ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತೃಪೂರ್ಣ ಯೋಜನೆ ಪರಿಣಾಮಕಾರಿ ಅನುಷ್ಠಾನ: ಬಾಗಲಕೋಟೆಗೆ ಮೊದಲ ಸ್ಥಾನದ ಗರಿ!

ಸಿಇಒ
Last Updated 4 ಮೇ 2019, 12:14 IST
ಅಕ್ಷರ ಗಾತ್ರ

ಬಾಗಲಕೋಟೆ: ‘ಅಂಗನವಾಡಿ ಕೇಂದ್ರಗಳಲ್ಲಿ ಗರ್ಭಿಣಿ ಹಾಗೂ ಬಾಣಂತಿಯರಿಗೆ ಮಧ್ಯಾಹ್ನ ಪೌಷ್ಠಿಕ ಆಹಾರ ವಿತರಿಸುವ ಮಾತೃಪೂರ್ಣ ಯೋಜನೆಯ ಅನುಷ್ಠಾನದಲ್ಲಿ ಬಾಗಲಕೋಟೆ ಜಿಲ್ಲೆ ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದೆ’ ಎಂದು ಜಿಲ್ಲಾ ಪಂಚಾಯ್ತಿ ಸಿಇಒ ಗಂಗೂಬಾಯಿ ಮಾನಕರ ತಿಳಿಸಿದರು.

ಇಲ್ಲಿನ ಜಿಲ್ಲಾಡಳಿತ ಭವನದಲ್ಲಿ ಶನಿವಾರ ನಡೆದಮಾತೃಪೂರ್ಣ ಯೋಜನೆಯ ಮೇಲ್ವಿಚಾರಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘2018-19ನೇ ಸಾಲಿನಲ್ಲಿ ಶೇ 92 ರಷ್ಟು ಯೋಜನೆ ಅನುಷ್ಠಾನಗೊಳಿಸುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದೆ. ದ್ವಿತೀಯ ಸ್ಥಾನ ರಾಯಚೂರು ಜಿಲ್ಲೆ ಪಡೆದಿದೆ. ಮಾತೃಪೂರ್ಣ ಯೋಜನೆಯ ಅನುಷ್ಠಾನದಲ್ಲಿ 5 ತಿಂಗಳಿನಿಂದಲೂ ಸಹ ಜಿಲ್ಲೆ ಮೊದಲ ಸ್ಥಾನದಲ್ಲಿದೆ’ ಎಂದರು.

‘ಮಾತೃಪೂರ್ಣ ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಪ್ರತಿ ತಾಲ್ಲೂಕಿಗೆ ಒಬ್ಬರಂತೆ ಸಿಬ್ಬಂದಿ ನೇಮಿಸಿ ಫಲಾನುಭವಿಗಳಿಗೆ ನೇರವಾಗಿ ದೂರವಾಣಿ ಕರೆ ಮಾಡಿ ಮಾಹಿತಿ ನೀಡಲಾಗುತ್ತಿದೆ. ಅಂಗನವಾಡಿ ಕೇಂದ್ರಗಳಲ್ಲಿ ನೀಡುವ ಮಧ್ಯಾಹ್ನ ಊಟದ ಗುಣಮಟ್ಟ ಪರಿಶೀಲಿಸಲಾಗುತ್ತಿದೆ. ಇದರಿಂದ ಮಾತೃಪೂರ್ಣ ಯೋಜನೆ ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿದೆ’ ಎಂದರು.

‘ಜಿಲ್ಲೆಯಲ್ಲಿರುವ ಒಟ್ಟು 2,221 ಅಂಗನವಾಡಿ ಕೇಂದ್ರಗಳಲ್ಲಿ 41,122 ಫಲಾನುಭವಿಗಳು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ. ಅದರಲ್ಲಿ ಗರ್ಭಿಣಿಯರು 18,987, ಬಾಣಂತಿಯರು 17,860, ಅಂಗನವಾಡಿ ಕಾರ್ಯಕರ್ತೆಯರು 2,185, ಸಹಾಯಕಿಯರು 2,090 ಫಲಾನುಭವಿಗಳಾಗಿದ್ದಾರೆ’ ಎಂದರು.

‘ಮಾತೃಪೂರ್ಣ ಯೋಜನೆಯಡಿ ಅಂಗನವಾಡಿ ಕೇಂದ್ರಗಳಿಗೆ 2,221 ಪಾಠೋಪಕರಣ, ತೂಕದ ಯಂತ್ರಗಳು, 1,818 ಎರಡು ಬರ್ನರ್ ಗ್ಯಾಸ್ ಸ್ಟೌವ್ ಹಾಗೂ 2,221 ಕುಕ್ಕರ್ ಖರೀದಿಸಲಾಗಿದೆ.ಅಂಗನವಾಡಿ ಕೇಂದ್ರಗಳಿಂದ 5 ರಿಂದ 6 ಕಿ.ಮೀ ದೂರದಲ್ಲಿರುವ ಫಲಾನುಭವಿಗಳಿಗೆ ಮನೆಗೆ ಆಹಾರ ಪೂರೈಸಲಾಗುತ್ತಿದೆ. ಜಿಲ್ಲೆಯಲ್ಲಿ 224 ತೋಟದ ಅಂಗನವಾಡಿ ಕೇಂದ್ರಗಳಿದ್ದು, ಮಾತೃಪೂರ್ಣ ಫಲಾನುಭವಿಗಳಿಗೆ ಬಿಸಿ ಊಟ ತಯಾರಿಸಿ ಮನೆಗಳಿಗೆ ನೀಡಲಾಗುತ್ತಿದೆ. ಗರ್ಭಾವಸ್ಥೆಯ ಕೊನೆಯ 1 ತಿಂಗಳು ಹಾಗೂ ಬಾಣಂತಿಯರಿಗೆ 45 ದಿನದವರೆಗೆ ಉಪಹಾರ ತಯಾರಿಸಿ ಮನೆಗೆ ಕಳುಹಿಸಲಾಗುತ್ತಿದೆ. ಜೊತೆಗೆ ಫಲಾನುಭವಿಗಳ ಹಾಜರಾತಿ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಭಾರಿ ಉಪನಿರ್ದೇಶಕ ಎ.ಕೆ.ಬಸಣ್ಣವರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅನಂತ ದೇಸಾಯಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಎಚ್.ಗೋನಾಳ ಸೇರಿದಂತೆ ಆಯಾ ತಾಲ್ಲೂಕು ಶಿಶು ಅಭಿವೃದ್ಧಿ ಅಧಿಕಾರಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT