ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಹೊಳೆ: ಕಲಾ ವೈಭವ ಮರುಕಳಿಸಲು ಕ್ರಮ

ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸಚಿವ ಎಚ್‌.ಕೆ. ಪಾಟೀಲ
Published 14 ಮಾರ್ಚ್ 2024, 14:42 IST
Last Updated 14 ಮಾರ್ಚ್ 2024, 14:42 IST
ಅಕ್ಷರ ಗಾತ್ರ

ಬಾಗಲಕೋಟೆ: ಚಾಲುಕ್ಯರ ಕಲೆಯ ವೈಭವವನ್ನು ರಕ್ಷಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಲಿದೆ. ಐಹೊಳೆಯಲ್ಲಿ ದೇವಸ್ಥಾನಕ್ಕೆ ಹೊಂದಿಕೊಂಡಿರುವ 114 ಮನೆಗಳ ಸ್ಥಳಾಂತರ ಕಾರ್ಯಕ್ಕೆ ₹3.30 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಎಚ್‌.ಕೆ. ಪಾಟೀಲ ಹೇಳಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 8 ದೇವಾಲಯಗಳ ಅಭಿವೃದ್ಧಿ ಕಾರ್ಯವನ್ನು ಧರ್ಮಸ್ಥಳ ಮಂಜುನಾಥೇಶ್ವರ ಟ್ರಸ್ಟ್‌ಗೆ ವಹಿಸಲಾಗಿದೆ. ಇನ್ನುಳಿದ ದೇವಾಲಯಗಳ ಅಭಿವೃದ್ಧಿಗೆ ಯಾರೇ ಮುಂದೆ ಬಂದರೂ ನೀಡಲಾಗುವುದು ಎಂದರು.

ಮನೆಗಳ ಸ್ಥಳಾಂತರಕ್ಕೆ 14 ಎಕರೆ ಭೂಮಿ ಖರೀದಿ ಮಾಡಲಾಗುತ್ತಿದೆ. ಪ್ರಾಧಿಕಾರಕ್ಕೂ ಚಾಲನೆ ನೀಡಲಾಗಿದೆ. ಜತೆಗೆ 3 ಸ್ಟಾರ್ ಹೋಟೆಲ್‌ ನಿರ್ಮಾಣಕ್ಕೂ ಸರ್ಕಾರ ಮುಂದಾಗಿದೆ ಎಂದು ಹೇಳಿದರು.

ಲೋಕಸಭಾ ಚುನಾವಣೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ನೀಡಿದ್ದ ಗ್ಯಾರಂಟಿಗಳಿಂದ ಕೇಂದ್ರವೇ ನಡುಗಿ ಹೋಗಿದೆ. ಪ್ರಧಾನಿ ಮೋದಿ ಅವರು ಎಲ್ಲದಕ್ಕೂ ಗ್ಯಾರಂಟಿ ಎಂದು ಜಪಿಸುತ್ತಿದ್ದಾರೆ ಎಂದು ಟೀಕಿಸಿದರು.

ಶಕ್ತಿ ಯೋಜನೆಯ ಲಾಭವನ್ನು 3.79 ಕೋಟಿ ಜನರು ಪಡೆದುಕೊಂಡಿದ್ದಾರೆ. ಕೆಲವೇ ತಿಂಗಳುಗಳಲ್ಲಿ 1.10 ಕೋಟಿ ಜನರನ್ನು ಬಡತನ ರೇಖೆಯಿಂದ ಮೇಲೆತ್ತಲಾಗಿದೆ. ಪಾರದರ್ಶಕವಾಗಿ ಅವರ ಖಾತೆಗೆ ಅನುದಾನ ಬಿಡುಗಡೆ ಮಾಡಲಾಗುತ್ತಿದೆ ಎಂದರು.

ಕಪ್ಪು ಹಣ ತಂದು ಪ್ರತಿಯೊಬ್ಬರ ಖಾತೆಗೆ ₹15 ಲಕ್ಷ ಹಾಕುತ್ತೇವೆ ಎಂದಿದ್ದರು. ಯಾರದ್ದಾದರೂ ಖಾತೆಗೆ ಹಣ ಹಾಕಿದ್ದಾರೆಯೇ? ರೈತರ ಆದಾಯ ದುಪ್ಪಟ್ಟು ಮಾಡಲಾಗುವುದು ಎಂದಿದ್ದರು. ಮಾಡಿದ್ದಾರೆಯೇ? ಜನರ ಮನಸ್ಸು ಕೆಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಚುನಾವಣಾ ಬಾಂಡ್‌ ವಿಷಯದಲ್ಲಿ ಎಸ್‌ಬಿಐ ಮಾಹಿತಿ ನೀಡಲು ಹಿಂದೇಟು ಹಾಕಿತ್ತು. ಮಾಹಿತಿ ಮುಚ್ಚಿಟ್ಟಿದ್ದು ಯಾಕೆ? ಈ ವಿಷಯದಲ್ಲಿ ಮೋದಿ ಅವರಿಗೆ ಅಧಿಕಾರದಲ್ಲಿರಲು ಯಾವುದೇ ನೈತಿಕ ಹಕ್ಕಿಲ್ಲ ಎಂದು ಟೀಕಿಸಿದರು.

‘ಆರೋಗ್ಯ ಸೇವೆ ಮುಂದುವರೆಯಲಿ’

ಬಾಗಲಕೋಟೆ: ಆರೋಗ್ಯ ಕ್ಷೇತ್ರದಲ್ಲಿ ಹಲವು ದಶಕಗಳಿಂದ ಡಾ.ಆರ್.ಟಿ. ಪಾಟೀಲ ಸೇವೆ ಸಲ್ಲಿಸುತ್ತಿದ್ದಾರೆ. ಹೊಸ ಆಸ್ಪತ್ರೆಯಲ್ಲಿಯೂ ಅವರ ಸೇವೆ ಮುಂದುವರೆಯಲಿದೆ ಎಂದು ಸಚಿವ ಎಚ್‌.ಕೆ. ಪಾಟೀಲ ಹೇಳಿದರು. ಶಾಂತಿ ಆಸ್ಪತ್ರೆ ಉದ್ಘಾಟನೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪಾಟೀಲ ಹಾಗೂ ಅವರ ತಂಡ ಉತ್ತಮ ಕೆಲಸ ಮಾಡಿದೆ. ಆರೋಗ್ಯ ಕ್ಷೇತ್ರದ ಹಲವಾರು ಸೌಲಭ್ಯಗಳನ್ನು ಬಾಗಲಕೋಟೆಗೆ ಪರಿಚಯಿಸಿದ್ದಾರೆ ಎಂದರು. ಆಸ್ಪತ್ರೆಯಲ್ಲಿ ಎಲ್ಲ ಬಗೆಯ ಸೌಲಭ್ಯಗಳನ್ನು ಒದಗಿಸಲಾಗಿದೆ. ಹೆಚ್ಚಿನ ಜನರಿಗೆ ಸೌಲಭ್ಯಗಳು ಲಭಿಸುವಂತಾಗಲಿ ಎಂದು ಹೇಳಿದರು. ಸಚಿವರಾದ ಎಚ್‌.ಕೆ. ಪಾಟೀಲ ಶಿವಾನಂದ ಪಾಟೀಲ ಸತೀಶ ಜಾರಕಿಹೊಳಿ ನೂತನ ಆಸ್ಪತ್ರೆಯನ್ನು ಉದ್ಘಾಟಿಸಿದರು. ರಾಜ್ಯಸಭೆ ಸದಸ್ಯ ನಾರಾಯಣ ಭಾಂಡಗೆ ಮಾಜಿ ಸಚಿವ ಎಸ್‌.ಆರ್‌. ಪಾಟೀಲ ಶಾಸಕ ಜೆ.ಟಿ. ಪಾಟೀಲ ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಸ್‌.ಜಿ. ನಂಜಯ್ಯನಮಠ ಅಮರೇಗೌಡ ಬಯ್ಯಾಪುರ ಡಾ.ಆರ್‌.ಟಿ. ಪಾಟೀಲ ಡಾ.ಸುನೀಲ ಪಾಟೀಲ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT