ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಪಮಾನ ಏರಿಕೆ: ಇರಲಿ ಮುನ್ನೆಚ್ಚರಿಕೆ

40 ಡಿಗ್ರಿ ಸೆಲ್ಸಿಯಸ್ ದಾಟಿದ ಉಷ್ಣಾಂಶ: 3–4 ದಿನಗಳವರೆಗೆ ಇದೇ ಸ್ಥಿತಿ
Published 30 ಮಾರ್ಚ್ 2024, 6:29 IST
Last Updated 30 ಮಾರ್ಚ್ 2024, 6:29 IST
ಅಕ್ಷರ ಗಾತ್ರ

ಬಾಗಲಕೋಟೆ: ಜಿಲ್ಲೆಯಲ್ಲಿ ಗುರುವಾರ 40.6 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು, ಸಣ್ಣಗೆ ಬಿಸಿಗಾಳಿ ಬೀಸಲಾರಂಭಿಸಿದೆ. ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಮೂಲಕ ಬಿಸಿಲಿನಿಂದ ಎದುರಾಗಬಹುದಾದ ಅಪಾಯದಿಂದ ಪಾರಾಗಬೇಕಿದೆ.

ಹೊರಗಡೆಯಾಗಲಿ, ಮನೆಯಲ್ಲಾಗಲಿ ಕುಳಿತರೂ, ನಿಂತರೂ ಸಮಾಧಾನವಿಲ್ಲದಂತಾಗಿದೆ. ಕ್ಷಣಕಾಲ ಫ್ಯಾನ್‌, ಎಸಿ (ಹವಾನಿಯಂತ್ರಿತ) ಇಲ್ಲದಿದ್ದರೆ, ಚಡಪಡಿಕೆ ಆರಂಭವಾಗುತ್ತದೆ. ವಿದ್ಯುತ್‌ ಸರಬರಾಜು ಕಡಿತಗೊಂಡರಂತೂ ಮನೆಯಲ್ಲಿ ಕುಳಿತುಕೊಳ್ಳಲು ಆಗುವುದೇ ಇಲ್ಲ. 

ಮುಂದಿನ ಮೂರರಿಂದ ನಾಲ್ಕು ದಿನಗಳವರೆಗೂ ಇದೇ ಸ್ಥಿತಿ ಇರಲಿದೆ. ಬಿಸಿಗಾಳಿಯ ಪ್ರಭಾವವೂ ಇರಲಿದೆ. ಮಧ್ಯಾಹ್ನದ ವೇಳೆ ಸಾಧ್ಯವಾದಷ್ಟು ಬಿಸಿಲಿಗೆ ಹೋಗದಿರುವುದು ಒಳ್ಳೆಯದು ಎನ್ನುತ್ತಾರೆ ಹವಾಮಾನ ಇಲಾಖೆಯ ಅಧಿಕಾರಿಗಳು.

ಮಾರ್ಚ್‌ ತಿಂಗಳಲ್ಲಿ ಬಿಸಿಲಿನ ಪ್ರಮಾಣ ಇಷ್ಟೊಂದು ಹೆಚ್ಚಾಗಿರಲಿಲ್ಲ. ದೀರ್ಘಾವಧಿಯ ಸರಾಸರಿ ನೋಡಿದರೆ ಒಂದೂವರೆಯಿಂದ ಎರಡು ಡಿಗ್ರಿಯಷ್ಟು ಉಷ್ಣಾಂಶದ ಪ್ರಮಾಣ ಹೆಚ್ಚಿದೆ. ಇದರಿಂದಾಗಿ ಸೆಕೆಯೂ ಹೆಚ್ಚಾಗಿದೆ.

ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದರೆ ಕೊಳವೆಬಾವಿಗಳಲ್ಲಿನ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಕೆಲವು ಕಡೆಗಳಲ್ಲಿ ಕೊಳವೆಬಾವಿಗಳಲ್ಲಿನ ನೀರು ಬತ್ತಿ ಹೋಗಿದ್ದು, ನೀರೇ ಬರುತ್ತಿಲ್ಲ. ಹೊಸ ಕೊಳವೆಬಾವಿಗಳನ್ನು ಕೊರೆದರೂ ನೀರು ದಕ್ಕುತ್ತಿಲ್ಲ. 300 ರಿಂದ 400 ಅಡಿ ಆಳ ಕೊರೆದರೂ ನೀರು ಬರುತ್ತಿಲ್ಲ.

ಜಿಲ್ಲೆಯಲ್ಲಿ ಹರಿಯುವ ಮೂರು ನದಿಗಳಲ್ಲಿ ನೀರಿನ ಪ್ರಮಾಣ ತೀವ್ರ ಪ್ರಮಾಣದಲ್ಲಿ ಕಡಿಮೆಯಾಗಿದೆ. ಮಲಪ್ರಭಾ ಹಾಗೂ ಘಟಪ್ರಭಾಕ್ಕೆ ಈಗಾಗಲೇ ಎರಡು ಬಾರಿ ನೀರು ಹರಿಸಲಾಗಿದೆ. ಈಗ ಮತ್ತೊಮ್ಮೆ ನೀರು ಬಿಡಲಾಗುತ್ತಿದೆ. ಆದರೂ, ಜೀವಜಲದ ಕೊರತೆ ಜನರನ್ನು ಕಾಡುತ್ತಿದೆ.

‘ಮಾರ್ಚ್‌ ತಿಂಗಳಿನಲ್ಲಿಯೇ ಮೇ ತಿಂಗಳಲ್ಲಿ ಇರುತ್ತಿದ್ದ ಬಿಸಿಲು ಇದೆ. ಏಪ್ರಿಲ್‌, ಮೇ ತಿಂಗಳಿನಲ್ಲಿ ಹೇಗಿರಲಿದೆ ಎಂಬ ಆತಂಕ ಕಾಡುತ್ತಿದೆ. ಹೊರಗಡೆ ಕಾಲಿಡಲೂ ಸಾಧ್ಯವಾಗುತ್ತಿಲ್ಲ’ ಎನ್ನುತ್ತಾರೆ ಬಾಗಲಕೋಟೆ ನಿವಾಸಿ ರಾಜಶೇಖರ.

ರೈತರಿಗೆ ಸಲಹೆಗಳು: ಜಾನುವಾರುಗಳಿಗೆ ಎರಡರಿಂದ ಮೂರು ಬಾರಿ ನೀರು ಕುಡಿಸಬೇಕು. ಬೆಳಿಗ್ಗೆ ಅಥವಾ ಸಂಜೆಯ ವೇಳೆ ಹೊರಗಡೆ ಬಿಡಬೇಕು. ಬಿಸಿಲಿನಲ್ಲಿ ಮೇಯಿಸಿದರೆ ಹಾಲು ನೀಡುವ ಪ್ರಮಾಣ ಕಡಿಮೆಯಾಗಲಿದೆ.

ಭೂಮಿಯಲ್ಲಿನ ತೇವಾಂಶ ಕಡಿಮೆಯಾಗಿರುವುದರಿಂದ ಬೆಳೆದು ನಿಂತಿರುವ ಬೆಳೆಗೆ ಆಗಾಗ ನೀರು ಹರಿಸಬೇಕು. ನೀರನ್ನು ಮಿತವಾಗಿ ಬಳಸಲು ಹನಿ ನೀರಾವರಿ ಅಳವಡಿಸಿಕೊಂಡರೆ ಒಳ್ಳೆಯದು ಎನ್ನುತ್ತಾರೆ ಅಧಿಕಾರಿಗಳು.

ಬಾಗಲಕೋಟೆಯ ಅಲ್ಪಸಂಖ್ಯಾತರ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳು ಪಕ್ಷಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿರುವುದು
ಬಾಗಲಕೋಟೆಯ ಅಲ್ಪಸಂಖ್ಯಾತರ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳು ಪಕ್ಷಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿರುವುದು
ಸಾಧ್ಯವಾದಷ್ಟು ಮಧ್ಯಾಹ್ನದ ವೇಳೆ ಬಿಸಿಲಿನಲ್ಲಿ ಸಂಚರಿಸಬೇಡಿ. ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯಿರಿ
ಎಸ್‌.ವಿ. ಪಾಟೀಲ ಮುಖ್ಯಸ್ಥ ಕೃಷಿ ವಿಜ್ಞಾನ ಕೇಂದ್ರ ಬಾಗಲಕೋಟೆ

ಕುಡಿಯುವ ನೀರಿನ ವ್ಯವಸ್ಥೆ ಬಿಸಿಲಿನ ತಾಪ ಏರಿಕೆಯಿಂದ ಉಂಟಾಗಿರುವ ದಾಹ ನೀಗಿಸಲು ಹಲವು ಸಂಘ–ಸಂಸ್ಥೆಗಳು ಮುಂದಾಗಿವೆ. ಅಲ್ಲಲ್ಲಿ ಮಣ್ಣಿನ ಗಡಿಗೆಗಳನ್ನು ಇಟ್ಟು ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿದ್ದಾರೆ. ಸರ್ಕಾರಿ ಜಿಲ್ಲಾ ಆಸ್ಪತ್ರೆ ಬಳಿ ಒಂದೆಡೆ ಬಿ.ಆರ್. ಅಂಬೇಡ್ಕರ್ ಕ್ರೀಡಾ ಸಾಂಸ್ಕೃತಿಕ ನಗರ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ ಇನ್ನೊಂದೆಡೆ ಅಲ್ಲಿನ ಜನರೇ ಮಣ್ಣಿನ ಗಡಿಗೆಗಳನ್ನು ತುಂಬಿಸಿಟ್ಟಿದ್ದಾರೆ. ವಿದ್ಯಾಗಿರಿ ಎಲ್‌ಐಸಿ ವೃತ್ತ ಹಳೆ ಬಾಗಲಕೋಟೆಯ ಬಜಾರ್‌ ಪ್ರದೇಶದ ಅಲ್ಲಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.  ನಗರದ ವಿವಿಧೆಡೆ ಗಿಡಗಳಿಗೆ ಬಾಟಲಿಗಳನ್ನು ಕಟ್ಟುವ ಮೂಲಕ ಪಕ್ಷಿಗಳಿಗೂ ನೀರುಣಿಸುವ ಕೆಲಸ ನಡೆದಿದೆ.

ವೈದ್ಯರ ಸಲಹೆಗಳು

ಅನಿವಾರ್ಯತೆ ಹೊರತುಪಡಿಸಿ ಮಧ್ಯಾಹ್ನ 12ರಿಂದ 5 ಗಂಟೆಯವರೆಗೆ ಹೊರಗಡೆ ಹೋಗದಿರುವುದು ಒಳಿತು  * ಹೊರಗಡೆ ಹೋದಾಗ ಕುಡಿಯುವ ನೀರು ತೆಗೆದುಕೊಂಡು ಹೋಗಿ * ಮಜ್ಜಿಗೆ ಎಳನೀರು ಜ್ಯೂಸ್‌ ಕುಡಿಯಿರಿ * ಮಧ್ಯಾಹ್ನ ಹೊರಗಡೆ ಹೋದರೆ ಟೊಪ್ಪಿಗೆ ಕೊಡೆ ಬಳಸಿ * ಮಕ್ಕಳಿಗೆ ರಜೆ ಇರುವುದರಿಂದ ಮಧ್ಯಾಹ್ನ ಹೊರಗಡೆ ಕಳುಹಿಸಬೇಡಿ * ಸಾಧ್ಯವಾದಷ್ಟು ಹತ್ತಿ ಬಟ್ಟೆಗಳನ್ನೇ ಧರಿಸಿರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT