ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲಕೋಟೆ | ಪರಿಷತ್ ಚುನಾವಣೆ: ಜಿಲ್ಲಾ ನಾಯಕರಿಗೆ ನಿರಾಸೆ

Published 3 ಜೂನ್ 2024, 5:27 IST
Last Updated 3 ಜೂನ್ 2024, 5:27 IST
ಅಕ್ಷರ ಗಾತ್ರ

ಬಾಗಲಕೋಟೆ: ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ನಡೆಯುತ್ತಿರುವ ಚುನಾವಣೆಗೆ ಸ್ಪರ್ಧಿಸಲು ಜಿಲ್ಲೆಯ ಹಲವಾರು ನಾಯಕರು ಕಸರತ್ತು ನಡೆಸಿದ್ದರು. ಅವರಿಗೆ ನಿರಾಸೆಯಾಗಿದೆ. ಜಿಲ್ಲೆಯ ನಾಯಕರನ್ನು ಎರಡೂ ಪಕ್ಷಗಳು ಕಡೆಗಣಿಸಿವೆ.

ಏಳು ಸ್ಥಾನಗಳನ್ನು ಗೆಲ್ಲಲಿರುವ ಕಾಂಗ್ರೆಸ್‌ ಈ ಬಾರಿ ಜಿಲ್ಲೆಯ ನಾಯಕರೊಬ್ಬರಿಗೆ ಟಿಕೆಟ್‌ ನೀಡಲಿದೆ ಎಂಬ ವಿಶ್ವಾಸ ಜೋರಾಗಿತ್ತು. ಪಕ್ಕದ ಜಿಲ್ಲೆ ರಾಯಚೂರು ಜಿಲ್ಲೆಯ ಕಾಂಗ್ರೆಸ್‌ ನಾಯಕರಿಗೆ ಮೂವರಿಗೆ ಅವಕಾಶ ಸಿಕ್ಕಿದ್ದರೆ, ಜಿಲ್ಲೆಯ ಒಬ್ಬರಿಗೂ ಅವಕಾಶ ದೊರೆತಿಲ್ಲ.

ಮಾಜಿ ಸಚಿವ ಎಸ್‌.ಆರ್‌. ಪಾಟೀಲ ಅವರ ಹೆಸರು ಮುಂಚೂಣಿಯಲ್ಲಿ ಕೇಳಿ ಬರುತ್ತಿತ್ತು. ವಿಧಾನ ಪರಿಷತ್ ಟಿಕೆಟ್‌ ನಿರಾಕರಣೆ ಮಾಡಿದ್ದಲ್ಲದೇ, ವಿಧಾನಸಭೆ ಚುನಾವಣೆಯಲ್ಲಿಯೂ ಸ್ಪರ್ಧೆಗೆ ಅವಕಾಶ ಸಿಕ್ಕಿರಲಿಲ್ಲ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸಂಯುಕ್ತಾ ಪಾಟೀಲ ಪರ ವಯಸ್ಸನ್ನೂ ಲೆಕ್ಕಿಸದೆ ಪ್ರಚಾರ ಮಾಡಿದ್ದರು. ಈ ಬಾರಿ ಟಿಕೆಟ್‌ ಸಿಗಬಹುದು ಎಂಬ ಲೆಕ್ಕಾಚಾರವಿತ್ತು. ಆದರೆ, ಹೆಸರುಗಳು ಪ್ರಕಟವಾಗಿದ್ದು, ಅವರಿಗೆ ಅವಕಾಶ ಸಿಕ್ಕಿಲ್ಲ.

ಮಾಜಿ ಸಚಿವ ಅಜಯಕುಮಾರ ಸರನಾಯಕ, ಜಿಲ್ಲಾ ಘಟಕದ ಅಧ್ಯಕ್ಷ ಎಸ್‌.ಜಿ. ನಂಜಯ್ಯನಮಠ, ಕೆಪಿಸಿಸಿ ಉಪಾಧ್ಯಕ್ಷ ಎಂ.ಬಿ. ಸೌದಾಗರ್‌ ಅವರ ಹೆಸರು ಕೇಳಿ ಬಂದಿತ್ತು. ಕಾಂಗ್ರೆಸ್‌ ಮುಖಂಡ ಹೊಳೆಬಸು ಶೆಟ್ಟರ್ ಅವರ ಬೆಂಬಲಿಗರು ಬೆಂಗಳೂರಿಗೆ ಹೋಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಶೆಟ್ಟರ್ ಅವರಿಗೆ ಅವಕಾಶ ನೀಡುವಂತೆ ಕೇಳಿಕೊಂಡಿತ್ತು.

ಲೋಕಸಭಾ ಚುನಾವಣೆ ಸ್ಪರ್ಧೆಯ ಆಕಾಂಕ್ಷಿಗಳಲ್ಲಿ ಮಾಜಿ ಸಚಿವ ಅಜಯಕುಮಾರ ಸರನಾಯಕ ಅವರ ಹೆಸರೂ ಮುಂಚೂಣಿಯಲ್ಲಿತ್ತು. ಕೊನೆ ಗಳಿಗೆಯಲ್ಲಿ ಅವರಿಗೆ ಅವಕಾಶ ತಪ್ಪಿತ್ತು. ವಿಧಾನಸಭೆ ಚುನಾವಣೆಗೂ ಆಕಾಂಕ್ಷಿಯಾಗಿದ್ದರು. ಎರಡೂ ಅವಕಾಶಗಳು ತಪ್ಪಿದ್ದರಿಂದ ಇಲ್ಲಿ ಅವಕಾಶ ದೊರೆಯಬಹುದು ಎಂಬ ಲೆಕ್ಕಾಚಾರ ತಪ್ಪಾಗಿದೆ.

ವಿಧಾನಸಭೆ, ಲೋಕಸಭಾ ಚುನಾವಣೆಯಲ್ಲಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಎಸ್‌.ಜಿ. ನಂಜಯ್ಯನಮಠ ಹಗಲಿರುಳು ದುಡಿದಿದ್ದರು. ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಿದ್ದರು. ಈ ಹಿಂದೆ ಅವರು ಗೆದ್ದಿದ್ದ ವಿಧಾನಸಭಾ ಕ್ಷೇತ್ರ ಗುಳೇದಗುಡ್ಡ ಬಾದಾಮಿಯಲ್ಲಿ ವಿಲೀನವಾಗಿರುವುದರಿಂದ ಕ್ಷೇತ್ರವಿಲ್ಲದಂತಾಗಿದೆ. ಹಾಗಾಗಿ, ಅವಕಾಶ ನೀಡುವಂತೆ ಕೋರಿದ್ದರು. ಅದಕ್ಕೂ ಅವಕಾಶ ಸಿಕ್ಕಿಲ್ಲ.

ಕಳೆದ ವಿಧಾನಸಭಾ ಅವಧಿಯಲ್ಲಿ ಸಿದ್ದರಾಮಯ್ಯ ಬಾದಾಮಿ ಕ್ಷೇತ್ರದ ಶಾಸಕರಾಗಿದ್ದರು. ಆಗ ಕಾಂಗ್ರೆಸ್‌ ಮುಖಂಡ ಹೊಳೆಬಸು ಶೆಟ್ಟರ್ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದರು. ಈಗಲೂ ಅವರನ್ನು ನೇರವಾಗಿ ಭೇಟಿಯಾಗಬಲ್ಲರು. ಎರಡು ದಶಕಗಳಿಂದ ಪಕ್ಷದಲ್ಲಿರುವ ಅವರಿಗೆ ಅದೃಷ್ಟ ಖುಲಾಯಿಸಬಹುದು ಎಂಬುದು ಪಕ್ಷದ ನಾಯಕರ ಲೆಕ್ಕಾಚಾರ ಕೈಕೊಟ್ಟಿದೆ.

ರಾಜ್ಯ ಸರ್ಕಾರ ರಚನೆಯಾದಾಗಿನಿಂದಲೂ ಅಭಿವೃದ್ಧಿ ವಿಷಯದಲ್ಲಿ ಜಿಲ್ಲೆಯನ್ನು ಕಡೆಗಣಿಸಲಾಗುತ್ತಿದೆ. ಈಗ ರಾಜಕೀಯ ಅವಕಾಶಗಳಲ್ಲಿಯೂ ಮುಂದುವರೆದಂತಾಗಿದೆ.

ಬಿಜೆಪಿಗೆ ಮೂರು ಸ್ಥಾನಗಳಿಗೆ ಲಭಿಸಿದ್ದವು. ಜಿಲ್ಲೆಯ ನಾಯಕರಿಗೂ ಅವಕಾಶ ಸಿಗಬಹುದು ಎಂಬ ಲೆಕ್ಕಾಚಾರವಿತ್ತು. ಜಿಲ್ಲೆಯ ಕೆಲ ನಾಯಕರು ತೆರೆಮರೆಯಲ್ಲಿ ವಿಧಾನ ಪರಿಷತ್ ಪ್ರವೇಶಿಸಲು ಪ್ರಯತ್ನ ನಡೆಸಿದ್ದರು. ಆದರೆ, ಅವರಿಗೆ ಅವಕಾಶ ದೊರೆತಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT