ಗುರುವಾರ , ಮಾರ್ಚ್ 4, 2021
19 °C
ನಾಟಕೋತ್ಸವಕ್ಕೆ ಚಾಲನೆ ನೀಡಿ ಸಿ.ಎಸ್. ನಿರಂಜನ್‌ಕುಮಾರ್‌ ಅಭಿಮತ

ಸ್ಥಳೀಯ ಕಲಾವಿದರಿಗೆ ಆದ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ‘ಈ ಬಾರಿ ದಸರಾ ವೇದಿಕೆ ಕಾರ್ಯಕ್ರಮಗಳನ್ನು ವಿಸ್ತರಿಸುವ ಮೂಲಕ ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡಲಾಗಿದೆ’ ಎಂದು ಶಾಸಕ ಸಿ.ಎಸ್‌. ನಿರಂಜನಕುಮಾರ್‌ ಹೇಳಿದರು.

ನಗರದ ಜೆ.ಎಚ್. ಪಟೇಲ್‌ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ನಾಟಕೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. 2013ರಿಂದ ಜಿಲ್ಲೆಯಲ್ಲಿ ದಸರಾ ಆರಂಭಗೊಂಡು ಇಂದಿಗೂ ಮುಂದುವರಿಸಲಾಗುತ್ತಿದೆ. ಈ ಬಾರಿ ಕಲಾವಿದರಿಗೆ ಹೆಚ್ಚಿನ ಅವಕಾಶ ಕಲ್ಪಿಸುವ ಉದ್ದೇಶದಿಂದ ಮೂರು ವೇದಿಕೆ ನಿರ್ಮಾಣ ಮಾಡಲಾಗಿದೆ ಎಂದರು.

ನಾಟಕೋತ್ಸವ: ಜಿಲ್ಲೆ ಜನಪದ ಕಲೆಗಳ ತವರೂರು ಸಾಮಾಜಿಕ ಚಟುವಟಿಕೆಗೆ ಕೊರತೆ ಇಲ್ಲ. ಆದ್ದರಿಂದ ಇಲ್ಲಿನ ದಸರಾ ಸಂದರ್ಭದಲ್ಲಿ ನಾಟಕಕ್ಕೆ ವೇದಿಕೆ ಕಲ್ಪಿಸಲಾಗಿದೆ. ನಾಡಹಬ್ಬ ವಿಸ್ತಾರಗೊಂಡಿದೆ. ಉತ್ತಮ ರಂಗಭೂಮಿ ಕಲಾವಿದರು ಹೊರಬರಬೇಕು. ಸ್ಥಳೀಯ ಕಲಾವಿದರು ಇದರ ಸದುಪಯೋಗ ಪಡೆದುಕೊಳ್ಳಬೇಕಿದೆ ಎಂದ ಅವರು, ಹೆಚ್ಚಿನ ಪ್ರಮಾಣದಲ್ಲಿ ಸಾರ್ವಜನಿಕರು ದಸರಾ ವೀಕ್ಷಣೆಗೆ ಬರುತ್ತಿದ್ದಾರೆ ಎಂದು ಹೇಳಿದರು.

ಪ್ರೇಕ್ಷಕರೇ ಜೀವಾಳ: ಶಾಸಕ ಸಿ. ಪುಟ್ಟರಂಗಶೆಟ್ಟಿ ಮಾತನಾಡಿ, ‘ಜಿಲ್ಲೆಯಲ್ಲಿ ಈ ಬಾರಿ ಅದ್ದೂರಿ ದಸರಾ ಅಗತ್ಯವಿಲ್ಲ ಎಂದು ಕೆಲವರು ಹೇಳುತ್ತಾರೆ. ಆದರೆ ವರ್ಷಕ್ಕೊಮ್ಮೆ ಗತವೈಭವ ಸಾರುವ ದಸರಾ ಬೇಕೇ ಬೇಕು ಎನ್ನುವುದು ನನ್ನ ಅಭಿಪ್ರಾಯ. ಮೈಸೂರಿಗೆ ಹೋಗಿ ದಸರಾ ನೋಡಲು ಸಾಧ್ಯವಿಲ್ಲ. ನಮ್ಮ ಜಿಲ್ಲೆ ಕಲೆಗಳ ತವರೂರು ಹೀಗಾಗಿ ದಸರಾ ಸಡಗರ ಅತ್ಯಗತ್ಯ. ಅಂತಹ ವೈಭವವನ್ನು ಕಣ್ತುಂಬಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ ಎಂದ ಅವರು, ಪವರಾಣಿಕ ನಾಟಕಗಳಿಗೆ ಪ್ರೇಕ್ಷಕರೇ ಜೀವಾಳ. ಅವರು ಆಗಮಿಸಿ ರಂಗಭೂಮಿ ಕಲಾವಿದರಿಗೆ ಪ್ರೋತ್ಸಾಹದ ಚಪ್ಪಾಳೆ ನೀಡಬೇಕು’ ಎಂದು ಮನವಿ ಮಾಡಿದರು.

ರಂಗಭೂಮಿ ಕಲಾವಿದೆ ಪಂಕಜಾ ರವಿಶಂಕರ್ ಮಾತನಾಡಿ, ‘ಪೌರಾಣಿಕ ಹಾಗೂ ಸಾಮಾಜಿಕ ನಾಟಕಗಳಿಗೆ ವ್ಯತ್ಯಾಸವಿದೆ. ಪೌರಾಣಿಕ ರಂಗಭೂಮಿ ಕಲಾವಿದರು ತಮ್ಮ ಪರಿಕರಗಳನ್ನು ಹೊತ್ತುಕೊಂಡು ಪ್ರದೇಶದಿಂದ ಪ್ರದೇಶಕ್ಕೆ ಪ್ರಯಾಣ ಬೆಳೆಸುತ್ತಾರೆ. ಮುಂದಿನ ದಿನಗಳಲ್ಲಿ ಅವಕಾಶದೊಂದಿಗೆ ಸ್ವಲ್ಪ ಹೆಚ್ಚಿನ ಸಂಭಾವನೆಯನ್ನು ನೀಡಬೇಕು. ಇದರಿಂದ ರಂಗ ಕಲಾವಿದರಿಗೆ ಆರ್ಥಿಕವಾಗಿ ಸಹಾಯ ಮಾಡಿದಂತೆ ಆಗಲಿದೆ’ ಎಂದು ಮನವಿ ಮಾಡಿದ ಅವರು, ವೇದಿಕೆಯಲ್ಲಿ ಕುರುಕ್ಷೇತ್ರ ನಾಟಕದ ದೃಶ್ಯಯೊಂದರ ಸಂಭಾಷಣೆ ಹೇಳಿ ಜನರ ಮನಸೆಳೆದರು.

ವೇದಿಕೆಯಲ್ಲಿ ಸಿದ್ದಮಲ್ಲೇಶ್ವರ ಕಲಾ ವೃಂದದವರಿಂದ ‘ದಕ್ಷ ಯಜ್ಞ’ ನಾಟಕ ಪ್ರದರ್ಶನ ನಡೆಯಿತು. ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ, ಸಿಇಒ ಬಿ.ಎಚ್. ನಾರಾಯಣರಾವ್ ಇದ್ದರು.

ಆಹಾರ ಮೇಳ: ದಸರಾ ಅಂಗವಾಗಿ ನಗರದ ಪೇಟೆಪ್ರೈಮರಿ ಶಾಲಾ ಆವರಣದಲ್ಲಿ ಆಹಾರ ಮೇಳೆ ಆಯೋಜಿಸಲಾಗಿತ್ತು. ಸುಮಾರು 15 ಮಳಿಗೆಗಳನ್ನು ನಿರ್ಮಿಸಲಾಗಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.