ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲಕೋಟೆ: ಬಂಡಾಯಗಾರರ ಸೇರ್ಪಡೆಗೆ ಸ್ವಪಕ್ಷೀಯರ ವಿರೋಧ?

ಯಾರನ್ನೂ ಕಡೆಗಣಿಸದ ಸ್ಥಿತಿಯಲ್ಲಿ ಕಾಂಗ್ರೆಸ್‌, ಬಿಜೆಪಿ ಅಭ್ಯರ್ಥಿಗಳು
Published 2 ಏಪ್ರಿಲ್ 2024, 4:17 IST
Last Updated 2 ಏಪ್ರಿಲ್ 2024, 4:17 IST
ಅಕ್ಷರ ಗಾತ್ರ

ಬಾಗಲಕೋಟೆ: ವಿಧಾನಸಭಾ ಚುನಾವಣೆಯಲ್ಲಿ ಬಂಡಾಯ ಎದ್ದು ವಿವಿಧ ಕ್ಷೇತ್ರಗಳಲ್ಲಿ ಕಾಂಗ್ರೆಸ್, ಬಿಜೆಪಿ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಸ್ಪರ್ಧಿಸಿದ್ದ ಬಂಡಾಯಗಾರರ ಸೇರ್ಪಡೆಗೆ ಸ್ವಪಕ್ಷೀಯರೇ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ವಿಧಾನಸಭೆ ಚುನಾವಣೆಯಲ್ಲಿ ಸೋಲಿಗೆ ಕಾರಣರಾದ ಬಂಡಾಯಗಾರರನ್ನು ಸೇರಿಸಿಕೊಂಡರೆ, ಮತ್ತೆ ಮಗ್ಗಲಲ್ಲಿ ಮುಳ್ಳು ಇಟ್ಟುಕೊಂಡ ಹಾಗೆ. ಹೇಗೂ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ಮತ್ತೆ ಅವರನ್ನು ಸೇರ್ಪಡೆ ಮಾಡಿಕೊಳ್ಳುವುದು ಬೇಡ. ಚುನಾವಣೆಯಲ್ಲಿ ಲೀಡ್‌ ಕೊಡಿಸುವುದು ನಮ್ಮ ಜವಾಬ್ದಾರಿ ಎನ್ನುತ್ತಿದ್ದಾರೆ ಪಕ್ಷದಲ್ಲಿರುವ ನಾಯಕರು. 

ಹಾಲಿ ಶಾಸಕರು, ಮಾಜಿ ಶಾಸಕರನ್ನು ಎದುರು ಹಾಕಿಕೊಳ್ಳುವಂತೆಯೂ ಇಲ್ಲ, ಬಂಡಾಯ ಅಭ್ಯರ್ಥಿಯನ್ನು ಬಿಟ್ಟು ಮುಂದಕ್ಕೆ ಹೋಗುವಂತೆಯೂ ಇಲ್ಲ ಎನ್ನುವ ಇಕ್ಕಟ್ಟಿನ ಸ್ಥಿತಿ ಲೋಕಸಭಾ ಅಭ್ಯರ್ಥಿಗಳದ್ದಾಗಿದೆ.

ತೇರದಾಳ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸಿದ್ದು ಕೊಣ್ಣೂರ ವಿರುದ್ಧ ಟಿಕೆಟ್ ಸಿಗಲಿಲ್ಲ ಎಂದು ಬಂಡಾಯ ಎದ್ದಿದ್ದ ಡಾ.ಪದ್ಮಜೀತ್‌ ನಾಡಗೌಡ 22,400 ಮತಗಳನ್ನು ಪಡೆಯುವ ಮೂಲಕ ಕಾಂಗ್ರೆಸ್‌ ಅಭ್ಯರ್ಥಿಯ ಸೋಲಿಗೆ ಕಾರಣರಾಗಿದ್ದರು. 

ಪುತ್ರಿಯ ಗೆಲುವಿಗಾಗಿ ಅವರ ಸೇರ್ಪಡೆಗೆ ಸಚಿವ ಶಿವಾನಂದ ಪಾಟೀಲ ಉತ್ಸುಕರಾಗಿದ್ದಾರೆ. ಒಂದು ಸುತ್ತಿನ ಮಾತುಕತೆಯೂ ಆಗಿದೆ. ಆದರೆ, ಅವರನ್ನು ಸೇರ್ಪಡೆ ಮಾಡಿಕೊಂಡರೆ ಮುಂದಿನ ದಿನಗಳಲ್ಲಿ ತಮ್ಮದೇ ಸಮಾಜದ ಸಿದ್ದು ಕೊಣ್ಣೂರಿಗೆ ತೊಂದರೆಯಾಗಬಹುದು ಎಂಬ ಆತಂಕವೂ ಕಾಡುತ್ತಿದೆ.

ಮುಧೋಳ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿರುವ ಆರ್‌.ಬಿ. ತಿಮ್ಮಾಪುರ ವಿರುದ್ಧ ಬಂಡಾಯ ಎದ್ದು ಸತೀಶ ಬಂಡಿವಡ್ಡರ ಸ್ಪರ್ಧಿಸಿದ್ದರು. ‘ಅವರಿಲ್ಲದೇ ಗೆದ್ದು ತೋರಿಸಿದ್ದೇನೆ. ಈಗ ಅವರ ಸೇರ್ಪಡೆ ಏಕೆ? ಇಲ್ಲಿ ಲೀಡ್ ಕೊಡಿಸುವ ಜವಾಬ್ದಾರಿ ನನ್ನದು ಎನ್ನುತ್ತಾರಂತೆ’ ಸಚಿವ ಆರ್‌.ಬಿ. ತಿಮ್ಮಾಪುರ.

ಬಾಗಲಕೋಟೆಯಲ್ಲಿ ಬಿಜೆಪಿಯಿಂದ ಉಚ್ಛಾಟನೆಗೊಂಡು ಸ್ಪರ್ಧಿಸಿದ್ದ ಮಲ್ಲಿಕಾರ್ಜುನ ಚರಂತಿಮಠ ಬಿಜೆಪಿ ಸೇರ್ಪಡೆಗೆ ಪಕ್ಷದಲ್ಲೇ ವಿರೋಧವಿದೆ. ಶೀಘ್ರದಲ್ಲಿಯೇ ಬೆಂಬಲಿಗರ ಸಭೆ ಕರೆದು ನಿರ್ಧಾರ ತೆಗೆದುಕೊಳ್ಳುವುದಾಗಿ ಮಲ್ಲಿಕಾರ್ಜುನ ಚರಂತಿಮಠ ಹೇಳಿದ್ದಾರೆ.

ಬಾದಾಮಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ವಿರುದ್ಧ ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ, ಮಹಾಂತೇಶ ಮಮದಾಪುರ ಬಂಡಾಯ ಎದ್ದಿದ್ದಿಲ್ಲವಾದರೂ, ಅಸಮಾಧಾನ ಹೊಂದಿದ್ದಾರೆ. ಅವರನ್ನು ಸಕ್ರಿಯಗೊಳಿಸುವುದು ಹೇಗೆ ಎಂಬ ಪ್ರಶ್ನೆ ನಾಯಕರನ್ನು ಕಾಡುತ್ತಿದೆ.

ಲೋಕಸಭಾ ಚುನಾವಣೆಗೆ ಸ್ಪರ್ಧಿಸಿರುವ ಕಾಂಗ್ರೆಸ್‌ ಹಾಗೂ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಒಂದೊಂದು ಮತವು ಬಹಳ ಮುಖ್ಯ. ಅತ್ತ ಇವರನ್ನೂ, ಅತ್ತ ಅವರನ್ನೂ ಸೇರಿಸಿಕೊಂಡು ಗೆಲುವಿನ ದಡ ಸೇರುವುದು ಹೇಗೆ ಎಂಬ ಚಿಂತೆ ಅಭ್ಯರ್ಥಿಗಳದ್ದಾಗಿದೆ.

ಸಚಿವ ಶಿವಾನಂದ ಪಾಟೀಲ ಅವರು ಮಾತನಾಡಿದ್ದಾರೆ. ಆದರೆ ಕಾಂಗ್ರೆಸ್‌ ಸೇರ್ಪಡೆ ಬೆಂಬಲದ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ

- ಡಾ.ಪದ್ಮಜೀತ್‌ ನಾಡಗೌಡ

ಕಾಂಗ್ರೆಸ್‌ ಸಚಿವರಿಬ್ಬರು ಮಾತನಾಡಿದ್ದಾರೆ. ಕಾರ್ಯಕರ್ತರ ಸಭೆ ಕರೆದು ಚರ್ಚಿಸಿ ಮುಂದಿನ ಹೆಜ್ಜೆ ಇಡುತ್ತೇನೆ

-ಸತೀಶ ಬಂಡಿವಡ್ಡರ

ನವಲಿಹಿರೇಮಠ ನಡೆ ನಿಗೂಢ

ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಜನಾರ್ದನ ರೆಡ್ಡಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಆ ಪಕ್ಷದಿಂದ ಹುನಗುಂದ ಕ್ಷೇತ್ರದಿಂದ ಸ್ಪರ್ಧಿಸಿದ್ದ ಎಸ್‌.ಆರ್‌. ನವಲಿಹಿರೇಮಠ ನಡೆ ನಿಗೂಢವಾಗಿದೆ. ರೆಡ್ಡಿ ಅವರೊಂದಿಗೆ ನವಲಿಹಿರೇಮಠ ಪಕ್ಷ ಸೇರ್ಪಡೆಯಾಗಿಲ್ಲ. ಪಕ್ಷದಲ್ಲಿ ಖಚಿತ ಭರವಸೆ ನೀಡದ ಹೊರತು ಸೇರ್ಪಡೆಯಾಗುವುದು ಹೇಗೆ ಎಂಬುದು ನವಲಿಹಿರೇಮಠರ ಪ್ರಶ್ನೆಯಾದರೆ ಯಾವುದೇ ಷರತ್ತಿಲ್ಲದೇ ಸೇರ್ಪಡೆಯಾಗುವುದಾದರೆ ನೋಡಬಹುದು ಎಂಬುದು ಮಾಜಿ ಶಾಸಕ ದೊಡ್ಡನಗೌಡರ ವಾದ.  36800 ಮತಗಳನ್ನು ಗಳಿಸಿ ಗಮನ ಸೆಳೆದಿದ್ದ ನವಲಿ ಹಿರೇಮಠ ಸೇರ್ಪಡೆ ಮಾಡಿಕೊಳ್ಳದಿದ್ದರೆ ಕ್ಷೇತ್ರದಲ್ಲಿ ಲೀಡ್‌ ಪಡೆಯುವುದು ಹೇಗೆ ಎಂಬ ಅಳುಕು ಬಿಜೆಪಿ ಅಭ್ಯರ್ಥಿಯದ್ದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT