ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ ಎಪಿಎಂಸಿ: ನಾಳೆಯಿಂದ ವಹಿವಾಟು

Published 25 ಮಾರ್ಚ್ 2024, 15:57 IST
Last Updated 25 ಮಾರ್ಚ್ 2024, 15:57 IST
ಅಕ್ಷರ ಗಾತ್ರ

ಬಳ್ಳಾರಿ: ಬಳ್ಳಾರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ (ಎಪಿಎಂಸಿ) ಮಂಗಳವಾರದಿಂದ ಪೂರ್ಣಪ್ರಮಾಣದ ವಹಿವಾಟು ಆರಂಭವಾಗಲಿದೆ. ದಲ್ಲಾಳಿ ಸಂಘ, ವರ್ತಕರ ಸಂಘ ಮತ್ತು ಎಪಿಎಂಸಿ ಕಾರ್ಯದರ್ಶಿ ಮಧ್ಯಸ್ಥಿಕೆಯಲ್ಲಿ ಸೋಮವಾರ ಎಪಿಎಂಸಿ ಆವರಣದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.

ವರ್ತಕರೊಬ್ಬರು ದಲ್ಲಾಳಿಗಳ ಮೂಲಕ ರೈತರಿಂದ ₹3 ಕೋಟಿ ಮೌಲ್ಯದ ಶೇಂಗಾ ಖರೀದಿಸಿ, ಹಣ ಪಾವತಿಸದೇ ತಲೆ ಮರೆಸಿಕೊಂಡ ಹಿನ್ನೆಲೆಯಲ್ಲಿ ದಲ್ಲಾಳಿಗಳ ಸಂಘವು ಮಾರ್ಚ್ 20ರಿಂದ ಎಪಿಎಂಸಿಯಲ್ಲಿ ವಹಿವಾಟು ಸ್ಥಗಿತಗೊಳಿಸಿತ್ತು. ಮೂರು ತಿಂಗಳಿನಿಂದ ವರ್ತಕರು ಬಾಕಿ ಉಳಿಸಿಕೊಂಡಿರುವ ₹ 8 ಕೋಟಿ ಹಣ ಪಾವತಿಸಲು ಆಗ್ರಹಿಸಿತ್ತು.

‘ವರ್ತಕರು ಹಣ ಬಾಕಿ ಉಳಿಸಿಕೊಂಡಿದ್ದು, ಪಾವತಿಗೂ ವಿಳಂಬ ಮಾಡುತ್ತಾರೆ. ಇದರಿಂದ ರೈತರಿಗೆ ಹಣ ಪಾವತಿಸಲು ತೊಂದರೆಯಾಗುತ್ತಿದೆ. ಉತ್ಪನ್ನ ಖರೀದಿಸಿದ ದಿನವೇ ಹಣ ಪಾವತಿಸಬೇಕು’ ಎಂದು ದಲ್ಲಾಳಿಗಳ ಸಂಘದ ಮುಖಂಡರು ಒತ್ತಾಯಿಸಿದರು. ಇದಕ್ಕೆ ವರ್ತಕರ ಸಂಘದ ಮುಖಂಡರು ಒಪ್ಪಿದರು.

‘ಶೇಂಗಾ ಖರೀದಿಸಿ, ಹಣ ಪಾವತಿಸದೇ ತಲೆಮರೆಸಿಕೊಂಡಿರುವ ವರ್ತಕ ಸೀನಪ್ಪ ಮತ್ತು ಮುಂದೆ ನಿಂತು ಶೇಂಗಾ ಕೊಡಿಸಿದ ಗೋವಿಂದಪ್ಪ ಎಂಬುವರಿಗೆ ಸಂಬಂಧಿಸಿದ ಕಂಪನಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಂಡು ದಲ್ಲಾಳಿಗಳಿಗೆ ಹಣ ಸಂದಾಯ ಮಾಡಬೇಕು’ ಎಂದು ಸಭೆಯಲ್ಲಿ ಪ್ರಸ್ತಾಪಿಸಲಾಯಿತು. ಇದಕ್ಕೆ ವರ್ತಕರು, ದಲ್ಲಾಳಿಗಳು ಸಮ್ಮತಿಸಿದರು. 

‘ಹಲವು ವರ್ತಕರು ಹಣ ಬಾಕಿ ಉಳಿಸಿಕೊಂಡಿದ್ದು, ಅವರ ಕಂಪನಿಗಳಿಗೆ ಸಂಬಂಧಿಸಿದ ಆಸ್ತಿಗಳನ್ನೂ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಎಪಿಎಂಸಿ ಕಾರ್ಯದರ್ಶಿಗೆ ದೂರು ನೀಡಲಾಗಿದೆ’ ಎಂದು ದಲ್ಲಾಳಿಗಳ ಸಂಘದ ಮುಖಂಡ ಗುರುಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು. 

ದಲ್ಲಾಳಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಗುರುಸ್ವಾಮಿ, ವರ್ತಕರ ಸಂಘದ ಅಧ್ಯಕ್ಷ ರಮೇಶ್, ವರ್ತಕರ ಸಂಘದ ಮುಖಂಡ ಪಾಲಣ್ಣ ಸಭೆಯಲ್ಲಿ ಇದ್ದರು. 

ಉತ್ಪನ್ನ ಖರೀದಿಸಿದ ದಿನವೇ ವರ್ತಕರು ದಲ್ಲಾಳಿಗಳಿಗೆ ಹಣ ಪಾವತಿಸಬೇಕು. ದಲ್ಲಾಳಿ ಅದೇ ದಿನ ರೈತನಿಗೆ ಹಣ ನೀಡಬೇಕು ಎಂದು ಸೂಚಿಸಲಾಗಿದೆ.
–ಎಂ. ನಂಜುಂಡ ಸ್ವಾಮಿ ಕಾರ್ಯದರ್ಶಿ ಎಪಿಎಂಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT