ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪಂಚಮುಖಿ ಆಂಜನೇಯ ದೇವಸ್ಥಾನ ಲೋಕಾರ್ಪಣೆ

ಜ.18ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ
Published 16 ಜನವರಿ 2024, 14:18 IST
Last Updated 16 ಜನವರಿ 2024, 14:18 IST
ಅಕ್ಷರ ಗಾತ್ರ

ಬಾಗಲಕೋಟೆ: ಮುಚಖಂಡಿ ಕ್ರಾಸ್‌ ಬಳಿ ನಿರ್ಮಿಸಿರುವ ಪಂಚಮುಖಿ ಆಂಜನೇಯ ದೇವಸ್ಥಾನ ಲೋಕಾರ್ಪಣೆ ಅಂಗವಾಗಿ ಜ.18ರಿಂದ 22ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾರುತೇಶ್ವರ ದೇವಸ್ಥಾನದ ಸ್ವಾಗತ ಸಮಿತಿ ಅಧ್ಯಕ್ಷ ರವಿ ಕುಮುಟಗಿ ಹೇಳಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.18ರಂದು ಬೆಳಿಗ್ಗೆ 10ಕ್ಕೆ ಕೊತ್ತಲೇಶ್ವರ ದೇವಸ್ಥಾನದಿಂದ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿದೆ. ಬಸವೇಶ್ವರ ವೃತ್ತ, ಶಕ್ತಿ ಚಿತ್ರಮಂದಿರ, ಮಹಾವೀರ ರಸ್ತೆ ಕ್ರಾಸ್, ಕೆರೋಡಿ ಆಸ್ಪತ್ರೆ ರಸ್ತೆ, ಲಕ್ಷ್ಮಿನಗರ ಕ್ರಾಸ್‌, ಮುಚಖಂಡಿ ಕ್ರಾಸ್‌ ಮೂಲಕ ಮಾರುತಿ ವೃತ್ತ ತಲುಪಲಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ತಂಡಗಳು ಯಾತ್ರೆಯಲ್ಲಿ ಪಾಲ್ಗೊಳ್ಳಲಿವೆ ಎಂದರು.

ಜ.22ರಂದು ಬೆಳಿಗ್ಗೆ 11ಕ್ಕೆ ಪ್ರಾಣ ಪ್ರತಿಷ್ಠಾಪನೆ ಹಾಗೂ ಲೋಕಾರ್ಪಣೆ ನಡೆಯಲಿದ್ದು, ಜಡೆಯ ಶಾಂತಲಿಂಗ ಸ್ವಾಮೀಜಿ, ಕುಮಾರ ವಿರುಪಾಕ್ಷ ಸ್ವಾಮೀಜಿ, ಶಿವಕುಮಾರ ಶಿವಾಚಾರ್ಯ, ಬೂದೀಶ್ವರ ಸ್ವಾಮೀಜಿ, ಹುಚ್ಚೇಶ್ವರ ಸ್ವಾಮೀಜಿ, ನೀಲಕಂಠ ಶಿವಾಚಾರ್ಯ, ಶಿವಕುಮಾರ ಶಿವಾಚಾರ್ಯ, ಬಿಂದು ಮಾಧವಾಚಾರ್ಯ ನಾಗಸಂಪಿಗೆ, ಮೌನೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಬಸವರಾಜ ಕಟಗೇರಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಹೇಳಿದರು.

ಸಚಿವ ಆರ್‌.ಬಿ. ತಿಮ್ಮಾಪುರ ಉದ್ಘಾಟಿಸಲಿದ್ದು, ಶಾಸಕ ಎಚ್.ವೈ. ಮೇಟಿ, ವಿಧಾನ ಪರಿಷತ್ ಸದಸ್ಯ ಪಿ.ಎಚ್‌. ಪೂಜಾರ, ಮಾಜಿ ಸಚಿವರಾದ ಎಸ್‌.ಆರ್‌. ಪಾಟೀಲ, ಮುರುಗೇಶ ನಿರಾಣಿ ಭಾಗವಹಿಸಲಿದ್ದಾರೆ ಎಂದರು.

ಮಾರುತೇಶ್ವರ ದೇವಸ್ಥಾನ ಸೇವಾ ಸಂಘದ ಅಧ್ಯಕ್ಷ ಬಸವರಾಜ ಕಟಗೇರಿ ಮಾತನಾಡಿ, ರಾಜ್ಯ ಹೆದ್ದಾರಿಯಲ್ಲಿದ್ದ ಹನುಮ ಮೂರ್ತಿ ಆ ಭಾಗದ ಜನರ ಆರಾಧ್ಯ ದೈವವಾಗಿತ್ತು. ಹೆದ್ದಾರಿ ಅಗಲೀಕರಣ ಸಂದರ್ಭದಲ್ಲಿ ಮೂರ್ತಿಯನ್ನು ಸ್ಥಳಾಂತರಿಸಲಾಗಿತ್ತು. ಈಗ ಹೊಸ ಸ್ಥಳದಲ್ಲಿ ಭವ್ಯ ಮಂದಿರ ನಿರ್ಮಾಣ ಮಾಡಲಾಗಿದೆ ಎಂದು ಹೇಳಿದರು.

2020 ಆ.20ರಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರಕ್ಕೆ ಭೂಪೂಜಾ ನೆರವೇರಿಸಲಾಗಿತ್ತು. ಅದೇ ದಿನ ಇಲ್ಲಿಯೂ ಭೂಪೂಜೆ ನೆರವೇರಿತ್ತು. ಭಕ್ತರ ಸಹಕಾರದಿಂದ ನಿರ್ಮಾಣ ಕಾರ್ಯ ತ್ವರಿತವಾಗಿ ಪುರ್ಣಗೊಂಡಿದ್ದು, ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾಪನೆಗೊಳ್ಳುವ ದಿನದಂದೇ ಉದ್ಘಾಟನೆಗೊಳ್ಳಲಿದೆ ಎಂದರು.

ಉಪಾಧ್ಯಕ್ಷ ಎಂ.ಆರ್. ಶಿಂಧೆ, ಕಾರ್ಯದರ್ಶಿ ಅರುಣ ಲೋಕಾಪುರ, ಸ್ವಾಗತ ಸಮಿತಿ ಉಪಾಧ್ಯಕ್ಷ ಸಂತೋಷ ಹೊಕ್ರಾಣಿ, ಕಾರ್ಯದರ್ಶಿ ಅಶೋಕ ಮುತ್ತಿನಮಠ, ಶಿವಕುಮಾರ ಮೇಲ್ನಾಡ, ವಿಜಯ ಸುಲಾಖೆ, ರಾಜು ಗೌಳಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT