ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2023 ಮರೆಯುವ ಮುನ್ನ | ಬಾಗಲಕೋಟೆ: ರೈತರಿಗೆ ಸಂಕಷ್ಟ, ಉದ್ಯಮಿಗಳಿಗೂ ನಷ್ಟ..

Published 31 ಡಿಸೆಂಬರ್ 2023, 4:53 IST
Last Updated 31 ಡಿಸೆಂಬರ್ 2023, 4:53 IST
ಅಕ್ಷರ ಗಾತ್ರ

ಬಾಗಲಕೋಟೆ: ಬರದಿಂದ ರೈತರಿಗೆ ಎದುರಾಗಿರುವ ಸಂಕಷ್ಟ, ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಮೇಲುಗೈ, ಕಾರ್ಯಾರಂಭ ಮಾಡದ ರೈತರ ಸಹಕಾರಿ ಸಕ್ಕರೆ ಕಾರ್ಖಾನೆ, ಕೊರತೆ ಎದುರಿಸುತ್ತಿರುವ ವಿಶ್ವವಿದ್ಯಾಲಯಗಳು, ಆರಂಭವಾಗದ ಸರ್ಕಾರಿ ವೈದ್ಯಕೀಯ ಕಾಲೇಜು.. ಸೇರಿದಂತೆ ಹಲವು ಘಟನೆಗಳಿಗೆ 2023ರಲ್ಲಿ ಜಿಲ್ಲೆಯ ಜನತೆ ಸಾಕ್ಷಿಯಾದರು.

ಜಿಲ್ಲೆಯ ಎಲ್ಲ ತಾಲ್ಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಿರುವುದರಿಂದ ಜಿಲ್ಲೆಯ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ₹1,997 ಕೋಟಿ ಬೆಳೆ ಹಾನಿಯಾಗಿದೆ. ಬೆಳೆ ಬಂದಿದ್ದರೂ ಇಳುವರಿ ಪ್ರಮಾಣ ತೀವ್ರ ಕುಸಿತಗೊಂಡಿದೆ. ವೆಚ್ಚ ಹೆಚ್ಚಾಗಿದ್ದರೂ, ಇಳುವರಿ ಬಾರದ್ದರಿಂದ ರೈತರ ನಷ್ಟದ ಪ್ರಮಾಣ ಹೆಚ್ಚಿದೆ.

ಮುಂಗಾರು, ಹಿಂಗಾರು ಮಳೆಗಳೆರಡೂ ಕೈ ಕೊಟ್ಟಿದ್ದರಿಂದ ರೈತರು ಕಂಗಾಲಾಗಿದ್ದಾರೆ. ದುಡಿಯಲೂ ಕೆಲಸವಿಲ್ಲದಂತಾಗಿದೆ. ನರೇಗಾದಡಿ ಕೂಲಿಯ ಅವಧಿಯನ್ನು 100 ದಿನಗಳಿಂದ 150 ದಿನಕ್ಕೆ ಹೆಚ್ಚಿಸಬೇಕು ಎಂಬ ಬೇಡಿಕೆಗೆ ಇಲ್ಲಿಯವರೆಗೆ ಸ್ಪಂದನೆ ಸಿಕ್ಕಿಲ್ಲ. ರಾಜ್ಯ ಸರ್ಕಾರ ತಾತ್ಕಾಲಿಕವಾಗಿ ₹2 ಸಾವಿರ ಪರಿಹಾರ ಘೋಷಣೆ ಮಾಡಿದೆಯಾದರೂ, ಬಿಡುಗಡೆಯಾಗಿಲ್ಲ. ಕೇಂದ್ರದ ಅಧಿಕಾರಿಗಳ ತಂಡ ಪರಿಶೀಲನೆ ಮಾಡಿಕೊಂಡು ಹೋಗಿದ್ದರೂ, ಪರಿಹಾರ ಮಾತ್ರ ಬಂದಿಲ್ಲ.

ಜಿಲ್ಲೆಯಲ್ಲಿ ರಬಕವಿ–ಬನಹಟ್ಟಿ, ಇಳಕಲ್‌, ಗುಳೇದಗುಡ್ಡ, ಬಾಗಲಕೋಟೆ ಸೇರಿದಂತೆ ಹಲವು ತಾಲ್ಲೂಕುಗಳಲ್ಲಿ ನೇಕಾರರಿದ್ದಾರೆ. ನೇಕಾರರ ಬಹುತೆಕ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ. ಹಾಗಾಗಿ, ವರ್ಷಪೂರ್ತಿ ಹೋರಾಟ ನಡೆಸಿಕೊಂಡೇ ಬಂದಿದ್ದಾರೆ. ಬೆಳಗಾವಿಯ ಸುವರ್ಣಸೌಧದಲ್ಲಿ ಅಧಿವೇಶನ ನಡೆದಾಗಲೂ ಅಲ್ಲಿಗೆ ಪ್ರತಿಭಟನೆ ಮಾಡಲು ತೆರಳಿದ್ದರು.

ವಿಧಾನಸಭಾ ಚುನಾವಣೆಯ ವಿಜಯೋತ್ಸವದ ದೃಶ್ಯ

ವಿಧಾನಸಭಾ ಚುನಾವಣೆಯ ವಿಜಯೋತ್ಸವದ ದೃಶ್ಯ

ಜಿಲ್ಲೆಗೆ ಹೆಸರು ತಂದಿದ್ದ ಇಳಕಲ್‌ನ ಗ್ರಾನೈಟ್ ಉದ್ಯಮ ಸಹ ಸಂಕಷ್ಟ ಎದುರಿಸುತ್ತಿದೆ. ಉದ್ಯಮಕ್ಕೆ ನೆರವು ನೀಡಬೇಕು ಎಂಬ ಉದ್ಯಮಿಗಳ ಕೂಗು ಸರ್ಕಾರಕ್ಕೆ ಮುಟ್ಟದ್ದರಿಂದ ಉದ್ಯಮ ಮಂಕಾಗಿ, ಹಲವರು ಉದ್ಯೋಗ ಕಳೆದುಕೊಂಡಿದ್ದಾರೆ.

2014ರಲ್ಲಿ ಘೋಷಣೆಯಾಗಿದ್ದ ಸರ್ಕಾರಿ ವೈದ್ಯಕೀಯ ಕಾಲೇಜು ಈ ವರ್ಷವಾದರೂ ಆರಂಭವಾಗುತ್ತದೆ ಎಂಬ ಜಿಲ್ಲೆಯ ಜನರ ಆಸೆ ಈಡೇರಿಲ್ಲ. ಅದರೊಂದಿಗೆ ಏಮ್ಸ್ ಆರಂಭಿಸಬೇಕು ಎಂಬ ಕೂಗಿಗೆ ಯಾರೂ ಸ್ಪಂದಿಸಿಲ್ಲ. ಬಾಗಲಕೋಟೆ– ಕುಡಚಿ ರೈಲು ಮಾರ್ಗ ಈ ವರ್ಷವೂ ಪೂರ್ಣಗೊಂಡಿಲ್ಲ. ಎರಡು ದಶಕಗಳಿಂದ ನಡದೇ ಇದೆ.

ಕೊರತೆಗಳ ನಡುವೆಯೇ ಮೂವರು ಸಾಧಕರು ಹಾಗೂ ಸಂಸ್ಥೆಯೊಂದಕ್ಕೆ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿರುವುದು ಸಂತಸ ಸಂಗತಿ. ಇಳಕಲ್‌ನ ವಿಶ್ವನಾಥ ವಂಶಾಕೃತಮಠ, ಬೀಳಗಿಯ ತಯ್ಯಬ್‌ ಖಾನ್‌, ಬಾದಾಮಿಯ ಶಿವರಡ್ಡಿ ವಾಸನ ಜೊತೆಗೆ ಇಳಕಲ್‌ನ ಸ್ನೇಹ ರಂಗ ಸಂಸ್ಥೆಗೆ ಪ್ರಶಸ್ತಿ ಸಿಕ್ಕಿದೆ. ಶಿಕ್ಷಕಿ ಸಪ್ನಾ ಅನಿಗೋಳ ರಾಷ್ಟ್ರಮಟ್ಟದ ಶಿಕ್ಷಕಿ ಪ್ರಶಸ್ತಿ ಪಡೆದಿದ್ದಾರೆ.

ಬಾಗಲಕೋಟೆ ನಗರದಲ್ಲಿ ರಾತ್ರೋರಾತ್ರಿ ಸ್ಥಾಪನೆಯಾಗಿದ್ದ ಶಿವಾಜಿ ಮೂರ್ತಿ ತೆರವು ಪ್ರಕರಣ ಗದ್ದಲಕ್ಕೆ ಕಾರಣವಾಯಿತು. ನ್ಯಾಯಾಲಯ ಆದೇಶದಂತೆ ಸ್ಥಾಪನೆ ಮಾಡುವಂತಿಲ್ಲ ಎಂದು ಜಿಲ್ಲಾಡಳಿತ ಮೂರ್ತಿ ತೆರವುಗೊಳಿಸಿತು. ಇದನ್ನು ಖಂಡಿಸಿ, ಮೂರ್ತಿ ಪ್ರತಿಷ್ಠಾಪನೆಗೆ ಆಗ್ರಹಿಸಿ ಧರಣಿ, ಪ್ರತಿಭಟನೆಗಳು ನಡೆದವು. ಈಗಲೂ ಮೂರ್ತಿ ಸ್ಥಾಪಿಸಿದ್ದ ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್‌ ಒದಗಿಸಲಾಗಿದೆ. ಕೂಡಲಸಂಗಮದಲ್ಲಿ ಪ್ರತಿ ವರ್ಷ ಬಸವ ಧರ್ಮ ಪೀಠದಿಂದ ಶರಣ ಮೇಳ ನಡೆಯುತ್ತದೆ. ಈ ಬಾರಿ ಅಲ್ಲಿಗೆ ಸಮೀಪದ ಹೂವನೂರಿನಲ್ಲಿ ಮೊದಲ ಬಾರಿಗೆ ಪರ್ಯಾಯ ಶರಣ ಮೇಳ ಆಯೋಜಿಸಲಾಗಿತ್ತು. 

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ರೈತರೇ ನಿರ್ಮಿಸಿಕೊಂಡಿರುವ ತೇಲು ಸೇತುವೆ

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ರೈತರೇ ನಿರ್ಮಿಸಿಕೊಂಡಿರುವ ತೇಲು ಸೇತುವೆ

ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಬಳಿ ಇದ್ದ ₹377 ಕೋಟಿ ಕಾರ್ಪಸ್‌ ಫಂಡ್‌ ವಾಪಸ್‌ ಪಡೆದಿದ್ದರಿಂದ ನವನಗರದ ನಿವಾಸಿಗಳು ಪರದಾಡಬೇಕಾಯಿತು. ವಾರಗಟ್ಟಲೇ ಕಸ ತೆಗೆಯಲಿಲ್ಲ. ಬೀದಿಯ ವಿದ್ಯುತ್ ದೀಪಗಳೂ ಬೆಳಗಿಲ್ಲ. ನೀರೂ ಪೂರೈಕೆ ಸಹ ಸ್ಥಗಿತಗೊಳಿಸಲಾಗಿತ್ತು. ಶಾಸಕ ಎಚ್.ವೈ. ಮೇಟಿ ಅವರ ಪ್ರಯತ್ನದ ಫಲವಾಗಿ ನಿರ್ವಹಣೆಗೆ ₹50 ಕೋಟಿ ಬಿಡುಗಡೆ ಸರ್ಕಾರ ಒಪ್ಪಿಕೊಂಡಿದೆ. ಇನ್ನೂ ಕಾರ್ಪಸ್‌ ಫಂಡ್ ಮರಳಿ ನೀಡಬೇಕಿದೆ.

ರೈತ ಮುಖಂಡ ಯಲ್ಲಪ್ಪ ಹೆಗಡೆ ಮೇಲೆ ಹಲ್ಲೆ ನಡೆಯಿತು. ಎಲ್ಲ ಸಂಕಷ್ಟಗಳ ಮಧ್ಯೆ ಪ್ರತಿ ಟನ್‌ ಕಬ್ಬಿಗೆ ₹3 ಸಾವಿರ ಆಸು–ಪಾಸಿನಲ್ಲಿ ಕಾರ್ಖಾನೆಗಳು ಬೆಲೆ ನೀಡಿದ್ದರಿಂದ ಕಬ್ಬು ಬೆಳೆಗಾರರ ಹೋರಾಟ ನಡೆಯಲಿಲ್ಲ. ಜಮಖಂಡಿ ತಾಲ್ಲೂಕಿನ ಕಂಕಣವಾಡಿಯಲ್ಲಿ ಕೃಷ್ಣಾ ನದಿ ದಾಟಲು ಸೇತುವೆ ನಿರ್ಮಿಸಿ ಗಮನ ಸೆಳೆದರು.

ರಾಜಕೀಯದಲ್ಲಿ ಅಧಿಕಾರ ಪಲ್ಲಟ

ವಿಧಾನಸಭೆ ಚುನಾವಣೆಯಲ್ಲಿ ಮತದಾರ ತೆಗೆದುಕೊಂಡ ನಿರ್ಧಾರದಿಂದಾಗಿ ರಾಜಕೀಯ ಅಧಿಕಾರ ಪಲ್ಲಟವಾಗಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರ ಕಳೆದುಕೊಂಡು, ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿದೆ. ಹಾಗೆಯೇ ಜಿಲ್ಲೆಯ ಬಿಜೆಪಿ ನಾಯಕರು ಸೋಲುಂಡು, ಕಾಂಗ್ರೆಸ್‌ ನಾಯಕರು ಗೆಲುವು ಸಾಧಿಸಿದ್ದಾರೆ. ಇಬ್ಬರಿದ್ದ ಕಾಂಗ್ರೆಸ್‌ ಶಾಸಕರ ಸಂಖ್ಯೆ ಐದಕ್ಕೇರಿದೆ.

ಗೋವಿಂದ ಕಾರಜೋಳ, ಮುರುಗೇಶ ನಿರಾಣಿ ಚುನಾವಣೆಯಲ್ಲಿ ಸೋತು ಮಾಜಿ ಸಚಿವರಾಗಿದ್ದಾರೆ. ವೀರಣ್ಣ ಚರಂತಿಮಠ, ಆನಂದ ನ್ಯಾಮಗೌಡ ಸಹ ಸೋಲನುಭವಿಸಿದರು. ಎರಡು ದಶಕಗಳ ನಂತರ ಮುಧೋಳ ವಿಧಾನಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿದ ಆರ್.ಬಿ. ತಿಮ್ಮಾಪುರ ಈಗ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ. 

ಸಿದ್ದು ಸವದಿ ಜಿಲ್ಲೆಯಿಂದ ಮರು ಆಯ್ಕೆಯಾದ ಏಕೈಕ ಶಾಸಕ. ಹಳೆಯ ಹುಲಿಗಳಾದ ಎಚ್‌.ವೈ. ಮೇಟಿ, ಜೆ.ಟಿ. ಪಾಟೀಲ ಮತ್ತೇ ಶಾಸಕರಾದರು. ಭೀಮಸೇನ ಚಿಮ್ಮನಕಟ್ಟಿ, ಜಗದೀಶ ಗುಡಗುಂಟಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದಾರೆ.

ಘಟಾನುಘಟಿಗಳ ಪ್ರಚಾರ

ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಘಟಾನುಘಟಿ ನಾಯಕರೇ ಪಾಲ್ಗೊಂಡಿದ್ದರು.

ಕೂಡಲಸಂಗಮದಲ್ಲಿ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಪರೋಕ್ಷವಾಗಿ ಚುನಾವಣಾ ಪ್ರಚಾರಕ್ಕೆ ಮುಂದಾಗಿದ್ದರು. ಬಾದಾಮಿಗೆ ಪ್ರಧಾನಿ ನರೇಂದ್ರ ಮೋದಿಯೇ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಬಂದಿದ್ದರು. ಕಾಂಗ್ರೆಸ್‌ ನಾಯಕಿ ಪ್ರಿಯಾಂಕ ಗಾಂಧಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದರು. ಚಿತ್ರ ನಟ ಸುದೀಪ ಸೇರಿದಂತೆ ಚಿತ್ರರಂಗದ ಹಲವರೂ ಪ್ರಚಾರ ಮಾಡುವ ಮೂಲಕ ಚುನಾವಣಾ ಕಣ ರಂಗೇರಿಸಿದ್ದರು.

ಒಂದಕ್ಕೆ ಸಿಬ್ಬಂದಿ ಇಲ್ಲ... ಮತ್ತೊಂದಕ್ಕೆ ಕುಲಪತಿಯಿಲ್ಲ...!

ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ಬಾಗಲಕೋಟೆ ವಿಶ್ವವಿದ್ಯಾಲಯ ಆರಂಭಗೊಂಡಿದೆ. ಅದಕ್ಕೆ, ಸುಸಜ್ಜಿತ ಕಟ್ಟಡದ ಕೊರತೆ ಇದೆ. ಘೋಷಿಸಿದ ಅನುದಾನವೂ ಬಿಡುಗಡೆಯಾಗಿಲ್ಲ. ಸಿಬ್ಬಂದಿ ಕೊರತೆಯೂ ಕಾಡುತ್ತಿದೆ. ಬೋಧನೆಗೆ ಅತಿಥಿ ಉಪನ್ಯಾಸಕರನ್ನೇ ನಂಬಬೇಕಾದ ಸ್ಥಿತಿ ಇದ್ದರೆ, ಬೋಧಕೇತರ ಸಿಬ್ಬಂದಿಯ ಕೊರತೆಯೂ ಇದೆ.

ನೀರಿಲ್ಲದೆ ಕೆರೆ ಒಣಗಿರುವುದು

ನೀರಿಲ್ಲದೆ ಕೆರೆ ಒಣಗಿರುವುದು

ಇನ್ನೊಂದೆಡೆ ದಶಕದ ಹಿಂದೆಯೇ ಆರಂಭಗೊಂಡಿರುವ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೂ ಕುಲಪತಿಯ ನೇಮಕವಾಗಿಲ್ಲ. ಹಲವು ತಿಂಗಳುಗಳಿಂದ ಪ್ರಭಾರ ಕುಲಪತಿಯೇ ಆಡಳಿತ ನಡೆಸುತ್ತಿದ್ದಾರೆ.

ಆರಂಭವಾಗದ ಸಕ್ಕರೆ ಕಾರ್ಖಾನೆ

ಜಿಲ್ಲೆಯ ಏಕೈಕ ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ಈ ವರ್ಷ ಕಾರ್ಯಾರಂಭ ಮಾಡಲಿಲ್ಲ. ನಷ್ಟದಲ್ಲಿರುವ ಸಕ್ಕರೆ ಕಾರ್ಖಾನೆಯನ್ನು ಆಡಳಿತ ಮಂಡಳಿ ನಡೆಸಿಕೊಂಡು ಹೊರಟಿತ್ತು. ವಿಧಾನಸಭಾ ಚುನಾವಣೆ ನಂತರ ಏಕಾಏಕಿ ಕಾರ್ಖಾನೆ ಆಡಳಿತ ಮಂಡಳಿ ರಾಜೀನಾಮೆ ನೀಡಿದೆ. ಆಡಳಿತಾಧಿಕಾರಿ ನೇಮಕ ಮಾಡಿ, ಕಾರ್ಖಾನೆ ಲೀಸ್ ಆಧಾರದ ಮೇಲೆ ನೀಡಲು ನಿರ್ಧರಿಸಿ ಸರ್ಕಾರ ಕಾರ್ಖಾನೆ ಚಾಲನೆಗೆ ಯತ್ನಿಸಿತು. 

ಮಂದಗತಿಯಲ್ಲಿ ಯುಕೆಪಿ ಯೋಜನೆ

ಬಾಗಲಕೋಟೆ ಸೇರಿದಂತೆ ಈ ಭಾಗದ ಜಿಲ್ಲೆಗಳ ಜೀವನಾಡಿ ಯೋಜನೆ ಕೃಷ್ಣಾ ಮೇಲ್ದಂಡೆ ಯೋಜನೆ ಜಾರಿ ಅತಂತ್ರವಾಗಿದೆ.

ದೊಡ್ಡ ಮೊತ್ತದ ಅವಶ್ಯಕತೆ ಇದ್ದರೂ, ಅಲ್ಪ ಪ್ರಮಾಣದಲ್ಲಿ ಅನುದಾನ ನೀಡುತ್ತಿರುವುದರಿಂದ ಯುಕೆಪಿ ಯೋಜನೆ ಮಂದಗತಿಯಲ್ಲಿ ನಡೆದಿದೆ.  ಸಂತ್ರಸ್ತರ ಸಂಕಷ್ಟಗಳಿಗೆ ಪರಿಹಾರ ಒದಗಿಸುವುದಾಗಿ ಹಿಂದಿನ ಸರ್ಕಾರದಲ್ಲಿ ಸಚಿವರಾಗಿದ್ದ ಆರ್‌. ಅಶೋಕ ಕಲಾದಗಿಯಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದರು. ಆದರೂ, ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ. ಹೊಸ ಸರ್ಕಾರದಲ್ಲಿಯೂ ಸ್ಪಂದನೆ ಅಷ್ಟಕಷ್ಟೇ ಎನ್ನುವಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT