ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಶಕಾಳಿ ದೇವಿ ಜಾತ್ರೆ–ಕುಂಭೋತ್ಸವ: ಲಕ್ಷಕ್ಕೂ ಅಧಿಕ ಜನ ಭಾಗಿ ನಿರೀಕ್ಷೆ

ಚಾಂದ್ ಬಾಷ
Published 9 ಫೆಬ್ರುವರಿ 2024, 4:43 IST
Last Updated 9 ಫೆಬ್ರುವರಿ 2024, 4:43 IST
ಅಕ್ಷರ ಗಾತ್ರ

ತೆಕ್ಕಲಕೋಟೆ: ಸಮೀಪದ ಬಲಕುಂದಿ ಗ್ರಾಮದ ಬನ್ನಿಮಹಂಕಾಳಿ ದೇವಿ ದೇವಸ್ಥಾನದ ಜಾತ್ರಾ ಮಹೋತ್ಸವ ಹಾಗೂ ಕುಂಬೋತ್ಸವವು ಶುಕ್ರವಾರ ಹಾಗೂ ಶನಿವಾರ ಜರುಗಲಿದ್ದು, ಅಪಾರ ಸಂಖ್ಯೆಯಲ್ಲಿ ಭಕ್ತರು ಗ್ರಾಮದಲ್ಲಿ ನೆರೆದಿದ್ದಾರೆ.

ಸಿರುಗುಪ್ಪ ತಾಲ್ಲೂಕಿನ ಬಲಕುಂದಿಯು ಐತಿಹಾಸಿಕ, ಪೌರಾಣಿಕ ಹಿನ್ನೆಲೆ ಹೊಂದಿರುವ ಗ್ರಾಮ. ಐತಿಹಾಸಿಕವಾಗಿ ‘ಬಲ್ಲಕುಂದಿ 300’, ‘ಕುಂತಳ ನಗರ’ ಎಂದು ಕರೆಸಿಕೊಳ್ಳುವ ಈ ಗ್ರಾಮ ಒಂದು ಕಾಲದಲ್ಲಿ ರಾಜಧಾನಿಯಾಗಿತ್ತು. ಇಲ್ಲಿ ನೆಲೆಸಿದ್ದ ಚಂದ್ರಹಾಸ ದೊರೆ 80 ಊರುಗಳ ರಾಜನಾಗಿದ್ದನಂತೆ. ಬಲಕುಂದಿ ಚಂದ್ರಹಾಸನ ರಾಜಧಾನಿ ಆಗಿತ್ತು.

ಪೌರಾಣಿಕ ಹಿನ್ನೆಲೆಯುಳ್ಳ ದೇಗುಲ: ‘ನಂಬಿಕೆಗಳ ಪ್ರಕಾರ ಬನ್ನಿ ಮಹಂಕಾಳಿ ದೇವಸ್ಥಾನ ಮೊದಲು ಗುಡ್ಡದ ಮೇಲೆ ಇತ್ತು. ದೊರೆ ಚಂದ್ರಹಾಸ ದೇವಾಲಯ ನಿರ್ಮಾಣ ಮಾಡಿದ್ದರಂತೆ. ಬೆಟ್ಟದ ಮೇಲಿನ ದೇವಾಲಯಕ್ಕೆ ಗಿಡ ಮರ ಹಾಗೂ ಪೊದೆ ಬೆಳೆದು ದೇವಾಲಯಕ್ಕೆ ಹೋಗುವ ಮಾರ್ಗವೇ ಮುಚ್ಚಿಹೋಗಿ, ದೇವಸ್ಥಾನಕ್ಕೆ ತೆರಳುವವರ ಭಕ್ತರ ಸಂಖ್ಯೆ ಇಳಿಮುಖವಾಯಿತು. ಇದರಿಂದಾಗಿ ದೇವಿಯ ಮೂರ್ತಿಯನ್ನು 1985ರಲ್ಲಿ ಬೆಟ್ಟದ ಮೇಲಿನಿಂದ ಕೆಳಕ್ಕೆ ತಂದು ಈಗಿನ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಯಿತು. ಅಂದಿನಿಂದ ದೇವಸ್ಥಾನ ಅಭಿವೃದ್ಧಿ ಜೊತೆಗೆ ಭಕ್ತರ ಸಂಖ್ಯೆಯೂ ಹೆಚ್ಚಾಗಿದೆ’ ಎಂದು ದೇವಸ್ಥಾನದ ಪ್ರಧಾನ ಅರ್ಚಕ ವೀರೇಶ ಹೇಳುತ್ತಾರೆ.

‘ದೇವಸ್ಥಾನದ ಮುಂದಿರುವ ಬನ್ನಿಮರದಲ್ಲಿ ಪಾಂಡವರು ಶಸ್ತ್ರಾಸ್ತ್ರಗಳನ್ನು ಇಟ್ಟು ಕಾಡಿಗೆ ಹೋಗಿದ್ದರು ಎಂಬ ಪ್ರತೀತಿಯೂ ಇದೆ. ಹಾಗಾಗಿ ಇದು ಜಿಲ್ಲೆಯಲ್ಲಿ ಧಾರ್ಮಿಕ ದತ್ತಿ ಇಲಾಖೆಯಲ್ಲಿನ ದೇವಸ್ಥಾನಗಳಲ್ಲಿ ಪ್ರಮುಖವಾಗಿದೆ. ಭಕ್ತರ ಕಾಣಿಕೆಯಿಂದಲೇ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ’ ಎಂದು ಬಲಕುಂದಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಿ.ಎಂ. ಸುನೀತ ರುದ್ರಮುನಿ ಮಾಹಿತಿ ನೀಡಿದರು.

ದೇವಸ್ಥಾನ ವಿದ್ಯುತ್ ದೀಪಗಳ ಅಲಂಕಾರದಿಂದ ಕಂಗೊಳಿಸುತ್ತಿದೆ
ದೇವಸ್ಥಾನ ವಿದ್ಯುತ್ ದೀಪಗಳ ಅಲಂಕಾರದಿಂದ ಕಂಗೊಳಿಸುತ್ತಿದೆ
ಜಾತ್ರೆಗೆ ಸಿದ್ಧಗೊಂಡಿರುವ ದೇವಸ್ಥಾನ ಹಾಗೂ ರಥ
ಜಾತ್ರೆಗೆ ಸಿದ್ಧಗೊಂಡಿರುವ ದೇವಸ್ಥಾನ ಹಾಗೂ ರಥ

3–5 ವರ್ಷಕ್ಕೊಮ್ಮೆ ಕುಂಭೋತ್ಸವ

ಗ್ರಾಮದಲ್ಲಿ ಸದಾ ಸುಭಿಕ್ಷೆ ನೆಲೆಸಲು ದೇವಿಯ ಕೃಪೆಯೇ ಕಾರಣ ಎನ್ನುತ್ತಾರೆ ಅರ್ಚಕರು ಹಾಗೂ ಭಕ್ತರು. ಒಂದು ವೇಳೆ ಅಸಮರ್ಪಕ ಮಳೆಯಿಂದ ಬೆಳೆ ಸರಿಯಾಗಿ ಬಾರದಿದ್ದಲ್ಲಿ ಐದು ವರ್ಷಕ್ಕೊಮ್ಮೆ ಊರ ದೇವರ ಮಾದರಿಯಲ್ಲಿ ಕುಂಭೋತ್ಸವ ಆಚರಿಸಲಾಗುವುದು. ಒಂದು ವೇಳೆ ಬೆಳೆ ಚೆನ್ನಾಗಿ ಬಂದಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ಕುಂಭೋತ್ಸವ ಆಚರಿಸುತ್ತಾರೆ. ಕಳೆದ 10 ವರ್ಷಗಳಿಂದ ಫೆಬ್ರುವರಿ ತಿಂಗಳಲ್ಲಿ ಬರುವ ಅಮೃತ ಅಮಾವಾಸ್ಯೆಯಂದು ದೇವಿಯ ಜಾತ್ರೆ ನಡೆಯತ್ತಿದ್ದು ಲಕ್ಷಾಂತರ ಜನ ಭಾಗವಹಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT