ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲಕೋಟೆ | ಕಾಂಗ್ರೆಸ್‌ ಕಾರ್ಯಕರ್ತರಿಗಿಲ್ಲ ಅಧಿಕಾರ; ಒಳಗೊಳಗೆ ಅಸಮಾಧಾನ

Published 27 ಜನವರಿ 2024, 3:34 IST
Last Updated 27 ಜನವರಿ 2024, 3:34 IST
ಅಕ್ಷರ ಗಾತ್ರ

ಬಾಗಲಕೋಟೆ: ರಾಜ್ಯ ಸರ್ಕಾರ ಕೊನೆಗೂ ನಿಗಮ–ಮಂಡಳಿ ಅಧ್ಯಕ್ಷರ ಹುದ್ದೆಗೆ ನೇಮಕ ಮಾಡಿದೆ. ಜಿಲ್ಲೆಯ ಮೂವರು ಶಾಸಕರಿಗೆ ಅವಕಾಶ ಸಿಕ್ಕಿದ್ದು, ಮುಖಂಡರು ಹಾಗೂ ಕಾರ್ಯಕರ್ತರ ಪಟ್ಟಿಗೆ ತಡೆ ಬಿದ್ದಿರುವುದರಿಂದ ಅವರಿಗೆ ನಿರಾಸೆಯಾಗಿದೆ.

ಜಿಲ್ಲೆಯ ಏಳು ಕ್ಷೇತ್ರಗಳ ಪೈಕಿ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಶಾಸಕರು ಆಯ್ಕೆಯಾಗಿದ್ದಾರೆ. ಮುಧೋಳ ಶಾಸಕ ಆರ್‌.ಬಿ. ತಿಮ್ಮಾಪುರ ಸಚಿವರಾಗಿದ್ದಾರೆ. ಉಳಿದ ನಾಲ್ವರಲ್ಲಿ ಮೊದಲ ಬಾರಿಗೆ ಆಯ್ಕೆಯಾದ ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ ಅವರನ್ನು ಹೊರತುಪಡಿಸಿ ಮೂವರಿಗೆ ಅಧಿಕಾರ ನೀಡಲಾಗಿದೆ.

ಬಾಗಲಕೋಟೆ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾಗಿ ಶಾಸಕ ಎಚ್.ವೈ.ಮೇಟಿ, ಹಟ್ಟಿ ಚಿನ್ನದ ಗಣಿ ನಿಯಮಿತ ಅಧ್ಯಕ್ಷರಾಗಿ ಜೆ.ಟಿ.ಪಾಟೀಲ, ಕರ್ನಾಟಕ ಕ್ರೀಡಾ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ವಿಜಯಾನಂದ ಕಾಶಪ್ಪನವರ ಅವರನ್ನು ನೇಮಕ ಮಾಡಲಾಗಿದೆ. ನೇಕಾರರು ಹೆಚ್ಚಿರುವ ಕಾರಣಕ್ಕೆ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮಕ್ಕೆ ಜಿಲ್ಲೆಯವರನ್ನೇ ನೇಮಕ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಮಾಡಿಲ್ಲ.

ಹಿಂದೆ ಸರ್ಕಾರದಲ್ಲಿ ಸಚಿವರಾಗಿದ್ದ ಎಚ್‌.ವೈ. ಮೇಟಿ, ಸಚಿವ ಸ್ಥಾನಕ್ಕಾಗಿ ಯತ್ನಿಸಿದ್ದರು. ಸಚಿವ ಸ್ಥಾನ ನೀಡದಿದ್ದಾಗ ಬಿಟಿಡಿಎ ಅಧ್ಯಕ್ಷರನ್ನಾಗಿ ನೇಮಕ ಮಾಡಬಹುದು ಎಂಬ ಲೆಕ್ಕಾಚಾರ ಕಾಂಗ್ರೆಸ್‌ ವಲಯದಲ್ಲಿ ನಡೆಯುತ್ತಿತ್ತು. ಶಾಸಕರೂ ಆಕಾಂಕ್ಷಿಯಾಗಿದ್ದರು. ಆದರೆ, ವಿಧಾನಸಭಾ ಚುನಾವಣೆ ಮುನ್ನ ಬಿಜೆಪಿಯಿಂದ ಕಾಂಗ್ರೆಸ್‌ ಕರೆದುಕೊಂಡು ಬಂದಿದ್ದ ಪ್ರಕಾಶ ತಪಶೆಟ್ಟಿ ಅವರಿಗೆ ಬಿಟಿಡಿಎ ಅಧ್ಯಕ್ಷ ಸ್ಥಾನ ನೀಡಬಹುದು ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ, ಈಗ ಅದು ಹುಸಿಯಾಗಿದೆ.

ಶಾಸಕರ ಜತೆಗೆ ಪಕ್ಷದ ಮುಖಂಡರಿಗೂ ಕೆಲವು ನಿಗಮ–ಮಂಡಳಿಗಳ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗುತ್ತದೆ ಎಂಬ ಚರ್ಚೆ ಜೋರಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ, ಶಾಸಕರ ಜತೆಗೆ ಮುಖಂಡರಿಗೆ ಅವಕಾಶ ಮಾಡಿಕೊಡುವ ಮಾತುಗಳನ್ನು ಆಡಿದ್ದರು. ಆದರೆ, ಕೊನೆ ಗಳಿಗೆಯಲ್ಲಿ ಪಕ್ಷದಲ್ಲಿ ನಾಯಕರ ನಡುವೆ ನಡೆದ ಕಿತ್ತಾಟದಿಂದ ಮುಖಂಡರು ಅವಕಾಶದಿಂದ ವಂಚಿತರಾಗಿದ್ದಾರೆ. ಇದು ಅವರಲ್ಲಿ ಅಸಮಾಧಾನ ಹುಟ್ಟು ಹಾಕಿದೆ.

ಲೋಕಸಭಾ ಚುನಾವಣೆವರೆಗೂ ಮುಖಂಡರ ನೇಮಕ ಸಾಧ್ಯತೆ ಕ್ಷೀಣ: ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಮುಖಂಡರು ಕಾಂಗ್ರೆಸ್‌ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿ ಕಾಂಗ್ರೆಸ್‌ ಸರ್ಕಾರವನ್ನು ಅಧಿಕಾರಕ್ಕೆ ತಂದಾಗಿದೆ. ಇನ್ನು ಕೆಲವೇ ತಿಂಗಳುಗಳಲ್ಲಿ ಲೋಕಸಭಾ ಚುನಾವಣೆ ಇರುವುದರಿಂದ ಈಗ ನೇಮಕ ಮಾಡಿದರೆ, ಪಕ್ಷದೊಳಗೆ ಅಸಮಾಧಾನ ಹೆಚ್ಚಾಗಬಹುದು ಎಂದು ಚುನಾವಣೆ ಮುಗಿಯುವವರೆ ಕಾದು ನೋಡಬಹುದು ಎನ್ನಲಾಗುತ್ತಿದೆ.

‘ಪಕ್ಷಕ್ಕಾಗಿ ಹಗಲಿರುಳು ಕೆಳಮಟ್ಟದಲ್ಲಿ ದುಡಿಯುತ್ತೇವೆ. ಸರ್ಕಾರ ಬಂದಾಗ ಮುಖಂಡರಿಗೂ ಅವಕಾಶ ಕಲ್ಪಿಸಿಕೊಡಬೇಕು. ಶಾಸಕರಾಗಿರುವವರಿಗೇ ಅಧಿಕಾರ ಕೊಟ್ಟರೆ, ಮುಖಂಡರಿಗೆ ಯಾವಾಗ ಕೊಡುತ್ತಾರೆ. ದುಡಿಯಲಷ್ಟೇ ಕಾರ್ಯಕರ್ತರು ಬೇಕೆ? ಎಂದು ಹೆಸರು ಬಹಿರಂಗಪಡಿಸಲು ಬಯಸದ ಮುಖಂಡರೊಬ್ಬರು ಪ್ರಶ್ನಿಸಿದರು.

ಮೇಟಿ ನೇಮಕ ಬಿಡಿಎಗಾ? ಬಿಟಿಡಿಎಗಾ?

ಬಾಗಲಕೋಟೆ: ವಿವಿಧ ನಿಗಮ ಮಂಡಳಿ ನೇಮಕಾತಿ ಪಟ್ಟಿಯಲ್ಲಿ ಶಾಸಕ ಎಚ್‌.ವೈ. ಮೇಟಿ ಅವರಿಗೆ ಬಾಗಲಕೋಟೆ ನಗರಾಭಿವೃದ್ಧಿ ಪ್ರಾಧಿಕಾರ ಎಂದಿರುವುದು ಗೊಂದಲಕ್ಕೆ ಕಾರಣವಾಗಿದೆ. ಹಳೆಯ ಬಾಗಲಕೋಟೆಗೆ ಬಾಗಲಕೋಟೆ ನಗರಾಭಿವೃದ್ಧಿ ಪ್ರಾಧಿಕಾರವಿದ್ದರೆ ನವನಗರಕ್ಕೆ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರವಿದೆ. ಆದೇಶದಲ್ಲಿ ಬಿಡಿಎ ಎಂದಿರುವುದು ನೇಮಕದ ಬಗ್ಗೆ ಗೊಂದಲ ಮೂಡಿದೆ. ‘ರಾಜ್ಯದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರಗಳಿರುವುದರಿಂದ ಅಧಿಕಾರಿಗಳು ಹಾಗೆಯೇ ನಮೂದಿಸಿದ್ದಾರೆ. ಬಿಟಿಡಿಎಗೇ ನೇಮಕವಾಗಿದೆ. ಹೊಸ ಆದೇಶ ನೀಡಲಿದ್ದಾರೆ’ ಎಂದು ಕಾಂಗ್ರೆಸ್‌ ಮುಖಂಡರೊಬ್ಬರು ತಿಳಿಸಿದರು. ಯಾವುದೇ ಆದೇಶ ತಮಗೆ ಸಿಗದ್ದರಿಂದ ಪ್ರತಿಕ್ರಿಯಿಸಲು ಮೇಟಿ ನಿರಾಕರಿಸಿದರು.

ಜೆ.ಟಿ.ಪಾಟೀಲ
ಜೆ.ಟಿ.ಪಾಟೀಲ
ವಿಜಯಾನಂದ ಕಾಶಪ್ಪನವರ
ವಿಜಯಾನಂದ ಕಾಶಪ್ಪನವರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT