ಸಕ್ಕರೆಕಾಯಿಲೆಗೆ ಸಿಹಿಯಾಗುವ ಪಥ್ಯಗಳು

7

ಸಕ್ಕರೆಕಾಯಿಲೆಗೆ ಸಿಹಿಯಾಗುವ ಪಥ್ಯಗಳು

Published:
Updated:

ಮಧುಮೇಹ ಎನ್ನುವುದು ಜಾಗತಿಕ ಮಟ್ಟದಲ್ಲಿ ಚಿಂತೆ ಮತ್ತು ಚಿಂತನೆಯನ್ನು ಉಂಟುಮಾಡಿರುವ ಕಾಯಿಲೆಗಳಲ್ಲಿ ಪ್ರಮುಖವಾದದ್ದು. ಬೇರೆಲ್ಲಾ ರೋಗಗಳಿಗಿಂತಲೂ ಪ್ರಮುಖವಾಗಿ ಜೀವನಶೈಲಿ ಮತ್ತು ಆಹಾರವಿಧಾನಗಳು ನೇರವಾಗಿ ಪರಿಣಾಮ ಬೀರುವ ಕಾಯಿಲೆಗಳಲ್ಲಿ ಇದು ಪ್ರಧಾನವಾದದ್ದು. ಮಧುಮೇಹರೋಗಿಗಳಲ್ಲಿ ಸಾಮಾನ್ಯವಾಗಿ ಸಿಹಿಯೇ ಮಧುಮೇಹ ವ್ಯಾಧಿ ಉತ್ಪತ್ತಿಯಾಗಲು ಕಾರಣ ಎಂಬ ಭಾವನೆ ಇದೆ.

ಆದರೆ ಸಿಹಿಯ ಸೇವನೆಯಿಂದ ಮಧುಮೇಹ ಉತ್ಪತ್ತಿಯಾಗುವುದಿಲ್ಲ; ಜೀವನಶೈಲಿಯ ವಿಕೃತಿ, ಆಹಾರಸೇವನಾ ಕ್ರಮದ ವಿಕೃತಿಗಳು ರೋಗಕ್ಕೆ ಪ್ರಮುಖ ಕಾರಣಗಳಾಗಬಲ್ಲವು. ವ್ಯಾಧಿ ಬಂದ ನಂತರ ಸಿಹಿಸೇವನೆ ವ್ಯಾಧಿವೃದ್ಧಿಗೆ ಕಾರಣವಾಗುವುದು. ಆದ್ದರಿಂದ ಮೇಹಿಗಳು ಆಹಾರಕ್ಕೆ ಕೊಡುವಷ್ಟೇ ಪ್ರಾಮುಖ್ಯವನ್ನು ಜೀವನಶೈಲಿಗೂ ಆಹಾರದ್ರವ್ಯಕ್ಕೂ ಸೇವನಾವಿಧಾನಕ್ಕೂ ಕೊಡಬೇಕಾಗುವುದು ಅನಿವಾರ್ಯ.

ರೋಗಿ ಯಾವುದೇ ವೈದ್ಯರ ಹತ್ತಿರ ಹೋದಾಗ ಕೇಳುವ ಪ್ರಶ್ನೆ ‘ಏನಾದರೂ ಪಥ್ಯ ಇದೆಯಾ ಡಾಕ್ಟ್ರೇ?’ ಎಂದು. ಸಾಮಾನ್ಯವಾಗಿ ಪಥ್ಯ ಎಂದರೆ ಸೇವಿಸಬಾರದ ಆಹಾರಗಳು ಎಂದೇ ಲೋಕಾರೂಢಿಯಲ್ಲಿ ವಾಡಿಕೆ. ಆದರೆ ನಿಜವಾಗಿ ಪಥ್ಯ ಎಂದರೆ ರೋಗನಿವೃತ್ತಿಗೆ ಇರುವ ಎಲ್ಲಾ ಮಾರ್ಗಗಳೂ ಪಥ್ಯಗಳೇ ಸೇವಿಸಬಾರದ ಆಹಾರಗಳ ಜೊತೆಗೆ, ಸೇವಿಸ(ಲೇ)ಬೇಕಾದ ಆಹಾರಗಳು, ವ್ಯಾಯಾಮ, ವ್ಯಾಯಾಮವನ್ನು ಮಾಡುವ ಸಮಯ–ಕಾಲಾವಧಿ, ದಿನನಿತ್ಯದ ಕರ್ಮಗಳಾದ ಸ್ನಾನ, ಆಹಾರಸೇವನಾ ಕಾಲ, ವಿಧಾನ – ಇತ್ಯಾದಿಗಳು – ಸ್ನಾನಕ್ಕೂ ಆಹಾರಸೇವನೆಗೂ ಇರಬೇಕಾದ ಅಂತರ, ಆಹಾರಸೇವನೆಗೂ ವ್ಯಾಯಮಕ್ಕೂ ಇರಬೇಕಾದ ಅಂತರ ಇವೆಲ್ಲವೂ ರೋಗನಿವಾರಣೆಗೆ ಸಹಕರಿಸುವ ಪಥ್ಯಗಳೇ. ಕೇವಲ ಕೆಲವು ಆಹಾರಗಳನ್ನು ಬಿಡುವುದು ಅಥವಾ ತಿನ್ನುವುದು ಮಾತ್ರವೇ ಪಥ್ಯವಲ್ಲ.

ಸಾಮಾನ್ಯವಾಗಿ ಮೇಹಿಗಳು ಅನ್ನವನ್ನು ಬಿಟ್ಟರೆ ಮೇಹ ಕಡಿಮೆಯಾಗುವುದು, ಚಪಾತಿ, ಮುದ್ದೆ ತಿಂದರೆ ಮೇಹ ಕಡಿಮೆಯಾಗುವುದು ಎಂದು ತಿಳಿದಿರುತ್ತಾರೆ. ಗೋಧಿ, ರಾಗಿ ಸೇವನೆ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಸೇವನಾಕ್ರಮ. ಕಾಲ ಮೀರಿ ಆಹಾರಸೇವನೆ, ಹಿಂದಿನ ದಿನದ ಉಳಿದಿರುವ ಆಹಾರ ಸೇವಿಸುವುದು, ತಯಾರಿಸಿದ ಪದಾರ್ಥಗಳನ್ನು ಪ್ರಿಜ್‌ನಲ್ಲಿಟ್ಟು ಪದೇ ಪದೇ ಬಿಸಿ ಮಾಡಿ ಎರಡು, ಮೂರು ದಿನ ಸೇವಿಸುವುದು, ಅತಿ ತಂಪಾದ ಪಾನೀಯಗಳು, ಮೊಸರು, ದೋಸೆಹಿಟ್ಟು – ಇತ್ಯಾದಿ ಹಿಟ್ಟುಗಳನ್ನು ತಯಾರಿಸಿ, ತಂಪುಪೆಟ್ಟಿಗೆಯಲ್ಲಿಟ್ಟು ಒಂದು ವಾರದವರೆಗೂ ಬಳಸುವುದು, ಉಟದ ಸಮಯದಲ್ಲಿ ಹಾಲಿಗೆ ಮೊಸರು ಅಥವಾ ಮಜ್ಜಿಗೆ ಬೆರೆಸಿ ತಿನ್ನುವುದು, ಸಂಪೂರ್ಣ ಹೆಪ್ಪಾಗಿರದ ಅರೆಮೊಸರಿನ ಸೇವನೆ, ಹಾಲಿನ ಜೊತೆಗೆ ಉಪ್ಪು, ಹುಳಿ, ಖಾರದ ಪದಾರ್ಥಗಳನ್ನು ಬೆರೆಸಿ ಸೇವಿಸುವುದು ಅಥವಾ ತಯಾರಿಸುವುದು, ಕೇವಲ ಉಪ್ಪು ಮತ್ತು ಹುಳಿಯನ್ನು ಬೆರೆಸಿ ತಿನ್ನುವುದು – ಉದಾಹರಣೆಗೆ, ಹುಳಿಹಣ್ಣಿನ ಪಾನಕಗಳಿಗೆ ಉಪ್ಪನ್ನು ಹಾಕಿ ಸೇವಿಸುವುದು, ಹುಳಿ ಇರುವ ಹಣ್ಣುಗಳನ್ನು ಮತ್ತು ಹಾಲನ್ನು ಬೆರೆಸಿ (ಮಿಲ್ಕ್ ಶೇಕ್ ಇತ್ಯಾದಿ) ಸೇವಿಸುವುದು – ಹೀಗೆ ಆಹಾರ ತಯಾರಿಕಾ ವಿಧಾನದ ತಪ್ಪುಗಳು ರಕ್ತದಲ್ಲಿ ಸಕ್ಕರೆಯ ಅಂಶವನ್ನು ಹೆಚ್ಚಿಸುತ್ತವೆ; ಗೋಧಿ, ರಾಗಿ, ಸಜ್ಜೆ, ನವಣೆ ಇವುಗಳನ್ನು ತಿನ್ನುವವರಲ್ಲೂ ಈ ತಪ್ಪು ಕ್ರಮಗಳಳು ರಕ್ತದಲ್ಲಿ ಸಕ್ಕರೆಯ ಅಂಶ ವೃದ್ಧಿಗೆ ಕಾರಣವಾಗುತ್ತವೆ. ಕೇವಲ ಗೋಧಿ, ರಾಗಿ, ಜೋಳ, ಸಜ್ಜೆ, ನವಣೆಗಳ ಸೇವನೆ ಮಾತ್ರವೇ ಮಧುಮೇಹವನ್ನು  ತಡೆಗಟ್ಟುವ ಆಹಾರಗಳಾಗಿದ್ದರೆ, ಉತ್ತರ ಕರ್ನಾಟಕ ಮತ್ತು ಉತ್ತರ ಭಾರತದಲ್ಲಿ ಮಧುಮೇಹ ರೋಗ ಇರಬಾರದಿತ್ತು. ಆದರೆ ವಾಸ್ತವಿಕತೆ ಹಾಗಿಲ್ಲ.

ಹಾಗಾದರೆ ಈ ರೀತಿಯ ಸೇವನಾವಿಧಾನವು ಅನೇಕ ಪ್ರದೇಶಗಳಲ್ಲಿ, ಬೇರೆ ಬೇರೆ ದೇಶಗಳಲ್ಲಿ ಕಾಣುತ್ತೇವೆ. ಅದು ಕೇವಲ ಆಯಾ ಪ್ರದೇಶದ ವಾತಾವರಣಕ್ಕೆ ಅನುಗುಣವಾಗಿ ಅಥವಾ ಅಲ್ಲಿ ಮಾಡುವ ಉದ್ಯೋಗಕ್ಕೆ ಅನುಗುಣವಾಗಿ ಕೆಲವು ಆಹಾರಕ್ರಮಗಳು ರೂಢಿಯಲ್ಲಿರುತ್ತವೆ. ಅವುಗಳನ್ನು ಅಲ್ಲಿಗೇ ಅಷ್ಟಕ್ಕೇ ಸೀಮಿತಗೊಳಿಸಬೇಕು. ಉದಾ, ರಾಜಸ್ಥಾನದ ಕೆಲವು ಆಹಾರಪದಾರ್ಥಗಳಿಗೆ ಹಾಲನ್ನು ಬೆರೆಸಿ ತಯಾರಿಸುತ್ತಾರೆ.

ಹೀಗೆ ಕೆಲವು ಸಂದರ್ಭಗಳಲ್ಲಿ ಅಥವಾ ಕೆಲವು ಕಾಲಗಳಲ್ಲಿ ಮಾತ್ರವೇ ಮಾಡಲಾಗುತ್ತದೆ. ಆದರೆ ಅದನ್ನೇ ಸಾರ್ವತ್ರಿಕವಾಗಿ ಬಳಸುವುದು,  ಎಲ್ಲಾ ಕಾಲದಲ್ಲೂ ಬಳಸುವುದು ವ್ಯಾಧಿಕಾರಕವಾಗುತ್ತದೆ. ಆಯಾಯ ಪ್ರದೇಶ ಅಥವಾ ದೇಶ, ಅವರು ಮಾಡುವ ವೃತ್ತಿಗೆ ಅನುಗುಣವಾದ ಆಹಾರಸೇವನೆಯು ರೋಗಗುಣವಾಗಲೂ, ರೋಗಬಾರದಂತೆ ತಡೆಗಟ್ಟಲೂ ಕಾರಣವಾಗುತ್ತದೆ.

ಯಾವುದೇ ಆಹಾರವನ್ನು ಸೇವಿಸಿದರೂ ಶಿಸ್ತಿನ ಜೀವನ ಎಂದರೆ ಬೆಳಗ್ಗೆ ಸೂರ್ಯೋದಯಕ್ಕೆ ಅಥವಾ ಅದಕ್ಕೂ ಮೊದಲೇ ಏಳುವುದು, ನಂತರ ನಿತ್ಯವಿಧಿಗಳನ್ನು ಮುಗಿಸಿ, ವ್ಯಾಯಮ ಮಾಡುವುದು. ಮೇಹಿಗಳಿಗೆ ಮಾಂಸಖಂಡಗಳ ಶಕ್ತಿ ಕುಗ್ಗುವುದು ಬೇಗ. ಹಾಗಾಗಿ ಎಲ್ಲಾ ಮಾಂಸಖಂಡಗಳೂ ಬಲಗೊಳ್ಳುವಂತಹ ವ್ಯಾಯಮಗಳನ್ನು ಮಾಡಬೇಕೇ ವಿನಾ (ಕಿವಿಗೂಟ – Earphone ಹಾಕಿಕೊಂಡು ಹಾಡು ಕೇಳಿ) ಕೇವಲ ನಡಿಗೆಯಷ್ಟೆ (Walking) ಸಾಕಾಗುವುದಿಲ್ಲ. ಹಾಗೆಂದು, ದಿನಕ್ಕೆ ಒಂದೊಂದೇ ಅಂಗಕ್ಕೆ ಹೆಚ್ಚಿನ ಪ್ರಾಶಸ್ತ್ಯ ಕೊಟ್ಟು ವ್ಯಾಯಾಮ ಮಾಡುವುದಲ್ಲ; ವಾರದ ಏಳೂ ದಿನವೂ ಎಲ್ಲಾ ಅಂಗಗಳಿಗೂ ಹಿತವಾಗುವಂತೆ ವ್ಯಾಯಾಮ ಮಾಡಬೇಕು.

ಅನೇಕರು ಹೇಳುವುದುಂಟು, ನಾನು ನಿತ್ಯವೂ ವ್ಯಾಯಾಮ ಮಾಡುತ್ತೇನೆ; ಆದರೂ ನನ್ನ ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಾಗಿದೆ ಎಂದು. ತಿಂದ ಆಹಾರ ಜೀರ್ಣವಾಗುವ ಮೊದಲೇ ವ್ಯಾಯಾಮ ಮಾಡಿದರೆ ಜೀರ್ಣಾಂಗಗಳ ರಕ್ತಪರಿಚಲನೆಯಲ್ಲಿ ವ್ಯತ್ಯಾಸವಾಗುವುದರಿಂದ ಮೇದೋಜೀರಕಗ್ರಂಥಿ, ಪಿತ್ತಜನಕಾಂಗಗಳ ಕಾರ್ಯಗಳಲ್ಲಿ ವ್ಯತ್ಯಾಸವಾಗುತ್ತದೆ. ನಿರಂತರವಾಗಿ ಆಗುವ ಈ ವ್ಯತ್ಯಾಸಗಳೇ ವ್ಯಾಧಿಕಾರಕಗಳಾಗುತ್ತವೆ. ಹಾಗೆಯೇ ಸೇವಿಸಿದ ಆಹಾರವು ಸಂಪೂರ್ಣವಾಗಿ ಜೀರ್ಣವಾಗುವ ಮೊದಲೇ ಸ್ನಾನ ಮಾಡಿದರೂ  ಚರ್ಮ ಮತ್ತು ಜೀರ್ಣಾಂಗಗಳ ರಕ್ತಪರಿಚಲನೆಯಲ್ಲಿ ಆಗುವ ಏರುಪೇರು ಅವುಗಳ ಕಾರ್ಯಕ್ಷಮತೆಯಲ್ಲಿ ವ್ಯತ್ಯಾಸವನ್ನುಂಟುಮಾಡಿ ಮೇಹ ಮೊದಲಾದ ರೋಗಗಳ ಉತ್ಪತ್ತಿಗೆ ಕಾರಣವಾಗುತ್ತದೆ.

ಮೇದೋಜೀರಕ ಗ್ರಂಥಿಯ ಕಾರ್ಯಕ್ಷಮತೆಯ ವ್ಯತ್ಯಾಸವೇ ಇನ್ಸುಲಿನ್ ಉತ್ಪತ್ತಿಯಲ್ಲಿ ವ್ಯತ್ಯಯವಾಗಲು ಕಾರಣ ಎಂದು ಎಲ್ಲರಿಗೂ ತಿಳಿದಿದೆ. ಮೇದೋಜೀರಕ ಗ್ರಂಥಿ ಜೀರ್ಣಕ್ರಿಯೆ ಮತ್ತು ಹಾರ್ಮೋನುಗಳನ್ನು ಉತ್ಪತ್ತಿ ಮಾಡುವ ಕ್ರಿಯೆ – ಎರಡನ್ನೂ ನಿರ್ವಹಿಸುತ್ತದೆ. ಜೀರ್ಣಕ್ರಿಯೆಗೆ ಸಂಬಂಧಪಟ್ಟಂತೆ ಕಾರ್ಯಕ್ಷಮತೆ ಹೆಚ್ಚಿಸಲು ಅಥವಾ ಕಾಪಾಡಲು ಆಹಾರ–ವಿಹಾರಗಳು ಮುಖ್ಯವಾದರೆ, ಹಾರ್ಮೋನುಗಳ ಸಮತ್ವನ್ನು ಕಾಜಆಡಲು ನಮ್ಮ ಮನಸ್ಸು, ಜೀವನಶೈಲಿ, ತೃಪ್ತಿ, ಸಮಾಧಾನ, ಸಂತೋಷಗಳು ಮುಖ್ಯವಾಗುತ್ತವೆ. ಇಂದಿನ ಕಾಲದಲ್ಲಿ ದೇಹದ ಅಂದವನ್ನು ಹೆಚ್ಚಿಸಲು, ದೇಹದ ತೂಕ ಹೆಚ್ಚಿಸಲು ಹಾರ್ಮೋನುಗಳನ್ನು ಸೇವಿಸುವವರ ಸಂಖ್ಯೆ ಅಧಿಕವಾಗುತ್ತಿದೆ.

ಇದು ನೇರವಾಗಿ ಮೇದೋಜೀರಕ ಗ್ರಂಥಿಯ ಮೇಲೆ ಪರಿಣಾಮ ಬೀರುತ್ತದೆ. ಪುರುಷರು ಅನೇಕರು ಮಾಂಸಖಂಡಗಳ ಬೆಳವಣಿಗೆಗಾಗಿ ಹಾರ್ಮೋನುಗಳನ್ನು, ಅನಗತ್ಯ ಪ್ರೊಟೀನುಗಳನ್ನು ಸೇವಿಸುವವರಿದ್ದಾರೆ. ಹಾಗೆಯೇ ಮುಟ್ಟಿನ ಸಮಸ್ಯೆಗಾಗಿ ಅಥವಾ ಯಾವುದೋ ಹಬ್ಬ, ಕಾರ್ಯಕ್ರಮ ಇದೆ ಎಂದು ಬೇರೆ ಊರುಗಳಿಗೆ ಪ್ರಯಾಣ ಮಾಡಬೇಕೆಂದು ತಮಗಿಷ್ಟವಾದಷ್ಟು ದಿನ ಮುಟ್ಟು ಮುಂದೆ ಹೋಗಲು ಅಥವಾ ಬೇಗನೇ ಆಗಲು ಹಾರ್ಮೋನು ಮಾತ್ರೆಗಳ ಮೊರೆ ಹೋಗುವವರು ಬಹಳಷ್ಟು ಮಂದಿ. ಇದೂ ಮಧುಮೇಹದ ಉತ್ಪತ್ತಿಗೆ ಮತ್ತು ವೃದ್ಧಿಗೆ ನೇರ ಕಾರಣವಾಗಬಲ್ಲದು. 

ಯಾವ ಯಾವ ಆಹಾರವನ್ನು ಸೇವಿಸುವುದು ಮಧುಮೇಹಿಗಳಿಗೆ ಹಿತಕರ? ಅಕ್ಕಿ ಅಥವಾ ಕೆಂಪು ಅಕ್ಕಿಯಿಂದ ಬಸಿದು ತಯಾರಿಸಿದ ಅನ್ನ, ಬಾರ್ಲಿಯಿಂದ ತಯಾರಿಸಿದ ಪದಾರ್ಥಗಳು, ಗೋಧಿ, ರಾಗಿ, ನವಣೆ ಸಜ್ಜೆ, ಬರಗು – ಇತ್ಯಾದಿ ಕಿರುಧಾನ್ಯಗಳ ಆಹಾರಪದಾರ್ಥಗಳು ಆರೋಗ್ಯಕರ. ಬೇಳೆಗಳಲ್ಲಿ ಕಡಲೆ, ತೊಗರಿ, ಹುರುಳಿ, ಹೆಸರು – ಇವುಗಳಿಂದ ತಯಾರಿಸಿದ ಆಹಾರ ಪದಾರ್ಥಗಳು, ಪಡುವಲ, ಹೀರೆ, ಗೋರಿಕಾಯಿ ಅಥವಾ ಚೌಳೆಕಾಯಿ, ಬೂದುಗುಂಬಳ, ಮೆಂತ್ಯದ ಸೊಪ್ಪು, ಸ್ವಲ್ಪ ಕಹಿ ಮತ್ತು ಒಗರಿರುವ ತರಕಾರಿಗಳು ಆರೋಗ್ಯಕರ.

ಹಾಗೆಂದು ಬೇವು, ಹಾಗಲಕಾಯಿಗಳ ರಸ ಅಥವಾ ಅದರಿಂದ ತಯಾರಿಸಿದ ಪದಾರ್ಥಗಳನ್ನು ನಿತ್ಯ ಆಹಾರದಂತೆ ಅಥವಾ ಔಷಧದಂತೆ ಸೇವಿಸುವುದು ಮಧುಮೇಹಿಗಳಿಗೆ ಒಳ್ಳೆಯದಲ್ಲ. ವೈದ್ಯರ ಸಲಹೆಯ ಮೇರೆಗೆ ಕೆಲವು ದಿನಗಳು ಮಾತ್ರ ಸೇವಿಸಬಹುದು. ಬೇವು, ಹಾಗಲಕಾಯಿಗಳನ್ನು ನಿತ್ಯ ಸೇವಿಸುವುದರಿಂದ ರಕ್ತದಲ್ಲಿ ಸಕ್ಕರೆ ಅಂಶ ಕಡಿಮೆ ಕಂಡುಬಂದರೂ, ಮೂತ್ರಕ್ಕೆ ಸಂಬಂಧಿಸಿದ ರೋಗಗಳು, ಸಂದಿಗಳಲ್ಲಿ ನೋವು, ಸೋಂಟನೋವು, ಹೊಟ್ಟೆನೋವು, ಅಮ್ಲಪಿತ್ತ ಹೆಚ್ಚಾಗುತ್ತದೆ. ನರದೌರ್ಬಲ್ಯವೂ ಬರಬಹುದು. ಕೆಲವೊಮ್ಮೆ ಹೃದ್ರೋಗಕ್ಕೂ ದಾರಿ ಮಾಡಿಕೊಡಬಹುದು.

ಹೀಗಾಗಿ ಅತಿಯಾಗಿ ಕಹಿಪದಾರ್ಥವನ್ನು ಸೇವಿಸುವುದು ನಿಷಿದ್ಧವೇ. ಹಣ್ಣುಗಳಲ್ಲಿ ಬೇಲದಹಣ್ಣು, ಬಿಲ್ವದ ಹಣ್ಣು, ನೇರಳೆಹಣ್ಣು, ಸೀಬೆಕಾಯಿ ಅಥವಾ ಚೇಪೆಕಾಯಿ – ಇವುಗಳು ಇವುಗಳಿಂದ ತಯಾರಿಸಿದ ಪಾನಕ, ಇವುಗಳು ಮಧುಮೇಹಿಗಳಿಗೆ ಔಷಧ ಮತ್ತು ಆಹಾರ ಎರಡೂ ಆಗುತ್ತದೆ. ಅಲ್ಲಗೆ ಅಮೃತಬಳ್ಳಿ, ಪಡವಲದ ಎಲೆ ಇವುಗಳಿಂದ ತಯಾರಿಸಿದ ಪಲ್ಯ, ಹೊಂಗೆ ಚಿಗುರಿನ ರೊಟ್ಟಿ – ಇವು ಮಧುಮೇಹಿಗಳಿಗೆ ಸದಾ ಪಥ್ಯಗಳೇ ಆಗಿವೆ.

ಶಾರೀರಿಕವಾಗಿ, ಮಾನಸಿಕವಾಗಿ, ಆಧ್ಯಾತ್ಮಿಕವಾಗಿ ಸಮತೋಲನವನ್ನು ಕಾಪಾಡಿಕೊಂಡಲ್ಲಿ ಆಹಾರ–ಆಚಾರ–ವಿಚಾರಗಳು ಸನ್ಮಾರ್ಗದಲ್ಲಿ ಇದ್ದಲ್ಲಿ ರೋಗವನ್ನು ತಡೆಗಟ್ಟಬಹುದು;  ಗುಣಪಡಿಸಿಕೊಳ್ಳಬಹುದು.

Tags: 

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !