ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಂದಾಲ್ ಕಂಪನಿ: ಕಾರ್ಮಿಕರ ವಿವರ ನೀಡಲು ಒತ್ತಾಯ

Published 25 ಮೇ 2024, 15:38 IST
Last Updated 25 ಮೇ 2024, 15:38 IST
ಅಕ್ಷರ ಗಾತ್ರ

ಸಂಡೂರು: ಜೆಎಸ್‌ಡಬ್ಲ್ಯೂ ಸ್ಟೀಲ್ ಲಿಮಿಟೆಡ್ ಕಾರ್ಖಾನೆಯಲ್ಲಿ ನಡೆಯುತ್ತಿರುವ ಅಪಘಾತಗಳು, ಕಾರ್ಮಿಕರ ಸಮಸ್ಯೆಗಳು ಮತ್ತು ವಿವಿಧ ಬೇಡಿಕೆಗಳ ಈಡೇರಿಕೆ ಕುರಿತು ಶುಕ್ರವಾರ ತಾಲ್ಲೂಕು ಕಚೇರಿಯಲ್ಲಿ ಸಭೆ ನಡೆಯಿತು.

ತಹಶೀಲ್ದಾರ್ ಅನಿಲ್ ಕುಮಾರ್ ನೇತೃತ್ವದ ಸಭೆಯಲ್ಲಿ ಕಾರ್ಮಿಕ ಸಂಘಟನೆಗಳು, ಕಾರ್ಮಿಕ ಅಧಿಕಾರಿಗಳು ಭಾಗವಹಿಸಿದ್ದರು. ಜೆಎಸ್‌ಡಬ್ಲ್ಯೂನಿಂದ ಕೆಲವೇ ಅಧಿಕಾರಿಗಳು ಭಾಗವಹಿಸಿದ್ದರು. ಜಿಂದಾಲ್ ಕಾರ್ಖಾನೆಯ ಅಧ್ಯಕ್ಷ ಪಿ.ಕೆ ಮುರುಗನ್ ಹಾಗೂ ಮಾನವ ಸಂಪನ್ಮೂಲ ವಿಭಾಗದ ಹಿರಿಯ ಉಪಾಧ್ಯಕ್ಷ ಸಂಜಯ್ ಹಂಡೂರ ಗೈರಾಗಿದ್ದರು. ಇದಕ್ಕೆ ಸಿಐಟಿಯು ಆಕ್ಷೇಪ ವ್ಯಕ್ತಪಡಿಸಿತು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಿಐಟಿಯು ಸಂಘಟನೆ ಮುಖಂಡರು, ‘ತೋರಣಗಲ್ ಜಿಂದಾಲ್ ಸ್ಟೀಲ್ ಕಾರ್ಖಾನೆಯಲ್ಲಿ ಬಿಸಿ ನೀರು ಹರಿಸುವ ಪೈಪ್‌ಲೈನ್ ದುರಸ್ತಿಗೆ ಅನನುಭ ಇಲ್ಲದವರನ್ನು ನಿಯೋಜಿಸಲಾಗಿತ್ತು. ಅಂಥವರನ್ನು ಅಪಾಯಕಾರಿ ಕೆಲಸದಲ್ಲಿ ತೊಡಗಿಸಿರುವುದು ಆಡಳಿತ ಮಂಡಳಿಯ ಕಾನೂನಿನ ಉಲ್ಲಂಘನೆಯಾಗಿದೆ’ ಎಂದರು.

‘ಜಿಂದಾಲ್‌ನಲ್ಲಿ ಈವರೆಗೆ ದೇಹದ ಅಂಗಾಂಗಗಳನ್ನು ಕಳೆದುಕೊಂಡ ಮತ್ತು ಮೃತಪಟ್ಟವರ ಕುರಿತ ಸಮಗ್ರ ವರದಿ ನೀಡಬೇಕು, ಜಿಂದಾಲ್‌ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ನೀಡಿದ ಭೂಮಿ ಎಷ್ಟು, ಖಾಸಗಿಯವರ ಭೂಮಿ ಎಷ್ಟು, ಕೆಎಐಡಿಬಿಎಲ್ ವಶಪಡಿಸಿಕೊಂಡ ಭೂಮಿ ಮುಂತಾದ ಮಾಹಿತಿ ಒದಗಿಸಬೇಕು. ಒಟ್ಟು ಕೆಲಸಗಾರರು, ಕಾರ್ಮಿಕರ ವಿವರಗಳನ್ನು ಜಿಂದಾಲ್ ಕಂಪನಿ ನೀಡಬೇಕು’ ಎಂದು ಮುಖಂಡರು ಒತ್ತಾಯಿಸಿದರು.

ಕಾರ್ಖಾನೆ ಇಲಾಖೆಯ ಸಹಾಯಕ ನಿರ್ದೇಶಕ ವರ್ಣರಾಮ್ ಮಾತನಾಡಿ, ‘ಈಚೆಗೆ ನಡೆದ ಅವಘಢಕ್ಕೆ ಸಂಬಂಧಿಸಿದಂತೆ ಕಾನೂನು ಪ್ರಕಾರ ಚಾರ್ಜ್ ಶೀಟ್ ಸಲ್ಲಿಸಲು 3 ತಿಂಗಳು ಕಾಲಾವಕಾಶವಿದೆ. ತನಿಖೆ ನಡೆಸಿ ತಪ್ಪಿತಸ್ಥರ ಹೆಸರನ್ನು ನಮೂದಿಸಿ ಬಳ್ಳಾರಿ ಜೆಎಂಎಫ್‌ಸಿ ಕೋರ್ಟಿಗೆ ನೀಡಲಾಗುವುದು’ ಎಂದು ತಿಳಿಸಿದರು.

ಜೆಎಸ್‌ಡಬ್ಲ್ಯೂ ಅಧಿಕಾರಿ ಶಶಿಕುಮಾರ್ ಮಾತನಾಡಿ, ‘ಸಭೆಯ ತೀರ್ಮಾನಗಳನ್ನು ಆಡಳಿತ ಮಂಡಳಿಗೆ ತಿಳಿಸಿ ಮುಂದಿನ ಸಭೆಯಲ್ಲಿ ಅವರನ್ನು ಹಾಜರಾಗುವಂತೆ ನೋಡಿಕೊಳ್ಳಲಾಗುವುದು’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ಅನಿಲ್‌ಕುಮಾರ್, ‘ಜೂನ್ 6 ರಂದು ನಡೆಯುವ ಸಭೆಗೆ ಸಮಗ್ರ ಮಾಹಿತಿಯೊಂದಿಗೆ ಬರಬೇಕು’ ಎಂದು ತಾಕೀತು ಮಾಡಿದರು.

ಸಭೆಯಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ಅಲ್ತಾಫ್ ಅಹಮ್ಮದ್, ಕಾರ್ಮಿಕ ನಿರೀಕ್ಷಕ ಮಂಜುನಾಥ ತೊಂಡಿಹಾಳ್, ತಾಲ್ಲೂಕು ವೈದ್ಯಾಧಿಕಾರಿ ಡಾ. ಭರತ್ ಕುಮಾರ್, ಗಿರೀಶ ಎನ್.ಕಬಾಡಿ, ಜೆಎಸ್‌ಡಬ್ಲ್ಯೂ ಅಧಿಕಾರಿಗಳಾದ ಸ್ವರೂಪ್ ಆಗೋ, ವಡ್ಡು ಸುರೇಶ್, ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಜೆ.ಸತ್ಯಬಾಬು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ.ಎಂ.ಚೆನ್ನಬಸಯ್ಯ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವಿ.ಎಸ್.ಶಿವಶಂಕರ್, ಸಿಪಿಐ(ಎಂ)ಕಾರ್ಯದರ್ಶಿ ಎ.ಸ್ವಾಮಿ, ಎಸ್.ಕಾಲೂಬಾ, ಎಂ.ತಿಪ್ಪೇಸ್ವಾಮಿ, ಎಚ್.ದುರ್ಗಮ್ಮ, ದ್ರಾಕ್ಷಾಯಿಣಿ , ಸೋಮಪ್ಪ, ಧನಂಜಯ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT