ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಹಂಪಿ ವಾಣಿಜ್ಯ ಸಂಕೀರ್ಣಗಳ ಮೇಲೆ ಕೆಂಗಣ್ಣು

ಹಂಪಿ ವಿರೂಪಾಕ್ಷೇಶ್ವರ ದೇಗುಲ ಮಗ್ಗುಲಲ್ಲಿ ಸಿಲಿಂಡರ್‌ ಸ್ಫೋಟದ ನಂತರ ಹುಟ್ಟು ಹಾಕಿದ ಚರ್ಚೆ
Last Updated 31 ಅಕ್ಟೋಬರ್ 2022, 8:55 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದ ಮಗ್ಗುಲಲ್ಲಿರುವ ಹೋಟೆಲ್‌ನಲ್ಲಿ ಗುರುವಾರ ರಾತ್ರಿ ಸಿಲಿಂಡರ್‌ ಸ್ಫೋಟಗೊಂಡು ಸಂಭವಿಸಿದ ಬೆಂಕಿ ಅನಾಹುತದ ನಂತರ ಜನತಾ ಕಾಲೊನಿಯ ವಾಣಿಜ್ಯ ಸಂಕೀರ್ಣಗಳ ಮೇಲೆ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ಹಾಗೂ ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರದ ಕೆಂಗಣ್ಣು ಬಿದ್ದಿದೆ.

ಹಂಪಿಯ ಕೋರ್‌ ಜೋನ್‌ನಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ನಿರ್ಬಂಧಿಸಲು ಪ್ರಾಧಿಕಾರವು ಮೊದಲಿನಿಂದಲೂ ಪ್ರಯತ್ನಿಸುತ್ತಿದೆ. ವಿರೂಪಾಪುರ ಗಡ್ಡೆಯಲ್ಲಿ (ದ್ವೀಪ) ತೆರವು ಕಾರ್ಯಾಚರಣೆ ಕೈಗೊಂಡ ನಂತರ ಅದಕ್ಕೆ ಹೆಚ್ಚಿನ ರೆಕ್ಕೆಪುಕ್ಕ ಬಂದಿದ್ದವು. ಒಂದು ಹಂತದಲ್ಲಿ ನೋಟಿಸ್‌ ಕೂಡ ಕೊಡಲಾಗಿತ್ತು. ಅದರ ವಿರುದ್ಧ ಸ್ಥಳೀಯರು ನ್ಯಾಯಾಲಯದ ಮೆಟ್ಟಿಲು ಏರಿರುವುದರಿಂದ ಆ ವಿಷಯ ಸದ್ಯ ನನೆಗುದಿಗೆ ಬಿದ್ದಿದೆ.

ಆದರೆ, ಗುರುವಾರ ರಾತ್ರಿ ಸಂಭವಿಸಿದ ಬೆಂಕಿ ಅನಾಹುತದಿಂದ ಹೋಟೆಲ್‌ ಸೇರಿದಂತೆ ಐದು ವಾಣಿಜ್ಯ ಮಳಿಗೆಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ವಿರೂಪಾಕ್ಷ ದೇವಸ್ಥಾನದ ಐತಿಹಾಸಿಕ ಬಿಷ್ಟಪ್ಪಯ್ಯ ಗೋಪುರ, ರಥಬೀದಿಯ ಸಾಲು ಮಂಟಪಗಳ ಬಳಿಯೇ ಈ ಘಟನೆ ಜರುಗಿದೆ. ಘಟನೆಯಲ್ಲಿ ಸ್ಮಾರಕಗಳಿಗೆ ಯಾವುದೇ ಧಕ್ಕೆ ಉಂಟಾಗಿಲ್ಲ. ಜೀವ ಹಾನಿಯೂ ಆಗಿಲ್ಲ. ಘಟನೆ ಸಂಭವಿಸಿದ ಪ್ರದೇಶದಲ್ಲಿ ಸದಾ ಜನರ ಓಡಾಟವಿರುತ್ತದೆ. ಹಂಪಿಗೆ ಬಿಷ್ಟಪ್ಪಯ್ಯ ಗೋಪುರವೇ ಕಳೆ. ಒಂದುವೇಳೆ ಹೋಟೆಲ್‌ನಲ್ಲಿದ್ದ ಏಳೆಂಟು ಸಿಲಿಂಡರ್‌ಗಳೆಲ್ಲ ಸ್ಫೋಟಗೊಂಡು ಗೋಪುರಕ್ಕೆ ಹಾನಿಯಾಗಿದ್ದರೆ? ಜೀವ ಹಾನಿ ಆಗಿರುತ್ತಿದ್ದರೆ? ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಕಾರಣವಾಗುತ್ತಿತ್ತು. ಗುರುವಾರದ ಘಟನೆ ನಂತರವೂ ಹಂಪಿ ಗಮನ ಸೆಳೆದಿದೆ. ಆದರೆ, ದೊಡ್ಡದೇನೂ ಘಟಿಸಲಾರದ ಕಾರಣ ನೆಮ್ಮದಿಯ ನಿಟ್ಟುಸಿರು ಬಿಡಲು ಕಾರಣವಾಗಿದೆ. ಇದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೂ ತೀವ್ರ ಪರ–ವಿರೋಧದ ಚರ್ಚೆ ನಡೆಯುತ್ತಿದೆ.

ಇನ್ನೊಂದೆಡೆ ಪ್ರಾಧಿಕಾರವು ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಂತಿದೆ. ಶುಕ್ರವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಜಿಲ್ಲಾಧಿಕಾರಿ ಅನಿರುದ್ಧ್‌ ಶ್ರವಣ್‌ ಪಿ. ಪರಿಶೀಲಿಸಿದರು. ‘ಹಂಪಿಯ ಎಲ್ಲ ವಾಣಿಜ್ಯ ಸಂಕೀರ್ಣಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುವುದು. ಅನಧಿಕೃತ ವಾಣಿಜ್ಯ ಸಂಕೀರ್ಣಗಳನ್ನು ತೆರವುಗೊಳಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು. ಸೂಚ್ಯವಾಗಿ ಹೇಳುವುದರ ಮೂಲಕ ಸಂದೇಶ ರವಾನಿಸಿದರು.

‘ಹಂಪಿ ರಥಬೀದಿಯಲ್ಲಿ ಜನದಟ್ಟಣೆ ಬಹಳಷ್ಟು ಇರುತ್ತದೆ. ವ್ಯಾಪಾರಕ್ಕಾಗಿ ರಾತ್ರೋರಾತ್ರಿ ಮಳಿಗೆ ತೆರೆಯುತ್ತಾರೆ. ಅನುಮತಿ ಇಲ್ಲದೆ ರೆಸ್ಟೊರೆಂಟ್ ನಡೆಸಲಾಗುತ್ತಿದೆ ಎಂಬ ಮಾಹಿತಿ ಇದೆ. ಅದನ್ನು ಪರಿಶೀಲಿಸಿ ಕಾನೂನು ಕ್ರಮ ಜರುಗಿಸಲಾಗುವುದು’ ಎಂದೂ ಹೇಳಿದರು.

‘ಇದೊಂದೆ ಘಟನೆ ನೆಪವಾಗಿಟ್ಟುಕೊಂಡು ವಾಣಿಜ್ಯ ಚಟುವಟಿಕೆಗಳನ್ನು ನಡೆಸುವವರ ವಿರುದ್ಧ ಅಸಮಾಧಾನ ಹೊರಹಾಕುತ್ತಿರುವುದು ಸರಿಯಲ್ಲ. ಸುರಕ್ಷತಾ ಕ್ರಮ ಕೈಗೊಳ್ಳಲು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತರಬೇಕು. ತೆರವುಗೊಳಿಸುವುದೊಂದೆ ಪರಿಹಾರವಲ್ಲ’ ಎಂದು ಹೆಸರು ಹೇಳಲಿಚ್ಛಿಸದ ಹೋಟೆಲ್‌ ಮಾಲೀಕರೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT