಾಗೂ ಇನ್ನಿತರ ಕಾರ್ಯಕ್ರಮಗಳಲ್ಲಿ ತಮ್ಮ ಹಾಡುಗಾರಿಕೆ ಪ್ರದರ್ಶಿಸಿದ್ದಾರೆ. 

ಎಸ್‌ಎಸ್‌ಎಲ್‌ಸಿ ಮುಗಿಸಿರುವ ಸುಮಿತ್ರಾ ಅವರು, ಜೀವನೋಪಾಯಕ್ಕಾಗಿ ಟೇಲರಿಂಗ್‌ ಮಾಡಿಕೊಂಡಿದ್ದಾರೆ. ಹವ್ಯಾಸಕ್ಕಾಗಿ ಹಾಡುವುದನ್ನು ರೂಢಿಸಿಕೊಂಡವರು. ಒಂದು ವರ್ಷದಿಂದ ಆರು ಮಂದಿಯ ತಮ್ಮದೇ ಆದ ತಂಡ ಕಟ್ಟಿಕೊಂಡು ಕಾರ್ಯಕ್ರಮಗಳನ್ನು ನೀಡುತ್ತಾ ಜನಮನ್ನಣೆ ಗಳಿಸುತ್ತಿದ್ದಾರೆ. ಕಳೆದ 7 ವರ್ಷಗಳಿಂದ ವಿವಿಧ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡು ಗುರುತಿಸಿಕೊಂಡಿದ್ದಾರೆ.

ನೃತ್ಯದಲ್ಲಿಯೂ ಪಳಗಿರುವ ಅವರು ಶಾಲೆಗಳಿಗೆ ತೆರಳಿ ಶಾಲಾ ವಾರ್ಷಿಕೋತ್ಸವ ಹಾಗೂ ಇನ್ನಿತರ ಕಾರ್ಯಕ್ರಮಗಳಿಗಾಗಿ ಮಕ್ಕಳಿಗೆ ನೃತ್ಯವನ್ನೂ ಹೇಳಿಕೊಡುತ್ತಾರೆ.  

ಹೊರ ರಾಜ್ಯಗಳಲ್ಲಿ ಹಾಡುಗಾರಿಕೆ: ರಾಜ್ಯದ ಶಿವಮೊಗ್ಗ ಸೇರಿದಂತೆ ಹಲವು ಕಡೆಗಳಲ್ಲಿ ಪ್ರದರ್ಶನ ನೀಡಿದ್ದಾರೆ. ಹೊರ ರಾಜ್ಯಗಳಾದ ಮುಂಬೈನ ದಾದರ್‌ನಲ್ಲಿರುವ ಡಾ.ಬಿ.ಆರ್‌.ಅಂಬೇಡ್ಕರ್‌ ಸಮಾಧಿ ಸ್ಥಳದಲ್ಲಿ ತಂಡದೊಂದಿಗೆ ಪ್ರದರ್ಶನ ನೀಡಿದ್ದಾರೆ. ದುಬೈಗೆ ಹೋಗಿ ಖಾಸಗಿ ಕಾರ್ಯಕ್ರಮ ನೀಡಿದ್ದಾರೆ. 

ಇಚ್ಛೆಯಿಂದ ಕಲಿತೆ: ‘ನನಗೆ ಸಂಗೀತ ಗುರುಗಳಿಲ್ಲ. ಯಾವುದೇ ಸಂಗೀತ ತರಗತಿಗಳಿಗೆ ಹೋಗಿಲ್ಲ. ಆರ್ಕೆಸ್ಟ್ರಾಗಳಲ್ಲಿ ಚಿತ್ರಗೀತೆ, ಕರೋಕೆ, ನೇರ ಕಾರ್ಯಕ್ರಮಗಳನ್ನು ನೀಡಿದ್ದೇನೆ. ಇತರ ಕಡೆಗಳಲ್ಲಿ ಭಾವಗೀತೆ, ಜಾನಪದ ಗೀತೆಗಳನ್ನು ಹಾಡುತ್ತೇನೆ. ಅನೇಕ ಬೀದಿನಾಟಕಗಳಲ್ಲಿ ಅಭಿನಯಿಸಿದ್ದೇನೆ’ ಎನ್ನುತ್ತಾರೆ ಸುಮಿತ್ರಾ.

‘ಕಳೆದೆರಡು ವರ್ಷಗಳಿಂದ ಮದ್ದೂರು ಸಮೀಪದ ಮಲ್ಲಿಗೆಹಳ್ಳಿ, ನಗರದ ಬಾಲಾರ ಪಟ್ಟಣ ಶಾಲೆಯ ಮಕ್ಕಳಿಗೆ ನೃತ್ಯ ಹೇಳಿಕೊಡುತ್ತಿದ್ದೇನೆ. ನನ್ನಂತೆ ಅನೇಕ ಕಲಾವಿದರು ಇನ್ನೂ ತೆರೆಮರೆಯಲ್ಲೇ ಇದ್ದಾರೆ. ಅವರನ್ನು ಗುರುತಿಸುವ ಕೆಲಸ ಆಗಬೇಕು. ನನ್ನೊಂದಿಗೆ ಸೇರುವ ಆಸಕ್ತ ಯುವ ಕಲಾವಿದರಿಗೆ ನಾನು ನನ್ನ ಕಲೆಯನ್ನು ಹೇಳಿಕೊಡುತ್ತೇನೆ’ ಎನ್ನುತ್ತಾರೆ ಅವರು.

ನೋಯಿಸಬೇಡಿ: ‘ಕೆಲವು ಸಂದರ್ಭಗಳಲ್ಲಿ ಹಾಡುವುದಕ್ಕೆಂದು ಕಾರ್ಯಕ್ರಮಗಳಿಗೆ ಕರೆದುಕೊಂಡು ಹೋಗುತ್ತಾರೆ. ಬಸ್‌ಗೆ ಪಾವತಿಸಲು ಹಣವನ್ನೂ ಕೊಡುವುದಿಲ್ಲ. ಇಂತಹ ಸಂದರ್ಭಗಳು ಸಂಕಷ್ಟಕ್ಕೆ ದೂಡುತ್ತವೆ. ಅಲ್ಲದೆ ‘ಬಣ್ಣ’ದಲ್ಲೂ ತಾರತಮ್ಯ ಎಸಗುತ್ತಾರೆ. ದಯವಿಟ್ಟು ಕಲಾವಿದರ ಮನಸ್ಸನ್ನು ಯಾರೂ ನೋಯಸಬೇಡಿ. ಅವರಿಗೆ ಬೆಳೆಯುವ ಉತ್ಸಾಹ, ಉತ್ತೇಜನ ನೀಡಿ’ ಎಂದು ಮನವಿ ಮಾಡುತ್ತಾರೆ ಸುಮಿತ್ರಾ.

"ಬಡ ಕಲಾವಿದರನ್ನು ಕಾಪಾಡುವ ಕೆಲಸವಾಗಬೇಕು'

‘ಅನೇಕರು ಸರ್ಕಾರವೇ ನಮ್ಮನ್ನು ಗುರುತಿಸುತ್ತದೆ ಎಂದು ಸುಮ್ಮನಿರುತ್ತಾರೆ. ಆದರೆ, ‘ಪ್ರಭಾವಿ’ಗಳ ನಡುವೆ ಬಡಕಲಾವಿದರು ಬೆಳೆಯಲು ಸಾಧ್ಯವಾಗುತ್ತಿಲ್ಲ. ಕೆಲವರು ತಮ್ಮ ಪರಿಚಯದವರಿಗೆ ಸರ್ಕಾರಿ ಕಾರ್ಯಕ್ರಮಗಳನ್ನು ಕೊಡಿಸುತ್ತಾರೆ. ಇದರಿಂದ ಬಡಕಲಾವಿದರಿಗೆ ಅನ್ಯಾಯವಾಗುತ್ತದೆ. ಸರ್ಕಾರ ಮಟ್ಟದ ಇಲಾಖೆಗಳು ತಮ್ಮ ಸ್ವಂತ ಹಣವನ್ನು ಕಲಾವಿದರಿಗೆ ನೀಡುವುದಿಲ್ಲ. ಸರ್ಕಾರದ ಅನುದಾನದಡಿ ಇಲಾಖೆಗಳು ಸಂಪೂರ್ಣವಾಗಿ ಪರಿಶೀಲಿಸಿ ಕಾರ್ಯಕ್ರಮ ಒದಗಿಸುವ ಕೆಲಸವಾಗಬೇಕು. ಬೆಳೆಯುವವರನ್ನು ಬೆಳೆಯಲು ಬಿಡಬೇಕು’ ಎನ್ನುವುದು ಸುಮಿತ್ರಾ ಅವರ ಮನದಾಳದ ಮಾತು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !