ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಟಾಚಾರದ ಜನಸಂಪರ್ಕ ಸಭೆ: ಜನರ ಅಸಮಾಧಾನ

Published 20 ಜನವರಿ 2024, 16:23 IST
Last Updated 20 ಜನವರಿ 2024, 16:23 IST
ಅಕ್ಷರ ಗಾತ್ರ

ಬಾಗಲಕೋಟೆ: ಅಧಿಕಾರಿಗಳ ಅನುಪಸ್ಥಿತಿ, ಅರ್ಜಿಗಳ ವಿಲೇವಾರಿ ವಿಳಂಬ, ಜನಸಂಪರ್ಕ ಸಭೆಯ ಜಾಗ ಬದಲು... ಇದು ಶನಿವಾರ ಬಾಗಲಕೋಟೆಯ ನಗರಸಭೆಯಲ್ಲಿ ನಡೆದ ಜನಸಂಪರ್ಕ ಸಭೆ ದೃಶ್ಯಾವಳಿ.

ಜನಸಂಪರ್ಕ ಸಭೆಗೆ ಉಪವಿಭಾಗಾಧಿಕಾರಿ ಬರುತ್ತಾರೆ ಎನ್ನಲಾಗಿತ್ತು. ನಂತರದಲ್ಲಿ ತಹಶೀಲ್ದಾರ್ ಬರಬೇಕಿತ್ತು. ಕೊನೆಯಲ್ಲಿ ಬಂದಿದ್ದು ಗ್ರೇಡ್‌ 2 ತಹಶೀಲ್ದಾರ್‌. ಇತ್ತ ನಗರಸಭೆಯ ಪೌರಾಯುಕ್ತರೂ ಸಭೆಗೆ ಬಂದಿರಲಿಲ್ಲ. ಬೇರೆ ಸಭೆಯಲ್ಲಿ ಭಾಗವಹಿಸಿದ್ದರಿಂದ ಗೈರಾಗಿದ್ದಾರೆ ಎಂದು ಜನರಿಗೆ ತಿಳಿಸಲಾಯಿತು.

ಪ್ರಚಾರದ ಕೊರತೆಯಿಂದಾಗಿ ನಗರಸಭೆಯ ಬಜೆಟ್‌ ಪೂರ್ವಭಾವಿ ಸಭೆಗೆ ಹೆಚ್ಚಿನ ಜನರು ಬಂದಿರಲಿಲ್ಲ. ಪ್ರಚಾರ ಮಾಡಿ, ಮತ್ತೊಮ್ಮೆ ಸಭೆ ನಡೆಸಲಾಯಿತು. ಜನಸಂಪರ್ಕ ಸಭೆಗೂ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿರಲಿಲ್ಲ. ಹಾಗಾಗಿ ನೂತನ ಸಭಾಭವನದಿಂದ ನಗರಸಭೆ ಕಚೇರಿಯ ಪ್ರಾಂಗಣದಲ್ಲಿಯೇ ಸಭೆ ನಡೆಸಲಾಯಿತು.

ವರ್ಷದಿಂದ ಒಳಚರಂಡಿ ವ್ಯವಸ್ಥೆ ಹದಗೆಟ್ಟಿದ್ದು, ಸದಸ್ಯರೂ ಸೇರಿದಂತೆ ಯಾರಿಂದಲೂ ಪರಿಹಾರ ದೊರೆಯುತ್ತಿಲ್ಲ. ಹಿಂದಿನ ಹಾಗೂ ಈಗಿನ ಆಯುಕ್ತರಿಗೆ ಹಲವು ಬಾರಿ ಮನವಿ ಮಾಡಿದರೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ ಎಂದು ವಿದ್ಯಾಗಿರಿಯ ಕುದರಿ-ಕಣ್ಣೂರ ಲೇಔಟ್ ನಿವಾಸಿಗಳು ದೂರಿದರು.

ನಗರಸಭೆ ಅಧಿಕಾರಿಗಳನ್ವು ಕೇಳಿದರೆ, ಬಿಟಿಡಿಎ ಕೇಳಿ ಎನ್ನುತ್ತಾರೆ. ಅಲ್ಲಿನ ಜಾಗ ಬಿಟಿಡಿಎಗೂ ಹಸ್ತಾಂತರವಾಗಿಲ್ಲ. ಅಭಿವೃದ್ಧಿ ಮಾಡದ ಮಾಲೀಕರಿಗೆ ದಂಡ ಹಾಕಬೇಕು. ನಮ್ಮ ಸಮಸ್ಯೆ ಪರಿಹರಿಸಬೇಕು. ಅಧಿಕಾರಿಗಳೇ ಸಭೆಗೆ ಗೈರಾದರೆ ಹೇಗೆ ಎಂದು ಪ್ರಶ್ನಿಸಿದರು.

ನಗರಸಭೆ ಸದಸ್ಯೆ ಶಶಿಕಲಾ ಮಜ್ಜಗಿ, ನಗರೋತ್ಥಾನ ಯೋಜನೆಯಡಿ ವಾರ್ಡ್‍ಗೆ ಮಂಜೂರಾದ ಸಿಸಿ ರಸ್ತೆ, ಅಂಗನವಾಡಿ ಕೇಂದ್ರ ಸೇರಿದಂತೆ ಕೆಲ ಕಾಮಗಾರಿಗಳು ವರ್ಷದಿಂದ ವಿಳಂಬವಾಗಿವೆ. ಕೆಲ ಫಲಾನುಭವಿಗಳ ಸೌಲಭ್ಯಕ್ಕೂ ಕತ್ತರಿ ಬಿದ್ದಿವೆ. ಅಧಿಕಾರಿಗಳು ಕೂಡಲೇ ಸಮಸ್ಯೆ ಪರಿಹಾರಕ್ಕೆ ಯತ್ನಿಸಬೇಕು ಎಂದು ಹೇಳಿದರು.

ಜನಸಂಪರ್ಕ ಸಭೆ ಕರೆದ ಪೌರಾಯುಕ್ತರೇ ಕಾಣುತ್ತಿಲ್ಲ. ಸಭೆ ಕಾಟಾಚಾರಕ್ಕೆ ಮಾಡಬೇಡಿ. ನೂತನ ಸಭಾಭವನದಲ್ಲಿ ಸಭೆ ನಡೆಯುವುದಾಗಿ ತಿಳಿಸಿ ಇದೀಗ ಬೇರೆಡೆ ಸಭೆ ನಡೆಸಲಾಗುತ್ತಿದೆ. ಧ್ವನಿವರ್ಧಕವಿಲ್ಲದೆ ಸಮಸ್ಯೆಗಳೇ ಗೊತ್ತಾಗುತ್ತಿಲ್ಲ ಎಂದು ನಿವಾಸಿ ಸುರೇಶ ಮಜ್ಜಗಿ ಅಸಮಾಧಾನ ವ್ಯಕ್ತಪಡಿಸಿದರು.

ಗ್ರೇಡ್-2 ತಹಶೀಲ್ದಾರ್ ಮಹಾದೇವ ಬಿರಾದಾರ ಮಾತನಾಡಿ, ಆಯಾ ವಾರ್ಡ್‍ಗಳಲ್ಲಿನ ಕಾಮಗಾರಿಗಳ ಕುರಿತು ಸದಸ್ಯರಿಗೆ ಮಾಹಿತಿ ನೀಡಿ. ವಿನಾಕಾರಣ ಜನರನ್ನು ಅಲೆದಾಡಿಸಬೇಡಿ. ಕಚೇರಿಗೆ ಬಂದ ಸಾರ್ವಜನಿಕರ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಬೇಕು. ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸಬೇಕು ಎಂದು ಸೂಚಿಸಿದರು.

ನಗರಸಭೆ ಎಇಇ ಡಿ.ಎಸ್.ಹಾಲವರ, ಜೆಇ ನವೀದ್ ಖಾಜಿ, ಸದಸ್ಯರಾದ ಶಿವಲೀಲಾ ಪಟ್ಟಣಶೆಟ್ಟಿ, ಪ್ರೇಮಾ ಅಂಬಿಗೇರ, ಭುವನೇಶ್ವರಿ ಕುಪ್ಪಸ್ತ, ಶೋಭಾರಾವ್ ಇದ್ದರು.

ಜನರಲ್ಲಿ... ಸಭೆ ಇಲ್ಲಿ...!

ಬಾಗಲಕೋಟೆ: ವಿದ್ಯಾಗಿರಿ ಸುತ್ತಮುತ್ತಲಿನ ಜನರನ್ನು ಹೊರತುಪಡಿಸಿದರೆ ನಗರಸಭೆಯ ಬಹುತೇಕ ಜನರು ಹಳೆಯ ಬಾಗಲಕೋಟೆಯಲ್ಲಿದ್ದಾರೆ. ಆದರೆ ಸಭೆಗಳನ್ನು ನವನಗರದಲ್ಲಿರುವ ಕಚೇರಿಯಲ್ಲಿ ಮಾಡಲಾಗುತ್ತದೆ. ನವನಗರದ ನಿವಾಸಿಗಳು ಸಮಸ್ಯೆ ಹೇಳಿದರೆ ಅದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಬಿಟಿಡಿಎ ಗೆ ಬರುತ್ತದೆ ಎಂಬ ಸಿದ್ಧ ಉತ್ತರ ನೀಡುತ್ತಾರೆ. ಸಭೆಗೆ ಬಿಟಿಡಿಎ ಅಧಿಕಾರಿಗಳನ್ನು ಆಹ್ವಾನಿಸದ್ದರಿಂದ ಸಮಸ್ಯೆ ಹೇಳಿದರೂ ಪರಿಹಾರ ಸಿಗುವುದಿಲ್ಲ. ಹಳೆಯ ಬಾಗಲಕೋಟೆ ಜನರು ನೂರಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆದರೆ ನಗರಸಭೆ ಕಚೇರಿಗೆ ಬರಲು ಮೂರು ನಾಲ್ಕು ಕಿ.ಮೀ. ದೂರ ಬರಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT