ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಳ್ಳಾರಿ: ಕೇಂದ್ರದ ವಿರುದ್ಧ 16ಕ್ಕೆ ಪ್ರತಿಭಟನೆ

Published 12 ಫೆಬ್ರುವರಿ 2024, 15:34 IST
Last Updated 12 ಫೆಬ್ರುವರಿ 2024, 15:34 IST
ಅಕ್ಷರ ಗಾತ್ರ

ಬಳ್ಳಾರಿ: ಕೇಂದ್ರ ಬಿಜೆಪಿ ಸರ್ಕಾರದ ಕಾರ್ಮಿಕ ವಿರೋಧಿ, ರೈತ ವಿರೋಧಿ, ಜನ ವಿರೋಧಿ ಹಾಗೂ ಬಂಡವಾಳಶಾಹಿಗಳ ಪರವಾದ ನೀತಿ ವಿರೋಧಿಸಿ ಕೇಂದ್ರೀಯ ಕಾರ್ಮಿಕ ಸಂಘಟನೆಗಳ ವೇದಿಕೆ ಹಾಗೂ ಸಂಯುಕ್ತ ಕಿಸಾನ್ ಮೋರ್ಚಾ ಜಂಟಿಯಾಗಿ ಫೆ. 16ರಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಹಾಗೂ ಗ್ರಾಮೀಣ ಬಂದ್‌ಗೆ ಕರೆ ನೀಡಿದ್ದು, ಬಳ್ಳಾರಿಯಲ್ಲೂ ಪ್ರತಿಭಟನಾ ಮೆರವಣಿಗೆ ನಡೆಯಲಿದೆ ಎಂದು ಸಿಐಟಿಯು ಜಿಲ್ಲಾಜಿಲ್ಲಾ ಘಟಕದ ಅಧ್ಯಕ್ಷ  ಜೆ.ಸತ್ಯಬಾಬು ತಿಳಿಸಿದರು. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‌ ಕೇಂದ್ರ ಬಿಜೆಪಿ ಸರ್ಕಾರ, ದುಡಿಯುವ ಜನರು, ರೈತರ ಜೀವನದ ಮೇಲೆ ದಾಳಿ ನಡೆಸುತ್ತಿದೆ. ಪ್ರಜಾಪ್ರಭುತ್ವದ ಹೆಸರಲ್ಲಿ ದುಡಿಯುವ ಜನರು ಇಂದು ನಿರ್ದಯಿ ಶೋಷಣೆಗೆ ಒಳಗಾಗಿದ್ದಾರೆ. ಜನ ಸಂಖ್ಯೆಯ ಕೇವಲ ಶೇ.5 ರಷ್ಟು ಇರುವ ಕಾರ್ಪೋರೇಟ್ ಮಾಲೀಕರು, ದುಡಿಯುವ ವರ್ಗ ಸೃಷ್ಟಿಸಿದ ಶೇ.60 ರಷ್ಟು ಆಸ್ತಿಯನ್ನು ಕಬಳಿಸಿದ್ದಾರೆ. ಸರ್ಕಾರವೂ ಕಾರ್ಪೋರೇಟ್ ಮಾಲೀಕರ ಹಿತ ಕಾಪಾಡಿದೆ‘ ಎಂದು ಆರೋಪಿಸಿದರು. 

ಕಾರ್ಮಿಕರು ಹಾಗೂ ರೈತರು ಜೊತೆಗೂಡಿ ಸಮಸ್ಯೆಗಳ ವಿರುದ್ಧ ಹೋರಾಡಬೇಕಿದೆ. ಫೆ. 16ರಂದು ರಾಷ್ಟ್ರವ್ಯಾಪಿ ಕಾರ್ಮಿಕ ಮುಷ್ಕರ ಹಾಗೂ ಗ್ರಾಮೀಣ ಬಂದ್‌ಗೆ ಕರೆ ನೀಡಲಾಗಿದೆ. ಈ ಮುಷ್ಕರವನ್ನು ಯಶಸ್ವಿಗೊಳಿಸುವಂತೆ ಕಾರ್ಮಿಕ ಹಾಗೂ ರೈತರಲ್ಲಿ ಮನವಿ ಮಾಡುವುದಾಗಿ ಅವರು ತಿಳಿಸಿದರು. 

ಹಕ್ಕೊತ್ತಾಯಗಳು 

ಅಗತ್ಯ ವಸ್ತುಗಳ, ಪೆಟ್ರೋಲಿಯಂ ಉತ್ಪನ್ನಗಳ, ಔಷಧಿಗಳ ಬೆಲೆ ಏರಿಕೆಗೆ ಕಡಿವಾಣ ಹಾಕಬೇಕು. ರೈಲ್ವೆ, ಮಿಲಿಟರಿ, ವಿದ್ಯುತ್, ಕಲ್ಲಿದ್ದಲು, ತೈಲ, ಉಕ್ಕು, ಸಾರಿಗೆ, ಬ್ಯಾಂಕ್, ವಿಮೆ, ಅಂಚೆ, ವಿಮಾನ ನಿಲ್ದಾಣ, ಮುಂತಾದ ಸಾರ್ವಜನಿಕ ಕ್ಷೇತ್ರಗಳ ಖಾಸಗೀಕರಣ, ಗುತ್ತಿಗೇಕರಣ ನಿಲ್ಲಿಸಬೇಕು. ಎಲ್ಲಾ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿಪಡಿಸಬೇಕು. ಸರ್ಕಾರವೇ ರೈತರಿಂದ ಬೆಳೆಗಳನ್ನು ಖರೀದಿಸಬೇಕು.  ‘ಫಿಕ್ಸೆಡ್ ಟರ್ಮ್ ಎಂಪ್ಲಾಯ್‌ಮೆಂಟ್‌ (ನಿಗದಿತ ಸಮಯದ ಉದ್ಯೊಗ) ರದ್ದುಗೊಳಿಸಬೇಕು. ರಾಜ್ಯದ ಬರವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ, ಸಾಲ ಮನ್ನಾ, ವೈಜ್ಞಾನಿಕ ಬೆಳೆ ನಷ್ಟ ಪರಿಹಾರ, ಆಹಾರ-ಉದ್ಯೋಗ-ಭೂಮಿ ಹಕ್ಕು ಖಾತ್ರಿಪಡಿಸಬೇಕು. ಖಾಲಿಯಿರುವ ಹುದ್ದೆಗಳನ್ನು ತುಂಬಬೇಕು.  ಹೊಸ ನೇಮಕಾತಿಗಳ ಮೇಲೆ ಹೇರಲಾದ ನಿಷೇಧವನ್ನು ಹಿಂಪಡೆಯಬೇಕು. ‘ಉದ್ಯೋಗದ ಹಕ್ಕ’ನ್ನು ಮೂಲಭೂತ ಹಕ್ಕನ್ನಾಗಿ ಖಾತ್ರಿಪಡಿಸಬೇಕು ಎಂಬುದೂ ಸೇರಿದಂತೆ 17 ಹಕ್ಕೊತ್ತಾಯಗಳನ್ನು ಸಂಘಟನೆ ಮಾಡಿದೆ. 

ಈ ವೇಳೆ ಕೆ.ತಾಯಪ್ಪ,  ಡಾ ಪ್ರಮೋದ್, ಆದಿಮುರ್ತಿ, ವಿ.ಎಸ್ ಶಿವಶಂಕರ್, ಕೆ. ಬಸಣ್ಣ, ಸಂಗನಕಲ್ಲು ಕೃಷ್ಣಪ್ಪ, ಲೇಪಾಕ್ಷಿ ಮತ್ತಿತರು ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT